‘ಋತು ವಿದ್ಯಾ’ ಪುಸ್ತಕ ಪರಿಚಯ

ಋತುಮತಿಯಾದ ಹೆಣ್ಣಿನ ದೇಹ, ಮನಸ್ಸು, ಕೌಟುಂಬಿಕ ಸ್ಥಿತಿಗತಿಗಳ ಕುರಿತು ಸಾಕಷ್ಟು ಅಧ್ಯಯನಗಳು ನಡೆದಿವೆ, ನಡೆಯುತ್ತಿವೆ. ಅಂತಹುದೇ ಒಂದು ವಿಸ್ತೃತ ಅಧ್ಯಯನದ ಹೊತ್ತಿಗೆ ಈ “ಋತು ವಿದ್ಯಾ”. ಈ ಪುಸ್ತಕವನ್ನು ಇಂಗ್ಲೀಷನಲ್ಲಿ ಡಾ. ದಿವ್ಯಶ್ರೀ ಕೆ ಎಸ್ ಅವರು ವಿಮರ್ಶೆ ಮಾಡಿದ್ದರೆ, ಆ ವಿಮರ್ಶೆಯನ್ನು ಕನ್ನಡಕ್ಕೆ ಅನುವಾದಿಸಿದ್ದು ಲೇಖಕ ಸುದರ್ಶನ್ ಪ್ರಸಾದ್ ಅವರು, ಅದನ್ನು ತಪ್ಪದೆ ಮುಂದೆ ಓದಿ …

ಪುಸ್ತಕ : ಋತು ವಿದ್ಯಾ (ಇಂಗ್ಲೀಷ್)
ಮೂಲ ಕೃತಿ ಲೇಖಕಿ :  ಸಿನು ಜೋಸೆಫ್ ( Mythri Speaks )
ಇಂಗ್ಲಿಷ್ ಗೆ ವಿಮರ್ಶೆ : ಡಾ. ದಿವ್ಯಶ್ರೀ ಕೆ ಎಸ್

ಕನ್ನಡಕ್ಕೆ ವಿಮರ್ಶೆ : ಸುದರ್ಶನ್ ಪ್ರಸಾದ್ 

ಋತುಚಕ್ರ – ಸಸ್ತನಿಗಳ ವರ್ಗದಲ್ಲಿ ಅದರಲ್ಲೂ ಮಾನವರಲ್ಲಿ ವಿಶೇಷವಾಗಿ ಕಂಡುಬರುವ ಸಂತಾನವೃದ್ಧಿ ವಿಧಾನ. ಹೆಣ್ಣೊಬ್ಬಳು ಹೊಸ ಜೀವವೊಂದಕ್ಕೆ ಜನ್ಮ ನೀಡಲು ಋತುಚಕ್ರಕ್ಕೆ ಒಳಗಾಗಲೇ ಬೇಕು. ಇದರ ಕುರಿತಾಗಿ ನಾನಾ ಬಗೆಯ ದೃಷ್ಟಿಕೋನಗಳಿದ್ದು ವೈಜ್ಞಾನಿಕವಾಗಿ, ವೈಚಾರಿಕವಾಗಿ, ಸಾಂಪ್ರದಾಯಿಕವಾಗಿ ತನ್ನದೇ ಆದ ವ್ಯಾಖ್ಯಾನಗಳನ್ನು ಹೊಂದಿದೆ. ಋತುಮತಿಯಾದ ಹೆಣ್ಣಿನ ದೇಹ, ಮನಸ್ಸು, ಕೌಟುಂಬಿಕ ಸ್ಥಿತಿಗತಿಗಳ ಕುರಿತು ಸಾಕಷ್ಟು ಅಧ್ಯಯನಗಳು ನಡೆದಿವೆ, ನಡೆಯುತ್ತಿವೆ. ಅಂತಹುದೇ ಒಂದು ವಿಸ್ತೃತ ಅಧ್ಯಯನದ ಹೊತ್ತಿಗೆ ಈ “ಋತು ವಿದ್ಯಾ”.

ಈ ಪುಸ್ತಕ ಮುಖ್ಯವಾಗಿ ಎರಡು ವಿಭಾಗಗಳನ್ನು ಹೊಂದಿದ್ದು ಮೊದಲ ಭಾಗದಲ್ಲಿ ಏಳು ಅಧ್ಯಾಯಗಳು ಮತ್ತು ಎರಡನೇ ಭಾಗದಲ್ಲಿ ಆರು ಅಧ್ಯಾಯಗಳಿವೆ. ಮೊದಲನೆಯ ಭಾಗದಲ್ಲಿ ಋತುಚಕ್ರದ ವಿಜ್ಞಾನಕ್ಕೆ ಒತ್ತು ನೀಡಿದರೆ ಎರಡನೆಯ ಭಾಗದಲ್ಲಿ ಪ್ರಪಂಚದ ವಿವಿಧ ಮತಧರ್ಮಗಳ ದೃಷ್ಟಿಯಲ್ಲಿ ಋತುಚಕ್ರವನ್ನು ಕಟ್ಟಿಕೊಡಲಾಗಿದೆ. ಭಾರತೀಯ ವೈಜ್ಞಾನಿಕ ಹಿನ್ನೆಲೆಯ ಆಯುರ್ವೇದ, ಷಟ್ ದರ್ಶನ, ಯೋಗ, ಷಟ್ ಚಕ್ರ ಮುಂತಾದವುಗಳ ಕುರಿತಾಗಿ ವಿವರಣೆಯೊಂದಿಗೆ ಆರಂಭವಾಗುವ ಮೊದಲನೇ ವಿಭಾಗ ಪ್ರಾಚೀನ ವೈದ್ಯಕೀಯ ಪರಂಪರೆಯ ಅವನತಿ ಮತ್ತು ಆಧುನಿಕ ವೈದ್ಯಕೀಯ ಪರಂಪರೆಯ ಉನ್ನತಿಯ ಕುರಿತು ಸಹಾ ಹೇಳುತ್ತದೆ. ಈ ಭಾಗದಲ್ಲಿ ಏಳು ಅಧ್ಯಾಯಗಳಿದ್ದು ಅವುಗಳು ಈ ಕೆಳಗಿನಂತಿವೆ.

ಮೊದಲನೇ ಅಧ್ಯಾಯದಲ್ಲಿ ಪ್ರೌಢಾವಸ್ಥೆಗೆ ಕಾಲಿಡುವ ಹೆಣ್ಣು, ಆಕೆಯ ಮೊದಲ ಋತುಚಕ್ರ, ಅದಕ್ಕೆ ಸಂಬಂಧಿಸಿದ ಆಚರಣೆಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಲಾಗಿದ್ದು ಮೊದಲ ಋತುಚಕ್ರದ ಕುರುಹುಗಳು ಮತ್ತು ಆಕೆಯ ಮುಂದಿನ ಜೀವನದಲ್ಲಿ ಅದರಿಂದ ಉಂಟಾಗುವ ಪರಿಣಾಮಗಳು ಇತ್ಯಾದಿ ವಿಚಾರಗಳನ್ನು ವಿವರಿಸಲಾಗಿದೆ. ಆಯುರ್ವೇದದ ‘ಆಮ’ (Metabolic toxin) ಮತ್ತು ಋತುಚಕ್ರದ ನಡುವಿನ ಸಂಬಂಧವನ್ನೂ ಈ ಅಧ್ಯಾಯ ಹೊಂದಿರುವುದು ವಿಶೇಷ. ಅಲ್ಲದೇ ಭಾರತದ ವಿವಿಧ ಸಮುದಾಯಗಳಲ್ಲಿ ಮೊದಲ ಋತುಚಕ್ರವನ್ನು ಸಂಭ್ರಮಿಸುವ ಕುರಿತಾದ ವಿವರಣೆಯೂ ಇಲ್ಲಿದೆ.

ಎರಡನೇ ಅಧ್ಯಾಯ ಸಂಪೂರ್ಣ ಆಯುರ್ವೇದೀಯ ದೃಷ್ಟಿಕೋನಕ್ಕೆ ಮೀಸಲಾಗಿದ್ದು ತ್ರಿದೋಷ, ಸಪ್ತ ಧಾತು, ರಜಸ್ವಲಾ ಪರಿಚಯ, ದೇಹ ಪ್ರಕೃತಿ, ಮತ್ತು ದೇಹ ಪ್ರಕೃತಿಗೆ ಸಂಬಂಧಿಸಿದಂತೆ ಋತುಚಕ್ರದ ಆಗುಹೋಗುಗಳನ್ನು ವಿವರಿಸಲಾಗಿದೆ. ಹಾಗೆಯೇ ಋತುಚಕ್ರಕ್ಕೆ ಸಂಬಂಧಿಸಿದ ಕೆಲವು ಆಚರಣೆಗಳಿಗೆ ಸೂಕ್ತ ವೈಜ್ಞಾನಿಕ ಕಾರಣಗಳನ್ನು ಸಹಾ ಇಲ್ಲಿ ನೀಡಿರುವುದು ಗಮನಾರ್ಹ.

ಮೂರನೇ ಅಧ್ಯಾಯದಲ್ಲಿ ಋತುಚಕ್ರ ಮತ್ತು ಹೆಣ್ಣಿನ ಆರೋಗ್ಯದ ಮೇಲೆ ಅದರ ಪರಿಣಾಮಗಳು ಎಂಬ ವಿಷಯದ ಕುರಿತು ವಿಸ್ತೃತವಾಗಿ ಚರ್ಚಿಸಿದ್ದಾರೆ. ಜೀರ್ಣ ಕಶ್ಮಲಗಳನ್ನು ಹೊರಹಾಕುವಲ್ಲಿ ಋತುಚಕ್ರದ ಪಾತ್ರ ಎಂಬ ವಿಷಯದ ಕುರಿತು ಆಯುರ್ವೇದದ ಆಮ ಸಿದ್ಧಾಂತವನ್ನು ಆದರಿಸಿ ಹೇಳಲಾಗಿದೆ.

ನಾಲ್ಕನೇ ಅಧ್ಯಾಯವು ಭಾರತದ ಅನೇಕ ಭಾಗಗಳಲ್ಲಿ ಇಂದಿಗೂ ಆಚರಣೆಯಲ್ಲಿರುವ ಋತುಚಕ್ರದ ಮೈಲಿಗೆಯ ಕುರಿತು ತಿಳಿಸುತ್ತದೆ. ಮುಟ್ಟನ್ನು ಗುಟ್ಟಾಗಿಡುವ ಮತ್ತು ಅದರಿಂದ ಗ್ರಾಮೀಣ ಮಹಿಳೆಯರು ಎದುರಿಸುವ ಕಷ್ಟಗಳ ಕುರಿತು ಬೆಳಕು ಚೆಲ್ಲುವ ಪ್ರಯತ್ನವಿದೆ.

ಐದನೇ ಅಧ್ಯಾಯವು ಕ್ರೀಡೆ ಮತ್ತು ಋತುಚಕ್ರ ಎಂಬ ಅಂಶವನ್ನು ಹೊಂದಿದ್ದು, ಆಧುನಿಕ ಕ್ರೀಡಾ ಪ್ರಪಂಚದಲ್ಲಿ ಮಹಿಳಾ ಕ್ರೀಡಾಪಟುಗಳು ಎದುರಿಸುವ ಸಂಕಷ್ಟಗಳನ್ನು ಮತ್ತು ಋತುಚಕ್ರದ ಸಮಯದಲ್ಲಿ ಭಾಗವಹಿಸಬೇಕಾದ ಅನಿವಾರ್ಯ ಪರಿಸ್ಥಿತಿಯ ಪರಿಣಾಮಗಳನ್ನು ವಿವರಿಸಲಾಗಿದೆ. ಆಧುನಿಕ ಮತ್ತು ಪ್ರಾಚೀನ ಕ್ರೀಡೆ/ನೃತ್ಯ ಪ್ರದರ್ಶನದಲ್ಲಿ ಋತುಮತಿಯಾದ ಮಹಿಳೆಯ ಸ್ಥಾನಮಾನದ ಕುರಿತು ವಿಸ್ತೃತ ಮಾಹಿತಿಯಿದೆ. ಕೇವಲ ಆ ಸಂದರ್ಭಕ್ಕೆ ಸೀಮಿತವಾಗಿರದೇ ಭವಿಷ್ಯದಲ್ಲಿ ಆಕೆಯ ಗರ್ಭ ಸಂಬಂಧಿ ಆರೋಗ್ಯ, ತಾಯ್ತನ ಮುಂತಾದವುಗಳ ಮೇಲೆ ಈ ಒತ್ತಡದ ಪರಿಣಾಮಗಳನ್ನು ಹೇಳಲಾಗಿದೆ.

