ರಜೆ ಮುಗಿಸಿ ನಮ್ಮೂರಿಗೆ ಬಂದ ನಂತರ ನನ್ನಮ್ಮನಿಗೆ ನನ್ನ ತಲೆಯ ಹೇನು ತೆಗೆಯುವ ತಲೆನೋವು. ದಿನವೂ ಶಾಲೆಯಿಂದ ಬಂದ ಕೂಡಲೇ ನನ್ನ ತಲೆಗೆ ಚೆನ್ನಾಗಿ ಎಣ್ಣೆ ತಟ್ಟಿ ಬಾಚಣಿಗೆಯಲ್ಲಿ ಬಾಚಿ ಬಾಚಿ ಹೇನು ತೆಗೆಯುತ್ತಿದ್ದಳು. ನನ್ನ ತಲೆಯಲ್ಲಿ ಅವುಗಳ ದೊಡ್ಡ ಸಂಸಾರವೇ ಬೀಡುಬಿಟ್ಟಿತ್ತು. ಮುಂದೇನಾಯಿತು ಧಾರಿಣಿ ಮಾಯಾ ಅವರ ಹೇನಿನ ಪುರಾಣವನ್ನು ತಪ್ಪದೆ ಮುಂದೆ ಓದಿ…
ಬಾಲ್ಯದ ಸವಿನೆನಪಿನ ಪ್ರಸಂಗಗಳು ನಿಮಗೂ ಹತ್ತಿರವಾಗಬಹುದು. ಓದಿ, ನಕ್ಕು ಹಗುರಾಗಿ…
ಪ್ರತೀ ಬೇಸಿಗೆ ರಜೆಯಲ್ಲಿ ನಾನು ಅಜ್ಜಿ ಊರಿಗೆ ಹೋಗುತ್ತಿದ್ದೆ. ಅದು ನನ್ನ ತಂದೆಯ ಹುಟ್ಟೂರು. ನನ್ನ ಓರಗೆಯವರೆಲ್ಲರೂ ಬೇರೆಬೇರೆ ಊರುಗಳಿಂದ ಅಜ್ಜಿಮನೆಗೆ ರಜಕ್ಕೆ ಬರುತ್ತಿದ್ದರು. ನಾವೆಲ್ಲರೂ ಮನೆಯೊಳಗೂ ಹೊರಗೂ ಗುಂಪು ಕಟ್ಟಿಕೊಂಡು ದಾಂಧಲೆ ಎಬ್ಬಿಸುತ್ತಿದ್ದೆವು. ಒಮ್ಮೆ ನಮಗೆಲ್ಲಾ ಯಾವುದಾದರೊಂದು ಸಿನಿಮಾ ನೋಡಬೇಕೆಂಬ ಆಸೆಯಾಯಿತು. ಆದರೆ ನನ್ನ ತಂದೆ ಬಹಳ ಸ್ಟ್ರಿಕ್ಟ್ ಆಗಿದ್ದರಿಂದ ಅವರು ನಮ್ಮನ್ನು ಸಿನಿಮಾಕ್ಕೆ ಕಳುಹಿಸುವುದಿಲ್ಲ ಎಂದು ನಮಗೆಲ್ಲ ಗೊತ್ತಿತ್ತು. ಸಿನಿಮಾ ನೋಡಿದರೆ ಮಕ್ಕಳು ಹಾಳಾಗ್ತಾರೆ, ದಾರಿ ತಪ್ಪುತ್ತಾರೆ ಎಂಬುದು ಅವರ ಅಭಿಮತ. ಆದರೆ ಅದೆಲ್ಲಾ ನಮ್ಮ ಪುಟ್ಟ ತಲೆಗೆ ಹೇಗೆ, ಯಾಕೆ ತಾನೇ ಇಳಿದೀತು!! ನಮಗೆ ಬೇಕಿದ್ದಿದು ನಾವೆಲ್ಲರೂ ಒಟ್ಟಿಗೆ ಯಾವುದಾದರೂ ಒಂದು ಸಿನಿಮಾ ನೋಡುವ ಮಜ ಅಷ್ಟೇ.
