ಅಡುಗೆ ಮನೆ ಎಂದರೆ ಮಾರುದ್ದಕ್ಕೆ ಜಿಗಿಯುವವರಿಗೆ ನಟಿ ಅಕ್ಷತಾ ಪಾಂಡವಪುರ ಏನು ಹೇಳ್ತಾರೆ ಗೊತ್ತಾ?. ತಮಗೆ ಕೆಲಸದ ಒತ್ತಡ ಹೆಚ್ಚಾದಾಗ ಅದರಿಂದ ಹೊರಗೆ ಬರಲು ಸೀದಾ ಅಡುಗೆ ಮನೆಗೆ ಹೋಗಿ ಫ್ರಿಡ್ಜ್ ತಗೆದು, ಅಲ್ಲಿ ಕೈಗೆ ಸಿಕ್ಕ ತರಕಾರಿಯನ್ನು ಕತ್ತರಿಸಿ, ಅದಕ್ಕೆ ಅಡುಗೆಯ ಹೊಸದೊಂದು ರೂಪ ಕೊಡುತ್ತಾರೆ ಅಂತೇ. ಅಷ್ಟೇ ಅಲ್ಲ, ಅಡುಗೆ ಮಾಡುವುದೆಂದರೆ ಎಲ್ಲಿಲ್ಲದ ಖುಷಿ ಕೊಡುತ್ತದೆ ಎಂದು ಸ್ವತಃಹ ಈ ನಟಿಯೇ ನಗುತ್ತಲೇ ಹೇಳುತ್ತಾರೆ.
ನಾನು ಮಾಡಿದ ಈ ಅಡುಗೆ ತುಂಬಾನೇ ಸಿಂಪಲ್ ಆದರೂ ರುಚಿಕರ ಮತ್ತು ಆರೋಗ್ಯಕರ ಎನ್ನುತ್ತಾರೆ ಅಕ್ಷತಾ. ನಮ್ಮ ಆಕೃತಿ ಕನ್ನಡ ಮ್ಯಾಗಝಿನ್ ನಲ್ಲಿ ಅವರು ಬೆಂಡೆಕಾಯಿ ಚಟ್ನಿ, ಕುಚ್ಚಲಕ್ಕಿ ಅನ್ನ ಮತ್ತು ಕುಚ್ಚಲಕ್ಕಿ ಗಂಜಿ ಮಾಡುವುದು ಹೇಗೆ ಎಂದು ಹೇಳಿದ್ದಾರೆ.
ಬೇಕಾಗುವ ಸಾಮಾನುಗಳು :
೧.ಬೆಂಡೆಕಾಯಿ – ಕಾಲು ಕೆಜಿ
೨.ಹುಣಸೆ ಹಣ್ಣು -ಸ್ವಲ್ಪ
೩. ಹಸಿಮೆಣಸಿನ ಕಾಯಿ -ಸ್ವಲ್ಪ
೪. ಧನಿಯಾ – ಸ್ವಲ್ಪ
೫. ಸಾಸಿವೆ ಕಾಳು – ಸ್ವಲ್ಪ
೬. ಹುರಳಿಕಾಳು- ಸ್ವಲ್ಪ
೭. ಇಂಗು -ಸ್ವಲ್ಪ
೮. ಬೆಳ್ಳುಳ್ಳಿ – ಸ್ವಲ್ಪ
೯. ಉಚ್ಛೆಳ್ಳು-ಸ್ವಲ್ಪ
೧೦. ಕಡಲೆಬೀಜ-ಸ್ವಲ್ಪ
೧೧.ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ :
೧. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಹೆಚ್ಚಿದ ಬೆಂಡೆಕಾಯಿ ಮತ್ತು ಹಸಿ ಮೆಣಸಿನಕಾಯಿಯನ್ನು ಹುರಿದುಕೊಳ್ಳಬೇಕು.
೨ ಇನ್ನೊಂದು ಬಾಣಲೆಯಲ್ಲಿ ಸಾಸಿವೆ, ಕರಿಬೇವು, ಇಂಗು, ಹುರಿಕಡಲೆ,ಉಚ್ಚೆಳ್ಳು, ಧನಿಯಾ ಕಾಳು,ಬೆಳ್ಳುಳ್ಳಿ ಹಾಕಿ ಉರಿದುಕೊಳ್ಳಬೇಕು. ಹುಣಸೆ ಹಣ್ಣನ್ನು ಸ್ಟೋವ್ ನ ಬೆಂಕಿಯಲ್ಲಿ ನೇರವಾಗಿ ಹಾಕಿ ಸುಡಬೇಕು.
೩ ಎರಡು ಬಾಣಲೆಯಲ್ಲಿ ಹುರಿದುಕೊಂಡ ಪದಾರ್ಥಗಳನ್ನು ಮತ್ತು ಸುಟ್ಟಿಟ್ಟುಕೊಂಡ ಹುಣಸೆ ಹಣ್ಣನ್ನು ಮಿಕ್ಸಿ ಝಾರಿಗೆ ಹಾಕಿ ರುಬ್ಬಿಕೊಂಡರೆ ಮುಗಿತ್ತು. ಸ್ವಾದಿಷ್ಟ ಆರೋಗ್ಯಕರ ಬೆಂಡೆಕಾಯಿ ಚಟ್ನಿ ರೆಡಿ.
ಕುಚ್ಚಲಕ್ಕಿ ಗಂಜಿ ಮಾಡುವ ವಿಧಾನ :
ಕುಚ್ಚಲಕ್ಕಿ ಅನ್ನ ಮಾಡುವುದು ಎಲ್ಲರಿಗೂ ಗೊತ್ತಿದೆ ಆದರೆ ಅದರಲ್ಲಿನ ಗಂಜಿ ತಗೆದು ಅದಕ್ಕೆ ಈ ಎರಡು ಪದಾರ್ಥಗಳನ್ನು ಸೇರಿಸಿದರೇ ವಿಭಿನ್ನ ಗಂಜಿ ರೆಡಿಯಾಗುತ್ತದೆ.
ಅನ್ನದಿಂದ ಬಸೆದು ತಗೆದ ಗಂಜಿಗೆ ಸ್ವಲ್ಪ ಮೊಸರು, ಹುಣಸೆ ಹಣ್ಣಿನ ರಸ ಮತ್ತು ಉಪ್ಪು ಸೇರಿಸಬೇಕು. ಇಷ್ಟನ್ನು ಸೇರಿಸಿದರೇ ಮುಗಿತು ವಿಭಿನ್ನರೀತಿಯ ಗಂಜಿ ಅಥವಾ ವಿಭಿನ್ನ ರೀತಿಯ ಲಸ್ಸಿ ರೆಡಿ.
ಆಹಹಾ…ತಟ್ಟೆಯಲ್ಲಿ ಕುಚ್ಚಲಕ್ಕಿ ಅನ್ನ, ಬೆಂಡೆಕಾಯಿ ಚಟ್ನಿ ಮತ್ತು ಕುಡಿಯಲು ಗಂಜಿ ಹಾಕೊಂಡು ಚನ್ನಾಗಿ ಊಟ ಜಡಿದರೆ ಮುಗಿತ್ತು. ಬಾಯಲ್ಲಿ ನೀರು ಉಕ್ಕಿ ಬರುತ್ತದೆ.ನೀವು ಮಾಡಿ ನೋಡಿ…
ಈ ಅಡುಗೆಯನ್ನು ಹೇಳಿಕೊಟ್ಟವರು : ಅಕ್ಷತಾ ಪಾಂಡವಪುರ
ಲೇಖನ : ಶಾಲಿನಿ ಪ್ರದೀಪ್