ನೀರಿನ ತೇವಾಂಶವಿರುವ ಪ್ರದೇಶದಲ್ಲಿ ಹುಲುಸಾಗಿ ನೆಲವಿಡೀ ಹರಡಿ ಬೆಳೆಯುವ ಒಂದು ಔಷಧೀಯ ಸಸ್ಯ ಹೊನೆಗೊನೆ ಸೊಪ್ಪು. ಈ ಸೊಪ್ಪಿನ ವಿಶೇಷತೆಯ ಕುರಿತು ಸೌಮ್ಯಾ ಸನತ್ ಅವರು ಒಂದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಸೆಖೆಗಾಲದ ಬಿರು ಬಿಸಿಲಿನ ತಾಪಕ್ಕೆ ದೇಹ ಆಯಾಸಗೊಳ್ಳುವುದು ಸಹಜ. ಈ ವರ್ಷ ಅದೂ ದಾಖಲೆಯೆ ಸರಿ . ಇಂತಹ ಸಂದರ್ಭದಲ್ಲಿ ತಂಪಾಗಿಸಲು ಮುಖ್ಯವಾಗಿ ಕಣ್ಣಿನ ಆಯಾಸ ಪರಿಹಾರಕ್ಕೆ ನಮ್ಮ ಹಿತ್ತಲ ಗಿಡವೊಂದು ನೆರವಾಗಬಲ್ಲುದು. ಸೊಪ್ಪಿನಲ್ಲಿ ನಾನಾ ತರಹದ ಸೊಪ್ಪುಗಳಿವೆ. ದಂಟಿನ ಸೊಪ್ಪು, ಮೆಂತ್ಯ ಸೊಪ್ಪು.. ಹೀಗೆ ಆದರೆ ಹೊನೆಗೊನೆ ಸೊಪ್ಪು ಕೇಳಿದ್ದೀರಾ.? ಹೊನಗೊನೆಸೊಪ್ಪು ಬಹುರೋಗಗಳಿಗೆ ಮದ್ದು. ಸಾಮಾನ್ಯವಾಗಿ ರೈತಾಪಿ ವರ್ಗಕ್ಕೆ ತಿಳಿದಿರುವ, ಹೊಲಗಳಲ್ಲಿ ಹೇರಳವಾಗಿ ಬೆಳದಿರುವ ಈ ಸೊಪ್ಪು, ವಿಶೇಷವಾಗಿ ಕಣ್ಣಿನ ರೋಗಗಳಿಗೆ ದಿವ್ಯೌಷಧಿ.
ನೀರಿನ ತೇವಾಂಶವಿರುವ ಪ್ರದೇಶದಲ್ಲಿ ಹುಲುಸಾಗಿ ನೆಲವಿಡೀ ಹರಡಿ ಬೆಳೆಯುವ ಒಂದು ಔಷಧೀಯ ಸಸ್ಯ ಹೊನೆಗೊನೆ ಸೊಪ್ಪು. ನೀರಿನ ತೇವಾಂಶವಿರುವ ಪ್ರದೇಶದಲ್ಲಿ ಹುಲುಸಾಗಿ ನೆಲವಿಡೀ ಹರಡಿ ಬೆಳೆಯುವ ಒಂದು ಔಷಧೀಯ ಸಸ್ಯ ಹೊನೆಗೊನೆ ಸೊಪ್ಪು. ಮತ್ಸ್ಯಗಂಧಿ, ಮತ್ಸಾದನಿ, ಗರ್ತಕಲಂಬುಕ, ನಾಡಿಲಾಯಕ, ಗಂಡಾಲಿ ಎಂದೆಲ್ಲ ಹೆಸರಿರುವ ಇದು ಕೋಲಾರದ ಕಡೆ ಮೀನು ಸೊಪ್ಪು ಎಂದು ಗುರುತಿಸಲ್ಪಟ್ಟರೆ ತಮಿಳರು ಇದನ್ನು ಪೊನ್ನಗೊನ್ನಿ (ಚರ್ಮಕ್ಕೆ ಬಂಗಾರ ಹೊಳಪು ನೀಡುವ ಗುಣ) ಎಂದು ಕರೆಯುವರು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹೆಚ್ಚಾಗಿ ಬಳಸುವ ಹೊನೆಗೊನೆ ಸೊಪ್ಪು ಸೇವಿಸುವುದರಿಂದ ಹಲವು ಪ್ರಯೋಜನಗಳಿದ್ದು, ಹಲವು ದೈಹಿಕ ಸಮಸ್ಯೆಗಳಿಗೆ ಪರಿಹಾರ ಮಾಡುವ ಮನೆ ಮದ್ದು ಕೂಡ ಆಗಿದೆ.
“ಹೊನೆಗೊನೆ ಸೊಪ್ಪು ಹೋದ ಕಣ್ಣು ಬರಿಸೀತು” ಎಂಬ ಗಾದೆ ಮಾತೊಂದಿದೆ. ಅನೇಕ ಕಣ್ಣಿನ ರೋಗ ನಿವಾರಣೆಗೆ ಆಯುರ್ವೇದ ಔಷಧಿಯ ಪದ್ಧತಿಯಲ್ಲಿ ಈ ಸೊಪ್ಪನ್ನು ವ್ಯಾಪಕವಾಗಿ ಉಪಯೋಗಿಸುತ್ತಾರೆ. ಇದರ ಸಾರು, ಹುಳಿಯನ್ನು ನೆಗಡಿ-ಕೆಮ್ಮು ಇರುವವರು ಬಳಸುತ್ತಾರೆ.

ಮನೆ ಮದ್ದಾಗಿ ಉಪಯೋಗ
* ಎಲೆಗಳ ರಸದಿಂದ ಕಾಡಿಗೆ ತಯಾರಿಸಿ ಕಣ್ಣಿಗೆ ಹಚ್ಚುವುದರಿಂದ ರೆಪ್ಪೆಗಳು ನೀಳವಾಗಿ ಕಾಂತಿಯುತವಾಗಿ ಆಕರ್ಷಕವಾಗುವುವು.
* ಎರಡು ಚಮಚ ಬೇಯಿಸಿದ ಸೊಪ್ಪಿನ ರಸವನ್ನು 45 ದಿನಗಳು ಬಳಸುವುದರಿಂದ ದೃಷ್ಟಿದೋಷ ನಿವಾರಣೆಯಾಗುತ್ತದೆ ಎಂಬುದು ಹಿರಿಯರ ಸಲಹೆ.
* ಸೊಪ್ಪಿನ ರಸವನ್ನು ಎಳ್ಳೆಣ್ಣೆಯಲ್ಲಿ ಸಂಸ್ಕರಿಸಿ ತಲೆಗೆ ಹಚ್ಚಿಕೊಂಡು ನಿತ್ಯ ಅಭ್ಯಂಜನ ಮಾಡುವುದರಿಂದ ಕಣ್ಣಿನ ದೃಷ್ಟಿ ಹಾಗೂ ನೆನಪಿನ ಶಕ್ತಿ ವೃದ್ಧಿಗೊಳ್ಳುತ್ತವೆ.
* ರಕ್ತದೊತ್ತಡ ಹೆಚ್ಚಿರುವವರು ಈ ಸೊಪ್ಪನ್ನು ಸೇವಿಸುತ್ತಿದ್ದರೆ ಬಿ.ಪಿ. ನಿಯಂತ್ರಣಕ್ಕೆ ಬರುತ್ತದೆ.
* ಹೊನಗೊನೆ ಸೊಪ್ಪಿನ ಪಲ್ಯ ಮಾಡಿ ತಿನ್ನುವುದರಿಂದ, ಜ್ವರ ಬಿಟ್ಟ ನಂತರ ರುಚಿಕೆಟ್ಟ ಬಾಯಿಗೆ ರುಚಿಯುಂಟು ಮಾಡುತ್ತದೆ. ೮ ದಿನ ಬಿಡದೆ ತಿಂದರೆ ಒಳ್ಳೆಯದು.
* ಹೊನಗೊನೆ ಗಿಡವನ್ನು ಬೇರು ಸಹಿತ ಕಿತ್ತು ೧ ಸೇರಿನಷ್ಟು ರಸಮಾಡಿಕೂಂಡು ಅದಕ್ಕೆ ೧ ಪಾವು ಎಳ್ಳೆಣ್ಣೆ ಹಾಕಿ ಕಾಯಿಸಿ ರಸವೆಲ್ಲ ಇಂಗಿದ ಮೇಲೆ ಇಳಿಸಿಕೂಂಡು ಎಣ್ಣೆಯನ್ನು ಶೋಧಿಸಿ ಇಟ್ಟುಕೂಳ್ಳಬೇಕು. ಈ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಮೆದುಳು ಮತ್ತು ಕಣ್ಣುಗಳ ಉಷ್ಣತೆಯು ಕಡಿಮೆಯಾಗಿ ಬಲ ಮತ್ತು ತೇಜಸ್ಸು ಹೆಚ್ಚಾಗುತ್ತದೆ. ಈ ಎಣ್ಣೆಯನ್ನು ಬೆಂದ ಗಾಯಗಳ ಮೇಲೆ ಕೂಡ ಉಪಯೋಗಿಸಬಹುದು.
* ಹೊನಗೂನ್ನೆ ಸೊಪ್ಪಿನ ಸಾರು ಅಥವಾ ಪಲ್ಯ ಮಾಡಿ ಸೇವಿಸುವುದರಿಂದ ಕಣ್ಣುಗಳ ವ್ಯಾಧಿಗಳು ಬರುವುದಿಲ್ಲ.
* ಹೊನೆಗೊನೆ ಸಸ್ಯದ ಎಲೆಯ ಪಲ್ಯ ಸೇವಿಸಿದರೆ, ಮೂಲವ್ಯಾಧಿಯ ಬಾಧೆ ನಿವಾರಣೆ ಆಗುತ್ತದೆ. ಸಾರನ್ನು ಕುಡಿಯುವುದರಿಂದ ಆಸನದ ಉರಿ ಶಮನಗೊಳ್ಳುತ್ತದೆ.
* ಇದರ ಸೇವನೆಯಿಂದ ಬಾಣಂತಿಯರಲ್ಲಿ ಎದೆಯ ಹಾಲು ವೃದ್ಧಿ ಆಗುತ್ತದೆ.
* ನಿಯಮಿತವಾಗಿ ಇದರ ಸೇವನೆಯಿಂದ ಕೈ, ಮೈ ಚರ್ಮ ಹೊಳಪು ಹೊಂದುತ್ತದೆ. ರಸದೊಂದಿಗೆ ಬೆಳ್ಳುಳ್ಳಿ ಸೇರಿಸಿ ತೆಗೆದುಕೊಂಡರೆ ಹಳೆಯ ಕೆಮ್ಮು, ಜ್ವರ, ನಿಶ್ಶಕ್ತಿ ದೂರಾಗುತ್ತದೆ.
* ಹೊನೆಗೊನೆ ಸೊಪ್ಪಿನ ರಸ ಮತ್ತು ಮೂಲಂಗಿ ಸೊಪ್ಪಿನ ರಸಗಳನ್ನು ಸೇರಿಸಿ ಒಂದು ತಿಂಗಳ ಕಾಲ ಸೇವಿಸುವುದರಿಂದ ಮೂಲವ್ಯಾಧಿಯ ನೋವು ಶಮನಗೊಳ್ಳುತ್ತದೆ.
- ಸೌಮ್ಯಾ ಸನತ್
