‘ಕಳೆದುಹೋದ ಕಳೆ’…ಕವನ – ಎ.ಎನ್.ರಮೇಶ್

“ಮಕ್ಕಳ ದಿನಾಚಾರಣೆಯ ಹಾರ್ದಿಕ ಶುಭಕಾಮನೆಗಳೊಂದಿಗೆ.. ಬಾಲ್ಯದ ಬದುಕಿನ ರಿಂಗಣಗಳ ಕವಿತೆ.. ಒಪ್ಪಿಸಿಕೊಳ್ಳಿ..”

ಇಲ್ಲಿ ಅಂದಿನ ದಿನಗಳ ನೆನಪಿನೋಕಳಿಯ ಸಂಭ್ರಮವಿದೆ. ಹಾಗೇ ಇಂದಿನ ಮಕ್ಕಳು ಆ ದಿನಗಳನ್ನು ಮತ್ತೆಂದೂ ನೋಡಲಾರರಲ್ಲ ಎಂಬ ಸಂಕಟವಿದೆ. ಪ್ರಗತಿಯ ಗುಂಗಲ್ಲಿ, ನಮ್ಮ ಪರಂಪರೆಯ ರಂಗನ್ನು ಬಲಿಕೊಡುತ್ತಿರುವುದು ಘೋರ ವಾಸ್ತವವೂ ಹೌದು. ತೀವ್ರ ವಿಷಾದವೂ ಹೌದು. ಏನಂತೀರಾ.?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಮರೆತೇ ಹೋಯಿತೆ ಗಿಲ್ಲಿದಾಂಡು ಬುಗುರಿ
ಮಾಯವಾಯಿತೆ ಗೋಲಿಯಾಟ ಲಗೋರಿ
ಎತ್ತಹೋಯಿತು ಜೂಟಾಟ ಕಣ್ಣಾಮುಚ್ಚಾಲೆ
ನೆನಪಿದೆಯೆ ಮರಕೋತಿಯಾಟ ಕುಂಟಬಿಲ್ಲೆ.!

ಎಲ್ಲಿಹೋಯಿತು ಅಳಿಗುಳಿಮನೆ ಚೌಕಾಬಾರ
ಏನಾಯಿತು ಕವಡೆ ಪಗಡೆ ದಾಳ ಕಾರುಬಾರ
ಮರೆಯಾಯಿತೆ ಐಸುಪೈಸು ಗಿರಿಗಿಟ್ಟಲೆಯಾಟ
ನೆನಪಿದೆಯೇ ನದಿ-ದಡ ಬೀರು ಚೆಂಡಿನಾಟ.!

ಚಿತ್ತಬಿತ್ತಿಯ ತುಂಬೆಲ್ಲಾ ನೆನಪುಗಳ ಸುರಿಮಳೆ
ಬಾಲ್ಯದ ಅಂದಿನ ಸುಗ್ಗಿಮೇಳದ ತಾಳಮದ್ದಳೆ
ಏಕೋ ಮಕ್ಕಳದಿನಾಚರಣೆಯ ಈ ದಿನದಂದು
ಹನಿಯುತಿದೆ ಕಳೆದ ದಿನಗಳ ಭಾವಬಿಂದು.!

ಅದೆಂತ ನಗೆಯ ಸೊಗವಿತ್ತು ನಲಿವ ಸಗ್ಗವಿತ್ತು
ಮನೆಮುಂದೆ ಅಂಗಳವಿತ್ತು ತಿಂಗಳ ಬೆಳಕಿತ್ತು
ಊರ ಒಳ ಹೊರಗೆ ವಿಶಾಲ ಮೈದಾನಗಳಿತ್ತು
ಗಲ್ಲಿಗಲ್ಲಿಗೂ ಗದ್ದಲದ ಗೆಳೆಯರ ಗುಂಪುಗಳಿತ್ತು.!

ಕುಣಿದಾಡುವ ವಯಸು ಕಲ್ಮಶಗಳಿಲ್ಲದ ಮನಸು
ಪುಟ್ಟ ಪುಟ್ಟ ಕಂಗಳೊಳಗೆ ರಾಶಿ ರಾಶಿ ಕನಸು
ಅದೆಷ್ಟು ಚೆಂದದ ಮೋಜು ಮಸ್ತಿಯ ದಿನಗಳು
ಬಾಳಿನ ಮಾಸದ ಮರೆಯದ ಸುವರ್ಣಪಟಗಳು.!

ನೆನಪಾದೊಡನೆ ಎದೆಭಾರದಿ ಕಣ್ಣಾಲಿಗಳು ತೇವ
ಕಳೆದುಕೊಂಡು ಕನಲಿ ಪರಿತಪಿಸುವ ಅನಾಥಭಾವ
ಕಳೆದಿದ್ದು ನಾವೂ? ಕಾಲವೋ? ವಿಧಿಯೇ ಬಲ್ಲ
ದುರದೃಷ್ಟ ಅಂದಿನ ಆ ಭಾಗ್ಯ ನಮ್ಮೀ ಮಕ್ಕಳಿಗಿಲ್ಲ.!


  • ಎ.ಎನ್.ರಮೇಶ್. ಗುಬ್ಬಿ- ಕವಿ, ಕೈಗಾ. 

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW