ನಾಟಕಗಳ ಮೂರು ದಿನಗಳ ಉತ್ಸವವೊಂದು ಹೊನ್ನಾವರದ ‘ಪ್ರತಿಭೋದಯ ಕಲಾ ಕೇಂದ್ರ’ದಲ್ಲಿ ಇತ್ತೀಚೆಗೆ ಜರುಗಿತು, ಒಂದು ಘಂಟೆಯ ಆರು ನಾಟಕಗಳು ಪ್ರೇಕ್ಷಕನ ಮನಗೆದ್ದವು, ರಂಗಕರ್ಮಿ ಕಿರಣ ಭಟ್ ಅವರ ಲೇಖನಿಯಲ್ಲಿ ಮನರಂಜನೆಯ ‘ಫುಲ್ ಪ್ಯಾಕೇಜ್’ ಅನುಭವದ ಲೇಖನ, ತಪ್ಪದೆ ಓದಿ…
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ತಿಕದಲ್ಲಿ, ಜಾತ್ರೆಗಳಲ್ಲಿ, ಹಳ್ಳಿಗಳಲ್ಲಿ ನಡೆಯುತ್ತಿದ್ದ ನಾಟಕಗಳು ಇಲ್ಲವೇ ಇಲ್ಲ ಎಂಬಷ್ಟು ಕಡಿಮೆಯಾಗಿವೆ. ಇದಕ್ಕೆ ಕಾರಣ, ಅವುಗಳಿಗೆ ತಗಲುವ ಅಪರಿಮಿತ ವೆಚ್ಚ ಒಂದೆಡೆಯಾದರೆ ನಾಟಕದ ಉಮೇದಿನವರಿಗೆಲ್ಲ ವಯಸ್ಸಾಗಿರುವದು, ಯುವಜನರೆಲ್ಲ ಕೆಲಸಕ್ಕಾಗಿ ಪೇಟೆಯ ಹಾದಿ ಹಿಡಿದು ಹಳ್ಳಿಗಳೇ ಖಾಲಿಯಾಗಿರುವುದು. ಈ ಮಧ್ಯೆ ಶಾಲೆಗಳಲ್ಲಿ ನಡೆಯುತ್ತಿದ್ದ ಸಂಜೆಯ ಗ್ಯಾದರಿಂಗುಗಳಿಗೂ ಚಕ್ರ ಬಿದ್ದು ಅಲ್ಲಿ ನೋಡಬಹುದಾಗಿದ್ದ ಹಳೆಯ ವಿದ್ಯಾರ್ಥಿಗಳ ನಾಟಕಗಳೂ ಯಾವಾಗಲೋ ನಿಂತುಹೋಗಿವೆ.
ಈ ನಡುವೆ ಅಲ್ಲಲ್ಲಿ ನಡೆಯುತ್ತಿರುವ ಕೊಂಕಣಿ ನಾಟಕಗಳು ಹಳ್ಳಿಯ ರಂಗಭೂಮಿಯ ಉಸಿರು ಹಿಡಿದಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಜನ ಮಾತನಾಡುವ ಭಾಷೆ ಕೊಂಕಣಿಯೇ. ಅದೂ ವಿವಿಧ ನುಡಿಗಟ್ಟುಗಳಲ್ಲ್ಲಿ. ಆದರೆ ಈ ಭಾಷೆಯ ರಂಗಭೂಮಿಯ ಕೆಲಸವಾದುದು ಕಡಿಮೆಯೇ. ನಾವು ಶಾಲೆಗೆ ಹೋಗುವಾಗ ಹೊನ್ನಾವರ ಭಾಗದಲ್ಲಿ ಹೊಸಾಡ ಬಾಬುಟಿ ನಾಯ್ಕರ ನಾಟಕಗಳಾಗುತ್ತಿದ್ದವು. ಎಲ್ಲ ಏಕಾಂಕ ಕಾಮಿಡಿಗಳು. ಕಾರವಾರದಲ್ಲಿದ್ದಾಗ ಅನೇಕ ಕೊಂಕಣಿ ನಾಟಕಗಳನ್ನ ನೋಡಿದ್ದುಂಟು. ಆದರೆ ಆಗ ಸಹಜವಾಗಿದ್ದ, ಹಾಸ್ಯ ಪ್ರಧಾನವಾದ ಕೊಂಕಣಿ ನಾಟಕಗಳಿಗಿಂತ ಭಿನ್ನವಾದ ನಾಟಕಗಳನ್ನು ಕಂಡಿದ್ದು ಶಿರಸಿಯಲ್ಲಿಯೇ. ಅಲ್ಲಿಯ ಅನಿಲ್ ಶಾನಭಾಗ್, ಆನಂದು ಶ್ಯಾನಭಾಗ್, ವಾಸುದೇವ ಶ್ಯಾನಭಾಗ್ ತುಸು ಗಂಭೀರವಾದ ವಸ್ತುಗಳನ್ನೆತ್ತಿಕೊಂಡು ನಾಟಕಗಳನ್ನ ಬರೆದು ಆಡಿಸಿದ್ದರು. ಶಿರಸಿಯ ಖ್ಯಾತ ಕಲಾವಿದ ಪುತ್ತಣ್ಣ ‘ ಸುಯೋಧನ’ ನಾಟಕವನ್ನು ಕೊಂಕಣಿಗಿಳಿಸಿ ರಂಗಕ್ಕೆ ತಂದಿದ್ದರು. ಅಂಥ ಪ್ರಯತ್ನಗಳು ಮುಂದುವರಿದಂತೆ ತೋರುತ್ತಿಲ್ಲ.
ಈ ಮಧ್ಯೆ ಹಲವು ವರ್ಷಗಳಿಂದ ಕೊಂಕಣಿ ಭಾಷೆಯ ನಾಟಕಗಳನ್ನ ವೃತದಂತೆ ಮಾಡುತ್ತ ಬಂದವರು ಕ್ರಿಶ್ಷಿಯನ್ ಸಮುದಾಯದ ಬಂಧುಗಳು. ಇಗರ್ಜಿಯ ‘ಪೆಸ್ತ್’ ಗಳಲ್ಲಂತೂ ಪ್ರತಿ ವರ್ಷವೂ ಕೊಂಕಣಿ ನಾಟಕಗಳಾಗುತ್ತವೆ. ಈ ಕೊಂಕಣಿ ಭಾಷೆಯ ನುಡಿಗಟ್ಟು ಉಳಿದವರು ಮಾತನಾಡುವ ಕೊಂಕಣಿಗಿಂತ ಸ್ವಲ್ಪ ಭಿನ್ನವಾದದ್ದು. ಗೋವೆಯ ಕೊಂಕಣಿಗೆ ಹತ್ತಿರವಾದದ್ದು.
ಇಂಥ ನಾಟಕಗಳ ಮೂರು ದಿನಗಳ ಉತ್ಸವವೊಂದು ಹೊನ್ನಾವರದ ‘ಪ್ರತಿಭೋದಯ ಕಲಾ ಕೇಂದ್ರ’ದಲ್ಲಿ ಇತ್ತೀಚೆಗೆ ಜರುಗಿತು. ಇಂತ್ರು ಡಿಸೋಜಾ ಎಂಬ ನಾಟಕದ ಪ್ರೀತಿಯ ಕಲಾವಿದರೊಬ್ಬರು ಸಾನಾಮೋಟಾ ಎನ್ನೋ ದ್ವೀಪದ ‘ ಪ್ರತಿಮಾ ಕೊಂಕಣಿ ಸಾಂಸ್ಕೃತಿಕ್ ಕಲಾವೇದಿ’ ಯ ಅಡಿಯಲ್ಲಿ ನಾಟಕೋತ್ಸವ ಸಂಘಟಿಸಿದ್ದರು. ಆರು ನಾಟಕಗಳು ಪ್ರದರ್ಶಿತವಾದ ಈ ಉತ್ಸವದಲ್ಲಿ ನೂರಿಪ್ಪತ್ತು ಕಲಾವಿದರು ಭಾಗವಹಿಸಿದ್ದರು.
- ಸೇಕ್ರೆಡ್ ಹಾರ್ಟ್ ಚರ್ಚ್, ಕರಿಕಲ್ ನ ‘ರಿಣ್ಕಾರಿ’ (ಋಣಿ)
- ಸಾಂತ್ ಜೋಸೆಫ್ ಫಿರ್ಗಜ್, ಕಾಸರಕೋಡ ನ ‘ ಶಿಕಾಪ್ ಜಾಯ್ತಾಂಚಿ ವಾಟಿ’ ( ಕಲಿಕೆಯೇ ಅಭ್ಯುದಯದ ಹಾದಿ)
- ಸಾನ್ ಸಾಲ್ವದೋರ್ ಫಿರ್ಗಜ್ ಹೊನ್ನಾವರ ದ ‘ ದೇವಾನ್ ಕರ್ಚೆಂ ಬರ್ಯಾಕ್’ ( ಧೇವರು ಮಾಡೋದು ಒಳ್ಳೇದಕ್ಕೆ)
- ಸಾಂತ್ ಜೋಸೆಫ್ ಫಿರ್ಗಜ್, ಪುರವರ್ಗ್ ದ ‘ ಬುರ್ಗೆಂ ದೇವಾಚೆ ದೆಣೆಂ’ ( ಮಕ್ಕಳು ದೇವರ ವರ)
- ಭಾಗವಂತ ಖುರ್ಸಾಚೆ ಕೊಪೆಲ್, ಮೊಟೊ ದ ‘ಜಾಗ್ರುತ್ ರಾವ್ಯಾಂ’ ( ಎಚ್ಚರವಾಗಿರೋಣ)
- ಫಾತಿಮಾ ದೇವ್ ಮಾತೆ ಫಿರ್ಗಜ್, ಮಡಿ, ಯ ‘ ಬೊಗ್ಸಾಣೆಂ’ ( ಕ್ಷಮೆ)
ಹೀಗೆ ಆರು ನಾಟಕಗಳು. ಒಂದು ಘಂಟೆಯ ಈ ಎಲ್ಲ ನಾಟಕಗಳ ವಿನ್ಯಾಸ ಹೆಚ್ಚು ಕಡಿಮೆ ಕನ್ನಡದ ಕಂಪನಿ ನಾಟಕಗಳದ್ದೇ ಆದರೂ ವಾತಾವರಣ ಪಾಶ್ಚಾತ್ಯ. ಸಂಗೀತವೂ ಸಂಪೂರ್ಣ ಪಾಶ್ಚಾತ್ಯವೇ. ಗೋವಾದ ಜಾನಪದ ಸಂಗೀತವನ್ನು ಹೋಲುವಂಥದ್ದು. ಎಲ್ಲವೂ ಪರದೆಯ ನಾಟಕಗಳು. ಭಾವನಾತ್ಮಕ ನೆಲೆಗಟ್ಟಿನ ಮೇಲೇ ಕಟ್ಟಿದಂಥ ಕತೆಗಳು. ಕೌಟುಂಬಿಕ ಸಂಬಂಧಗಳು ಬೆರೆಯುವ, ಒಡೆಯುವ ಪ್ಲಾಟ್ ಗಳೇ ಹೆಚ್ಚು. ಕೆಲವೊಮ್ಮೆ ಪ್ರೇಮದ ಕಥೆಗಳು, ವಿಶ್ವಾಸಘಾತದ ನೋವು, ಶರಣಾಗತ ಭಾವ. ಎಲ್ಲ ನಾಟಕಗಳಲ್ಲೂ ಮೂಲ ಕಥೆಯ ಎಳೆಯೊಂದಿಗೆ ಮತ್ತು ಕೆಲವು ಬಾರಿ ಕಥೆಯ ಹೊರಗೆ ಸಾಗುವ ಕಾಮಿಡಿಯ ಎಳೆ. ಭಾಷೆಯ ತಾಕಲಾಟಗಳ ಹಾಸ್ಯ. ಗಹಗಹಿಸುವ ವಿಲನ್ ಗಳು. ಒಟ್ಟಾರೆ ಪಕ್ಕಾ ಮನರಂಜನೆ.
ನನಗೆ ತುಂಬ ಇಷ್ಟವಾದದ್ದು ಅವರ ಶಿಸ್ತಿನ ನಿರ್ವಹಣೆ. ಇಕ್ಕಟ್ಟಾದ ಜಾಗಗಳಲ್ಲೂ ಜಾಣ್ಮೆಯಿಂದ ಹಾಡುತ್ತ, ಕುಣಿಯುತ್ತ ಕಥೆಯನ್ನ ಮುನ್ನಡೆಸುವ ಜಾಣ್ಮೆ. ಎಲ್ಲಕ್ಕಿಂತಲೂ ಇಷ್ಟವಾದದ್ದು ನಾಟಗಕಳಲ್ಲಿ ಧರಿಸಿದ ಚೆಂದ ಚೆಂದದ ಡ್ರೆಸ್ ಗಳು. ಒಂದು ಗಂಟೆಯ ನಾಟಕದಲ್ಲೇ ಹಲವು ಬಾರಿ ಬದಲಾಗುವ ವಸ್ತ್ರ ವಿನ್ಯಾಸ.
ಒಂಥರಾ ರಾಗದಂಥ ಭಾಷೆ, ಹೆಜ್ಜೆಯಿಕ್ಕಿಸುವ ಸಂಗೀತ, ಚಕಚಕಿಸುತ್ತ ರಂಗದಲ್ಲಿ ಓಡಾಡುವ ಹುಡುಗ ಹುಡುಗಿಯರು, ಅಪ್ಪ ಅಮ್ಮನ ಪಾತ್ರಗಳನ್ನ ಒಪ್ಪವಾಗಿ ಒಪ್ಪಿಸುವ ಹಿರಿಯರು. ಒಟ್ಟಾರೆ ಈ ಆರೂ ನಾಟಕಗಳು ಕಟ್ಟಿಕೊಟ್ಟದ್ದು ವಿಭಿನ್ನವಾದ, ಹಿತವಾದ ಅನುಭವ.
- ಕಿರಣ ಭಟ್ – ರಂಗಕರ್ಮಿ, ರಂಗ ಸಂಘಟಕರು, ಕಲಾವಿದರು, ನಿರ್ದೇಶಕರು, ಬರಹಗಾರರು, ಹೊನ್ನಾವರ