ನಾ ಕಂಡಂತೆ ರವಿಬೆಳೆಗೆರೆ – ಶಕುಂತಲಾ ಶ್ರೀಧರ್

ರವಿ ಬಗ್ಗೆ ಇನ್ಮೇಲೆ ಬರೆಯಬಾರದು ಅಂತ ನಿರ್ಧಾರ ಮಾಡಿದ್ದೆ. ಆದರೆ ಕೆಲ ಅಭಿಮಾನಿಗಳು ಅವರನ್ನ ನೆನೆಸಿಕೊಂಡ ರೀತಿ, ಕೆಲ ನಿಂದಕರು ಅವರ ಬಗ್ಗೆ ಅಸಹ್ಯಕರವಾಗಿ ಪ್ರತಿಕ್ರಿಯಿಸಿರುವ ಬಗೆ, ಕೆಲವರ ನಿರ್ವಾಜ್ಯ ಪ್ರೀತಿಪೂರ್ವಕ ಶ್ರದ್ಧಾಂಜಲಿ ಎಲ್ಲವನ್ನೂ ಓದಿದ ಮೇಲೆ ಅವರ ಬಗ್ಗೆ ನನ್ನ ಭಾವನೆಗಳನ್ನ ಬರೆಯಬೇಕೆನ್ನಿಸಿತು. ವಿಜ್ಞಾನಿ ಶಕುಂತಲಾ ಶ್ರೀಧರ್ ಅವರು ಕಂಡಂತೆ ರವಿಬೆಳೆಗೆರೆ ತಪ್ಪದೆ ಓದಿ…

ಎಷ್ಟೊ ಮಂದಿಗೆ ಅವರು ಅಳಲು ತಮ್ಮ ಹೆಗಲನ್ನು ಕೊಟ್ಟಿದ್ದು ಅನೇಕರಿಗೆ ಗೊತ್ತಿಲ್ಲ, ಜೀವನದಲ್ಲಿ ಧೈರ್ಯ ಕಳೆದುಕೊಂಡು, ಸೋತು ಸುಣ್ಣವಾದವರಿಗೆ ಸ್ಥೈರ್ಯ ತುಂಬಿ ಗೆಲುವಿನ ಕುದುರೆಗಳನ್ನಾಗಿ ಮಾಡಿದ್ದು ತೆರೆಮರೆಯ ಸತ್ಯ.

ನನಗೆ ರವಿ ಕಂಡಿದ್ದು ಒಬ್ಬ ಗುರುವಾಗಿ. ನಾನು ಹಾಯ್ ಬೆಂಗಳೂರು ಓದುತಿದ್ದದ್ದೇ ಬಾಟಮ್ ಐಟಂ ಗಾಗಿ. ಅದಕ್ಕೆ ಮೊದಲು ಲೆಕ್ಕವಿಲ್ಲದಷ್ಟು ವ್ಯಕ್ತಿ ವಿಕಾಸದ ಇಂಗ್ಲಿಷ್ ಪುಸ್ತಕ ಓದಿದ್ದೆ. ಆದರೆ ಎಲ್ಲವೂ impractical, dry ಅನ್ನಿಸಿದ್ದವು. ಆದರೆ ಹಾಯ್ ಬೆಂಗಳೂರ್ ನ ಬಾಟಮ್ ಐಟಂ ಗಳು ಕೇವಲ 500 ಪದಗಳ ಆಸುಪಾಸಿನಲ್ಲಿ ನಮ್ಮ ವ್ಯಕ್ತಿತ್ವವನ್ನು ಸಫಲವಾಗಿ, ಸುಂದರವಾಗಿ, ಸುಸಂಸ್ಕೃತವಾಗಿ, ಸಮಾಜಹಿತಿಯಾಗಿ, ಒಳ್ಳೆಯ ಸಂಸಾರಿಯಾಗಿ ಇರುವಂತೆ ರೂಪಿಸಲು, ಏರಲು ಇನ್ನಿಲ್ಲದಂತೆ ಸಹಕಾರಿಯಾಗಿದ್ದವು.

ಫೋಟೋ ಕೃಪೆ : theweek

ನಾನೆಂದೂ ಅವರ ಕಾದಂಬರಿಗಳ ಆರಾಧಕಳಾಗಿರಲಿಲ್ಲ. ಆದರೆ ಅವರ ವ್ಯಕ್ತಿ ಚಿತ್ರಣಗಳು, ಖಾಸ್ ಬಾತ್, ಲವಲವಿಕೆ ಇವುಗಳ fan ಆಗಿದ್ದೆ. ಅಲ್ಲಗೆ ನನ್ನ ಹಾಯ್ ಬೆಂಗಳೂರು ಓದು ಮುಗಿಯುತ್ತಿತ್ತು. ಈ ರೀತಿ ಬುದ್ದಿ ಹೇಳುವಂತೆ, ಮನಮಿಡಿಯುವಂತೆ, ಎದೆ ಈರಿಯುವಂತೆ ತೀಕ್ಷಣವಾಗಿ, ಯಾರಿಗೂ ಹೆದುರದ ದುರ್ಯೋಧನನಂತೆ ತೊಡೆ ತಟ್ಟಿ ದೊಡ್ಡವರನ್ನೂ, ಸಣ್ಣವರನ್ನೂ ಎದುರು ಹಾಕಿಕೊಳ್ಳುತ್ತಿದ್ದ ಧಾರ್ಷಿಟಿಕತೆ, ಇವೆಲ್ಲವೂ ಒಂದೇ ಲೇಖನಿಯಿಂದ ಹೊರಹೋಮ್ಮತ್ತಿತ್ತು ಅಂದರೆ ಅದೊಂದು ನಂಬಲಾರದ ವಿಸ್ಮಯ.

ರವಿ ಅಂದರೆ ಇಷ್ಟೇ ಅಲ್ಲ. ನನ್ನ ಪಾಲಿನ ಅತ್ಯಂತ ಸನ್ಮಿತ್ರ. ಇಡೀ ನನ್ನ ಬಾಳೇ ಕತ್ತಲಲ್ಲಿ ಮುಳುಗಿದ್ದಾಗ ಅದೇಕೆ ಹಾಗಾಯಿತು ಎಂಬುದನ್ನು ಎಂಟು ಪುಟಗಳಲ್ಲಿ ಸುದೀರ್ಘವಾಗಿ ತನ್ನ ಸ್ವಹಸ್ತದಿಂದಲೇ ಬರೆದು ಸಾಂತ್ವನ ನೀಡಿ, ಧೈರ್ಯ ತುಂಬಿ, ನೆಲಕ್ಕೆ ಬಿದ್ದ ನನ್ನ ಜೀವನ ಮೇಲೇರುವಂತೆ ನಿಲ್ಲಿಸಿದ ಸಹೃದಯಿ ಆತ. ಆತನ ಬಗ್ಗೆ, ಆತನ ಚಾರಿತ್ರದ ಬಗ್ಗೆ, ಹಣ ಗಳಿಸಿದ ಬಗ್ಗೆ ಅನುಮಾನಗಳಿವೆ, ಪ್ರಶ್ನೆಗಳಿವೆ. ಆದರೆ ಆತ ನನ್ನ ಅನುಭವಕ್ಕೆ ಸಿಕ್ಕ ಆಧಾರದ ಮೇಲೆ ಮಾತ್ರ ನಾನು ಆತನನ್ನು judge ಮಾಡಬಲ್ಲೆ. ಆ ಎಣಿಕೆಯಲ್ಲಿ ಆತ ಸಾಯುಯವರೆಗೂ ನನ್ನ ಜೀವನದಲ್ಲಿ ಕಂಡ ಅದ್ಭುತ ಮಾನವ.

ಯಾವ ಪಾಪವನ್ನೂ ಮಾಡದವ ಪಾಪಿಯ ಮೇಲೆ ಕಲ್ಲೆಸೆಯಲಿ ಎಂದರಂತೆ ಏಸು ಪ್ರಭು. ರವಿಯನ್ನ ಟೀಕಿಸುವರು ಇದನ್ನು ಗಮನದಲ್ಲಿಟ್ಟುಕೊಂಡರೆ ಸಾಕು.

ಕೊನೆಯದಾಗಿ ಬರೆದಂತೆ ಬದುಕುವುದು ಮಹಾತ್ಮಾ ಗಾಂಧಿಯಂಥವರಿಗೆ ಮಾತ್ರ ಸಾಧ್ಯ. ಮನುಷ್ಯನೊಬ್ಬ ತನ್ನನ್ನು ತಾನೇ ಮರೆತು ದುರ್ಬಲತೆಗಳಿಗೆ ಈಡಾಗುವುದು, ತಪ್ಪುಗಳು ಮಾಡುವುದು ಸೋತು ಹೋದಾಗ. ರವಿ ಕೊನೆ ಕೊನೆಯಲ್ಲಿ ಜೀವನದಲ್ಲಿ ಸೋಲಾಲಾರಂಭಿಸಿದರು ಅಂತ ಕಾಣುತ್ತೆ. ಆ ಸಮಯದಲ್ಲಿ ಅವರನ್ನು ಮೇಲೆತ್ತುವ ಗೆಳೆಯರಾರೂ ಅವರ ಬಳಿ ಇಲ್ಲದ್ದು ದುರಂತ. ನಿಜ ಹೇಳಬೇಕೆಂದರೆ ಸಾವು ಅವರನ್ನ ಒಂಟಿ ತನದಿಂದ, ಸೋಲಿನಿಂದ, ಅನಾರೋಗ್ಯದಿಂದ ಬಿಡುಗಡೆಗೊಳಿಸಿತು.


  • ಶಕುಂತಲಾ ಶ್ರೀಧರ್ – ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಾಣಿ ಶರೀರಶಾಸ್ತ್ರದಲ್ಲಿ ಪಿಎಚ್‌ಡಿ ಪಡೆಡಿದ್ದು, ಭಾರತೀಯ ದಶಕಗಳ ಮೇಲಿನ ಅವರ ಪ್ರವರ್ತಕ ಕೆಲಸವನ್ನು ಗುರುತಿಸಿ, ಡಾ.ಶ್ರೀಧರ ಅವರನ್ನು ಆಕ್ಸ್‌ಫರ್ಡ್, ನಾಟಿಂಗ್‌ಹ್ಯಾಮ್, ಯಾರ್ಕ್, ಮ್ಯೂನಿಚ್, ಡ್ಯಾನಿಶ್ ಕೀಟ ನಿಯಂತ್ರಣ ಪ್ರಯೋಗಾಲಯ, ಸ್ಪೇನ್, ವಿಯೆನ್ನಾ, ಟುಬಿಂಗೆನ್,ಅಮೇರಿಕಾದ ಪ್ರತಿಷ್ಟಿತ ವಿಶ್ವವಿದ್ಯಾನಿಲ್ಸಯಾಗಳೇ ಸೇರಿದಂತೆ ವಿಶ್ವದಾದ್ಯಂತ ಸೆಮಿನಾರ್‌ಗಳನ್ನು ನೀಡಲು ಆಹ್ವಾನಿಸಿದ್ದಾರೆ. 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW