ಜೀವನವೆಂಬುದು ಏನು ಅಂತ ಅರಿಯುವ ವಯಸ್ಸಲ್ಲಿ ಹೆಣ್ಣಿಗೆ ಮದುವೆ ಮಾಡಿ ಸಂಸಾರದ ಬಂಧನದಲ್ಲಿ ಅವಳನ್ನು ನೂಕುವುದು ಯಾವ ನ್ಯಾಯ? ಹೆಣ್ಣಿನ ನೋವಿನ ಬಗ್ಗೆ ವಿಕಾಸ್. ಫ್. ಮಡಿವಾಳರ ಅವರು ಬರೆದಿರುವ ಚಿಂತನಾತ್ಮಕ ಲೇಖನ ತಪ್ಪದೆ ಓದಿ…
(ಸಮಾಜದಲ್ಲಿ ನೊಂದು ಬೆಂದ ಅಬಲೆಯ ಕೂಗು )
ಮಿತ್ರರೆ ನಿಮಗೆಲ್ಲ ಒಂದು ಕತೆಯನ್ನು ಹೇಳ ಬಯಸುತ್ತೇನೆ. ಒಂದು ಊರಲ್ಲಿ ಒಬ್ಬ ಜಾದೂಗಾರನಿದ್ದ. ದಾರಿಯಲ್ಲಿ ಹೋಗುವಾಗ ಅವನಿಗೆ ಒಂದು ಗೊಂಬೆ ಕಂಡಿತು. ಅದೇಕೊ ಏನೊ ಆ ಗೊಂಬೆಯ ರೂಪಕ್ಕೆ ಮಾರುಹೋದ ಆತನಿಗೆ ಅದಕ್ಕೆ ಜೀವವನ್ನು ಕರುಣಿಸಬೇಕೆಂದೆನಿಸಿತು. ಹಲವಾರು ತಿಂಗಳುಗಳು ಕಠಿಣ ತಪಸ್ಸನ್ನು ಮತ್ತು ಮಾಯೆಯನ್ನು ಮಾಡಿ ಆ ಗೊಂಬೆಗೆ ಜೀವ ತರಿಸಿದ. ಆತನಿಗೂ ಆ ಗೊಂಬೆಗೆ ಜೀವ ಬಂದಿರುವುದು ನೋಡಿ ತುಂಬಾ ಖುಷಿಯಾಯಿತು.
ಮೊದಮೊದಲು ತುಂಬಾ ಅಳುತ್ತಿದ್ದ ಆ ಗೊಂಬೆಯನ್ನು ಜಾದೂಗಾರನೆ ಜೋಪಾನ ಮಾಡಿದ. ಗೊಂಬೆಗೂ ಕೂಡ ಜಾದೂಗಾರನೆಂದರೆ ಅತಿಯಾದ ಪ್ರೀತಿ ಇತ್ತು. ತನ್ನ ನಗುವಿಗೆ ಕಾರಣ ಜಾದೂಗಾರನೆಂದು ತಿಳಿದಿದ್ದ ಅದಕ್ಕೆ, ಜಾದೂಗಾರನೆ ಸರ್ವಸ್ವನಾದ. ದಿನಕಳೆದಂತೆ ಗೊಂಬೆ ದೊಡ್ಡದಾಯಿತು. ಪ್ರಪಂಚವನ್ನು ಸುತ್ತಲು ಶುರು ಮಾಡಿತು. ಉಲ್ಲಾಸ ಉತ್ಸಾಹಗಳ ಬದುಕನ್ನ ಜೀವಿಸಿತು. ಇನ್ನೂ ಸ್ವವಲಂಬತನವೆಂದರೆ ಏನು ಎಂಬುದು ಗೊತ್ತಿರದ ಅದು ಸದಾ ಜಾದೂಗಾರನ ಎದೆಯ ಮೇಲೆ ಮಲಗುತ್ತಿತ್ತು. ಅದಕ್ಕೆ ಕಷ್ಟ ಸುಖಗಳೇನು, ಪ್ರೀತಿ ಪ್ರೇಮವೇನು, ಸತ್ಯ ಸುಳ್ಳುಗಳೆನು ಅಂತ ಗೊತ್ತೆ ಇರಲಿಲ್ಲ.

ಫೋಟೋ ಕೃಪೆ : bhaskar
ಜಾದೂಗಾರನಿಗೆ ವಯಸ್ಸಾಯಿತು. ಕಣ್ಣುಗಳು ನೋಡುವ ಶಕ್ತಿಯನ್ನು ಕಳೆದುಕೊಂಡವು, ಕಿವಿಗಳು ಮಂದವಾದವು. ಅಂಗಾಂಗಗಳು ಕೈ ಕೊಟ್ಟು ತುಂಬಾ ದಿನಗಳೇ ಆಯಿತು. ತನ್ನನ್ನೇ ತಾನು ಸಾಕಲಾಗದ ಆತನಿಗೆ ಗೊಂಬೆಯನ್ನು ಸಾಕುವುದು ಕಷ್ಟವೆನಿಸಿತು. ಮೊದಲು ಗೊಂಬೆಯನ್ನು ಕಂಡು ಖುಷಿ ಪಡುತ್ತಿದ್ದ ಅವನಿಗೆ ಈಗ ಗೊಂಬೆಯೂ ವೈರಿಯಂತೆ ಕಂಡಿತೊ ಅಥವಾ ಅವನ ಪರಿಸ್ಥಿತಿ ಹಾಗಿತ್ತೊ ಏನೊ ಗೊತ್ತಿಲ್ಲ. ಕೆಲದಿನಗಳಾದ ಮೇಲೆ ಆತ ಆ ಗೊಂಬೆಯನ್ನು ಒಬ್ಬ ದಾರಿಹೋಕನಿಗೆ ಮಾರಿದ ಜಾದೂಗಾರನ ಕಷ್ಟವನ್ನು ನೋಡಿದ ಗೊಂಬೆ ದಾರಿಹೋಕನ ಜೊತೆ ಹೋಗಲು ನಿರ್ಧರಿಸಿತು. ತನ್ನಿಂದ ಬೇರೆಯವರಿಗೆ ಕಷ್ಟವಾಗಬಾರದೆಂಬ ಆ ಮಾನವೀಯತೆ ಯಾರು ತಾನೆ ಬಲ್ಲರು. ಮೊದಮೊದಲು ಎಲ್ಲ ಸರಿ ಎನಿಸಿದರು ಆಮೇಲೆ ಆ ಗೊಂಬೆಗೆ ನಿಜವಾದ ಕಷ್ಟ ಶುರುವಾಯಿತು. ಎಂದೆಂದೂ ಜಾದೂಗಾರನ ಕೈಯ್ಯ ಹಿಡಿದು ಆಟವಾಡುತಿದ್ದ ಗೊಂಬೆಗೆ ಕೆಲಸ ಕಾರ್ಯಗಳೆಂಬ ಜವಾಬ್ದಾರಿಗಳು ಕಿತ್ತು ತಿಂದವು. ಒಂದು ದಿನ ಕೂಡ ಜಾದೂಗಾರನಿಲ್ಲದೆ ಮಲಗದ ಆ ಗೊಂಬೆಗೆ ಈಗ ಒಬ್ಬಂಟಿಯಾಗಿ ಮಲಗುವ ಪರಿಸ್ಥಿತಿ ಬಂದಾಗ ಕಣ್ಣಲ್ಲಿ ನೀರು ನಿಲ್ಲಲೆ ಇಲ್ಲ. ಈಗ ಬರುತ್ತಾನೆ ಆಗ ಬರುತ್ತಾನೆ ಎಂದು ಕಾತುರದಲ್ಲಿ ಕಾಯುತ್ತಿದ್ದ ಅದರ ಮನಸ್ಸಿಗೆ ಅವನು ಮುಂದೆಂದೂ ಬರಲಾರ ಎಂದು ತಿಳಿದಾಗ ಹೇಗೆ ತಡೆದುಕೊಳ್ಳುತ್ತದೆ. ದಿನವಿಡಿ ಹಕ್ಕಿಯಂತೆ ಹಾರಾಡಿ ಸುತ್ತಾಡಿ ಖುಷಿಯಿಂದ ಇದ್ದ ಅದನ್ನು, ನಾಲ್ಕು ಗೋಡೆಯ ಒಳಗೆ ಬಿಟ್ಟರೆ ಬದಕುತ್ತದೆಯೆ..? ಅದಕ್ಕೂ ತಡೆಯಲಾಗಲಿಲ್ಲ ಕೊನೆಗೆ ಈ ಜೀವವೆ ಬೇಡ ಎಂದು ಸತ್ತೆ ಹೋಯಿತು.
ಇದು ಬರಿ ಕತೆಯಲ್ಲ ನಮ್ಮ ಸಮಾಜದಲ್ಲಿ ಒಂದು ಹೆಣ್ಣು ಅನುಭವಿಸುವ ವ್ಯಥೆ. ಆ ಗೊಂಬೆಯೆ ಆ ಹೆಣ್ಣು. ಆ ಜಾದೂಗಾರನೆ ಪಾಲಕರು. ಆ ದಾರಿಹೋಕನೆ ಮದುವೆ. ಎಲ್ಲರ ಜೀವನ ಹೀಗೆ ಇರುವುದಿಲ್ಲವಾದರು ನಾ ಕಂಡ ಪ್ರತಿಯೊಬ್ಬರ ಜೀವನ ಹೀಗೆ ಇದ್ದ ಕಾರಣ ಈ ಕತೆಯನ್ನು ಬರೆಯಲು ಇಚ್ಚಿಸಿದೆ.

ಫೋಟೋ ಕೃಪೆ : punjabkesari
ಒಂದು ಹುಡುಗಿ 18ರ ವಯಸ್ಸಿಗೆ ಬಂದರೆ ಸಾಕು ಆಕೆಯನ್ನು ಮದುವೆ ಮಾಡಿಸಿ ಗಂಡನ ಮನೆಗೆ ಕಳಿಸಿಕೊಡಬೇಕೆಂದು ನಿರ್ಧರಿಸಿದ ತಂದೆ ತಾಯಿಗಳಿಗೆ ಈ ಮಾತು. ಈಗ ನಿಮ್ಮ ಮಗಳು ಸ್ವಾವಲಂಬನೆಯೆಂದರೇನು ಎಂದು ತಿಳಿಯುವ ವಯಸಿನಲ್ಲಿದ್ದಾಳೆಯೆ ಹೊರತು ಪೂರ್ತಿ ಸ್ವಾವಲಂಬಿಯಾಗಿಲ್ಲ. ತಂದೆ ತಾಯಿಯೆ ದೇವರು, ಅವರ ಸಂತೋಷವೆ ನನ್ನ ಸಂತೋಷ ಎಂದು ತಿಳಿದ ಆಕೆಯ ಬಯಕೆಯನ್ನು ಎಂದಾದರೂ ನೀವು ಕೇಳಿದ್ದೀರಾ.? ಅವಳು ಮುಂದೆ ಏನಾಗಬೇಕೆಂದಿದ್ದಾಳೆ ಅನ್ನುವುದಾದರು ಕೇಳಿದ್ದೀರಾ??
ಜೀವನವೆಂಬುದು ಏನು ಅಂತ ಅರಿಯುವ ವಯಸ್ಸಲ್ಲಿ ಮದುವೆ ಮಾಡಿ ಸಂಸಾರದ ಬಂಧನದಲ್ಲಿ ಅವಳನ್ನು ನೂಕುವುದು ಯಾವ ನ್ಯಾಯ. ಈಗ ತಾನೆ ಸಣ್ಣ ಸಣ್ಣ ಕನಸನ್ನು ಕಾಣುತ್ತ, ಪುಟ್ಟ ಪುಟ್ಟ ಹೆಜ್ಜೆಯನ್ನು ಪ್ರಪಂಚದಲ್ಲಿ ಇಡುವಾಗ, ತಾಳಿ ಹಾಕಿಸಿ ಗಂಡನ ಮನೆಗೆ ಕಳಿಸುವುದು, ಆಕೆಗೆ ನೇಣುಗಂಬವನ್ನು ಹಾಕಿಸುವುದು ಒಂದೇ. ಆಕೆಗೂ ಸ್ವಾತಂತ್ರವಿದೆ, ಆಕೆಗೂ ಕನಸುಗಳಿವೆ, ಒಂದು ಸಾರಿ ಆಕೆಯ ಕನಸನ್ನು ನನಸು ಮಾಡಲು ಪ್ರಯತ್ನಿಸಿ. ಜಾನ್ಸಿರಾಣಿ ಲಷ್ಮಿಬಾಯಿ, ಕಿತ್ತೂರ ರಾಣಿ ಚೆನ್ನಮ್ಮ, ಒನಕೆ ಒಬ್ಬವರ ಕತೆಗಳನ್ನಷ್ಟೇ ಹೇಳುವ ನಾವುಗಳು, ನಮ್ಮ ಮಕ್ಕಳು ಅವರ ಹಾಗೆ ಆಗಬೇಕು, ಜಗತ್ವಿಖ್ಯಾತಿ ಆಗಬೇಕೆಂಬ ಕನಸು ಕಾಣದಿದ್ದರೆ ಆ ಕಣ್ಮಣಿಗಳು ಹುಟ್ಟಿದ್ದಕ್ಕೆ ಯಾವ ಅರ್ಥವು ಇರುವುದಿಲ್ಲ. ನಿಮ್ಮಲ್ಲಿ ಬೇಡಿಕೊಳ್ಳುವುದಿಷ್ಟೆ ನಿಮ್ಮ ಮಗಳಿಗೂ ಸ್ವಾತಂತ್ರ ಕೊಟ್ಟು ನೋಡಿ, ಆಗ ಅವಳು ಮಾಡುವ ಸಾಧನೆಯನ್ನು ನೋಡಿ ನೀವೆ ಬೆಚ್ಚಬೀಳುತ್ತೀರಿ….
ಇಂತಿ ನಿಮ್ಮ ಪ್ರೀತಿಯ
- ವಿಕಾಸ್. ಫ್. ಮಡಿವಾಳರ – ಯುವ ಲೇಖಕ
