ಮೊದಲ ಸೈಕಲ್… – ಮಂಜಯ್ಯ ದೇವರಮನಿ

ಈಗ ಮನೆ ಮನೆಯಲ್ಲೂ ಸೈಕಲ್ ಮತ್ತು ಕಾರುಗಳದ್ದೆ ಕಾರುಬಾರು. ಈಗ ಮನೆಯಲ್ಲಿ ಸೈಕಲ್ ಗಳು ಒಂದಲ್ಲ ಎರಡು ಮೂರು ಇವೆ, ಹಿಂದೆ ಸೈಕಲ್ ಓಡಿಸಲು ಪಡುತ್ತಿದ್ದ ಹರಸಾಹಸದ ಬಗ್ಗೆ ಲೇಖಕ  ಮಂಜಯ್ಯ ದೇವರಮನಿ ಅವರು ಬರೆದಿರುವ ಪ್ರಬಂಧ ಲೇಖನ ಹಳೆಯ ನೆನಪಿನ ಬುತ್ತಿಯನ್ನು ಬಿಚ್ಚಿಡುತ್ತದೆ. ತಪ್ಪದೆ ಓದಿ…

ಅಪ್ಪನನ್ನು ಎಷ್ಟೇ ಕಾಡಿಸಿದರು ಸೈಕಲ್ ಕೊಡಿಸಿರಲಿಲ್ಲ. ಈ ಪೀಕು ಹತ್ತಿ ಬರಲಿ, ಜೋಳ ಬರಲಿ ಎಂದು ಸಾಗು ಹಾಕುತ್ತಿದ್ದ. ಹತ್ತಿ ಜೋಳ ಮನೆಗೆ ಬಂದು ಮಾರುಕಟ್ಟೆಗೆ ಹೋದರೂ ಮನೆಗೆ ಸೈಕಲ್ ಮಾತ್ರ ಬರುತ್ತಿರಲಿಲ್ಲ.

ಪ್ರತಿವರ್ಷದ ಮಳೆಗಾಲದಂತೆ ನನ್ನಾಸೆಯ ಸೈಕಲ್ ಹಾಗೆ ಬಂದು ಈಗೇ ಹೋಗುತ್ತಿತ್ತು. ಆದರೂ ನನಗೆ ಸೈಕಲ್ ಮೇಲಿನ ಮೋಹ ತಪ್ಪಿರಲಿಲ್ಲ. ರಸ್ತೆಯಲ್ಲಿ ಹೋಗುವಾಗ ಯಾರಾದರೂ ಸೈಕಲ್ ತುಳಿಯುವವರನ್ನು ನೋಡಿದಾಕ್ಷಣ ನನ್ನ ಕಾಲುಗಳು ಗುರು ಗುರು ಅನ್ನುತ್ತಿದ್ದವು. ನಮ್ಮ ಬಾಲ್ಯದಲ್ಲಿ ಸೈಕಲ್ ಒಂದು ಪ್ರಮುಖ ಆಟಿಕೆ ಸಾಮಾನಾಗಿತ್ತು. ಕ್ಯಾಂಡಿ ಮಾರೋ ಕರೀಮನ ಮಗ, ಗಾದಿ ರಿಪೇರಿ ಮಾಡೋ ಹುಚ್ಚುಸಾನ ಮಗ, ಬೋಟಿ ಪಪ್ಪಾಡ ಮಾರೋ ಶೀನಣ್ಣನ ಮಗ ಇವರೆಲ್ಲಾ ಶಾಲೆ ಬಿಡುತ್ತಲೇ ಸೈಕಲ್ ತೆಗೆದುಕೊಂಡು ಮಣ್ಣಿನ ರಸ್ತೆಗಿಳಿಯುತ್ತಿದ್ದರು. ಟಾರು ಇನ್ನೂ ಊರಿಗಳಿಗೆ ಬಂದಿರದ ಕಾಲವದು. ಇವರೇನು ಶ್ರೀಮಂತರಲ್ಲ ತಮ್ಮ ವ್ಯಾಪಾರನುಕೂಲಕ್ಕಾಗಿ ತೆಗೆದುಕೊಂಡಿದ್ದ ಸೈಕಲ್ಲಗಳನ್ನು ಅವರ ಮಕ್ಕಳು ಬಹುಬೇಗ ಕಲಿತು ನಮ್ಮ ಹೊಟ್ಟೆ ಉರಿಸುತ್ತಿದ್ದರು. ಅವರು ಜೋರಾಗಿ ಸೈಕಲ್ ಓಡಿಸುತ್ತಿದ್ದರೆ ನಾವು ಹಿಂದೆ ಒಂದು ಕೈಲಿ ಚೆಡ್ಡಿ ಇನ್ನೊಂದು ಕೈಯಲ್ಲಿ ಸೈಕಲ್ ಕ್ಯಾರಿಯಾರ್ ಹಿಡಿದುಕೊಂಡು ಓಡುತ್ತಿದ್ದೆವು. ಎಲ್ಲಾ ಹುಡುಗರು ಇವರು ಸೈಕಲ್ ಹೊಡೆಯುವದನ್ನು ಬಿಟ್ಟುಗಣ್ಣಾಗಿ ನೋಡುತ್ತಿದ್ದರು. “ನಮ್ಮನ್ನೂ ಹತ್ತಿಸಿಕೊಳ್ರೋ” ಎಂದು ದುಂಬಾಲು ಬಿದ್ದರು ಹತ್ತಿಸಿಕೊಳ್ಳುತ್ತಿರಲಿಲ್ಲ.

ಫೋಟೋ ಕೃಪೆ: storyblocks

ನನಗೆ ಹೈಸ್ಕೂಲ್ ಮೆಟ್ಟಿಲು ತುಳಿಯುವ ಭಾಗ್ಯ ಬಂದರು ಪೇಡೆಲ್ ತುಳಿಯುವ ಯೋಗ ಕೂಡಿರಲಿಲ್ಲ. ಬೇಸಿಗೆ ರಜೆಯಲ್ಲಿ ಚಿಕ್ಕಪ್ಪನ ಮನೆಗೆ ಹೋದಾಗ ಕಟಾಂಜನದಲ್ಲಿ ನಿಲ್ಲಿಸಿದ್ದ ಸೈಕಲ್ ಕಣ್ಣಿಗೆ ಬಿತ್ತು. ಚಿಕ್ಕಪ್ಪ ಹೊತ್ತಲ್ಲದ ಹೊತ್ತಿನಲ್ಲಿ ತೋಟಕ್ಕೂ ಮನೆಗೂ ಓಡಾಡಲು ಬೇಕಾಗುತ್ತೆ ಅಂತ ಹೊಚ್ಚ ಹೊಸ ಹೀರೋ ಸೈಕಲ್ ತಂದಿದ್ದ. ಅದ ನೋಡುತ್ತಲೇ ಯಾವ ಮಾಯಕರದಲ್ಲಿಯಾದರೂ ಒಮ್ಮೆ ಹತ್ತಬೇಕೆಂಬ ಆಸೆ ಪುತು ಪುತು ಹುಟ್ಟಿತು. ಆದರೆ ಬೀಗ ಕೇಳಿದರೆ ಕೊಡುತ್ತಾರೆಯೇ..? ಸುತರಾಂ ಕೊಡುತ್ತಿರಲಿಲ್ಲ. “ಪಂಚರ್ ಮಾಡ್ಕೊಂಡು ತಂದು ನಿಲ್ಸೋಕೇ ಕೊಟ್ರಾಯ್ತು ನಿಮ್ಗೆ ಹೊಕ್ಕಿರಿಲ್ಲ” ಅಂತ ಜಬರಿಸಿಬಿಟ್ಟಿದ್ದ. ಇದು ಗಿಟ್ಟಲ್ಲ ತ್ಯಗಿ ಎಂದು ಸುಮ್ಮನಾಗಿದ್ದೆ.

ಆದರೆ ಚಿಕ್ಕಪ್ಪನ ಮಗ ಪುಟ್ಟು “ಬೀಗ ಲಪಟಾಯಿಸಿದ್ರೆ ಹೆಂಗೆ” ಎಂದು ಒಂದು ಉಪಾಯ ಕೊಟ್ಟ. ಅದು ಸರಿಯನಿಸಿತು. ಚಿಕ್ಕಪ್ಪ ಬೀಗ ಹಿಡುವ ಗುಣ್ಣಿಯನ್ನು ನೋಡಿಕೊಂಡು ಒಂದು ಮದ್ಯಾಹ್ನ ನಾನು ಚಿಕ್ಕಪ್ಪನ ಮಗ ಪುಟ್ಟು ರಂಗಕ್ಕಿಳಿದೇವು;ಇಲ್ಲ ಇಲ್ಲ ರಸ್ತೆಗಿಳಿದೆವು. ರಂಗಸ್ಥಳದಲ್ಲಿ ಸಾಕಷ್ಟು ಪ್ರೇಕ್ಷಕರಿರುತ್ತಾರೆ ಆದರೆ ನಾವು ನಿರ್ಜನವಾದ ರಸ್ತೆಗಿಳಿದಿದ್ದೆವು.

ನನಗೋ ಸೈಕಲ್ ತಳ್ಳುವುದನ್ನು ಬಿಟ್ಟರೆ ಏನು ಗೊತ್ತಿಲ್ಲ. ರುಜು ಮಾಡಲು ಮಾತ್ರ ಬರುವ ಅಕ್ಷರಸ್ಥನಂತೆ ಸೈಕಲಾಜಿಯಲ್ಲಿ ನೀರಕ್ಷರ ಕುಕ್ಷಿ. ಪುಟ್ಟು ಅವನೋ ನನ್ನ ತಮ್ಮ ಗೊತ್ತಲ್ಲ ಹೇಳಬೇಕಿಲ್ಲ ಹೆಬ್ಬೆಟ್ಟು. ಇಬ್ಬರು ಸೇರಿ ಸೈಕಲ್ಲಿನ ಸಂವಿದಾನ ಓದಲು ಸುರು ಮಾಡಿದೆವು. ನಾನು ಮೊರೆಕಟ್ಟೆಯನ್ನು ಹುಡುಕಿ ಸೈಕಲ್ ಏರಿ ಕುಳಿತೆ. ಮೊರೆಕಟ್ಟೆ ಅನಕ್ಷರಸ್ತ ಸೈಕಲ್ ಸವಾರರ ಮೊದಲ ಪಾಠಶಾಲೆ ಎಂದರೆ ತಪ್ಪಿಲ್ಲ. ಇಳುಗಡೆಯಿದ್ದರಿಂದ ತುಳಿಯುವ ಅಗತ್ಯವಿರಲಿಲ್ಲ. ಅದಾಗೇ ಅದು ಹೋಗುವ ಇಳಿಜಾರು. ಹ್ಯಾಂಡಲ್ ಮಾಡಿದರೆ ಸಾಕು ಎಂದು ಖುಷಿಯಾದೆ.

ಹಿಂದುಗಡೆಯಿಂದ ಪುಟ್ಟು ನಿಧಾನವಾಗಿ ತಳ್ಳಿದ. ಸೈಕಲ್ ಹೊರಟಿತು… ಹೋಯಿತು ಹೋಯಿತು ಸೀದಾ ಮಾರಿಹಳ್ಳದ ಪೆರಿಗೆ ಪೇಳಿಗಿಗೆ ಹೋಗಿ ಬಿತ್ತು.

