ಕಳೆದ ವರ್ಷ ತಾನೇ ಹಿಜಾಬ್, ಕರ್ನಾಟಕದಲ್ಲಿ ಉಂಟು ಮಾಡಿದ ವಿವಾದದ ಹಿನ್ನೆಲೆಯಲ್ಲಿ, ಅದಕ್ಕೆ ಮೊದಲೇ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದನ್ನು ವಸ್ತುವನ್ನಾಗಿ ಮಾಡಿಕೊಂಡು ಬರೆದ ಮೊದಲ ಕಾದಂಬರಿ ‘ ಹಿಜಾಬ್ ‘ ಈ ಕೃತಿಯನ್ನು ಗುರುಪ್ರಸಾದ್ ಕಾಗಿನೆಲೆ ಅವರು ಬರೆದಿದ್ದಾರೆ. ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಹಿಜಾಬ್
ಲೇಖಕರು : ಗುರುಪ್ರಸಾದ್ ಕಾಗಿನೆಲೆ
ಪ್ರಕಾಶನ : ಅಂಕಿತಾ ಪ್ರಕಾಶನ

ಈ ಕಾದಂಬರಿ ಪ್ರಾರಂಭವಾಗುವುದೆ, ಹಿಜಾಬ್ ಧರಿಸಿದ ಸೊಮಾಲಿಯಾದ ಮುಸ್ಲಿಂ ಗರ್ಭಿಣಿ ಹೆಣ್ಣು ಮಗಳು, ಇವರು ಕೆಲಸ ಮಾಡುವ ಆಸ್ಪತ್ರೆಗೆ ಸೇರಿ, ತನಗೆ ಸಹಜ ಹೆರಿಗೆ ಮಾಡಿಸಲು ಒತ್ತಾಯಿಸುವ, ಮತ್ತು ಸಿಸೇರಿಯನ್ ಹೆರಿಗೆಯನ್ನು ನಿರಾಕರಿಸುವ ಮೂಲಕ. ಮಗುವನ್ನು ಉಳಿಸಲು ಸಿಸೇರಿಯನ್ ಮಾಡದೆ ಗತ್ಯಂತರವಿಲ್ಲ ಎಂದು ಅವಳಿಗೆ ಮತ್ತು ಜೊತೆಗೆ ಬಂದ ಗಂಡ ಹಸನ್ ಗೆ ಮನವರಿಕೆ ಮಾಡಿಕೊಡುವ ಯತ್ನಿಸಿದರು, ಅವರಿಗೆ ಮನವರಿಕೆ ಆಗುವುದಿಲ್ಲ. ಮಗು ಸತ್ತರು ಪರವಾಗಿಲ್ಲ ಸಿಸೇರಿಯನ್ ಮಾಡುವುದಕ್ಕೆ ಅವರು ಸಮ್ಮತಿಸುವುದಿಲ್ಲ.ಆದರೆ ಜೀವ ಉಳಿಸಲು ಅದನ್ನು ಬಿಟ್ಟು ಬೇರೆ ದಾರಿ ಇಲ್ಲ, ಎಂದು ಡಾಕ್ಟರ್ ರಾಧಿಕಾ ಅವಳನ್ನು ಬಲವಂತವಾಗಿ ಒಪ್ಪಿಸಿ, ಸಿಸೇರಿಯನ್ ಹೆರಿಗೆಯ ಮೂಲಕ ತಾಯಿ ಮಗು ಇಬ್ಬರ ಜೀವಿಗಳನ್ನು ಉಳಿಸುತ್ತಾರೆ. ಇದರಿಂದ ಕೋಪಗೊಂಡ ಅವಳ ಗಂಡ ಡಾಕ್ಟರ್ ವಿರುದ್ಧ ಮೆಡಿಕಲ್ ಬೋರ್ಡ್ ಗೆ ಆಕ್ಷೇಪಣೆ ಸಲ್ಲಿಸುತ್ತಾನೆ. ಆಗ ಇವರಿಗೆ ಅಲ್ಲಿಂದ ಕರೆಬಂದು ವಿಚಾರಣೆ ಎದುರಿಸಬೇಕಾಗುತ್ತದೆ. ತಾಯಿ ಮಗುವಿನ ಜೀವ ಉಳಿಸಲು ಅದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ ಎಂದು ತಮ್ಮ ಉಪಕ್ರಮವನ್ನು , ಡಾಕ್ಟರ್ ರಾಧಿಕಾ ಮತ್ತು ಅವಳ ವೈದ್ಯಾಧಿಕಾರಿ ಡಾ.ಗುರು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಮಗುವನ್ನು ಹೆತ್ತ ತಾಯಿ ಫಾದುಮಾ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಯಾವ ಕಾರಣವನ್ನು ಕೊಡದೆ. ಮತ್ತು ಅದರ ಕುರಿತು ಯಾವುದೇ ಆಕ್ಷೇಪಣೆಗಳು ದಾಖಲಾಗುವುದಿಲ್ಲ. ಅದರಂತೆ ಇನ್ನೋರ್ವ ಸೊಮಾಲಿಯಾ ಹೆಣ್ಣು ಆತ್ಮಹತ್ಯೆ ಮಾಡಿಕೊಂಡಾಗ, ಸಿಸೇರಿಯನ್ ಅವರ ಧಾರ್ಮಿಕ ನಿಯಮಗಳಿಗೆ ವಿರುದ್ಧವಾಗಿದೆ ಎಂಬ ನಂಬಿಕೆ, ಸೊಮಾಲಿಯಾದಿಂದ ಬಂದ ಜನರ ಪ್ರತಿಭಟನೆಗೆ ಕಾರಣವಾಗುತ್ತದೆ. ಆಗ ಜನರಿಗೆ ಸಿಸೇರಿಯನ್ ಹೆರಿಗೆಯಿಂದ ಯಾವುದೇ ತೊಂದರೆಯಾಗುವುದಿಲ್ಲ, ಎಂದು ಸಾಬೀತು ಪಡಿಸಲು, ಅದನ್ನು ಮಾಧ್ಯಮದವರ ಎದುರು ಮಾಡಿಸಲು, ಅವರ ಪ್ರತಿನಿಧಿಗಳಾದ ಸಾನ್ವಿ ಕ್ರಿಸ್ಟಿನಾ ಮುಂದೆ ಬರುತ್ತಾರೆ.ಇದಕ್ಕೆ ಮೆಡಿಕಲ್ ಬೋರ್ಡ್ ಕುಮ್ಮಕ್ಕು ನೀಡಿತು. ಅದಕ್ಕೆ ಪ್ರಗತಿಪರ ಸೊಮಾಲಿಯಾ ಗರ್ಭಿಣಿ ಸ್ತ್ರೀಯರು ಮುಂದೆ ಬರುತ್ತಾರೆ. ಅದಕ್ಕೆ ಪ್ರಗತಿ ಪರ ಸೊಮಾಲಿಯಾ ಯುವತಿಯರ ಸಂಘಟನೆಯ ಬೆಂಬಲ ಕೂಡ ದೊರೆಯುತ್ತದೆ.ಇದರಿಂದಾಗಿ ಡಾಕ್ಟರ್ ರಾಧಿಕಾಗೆ ವ್ಯಾಪಕ ಪ್ರಚಾರ ದೊರೆಯುತ್ತದೆ.
ಇದಾದ ಎರಡು ವರ್ಷಗಳ ನಂತರ, ಮೊದಲು ಸಿಸೇರಿಯನ್ ಹೆರಿಗೆಯನ್ನು ಪ್ರತಿಭಟಸಿದ ಹಸನ್, ಅದೇ ಹೆರಿಗೆಯನ್ನು ಮಾಡಿಸಲು, ತನ್ನ ತಂಗಿಯನ್ನು ಸ್ವತಃ ಕರೆದುಕೊಂಡು ಬರುತ್ತಾನೆ. ಇದು ಅವರಲ್ಲಿ ಆದ ಪರಿವರ್ತನೆಗೆ ಸಾಕ್ಷಿ.
ಇದಲ್ಲದೆ ಕೆಲವು ಮುಸ್ಲಿಂ ಸಮುದಾಯದ ಯುವಕರು ದಾರಿತಪ್ಪಿ ಜಿಹಾದ್ ಗಳಾಗಿ, ಅಂತಾರಾಷ್ಟ್ರೀಯ ಉಗ್ರಗಾಮಿಗಳ ಜೊತೆಗೆ ಕೈ ಜೋಡಿಸುವ ಈಚಿನ ಪ್ರಕ್ರಿಯೆಯನ್ನು, ಅದನ್ನು ಪ್ರತಿಭಟನೆ ಮಾಡಿ,ಅದರ ವಿರುದ್ಧ ಜಾಗೃತಿ ಮೂಡಿಸುವ ಸಂಘಟನೆಗಳ ಪ್ರಯತ್ನಗಳನ್ನು ಕೂಡ ಈ ಕಾದಂಬರಿ ಒಳಗೊಂಡಿದೆ.

ಕನ್ನಡ ನಾಡಿನಿಂದ ಅಮೇರಿಕಾಗೆ ವಲಸೆ ಹೋಗುವ, ಅಲ್ಲಿ ತಮ್ಮ ಪ್ರತಿಭೆಯಿಂದ ಬೆಳಗುವ ಕನ್ನಡಿಗರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಅಲ್ಲಿ ಮಾಡುವ ಪ್ರಯತ್ನಗಳನ್ನು, ಈ ಕೃತಿ ಪ್ರಾಸ್ತಾವಿಕವಾಗಿ ಒಳಗೊಂಡಿದೆ. ಅದಕ್ಕೆ ನಿದರ್ಶನವಾಗಿ ಇಲ್ಲಿ ಬರುವ ಡಾಕ್ಟರ್ ಗುರು, ಶ್ರೀಕಾಂತ್ ಹಾಗೂ ಡಾಕ್ಟರ್ ರಾಧಿಕಾ ಒಂದೇ ಮನೆಯಲ್ಲಿ ನೆಲೆಸುವುದು ಮತ್ತು ಅವರ ನಡುವಿನ ಆತ್ಮೀಯತೆಯನ್ನು ನೋಡಬಹುದು. ಅಲ್ಲದೆ ಸಂಕಟದ ಸಂದರ್ಭದಲ್ಲಿ ರಾಘವೇಂದ್ರರನ್ನು ಮೊರೆಹೊಗುವುದು, ಸಸ್ಯಾಹಾರ ಕ್ಕೆ ಅಂಟಿಕೊಳ್ಳುವುದು ಹಾಗೂ ಗಾಯಿತ್ರಿ ಮಂತ್ರವನ್ನು ಕಮೋಡಿನ ಮೇಲೆ ಕೂತು ನೆನಪು ಮಾಡಿಕೊಂಡದ್ದು ಸಾಕ್ಷಿ. ಹಲವು ಕಡೆ ಅವರು ಬಳಸುವ ಕನ್ನಡದ ಶಬ್ದಗಳು ಅವರ ಕನ್ನಡದ ಬೇರುಗಳನ್ನು ಸಾಬೀತು ಪಡಿಸುತ್ತದೆ.
ಏಕಕಾಲಕ್ಕೆ ವಿಭಿನ್ನ ವರ್ಗದ ವಲಸೆ ಹೋಗುವವರು ಎದುರಿಸುತ್ತಿರುವ ಸವಾಲು ಮುಖಾಮುಖಿಯ ಅನಾವರಣದ ಮೂಲಕ, ಇದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮಕಾಲೀನತೆಯನ್ನು ಹೊಂದಿದೆ. ಅಮೇರಿಕಾಗೆ ಕರಗಿಸುವ ಕಡಾಯ ಎಂಬ ರೂಪಕ ( ಮೆಲ್ಟಿಂಗ್ ಪಾಟ್) ಸೃಷ್ಟಿ ಲೇಖಕರ ಸೃಜನಶೀಲ ಪ್ರತಿಭೆಗೆ ಸಾಕ್ಷಿ.
ಇಂತಹ ಮಹತ್ವದ ಕೃತಿಯನ್ನು ನನಗೆ ಕೊಟ್ಟು ಓದಿಸಿದ ನನ್ನ ಶಿಷ್ಯೆ ಸುಮಾ ದ್ವಾರಕಾನಾಥ್ ಗೆ ವಂದನೆ.. ಲೇಖಕರಾದ ಗುರುಪ್ರಸಾದ್ ಕಾಗಿನೆಲೆ ಅವರಿಗೆ, ಇದನ್ನು ಪ್ರಕಟಿಸಿದ ಗೆಳೆಯರು ಸಹಪಾಠಿಗಳು ಆದ, ಅಂಕಿತದ ಪ್ರಭಾ ಮತ್ತು ಪ್ರಕಾಶ್ ದಂಪತಿಗೆ ಅಭಿನಂದನೆ .
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.