ಆರನೇ ಅಧ್ಯಾಯವು ವಿಶಿಷ್ಟವಾಗಿದ್ದು ಜ್ಯೋತಿಷ್ಯ ಶಾಸ್ತ್ರ ಮತ್ತು ಋತುಚಕ್ರದ ನಡುವಿನ ಸಂಬಂಧದ ಕುರಿತು ಚರ್ಚಿಸುತ್ತದೆ. ಋತುಚಕ್ರದ ದಿನಗಳ ಲೆಕ್ಕಾಚಾರ, ಋತುಚಕ್ರದ ಮೇಲೆ ಚಂದ್ರನ ಚಲನೆಯ ಪರಿಣಾಮ, ರಾಶಿ, ನಕ್ಷತ್ರ, ಲಗ್ನದ ಆಧಾರದ ಮೇಲೆ ಋತುಚಕ್ರದ ಸ್ವಭಾವ ಮತ್ತು ಅವುಗಳ ಆಧಾರದಲ್ಲಿ ಋತುಚಕ್ರದ ದಿನಗಳ ಲೆಕ್ಕಾಚಾರದ ಕುರಿತು ತಿಳಿಸಲಾಗಿದೆ. ಇಲ್ಲಿ ಲೇಖಕರು ಜ್ಯೋತಿಷ್ಯ ತಜ್ಞರ ಸಹಾಯ ಪಡೆದಿರುವುದು ಸಹಾ ತೋರುತ್ತದೆ.

ಕೊನೆಯದಾದ ಏಳನೇ ಅಧ್ಯಾಯದಲ್ಲಿ ಆಯುರ್ವೇದದ ಆಧಾರದಲ್ಲಿ ಋತುಚಕ್ರದ ಹಂತಗಳಾದ ರಾಜಸ್ರವ ಕಾಲ, ಋತು ಕಾಲ ಮತ್ತು ಋತುವ್ಯತೀತ ಕಾಲಗಳ ಕುರಿತು ಮಾಹಿತಿ ನೀಡಲಾಗಿದ್ದು ಆಯುರ್ವೇದದ ಸಂಹಿತೆಯಲ್ಲಿ ಹೇಳಿರುವ ‘ಋತುಚರ್ಯ’ ಕೋಷ್ಟಕವನ್ನೂ ನೀಡಲಾಗಿದೆ.

ಇದಿಷ್ಟು ಮೊದಲ ಭಾಗವಾದರೆ ಎರಡನೇ ಭಾಗದಲ್ಲಿ ಮತ ಧರ್ಮಗಳಲ್ಲಿನ ಋತುಚಕ್ರಕ್ಕೆ ಸಂಬಂಧಿಸಿದ ಆಚರಣೆಗಳ ಕುರಿತು ಉಲ್ಲೇಖವಿದೆ. ಎರಡನೇ ಭಾಗದ ಮೊಧಲ ಅಧ್ಯಾಯ ಅರ್ಥಾತ್ ಎಂಟನೇ ಅಧ್ಯಾಯದಲ್ಲಿ ಭಾರತೀಯ ದೇವಾಲಯ, ದೇವಾಲಯದ ವಾಸ್ತು ಮತ್ತು ಋತುಮತಿಯಾದ ಹೆಣ್ಣಿನ ನಡುವಿನ ಸಂಬಂಧದ ಕುರಿತು ಹೇಳಿದರೆ ಒಂಬತ್ತು ಮತ್ತು ಹನ್ನೊಂದನೇ ಅಧ್ಯಾಯದಲ್ಲಿ ಕೇರಳದ ಚೆಂಗನ್ನೂರು ಭಗವತಿ ದೇವಾಲಯ ಮತ್ತು ಅಸ್ಸಾಂನ ಕಾಮಾಕ್ಯ ದೇವಾಲಯಗಳ ಕುರಿತಾದ ವಿವರಣೆಯಿದೆ. ಇಲ್ಲಿ ಋತುಚಕ್ರವನ್ನು ಹಬ್ಬದಂತೆ ಸಂಭ್ರಮಿಸುವ ಜನರ ಬಗ್ಗೆಯೂ ಮಾಹಿತಿ ನೋಡಬಹುದು.

ಋತು ವಿದ್ಯಾ ಕೃತಿ ಲೇಖಕಿ  ಸಿನು ಜೋಸೆಫ್

ಹತ್ತನೇ ಅಧ್ಯಾಯದಲ್ಲಿ ಮಂತ್ರಗಳು ಮತ್ತು ಋತುಚಕ್ರ ಎಂಬ ವಿಷಯದ ಬಗ್ಗೆ ಚರ್ಚಿಸಿದ್ದು ಋತುಮತಿಯಾದ ಹೆಣ್ಣು ಮಂತ್ರೋಚ್ಛಾರಣೆ ಮಾಡುವುದರಿಂದ ಉಂಟಾಗುವ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳ ಕುರಿತಾಗಿ ಮಾಹಿತಿಯಿದೆ. ಹನ್ನೆರಡನೇ ಅಧ್ಯಾಯದಲ್ಲಿ ಪುರಾಣದ ಇಂದ್ರನ ಶಾಪದಿಂದ ಹೆಣ್ಣಿಗೆ ಋತುಚಕ್ರ ದಕ್ಕಿತು ಎಂಬ ಕಥೆಯನ್ನು ಉಲ್ಲೇಖಿಸಿದ್ದು ಹದಿಮೂರನೇ ಅಧ್ಯಾಯದಲ್ಲಿ ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮದಲ್ಲಿ ಋತುಚಕ್ರದ ನಂಬಿಕೆಗಳ ಕುರಿತು ವಿವರಿಸಿ ಪುಸ್ತಕಕ್ಕೆ ಪೂರ್ಣವಿರಾಮ ಇಡಲಾಗಿದೆ. ಪುಸ್ತಕದ ಉದ್ದಕ್ಕೂ ಕ್ಲಿಷ್ಟ ಶಬ್ದಗಳನ್ನು ಅರ್ಥ ಸಹಿತ ವಿವರಿಸಿ ಓದುಗರಿಗೆ ಸುಲಭವಾಗುವಂತೆ ನೋಡಿಕೊಂಡಿರುವುದು ಉತ್ತಮ ವಿಚಾರ.

ಒಟ್ಟಿನಲ್ಲಿ ಋತುಚಕ್ರವನ್ನು ಕೇವಲ ಒಂದು ದೈಹಿಕ ಕ್ರಿಯೆ ಎಂಬಂತೆ ನೋಡದೇ ಅದರ ಹಿಂದಿನ ವೈಜ್ಞಾನಿಕ ಕಾರಣಗಳನ್ನು, ಧಾರ್ಮಿಕ, ಆಧ್ಯಾತ್ಮಿಕ ವಿವರಣೆಗಳನ್ನು ನಾವಿಲ್ಲಿ ಕಾಣಬಹುದು. ಆಧುನಿಕ ವಿಜ್ಞಾನದ ದೃಷ್ಟಿಯಿಂದ ಅಷ್ಟೇನೂ ಪರಿಣಾಮಕಾರಿಯಾಗಿ ತೋರದಿದ್ದರೂ ಲೇಖಕರೇ ಅಭಿಪ್ರಾಯ ಪಡುವಂತೆ ಋತುಚಕ್ರದ ಪರಿಣಾಮಗಳನ್ನು ಎದುರಿಸುವ ಅನೇಕ ಮಹಿಳೆಯರೊಂದಿಗೆ ನಡೆಸಿದ ಸಂವಹನವೇ ಪುಸ್ತಕಕ್ಕೆ ಆಧಾರವಾಗಿದೆ. ಭಾರತೀಯ ತಳಹದಿಯಲ್ಲಿ ಋತುಚಕ್ರದ ಆಗುಹೋಗುಗಳನ್ನು ಚರ್ಚಿಸುತ್ತಾ ಇಂದು ಮೂಢ ನಂಬಿಕೆ ಎನ್ನಿಸಿರುವ ಸುಶೃತ ಸಂಹಿತೆಯ ಋತುಚಕ್ರ ನಿಬಂದನೆಗಳಾದ ದೈಹಿಕ ಸಂಪರ್ಕ, ಅತಿಯಾದ ಮಾತು, ಅತಿಯಾದ ನಗು, ಅಳು, ಅತಿಯಾಗಿ ಶಬ್ದಕ್ಕೆ ತೆರೆದುಕೊಳ್ಳುವಿಕೆ, ಹಗಲು ನಿದ್ರಿಸುವುದು, ಕಣ್ಣಿಗೆ ಕಾಡಿಗೆ ಹಚ್ಚಿಕೊಳ್ಳುವುದು, ತಲೆಗೂದಲು ಬಾಚುವುದು, ಉಗುರು ಕತ್ತರಿಸುವುದು, ಅಭ್ಯಂಜನ ಸ್ನಾನ ಮುಂತಾದವುಗಳನ್ನು ಮಾಡದಿರುವುದಕ್ಕೆ ಆಯುರ್ವೇದದ ಹಿನ್ನೆಲೆಯಲ್ಲಿ ಪುರಾವೆಗಳನ್ನು ಒದಗಿಸಲಾಗಿದೆ. ಅನೇಕ ಋತುಚಕ್ರದ ಆಚರಣೆಗಳಿಗೆ ಸೂಕ್ತ ಕಾರಣಗಳನ್ನು ನೀಡಿದ್ದು, ಕೆಲವು ಅಂಧ ಆಚರಣೆಗಳನ್ನು ಖಂಡಿಸಲಾಗಿದೆ.

‘ಋತು ವಿದ್ಯಾ’ ಕೃತಿ ಇಂಗ್ಲಿಷ್ ವಿಮರ್ಶಕಿ ಡಾ. ದಿವ್ಯಶ್ರೀ ಕೆ ಎಸ್

Mythri Speaks ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಲೇಖಕಿ ಸಿನು ಜೋಸೆಫ್ ದೇಶ ವಿದೇಶಗಳನ್ನು ತಿರುಗಿ ಋತುಚಕ್ರದ ಕುರಿತು ಮಾಹಿತಿ ಸಂಗ್ರಹಿಸಿ ಪುಸ್ತಕವಾಗಿ ನಮ್ಮ ಮುಂದೆ ಇಟ್ಟಿರುವುದು ನಿಜಕ್ಕೂ ಶ್ಲಾಘನೀಯ. ಭಾರತದಲ್ಲಿ ಋತುಚಕ್ರದ ಕುರಿತು ಅರಿವು ಮೂಡಿಸಲು ಅವರು ಪಡುತ್ತಿರುವ ಶ್ರಮ, ಕರ್ನಾಟಕ, ಕೇರಳ, ತಮಿಳು ನಾಡು, ಆಂಧ್ರಪ್ರದೇಶ, ಒಡಿಶಾ ಮುಂತಾದ ಕಡೆಗಳಲ್ಲಿ ಸಂಚರಿಸಿ ಹೆಣ್ಣು ಮಕ್ಕಳು ಮತ್ತು ಮಾತೆಯರನ್ನು ಋತುಚಕ್ರದ ಕುರಿತು ಜ್ಞಾನವಂತರನ್ನಾಗಿಸುವ ಅವರ ಕಾರ್ಯಕ್ಕೆ ನಮ್ಮ ನಮನಗಳು.

ಹೆಣ್ಣಿನ ಪ್ರೌಢಾವಸ್ಥೆಯಿಂದ ಆರಂಭಿಸಿ ಋತುಚಕ್ರ ನಿಲ್ಲುವವರೆಗೂ ನಡೆಯುವ ವಿದ್ಯಮಾನಗಳನ್ನು ವೈಜ್ಞಾನಿಕ, ವೈಚಾರಿಕ, ಧಾರ್ಮಿಕ, ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ನೀಡಿರುವ ಈ ಪುಸ್ತಕ ಎಲ್ಲರಿಗೂ ಒಂದು ಉತ್ತಮ ಕೈಪಿಡಿ. ಸರಳ ಇಂಗ್ಲೀಷ್ ಭಾಷೆಯಲ್ಲಿರುವ ಈ ಪುಸ್ತಕವನ್ನು ಆಸಕ್ತರು ಕೊಂಡು ಓದುವುದರಿಂದ ಭಾರತೀಯ ವೈಜ್ಞಾನಿಕತೆ ಮತ್ತು ವೈಚಾರಿಕತೆಯ ಪರಿಚಯ ಆಗುವುದರಲ್ಲಿ ಅನುಮಾನವಿಲ್ಲ. ಆಯುರ್ವೇದ ವೈದ್ಯರು, ವಿದ್ಯಾರ್ಥಿಗಳು, ಅಷ್ಟೇ ಅಲ್ಲದೇ ಜನಸಾಮಾನ್ಯರೂ ಸುಲಭವಾಗಿ ಅರ್ಥೈಸಬಹುದಾದ ಈ ಪುಸ್ತಕದ ಓದು ಎಲ್ಲರಿಗೂ ಶುಭ ತರಲಿ. ಧನ್ಯವಾದಗಳು.


  • ವಿಮರ್ಶೆಯ ಕನ್ನಡ ಅನುವಾದ : ಸುದರ್ಶನ್ ಪ್ರಸಾದ್ 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW