ಸ್ವಾತಂತ್ರೋತ್ಸವ ಶುಭ ದಿನ ಮುಗಿದರೂ ಅದರ ಸಂಭ್ರಮ ಇನ್ನು ಮುಗಿದಿಲ್ಲ, 75ನೇ ಅಮೃತ ಮಹೋತ್ಸವ ಎಲ್ಲರ ಹೃದಯದಲ್ಲಿ ಅಚ್ಚ ಹಸಿರಾಗಿರುತ್ತದೆ. ಲೇಖಕ ಎಸ್.ಸಂತೋಷ ಕುಮಾರ ಅವರು ಲೇಖನಿಯಲ್ಲಿ ಮೂಡಿ ಬಂದ ಒಂದು ಲೇಖನ.ತಪ್ಪದೆ ಓದಿ…
ಎಲ್ಲರಿಗೂ ತಿಳಿದಿರುವ ಹಾಗೆ ಭಾರತವು ಬ್ರಿಟಿಷರ ವಸಾಹತುಶಾಹಿಗಳ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಿ ಸ್ವಾತಂತ್ರವನ್ನು ಪಡೆದು ಇಂದಿಗೆ 75ನೇ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. 75ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ “ಹರ್ ಘರ್ ತಿರಂಗಾ” ಎನ್ನುವ ಅಭಿಯಾನದೊಂದೀಗೆ ಈ ಅಮೃತ ಮಹೋತ್ಸವವನ್ನು ಅತ್ಯಂತ ವೈಭವದಿಂದ ದೇಶದ ಮನೆ ಮನೆಗಳಲ್ಲೂ ಆಚರಿಸುತ್ತಿರುವುದು, ಪ್ರತಿಯೊಬ್ಬ ಭಾರತೀಯರು ಹೆಮ್ಮೆಯ ಪಡುವ ಸಂಗತಿಯಾಗಿದೆ, ಇಡೀ ಜಗವೇ ಬೆರಗಾಗಿ ನೋಡುವ ಒಂದು ಅಮೃತ ಘಳಿಗೆಯಾಗಿದೆ.
ಅತ್ಯಂತ ಪ್ರಾಚೀನ ನಾಗರಿಕತೆ, ವಿವಿಧತೆಯಲ್ಲಿಯೂ ಏಕತೆ, ಸನಾತನ ಧರ್ಮದ ಪ್ರಾಮುಖ್ಯತೆ, ಆಚಾರ ವಿಚಾರ, ನಾಡು ನುಡಿ, ದೇಶ ಭಾಷೆಯಲ್ಲಿನ ಸಾಮ್ಯತೆ, ನಾವೆಲ್ಲರೂ ಒಂದೇ ಎನ್ನುವ ಭಾವೈಕ್ಯತೆ ಸಾರುವ ಏಕೈಕ ದೇಶವೆಂದರೆ ಅದು ನಮ್ಮ ಹೆಮ್ಮೆಯ ಭಾರತ. ಭರತ ಭೂಮಿಯಲ್ಲಿ ಜನಿಸಿರುವ ನಾವೆಲ್ಲರೂ ಮಹಾ ಪುಣ್ಯವಂತರು.
ಕಲೆ, ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರಗಳಿಂದ ಹಿಡಿದು ಭೂಮಿ ತಾಯಿಯ ಅದ್ಭುತ ಕೊಡುಗೆಯಿಂದ ಸಮೃದ್ಧಿಯಾಗಿ ಮತ್ತು ಸಂಪತ್ಭರಿತವಾಗಿದ್ದ, ಅದ್ಭುತ ನಾಡು ಈ ಭರತ ಭೂಮಿ.
“ಅತಿಥಿ ದೇವೋಭವ” ಎನ್ನುವಂತೆ ಬರುವವರನ್ನು ಆದರದಿಂದ ಸ್ವಾಗತಿಸುವ ನಮ್ಮ ಮುಗ್ಧ ಮನಸ್ಸುಗಳನ್ನು ತಮ್ಮ ಅಡಿಯಾಳಾಗಿಸಿಕೊಂಡು ಕೇವಲ ವ್ಯಾಪಾರಕ್ಕಾಗಿ ಬಂದು ನಮ್ಮ ಸ್ವಾತಂತ್ರವನ್ನು ಕಿತ್ತು, ತಮ್ಮ ಅಧೀನದಲ್ಲಿರುವಂತೇ ಮಾಡಿ ಸುಮಾರು 200 ವರ್ಷಗಳ ಕಾಲ ನಮ್ಮ ಮೇಲೆ ದಬ್ಬಾಳಿಕೆ ಮಾಡಿದ ಬ್ರಿಟಿಷರು, ಪೋರ್ಚಗಿಸರು, ಫ್ರೆಂಚರು, ಡಚ್ಚರು ಇಡಿ ನಮ್ಮ ದೇಶವನ್ನೇ ಕೊಳ್ಳೆ ಹೊಡೆದರು.
ನಮ್ಮ ಪೂರ್ವಜರ ನಿರಂತರ ಹೋರಾಟದ ಫಲವಾಗಿ, ಅದೆಷ್ಟೋ ತ್ಯಾಗ ಬಲಿದಾನಗಳಿಂದಾಗಿ, ಲೆಕ್ಕವಿಲ್ಲದಷ್ಟು ರಕ್ತದ ಓಕುಳಿಯ ಪ್ರತೀಕವಾಗಿ, ಅದೆಷ್ಟೊ ನಿಷ್ಕಲ್ಮಶ ಜೀವಗಳ ಉಸಿರಿನ ಬಳುವಳಿಯಾಗಿ ಆಗಸ್ಟ್ 14 ರ ಮಧ್ಯರಾತ್ರಿ 12ಗಂಟೆಗೆ ಸಿಕ್ಕ ಉಡುಗರೆಯೇ ಈ ಸ್ವಾತಂತ್ರ.

ಫೋಟೋ ಕೃಪೆ : indiatimes
ಸ್ವಾತಂತ್ರ್ಯ ಎನ್ನುವ ಶಬ್ದವೇ ರೋಮಾಂಚನಗೊಳಿಸುವುದು, ಅದರ ಹಿಂದೆ ಅದೆಷ್ಟೊ ರೋಚಕ ಕಥೆಗಳಿವೆ. ಬದುಕನ್ನೇ ಪಣವಾಗಿಟ್ಟು ಹೋರಾಡಿದ ವೀರ ಯೋಧರ ಚರಿತ್ರೆಯಿದೆ.
ನಮ್ಮೆಲ್ಲಾ ವೀರ ಯೋಧರನ್ನು ಸ್ಮರಿಸುತ್ತ, ಮನಸಾರೆ ಅವರನ್ನು ವಂಧಿಸುತ್ತ, ಆ ಅದ್ಭುತ ಕ್ಷಣಗಳ ಸವಿ ನೆನಪಾಗಿ ಆಗಸ್ಟ್ 15ರಂದು ದೇಶದ ಎಲ್ಲೆಡೆಯೂ ಸ್ವಾತಂತ್ರೋತ್ಸವವನ್ನು ರಾಷ್ಟೀಯ ಹಬ್ಬವಾಗಿ ಅತ್ಯಂತ ವಿಜೃಂಭಣೆಯಿಂದ ಪ್ರತಿಯೊಬ್ಬ ಭಾರತೀಯರು ಆಚರಿಸುತ್ತೇವೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳಲ್ಲಿ, ಭಾರತ ದೇಶವು ಎಲ್ಲ ಕ್ಷೇತ್ರಗಳಲ್ಲಿ ಪ್ರಪಂಚದಾದ್ಯಂತ ತನ್ನದೆ ಆದ ಛಾಪು ಮೂಡಿಸಿದೆ. ವಿಜ್ಞಾನ, ತಂತ್ರಜ್ಞಾನ, ಆರ್ಥಿಕ, ಕೃಷಿ, ಶಿಕ್ಷಣ, ಕಲೆ, ಸಾಹಿತ್ಯ, ಸಂಸೃತಿ, ಕ್ರೀಡೆ ಸೇರಿದಂತೆ ಎಲ್ಲ ರಂಗಗಳಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸಿದೆ, ಅಭಿವೃದ್ಧಿಯ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ನಿರಂತರ ಮುನ್ನಡೆಯನ್ನು ಸಾಧಿಸಿದೆ.
ಪರಮಾಣು ಸಾಮರ್ಥ್ಯದ ದೇಶವಾಗಿರುವ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನು ಮಾಡಿ, ಇಡೀ ಪ್ರಪಂಚವೇ ತಿರುಗಿ ನೋಡುವಂತೆ ಮಾಡಿದೆ.
ಆತ್ಮೀಯರೇ, ಸ್ವಾತಂತ್ರ್ಯ ಪಡೆದು ಇಷ್ಟು ವರ್ಷಗಳಾದರೂ ಇಂದಿಗೂ ಭಾರತವು ಅನ್ಯಾಯ, ಅಪರಾಧ, ಭ್ರಷ್ಟಾಚಾರ, ಹಿಂಸೆ, ನಕ್ಸಲಿಸಂ, ಭಯೋತ್ಪಾದನೆ, ಬಡತನ, ನಿರುದ್ಯೋಗ, ಅನಕ್ಷರತೆಯಂತಹ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವುದು ವಿಷಾದನೀಯ.
ನಾವೆಲ್ಲರೂ ಒಗ್ಗಟ್ಟಾಗಿ ಈ ಸಮಸ್ಯೆಗಳನ್ನು ಕೊನೆಗೊಳಿಸಲು ಪ್ರಯತ್ನಿಸಬೇಕು. ಬಡವರು ಶ್ರೀಮಂತರು ಎನ್ನುವ ಭೇದ ಭಾವ ಇಲ್ಲದೆ ಎಲ್ಲರೂ ಒಗ್ಗಟ್ಟಾಗಿ ನಿಂತು ಭಾರತವನ್ನು ಈ ಸಮಸ್ಯೆಗಳಿಂದ ಬಿಡುಗಡೆಗೊಳಿಸಬೇಕು ಆಗಲೇ ಸ್ವಾತಂತ್ರ್ಯ ಹೋರಾಟಗಾರರ ಕನಸು ನನಸಾಗುವುದು. ಅವರ ತ್ಯಾಗ ಬಲಿದಾನಕ್ಕೆ ನಿಜವಾದ ಗೌರವ ಸಿಗುವುದು.
ಆತ್ಮೀಯರೇ ಕೇವಲ ತೋರಿಕೆಗಾಗಿ ಈ ನಾಡ ಹಬ್ಬವನ್ನು ಆಚರಿಸದೆ, ನಾವೆಲ್ಲರೂ ಒಂದೇ ಎನ್ನುವ ಮಹಾಮಂತ್ರವು ಮನಸ್ಸಿಂದ ಬರಬೇಕು. ಯಾವುದೇ ಭೇದ ಭಾವವಿಲ್ಲದೆ ಎಲ್ಲರಿಗೂ ಇಲ್ಲಿ ಸಮಾನವಾದ ಅವಕಾಶಗಳು ಸಿಗುವಂತಾಗಬೇಕು ಆಗಲೇ ಎಲ್ಲರಿಗೂ ನಿಜವಾದ ಸ್ವಾತಂತ್ರ ಸಿಗುವುದು.
ಮತ್ತೊಮ್ಮೆ ನನ್ನೆಲ್ಲಾ ಆತ್ಮೀಯರಿಗೆ 75ನೆ ಸ್ವಾತಂತ್ರ ಅಮೃತ ಮಹೋತ್ಸವದ ಹಾರ್ಧಿಕ ಶುಭಾಶಯಗಳೊಂದಿಗೆ….
ಜೈ ಹಿಂದ್, ಜೈ ಭಾರತ್.
- ಎಸ್.ಸಂತೋಷ ಕುಮಾರ (ಬೀದರ)
