ಬಯಲಿಗೆ ಬಂದ ಗಣಪತಿ. ಅಂದು ಸುಮ್ಮನೆ ಮನೆಯ ಮಾಡಿನಲ್ಲಿದ್ದ ನಾನು, ಯಾಕಾದ್ರೂ ಬಯಲಿಗೆ ಬಂದೆ ಅಂತ ಮರಗುತ್ತಿದ್ದಾನೆ. ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಈ ಭಾದ್ರಪದ ಮಾಸವಾದ್ರೂ ಯಾಕೆ ಬರುತ್ತೆ ಚಿಂತಿಸುತ್ತಿದ್ದಾನೆ. ಕಾರಣ ಗಣಪತಿ ಹೆಸರಿಂದ ಮಾನವರು ಮಾಡುತ್ತಿರುವ ನಾನಾ ಅವಾಂತರಗಳು, ಹರಿಹರ ಬ್ರಹ್ಮಾದಿಗಳಿಂದ ಹಿಡಿದು ಸುರಾಸುರರು, ಯಕ್ಷಗಂಧರ್ವ, ಕಿಂಪುರುಷರು, ಆದಿಯಾಗಿ ಇಡಿ ಬ್ರಹ್ಮಾಂಡದ ಸಕಲ ಜೀವರಾಶಿಗಳು ಪೂಜಿಸುವ ದಿವ್ಯಶಕ್ತಿ ಶ್ರೀ ಗಣಪತಿ ಸನ್ನಿದಿಯಲ್ಲಿ ( ಮಂಟಪದಿ ) ವೇದ, ಶಾಸ್ತ್ರ, ಮಂತ್ರ ಘೋಷ, ಮೊಳಗಬೇಕು. ಪುರಾಣ ಪ್ರವಚನ ಸಂಕೀರ್ತನ ನುಡಿಯಬೇಕು, ಆದ್ರಲ್ಲಿ ಅವಾಚ್ಯಾ ಪದ ಪುಂಜಗಳ ಗೀತೆಯೊಂದಿಗೆ ನಂಗಾನಾಚ್ ನಡೆದು, ಕಾಮದ ಕಿಚ್ಚು ಹೊತ್ತಿಸುತ್ತಿದೆ. ಧೂಪದ ಪರಿಮಳ ಪಸರಿಸಬೇಕಾದ ಸ್ಥಳದಿ, ಮದ್ಯಪಾನ, ಬೀಡಿ, ಸಿಗರೇಟ್ ಘಾಟು ದುರ್ಗಂಧ ಬೀರುತ್ತಿದೆ.
ರಂಗು ರಂಗಿನ ರಂಗೋಲಿಯ ಬದಲು, ಗುಟುಕಾ, ತಂಬಾಕು, ಯಾರು ಬಿಡಿಸಲಾಗದ, ವಿಧ ವಿಧವಾದ ಚಿತ್ತಾರವ ಬಿಡಿಸಿದೆ. ಘಂಟೆಯ ಸುನಾದಕ್ಕಿಂತ ಅತಿಯಾಗಿ ಇಸ್ಪೇಟ್ ಚಪಾಯಿಸುವ ಶಬ್ದ ಕೇಳಿಬರುತ್ತಿದೆ. ಅಂದ್ರೆ, ಎಲ್ಲಿಗೆ ಬಂತು ನಮ್ಮ ಸಂಸ್ಕೃತಿ ? ಇದೇನಾ ನಮ್ಮಯ ಭವ್ಯ ಸಂಸ್ಕೃತಿ. ಹಾಗಂತ ಎಲ್ಲರು ಹೀಗೆ ಮಾಡುತ್ತಾರೆ ಅಂತ ನಾನು ಹೇಳುತ್ತಿಲ್ಲ. ಹೀಗೆಲ್ಲ ಮಾಡುವವರು, ಮಾಡುತ್ತಿರುವವರು ಮಾಡಬೇಡಿರೆಂದು ವಿನಂತಿಸುತ್ತಿದ್ದೇನೆ. ಏಕೆಂದ್ರೆ ನಮ್ಮ ಭಾರತೀಯ ಸಂಸ್ಕೃತಿಗೆ ಜಗತ್ತಿನಲ್ಲಿ, ಒಂದು ಉನ್ನತವಾದ ಶ್ರೇಷ್ಠ ಗೌರವ, ಸ್ಥಾನಮಾನವಿದೆ ದಯವಿಟ್ಟು ಹಾಳು ಮಾಡದೆ, ಉಳಿಸಿರಿ, ಬೆಳಸಿರಿ.
ಕೊನೆಯ ಮಾತು.
ಗಣೇಶನ ಹೆಸರನಲ್ಲಿ ಹಾದಿ ಬೀದಿಯಲ್ಲಿ ಹೋಗುವವರಿಗೆ ಅಡ್ಡಗಟ್ಟಿ,ಮತ್ತು ವ್ಯಾಪರಸ್ತರಿಗೆ ದೇಣಿಗೆ, ಕಾಣಿಕೆ ಅಂತ ತೊಂದರೆ ಕೊಡಬೇಡಿ, ಕೇಳಿ ಅವರು ಸಂತೋಷದಿ ಕೊಟ್ಟರೆ ತಗೊಳ್ಳಿ ಅದು ತಪ್ಪಲ್ಲ, ಆದ್ರೆ ಇಷ್ಟು ಕೊಡಲೆಬೇಕೆಂದು ಅವಾಜ್, ಬೆದರಿಕೆ ಹಾಕಬೇಡಿ ಇದು ಗಣೇಶನ ಪೂಜೆಗೆ ಯೋಗ್ಯವು ಅಲ್ಲ,ಗಣೇಶ ಯಾರಿಂದಲೋ ಕಿತ್ತುಕೊಂಡು ಬಂದು ಆಡಂಬರದ ಪೂಜೆ ಮಾಡಿರೆಂದು ಎಲ್ಲೂ ಹೇಳಿಲ್ಲ, ತಾವು ಹೀಗೆ ಮಾಡಿದರೆ ಗಣಪತಿಗೆ ಅಪಮಾನ ಮಾಡಿದಂತೆಯೇ ಸರಿ, ನಿರ್ಮಲ, ಪರಿಶುದ್ಧವಾದ ಭಕ್ತಿಯಿಂದ ಗರಿಕೆ ( ಹುಲ್ಲು )ಸಮರ್ಪಿಸಿದರೆ ಸಾಕು ಸಂತೃಪ್ತನಾಗಿ ಪ್ರಸನ್ನನಾಗುವ ಕರುಣಾಮಯಿ ನಮ್ಮ ಗಣೇಶ ಅಲ್ಲವೇ,?ಜೈ ಗಣೇಶ್…
- ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ – ಯಡ್ರಾಮಿ. ಕಲಬುರ್ಗಿ ಜಿಲ್ಲೆ.
