ಧಾರ್ಮಿಕ ಅಮಲಿನಲ್ಲಿ ಮಾನವನ ಪ್ರೀತಿ ಸೋಲದಿರಲಿ…!



ಹಿಜಾಬ್ ಧರಿಸಿ ಕಾಲೇಜಿಗೆ ಹೋಗಬೇಕೇ ಬೇಡವೇ ಎಂಬ ವಿಚಾರ ಪ್ರಸ್ತುತ ನ್ಯಾಯಾಲಯದ ಮುಂದಿದೆ. ಸಂವಿಧಾನ ಹಾಗೂ ನ್ಯಾಯಾಂಗಕ್ಕೆ ತಲೆಬಾಗಬೇಕಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ದೇಶದ ಭವಿಷ್ಯ ನಿಂತಿರುವುದು ವಿವೇಕ ಕಲಿಸುವ ಶಿಕ್ಷಣದಿಂದಲೇ ಹೊರತು ಭಾವನಾತ್ಮಕ, ಭ್ರಮಾತ್ಮಕ ಹಾಗೂ ಧಾರ್ಮಿಕ ವಿವಾದಗಳ ತಳಹದಿಯಿಂದಲ್ಲ ಎಂಬ ಸರಳ ಸತ್ಯ ಎಲ್ಲರೂ ಅರಿಯಬೇಕಿದೆ ಹಿರಿಯೂರು ಪ್ರಕಾಶ್ ಅವರ ಲೇಖನಿಯಲ್ಲಿ ಮುಂದೆ ಓದಿ…

ಮೂಕ ಪ್ರಾಣಿಗಳಿಗೂ ಮನುಷ್ಯರಿಗೂ ಇರಬಹುದಾದ ಒಂದು ಪ್ರಮುಖ ವ್ಯತ್ಯಾಸವೆಂದರೆ ಸಾಮಾನ್ಯವಾಗಿ ಪ್ರಾಣಿಗಳಲ್ಲಿ ಕಂಡುಬಾರದ ವಿದ್ಯೆ, ವಿವೇಕ ,ವಿವೇಚನೆ , ಬುದ್ದಿವಂತಿಕೆ ಹಾಗೂ ಮನುಷ್ಯತ್ವಗಳು ಮಾನವರಲ್ಲಿರುತ್ತವೆ ಎಂಬುದು ! ಆದರೆ ಸಮಾಜದಲ್ಲಿ ನೆಡೆಯುತ್ತಿರುವ ಕೆಲವು ಘಟನೆಗಳನ್ನು ನೋಡಿದಾಗ ಹಲವು ಸಂದರ್ಭಗಳಲ್ಲಿ ಮನುಷ್ಯರ ವರ್ತನೆಗಳಿಗಿಂತ ಪ್ರಾಣಿಗಳೇ ಎಷ್ಟೋ ಮೇಲು ಎನಿಸಿಬಿಡುತ್ತದೆ. ಮನುಷ್ಯರಿಗೆ ಅಗಾಧವಾದ ಬುದ್ದಿಶಕ್ತಿ, ಅತ್ಯುನ್ನತ ವಿದ್ಯೆ, ಎಲ್ಲವೂ ಇದ್ದು ಕೊನೆಗೆ ಕನಿಷ್ಠ ವಿವೇಕ, ಸಾಮಾನ್ಯ ವಿವೇಚನೆ ಹಾಗೂ ಮಾನವಪ್ರೀತಿಯ ಕೊರತೆಯಿಂದ ತೀರಾ ಸಿನಿಕನಾಗಿ ವರ್ತಿಸುತ್ತಾ ಸಾಮಾಜಿಕ ಸಾಮರಸ್ಯವನ್ನು‌ ಕದಡಿಬಿಡುತ್ತಾರೆ. ಇದಕ್ಕೆ ಸಾಕ್ಷಿಯಾಗಿ ನಿತ್ಯ ಹತ್ತಾರು ಘಟನೆಗಳನ್ನು ಉದಾಹರಿಸಬಹುದಾದರೂ ಕಳೆದ ಒಂದು‌ ವಾರದಿಂದ ರಾಜ್ಯದಲ್ಲಿ ಭುಗಿಲೆದ್ದಿರುವ ಕಾಲೇಜು‌ ವಿಧ್ಯಾರ್ಥಿಗಳ #ಹಿಜಾಬ್#ಕೇಸರಿ_ಶಾಲುಗಳ ಸುತ್ತ ಸುತ್ತುವರಿದ ವಿವಾದ, ಕುಮ್ಮಕ್ಕು, ಕಿರಿಕ್ಕು- ಪ್ರಚೋದನೆ ಪ್ರಲೋಭನೆ ಒಂದು ಲೇಟೆಸ್ಟ್ ಸೇರ್ಪಡೆಯಷ್ಟೇ !

ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ಶುರುವಾದ ಈ ಹಿಜಾಬ್ ( ಶಿರವಸ್ತ್ರ ) ವಿವಾದ ಕರಾವಳಿಯ ಕೆಲವು ಪ್ರದೇಶಗಳಲ್ಲಿ‌ ವ್ಯಾಪಿಸಿ ದಿನೇ ದಿನೇ ಇಡೀ ರಾಜ್ಯಾದ್ಯಂತ ವೈರಸ್ ನಂತೆ ಹರಡುತ್ತಲಿದೆ. ಅಂತೂ ಯಾವುದಾದರೊಂದು ಈ ತರಹದ ಹೊಟ್ಟೆಗೆ ಅನ್ನ ಕೊಡದ, ಮನಸಿಗೆ ಶಾಂತಿ ನೀಡದ ಕುಕೃತ್ಯಗಳು ರಾಜ್ಯವನ್ನು ಭಾಧಿಸದಿದ್ದರೆ ಸಮಾಧಾನವೇ ಇರದೇನೋ ! ಈ‌ ವಿವಾದ ಈಗಾಗಲೇ ಉಚ್ಛ ನ್ಯಾಯಾಲಯದ ಅಂಗಳದಲ್ಲಿದ್ದು ಒಂದೆರಡು ದಿನಗಳಲ್ಲಿ ಆ ಬಗ್ಗೆ ನ್ಯಾಯಾಲಯ ತನ್ನ ನಿಲುವನ್ನು ಪ್ರಕಟಿಸುವ ನಿರೀಕ್ಷೆಯಿದೆಯೆಂಬುದಷ್ಟೇ ಸಧ್ಯದ ಸಮಾಧಾನ.

ಮನುಷ್ಯ ಮನುಷ್ಯರಲ್ಲಿ ಪರಸ್ಪರ ಪ್ರೀತಿ, ಗೌರವ, ಮೆಚ್ಚುಗೆಗಳ ಜೊತೆಗೆ ಒಂದೇ ಮಣ್ಣಿನಲ್ಲಿ ವಾಸಿಸುವ ಭಾವೈಕ್ಯತೆಯ ಭಾವ ಧರ್ಮಾತೀತವಾಗಿ ಜಾತ್ಯಾತೀತವಾಗಿ ಮನಸು ಮನಸುಗಳಲ್ಲಿ ಸ್ಫುರಿಸದೇ , ಆ ಜಾಗದಲ್ಲಿ ಪರಸ್ಪರ ದ್ವೇಷ, ಅಸೂಯೆ, ರೋಷ ,ಶ್ರೇಷ್ಠತೆಯ ಅಮಲು, ಕೋಮು ಭಾವನೆಗಳು ನೆಲೆಯೂರಿದಲ್ಲಿ ಈ ತರಹದ ಘಟನೆಗಳು ಸಾಮಾನ್ಯ. ಇದಕ್ಕೆ ಕೊನೆ ಮೊದಲಿಲ್ಲ, ಮದ್ದಿಲ್ಲ, ತಪ್ಪನ್ನು ತಿದ್ದುವವರು- ತಿದ್ದಿಕೊಳ್ಳುವವರು ಯಾರೂ ಇರೋಲ್ಲ ಇದ್ದರೂ ಯಾರ ಮಾತು ಯಾರೂ ಕೇಳೋಲ್ಲ ! ನರನಾಡಿಗಳಲ್ಲಿ ಮಾನವಪ್ರೀತಿಯ ರಕ್ತದ ಬದಲು ಧರ್ಮಾಂಧತೆ , ಜಾತೀಯತೆ ಪ್ರಚೋದನೆಯ ದ್ವೇಷದ ಕಿಡಿಗಳು ಅವ್ಯಾಹತವಾಗಿ ಪ್ರವಹಿಸಿದಾಗ ಬುದ್ದಿಗೇ ಮಂಕು ಕವಿದು ಸಮಾಜದಲ್ಲಿನ ಸಹಜ ಸಾಮರಸ್ಯವನ್ನು ಆಪೋಷನ ತೆಗೆದುಕೊಂಡು ಬಿಡುತ್ತದೆ.

Ofcourse, ವಿದ್ಯೆ ಕಲಿಯಬೇಕಾದ ಕಾಲೇಜುಗಳಲ್ಲಿ #ವಸ್ತ್ರ_ಸಂಹಿತೆ ವಿಚಾರವಾಗಿ ಈಗಾಗಿರುವುದು, ಈಗ ಆಗುತ್ತಿರುವುದೂ ಅದೇ !

ತಮ್ಮ ಆತ್ಮೀಯ ಗೆಳೆಯರೊಂದಿಗೆ ಲೇಖಕರು ಹಿರಿಯೂರು ಪ್ರಕಾಶ್

ಗಡಿ- ನುಡಿ- ಗುಡಿ…. ಈ ಮೂರು‌ ವಿಚಾರಗಳಿಗೆ ಬಹುತೇಕ ನಾವೆಲ್ಲಾ ಬಹಳ ಬೇಗ ರಿಯಾಕ್ಟ್ ಆಗಿಬಿಡುತ್ತೇವೆ. ಅದರಲ್ಲೂ ಕೋಮು ವಿಷಯಾಧಾರಿತ ವಾದ -ವಿವಾದಗಳಲ್ಲಿ ವಿವೇಕದ ಜಾಗದಲ್ಲಿ ವೈಷಮ್ಯಕ್ಕೆ ಬಹುಬೇಗ ಆಸ್ಪದ ಕೊಟ್ಟು ಸೌಹಾರ್ದತೆಯಿಂದ ಬಗೆಹರಿಯಬಹುದಾದ ಸಮಸ್ಯೆಯ ಗಿಡವನ್ನು ದ್ವೇಷಾಸೂಯೆಯ ಹೆಮ್ಮರವಾಗುವಂತೆ ಮಾಡಿಬಿಡುತ್ತೇವೆ. ಪರಸ್ಪರ ಅರ್ಥಮಾಡಿಕೊಂಡು ಸಲೀಸಾಗಿ ಚಿವುಟಿ‌ ಬಿಸಾಡಬಹುದಾದ ಸಣ್ಣ ಮುಳ್ಳನ್ನು ವಿಷಪೂರಿತ ಮುಳ್ಳಾಗಿ ಬೆಳೆಯುವವರೆಗೂ ಬೆಳೆಯುವುದನ್ನು ತಣ್ಣಗೆ ನೋಡುತ್ತೇವೆ.
ಇಲ್ಲದಿದ್ದರೆ ಮತ್ತೇನು…..??

ಇಷ್ಟು ವರ್ಷಗಳ ಕಾಲ ಇಲ್ಲದ ಈ ತರಹದ ವಸ್ತ್ರ ಸಂಹಿತೆ‌ ಕುರಿತಾದ ವಿವಾದ, ದಳ್ಳುರಿ ಅನಗತ್ಯ ಪ್ರಚಾರ ಪಡೆದುಕೊಂಡು ರಾಜ್ಯದ ಶಿಕ್ಷಣ ಕಲಿಸುವ ದೇಗುಲಗಳಲ್ಲಿ ಪೈಶಾಚಿಕ ತಾಂಡವ ನೃತ್ಯವಾಡುತ್ತಾ ಅಬ್ಬರಿಸುತ್ತಿರುವುದು ವಿಧ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದಾಗಲೀ, ಕೋಮು ಸೌಹಾರ್ದತೆಯ ದೃಷ್ಟಿಯಿಂದಾಗಲೀ ಅಥವಾ ರಾಜ್ಯದ ಶೈಕ್ಷಣಿಕ ಅಭಿವೃದ್ಧಿಯ ದೃಷ್ಟಿಕೋನದಿಂದಾಗಲೀ ಸಹ್ಯವೂ ಅಲ್ಲ , ಸಹಮತವೂ ಅಲ್ಲ, ಸದ್ವಿವೇಕವೂ ಅಲ್ಲ.

ಇಂಥಾದ್ದೊಂದು ವಿವಾದದ ಸಣ್ಣ ಕಿಡಿ ಸೃಷ್ಟಿಯಾಗುವುದನ್ನೇ ಕಾಯ್ದುಕೊಂಡಿದ್ದರೇನೋ ಎಂಬಂತೆ ಸಮಾಜ ಘಾತುಕ ಶಕ್ತಿಗಳು ಅದನ್ನು ಬೃಹತ್ ಜ್ವಾಲೆಯನ್ನಾಗಿ ಹರಡಿಸುವಲ್ಲಿ ಸಫಲರಾಗಿ ಬಿಡುತ್ತಾರೆ. ಸಮಾಜಘಾತುಕ ಶಕ್ತಿಗಳೆಂದರೆ ಮತ್ತೊಬ್ಬರ ಮನೆಗೆ ಬೆಂಕಿ ಹಚ್ಚಿ ಅದರಿಂದ ಚಳಿ ಕಾಯಿಸಿಕೊಳ್ಳುವವರು , ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಸ್ವಾರ್ಥ ಮನಸ್ಥಿತಿಯವರು ಅಥವಾ ತಮ್ಮ ರಾಜಕೀಯ ಲಾಭಕ್ಕಾಗಿ ಇಂತಹಾ‌ ವಿವಾದದ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಳ್ಳುವ ಕಿರಾತಕ ಮನೋಭಾವ ದವರು . ಇಂಥವರ ಕುಮ್ಮಕ್ಕಿನಿಂದಲೇ ಕಾಲೇಜು ಮಟ್ಟದಲ್ಲಿ ವಿಧ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವಿನ‌ ಭಾವೈಕ್ಯತೆಯಲ್ಲಿ ಬಗೆಹರಿಯ ಬಹುದಾದ ವಿಚಾರವೊಂದು ಬೃಹತ್ ಸಮಸ್ಯೆಯ ರೂಪ ತಾಳಿ ವಿಷ ಜ್ವಾಲೆಯನ್ನು ಎಲ್ಲೆಡೆ ಹರಡಲು ಕಾರಣವಾಗಿರುವುದು.

ಶಿಕ್ಷಕರು ಹಾಗೂ ‌ವಿದ್ಯಾರ್ಥಿಗಳ ನಡುವೆ ಇರುವ ಪವಿತ್ರವಾದ ಗಟ್ಟಿ ಸಂಬಂಧಕ್ಕೆ ವಿದ್ಯಾರ್ಥಿಗಳನ್ನು ಪ್ರಾಮಾಣಿಕತೆ ಯಿಂದ ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮನಸುಗಳನ್ನು ಶಿಕ್ಷಣೇತರ ವಿಚಾರಗಳಿಂದ ಬದಲಿಸಲು ಖಂಡಿತಾ ಸಾಧ್ಯವಿದೆ. ನಿಜವಾದ ಗುರುವಿಗೆ ತನ್ನ‌ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ ಹಾಗೂ ಅವರ ಸಾಧನೆ ಮುಖ್ಯ. ಹಾಗೆಯೇ ನಿಜವಾದ ‌ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಸಾಧನೆಯಷ್ಟೇ ತಾವು ಕಲಿಯುತ್ತಿರುವ ಕಾಲೇಜಿನ ನಿಯಮಗಳನ್ನು ಪಾಲಿಸುವುದೂ ಮುಖ್ಯ. ಕಾಲೇಜಿ‌ಗೆ ಹೋಗುವುದು ವಿದ್ಯೆ ಕಲಿಯಲು‌ ಹಾಗೂ ಭವಿಷ್ಯ ರೂಪಿಸಿಕೊಳ್ಳಲೇ ಹೊರತು ಶಿಕ್ಷಣದ ಹೊರತಾದ ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳಲು ಅಲ್ಲ. ಒಂದು ವೇಳೆ ವಿದ್ಯೆಗಿಂತಲೂ ಇಂತಹಾ‌ ವಿವಾದಾತ್ಮಕ ವಿಚಾರಗಳೇ ಇಷ್ಟವಾದಲ್ಲಿ ಅಂಥವರು ಶಾಲೆ ಕಲಿಯಲು ಹೋಗುವ ಅವಶ್ಯಕತೆಯೂ ಇಲ್ಲ ಅಲ್ಲವೇ ? ಇದನ್ನು ವಿಧ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು.

ಹಾಗೆಯೇ #ರಾಜಕೀಯ ಮಾಡಲು, ಬೇಳೆ ಬೇಯಿಸಿಕೊಳ್ಳಲು ಬೇಕಾದಷ್ಟು ಇತರೆ ದಾರಿಗಳಿವೆ. ತಮ್ಮ ತಮ್ಮ ರಾಜಕೀಯ ಲಾಭಕ್ಕೋ ಅಥವಾ ವೈಯಕ್ತಿಕ ಸ್ವಾರ್ಥಕ್ಕೋ ವಿಧ್ಯಾರ್ಥಿಗಳ ಭವಿಷ್ಯದಲ್ಲಿ ಆಟವಾಡುವ ಸಮಾಜದ ಖೂಳರಿಂದ, ಸಮಾಜಘಾತುಕ ಶಕ್ತಿಗಳಿಂದ ಹಾಗೂ ವಿಷಬೀಜ ಬಿತ್ತುವ ಸಂಘಟನೆಗಳಿಂದ ವಿಧ್ಯಾರ್ಥಿಗಳಷ್ಟೇ ಅಲ್ಲ ನಾಗರಿಕರೂ ಸಹಾ ದೂರವಿದ್ದು ಮಾನವ ಸೌಹಾರ್ದತೆಗೆ ಧಕ್ಕೆ ತರುವವರ ವಿರುದ್ಧ ದನಿಯೆತ್ತಬೇಕಿದೆ. ನಿತ್ಯ ವ್ಯವಹಾರಗಳಲ್ಲಿ ಎಲ್ಲಾ ಜಾತಿ ಧರ್ಮದವ ರೊಂದಿಗೆ ಸಹಬಾಳ್ವೆ ನೆಡೆಸುವ ಜನಸಾಮಾನ್ಯರಿಗೆ ಇಂತಹಾ ವಿವಾದಗಳು ಖಂಡಿತಾ ಬೇಕಿಲ್ಲ.

ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿ ಶಾಲಾ ಕಾಲೇಜಿಗೆ ಹೋಗುವುದು ಸರಿಯೋ ತಪ್ಪೋ ಎಂಬ ತಾರ್ಕಿಕ ಅಂತ್ಯ ಕಾಣದ ವಾದ‌-ವಿವಾದಕ್ಕಿಂತ ಅದರಿಂದ‌ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಆಗಬಲ್ಲದೇ ಅಥವಾ ಅವರ ಭವಿಷ್ಯ ಉಜ್ವಲವಾದೀತೇ ಎಂಬ ಸೆನ್ಸಿಬಲ್ ಪ್ರಶ್ನೆಯನ್ನು ಪರ- ವಿರೋಧಗಳ ಗುಂಪಿನಲ್ಲಿರುವವರು ಕೇಳಿಕೊಳ್ಳಬೇಕಿದೆ. ಇದು ಮೂಲಭೂತ ಹಕ್ಕಿನ ಉಲ್ಲಂಘನೆಯೋ ಅಥವಾ ಧಾರ್ಮಿಕ ಮೂಲಭೂತವಾದಿಗಳ ಕುತಂತ್ರವೋ ಅವರವರ ಸೈದ್ಧಾಂತಿಕ‌ ವಿವೇಚನೆಗೆ ಬಿಟ್ಟ ವಿಚಾರ. ಆದರೆ ವಿಧ್ಯಾರ್ಥಿಗಳ ಹಿತ ಅಡಗಿರುವುದು ಮೈಮೇಲೆ ಯಾವ ಬಟ್ಟೆ ಧರಿಸಿ ಶಾಲೆಗೆ ಹೋಗುತ್ತೇನೆ ಎಂಬುದರ ಮೇಲಲ್ಲ ! ಬದಲಿಗೆ ಶಾಲಾ ಕಾಲೇಜುಗಳ ದೇಗುಲದಿಂದ ತಲೆ ತುಂಬಾ ಎಂತಹಾ ಜ್ಞಾನ ತುಂಬಿಕೊಂಡು ಬರುತ್ತೇನೆ ಎಂಬ ತಿಳಿವಳಿಕೆಯಿಂದ ! ಅವರ ಭವಿಷ್ಯ ಉಜ್ವಲವಾಗುವುದು ಅವರು ಯಾವ ವಸ್ತ್ರ ಧರಿಸಿ ಜ್ಞಾನ ಸಂಪಾದನೆ ಮಾಡುತ್ತಾರೆಂಬುದರಿಂದಲ್ಲ, ಬದಲಿಗೆ ಭವಿಷ್ಯ‌ ನಿರ್ಧಾರವಾಗುವುದು ಅವರು ಮನಸಿಟ್ಟು ಕಲಿತ ವಿದ್ಯೆಯಿಂದ ಹಾಗೂ ವಿವೇಕದಿಂದ . ಇದೇ ಸಂಧರ್ಭದಲ್ಲಿ ಒಬ್ಬರ ಆಚಾರ, ವಿಚಾರ, ನಂಬಿಕೆಗಳನ್ನು ಗೌರವದಿಂದ ಕಾಣುವ, ತಪ್ಪಿದ್ದರೆ ತಿಳಿ ಹೇಳುವ ಸದ್ವಿವೇಕವನ್ನು ಕಲಿಸಿಕೊಡುವುದೇ ನಿಜವಾದ ವಿದ್ಯೆ ಎಂಬ ಸಾಮಾನ್ಯ ತಿಳಿವಳಿಕೆಯೂ ಇರಬೇಕಾಗುತ್ತದೆ.

ನೆನಪಿಡಿ, ಕೊರೋನಾ ಎಂಬ ಕಣ್ಣಿಗೆ ಕಾಣದ ಮಾರಣಾಂತಿಕ ವೈರಸ್ ಇಡೀ ಜಗತ್ತನ್ನೇ ಅಪ್ಪಳಿಸಿ ಮನುಷ್ಯರನ್ನು ಹುಳುಗಳಂತೆ ಹೊಸಕಿ ಬಿಸಾಕಿ ಮನುಷ್ಯನ ಪ್ರಾಣದ ಬೆಲೆಯನ್ನು ಬೀದಿಪಾಲು ಮಾಡಿರುವ ಪ್ರಸ್ತುತ ಕಾಲಘಟ್ಟದಲ್ಲಿ ನಮ್ಮ ಜೀವಗಳಿಗಿರುವುದು ಯಃಕಶ್ಚಿತ್ ಕ್ಷಣಿಕ ವ್ಯಾಲಿಡಿಟಿ ಎಂಬುದು ಮನದಟ್ಟಾಗಿ ಹೋಗಿದೆ. ಹೀಗಿದ್ದೂ ಕೆಲಸಕ್ಕೆ ಬಾರದ, ಪ್ರೀತಿ ತಂದುಕೊಡದ, ಭಾವೈಕ್ಯತೆ ಮೂಡಿಸದ, ಮನಸುಗಳನ್ನು ಬೆಸೆಯದ ಇಂತಹಾ ವಿವಾದಗಳು ನಮಗೆ ಬೇಕಿತ್ತೇ…?? ಹೋಗಲಿ, ಇಂತಹಾ ವಿಚಾರಗಳು ಸರಿ ಅಥವಾ ಸರಿಯಲ್ಲ ಎಂದು ಒಮ್ಮತವಾಗಿ ಯಾರಾದರೂ ಹೇಳಲು ಸಾಧ್ಯವೇ ?

ಅವರವರ ಧಾರ್ಮಿಕ ನಂಬಿಕೆ ಅವರಿಗೆ ಶ್ರೇಷ್ಠ. ತನಗೆ ಶ್ರೇಷ್ಠವಾಗಿರುವುದನ್ನು ಮತ್ತೊಬ್ಬರು ಕನಿಷ್ಠ ಎಂದಾಗ ಸೌಹಾರ್ದತೆಯ ಬದುಕು ಕಷ್ಟ. ಈ ಸಿಂಪಲ್ ಲಾಜಿಕ್ಕನ್ನು ಪ್ರಾಮಾಣಿಕವಾಗಿ ಅರ್ಥಮಾಡಿಕೊಳ್ಳದಿರುವುದೇ ಪರಮ ಅನಿಷ್ಟ ಹಾಗೂ ಅದರಿಂದ ದೇಶಕ್ಕೇ ನಷ್ಟ !



** ಮರೆಯುವ ಮುನ್ನ **

ಹಿಜಾಬ್ ಧರಿಸಿ ಕಾಲೇಜಿಗೆ ಹೋಗಬೇಕೇ ಬೇಡವೇ ಎಂಬ ವಿಚಾರ ಪ್ರಸ್ತುತ ನ್ಯಾಯಾಲಯದ ಮುಂದಿದೆ. ಸಂವಿಧಾನ ಹಾಗೂ ನ್ಯಾಯಾಂಗಕ್ಕೆ ತಲೆಬಾಗಬೇಕಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ . ಈ ನಾಡಿನ‌ ಜನರಿಗೆ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಸಮಾನತೆ ಇವೆರಡೂ ಸಂವಿಧಾನ ಕೊಟ್ಟಿರುವ ಪವಿತ್ರ ಹಕ್ಕುಗಳು. ಆದರೆ ಇವುಗಳ ಆಚರಣೆಯ ವಿಧಿ ವಿಧಾನದಲ್ಲಿ ಗೊಂದಲ ಉಂಟಾಗಿದೆ ಅಥವಾ ಗೊಂದಲ ಉಂಟು ಮಾಡಲಾಗಿದೆ. ಈ ಗೊಂದಲವನ್ನು ಸಮರ್ಥವಾಗಿ ಪರಿಹರಿಸುವ ಶಕ್ತಿ ನಮ್ಮ‌ ನ್ಯಾಯಾಂಗ‌ ವ್ಯವಸ್ಥೆಗಿದೆ. ಅಲ್ಲಿಯವರೆಗೂ ಯಾವ ಪ್ರಚೋದನೆಗೂ ಒಳಗಾಗದೇ ಯಾರ ಒತ್ತಡ, ಆಮಿಷಕ್ಕೂ ಮಣಿಯದೇ ಈ ನೆಲದ ಕಾನೂನನ್ನು ಪಾಲಿಸಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ. ಮುಖ್ಯವಾಗಿ ಸಾಮಾಜಿಕ‌ ಜಾಲತಾಣ ಗಳಲ್ಲಿ ಹರಡಲಾಗುವ ದ್ವೇಷ ಸಂದೇಶಗಳನ್ನು ತಿರಸ್ಕರಿಸುವ ಮೂಲಕ ಪ್ರಜ್ಞಾವಂತಿಕೆಯನ್ನು ಜೀವಂತವಾಗಿಡಬೇಕಾದದ್ದು ನಾಗರಿಕರ ಹೊಣೆ.

ಈ ದೇಶದ ಭವಿಷ್ಯ ನಿಂತಿರುವುದು ವಿವೇಕ ಕಲಿಸುವ ಶಿಕ್ಷಣದಿಂದಲೇ ಹೊರತು ಭಾವನಾತ್ಮಕ, ಭ್ರಮಾತ್ಮಕ ಹಾಗೂ ಧಾರ್ಮಿಕ ವಿವಾದಗಳ ತಳಹದಿಯಿಂದಲ್ಲ ಎಂಬ ಸರಳ ಸತ್ಯ ಅರ್ಥ ಮಾಡಿಕೊಂಡು, ಧಾರ್ಮಿಕತೆಯ ಅಮಲಿಗಿಂತ ಮಾನವೀಯತೆಯ ಪ್ರೀತಿ ದೊಡ್ಡದು ಎಂದು ಮತ್ತೊಮ್ಮೆ‌ ನಿರೂಪಿಸುವ ಸಮಯ ಇದಾಗಿದೆ. ಈ ಬಗ್ಗೆ ನ್ಯಾಯಾಲಯ ನೀಡುವ ತೀರ್ಪನ್ನು ಗೌರವದಿಂದ ಪಾಲಿಸುವುದೊಂದೇ ಸರಿಯಾದ ಮಾರ್ಗ.

ವಿದ್ಯಾರ್ಥಿಗಳಿಗಿಂತ‌ ಹೊರಗಿನ ಶಕ್ತಿಗಳು ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು.

ಪ್ರೀತಿಯಿಂದ…


  • ಹಿರಿಯೂರು ಪ್ರಕಾಶ್  (ಲೇಖಕರು, ಚಿಂತಕರು, ಕತೆಗಾರರು) ಹಿರಿಯೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW