ಕವಿಯತ್ರಿ ದೀಪಿಕಾ ಬಾಬು ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಅಂತವರಿದ್ದಾರೆ….ಎಚ್ಚರಿಕೆ
ಇನ್ನೂ…
ಧಾರೆ ಕಣ್ಣೀರನ್ನು ,ಸೆರಗು ಬಿಕ್ಕನ್ನು
ಹಿಡಿದು ಕತೆಕೇಳುವವರೂ
ಮೊದಲನೇ ರಾತ್ರಿ
ಹಾಸಿಗೆ ಮೇಲೆ ತೃಪ್ತಿಗಿಂತ
ರಕ್ತ ಹುಡುಕುವವರು
ಕಪಾಟಿನಲ್ಲಿ,ಪುಸ್ತಕದಲ್ಲಿ
ಹಳೆ ಗೆಳೆಯನ ನೆನಪು ಕೆದಕುವವರು
ಹೆಂಡತಿಯ ಸಹೋದ್ಯೋಗಿಯ ಎದುರು
ಸೆರಗು ಜಾರಿತೆಂದು ಕಳ್ಳಕಿಂಡಿಯಲ್ಲಿ ಹಿಣುಕುವವರು!!!!
ಅಂತವರೇ…. ಎಚ್ಚರಿಕೆ
ಇನ್ನೂ…
ಈಗೇನು ಬಹಳ ಸುಲಭ
ಚರಿತ್ರೆ ಭವಿಷ್ಯ ತಡವುವುದು
ಮೊಬೈಲು , mailu ,facebookಕ್ಕು
ನೆನ್ನೆವರೆಗೂ ಚಿಕ್ಕ ಹುಡುಗಿ
ಇಂದು ಹೆಂಡತಿ
ನಾಳೆಯಿಂದ ಥೇಟ್ ಅಮ್ಮ ಅಕ್ಕ !!!
ಆಕೆಯ ಮಿಸ್ಸಾದ ಬಸ್ಸು , ಕಿತ್ತುಹೋದ ಚಪ್ಪಲಿ
ಹೊಟ್ಟೆ ಬೇನೆ, ತಲೆನೋವು,ಹತ್ತಿರದ deadlinu
ಅದ್ಯಾವುದೋ ಬೇಡ
ಕೇವಲ ಕಾಫಿ, ತಿಂಡಿ,ಊಟ
ಹೆರಳು ಮಲ್ಲಿಗೆ,ಹೆರಲು ಹೊಟ್ಟೆ
ಸಕ್ಕತಾಗಿದ್ದರೆ ಸಾಕು ನೋಡ …
ಹೆಣ್ಣಿಗೆ ಇರುವ ದಾರಿ ಒಂದೇ
ಅನಾದಿ ಕಾಲದಿಂದಲೂ
ಬರೀ ಕಣ್ಣೀರು,ಮೌನ, ಸಹಿಷ್ಣುತೆ
ಮಾತಲ್ಲಿ ಕೇಳಿದರೆ
ಲಕ್ಷ ಖರ್ಚು ಮಾಡಿಯಾದರೂ ಬಚಾವು ಮಾಡುವ ಅಮ್ಮ
ತೇಪೆ ಹಾಕಿ ಮುಚ್ಚಿಹಾಕುವುದರಲ್ಲಿ ಅಕ್ಕ – ನಿಷ್ಣಾತೆ
ಉರಿವ ಹೊಟ್ಟೆಗೆ ತುಪ್ಪ
ಸುರಿಯಲು ಬರುತ್ತಾರೆ
ಗೂರಲು ಮುದುಕ ,ಸುಮಂಗಲಿ ಅಜ್ಜಿ
ಮಾವನ ಮಗ,ಅತ್ತೆಯ ತಂಗಿ
ಹುಡುಗಿ,ಹೀಗಲ್ಲ ಬಾಳೋದು
ತಗ್ಗಿ ಬಗ್ಗಿ ನಡಿ
ಬೇಕಾದರೆ ಸಣ್ಣಗೆ ಕೆಮ್ಮು
ಅಪ್ಪಿತಪ್ಪಿಯೂ ಕ್ಯಾಕರಿಸಬೇಡ !!
ಎಲ್ಲೆಲಿಯೂ ಅದೇ ಪಾಠ, ಪ್ರವಚನ
ಅವೇ ಸತ್ತು ಹೋದ ಸೀತೆಯರ ಕತೆ !!!
ಗಂಡನ ಮರ್ಯಾದೆಗೆ
ತರಬಾರದು ಚ್ಯುತಿ
ಸದರ ಹೆಣ್ಣಿನ ಮಾನ
ಅದಕೆಲ್ಲಿದೆ ರಕ್ಷೆ,ಬೆಲೆ !!!
ರಕ್ತ ವಸರುತ್ತಿದ್ದರೆ ಬರೀ ನೋವು
ಉಸಿರುಕಟ್ಟೇ ಹೋಗುತ್ತಿದ್ದರೂ
ಚೀರಬಾರದು
ಅದಲ್ಲವ ನಿಜವಾದ ಹಿಂಸೆ!!!!
ಇಂತಹವರಿದ್ದಾರೆ…ಇನ್ನೂ
ಸೂಳೆ ಪಟ್ಟಕಟ್ಟಿ ಓಡಿ ಹೋದ
ಅಂತ ಗಂಡಂದಿರನ್ನು ಕಾಯುವ
ಕಾಡುವ ಕನಸುಗಳ ಹೊತ್ತುಕೊಂಡು
ಅಲೆಯುವ…
ಎಷ್ಟನೆಯವಳಿರಬಹುದು ಅವಳು
ಇದು ತನ್ನದೇ ಹೆಣ್ಣುಮಕ್ಕಳ ಕಣ್ಣೀರಿಗೆ
ಬಾಯತೆರೆದ ತಾಯ್ನೆಲ !!!
- ದೀಪಿಕಾ ಬಾಬು