ಫೋಟೋ ಕೃಪೆ: storyblocks

ಪೇರಿಗೆ ಪೆಳಿಯಲ್ಲಿನ ಮುಳ್ಳುಗಳು ಹುಲಿಮಟ್ಟಿಯ ವ್ಯಾಘ್ರನಂತೆ ಘರ್ಜಿಸಿ ಪಂಜರ ಬೀಸಿ ಮೈ ತುಂಬಾ ತರಚಿಬಿಟ್ಟವು. ತರಚಿದ ಗಾಯಗಳಿಂದ ರಕ್ತ ಸುರಿಯ ತೊಡಗಿತು. ಪುಟ್ಟು ಓಡಿಬಂದು ಸೈಕಲ್ ಮತ್ತು ನನ್ನನ್ನು ಎತ್ತಿದ. ಸೈಕಲ್ಲಿನ ಒಂದು ಪೇಡಲ್ ಪಕ್ಕದ ಕಲ್ಲು ಬಂಡೆಗೆ ತಾಗಿ ಮುರಿದುಹೋಗಿತ್ತು. ಅಳು ಬಂದರು ಅಳಲಾರದ ಸ್ಥಿತಿ ನಮ್ಮದಾಗಿತ್ತು. ಯಾರಿಗೂ ಗೊತ್ತಾಗದ ರೀತಿಯಲ್ಲಿ ಸೈಕಲ್ ತಂದು ನಿಲ್ಲಿಸಿ ಸೈಕಲ್ ಪೇಡೆಲ್ ನೆನೆದು ಭಯಗೊಂಡು ಪರಾರಿಯಾದೆವು.

ಈಗೆಲ್ಲಾ ಬಿಡಿ ಮನೆ ಮನೆಯಲ್ಲೂ ಸೈಕಲ್ ಮತ್ತು ಕಾರುಗಳದ್ದೆ ಕಾರುಬಾರು. ನಾಕು ವರ್ಷದ ನನ್ನ ಮಗಳಿಗೆ ಮೂರು ಸೈಕಲ್ಲುಗಳಿವೆ ಎಂದರೆ ನೀವು ನಂಬಲೇಬೇಕು. ಮೂರು ಗಾಲಿಯ ಎರಡು ಟ್ರೈಸಿಕಲ್ ಮತ್ತು ಎರಡು ಗಾಲಿಯ ಒಂದು ಬೈಸಿಕಲ್ಲಿದೆ. ಅವಳೋ ಅದೇನು ಮಾಯದಲ್ಲಿ ಸೈಕಲ್ ಹೊಡೆಯುತ್ತಾಳೆ ಎಂದರೆ ಅದನ್ನು ನೋಡಿ ನನಗೆ ಹೆದೆರಿಕೆಯಾಗುತ್ತದೆ ; ಯಾಕೆಂದರೆ ನಾನು ಅವಳ ತಂದೆ! ಕಂಪೌಂಡ್ ಪಕ್ಕ, ಗೆಟಿನ ಮುಂದುಗಡೆ ಹಾಗೂ ಸಂಧಿಗೊಂದಿಗಳಲ್ಲಿ ಲೀಲಾಜಾಲವಾಗಿ ಸೈಕಲ್ ನುಗ್ಗಿಸುತ್ತಾಳೆ. ವೇಗವಾಗಿ ಬಂದು ಬೆಲ್ ಬಾರಿಸುತ್ತ ನನ್ನ ಮೇಲೆ ಎಗುರಿಸುವಂತೆ ಮಾಡಿ ಬ್ರೇಕ್ ಹಾಕುತ್ತಾಳೆ. ನಾನು ಎಂ ಎ ಸೈಕಲಾಜಿ ಮಾಡಿದ್ದರು ಅವಳ ಮುಂದೆ ಠುಸ್. ನಾನಂತೂ ಖಂಡಿತ ಅವಳಿಗೆ ಸೈಕಲ್ ಕಲಿಸಿಲ್ಲ… ಅದ್ಯಾರು ಕಲಿಸಿಕೊಟ್ಟರೋ ಗೊತ್ತಿಲ್ಲ. ಒಟ್ಟಿನಲ್ಲಿ ಸರ್ಕಸ್ಸಿನ ಮಾಯಾಂಗಿನಿಯಂತೆ ಸೈಕಲ್ ತಿರುಗಿಸುತ್ತಾಳೆ.

ಫೋಟೋ ಕೃಪೆ: pinteres

ಒಮ್ಮೆ ರಾಣೇಬೆನ್ನೂರಿನಲ್ಲಿ ಜೈ ಭಾರತ ಸರ್ಕಸ್ ಬಂದಿತ್ತು. ಅದರಲ್ಲಿ ಆನೆ, ಕೋತಿ, ಅಷ್ಟೇ ಯಾಕೆ ಗಿಣಿ ಕೂಡಾ ಸೈಕಲ್ ಹೊಡೆಯುವದನ್ನು ನೋಡಿ ನನ್ನ ಮಗಳು ಚಪ್ಪಾಳೆ ತಟ್ಟಿ ನಕ್ಕಿದ್ದಳು. ನನ್ನ ಪೆರಿಗೆ ಪೆಳಿ ಸೈಕಲ್ ನೋಡಿದ್ದರೆ ಇನ್ನು ಹ್ಯಾಂಗೆ ನಗುತ್ತಿದ್ದಳೋ… ಅಂದು ಅಯ್ಯೋ ನನ್ನ ಧಾರಭ್ಯವೇ ಎಂದು ಹಳಿದುಕೊಂಡಿದ್ದೆ.

ಆಗು ಈಗೂ ಮಾಡಿ ಸೈಕಲ್ ಹೊಡೆಯುವದನ್ನು ಕಲಿತೆ. ದ್ವಿತೀಯ ಪಿಯುಸಿ ಓದುತ್ತಿರುವಾಗ ಅಪ್ಪ ಸೈಕಲ್ ಕೊಡಿಸಿದ. ಬಿ. ಎ. ಎರಡನೇ ವರ್ಷದಲ್ಲಿದ್ದಾಗ ಅಣ್ಣ ಬೈಕ್ ಕೊಡಿಸಿದ. ಆ ಕಾಲದಲ್ಲಿ ಕಾಲೇಜಿಗೆ ಬೈಕ್ ತೆಗೆದುಕೊಂಡು ಹೋಗುವುದು ದೊಡ್ಡ ಪ್ರತಿಷ್ಠೆಯ ವಿಷಯವಾಗಿತ್ತು. ನನ್ನ ಸ್ನೇಹಿತರೆಲ್ಲಾ ನನ್ನನೇ ನೋಡುತ್ತಿದ್ದರು.

ಈಗಂತೂ ಶಾಲೆಗಳಲ್ಲಿ ಸರಕಾರ ಉಚಿತವಾಗಿ ಸೈಕಲ್ ವಿತರಣೆ ಮಾಡುತ್ತಿದೆ. 8ನೇ ತರಗತಿ ವಿದ್ಯಾರ್ಥಿಗಳು “ಸರ್ ಈ ವರ್ಷ ಸೈಕಲ್ ಕೊಡೊಲ್ಲೇನ್ರಿ” ಅಂತ ಕೇಳಿದಾಗ ನನ್ನ ಮೊದಲ ಸೈಕಲ್ ನೆನಪಾಯಿತು. ನಗು ಬಂತು… ಒಮ್ಮೆ ಮನತುಂಬಿ ನಕ್ಕುಬಿಟ್ಟೆ. ನನ್ನ ವಿದ್ಯಾರ್ಥಿಗಳಿಗೂ ಹೇಳಿದೆ ಅವರು ಬಾಯಿತುಂಬಾ ನಕ್ಕರು… ನೀವು ನಗುತ್ತಿದ್ದೀರಾ…?


  • ಮಂಜಯ್ಯ ದೇವರಮನಿ – ವೃತ್ತಿಯಲ್ಲಿ ಸರಕಾರಿ ಶಾಲಾ ಶಿಕ್ಷಕ. “ಕರಿಜಾಲಿ ಮರ” ಪ್ರಕಟಿತ ಕಥಾಸಂಕಲನ. ಚಾರಣ ಮತ್ತು ಚಿತ್ರಕಲೆ ನೆಚ್ಚಿನ ಹವ್ಯಾಸಗಳು, ಸಂಗಾಪುರ. 

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW