ಒಳ್ಳೆಯ ಅಥವಾ ಕೆಟ್ಟ ದಾರಿ ಹಿಡಿಸುವುದೇ ಹಸಿವು – ಪ್ರೊ. ರೂಪೇಶ್ 



ನಾನು ಚಿಕ್ಕವನಿದ್ದಾಗ, (ಎರಡನೇ ತರಗತಿ) ನಾವಿದ್ದ ಬಾಡಿಗೆ ಮನೆ ಪಕ್ಕದ ದಾರಿಯಲ್ಲಿ ಒಬ್ಬ ಅಂಗಾತ ಬಿದ್ದಿದ್ದ. ಎಲ್ಲರೂ ಕುಡಿದು ಬಿದ್ದಿದ್ದಾನೆಂದು ಅಲ್ಲಗಳೆದರು. ಅಪ್ಪ ಕೆಲಸ ಮುಗಿಸಿ ಬರುವಾಗ ಅವನನ್ನು ನೋಡಿ, ಮನೆಗೆ ಬಂದು ಸ್ವಲ್ಪ ನೀರು ಕೊಂಡುಹೋಗಿ ಅವನನ್ನು ಎಬ್ಬಿಸಿ ಜೊತೆಗೆ ಕರೆದುಕೊಂಡು ಬಂದರು.ಮುಂದೇನಾಯಿತು ಓದಿ…

ಬಿಜಾಪುರದಿಂದ ಕೆಲಸ ಹುಡುಕಿ ಬಂದು, ಕೆಲ ದಿನ ಕೆಲಸ ಮಾಡಿದ ನಂತರ, ಮತ್ತೆ ಕೆಲ ವಾರದಿಂದ ಕೆಲಸ ಇಲ್ಲದೆ , ಹಸಿವಿನಿಂದ ಬಳಲಿ ಬಿದ್ದಿದ್ದಾನೆ ಎಂದು ಗೊತ್ತಾಯಿತು. ಅಮ್ಮ ಅವನಿಗೆ ಆಹಾರ ಕೊಟ್ಟರು. ಅಪ್ಪ ಅವರಿಗೆ ಪರಿಚಯ ಇರುವ ಗೋವಿಂದ ಮೇಸ್ತ್ರಿ ಯವರಿಗೆ ಹೇಳಿ ಕೆಲ ದಿನ ಕೆಲಸ ಸಿಕ್ತು. ಆದರೆ ಅದು ಖಾಯಂ ಆಗಿ ದೊರಕುತ್ತಿರಲಿಲ್ಲ.

ಕೆಲವು ದಿನ ನಮ್ಮ ಮನೆ ಮುಂದಿನ ಜಗಲಿಯಲ್ಲಿ ಮಲಗುತ್ತಿದ್ದ. ” ನಿನಗೆ ಆಹಾರ ಕೊಡುವೆ. ಆದರೆ ಎಲ್ಲಾದರೂ ಕೆಲಸ ಹುಡುಕು, ನಾನೂ ಹುಡುಕುತ್ತೇನೆ” ಎಂದರು ಅಪ್ಪ. ಅವನ ಹೆಸರು “ಅಲಿ” ಎಂದು ಆಮೇಲೆ ಗೊತ್ತಾಯಿತು. ಕೆಲ ದಿನ ಅವನು ಇರುತ್ತಿದ್ದ. ಕೂಲಿ ಕೆಲಸ ಸಿಕ್ಕಾಗ ಮಾಯವಾಗುತ್ತಿದ್ದ, ಮತ್ತೆ ಕೆಲಸ ಇಲ್ಲದೆ ಹಸಿವಾದಾಗ ನಮ್ಮ ಮನೆ ಮುಂದೆ ಬರುತ್ತಿದ್ದ. ಅಮ್ಮ ಅವನಿಗೆ ಅನ್ನ ಕೊಡುತ್ತಿದ್ದರು.

ಅಪ್ಪನ ಅಧಿಕಾರಿಯಲ್ಲಿ ಭಿನ್ನಹಿಸಿ ಕಛೇರಿಯಲ್ಲಿ ಅವನಿಗೆ ಕಸಗುಡಿಸುವ ಕೆಲಸ ಮಾಡಿ ಕೊಟ್ಟರು. ಆ ಸನ್ಮನಸಿನ ಅಧಿಕಾರಿ ಮಡಿಕೇರಿಯ ಶ್ರೀ ಕರುಂಬಯ್ಯಾ ಸಾರ್-ರವರು ನಂತರ ‘ಅಲಿ’-ಯವರನ್ನು ಅಲ್ಲಿಯೇ ಸ್ಥಿರ ಕೆಲಸವಾಗಿಸಿದರು.  ಅಂದು ಪಕ್ಕದ ಮನೆಯವರು ” ಎಲ್ಲಿಂದಲೋ ಬಂದವನನ್ನು ಯಾಕೆ ಸಾಕ್ತೀರಾ?” ಎಂದು ಅಪ್ಪನಲ್ಲಿ ಕೇಳಿದಾಗ ” ..ಅವನು ಎಷ್ಟೇ ಹಸಿವಿದ್ದರೂ ಕೆಟ್ಟದಾರಿ ಹಿಡಿದಿಲ್ಲ, ಕುಡುಕನಲ್ಲ, ಜೂಜುಕೋರನಲ್ಲ. ಅವನು ಕೆಟ್ಟದಾರಿಗೆ ಹೋಗುವ ಆಸ್ಪದ ನಾವು ಸಮಾಜ ಒದಗಿಸಬಾರದು ಹಾಗೆ ಮಾಡುವುದಕ್ಕಿಂತ, ಅವನ ಒಳ್ಳೆಯತನಕ್ಕೆ ದಾರಿ ತೋರುವುದು ಸರಿಯಲ್ಲವೇ?” ಎಂದು ಹೇಳಿದ್ದರು.
ಫೋಟೋ ಕೃಪೆ : Autocarindia

ಅವನ ಕೆಲಸ ಸ್ಥಿರ (permanent) ಆದಾಗ ಅಪ್ಪನಲ್ಲಿ ಹೇಳಿಸಿ, ಅವನ ಊರಿಗೆ ವರ್ಗಾವಣೆ ಮಾಡಿಸಿ ಹೋದ. ಹಲವಾರು ವರುಷಗಳ ನಂತರ, ಕೊನೆಗೆ ಮ್ಯಾಕನಿಕ್ ಆಗಿ ನಿವೃತ್ತಿಯಾದಾಗ, ಅವನ ಊರಿಂದ ತನ್ನ ಹೆಂಡತಿಯನ್ನು ಕರ್ಕೊಂಡು, ನಮ್ಮ ಮನೆಗೆ ಬಂದು ಅಪ್ಪನ ಕೈ ಹಿಡಿದು (ಯಾರೂ ಅಪ್ಪನ ಕಾಲು ಹಿಡಿಯುವುದು ಅಂದೂ ಇಂದೂ ಅಪ್ಪನಿಗಿಷ್ಟವಾಗಿರಲಿಲ್ಲ) ” ಯಹ್ ….ಹಾಥ್ ಅಗರ್ ಸಾಥ್ ನಹೀಂ ತಾ ತೋ…ಯಹ್ ಮಾ ಅಗರ್ ದಾನಾ ನಹೀಂ ದೇತಾ ತೋ… ಮೈ ಆಜ್ ಕೋಯಿ ಚೋರ್, ಲುಚ್ಚಾ , ಲಫಂಗಾ ಬನ್ ಜಾತಾ…”

ಈ ಮನುಷ್ಯನ ಕೈಗಳ ಆಸರೆ ಇಲ್ಲದಿದ್ದಲ್ಲಿ, ಈ ಅಮ್ಮನಿಂದ ತುತ್ತು ಸಿಗದಿದ್ದಲ್ಲಿ , ನಾನು ಕಳ್ಳ,…ಲಫಂಗ ಆಗುತ್ತಿದ್ದೆನೋ ಏನೋ… ನಾನೂ ಬೆಂಗಳೂರಿಗೆ ಬಂದು, ನನ್ನ ರೂಂನಲ್ಲಿರುವವ (ದಿ|| ಹರ್ಷ ರಾಘವೇಂದ್ರ ಮತ್ತು ನಾಜೀರ್)ರೊಂದಿಗೆ ಸೇರಿ, ಊರಿಂದ ತಿಂಗಳಿಗೆ ಒಬ್ಬರು ಕೆಲಸ ಹುಡುಕಿ ಬೆಂಗಳೂರಿಗೆ ಬಂದವ ನಮ್ಮ ರೂಂ ನಲ್ಲಿ ಕೆಲಸ ಸಿಗುವ ವರೆಗೆ ತಂಗಬಹುದು. ಕೆಲಸ ಸಿಗುವ ತನಕ ನಮ್ಮ ರೂಂನಲ್ಲಿ ಉಚಿತ ಆಹಾರ- ವಸತಿ ಎಂಬ ಪದ್ದತಿ ಮಾಡಿ, ಹಲವು ಹುಡುಗರು ಅದರ ಸದುಪಯೋಗದಿಂದ ಯಶಸ್ಸುಗಳಿಸಿದ್ದರು. ಕೆಲವರು ಒಂದೆರಡು ವಾರ ಸುಮ್ಮನೆ ರೂಂನಲ್ಲಿ ಕೂತಿದ್ದರೆ, ಅಂತಹವರನ್ನು ನಾವೇ ರೂಂ ಬಿಟ್ಟು ಹೋಗಲು ನಿರ್ಬಂಧಿಸುತ್ತಿದ್ದೆವು.ಬೆಂಗಳೂರಿನ ಜೇನುಕಲ್ಲು ಸಿದ್ದೇಶ್ವರ ನಗರದ ನಮ್ಮ ರೂಂನ ಕಟ್ಟಡದ ಮಾಲಿಕರು ಒಬ್ಬರು ಟೀಚರ್ ಆಗಿದ್ದು, ಅವರು ನಮ್ಮ ಈ ಪದ್ದತಿಯನ್ನು ಸ್ವಾಗತಿಸಿದ್ದರು. ಜಾಸ್ತಿ ಜನ, ಜಾಸ್ತಿ ಬಾಡಿಗೆ ಬೇಕು ಎಂದು ನಮಗೆ ಕಿರುಕುಳ ಕೊಡದ ಆಗಾಧ ಮನಸ್ಸಿನವರಾಗಿದ್ದರು ಆ ಟೀಚರ್.

ಹಸಿವು ಒಂದು ಸರ್ವಶಕ್ತಿಗಳ ಕೂಡುರಸ್ತೆ(ಜಂಕ್ಷನ್)… ಬಡತನ ಅದರ ಶ್ರೀಮಂತ ರಥ. ಹಸಿವಿನ ಶಕ್ತಿಯನ್ನು ಒಳ್ಳೆಯದಕ್ಕೂ ಕೆಟ್ಟದಕ್ಕೂ ಉಪಯೋಗಿಸಬಹುದು. ಹಸಿವಿನಿಂದ ಒಬ್ಬ ರೊಟ್ಟಿ ಕದ್ದು ಓಡುವುದು. ಹಸಿವಿನಿಂದ ಇನ್ನೊಬ್ಬ ಕೆಲಸಮಾಡಿ ರೊಟ್ಟಿ ತಿನ್ನುವುದು ಎಂದಾದರೆ ಹಸಿವಿನಿಂದ ಹಿಡಿಯುವ ದಾರಿಗೆ ಜೀವನದ ಮೌಲ್ಯಕ್ಕೆ ಕೊಡುವ ಒಂದು ಮೆರುಗು ಇದೆ. ಆ ದಾರಿ ನಮ್ಮ ನಮ್ಮ ಆಯ್ಕೆಯ ಮೇಲೆ ಅವಲಂಬಿತವಾಗಿರುತ್ತದೆ. ಹಸಿವು ಒಳ್ಳೆಯ ಇಲ್ಲವೇ / ಅಥವಾ ಕೆಟ್ಟ ಶಿಕ್ಷಣದ ಅರಿವು ಮೂಡಿಸುತ್ತದೆ. ಹಸಿವಿನ ವೇದನೆ ಅರಿತವನಿಗೆ ಮಾತ್ರ ಅದರ ಬೆಲೆ ಗೊತ್ತಾಗುವುದು. ಅಂತಹವರು ಇನ್ನೊಬ್ಬರಿಗೆ ಆ ವೇದನೆ ಇರದಂತೆ ನೋಡಿಕೊಳ್ಳುತ್ತಾರೆ.

ಹಸಿವಿನ ಶಕ್ತಿಯನ್ನು ಕೆಟ್ಟದಾರಿಗೆ ಹೋಗದಂತೆ, ಬಡತನದ ರಥ ಸನ್ಮಾರ್ಗದಲ್ಲಿ ಚಲಿಸುವ ದೀರ್ಘದೃಷ್ಟಿಯಾಗಿ ಕಾಣಬೇಕು. ಅದನ್ನು ಯಾರೇ ಆರಂಭಿಸಲಿ ಜನಗಳಿಗಾಗಿ, ದೇಶದ ಸುಗದ ದಾರಿಗಾಗಿ ಮುಂದುವರಿಸಬೇಕು… ಮನುಷ್ಯ ಎಂಬುವುದೂ ಒಂದು ಮಣ್ಣಿನ ಸಂಪನ್ಮೂಲ, ಅದು ಸಮೃದ್ಧ ಸಮಾಜದ ದಾರಿ ಹಿಡಿಯುವಂತಿರಬೇಕು. ಅನ್ನದಾನವ ಮರೆಯದಿರು. ಧರ್ಮಸ್ಥಳವೂ ಇದೇ ಹೇಳುವುದು ಅಲ್ಲವೇ?
ಎಂಬ ಅಭಿಪ್ರಾಯದೊಂದಿಗೆ…

ನಿಮ್ಮವ ನಲ್ಲ

ರೂಪು


  • ಪ್ರೊ. ರೂಪೇಶ್  (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಬೆಂಗಳೂರು)

 

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW