ಧಾರವಾಡದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ದುಡಿದ ಪ್ರೊ. ಮಾಲತಿ ಪಟ್ಟಣಶೆಟ್ಟಿಯವರು ನಾಡಿನ ಗಮನೀಯ ಕವಿಯತ್ರಿಯರಲ್ಲೊಬ್ಬರು. ಬಲು ಸಮರ್ಥವಾಗಿ ಮಾದರಿಯ ಕವನ ಕಟ್ಟ ಬಲ್ಲವರು. ಸುಮಾರು ೧೨೫ ಕವನಗಳುಳ್ಳ ಅವರ ೫ ನೆಯ ಈ ರಸಪೂರ್ಣ ಕವನ ಸಂಕಲನವೇ ‘ಹೂ ದಂಡಿ’. ಈ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಕೃತಿ ಹೆಸರು: ಹೂ ದಂಡಿ
ಲೇಖಕರು: ಪ್ರೊ. ಮಾಲತಿ ಪಟ್ಟಣಶೆಟ್ಟಿ.
ಸುಮುಖ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ: ೨೦೦೫.
ಪುಟಗಳು: ೧೬೦.
ಬೆಲೆ: ರೂ. ೨೪೮.
ಸಾಹಿತ್ಯದ ಯಾವುದೇ ಪ್ರಕಾರವಿರಲಿ, ಅದರಲ್ಲಿ ಲೇಖಕನ ವ್ಯಕ್ತಿತ್ವದ, ಆತ್ಮ ಕಥೆಯ ಸುಳಿವು ಇದ್ದೇ ಇರುತ್ತದೆ. ಉಳಿದೆಲ್ಲ ಪ್ರಕಾರ ಗಳಿಗಿಂತ ಕಾವ್ಯದಲ್ಲಿ ಅವು ಹೆಚ್ಚು ನಿಖರವಾಗಿ ಬಿಂಬಿತವಾಗಿರುತ್ತದೆ. ಇಲ್ಲಿ ತಮ್ಮ ಜೀವನ ವಾಹಿನಿಯ ವಿವಿಧ ಘಟ್ಟಗಳಲ್ಲಿ ಅಭಿವ್ಯಕ್ತಿಗೊಂಡ ಚಿಂತನಾತ್ಮಕ ಪ್ರತಿಕ್ರಿಯೆ ಧ್ಯೇಯ- ಧೋರಣೆಗಳ ಪರಿಕಲ್ಪನೆ ಇದೆ. ಕಾವ್ಯವು ತನಗೆ ತಾಯಿಯ ವಾತ್ಸಲ್ಯವನ್ನು ತೋರಿ ಸಾಂತ್ವನ ನೀಡಿದೆ. ಕಾವ್ಯ ತನಗೊಂದು ಮುಗಿಯದ ಪಯಣ ವಾಗ ಬೇಕು, ಓದುಗರ ಪ್ರೀತಿ- ಪ್ರೋತ್ಸಾಹ ಗಳ ಬುತ್ತಿ ಬೆನ್ನಿಗಿರಬೇಕೆಂಬುದೇ ತನ್ನ ಗಾಢವಾದ ಬಯಕೆ ಎಂದು ಕವಿಯಿತ್ರಿ ಹೇಳಿದ್ದಾರೆ.

ತಮ್ಮ ಬದುಕಿನಲ್ಲಿ ಅನುಭವಿಸಿದ ನೋವನ್ನು ಆರಂಭ ದಲ್ಲೇ ಹೇಳುತ್ತಾ ಬರೆದಿದ್ದು ಹೀಗೆ…
ನನ್ನ ಮಾತು ಮಹಲುಗಳಲ್ಲಿ
ಕೊರಗು ಒಲವಿಗೆ ಆತು
ಕೂತು ನುಡಿಸುವೆ ಕೇಳು
ನೋವು ರಾಮಾಯಣ.
ಇವರ ‘ಓ ನನ್ನ ಕವಿತೆಯೇ’ ಪದ್ಯದ ಸಾಲುಗಳು ಹೀಗಿವೆ.
ಬದುಕಿನಪರೂಪದ ಕಾವ್ಯಾನುಭೂತಿಯೇ
ಹಾಯಾಗು ಬಾ ನನ್ನೆದೆ ಹಡಗಿಗೆ
ತಾಯಾಗು ಬಾ ಅನಾಥಭಾವಕ್ಕೆ
ಬಾ ಮಡಿಲಿಗೆತ್ತಿಕೊಳ್ಳಲು ನನ್ನ
ಬಾ ಓ ಕವಿತೆಯೇ.
ಸಹ ಬಾಳ್ವೆಯರ ಮನೆಗೆ
ಚಿಲಿ ಪಿಲಿ ತೋರಣ ಕಟ್ಟಿ
ಕೊಡ ಬನ್ನಿ ಈ ಭೂಮಿಗೆ
ಭರವಸೆಯ ಬುತ್ತಿ ಕಟ್ಟಿ
ಈ ಭೂಮಿಯಲ್ಲಿ ಬಾಳು ಹೊಸ ಭರವಸೆಯೊಂದಿಗೆ
ಚೈತನ್ಯ ಶೀಲವಾಗುತ್ತದೆ ಎನ್ನುವ ಸಾತ್ವಿಕ ಆಶಯ ದೊಂದಿಗೆ ಲೇಖಕಿ ಹೇಳುವುದು ಹೀಗೆ.
ಎದೆ ಹೊತ್ತಿ ಉರಿದರು ಚೆಂದ
ಸಹಿಸುತ್ತ ತಣ್ಣಗಿರುವುದು ಚೆಂದ
ವೇದನೆಯ ಉತ್ಕಟತೆಯಲ್ಲೂ
ಪ್ರೀತಿಗೆ ಹಂಬಲಿಸುವುದು ಬಲು ಚೆಂದ!
ಇನ್ನೂ ಕೆಲವಷ್ಟು ಕವಿತೆಗಳು ಉತ್ತರ ಕರ್ನಾಟಕದ ಆಡುಭಾಷೆಯ ಶೈಲಿಯಲ್ಲಿದ್ದು ಬೇಂದ್ರೆಯವರ ಕವಿತೆಯನ್ನು ನೆನಪಿಸುವಂತಿದೆ. ಉದಾ…
*ವಿಪ್ರಲಂಭ
ಮಾವು ಮಿಡಿ ಮಿಡಿದಾವ
ಬೇವು ಹೂ ಮುಡಿದಾವ
ಕೊರಳಾ ಕೊಂಕಿಸಿ ಕೇಳ್ಯಾನ
ಕೊರಳಾ ಕೊಂಕಿಸಿ ಕೇಳ್ಯಾನ ಗಿಣಿ ರಾಮ
ಮಾರಾಯರ್ಯಾಕಾ ಬರಲಿಲ್ಲ?
ಅಂಗಳಕ ರಂಗೋಲಿ
ಹೊಸ್ತಲಕ ಹೂ ಪತ್ರಿ
ಹೆಜ್ಜೆ ಹೆಜ್ಜೆಗೂ ಕಣ್ಣು ದೀಪಾ
ಹೆಜ್ಜೆ ಹೆಜ್ಜೆಗೂ ಕಣ್ಣು ದೀಪಾ ನನ ಜಾಣ
ನೀನಿಲ್ಲದ ಚಣವೊಂದು ಶಾಪ!

* ಗಂಡಾ.. ಗಂಡು ವಿಚಾರ.
ಗಂಡನ್ನ ಪಡೆದವರೆ,
ಗಂಡು ಹಡೆದವರೆ,
ಗಂಡನ್ನ ಮೆದ್ದವರೆ,
ಗಂಡನ್ನ ಕದ್ದವರೆ,
ಗಂಡಾ.. ಗಂಡು ವಿಚಾರ.
ಕಟ್ಟಾಕ ಕಥಿಯಲ್ಲಾ,
ಮೆಟ್ಟಾಕ ಚೇಳಲ್ಲಾ,
ಹುಟ್ಟೂತ ಬೆನ್ನ ಹತ್ತೈತಿ ಹೆಣ್ಣಿಗೆ
ಗಂಡಾ.. ಗಂಡು ವಿಚಾರ.
ಮನ ಗಂಡ ಮಾತ್ತೈತಿ
ಜನ ಕಂಡ ನೀತ್ತೈತಿ
ಎಲ್ಲಾ ಮನ್ಯಾನ ದ್ವಾಸಿಗೂ ತೂತ s
ಎಲ್ಲಾ ಗಂಡರದೂ ಒಂದ ಮಾತ s.
ಇನ್ನೊಂದು ಕವಿತೆ ನೋಡಿ…
* ಮೌನ ಕರಗುವ ಹೊತ್ತು.
ಹಾಡ ಮರೆತಿ ಯಾಕ ಹಕ್ಕಿ
ನಿನ್ನ ಜಾಡ ಮರೆತಿ ಯಾಕ?
ನೆಲಕೆ ಹಸಿರ ಕರೆಯಲೊಲ್ಲಿ
ಹೂವ ಕಣ್ಣು ತೆರೆಯಲೊಲ್ಲಿ
ಬೈಗು ಬೆಳಗ ಹೊಸ್ತಿಲಲ್ಲಿ
ಚಿಲಿ ಪಿಲಿಯ ಬರೆಯಲೊಲ್ಲಿ?
ಈ ಕವಿಯತ್ರಿ ತನ್ನ ಹೃದಯದ ಕಾವನ್ನು ಭಾವದ ಆವೇಶವನ್ನು ವಿಹಿತ ವಿಚಾರಗಳ ಪ್ರಣಾಳಿಕೆಯ ಮೂಲಕ ಹಾಯಿಸುವುದರಿಂದ ಅವುಗಳ ರಭಸಕ್ಕೆ ಸ್ತಿಮಿತ, ಸಂಯಮ ಪ್ರಾಪ್ತವಾಗಿದೆ ಎಂದು ಪ್ರಸಿದ್ಧ ಕವಿ ನಿಸಾರ್ ಅಹಮದ್ ಅವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಇಲ್ಲಿ ಹೆಣ್ಣು ಜೀವ ಪಡುವ ತುಯ್ತ, ಹೆಣ್ತನದ ಸಹಜತೆ ನೋವು- ನಿರಾಸೆ – ಹತಾಶೆ ಮತ್ತು ಆತ್ಮ ನಿವೇದನೆಯನ್ನು ತೆರೆದಿಡುವ ಬಹಳಷ್ಟು ಕವಿತೆಗಳು ಆಪ್ತವಾಗುತ್ತಾ ನಮ್ಮ ಹೃದಯವನ್ನು ತಟ್ಟುತ್ತವೆ.
ಇನ್ನಷ್ಟು ಕವಿತೆಗಳಿಗಾಗಿ ಪುಸ್ತಕ ಓದಿ.
- ಮಾಲತಿ ರಾಮಕೃಷ್ಣ ಭಟ್
