ಪತ್ರಕರ್ತರು, ಲೇಖಕರು ಆದ ಗೋಪಾಲಕೃಷ್ಣ ಕುಂಟಿನಿ ಅವರ ʻOnly ಪಾಲಿಟಿಕ್ಸ್ʼ ಪುಸ್ತಕದ ಕುರಿತು ಮಾಕೋನಹಳ್ಳಿ ವಿನಯ್ ಮಾಧವ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ….
ಪುಸ್ತಕ : Only ಪಾಲಿಟಿಕ್ಸ್
ಲೇಖಕರು : ಗೋಪಾಲಕೃಷ್ಣ ಕುಂಟಿನಿ
ಪ್ರಕಾಶನ : ಸಾವನ ಪ್ರಕಾಶನ
ಬೆಲೆ : ೧೭೮.೦೦
ಪುಟ : ೧೭೮
ಜೋಗಿಯವರ ಯಾವುದೇ ಪುಸ್ತಕ ಬಿಡುಗಡೆಯಾದಾಗ, ಜೊತೆಯಲ್ಲಿ ಎಷ್ಟೇ ಪುಸ್ತಕಗಳು ಬಿಡುಗಡೆಯಾದರೂ, ನಾನು ಮೊದಲು ಓದುವುದು ಜೋಗಿಯವರ ಪುಸ್ತಕವನ್ನೇ. ಆದರೆ, ಹೋದ ವರ್ಷ ಅವರ ʻಜಾನಕಿ with lové ಬಿಡುಗಡೆಯಾದಾಗ, ಅದನ್ನು ಓದುವ ತೊಂದರೆ ತೆಗೆದುಕೊಳ್ಳಲಿಲ್ಲ. ಏಕೆಂದರೆ, ಅದು ಜಾನಕಿ ಕಾಲಂನಲ್ಲೇ ಓದಿದ್ದೆ.
ಈ ವರ್ಷ ಬಿಡುಗಡೆಯಾದ ಜೋಗಿಯ ʻಕಥೆಗಾರರ ಕೈಪಿಡಿʼ ಪುಸ್ತಕ ಬಿಡುಗಡೆಯಾಯಿತು. ಅದರ ದಪ್ಪ ನೋಡಿ ಎದೆ ಧಸಕ್ಕೆಂದಿತು. ಅಷ್ಟು ದೊಡ್ಡ ಪುಸ್ತಕಗಳನ್ನು ನಾನು ಓದಿಲ್ಲ ಅಂತಲ್ಲ. ಆದರೆ, ನೂರೆಂಟು ವಿಷಯಗಳಲ್ಲಿ ಕೈ ಹಾಕಿ, ಎಲ್ಲದಕ್ಕೂ ಸಮಯ ಒದಗಿಸಲು ಒದ್ದಾಡುವಾಗ, ಪುಸ್ತಕ ಓದಲು ಅಷ್ಟಾಗಿ ಪುರಸೋತ್ತು ಸಿಗುತ್ತಿರಲಿಲ್ಲ ಅಷ್ಟೆ. ಯಾವ ಪುಸ್ತಕವನ್ನು ಹಿಡಿದರೂ ಒಂದೇ ಸಲಕ್ಕೆ ಓದಿ ಮುಗಿಸದಿದ್ದರೆ ನನಗೆ ಸರಿಯಾಗುವುದಿಲ್ಲ.
ಹಾಗಾಗಿ, ಜೋಗಿಯ ಪುಸ್ತಕವನ್ನು ಬದಿಗಿಟ್ಟು, ಅವರ ಬಾಲ್ಯದ ಗೆಳೆಯ ಮತ್ತು ನಮ್ಮ ಕಥೆ ಕೂಟದ ಅಡ್ಮಿನ್ ಆಗಿರುವ ಗೋಪಾಲಕೃಷ್ಣ ಕುಂಟಿನಿಯವರ ʻOnly ಪಾಲಿಟಿಕ್ಸ್ʼ ಪುಸ್ತಕ ಕೈಗೆತ್ತಿಕೊಂಡೆ.
ಕುಂಟಿನಿಯವರ ಮಾರಾಪು, ಪುರುಷಾವತಾರ ಮತ್ತು ಸಣ್ಣ ಕಥೆಗಳನ್ನು ಓದಿದವರಿಗೆ, ಅವರ ಬರಹ ಒಂದು ವಿಸ್ಮಯ ಎಂದೆನಿಸುತ್ತದೆ. ಅವರು ಓ ಹೆನ್ರಿ, ಜೆಫ್ರಿ ಆರ್ಚರ್, ಖುಷ್ವಂತ್ ಸಿಂಘ್ ತರಹದ ಸಣ್ಣ ಕಥೆಗಳನ್ನು ಬರೆಯುವುದಿಲ್ಲ. ಆದರೆ, ಅವರ ಕಾದಂಬರಿ, ನೀಳ್ಗತೆಗಳೇ ಇರಲಿ ಅಥವಾ ಸಣ್ಣ ಕಥೆಗಳೇ ಇರಲಿ, ʻA Twist in the Taleʼ ಇರುವುದಂತೂ ಗ್ಯಾರಂಟಿ. ಆ ಟ್ವಿಸ್ಟ್ ಬರುವ ಹೊತ್ತಿಗೆ, ಲೌಕಿಕ ಮತ್ತು ಅಲೌಕಿಕಗಳು ಎದುರು ಬದುರಾಗಿ ನಿಂತು, ನಮ್ಮನ್ನು ಒಂದು ಕ್ಷಣ ಗೊಂದಲಕ್ಕೆ ತಳ್ಳಿ, ಆನಂತರ ಬಹಳ ಹೊತ್ತು ಜೀವನದ ವಿಷಯದಲ್ಲಿ ಗಾಢವಾದ ಚಿಂತನೆಗೆ ದೂಡುತ್ತದೆ. ಹಾಗಾಗಿ, ಕುಂಟಿನಿಯವರ ಪುಸ್ತಕದ ಕೊನೆಯ ವಾಕ್ಯದಿಂದ ಓದಬೇಕೋ, ಅಥವಾ ಎಲ್ಲಾ ಪುಸ್ತಕಗಳಂತೆ ಮೊದಲಿನಂದ ಓದಬೇಕೋ ಎನ್ನುವ ಜಿಜ್ಞಾಸೆ ನನ್ನನ್ನು ಯಾವಾಗಲೂ ಕಾಡುತ್ತಿರುತ್ತದೆ.

ಕುಂಟಿನಿಯವರು ಪತ್ರಕರ್ತರೂ ಆಗಿದ್ದರು ಎನ್ನುವುದು ಇನ್ನೊಂದು ವಿಷಯ. ಆದರೆ, ಪ್ರತಿ ಬರಹದಲ್ಲೂ ತಮ್ಮದೇ ಛಾಪು ಮೂಡಿಸುವ ಕುಂಟಿನಿಯವರು, ʻOnly ಪಾಲಿಟಿಕ್ಸ್ʼ ವಿಷಯದ ಬಗ್ಗೆ ಪುಸ್ತಕ ಹೇಗೆ ಬರೆಯಬಹುದು? ಎನ್ನುವ ಕುತೂಹಲ ನನಗೆ ಇತ್ತು. ಮತ್ತೆ, ಅದನ್ನು ಕೊನೆ ಹೇಗೆ ಮಾಡುತ್ತಾರೆ ಎನ್ನುವ ಬಗ್ಗೆ ನನ್ನದೇ ಆದ ಕೆಲವು ಸಂಶಯಗಳು ಇದ್ದವು.
ಸದ್ಯ… ಕುಂಟಿನಿಯವರು ನನ್ನನ್ನು ತಪ್ಪು ಸಾಬೀತು ಮಾಡುವ ಯಾವುದೇ ಪ್ರಯತ್ನ ಮಾಡಲಿಲ್ಲ. ಅರವತ್ತು ಸಣ್ಣ ಸಣ್ಣ ಘಟನಾವಳಿ/ಕಥೆ/ವಿಡಂಬನೆಗಳನ್ನೊಳಗೊಂಡ, ರಾಜಕೀಯದ ಬಗೆಗಿನ ಈ ಪುಸ್ತಕದ ಕೊನೆಯ ವಾಕ್ಯವೇ ನನಗೆ ಬಹಳ ಇಷ್ಟವಾಗಿದ್ದು ಮತ್ತು ಜಿಜ್ಞಾಸೆಗೆ ದೂಡಿದ್ದು.
ಆ ಕೊನೆಯ ವಾಕ್ಯವೇ, ʻಕಡುಬಡ ದೇಶವೊಂದರ ರಾಜನೊಬ್ಬ ಇದಕ್ಕಿಂತ ಸುಂದರ ಕನಸು ಕಾಣಲು ಸಾಧ್ಯವಿಲ್ಲʼ.
ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ, ʻThis beats all logics of modern politics.ʼ ಏಕೆಂದರೆ, ಮೊದಲನೆಯದಾಗಿ ಬಡವರಿಗೆ ಅಂದರೆ ಇಂದಿನ ಅರ್ಥದಲ್ಲಿ ʻdigital divideʼ ಗೆ ಒಳಪಟ್ಟವರಿಗೆ ಕನಸು ಕಾಣುವ ಹಕ್ಕು ಇದೆಯೋ ಇಲ್ಲವೋ ಎನ್ನುವುದೇ ದೊಡ್ಡ ಪ್ರಶ್ನೆ. ಆದರೆ, ಇಥಿಯೋಪಿಯಾದಂತಹ ಬಡ, ಕ್ಷಾಮ ಪೀಡಿತ, ಬರಡು ದೇಶದ ಯುವ ಅಧ್ಯಕ್ಷನೊಬ್ಬ, ಇನ್ನು ಇಪ್ಪತ್ತು ವರ್ಷಗಳಲ್ಲಿ, ತನ್ನ ದೇಶದಲ್ಲಿ ನಾನ್ನೂರು ಕೋಟಿ ಮರಗಳು ಬೆಳೆದು ನಿಂತಿರಬೇಕು ಮತ್ತು ಅದರ ಮೂಲಕ, ತನ್ನ ದೇಶದಲ್ಲೂ ಮಳೆಯಾಗಿ, ಅದು ಸಂಪದ್ಭರಿತವಾಗಿ ಮುಂದುವರೆಯಬೇಕು ಎನ್ನುವ ಕನಸು.
ಮುಂದುವರೆದ ದೇಶಗಳು ತಮ್ಮ ಪ್ರಕೃತಿ ಸಂಪತ್ತನ್ನು ಸರ್ವನಾಶದತ್ತ ತಳ್ಳುವಾಗ, ಅಬಿ ಆಲಿ ಅಹ್ಮದ್ ಎಂಬ ಪ್ರಧಾನಿ, ತಾವೇ ಸರ್ವನಾಶ ಮಾಡಿದ ಪ್ರಕೃತಿಗೆ ಶರಣಾಗಿ, ಅದನ್ನು ಪುನಶ್ಚೇತನಗೊಳಿಸಲು ಹೊರಟಿರುವುದು, ಆರ್ಥಿಕತೆಯ ದೃಷ್ಟಿಯಿಂದ ಚರ್ಚಾಸ್ಪದ ವಿಷಯವಾಗಿರಬಹುದು. ಆದರೆ, ಇಪ್ಪತ್ತೊಂದನೇ ಶತಮಾನದ ಅಚ್ಚರಿ.

ಇನ್ನುಳಿದಂತೆ, ಕುಂಟಿನಿಯವರ ಪುಸ್ತಕ ಮೊದಲನೇ ಪುಟದಿಂದ ಓದಲಾರಂಭಿಸಿದಾಗ, ಹೆಚ್ಚಿನ ಕಥೆಗಳಲ್ಲಿ ಅಚ್ಚರಿಯಾಗಿರಲಿಲ್ಲ. ಏಕೆಂದರೆ, ರಾಜಕೀಯ ವರದಿಗಾರಿಕೆಯಲ್ಲಿ ಇಂತಹ ಎಷ್ಟೋ ಘಟನಾವಳಿಗಳು ನಮ್ಮೆದುರೂ ನಡೆದಿವೆ. ಕೆಲವೊಮ್ಮೆ ನಕ್ಕು, ಕೆಲವೊಮ್ಮೆ ಕಿರಿಕಿರಿಯಾಗಿ ಸುಮ್ಮನಾಗುವಂತಹ ಘಟನೆಗಳು. ಇವುಗಳಲ್ಲಿ ಯಾವ ಪಾತ್ರಕ್ಕೂ ಹೆಚ್ಚಿನ ಸಾಂತ್ವನ ಹೇಳದೆ, ನಿರ್ಭಾವುಕರಾಗಿ, ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದಾರೆ. ಆದರೆ, ಪಾತ್ರ ಮತ್ತು ಪ್ರಸಂಗಗಳು ಬೇರೆ ಅಷ್ಟೆ. ಆದರೆ, ಕುಂಟಿನಿಯವರು ಇಂತಹ ಸಣ್ಣ ಸಣ್ಣ ಪ್ರಸಂಗಗಳನ್ನು ಇಡೀ ಪುಸ್ತಕ ಬರೆದಿದ್ದಾರಾ? ಎನ್ನುವ ಪ್ರಶ್ನೆ ಮೂಡಿತು.
ಈ ಪ್ರಸಂಗಗಳ ಹೆಡ್‌ಲೈನ್‌ಗಳು ಸಹ, ಫೈಲ್, ಟ್ರಾನ್ಸ್‌ಫರ್, ಡ್ಯಾಮ್, ಮೆಮೊರಿ, ಬುಕ್‌ವರ್ಮ್, ಗುಡ್‌ಮ್ಯಾನ್… ಹೀಗೇ ರಾಜಕೀಯಕ್ಕೆ ಸಂಬಂಧಪಟ್ಟವೇ ಆಗಿವೆ. ಆದರೆ, ಸ್ಟಂಬಲ್ ಎಂಬ ಪ್ರಸಂಗ ಓದುವಾಗ ನನ್ನ ಮುಖದಲ್ಲೊಂದು ಮುಗೂಳ್ನಗೆ ಮೂಡಿತು. ಏಕೆಂದರೆ, ಆ ಲೇಖನದಲ್ಲಿ ಕುಂಟಿನಿಯವರು ಇಂದಿನ ರಾಜಕೀಯ ಪ್ರಸಂಗಗಳಿಂದ ಸ್ವಲ್ಪ ಆಚೆ ಓಡಾಡಿದ್ದರು. ಕೊನೆಯಲ್ಲಿ ಬಂದಾಗ, ಹದಿನೇಳು ಲೇಖನಗಳಲ್ಲಿ ʻಪಾಠʼಗಳಿವೆ. ಸಾಧಾರಣವಾಗಿ, ದೈನಂದಿನ ಜೀವನದಲ್ಲಿ ಯಾರಾದರೂ ವಿಷಯಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ತಿರುಚಿದರೆ, ಅವರಿಗೆ ʻಪಾಲಿಟಿಕ್ಸ್ʼ ಮಾಡ್ತಾನೆ ಎನ್ನುತ್ತೇವೆ. ಈ ʻಪಾಠʼಗಳಲ್ಲಿ, ಕೆಲವು ನಮ್ಮ ಸಂಸಾರದ ರಾಜಕೀಯ ಮತ್ತು ಸಮಾಜದ ರಾಜಕೀಯಗಳಿವೆ. ಒಳ್ಳೆಯ ಮೆಸೆಜ್ ಗಳಿವೆ.
ಇಡೀ ಪುಸ್ತಕವನ್ನು ಒಂದೆರೆಡು ಘಂಟೆಗಳಲ್ಲಿ ಓದಿ ಮುಗಿಸಿದಾಗ ಅನ್ನಿಸಿದಿಷ್ಟು: ʻThis is not just about Only Politics…ʼ
- ಮಾಕೋನಹಳ್ಳಿ ವಿನಯ್ ಮಾಧವ
