ಹಾಸ್ಯೋತ್ಸವ ಅಥವಾ ತಮಾಷೆ ಹಬ್ಬ- ಶಿವಕುಮಾರ್ ಬಾಣಾವರ



ನೌಕರಿ ನಿಮಿತ್ತ ಸಂದರ್ಶನಕ್ಕೆ ಹೊರಟ ಮಗನನ್ನು ಅಡಿಯಿಂದ ಮುಡಿಯವರೆಗೆ ದಿಟ್ಟಿಸಿದ ಅವನ ತಂದೆ “ಎಲ್ಲಿ ರಾಜ ನಿನ್ನ ಮೇಲ್ವಸ್ತ್ರ?” ಎಂದು ಪ್ರಶ್ನಿಸುತ್ತಾರೆ. “ಅಪ್ಪ ಸೂಟಿನ ಮೇಲೆ ಎಂಥ ಮೇಲ್ವಸ್ತ್ರ?” ಅಂತ ಮಗ ಕಕ್ಕಾಬಿಕ್ಕಿ. “ಇದೆ ಕಣಪ್ಪಾ. ಈ ಸಿಡುಕು ಮೋರೆಯೇಕೆ? ರವಷ್ಟು ನಗು ಇರಲಿ” ಎಂದು ತಂದೆ ಹೇಳಿದಾಗಲೇ ಮಗನಿಗೆ ವಿಷಯ ಅರಿವಾಗಿದ್ದು. ಮುಖ ಅರಳಿದ್ದು.

ಬದುಕಿನ ಒಟ್ಟಾರೆ ಗುಣಮಟ್ಟ ಸುಧಾರಿಸಬಲ್ಲ ಹಾಸ್ಯ ಪ್ರವೃತ್ತಿಗೆ ಎಲ್ಲರೂ ವ್ಯವಧಾನ ಕಲ್ಪಿಸಿಕೊಳ್ಳಬೇಕಿದೆ. ಕೆಣಕುಮುಕ್ತ ವಿನೋದ ಯಾವುದೇ ಸಮಸ್ಯೆಯ ಪರಿಹಾರದ ಒಳನೋಟಕ್ಕೆ ಆಕರವಾಗಬಲ್ಲದು. ತನ್ಮೂಲಕ ಪುನರಾವಲೋಕನಕ್ಕೆ ಆಸ್ಪದವಾಗುತ್ತದೆ. ಹಾಸ್ಯ ಎಂಥದ್ದೇ ಸಂಘರ್ಷವನ್ನು ಸೃಜನಾತ್ಮಕ ಪರಿಹಾರದತ್ತ ಒಯ್ದೀತು. ಪರಸ್ಪರ ವಿಶ್ವಾಸ ಮತ್ತು ಅನುಭೂತಿಗೆ ದಾರಿಯಾದೀತು.

ಪತ್ನಿಗೆ ಪತಿ “ನಿನ್ನೆ ಚಟ್ನಿಗೆ ಉಪ್ಪು ಚಲೋ ಇತ್ತು” ಅಂತ ಹೇಳುವುದು ದೂರೆನ್ನಿಸದು. ಇವತ್ತು ಖಾರ ಎನ್ನುವುದಕ್ಕೆ ಅದು ಪತಿಯ ಹಿತ ಪರ್ಯಾಯ ಆಯ್ಕೆ. ಟೀಕೆ ಅದೇ ಆದರೂ ನಯ, ನಾಜೂಕು, ವಿಡಂಬನೆಯ ಸಾಮರ್ಥ್ಯವೆಂದರೆ ಇದೇ ಅಲ್ಲವೇ? ಕಲಿಕೆಯ ಮನ ಶಕ್ತಿಯನ್ನು ಉತ್ತಮೀಕರಿಸುವ ತಮಾಷೆಯನ್ನು ಯಾವುದೇ ಒಂದು ವಿಶಿಷ್ಟ ಭಾಷೆ, ಅದು ಸಿದ್ಧ ಮಾದರಿಯಾಗದೆ ಸಾಂದರ್ಭಿಕವಾಗಿರಬೇಕು. ಹಾಸ್ಯ ಪ್ರವೃತ್ತಿ ನಮ್ಮ ಭೌತಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪರಿಣಾಮಕಾರಿ ಔಷಧಿಗಳಲ್ಲೊಂದು. ಅಮೆರಿಕದ ಕಾದಂಬರಿಕಾರ ಜಾರ್ಜ್ ಸ್ಯಾಂಡರ್ಸ್ “ನಿರೀಕ್ಷೆಗೂ ಮೀರಿ ತ್ವರಿತವಾಗಿ, ನೇರವಾಗಿ ನಿಜ ಹೇಳುವುದರ ಪರಿಣಾಮವೇ ಹಾಸ್ಯ”. ಎನ್ನುತ್ತಾರೆ. ಅಚ್ಚರಿಯೆಂದರೆ ರೋಚಕತೆಗಿಂತ ಹೆಚ್ಚಾಗಿ ರಚನಾತ್ಮಕತೆಯು ವಿನೋದದಲ್ಲಿ ಅಂತರ್ಗತವಾಗಿರುತ್ತದೆ. ಅದು ಗೇಲಿಯಾಗದೆ ಗಂಭೀರವಾಗಿ ಇರಬೇಕಷ್ಟೇ. ಪರರನ್ನು ನಿಂದಿಸಿ, ಅಪಹಾಸ್ಯಕ್ಕೀಡಾಗಿಸಿ ನೀಡಬೇಕಾಗಿದ್ದು, ನೀಗಿಸಿ ಬೇಕಾದ್ದು ಏನೂ ಇಲ್ಲ.

ಫೋಟೋ ಕೃಪೆ : clipartbest

ಪ್ರಹಸನ ಬ್ರಹ್ಮ ಟಿ ಪಿ ಕೈಲಾಸಂ ಅವರೊಂದಿಗಿನ ಮೈಸೂರು ಮಹಾರಾಜ ಶಾಲೆಯಲ್ಲಿ ಏರ್ಪಟ್ಟ ಒಂದು ಸಂವಾದ. ಒಂದು ಹಂತದಲ್ಲಿ “ನಿಮ್ಮ ಜೋಕು ಅರ್ಥವಾಗಲಿಲ್ಲ. ದಯವಿಟ್ಟು ವಿವರಿಸಿ ಸರ್” ಎಂದು ಸಂಬಂಧಿಕರೊಬ್ಬರು ವಿನಂತಿಸಿದರು. “ಜೋಕು ವಿವರಿಸಿ ಅದನ್ನು ಕೊಲ್ಲಲಾರೆ” ಎಂದರು ಕೈಲಾಸಂ! ತದನಂತರ ಕೈಲಾಸಂ ಇನ್ನೊಂದು ಜೋಕು ಹೇಳಿದವರೆ “ಇದು ಜೋಕು. ದಯವಿಟ್ಟು ನಗಿ” ಎಂದಿದ್ದರು!

ಮೇಧಾವಿಗಳ ವಿಡಂಬನೆ ಇಂದಿಗೂ ಹಸಿರಾಗಿರುವುದು ಅವುಗಳ ಪ್ರಬೋಧಶೀಲತೆಯಿಂದ. ಒಮ್ಮೆ ಭಾರತದ ಪ್ರಥಮ ಗೌರ್ನರ್ ಜನರಲ್ ಚಕ್ರವರ್ತಿ ರಾಜಾಜಿಯವರು  ಮನೆಯಲ್ಲಿ ತಮ್ಮ ಬೂಟಿಗೆ ಪಾಲೀಶ್ ಹಾಕುತ್ತಿದ್ದರು. ಆಪ್ತ ಮಿತ್ರರೊಬ್ಬರಿಗೆ ಈ ದೃಶ್ಯ ಅತಿಯಾಯಿತೇನೋ. “ಸರ್, ಇದೇನು ತಮ್ಮ ಬೂಟಿಗೆ ತಾವೇ ಪಾಲೀಶ್ ಹಾಕುವುದೇ?” ಎಂದರು. ಥಟ್ಟನೆ ರಾಜಾಜಿ “ಹೌದು, ನೀವು ಪಾಲೀಶ್ಯಾ ಹಾಕುವುದು ಯಾರ ಬೂಟಿಗೆ?” ಎನ್ನುವುದೇ! ಬೀಚಿಯವರು ಪಾದರಕ್ಷೆ ಅಪಹರಣಕಾರರ ಬಗ್ಗೆ ಎಚ್ಚರಿಸುವುದನ್ನು ಗಮನಿಸಿ. “ಮದುವೆ  ಮನೆಗೆ ಚಪ್ಪಲಿ ಧರಿಸಿ ಹೋಗದಿರಿ. ಬರುವಾಗ ಚಪ್ಪಲಿ ಧರಿಸಿ ಬನ್ನಿ” ವಿನೋದವು ಸಾವನ್ನೂ ತನ್ನ ವ್ಯಾಪ್ತಿಯಲ್ಲಿ ಇರಿಸಿಕೊಳ್ಳುತ್ತದೆ. ಹೆಚ್. ನರಸಿಂಹಯ್ಯ ತಮ್ಮ ಕೊನೆಯ ದಿನಗಳಲ್ಲಿ “ನನ್ನನ್ನು ಇದ್ದೂರಿನಲ್ಲೇ ಸುಡಬೇಕು…” ಎನ್ನುತ್ತಿದ್ದರು. ಈ ಒಕ್ಕಣೆಯಂಚಿಗೆ “ಸತ್ತಮೇಲೆ” ಎನ್ನುವ ಷರಾ ಇರುತ್ತಿತ್ತು! ನಿಷ್ಠುರವಾದರೂ ವಿನೋದಕ್ಕೆ ಸಮಾಜದ ಓರೆ ಕೋರೆಗಳನ್ನು ಸರಿಪಡಿಸುವ ಬದ್ಧತೆ ಇರುತ್ತದೆ. ಒಂದರ್ಥದಲ್ಲಿ ಹಾಸ್ಯಕ್ಕೆ ಪರರನ್ನು ನವಿರಾಗಿ ಅವಮಾನಿಸಿ, ನಿರೀಕ್ಷಣಾ ಜಾಮೀನು ಪಡೆದು ಅವರನ್ನು ತಿದ್ದುವ ಉದ್ದೇಶವೆನ್ನೋಣ.



‘ನಾವೇ ಎದ್ದು ಬೊಗಳೋಕೆ ನಾಯಿ ಯಾಕೆ ಸಾಕ್ಬೇಕು’, ‘ಅರಮನೆ ಮುಂದೆ, ಕುದುರೆ ಹಿಂದೆ ಹೋಗ್ಬೇಡ’, ‘ಆನೆಯಂಥದ್ದೂ ಮುಗ್ಗರಿಸ್ತದೆ’… ಗಾದೆಗಳೇ ಜನಪದರ ಅನುಭವಜನ್ಯ ವಿವೇಕಯುತ ವಿನೋದಕ್ಕೆ ಸಾಕ್ಷಿ. ತೆರೆದ ಮನಸ್ಸು ಸಹಜವಾಗಿಯೇ ಹಾಸ್ಯ ಆವಾಹಿಸಬಲ್ಲದು, ಹಂಚಬಲ್ಲದು. ವಿನೋದವು ದುಃಖ, ದುಮ್ಮಾನ, ಉದ್ವೇಗ ಗೋಳನ್ನು ಹಗುರಾಗಿಸಿ ವರ್ತಮಾನಕ್ಕೆ ಆದ್ಯತೆ ಕಲ್ಪಿಸುತ್ತದೆ. ‘ಒಳಗೆ ಹಗೆಯಿಲ್ಲದ ನಗಿ’ ಅದರ ಆಶಯ. ಜಂಜಡ ಮೀರಿ ಮುಖವು ಹರಿದ್ವರ್ಣದ ಕಾಡಿನಂತಿರಬೇಕು. ಕಾಡು ಬಾ ಎನ್ನುವಂತೆ ಇರಬಾರದು.

ಅರವತ್ತು ಎಪ್ಪತ್ತರ ದಶಕಗಳಲ್ಲಿ ಚಲನಚಿತ್ರಗಳಲ್ಲಿ ಗಂಭೀರ ಹಾಸ್ಯ ರಾರಾಜಿಸುತ್ತಿತ್ತು. ತಾವು ತಯಾರಿಸಬೇಕೆಂದಿದ್ದ ಚಿತ್ರಗಳಿಗೆ ನಿರ್ಮಾಪಕ ನಿರ್ದೇಶಕರು ಮೊದಲು ಹಾಸ್ಯ ಪಾತ್ರಧಾರಿಗಳನ್ನು ನಿಗದಿಪಡಿಸಿಕೊಂಡು ನಂತರವೇ ಉಳಿದ ಪಾತ್ರಧಾರಿಗಳಿಗೆ ಹುಡುಕುತ್ತಿದ್ದರಂತೆ. ಮನೆಗೆ ಬಂದ ವೈದ್ಯ ರೋಗಿಯನ್ನು ಪರೀಕ್ಷಿಸುತ್ತ ನೀರು ಕೇಳುವುದು, ವೈದ್ಯ ತನ್ನ ಕಿಸೆಯಿಂದ ಗುಳಿಗೆ ತೆಗೆದು ನುಂಗುವವರೆಗೆ (ಪ್ರೇಕ್ಷಕರು) ಗುಳಿಗೆ ರೋಗಿಗೆಂದೇ ಭಾವಿಸುತ್ತಾರೆ! ಅಂದಕಾಲತ್ತಲೆ ಇಂಥ ಮೆಲುಕುಹಾಕುವಂಥ ಹಾಸ್ಯ ಪ್ರಸಂಗಗಳು ತೆರೆಯಲ್ಲಿ ಮೆರೆಯುತ್ತಿದ್ದವು. ಇಂದೋ ದ್ವಂದ್ವಾರ್ಥಗಳೇ ವಿನೋದವೆನಿಸಿದೆ.

ತಮಾಷೆ ಹಬ್ಬ ಅಥವಾ ವಿನೋದೋತ್ಸವ ಎಂದರೆ ಸನ್ನಿವೇಶ ಪ್ರೇರಿತವಾಗದ ನಗೆಯ ತುಣುಕುಗಳು. ಯಾಂತ್ರಿಕವಾಗಿ ವೇದಿಕೆಯಿಂದ ಪುಂಖಾನುಪುಂಖವಾಗಿ ಪ್ರೇಕ್ಷಕರಿಗೆ ರವಾನೆಯಾಗುವುದಲ್ಲ. ಪೈಪೋಟಿಯಲ್ಲಿ ಯಥಾಶಕ್ತಿ ಸಂಗ್ರಹಿತ ಜೋಕುಗಳ ಬುತ್ತಿಯನ್ನು ಮಂಡಿಸುವುದಲ್ಲ. ಇದು ಹೆಂಗೂ ಇರಲಿ ಇಷ್ಟು ಹೊತ್ತು ನಗಿಸಲು ಇಷ್ಟು ಎನ್ನುವಷ್ಟು ನಗೆ ಮಾರುಕಟ್ಟೆಯಾಗಬೇಕೇ? ನಗೆ ಪ್ರಖರ ಅನುಸಂಧಾನವಾಗಿ, ಬದುಕಿನ ಸಂಸ್ಕಾರವಾಗಿ ಮೈದಳೆಯಬೇಕಿದೆ.


  • ಶಿವಕುಮಾರ್ ಬಾಣಾವರ (ನಿವೃತ್ತ, ಕಾರ್ಯಪಾಲಕ ಇಂಜೀನಿಯರ್ – ಕೆ. ಪಿ.ಸಿ), ಶಿವಮೊಗ್ಗ.

Leave a Reply

Home
Search
Menu
Recent
About
×