ನಮ್ಮದೇ ಒಂದು ರೌಂಡ್ ಟೇಬಲ್ ಕಾನ್ಫರೆನ್ಸ್‌ನಲ್ಲಿ ಬಿಸಿಬಿಸಿ ಚರ್ಚೆಯಾಗಿ ಕೊನೆಗೆ ‘ಸತಿ ಸಕ್ಕೂಬಾಯಿ’ ಸಿನಿಮಾ ನೋಡುವುದೆಂದು ನಿರ್ಧಾರವಾಯಿತು. ಅಂತೂ ಹೇಗೋ ಕದ್ದುಮುಚ್ಚಿ ಗುಬ್ಬಿಗಳು ಗೂಡಿನಿಂದ ಹೊರಗೆ ಹಾರಲು ಸಿದ್ಧವಾದವು. ನಾವೆಲ್ಲಾ ಗುಬ್ಬಿಗಳ ದಂಡು ಸೇರಿ ಒಟ್ಟು ಆರು ಮಂದಿ; ಮಕ್ಕಳದೇ ಸೈನ್ಯ. ಊರ ಕೆರೆಯನ್ನು ದಾಟುವಾಗ ಕಾಣುತ್ತಿದ್ದುದು ಈಜಾಡುತ್ತಿದ್ದ ಲಂಗೋಟಿ ಕಟ್ಟಿಕೊಂಡ ಹೈಕಳು, ಸಾಲಾಗಿ ಕಲ್ಲು ಬಂಡೆಯ ಮೇಲೆ ಕುಳಿತು ಬಟ್ಟೆ ಒಗೆಯುತ್ತಿದ್ದ ಹೆಂಗಸರು. ಆ ಬಟ್ಟೆ ಒಗೆತದ ರಪ್… ರಪ್… ಸದ್ದು ಕಿವಿಗೆ ಹಿತಕರವಾಗಿರುತ್ತಿತ್ತು. ನಡಿಗೆಯಲ್ಲೇ ಎರಡು, ಮೂರು ಮೈಲಿ ಸವೆಸಿ ಅಂತೂ ಸಿನಿಮಾ ಟಾಕೀಸು ತಲುಪಿದೆವು. ಸಿನಿಮಾದ ಮೊದಲಿಂದ ಕೊನೆಯದಾಗಿ ಭಗವಂತ ಪ್ರತ್ಯಕ್ಷವಾಗುವವರೆಗೂ ಸಕ್ಕೂಬಾಯಿಯ ಯಾತನೆ ನೋಡೀ ನೋಡೀ, ಮಜವಿರಲಿ ಅಶ್ರುಧಾರೆ ಹರಿಸಿದ್ದೇ ಬಂತು ನಮ್ಮ ಭಾಗ್ಯ. ಧಾರಾಕಾರವಾಗಿ ಹರಿದ ಕಂಬನಿಯನ್ನೊರೆಸಿಕೊಳ್ಳಲು ಕರ್ಚೀಫು ಇಲ್ಲದೇ ಫ್ರಾಕು, ಅಂಗಿಗಳನ್ನೇ ಮುದ್ದೆಯಾಗುವಷ್ಟು ನೆನೆಸಿದ್ದೆವು. ಅಂತೂ ಒಟ್ಟಿಗೆ ಒಡನಾಡಿಗಳೆಲ್ಲಾ ಕೂತು ಸಿನಿಮಾ ನೋಡಿದೆವು ಎಂಬ ಹೈ ಫೀಲಿಂಗ್ ಮನಸ್ಸಿಗೆ ಒಂಥರಾ ಕಿಕ್ ಕೊಟ್ಟಿತ್ತು. ಆದರೆ ಸಿನಿಮಾ ನೋಡುವಾಗಿನ ಖುಷಿ-ಮಜಾ, ವಾಪಸ್ಸು ಮನೆಗೆ ಬರುವಾಗ ಹಾರಿಹೋಗಿತ್ತು. ಇಷ್ಟು ಹೊತ್ತು ಎಲ್ಲಿ ಹೋಗಿದ್ದೆವು ಎಂಬ ನನ್ನ ತಂದೆಯ ಪ್ರಶ್ನೆಗೆ ಉತ್ತರ ತಯಾರು ಮಾಡಿಕೊಳ್ಳಬೇಕಿತ್ತು. ಮನೆಯ ಮುಂಬಾಗಿಲಿಗೆ ಅಡಿಯಿಟ್ಟರೆ ಕಳ್ಳರು ಸಿಕ್ಕಿಹಾಕಿಕೊಳ್ಳುತ್ತೇವೆಂದು, ದನದ ಕೊಟ್ಟಿಗೆಗೆ ತೆರೆದುಕೊಂಡಿದ್ದ ಹಿತ್ತಲ ಬಾಗಿಲಿನಿಂದ ಎಲ್ಲರೂ ಕಳ್ಳಹೆಜ್ಜೆ ಇಡುತ್ತಾ ಒಳಗೆ ಹೋಗುವಾಗ, ಅಶರೀರವಾಣಿಯಂತೆ ಒಂದು ಆವಾಜ಼್ ತೂರಿ ಬಂತು,
’ಏಯ್… ಎಲ್ಲಿ ಹೋಗಿದ್ರೋ?’
ನಮ್ಮ ಜಂಘಾಬಲವೇ ಉಡುಗಿಹೋದಂತಾಯಿತು.
‘ದೇವರ ಸಿನಿಮಾಕ್ಕೆ ಹೋಗಿದ್ದೆವು’ ಎಂದು ಗುಂಪಿನಿಂದ ಒಂದು ಕೀರಲು ಧ್ವನಿ ಹೊರಬಂದಿತು. ಆ ದನಿ ಬೇರೆ ಯಾರದ್ದೂ ಅಲ್ಲ, ನನ್ನದೇ ಆಗಿತ್ತು.
‘ಓಹ್, ಹೌದಾ… ’ ಎಂದರು.

ಅಷ್ಟು ಬೇಗ ಅವರ ಗಂಟುಹುಬ್ಬು ಸಡಿಲವಾಗುವುದಕ್ಕೆ ಒಂದೇ ಕಾರಣ. ಅದು “ದೇವರ ಸಿನಿಮಾ” ಎಂದು ಅವರ ತಲೆಯಲ್ಲಿ ರಿಂಗಣಿಸಿ ನೆಮ್ಮದಿಯುಸಿರುಬಿಟ್ಟಿದ್ದರು. ಅಂತೂ ದೇವರ ಸಿನಿಮಾ ಎಂಬ ಟ್ಯಾಗ್ ಲೈನ್ ಚೆನ್ನಾಗಿಯೇ ವರ್ಕೌಟ್ ಆಗಿತ್ತು.
’ಸರಿ, ಕಾಲು ತೊಳ್ಕೊಂಡು ಒಳಗೆ ಹೋಗಿ. ಸ್ವಲ್ಪ ಓದೋ ಕೆಲಸ ಮಾಡಿ, ಆಗ್ಲಾದ್ರೂ ಉದ್ದಾರ ಆಗ್ತೀರಾ’ ಅಂತ ಎಂದಿನ ಸ್ವಲ್ಪ ಗಡುಸು ಧ್ವನಿಯಲ್ಲೇ ಹೇಳಿದರು.
ಸದ್ಯ ಹೆಚ್ಚಿನ ಬೈಗುಳ ಆಗಲಿಲ್ಲವಲ್ಲ… ಬದುಕಿದೆಯಾ ಬಡಜೀವ ಎಂದು ಎಲ್ಲರೂ ಉಸಿರು ಬಿಗಿಹಿಡಿದು ಒಳಗೋಡಿದೆವು. ಕೊಠಡಿ ಸೇರಿದ ನಾವು ನೆಪಕ್ಕೆ ಪುಸ್ತಕ ಮಾತ್ರ ಮುಂದಿಟ್ಟುಕೊಂಡು ಗಣಿತದ ಲೆಕ್ಕ ಬಿಡಿಸುವ ಬದಲು ಸಿನಿಮಾ ಟೆಂಟಿನಲ್ಲಿ ಕೂತು ಯಾರು ಎಷ್ಟೆಷ್ಟು ಕಣ್ಣೀರು ಹಾಕಿದೆವು ಎಂದು ಲೆಕ್ಕ ಹಾಕುತ್ತ, ಸತಿ ಸಕ್ಕೂಬಾಯಿಯನ್ನು ಗೋಳುಹೊಯ್ದುಕೊಂಡ ಗಯ್ಯಾಳಿ ಅತ್ತೆಗೆ ಹಿಡಿಶಾಪ ಹಾಕುತ್ತಾ ನಮ್ಮ ರೌಂಡ್ ಟೇಬಲ್ ಕಾನ್ಫರೆನ್ಸ್ ಮುಂದುವರೆಯಿತು.
* * *
ಆ ಪುಟ್ಟ ಹಳ್ಳಿಯಲ್ಲಿ ಆಗಾಗ ಜಾತ್ರೆ ನಡೆಯುತ್ತಿತ್ತು. ಅಲ್ಲಿಗೆ ಹೋಗುವ ಅದಮ್ಯ ಆಸೆ ನಮ್ಮೆಲ್ಲರಿಗೂ. ಹೋದ ಮೇಲೆ ಏನಾದರೂ ಕೊಂಡುಕೊಳ್ಳುವ ಬಯಕೆ ಇದ್ದೇ ಇರುತ್ತದಲ್ಲವೇ. ಆದರೇನು ಮಾಡುವುದು. ಕೈ ಮಾತ್ರ ಖಾಲಿ, ನಯಾ ಪೈಸೆ ಇಲ್ಲ. ಹಣಕ್ಕಾಗಿ ಮನೆಯ ಕ್ಯಾಪ್ಟನ್ ತಾತನನ್ನು ಕೇಳಬೇಕಿತ್ತು. ಅವರು ನನ್ನ ತಂದೆಯ ತಂದೆ. ನಮ್ಮ ತಾತ ಸ್ವಲ್ಪ ಜಿಪುಣಾಗ್ರೇಸರ ಎಂದು ನಮಗೆಲ್ಲ ಗೊತ್ತಿದ್ದರೂ ಹೇಗೋ ಕೇಳುವ ಧೈರ್ಯ ಮಾಡಿ ಅವರ ಆಫೀಸ್ ರೂಮಿನ ಮುಂದೆ ನಿಂತು ನಮ್ಮ ಬೇಡಿಕೆಯನ್ನು ಮಂಡಿಸಿದೆವು. ಕೈಗೆ ಸಿಕ್ಕಿದ್ದು ಮಾತ್ರ ಐದು ಪೈಸೆ.., ಹತ್ತು ಪೈಸೆ. ಆಗೆಲ್ಲಾ ನಮ್ಮ ಮುಖ ಚಿಕ್ಕದಾಗುತ್ತಿತ್ತು. ಹಾಗಂತ ನಮಗೇನೂ ಹೆಚ್ಚಿನ ಕಾಂಚಾಣ ನೋಡುವ ಭಾಗ್ಯವೇನೂ ಸಿಗುತ್ತಿರಲಿಲ್ಲ. ವಿಧಿಯಿಲ್ಲ, ಸಿಕ್ಕಿದ್ದೇ ಪಂಚಾಮೃತ ಎಂದು ಕರ್ಚೀಫಿನಲ್ಲಿ ಚಿಲ್ಲರೆಯನ್ನೆಲ್ಲಾ ಗಂಟು ಕಟ್ಟಿ ಜಾತ್ರೆಗೆ ಓಡುತ್ತಿದ್ದೆವು. ಎಲ್ಲರ ನಾಣ್ಯಗಳನ್ನು ಒಟ್ಟು ಮಾಡಿ ಅದರಲ್ಲಿ ಬಣ್ಣದ ಪೀಪಿ, ಕಡಲೆ ಪುರಿ, ಬತ್ತಾಸು ಕೊಂಡು ತಿಂದು ಸಂಭ್ರಮಿಸುತ್ತಿದ್ದೆವು.
ಆದರೆ ಈ ಜಮಾನದ ಕಥೆ ನೋಡಿ. ಹಣ ಕೊಡುವಾಗ ಚಿಲ್ಲರೆ ಇಲ್ಲವೆಂದು ಎಲ್ಲೆಡೆ ಪೇ ಟಿಎಮ್, ಗೂಗಲ್ ಪೇ ಗಳದೇ ದರ್ಬಾರು. ಇಂದು ನಮ್ಮೆಲ್ಲರ ಜೇಬು, ಪರ್ಸಿನಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್‌ಗಳು ಖಾಯಂ ಇರುತ್ತವೆ. ಅದರಲ್ಲಿ ಕಣ್ಣಿಗೆ ಕಂಡ, ಮನಸ್ಸಿಗೆ ಬೇಕೆನಿಸಿದ ವಸ್ತುಗಳು ಎಷ್ಟು ದುಬಾರಿಯಾದರೂ ಕೊಂಡು ಸಂಭ್ರಮಿಸುತ್ತೇವೆ. ಆದರೆ ಅದೆಲ್ಲ ಕ್ಷಣಿಕ ಮಾತ್ರ. ಗಾಳಿ ಬಿಟ್ಟ ಬಲೂನಿನಂತೆ ಉತ್ಸಾಹ ಬಹುಬೇಗನೇ ಜರ್ರೆಂದು ಇಳಿದುಬಿಡುತ್ತದೆ. ಇಂದು ಎಂತಹ ದುಬಾರಿ ಬೆಲೆಯ ವಸ್ತು ಖರೀದಿ ಮಾಡಿದರೂ, ಅಂದಿನ ಆ ಹತ್ತು ಪೈಸೆಯಲ್ಲಿ ಕೊಂಡುಕೊಳ್ಳುತ್ತಿದ್ದ ವಸ್ತುಗಳು ಕೊಡುತ್ತಿದ್ದ ರಸಾನುಭವ ಯಾವುದಕ್ಕೂ ಸಾಟಿಯಿಲ್ಲ.
* * *
ಬಾಲ್ಯದಲ್ಲಿ ಗೆಳತಿಯರೊಡನೆ ಆಡುತ್ತಿದ್ದ ‘ಅಮ್ಮನ ಆಟ,’ ಮನೆಯ ಕಾಂಪೌಂಡಿನ ಒಂದು ಮೂಲೆಯಲ್ಲಿದ್ದ ಸಣ್ಣ ಗೂಡಿನಲ್ಲಿ ಪುಟ್ಟ ಪುಟ್ಟ ಅಡುಗೆ ಪರಿಕರಗಳನ್ನು ಇಟ್ಟುಕೊಂಡು, ಕಾಗದ, ಕಡ್ಡಿಚೂರುಗಳನ್ನು ಇಟ್ಟು ಬೆಂಕಿ ಹೊತ್ತಿಸಿ ನಾಲ್ಕು ಅಕ್ಕಿ ಕಾಳನ್ನು ಬೇಯಿಸಿ, ಅಮ್ಮನಂತೆ ನಾನೂ ಪಾಕಪ್ರವೀಣೆ ಎಂದು ಬೀಗುತ್ತಿದ್ದೆ.
ನನ್ನಮ್ಮನ ಜತನದಿಂದ ಕಂಗೊಳಿಸುತ್ತಿದ್ದ ಹೂದೋಟದಲ್ಲಿ ಸಾಲಾಗಿ ಜೋಡಿಸಿಟ್ಟ ಹೂಕುಂಡಗಳನ್ನು ವಿದ್ಯಾರ್ಥಿಗಳೆಂದು ಪರಿಗಣಿಸಿ ಅವುಗಳಿಗೆ ನನ್ನ ಸಹಪಾಠಿಗಳ ನಾಮಧೇಯವ ಅಂಟಿಸಿ ಮಾರುದ್ದದ ಕಡ್ಡಿ ಹಿಡಿದು ಅಮ್ಮನ ಸೀರೆಯುಟ್ಟು ನನ್ನ ಕ್ಲಾಸ್ ಟೀಚರಿನ ಸ್ಥಾನವನ್ನಲಂಕರಿಸಿ, ಅವರದೇ ಹಾವಭಾವಗಳನ್ನು ಅನುಕರಿಸುತ್ತ ವಿದ್ಯಾರ್ಥಿ(ಹೂಕುಂಡ)ಗಳಿಗೆ ಜಬರ್ದಸ್ತು ಮಾಡುತ್ತಿದ್ದ ನೆನಪಿನ ಬುತ್ತಿಯನ್ನು ಹ್ಯಾಂಗಾ ಮರೆಯಲಿ…
* * *
ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಹೋದಾಗ, ನಾವು ಓರಗೆಯವರೆಲ್ಲಾ ಸಾಲಾಗಿ ಹಾಸಿಕೊಂಡು ಕಥೆ ಹೇಳಿಕೊಳ್ಳುತ್ತಾ ಮಲಗುತ್ತಿದ್ದೆವು. ಆ ಗುಂಪಿನಲ್ಲಿ ಒಬ್ಬಳಿಗೆ ಮಾತ್ರ ಮಾರುದ್ದದ ಜಡೆ. ಅವಳ ಪಕ್ಕದಲ್ಲೇ ಮಲಗುತ್ತಿದ್ದ ನನಗೆ, ಅವಳು ಹೇರಳವಾಗಿ ಸಾಕಿಕೊಂಡಿದ್ದ ಅವಳ ತಲೆಯಲ್ಲಿನ ಹೇನುಗಳು ಜಂಪ್ ಮಾಡಿ ನನ್ನ ತಲೆಗೆ ಏರಿಬಿಡುತ್ತಿದ್ದವು. ನನಗೋ ಹೇನಿನ ಕಡಿತ ತಡೆಯಲಾರದೆ ತಲೆ ಕೆರೆದು ಬುರುಡೆಯೆಲ್ಲಾ ಪರಚಿದ ಗಾಯಗಳಾಗುತ್ತಿದ್ದವು. ಮಾರನೆಯ ದಿನದಿಂದ ಅವಳಿಂದ ಒಂದಷ್ಟು ದೂರದಲ್ಲಿ ಮಲಗಹತ್ತಿದೆ. ನಮ್ಮಿಬ್ಬರ ಮಧ್ಯೆ ಮತ್ತಿಬ್ಬರನ್ನು ನುಸುಳಿಸಿ ನಾನು ಸೇಫ್ ಆಗಲು ಹವಣಿಸಿದ್ದೆ. ಆಗಲಾದರೂ ಅವಳ ತಲೆಯ ಹೇನಿನಿಂದ ನಾ ಪಾರಾಗಬಹುದೆಂಬ ಉಮೇದಿತ್ತು. ಅಯ್ಯೋ ಭಗವಂತಾ! ಇಷ್ಟ್ಯಾಗ್ಯೂ ಮರುದಿನ ನನ್ನ ತಲೆಕೆರೆತ ತಪ್ಪಲಿಲ್ಲ. ಈ ಹೇನುಗಳು ಲಾಂಗ್ ಜಂಪ್ ಮಾಡಿ ನನ್ನ ತಲೆ ಹೊಕ್ಕುತ್ತಿದ್ದವು.
ಅಂತೂ ರಜೆ ಮುಗಿಸಿ ನಮ್ಮೂರಿಗೆ ಬಂದ ನಂತರ ನನ್ನಮ್ಮನಿಗೆ ನನ್ನ ತಲೆಯ ಹೇನು ತೆಗೆಯುವ ತಲೆನೋವು. ದಿನವೂ ಶಾಲೆಯಿಂದ ಬಂದ ಕೂಡಲೇ ನನ್ನ ತಲೆಗೆ ಚೆನ್ನಾಗಿ ಎಣ್ಣೆ ತಟ್ಟಿ ಬಾಚಣಿಗೆಯಲ್ಲಿ ಬಾಚಿ ಬಾಚಿ ಹೇನು ತೆಗೆಯುತ್ತಿದ್ದಳು. ನನ್ನ ತಲೆಯಲ್ಲಿ ಅವುಗಳ ದೊಡ್ಡ ಸಂಸಾರವೇ ಬೀಡುಬಿಟ್ಟಿತ್ತು. ನನ್ನ ಅಜ್ಜಿ ಮನೆಯಂತೆಯೇ ಅವುಗಳದ್ದೂ ಜಾಯಿಂಟ್ ಫ್ಯಾಮಿಲಿ. ಅಪ್ಪ, ಅಮ್ಮ, ಅಜ್ಜಿ, ತಾತ, ಮಕ್ಕಳು, ಮೊಮ್ಮಕ್ಕಳು, ಆಂಟಿ, ಅಂಕಲ್, ಕಸಿನ್ಸ್… ಎಲ್ಲರನ್ನೂ ಎಳೆದೆಳೆದು ಒಂದು, ಎರಡು, ಮೂರು, ನಾಲ್ಕು… ಹೀಗೆ ಲೆಕ್ಕಕ್ಕೇ ಸಿಗದಷ್ಟು ಅವುಗಳನ್ನು ದಿನಪತ್ರಿಕೆಯ ಮೇಲೆ ಉರುಳಿಸಿ ಪಟ್… ಪಟ್… ಎಂದು ಕುಕ್ಕುತ್ತ ಹೀಗೆ ಎಲ್ಲವನ್ನೂ ಮಾರಣಹೋಮ ಮಾಡುವಷ್ಟೊತ್ತಿಗೆ ಒಂದಷ್ಟು ದಿನಗಳು ಹಿಡಿದು ನನ್ನಮ್ಮ ಹೈರಾಣಾಗುತ್ತಿದ್ದಳು. ಪುನಃ ನನ್ನ ಅಜ್ಜಿ ಊರಿಗೆ ಬೇಸಿಗೆ ರಜೆಗೆ ಹೋದಾಗ ಮಾರುದ್ದ ಜಡೆಯ ಓರಗೆಯವಳಿಂದ ನನ್ನ ತಲೆ ತುಂಬ ಹೇನಿನ ಸಂಸಾರ ತುಂಬಿಸಿಕೊಂಡು ನನ್ನೂರಿಗೆ ಬರುತ್ತಿದ್ದೆ.
ನನ್ನ ಬಾಲ್ಯದ ಪ್ರತೀ ಬೇಸಿಗೆ ರಜೆ ಕಳೆದ ಕೂಡಲೇ ‘ನನ್ನಮ್ಮನಿಗೆ ಮತ್ತದೇ ಕೆಲಸ, ಪಟ್… ಪಟ್…’
ಇಷ್ಟೆಲ್ಲಾ ಸವಿಸವಿ ನೆನಪಿನ ಮಧ್ಯೆ ಈ ಹೇನಿನ ಪುರಾಣ ಒಂದು ಕಿರಿಕಿರಿ ನೆನಪಾಗಿ ಉಳಿದುಬಿಟ್ಟಿದೆ.
ಸಿಹಿ-ಕಹಿಯ ಮಿಶ್ರಣವೇ ಬದುಕಿನ ಊರಣವಲ್ಲವೇ..!!
- ಧಾರಿಣಿ ಮಾಯಾ
