‘ಹವೇಲಿ ದೊರೆಸಾನಿ’ ಕೃತಿ ಪರಿಚಯ

ಮಲ್ಲಿಕಾರ್ಜುನ ಶೆಲ್ಲಿಕೇರಿಯವರ ಎರಡನೇ ಕಥಾಸಂಕಲನ ‘ ಹವೇಲಿ ದೊರೆಸಾನಿ’ ಎಂಟು ಕತೆಗಳ ಗುಚ್ಛ. ಎಲ್ಲ ಕತೆಗಳು ವಿಭಿನ್ನವಾಗಿವೆ. ಸ್ಮಿತಾ ಅಮೃತರಾಜ್ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಪುಸ್ತಕ : ಹವೇಲಿ ದೊರೆಸಾನಿ
ಕತೆಗಾರರು : ಮಲ್ಲಿಕಾರ್ಜುನ ಶೆಲ್ಲಿಕೇರಿ
ಪ್ರಕಾಶನ : ಅಮೂಲ್ಯ ಪ್ರಕಾಶನ
ಬೆಲೆ : ೧೭೫.೦೦
ಖರೀದಿಗಾಗಿ : 9448676770

ಆ ಶೀರ್ಷಿಕೆಯೇ ತುಂಬಾ ವಿಶಿಷ್ಟ ಅನ್ನಿಸಿತ್ತು. ಮನೆತನದ ಪರಂಪರೆಯನ್ನು ಉಳಿಸುವ ವಾರಸುದಾರಣಿಯಂತೆ ಇಲ್ಲಿ ಸೊಸೆ ಜ್ಯೋತಿಯ ಪಾತ್ರವಿದೆ. ಒಂದು ಮನೆತನಕ್ಕೆ ಅದರದೇ ಆದ ಒಂದು ಗತ್ತು ಗೈರತ್ತು ಇರುತ್ತದೆ.

ಇಲ್ಲಿ ಹವೇಲಿಯ ಮಗನೊಬ್ಬ ಮನೆತನಕ್ಕೆ ಮಸಿ ಬಳಿಯುವ ಕೆಲಸ ಮಾಡಿದರೆ, ಸೊಸೆಯಾಗಿ ಬಂದವಳು ಹೆಸರನ್ನು ಉಳಿಸುವ ಹಂಬಲ ಹೊತ್ತು ಕೆಲಸ ಮಾಡುತ್ತಾಳೆ.ಈ ಎರಡು ವಿರುದ್ಧ ಪಾತ್ರಗಳು ಕತೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತವೆ. ಇನ್ನು’ ಕ್ಯಾ. ಪ್ರತಾಪಮೋಹನ್‌ ಸರ್ಕಲ್’ ರೂಪಕ ಶಕ್ತಿಯುಳ್ಳ ಕತೆ. ಕಂಡು ಕಾಣದಂತಿರಬೇಕಾದ ಈ ಜಡ್ಡುಗಟ್ಟಿದ ವ್ಯವಸ್ಥೆಯನ್ನು ಪ್ರತಿಮೆಯ ಮೂಲಕ ಹೇಳುವ ಪರಿ ವಿಶಿಷ್ಟವಾಗಿದೆ. ‘ಆ ೧೨ ಗಂಟೆಗಳು’ ಮನಸಿಗೆ ತಾಕುವ, ಹೃದಯಸ್ಪರ್ಶಿ ಕತೆ, ಇಣುಕಿನೋಡಿದರೆ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಅಸಹಾಯಕರೇ ಎನ್ನುವುದನ್ನು ತೋರಿಸಿಕೊಡುತ್ತದೆ. ಎದೆಯೊಳಗೊಂದು ನಿಟ್ಟುಸಿರನ್ನು ಉಳಿಸಿಹೋಗುವ ಕತೆಯಿದು. ‘ಅನ್ಪಡ್ ಕಂಟೆವ್ವ’ ಕತೆ ಬಹಳ ಧ್ವನಿಪೂರ್ಣವಾಗಿದೆ. ಶಾಲೆ ಕಲಿಯದ ಬಡ ಹೆಣ್ಣು ಮಗಳೊಬ್ಬಳು ವ್ಯವಸ್ಥೆಯ ಒತ್ತಡದ ನಡುವೆಯೂ ಶಾಲೆ ತೆರೆಯಲು ತನ್ನ ಬದುಕಿಗೆ ಆಧಾರವಾದ ಜಾಗೆಯನ್ನೇ ಕೊಟ್ಟು ಸಮಾಜದ ಆಸ್ತಿಯಾಗುವಂತಹ ನಡೆ ಹಲವು ಸ್ತರಗಳಲ್ಲಿ ನಮ್ಮನ್ನು ಕಣ್ತೆರೆಸುತ್ತದೆ. ನಮ್ಮ ಸುತ್ತಲಿನ ಸಮಾಜದಲ್ಲಿ ಸಮಯ ಸಂದರ್ಭಗಳು ಬಂದಾಗ ಹೆಚ್ಚಿನವರು ‘ತಂತು’ ಕತೆಯಲ್ಲಿನ ಪಾತ್ರಧಾರಿಗಳೇ. ಸಂಬಂಧಗಳ ಸೂತ್ರಗಳು ಹೇಗೆ ಮತ್ತು ಯಾವುದರ ಮೂಲಕ ನಿಂತಿದೆಯೆಂಬುದನ್ನ ಇಲ್ಲಿ ಲೇಖಕರು ಮನ ಮಿಡಿಯುವಂತೆ ಕಟ್ಟಿಕೊಡುತ್ತಾರೆ.

ಹಾಗೇ ಇಲ್ಲಿರುವ ಒಟ್ಟು ಎಂಟು ಕತೆಗಳು ವಿಭಿನ್ನವಾಗಿವೆ. ಹೆಚ್ಚಿನ ಕತೆಗಳಿಗೂ ಇಲ್ಲಿ ಕಾದಂಬರಿಯ ಹರವಿದೆ. ನಮ್ಮೆಲ್ಲರ ಪ್ರಾದೇಶಿಕ ಭಿನ್ನತೆಗಳ ನಡುವೆಯೂ ಅಲ್ಲಿ ನಡೆಯುವ ಈರ್ಷೆ, ದ್ವೇಷ, ಗಲಭೆ, ಅಸೂಯೆ, ಜೊತೆಜೊತೆಗೆ ಅಂತಃಕರಣದ ಸೆಲೆ, ಮಾನವೀಯ ಸ್ಪಂದನೆ, ಕಾಳಜಿಗಳು ಎಲ್ಲಾ ಕಡೆಗೂ ಒಂದೇ ಆಗಿರುತ್ತದೆ. ಎಲ್ಲಾ ಕಡೆ ಹುಟ್ಟಿಕೊಳ್ಳುವುದು ಮನುಷ್ಯ ಸಂಬಂಧದ ಕತೆಗಳೇ . ಸೂಕ್ಷ್ಮವಾಗಿ ನೋಡಿದಾಗಲಷ್ಟೇ ಇಂತಹ ಕತೆಗಳು ಕಾಣಿಸಿಕೊಳ್ಳುವುದು. ಇಲ್ಲಿ ಮಲ್ಲಿಕಾರ್ಜುನ ಶೆಲ್ಲಿಕೇರಿಯವರ ಕತೆಗಳೂ ಕೂಡ ಅಂತಹ ಸೂಕ್ಷ್ಮ ಸಂವೇದನೆಯ, ಮಾನವೀಯ ಅಂತಃಕರಣದ ಸಂಗತಿಗಳನ್ನೇ ಹೇಳುವಂತದ್ದು. ಇಲ್ಲಿಯ ಪ್ರತಿ ಕತೆಯನ್ನು ಓದುವಾಗಲೂ ನನ್ನೂರಿನ ಅನೇಕ ಸಂಗತಿಗಳು ಇದಕ್ಕೆ ತಾಕಿಕೊಂಡು ಹೊಸ ಒಳನೋಟವನ್ನು ದಕ್ಕಿಸಿಕೊಡುತ್ತಿವೆ. ಇದು ಕತೆಯ ಸಾಧ್ಯತೆ. ಕಥೆಯಲ್ಲಿ ಬಳಸಿರುವ ಉತ್ತರ ಕರ್ನಾಟಕದ ಭಾಷೆ ಕತೆಗೆ ಮತ್ತಷ್ಟು ಮಹತ್ತನ್ನು ದಕ್ಕಿಸಿ ಕೊಟ್ಟಿದೆ.

ಗ್ರಾಮ್ಯ ಬದುಕಿನ ಚಿತ್ರಣ, ಅಲ್ಲಿಯ ಮನುಷ್ಯರ ದೊಡ್ಡತನ, ಸಣ್ಣತನ, ಉದಾರತನ ಎಲ್ಲವನ್ನೂ ಕತೆಯಾಗಿಸುವ ಕಲೆಗಾರಿಕೆ ಲೇಖಕರಿಗಿದೆ. ಗ್ರಾಮ್ಯ ಬದುಕಿನ ಹಲವು ಮಜಲುಗಳನ್ನ, ಭಿನ್ನ ನೋಟಗಳನ್ನ,ಕಟ್ಟಿಕೊಡುವ ಉತ್ತಮ ಕಥಾಸಂಕಲನ ‘ ಹವೇಲಿ ದೊರೆಸಾನಿ’.

“ಹವೇಲಿ ದೊರೆಸಾನಿ” ಕಥಾಸಂಕಲನ ಕುರಿತು ಇನ್ನಷ್ಟು ವಿಮರ್ಶೆಗಳು :


  • ಸ್ಮಿತಾ ಅಮೃತರಾಜ್ – ಸಂಪಾಜೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading