ಮದುವೆ ಮುಗಿದ ಬಳಿಕವೂ ‘ಹಸೆ ಕೆಡಿಸುವ ಶಾಸ್ತ್ರ’ ಎಂಬ ಆಚರಣೆಯೊಂದನ್ನು ಮದುವೆ ಮನೆಯಲ್ಲಿ ಕೈಗೊಳ್ಳುತ್ತಿದ್ದರು. ‘ಹಸೆ ಕೆಡಿಸುವ ಶಾಸ್ತ್ರದಲ್ಲಿ’ ಗಂಡಿನ ಸೋದರ ಮಾವ ಮತ್ತು ಹೆಣ್ಣಿನ ಸೋದರ ಮಾವ ಕಡ್ಡಾಯವಾಗಿ ಭಾಗವಹಿಸಬೇಕು. ಡಾ.ವಡ್ಡಗೆರೆ ನಾಗರಾಜಯ್ಯ ಅವರು ಅವರ ತಂದೆ, ಹಸೆಚಿತ್ರಕಾರ ಹನುಮಂತಯ್ಯ ಮತ್ತು ಹಸೆ ಕಲೆಯ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ….
ಮದುವೆ ಮನೆಗಳಲ್ಲಿ ನನ್ನ ಅಪ್ಪ ಹನುಮಂತಯ್ಯ ಹಸೆ ಚಿತ್ರಗಳನ್ನು ಬರೆಯುತ್ತಿದ್ದ. ಸಾಂಪ್ರದಾಯಿಕವಾದ ವೈವಿಧ್ಯಮಯ ವಿನ್ಯಾಸಗಳಲ್ಲಿ ಹಸೆ ಚಿತ್ರಗಳನ್ನು ಬಿಡಿಸುವ ಕಲೆ ಅವನಿಗೆ ರಕ್ತಗತವಾಗಿಯೇ ಒಲಿದಿತ್ತು. ನಮ್ಮೂರಿನಲ್ಲಿ ನಮ್ಮ ಬಂಧು-ಬಳಗದವರ ಮತ್ತು ಬೇರೆ ಊರುಗಳಲ್ಲಿ ನಮ್ಮ ನೆಂಟರಿಷ್ಟರ ಮದುವೆ ಮನೆಗಳಲ್ಲಿ ನನ್ನ ಅಪ್ಪ ಗೋಡೆಗಳ ಮೇಲೆ, ಹಸೆಮಣೆಯ ಮೇಲೆ, ಕರಿ ಕಂಬಳಿ ಗದ್ದಿಗೆಯ ಮೇಲೆ ಹಲವು ಬಗೆಯ ಹಸೆ ಚಿತ್ರಗಳನ್ನು ಬರೆಯುತ್ತಿದ್ದ. ಕುಲಸ್ವಾಮಿಯಾಗಿ ಗದ್ದಿಗೆಯ ಮುಂದೆ ಕುಳಿತು ಮದುವೆಯ ಕೈಂಕರ್ಯಗಳನ್ನು ಕೂಡಾ ನಡೆಸಿಕೊಡುತ್ತಿದ್ದನಾದ್ದರಿಂದ ನನ್ನ ಅಪ್ಪನಿಗೆ ತುಂಬಿದ ಸಭೆಯಲ್ಲಿ ವಿಶೇಷವಾದ ಗೌರವ ಮಾನ್ಯತೆಗಳು ಸಲ್ಲುತ್ತಿದ್ದವು. ಆಗ್ಗೆ ಹಳ್ಳಿಗಳಲ್ಲಿ ನಮ್ಮ ನೆಂಟರಿಷ್ಟರ ಮನೆಗಳು ಹೆಚ್ಚಾನೆಚ್ಚು ಗುಡಿಸಲು ಮನೆಗಳೇ ಆಗಿದ್ದವು. ಎಲ್ಲೋ ಅಪರೂಪಕ್ಕೆ ಕೆಲವರಿಗಷ್ಟೇ ಮಣ್ಣೆಂಟೆಯ ಜಂತೆ ಮನೆಗಳಿದ್ದವು. ಅಪ್ಪ ಆಯಾ ಮನೆಗಳ ಕಿಟಕಿ ಬಾಗಿಲು ತೀರು ಅಡ್ಡೆ ಕಂಬ ಗೋಡೆಗಳ ಆಕಾರಕ್ಕೊಪ್ಪುವಂತೆ ಹಸೆ ಚಿತ್ರಗಳನ್ನು ಬಿಡಿಸುತ್ತಿದ್ದ. ಸುಣ್ಣ ಬಳಿದ ಗೋಡೆಗಳ ಮೇಲೆ ಅಪ್ಪ ಬಿಡಿಸುತ್ತಿದ್ದ ಕೆಮ್ಮಣ್ಣಿನ ಕಾರಣೆಯ ಹಸೆ ಚಿತ್ರಗಳನ್ನು ನೋಡುವುದೇ ಒಂದು ಸೊಬಗು. ಗುಡಿಸಲು ಮನೆಯ ಕಿಟಕಿಗೊಂದು ಬಗೆಯ ಚಿತ್ತಾರ, ಬಾಗಿಲಿಗೆ ಮತ್ತೊಂದು ಬಗೆಯ ಚಿತ್ತಾರ, ದೇವರ ಗೂಡಿಗೆ ಇನ್ನೊಂದು ಬಗೆಯ ಚಿತ್ತಾರ, ಮನೆಯ ಕಂಬದ ಮೇಲೊಂದು ರೀತಿಯ ಚಿತ್ತಾರ, ಮನೆಯ ತೀರು ಅಡ್ಡೆಗೊಂದು ರೀತಿಯ ಚಿತ್ತಾರ. ಹೀಗೆ ಬಿಳಿ ಸಿದ್ದೆಮಣ್ಣಿನ ಮತ್ತು ಕೆಂಪು ಕೆಮ್ಮಣ್ಣಿನ ಕಾರಣೆಯನ್ನು ಬಳಸಿ ತನ್ನ ಖಾಲಿ ಕೈಬೆರಳು ಮತ್ತು ಬಟ್ಟೆಚುಂಗು ಸುತ್ತಿದ ಕಡ್ಡಿಪುಳ್ಳೆಯನ್ನು ಬಳಸಿ ಹಸೆ ಚಿತ್ರಗಳನ್ನು ಬಿಡಿಸುತ್ತಿದ್ದ ಅವನು ಹುಟ್ಟಿನಿಂದಲೇ ಕಲಾವಿದ ರವಿವರ್ಮನ ಪ್ರತಿರೂಪವಾಗಿದ್ದ. ಅನಕ್ಷರಸ್ಥನಾಗಿದ್ದ ನನ್ನ ಅಪ್ಪನ ಹಸೆಚಿತ್ರಗಳಲ್ಲಿ ಯಾವ ರೇಖಾಗಣಿತ ಸೂತ್ರ ಅಥವಾ ಪೈಥಾಗರಸ್ ಪ್ರಮೇಯ ಅಡಕವಾಗಿರಬಹುದೆಂದು ನಾನು ಎಳೆಯ ಬೆರಗುಗಣ್ಣುಗಳನ್ನು ಬಿಡುತ್ತಾ ಅಪ್ಪ ಬಿಡಿಸುವ ಹಸೆ ಚಿತ್ರಗಳನ್ನು ನೋಡುತ್ತಿದ್ದೆ ! ನನ್ನ ಅಪ್ಪ ಹೊಲ ಉಳುವಾಗಿನ ನೇಗಿಲ ಗೆರೆಗಳನ್ನು ಕಂಡಾಗ ಕೂಡಾ ನನಗೆ ವಿಸ್ಮಯವಾಗುತ್ತಿತ್ತು ! ಹಾಳೆಯ ಮೇಲೆ ಸ್ಕೇಲಿನಿಂದ ಗೆರೆ ಎಳೆದಂತೆ ಆತನ ನೇಗಿಲ ಗೆರೆಗಳು ನೆಲದ ಮೇಲೆ ಮೂಡುತ್ತಿದ್ದವು.

ಭೂಮಿಯ ಮಣ್ಣನ್ನೇ ಬಣ್ಣಗಳನ್ನಾಗಿ ಬಳಸುತ್ತಿದ್ದ ಅವನ ಕಲಾವಂತಿಕೆ ಇಂದಿಗೂ ನನಗೊಂದು ಬೆರಗು, ಬೆಡಗು. ಮದುವೆ ಮನೆಗಳಿಗೆ ಹರಣಿ ಪೂಜೆ- ಸುರಗಿ ನೀರು- ನಾಗೋಲಿ ಶಾಸ್ತ್ರಗಳಿಗೆಂದು ಕುಂಬಾರರಿಂದ ಕೊಂಡುತಂದ ಮಣ್ಣಿನ ಹೊಸ ಮಡಕೆ ಕುಡಿಕೆ ಮೊರ ಬುಟ್ಟಿ ಹೆಡಿಗೆಗಳು ಅಪ್ಪ ಬಿಡಿಸಿದ ಹಸೆ ಚಿತ್ರಗಳಿಂದ ಕಂಗೊಳಿಸುತ್ತಿದ್ದವು. ಮದುವೆಯ ಬಿಡದಿ (ಪ್ರಸ್ತ) ಮನೆಯ ಗೋಡೆಯ ಮೇಲೆ ಹಾಗೂ ನಡುಮನೆಯಲ್ಲಿ ಮಧುಮಕ್ಕಳು ಹಸೆಮಣೆಯ ಮೇಲೆ ಕೂರುತ್ತಿದ್ದ ಹಿಂಭಾಗದ ಗೋಡೆಯ ಮೇಲೆ ಅಪ್ಪ ಬರೆಯುತ್ತಿದ್ದ ಹಸೆ ಚಿತ್ರಗಳಿಂದಾಗಿ ಆ ಮದುವೆ ಮನೆಗಳು ಪವಿತ್ರವಾದ ದೇವರ ಗುಡಿಗಳೆಂಬ ಭಾವನೆಯನ್ನು ಮೂಡಿಸುತ್ತಿದ್ದವು. ನನ್ನ ಅಪ್ಪನ ಹಿರಿಯಕ್ಕ ಬೆಲ್ಲದಹಳ್ಳಿಯ ನಾಗಮ್ಮ (ನನ್ನ ಸೋದರತ್ತೆ) ಕೂಡಾ ಹಸಿ ಗಾರೆ ತಿಕ್ಕಿದ ಗೋಡೆಗಳ ಮೇಲೆ ಹಾಗೂ ಎಡಕಲಿನ ಹರವಿ, ಬಾನಿ, ಗುಡಾಣ, ವಾಡೆ ಮುಂತಾದ ಸಾಲು ಮಡಕೆಗಳ ಮೇಲೆ ಸದಾಕಾಲವೂ ಆಕರ್ಷಕ ರೀತಿಯಲ್ಲಿ ಅನೇಕ ಬಗೆಯ ಹಸೆ ಚಿತ್ತಾರಗಳನ್ನು ಬಿಡಿಸಿರುತ್ತಿದ್ದಳು. ಮದುವೆ ಹಬ್ಬ ಹುಣ್ಣಿಮೆ ವಾರ-ಉಜ್ಜಿನ ಮುಂತಾದ ಶುಭ ಸಂದರ್ಭಗಳಲ್ಲಿ ಎಡಕಲಿನ ಸಾಲು ಮಡಕೆಗಳ ಹೊರಮೈ ತೊಳೆದು ಅವುಗಳ ಮೇಲೆ ವಿಭೂತಿ ಪಟ್ಟಿ ಬಳಿಯುತ್ತಿದ್ದಳು. ನನ್ನ ಅಮ್ಮ ವಡ್ಡಗೆರೆ ಕದರಮ್ಮ ನನ್ನ ಅಪ್ಪನಂತೆ ಅಥವಾ ಸೋದರತ್ತೆಯಂತೆ ಹಸೆ ಚಿತ್ರಗಳ ಕಲೆಯನ್ನು ರೂಢಿಸಿಕೊಳ್ಳಲಿಲ್ಲ. ಆದರೆ ಎಡಕಲಿನ ಮಡಕೆಗಳ ಮೇಲೆ ವಿಭೂತಿ ಪಟ್ಟಿ ಎಳೆದು, ಸಗಣಿ ಬಗ್ಗಡದಿಂದ ಅಡುಗೆ ಒಲೆಯನ್ನು ಸಾರಿಸಿ ರಂಗೋಲಿ ಪಟ್ಟಿ ಮತ್ತು ಅರಿಶಿನ- ಕುಂಕುಮದಿಂದ ಅಲಂಕರಿಸುವ ನೇಮವನ್ನು ಕಡ್ಡಾಯವಾಗಿ ಆಚರಿಸುತ್ತಿದ್ದಳು. ನನ್ನ ಸೋದರತ್ತೆ ನಾಗಮ್ಮ ತನ್ನ ಮತ್ತು ತನ್ನ ಹೆಣ್ಣುಮಕ್ಕಳ ಒಡೆದ ಕೈಬಳೆಗಳನ್ನು ಆಚೆಗೆಸೆಯದೆ ಒಂದು ಹೂಜಿಯಲ್ಲಿ ಸಂಗ್ರಹಿಸಿಟ್ಟುಕೊಂಡು ಆ ಬಳೆಗಳನ್ನು ಹಣತೆಯ ಉರಿಯಲ್ಲಿ ಕಾಯಿಸಿ ಒಂದನ್ನೊಂದು ಚೈನಿನಂತೆ ಬೆಸುಗೆ ಹಾಕಿ ಮಲ್ಹಾರಮಾಲೆ ಮಾಡಿ ದೇವರ ಪಟದ ಗೂಡಿನ ಸುತ್ತಲೂ ಅಲಂಕರಿಸುತ್ತಿದ್ದಳು.
ನನ್ನ ಅಪ್ಪ ಮತ್ತು ನನ್ನ ಸೋದರತ್ತೆ ಕರಗತ ಮಾಡಿಕೊಂಡಿದ್ದ ಈ ಹಸೆ ಕಲೆಯನ್ನು ನಮಗೆ ಹತ್ತಿರದಲ್ಲಿದ್ದ ಕಲ್ಕೆರೆ ಗ್ರಾಮದ ನರಸಮ್ಮಜ್ಜಿ ಮತ್ತು ಬೆಲ್ಲದಹಳ್ಳಿ ಗ್ರಾಮದ ಎಲ್ಲಕ್ಕಜ್ಜಿ ಈ ಇಬ್ಬರೇ ಇಬ್ಬರು ಅಜ್ಜಿಯರು ಬಲ್ಲವರಾಗಿದ್ದರು. ಈ ಹಸೆ ಕಲೆಯು ಆದಿ ಮಾನವನು ಬೆಟ್ಟಗುಡ್ಡಗಳ ಬಯಲಿನಲ್ಲಿ ಬಂಡೆಗಳ ಮೇಲೆ ಅಥವಾ ಗುಹೆಗಳೊಳಗಿನ ಬಂಡೆಗಳ ಮೇಲೆ ಬಿಡಿಸಿರುವ ಮೊಟ್ಟಮೊದಲ ಪ್ರಾಗೈತಿಹಾಸಿಕ ಕಾಲದ ಸೃಜನಶೀಲ ಅಭಿವ್ಯಕ್ತಿಯಾಗಿದೆ. ಆಗಿನ ಆದಿಮ ಜನಾಂಗದಿಂದ ಇಂದಿನ ಆಧುನಿಕ ವೈಜ್ಞಾನಿಕ ಯುಗದ ನನ್ನ ಸೋದರತ್ತೆ ಮತ್ತು ಅಪ್ಪನವರೆಗೂ ಹಸೆ ಕಲೆಯು ದಾಟಿ ಬಂದಿದೆ. ಹಾಗಾಗಿ ಹಸೆ ಚಿತ್ರಗಳನ್ನು ಬಿಡಿಸುವ ಯಾರನ್ನೇ ನಾನು ಕಂಡಾಗಲೆಲ್ಲಾ ಆದಿ ಮಾನವನ ಪಳೆಯುಳಿಕೆ ಕಲಾವಿದರಿವರು ಅನ್ನಿಸುತ್ತಿತ್ತು. ದಿನ ಕಳೆದಂತೆ ನೋಡನೋಡುತ್ತಲೇ ನನ್ನ ಸೋದರತ್ತೆ ನಾಗಮ್ಮ ಮತ್ತು ಅಪ್ಪ ಹನುಮಂತಯ್ಯ ಹಾಗೂ ನಾನು ಕಂಡಿದ್ದ ಹಸೆ ಚಿತ್ರಗಳ ಕಲಾವಿದರು ನನ್ನ ಕಣ್ಣುಗಳಿಗೆ ಇನ್ನೆಂದಿಗೂ ಕಾಣಿಸದಂತೆ ಕಾಲದ ಪರದೆಯ ಹಿಂದಕ್ಕೆ ಸರಿದು ಹೋದರು.
ಹಸೆ ಚಿತ್ರಗಳನ್ನು ಬಿಡಿಸುತ್ತಿದ್ದ ಚಿತ್ತಾರಗಿತ್ತಿ ಅಥವಾ ಚಿತ್ತಾರಗಾರನ ನೆರವಿಲ್ಲದೆ ನನ್ನ ಬಾಲ್ಯ ಕಾಲದಲ್ಲಿ ನಮ್ಮ ಬಂಧು- ಬಳಗದವರ ಯಾವುದೇ ಮದುವೆ ನಡೆದದ್ದನ್ನು ನಾನು ಕಂಡೇ ಇರಲಿಲ್ಲ. ನಮ್ಮ ಸುತ್ತ ಮುತ್ತಲಿನ ಜನರ ಮದುವೆಗಳಲ್ಲಿ ಅರ್ಧಂಬರ್ಧ ಕುಟ್ಟಿದ ನೆಲ್ಲಕ್ಕಿ ಬಳಸಿ ಕುಲಸ್ವಾಮಿಗಳು ಕರಿ ಕಂಬಳಿ ಗದ್ದಿಗೆಯ ಮೇಲೆ ಹಸೆ ಚಿತ್ರಗಳನ್ನು ಬರೆದು ಮದುವೆಯ ಕೈಂಕರ್ಯಗಳನ್ನು ನಡೆಸುವುದು ಕಡ್ಡಾಯ ಸಂಪ್ರದಾಯವಾಗಿತ್ತು.

ನನ್ನ ಅಪ್ಪ ಹನುಮಂತಯ್ಯ ಕರಿ ಕಂಬಳಿ ಮೇಲೆ ಜೋಡಿ ಕಳಸ ಹೂಡಿ, ನೆಲ್ಲಕ್ಕಿಯಿಂದ ಹಸೆ ಚಿತ್ರಗಳನ್ನು ಬರೆದು, ಕುಲಸ್ವಾಮಿಯಾಗಿ ಮದುವೆಯ ಕೈಂಕರ್ಯಗಳನ್ನು ನಡೆಸುತ್ತಿರುವಾಗ ಜಾನಪದ ಹಾಡುಗಾರ್ತಿಯಾದ ನನ್ನ ಅಮ್ಮ ತನ್ನ ಸಂಗಡಿಗರೊಂದಿಗೆ ಹಸೆಪದಗಳನ್ನು ಹಾಡುತ್ತಿದ್ದಳು. ನನ್ನ ಅಮ್ಮ ಮತ್ತು ಅವರ ಸಂಗಡಿಗರು ಹಾಡುತ್ತಿದ್ದ ಹಸೆಪದ ಹೀಗಿದೆ :
ಬರಿಯಣ್ಣ ಹಸೆಗಾಳ ಬರೆಯಣ್ಣ ರಥಗಾಳ
ಬರೆಯಣ್ಣ ಶಿವನ ಶಿಖರವ | ನಡುವೋಕೆ
ಬಾಗಿ ಸೋವಣ್ಣ ಗಿಣಿಹಿಂಡು
ಕರೆಕುರಿ ತುಬುಟ ಕುರುಬುತಿ ನೂತ ನೂಲು
ಕುರುಬಗೌಡ ಬರೆದ ರತುನ ಜಾಡಿ | ಮ್ಯಾಲೆ
ಬರುದರು ನೆಲ್ಲಕ್ಕಿ ಹಸೆಗಳಾ
ಕೆಂದಗುರಿ ತುಬುಟ ಕುರುಬತಿ ನೂತ ನೂಲು
ಶಂಬುಗೌಡ ನೇಯ್ದ ರತುನ ಜಾಡಿ | ಮ್ಯಾಲೆ ಬರುದರು ಕ್ಯಾಸಕ್ಕಿ ಹಸೆಗಳಾ…
ಕ್ಯಾಸಕ್ಕಿ ಹಸೆಯ ಲೇಸಾಗಿ ನೀ ಬರೆಯೋ
ದಾಸವಾಳದುವ್ವ ಕೊರೆದಂಗೆ | ಹಸೆಯ ಮ್ಯಾಲೆ ಬಾಸಿಂಗನ್ಯಾರೆ ಬರೆದಾರು…
ನೆಲ್ಲಕ್ಕಿ ಹಸೆಯ ಲೇಸಾಗಿ ನೀ ಬರೆಯೋ
ಜಾಲಗಿರಿ ಹುವ್ವ ಕೊರೆದಂಗೆ | ಹಸೆಯ ಮ್ಯಾಲೆ ಸಂಪಿಗುವ್ವನ್ಯಾರೆ ಬರೆದಾರು…
ನೆಲ್ಲಕ್ಕಿ ಹಸೆಯ ಬಲ್ಲಣ್ಣ ನೀ ಬರೆಯೋ |
ಬೆಲ್ಲಾದಚ್ಚುಗಳ ಕೊರದಂಗೆ | ಹಸೆಯಾ ಮ್ಯಾಲೆ
ಮಲ್ಲಿಗುವ್ವನ್ಯಾರೆ ಬರುದಾರು
ನೆಲ್ಲಕ್ಕಿ ಹಸೆಯ ಬಲ್ಲಣ್ಣ ನೀ ಬರೆಯೋ
ಅಲ್ಲಿಗೊಂದಕ್ಕಿ ಸಿಡಿಯದೆ | ಸಿಡಿಯ್ದಂಗೆ ಬರೆದಣ್ಣಾಗೆ ಬೆಲ್ಲವ ಕೊಡಿರೆ ಮೆಲುವದಕೆ…
ಗದ್ದಿ ಗದ್ದಿಗೆ ಚೆಂದ ಗದ್ದಿಗೆ ನೂಲೆಳೆ ಚೆಂದ
ಗದ್ದಿಗೆ ಪೂಜುವರ ಮಗ ಚೆಂದ…
ಜಾಡಿ ಜಾಡಿ ಚೆಂದ ಜಾಡಿಯ ನೂಲೆಳೆ ಚೆಂದ
ಜಾಡಿಗವನಿಗೂ ಇನವಂದ…
ಜಾಡಿ ಪೂಜ್ಯಾದವು ಅಲ್ಲೋಗರನ ಬರಹೇಳಿ | ಅಲ್ಲೋಗ ಕಾಳಿಂಗನೊಡಗೂಡಿ…
ಗದ್ದಿಗೆ ಪೂಜ್ಯಾದವು ಅಲ್ಲಿದ್ದರನ ಬರಹೇಳಿ
ಅಲ್ಲಿದ್ದ ಮಾಲಿಂಗನೊಡಗೊಂಡು…
ತಿದ್ದಣ್ಣ ಹಸೆಗಾಳ ತಿದ್ದಣ್ಣ ರಥಗಾಳ
ತಿದ್ದಣ್ಣ ಶಿವನ ಶಿಖರಾವ / ನಡುವೋಕೆ
ಬಾಗಿ ಸೋವಣ್ಣ ನವಿಲಿಂಡು
ಅಚ್ಚಕ್ಕಿ ನುಚ್ಚಕ್ಕಿ ಅಚ್ಚ ರಾಜಣದಕ್ಕಿ
ವಡ್ಡಿಗೆರೆ ಬಯಿಲಾಗೆ ಬೆಳುದಂತ | ನೆಲ್ಲಕ್ಕಿ
ನಾಗಣ್ಣಾ ಹಸೆಗೆ ಬರಬೇಕು…
ತಣ್ಣೀರ ತನ್ನಿ ಸಣ್ಣ ಮಲ್ಲಿಗೆ ತನ್ನಿ
ಸೆಂದವಾಗಿ ಸೆಂಬು ಬೆಳಗಿ ತನ್ನಿ | ಮೀನಿಗರ ಕಂದನು ಪೂಜಿಗೆ ಬರುತಾನೆ….
ಬೆಲ್ಲದ ಪಾನಕ ತನ್ನಿ ಎಸಳು ಮಲ್ಲಿಗೆ ತನ್ನಿ
ಅಸನಾಗಿ ಸೆಂಬ ಬೆಳಗಿ ತನ್ನಿ | ಮೀನಿಗರ ನಾಗಣ್ಣ ಪೂಜೆಗೆ ಬರುತಾನೆ…
ಚಿನ್ನದ ಕುಡುಗೋಲಿಗೆ ರನ್ನದ ಹಿಡಿಹಗ್ಗ ಇನ್ನ್ಯಾರೆ ಕಾಯಿ ಒಡೆವೋರು |
ಮೀನಿಗರು ಕಾಯೊಡೆದೆ ಕೈಯಾ ಮುಗುದೇವು…..

ಮದುವೆ ಮುಗಿದ ಬಳಿಕವೂ ‘ಹಸೆ ಕೆಡಿಸುವ ಶಾಸ್ತ್ರ’ ಎಂಬ ಆಚರಣೆಯೊಂದನ್ನು ಮದುವೆ ಮನೆಯಲ್ಲಿ ಕೈಗೊಳ್ಳುತ್ತಿದ್ದರು. ‘ಹಸೆ ಕೆಡಿಸುವ ಶಾಸ್ತ್ರದಲ್ಲಿ’ ಗಂಡಿನ ಸೋದರ ಮಾವ ಮತ್ತು ಹೆಣ್ಣಿನ ಸೋದರ ಮಾವ ಕಡ್ಡಾಯವಾಗಿ ಭಾಗವಹಿಸಬೇಕು. ಅಂದು ಕುಲಸ್ವಾಮಿಯ ಮಾರ್ಗದರ್ಶನದ ಪ್ರಕಾರ ಕೋಳಿ ಕುಯ್ದು, ಮದುವೆಯ ಹರಣೆ ಪೂಜೆ ಮಾಡಲಾಗಿದ್ದ ಕೋಣೆಯಲ್ಲಿ ಗಂಡು-ಹೆಣ್ಣು ಕುಳಿತಿದ್ದ ಸ್ಥಳದ ಹಿಂದೆ ಗೋಡೆಯ ಮೇಲೆ ಬಿಡಿಸಲಾಗಿದ್ದ ಹಸೆ ಚಿತ್ರಗಳನ್ನು ಈ ಇಬ್ಬರೂ ಸೋದರ ಮಾವಂದಿರು ಕೋಳಿ ರಕ್ತ ಬಳಿದು ಅಳಿಸುತ್ತಾರೆ.
ಕತ್ತು ಕುಯ್ದ ಕೋಳಿಯನ್ನು ಇಬ್ಬರೂ ಕೈಗಳಲ್ಲಿ ಹಿಡಿದುಕೊಂಡು, ಹಸೆ ಚಿತ್ರಗಳನ್ನು ಬಿಡಿಸಲಾಗಿದ್ದ ಗೋಡೆಯ ಕಡೆಗೆ ಬೆನ್ನು ತಿರುಗಿಸಿ ನಿಂತುಕೊಂಡು, ಹಸೆ ಚಿತ್ರಗಳನ್ನು ನೋಡದೆಯೇ ಕೋಳಿಯ ರಕ್ತವನ್ನು ಆ ಚಿತ್ರಗಳ ಮೇಲೆ ಒರೆಸಿ ಅಳಿಸಿ ಹಾಕುತ್ತಾರೆ. ಇದು ಹಸೆ ಕೆಡಿಸುವ ಶಾಸ್ತ್ರ. ಹಸೆ ಚಿತ್ರಗಳನ್ನು ಕೆಡಿಸುವಾಗ ಆ ಕೋಣೆಯಲ್ಲಿ ಕುಲಸ್ವಾಮಿಗಳು, ಸೋದರ ಮಾವಂದಿರು, ಇಬ್ಬರು ಅಥವಾ ಮೂವರು ಮುದುಕ/ ಮುದುಕಿಯರ ಹೊರತಾಗಿ ಬೇರಾರೂ ಇರಬಾರದು ಎಂಬುದು ಪಾರಂಪರಿಕವಾಗಿ ಪಾಲಿಸುತ್ತಿರುವ ನಿಯಮ. ಹಸೆ ಕೆಡಿಸುವ ಶಾಸ್ತ್ರ ಮುಗಿದ ಒಂದು ಗಂಟೆಯ ಬಳಿಕ ಆ ಕೋಣೆಗೆ ಯಾರೇ ಹೋಗಬಹುದು. ನಾನು ನೋಡುವಷ್ಟತ್ತಿಗೆ ನನ್ನ ಅಪ್ಪ ಬರೆದಿದ್ದ ಹಸೆ ಚಿತ್ರಗಳು ಕೋಳಿಯ ಕೆಂಪು ನೆತ್ತರು ಸೋರಿ ಕೆಡಿಸಿಹೋಗಿರುತ್ತಿದ್ದವು. ನನ್ನಪ್ಪ ಬರೆದ ಚಿತ್ರಗಳನ್ನು ಅಪ್ಪನೇ ಎದುರಿಗೆ ನಿಂತು ಅಳಿಸಿ ಹಾಕಿರುತ್ತಿದ್ದ. ಹಸೆ ಚಿತ್ರಕಲೆಯ ಕಲಾವಿದರಾಗಿದ್ದ ನನ್ನ ಸೋದರತ್ತೆ ನಾಗಮ್ಮ ಮತ್ತು ನನ್ನ ಅಪ್ಪ ಹನುಮಂತಯ್ಯ ತಾವು ಬರೆದ ಹಸೆ ಚಿತ್ರಗಳನ್ನು ತಾವೇ ಅಳಿಸಿಹಾಕಿ ಕಾಲದ ಪರದೆಯ ಹಿಂದೆ ಮರೆಯಾಗಿ ಹೋದರು. ದಾರ್ಶನಿಕ ವಚನಕಾರ ಅಲ್ಲಮಪ್ರಭು, “ಅಳಿಸಲಾರದ ಅಕ್ಷರವ ಬರೆಯಬಾರದು” ಎಂದು ಹೇಳಿರುವುದು ಇದನ್ನೇ ತಾನೆ ?
(ನನ್ನ ಅಮ್ಮ ಮತ್ತು ಅವರ ಸಂಗಡಿಗರು ಹಾಡಿರುವ ಹಸೆ ಪದದ ವಿಡಿಯೋ ಲಿಂಕ್ :
https://www.facebook.com/share/p/kiR9axoT25UudHVe/?mibextid=oFDknk)
- ಡಾ.ವಡ್ಡಗೆರೆ ನಾಗರಾಜಯ್ಯ – ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು, ಲೇಖಕರು, ಬೆಂಗಳೂರು.
