“ಹೂವಿನ ಬಾಣದಂತೆ…” ವೈರಲ್ ವಿಡಿಯೋ ಸುತ್ತ

ಹೂವು ತನ್ನ ಬಣ್ಣದಿಂದ, ಸುವಾಸನೆಯಿಂದ ಹರ್ಷಗೊಳಿಸಿದಂತೆ, ಯುವ ಜನರ ಪ್ರತಿಭೆ ಸಮಾಜಕ್ಕೆ ಹೊಸ ಆನಂದವನ್ನು ನೀಡಬೇಕು. ನಿತ್ಯಶ್ರೀಯ ಕಿರುಹಾಡು ಇಂದು ಸಾವಿರಾರು ಮನಗಳಿಗೆ ಹೊಸ ಸಂತೋಷ ಕೊಟ್ಟಿದೆ. ಇದೇ ಹೇಳುತ್ತದೆ – ಸಾಧನೆಗೆ ವೇದಿಕೆ ಬೇಕಾಗಿಲ್ಲ, ಸಾಧನೆಯೇ ವೇದಿಕೆಯಾಗುತ್ತದೆ. ಲೇಖಕರಾದ ರಘುರಾಮ್.ಎನ್.ವಿ ಅವರು ಇಂದಿನ ಸಾಮಾಜಿಕ ಜಾಲತಾಣದ ಪ್ರತಿಭೆಯ ಕುರಿತು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಹೂವು ಅರಳುವಾಗ ಘೋಷಣೆ ಮಾಡಿಕೊಂಡು ಅರಳುವುದಿಲ್ಲ. ಅದು ಮೌನವಾಗಿ, ತನ್ನ ಸುಗಂಧದಿಂದಲೇ ಲೋಕವನ್ನು ಸೆಳೆಯುತ್ತದೆ. ಇದೇ ರೀತಿ, ಮೈಸೂರಿನ ಕಾಲೇಜಿನ ಹುಡುಗಿ ನಿತ್ಯಶ್ರೀ ತನ್ನ ಕಾಲೇಜು ಆವರಣದಲ್ಲಿ ಹಾಡಿದ “ಹೂವಿನ ಬಾಣದಂತೆ…” ಎಂಬ ಒಂದು ಹಾಡು, ಆಕೆಯ ಪ್ರಾಮಾಣಿಕ ಧ್ವನಿಯಿಂದಲೇ ಲಕ್ಷಾಂತರ ಜನರ ಹೃದಯ ತಟ್ಟಿದೆ. ದೊಡ್ಡ ವೇದಿಕೆ, ಭಾರಿ ವಾದ್ಯವೃಂದ ಅಥವಾ ಪ್ರಸಿದ್ಧಿ ಯಾವುದೂ ಇಲ್ಲದೆ, ಕೇವಲ ಸರಳ ಹೃದಯದಿಂದ ಹಾಡಿದ ಈ ಹಾಡು, ಇಂದು ಯುವಜನರ ಕನಸುಗಳಿಗೆ ಒಂದು ಹೊಸ ಚಿನ್ಹೆಯಾಗಿ ಮಾರ್ಪಾಡಾಗಿದೆ.

ಹೌದು, “ಹೂವಿನ ಬಾಣದಂತೆ… “– ಎಂದು ಪ್ರಾರಂಭವಾಗುವ ಚಲನಚಿತ್ರಗೀತೆ ಸುಮಾರು ಹದಿನೈದು ವರ್ಷದ ಹಿಂದೆ ಬಂದ “ಬಿರುಗಾಳಿ” ಸಿನಿಮಾದ್ದು. ಆ ಚಲನ ಚಿತ್ರ ಗೀತೆಯನ್ನು ತನಗೆ ಇಷ್ಟವಾದಂತೆ ಮೈಸೂರಿನಲ್ಲಿ ಕಾಮರ್ಸ್ ಕಾಲೇಜಿನ ವಿದ್ಯಾರ್ಥಿನಿ ನಿತ್ಯಶ್ರೀ ತನ್ನ ಸ್ನೇಹಿತರ ಮಧ್ಯೆ ಕುಳಿತು ವಿಶಿಷ್ಟವಾಗಿ ಹಾಡಿದ ಕ್ಷಣವನ್ನು ಒಬ್ಬರು ವಿಡಿಯೋ ಮಾಡಿದ್ದಾರೆ. ಆ ವಿಡಿಯೋ ಇನ್‌ಸ್ಟಾಗ್ರಾಂ, ವಾಟ್ಸ್‌ಆಪ್ ಹಾಗೂ ಯೂಟ್ಯೂಬ್‌ಗಳಲ್ಲಿ ಹಬ್ಬಿ, ಲಕ್ಷಾಂತರ ಜನರ ಗಮನ ಸೆಳೆಯುತ್ತಿದೆ.

 

ಈ ಹಾಡು ಚಿತ್ರಿತವಾಗಿರುವುದು ಕೇವಲ ಸಾಮಾನ್ಯ ಕಾಲೇಜಿನ ಆವರಣದಲ್ಲಿ. ಆ ಹಾಡಿನ ಜೊತೆ ಸ್ನೇಹಿತರ ಖುಷಿ ಹಾಗೂ ನಿತ್ಯಶ್ರೀಯ ಮನತುಂಬಿದ ಧ್ವನಿಯಿದೆ. ಅಷ್ಟರಿಂದಲೇ ಆ ವಿಡಿಯೋ ವೈರಲ್ ಆಗಿದೆ. ಆಕೆಗೆ ಜನಪ್ರಿಯತೆ ತಂದುಕೊಟ್ಟಿದೆ. ದೂರದ ರಷ್ಯಾದವರೆಗೂ ಇದು ಹರಡಿದೆ. ಇಂದಿನ ದಿನಗಳಲ್ಲಿ ಒಂದು ಚಿಕ್ಕ ದೃಶ್ಯವೇ ವ್ಯಕ್ತಿಗೆ ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ತಂದುಕೊಡಬಲ್ಲದು ಎಂಬುದಕ್ಕೆ ಇದು ಒಂದು ಉತ್ತಮ ಉದಾಹರಣೆ.

ಈಗಾಗಲೇ ಬಹಳ ವರ್ಷಗಳ ಹಿಂದೆ ಬಂದಂತ ಹಾಡನ್ನು ತನಗಿಷ್ಟ ಬಂದಂತೆ ಆಕೆ ಹಾಡಿದ್ದಾಳೆ. ಅದರಲ್ಲಿ ಸಂಗೀತದ ಯಾವುದೇ ರಾಗ-ತಾಳಗಳು ಇಲ್ಲದೇ ಇದ್ದರೂ ಹಾಡಿನಲ್ಲಿ ಧ್ವನಿಯ ಸ್ಪಷ್ಟತೆ ಮತ್ತು ಆತ್ಮವಿಶ್ವಾಸವಿದೆ. ಯಾರನ್ನೋ ಮೆಚ್ಚಿಸಲು ಹಾಡಿರುವ ಹಾಗಿರದೆ, ತನ್ನ ಸ್ನೇಹಿತರ ಜೊತೆಗೆ ಸಂತೋಷದಿಂದ ಇರುವಾಗ ಸ್ವಾಭಾವಿಕವಾಗಿ ತನ್ನ ಮನ ಸಂತೋಷಕ್ಕೆ ಹಾಡಿದ್ದಾಳೆ. ಹಾಗಾಗಿ ಬಿರುಗಾಳಿ ಸಿನಿಮಾದಲ್ಲಿ ಈ ಹಾಡಿನ ಸಂಗೀತ ನಿರ್ದೇಶನ ಮಾಡಿರುವ ಅರ್ಜುನ್ ಜನ್ಯರವರೂ ಕೂಡ ಈ ಪ್ರಯತ್ನವನ್ನು ಧನಾತ್ಮಕವಾಗಿ ನೋಡಿದ್ದಾರೆ.

ಅನೇಕರು “ಹೀಗೆ ಹೊಸ ಪ್ರತಿಭೆಗಳು ಬೆಳಗಬೇಕು” ಎಂದು ಆಶಿಸುತ್ತಿದ್ದಾರೆ. ಇನ್ನು ಹಲವರು “ರೀಲ್‌ಗಳ ಯುಗದಲ್ಲಿ ಯಾರಾದರೂ ಒಂದು ಕ್ಷಣದಲ್ಲಿ ಪ್ರಸಿದ್ಧರಾಗುತ್ತಾರೆ” ಎಂಬ ನೋಟವನ್ನೂ ನೀಡಿದ್ದಾರೆ.

ಈ ಮೊದಲು ಯಾವುದೇ ಕಲಾ ಪ್ರಕಾರದಲ್ಲಿ ಪ್ರತಿಭೆ ತೋರಿಸಲು ರೇಡಿಯೋ ಬೇಕಿತ್ತು. ರೇಡಿಯೋದಲ್ಲಿ ಹಾಡು ಹೇಳುವುದು ಅನೇಕರ ಕನಸಾಗೇ ಉಳಿಯಿತು. ನಂತರ ಬಂದ ದೊಡ್ಡ ವೇದಿಕೆಯೆಂದರೆ ಟಿ.ವಿ. ಇದರಲ್ಲೂ ಪ್ರವೇಶ ಪಡೆಯುವುದು ಅಷ್ಟು ಸುಲಭವವಾಗಿಲ್ಲ. ಸಾಮಾಜಿಕ ಜಾಲತಾಣಗಳು ಬಂದ ನಂತರ ಪ್ರತಿಭೆಗಳಿಗೆ ನೇರವಾಗಿ ಜನರಿಗೆ ತಲುಪುವ ಅವಕಾಶ ತೆರೆಯಿತು. ಬಹಳಷ್ಟು ಜನರು ಇದರ ಪ್ರಯತ್ನದಲ್ಲಿ ಇದ್ದಾರೆ. ಆದರೆ ಗಮನ ಸೆಳೆಯಲು ಸಾಧ್ಯವಾಗಿರುವುದು ಕೆಲವರಿಗೆ ಮಾತ್ರ. ಅಲ್ಲೇನೋ ಒಂದು ಹೊಸತನವಿರಬೇಕು, ಪ್ರಯತ್ನ ಪ್ರಾಮಾಣಿಕವಾಗಿರಬೇಕು ಆಗ ಮಾತ್ರ ಜನರು ಗಮನ ಸೆಳೆಯಲು ಸಾಧ್ಯವೆಂದು ಅನೇಕ ಬಾರಿ ಸಾಬೀತಾಗಿದೆ. ಈ ಮಾಧ್ಯಮದಲ್ಲಿ ಹಳ್ಳಿ–ನಗರ, ಬಡವ–ಶ್ರೀಮಂತ ಅಂತರ ಇಲ್ಲ. ಒಂದು ಸರಳ ಹಾಡು, ಒಂದು ಕಿರು ಕವಿತೆ, ಒಂದೆರೆಡು ಮಾತುಗಳು ಅಥವಾ ಒಂದೆರೆಡು ನೃತ್ಯದ ಹೆಜ್ಜೆಗಳು ವ್ಯಕ್ತಿಯ ಬದುಕು ಬದಲಾಯಿಸಬಹುದು. ಈಗಲೂ ಅಷ್ಟೇ ಆಗಿರುವುದು.

ಅನೇಕರಿಗೆ ಈಗಲೂ ತಾವು ಎಂದೋ ರೇಡಿಯೊದಲ್ಲಿ ಕೇಳಿದ ಹಾಡು ಮತ್ತು ಹಾಡಿದವರ ಹೆಸರು ನೆನಪಿದೆ. ಅನೇಕರು ಹಾಡು ಮತ್ತು ಹಾಡುಗಾರರ ಹಾಡುಗಳನ್ನು ಟೇಪ್ ರೆಕಾರ್ಡರ್ ನಲ್ಲಿ ಕೇಳಿದ್ದಾರೆ ಮತ್ತು ನಂತರ ಬಂದ ಸಿ.ಡಿ.ಗಳನ್ನು ಹುಡುಕಿಕೊಂಡು ಹೋಗಿ ತಂದಿಟ್ಟು ಕೊಂಡಿದ್ದರು. ಈಗ ಅವರೆಲ್ಲಾ ಯೂಟ್ಯೂಬಿಗೆ ಸ್ಥಳಾಂತರಗೊಂಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಆ ಹಾಡುಗಳು ಗಟ್ಟಿಯಾಗಿರುವುದು ಮತ್ತು ಹಾಡುಗಾರರು ಅಥವ ನೃತ್ಯಗಾರರು ನಿಜವಾದ ಪ್ರತಿಭೆ ಹೊಂದಿದವರಾಗಿದ್ದರು. ಆ ಕಲೆಗಳಲ್ಲಿ ಶ್ರದ್ಧೆಯಿಂದ ಸಾಧನೆ ಮಾಡಿದವರಾಗಿದ್ದಾರೆ.

ಆದರೆ ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪ್ರಸಿದ್ಧಿ, ಬಂದ ಹಾಗೆ ಹಿಂದಕ್ಕೆ ಹೋಗುವ ಸಾಧ್ಯತೆ ಜಾಸ್ತಿಯಿದೆ. ಇದಕ್ಕೆ ಮುಖ್ಯವಾದ ಕಾರಣ ಕೆಲವೊಮ್ಮೆ ನಿಜವಾದ ಕಲೆಗಿಂತಲೂ ಅದ್ಭುತ ಆಕರ್ಷಣೆ, ಅಸಂಬದ್ಧತೆ ಹೆಚ್ಚು ವೈರಲ್ ಆಗುವ ಸಾಧ್ಯತೆಯಿದೆ. ವೈರಲ್ ಆದ ವಿಡಿಯೋಗಳ ಜೊತೆ ಬರುವ ಪಬ್ಲಿಸಿಟಿಯ ಜೊತೆಗೆ ಟೀಕೆಗಳು ಮತ್ತು ನಿಂದನೆಗಳು ಕೂಡ ಬೇಕಾದಷ್ಟು ಬರುತ್ತದೆ. ಅವುಗಳನ್ನು ತಡೆದುಕೊಳ್ಳುವ ಶಕ್ತಿ ಕೂಡ ಇರಬೇಕಾಗುತ್ತದೆ. ಆನೇಕ ನಿಜವಾದ ಪ್ರತಿಭೆಗಳು ಈ ಕಾರಣದಿಂದ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳಲು ಹಿಂಜರಿಯುತ್ತಾರೆ.

ಸಮಾಜಶಾಸ್ತ್ರೀಯ ದೃಷ್ಟಿಯಲ್ಲಿ, “ವೈರಲ್” ಎಂದರೆ ಕ್ಷಣಿಕ ಸಮೂಹ ಸ್ಮೃತಿ. ಅದು ಬಿರುಸಿನಿಂದ ಹೊತ್ತಿ, ಬೇಗ ಆರಬಹುದು. ಆದರೆ ನಿಜವಾದ ಕಲೆ ದೀರ್ಘಕಾಲ ಬದುಕುತ್ತದೆ – ಗೋಪಾಲಕೃಷ್ಣ ಅಡಿಗರ ಕವನಗಳು, ಪಿ.ಬಿ.ಶ್ರೀನಿವಾಸ್ ಗಾಯನಗಳು ಇದಕ್ಕೆ ಕೆಲವು ಉದಾಹರಣೆಗಳು.

ಹೀಗಾಗಿ, ನಿತ್ಯಶ್ರೀಯಂತಹ ಯುವ ಪ್ರತಿಭೆಗಳು ನಿರಂತರ ಅಭ್ಯಾಸ, ಶಿಸ್ತು, ಕಲೆಯ ಮೇಲೆ ಪ್ರೀತಿ ಇಟ್ಟುಕೊಂಡರೆ ಮಾತ್ರ ಸಮಾಜದ ದೀರ್ಘ ಸ್ಮೃತಿಯಲ್ಲೂ ಉಳಿಯುತ್ತಾರೆ.

“ಹೂವಿನ ಹಾಡಿನಂತೆ..”ಹಾಡಿನ ಕಾವ್ಯಾತ್ಮಕ ರೂಪಕವೇ ಯುವಜನರ ಬದುಕಿನ ರೂಪಕ ಕೂಡ ಆಗಿದೆ. ಹೂವಿನ ಬಾಣದಂತೆ ಅರಳಿದ ಹಾಗೆ, ಯುವಜನರ ಕನಸುಗಳು ಕೂಡ ಧೈರ್ಯದಿಂದ ಅರಳಬೇಕು. ಹೂವು ತನ್ನ ಬಣ್ಣದಿಂದ, ಸುವಾಸನೆಯಿಂದ ಹರ್ಷಗೊಳಿಸಿದಂತೆ, ಯುವ ಜನರ ಪ್ರತಿಭೆ ಸಮಾಜಕ್ಕೆ ಹೊಸ ಆನಂದವನ್ನು ನೀಡಬೇಕು. ನಿತ್ಯಶ್ರೀಯ ಕಿರುಹಾಡು ಇಂದು ಸಾವಿರಾರು ಮನಗಳಿಗೆ ಹೊಸ ಸಂತೋಷ ಕೊಟ್ಟಿದೆ. ಇದೇ ಹೇಳುತ್ತದೆ – ಸಾಧನೆಗೆ ವೇದಿಕೆ ಬೇಕಾಗಿಲ್ಲ, ಸಾಧನೆಯೇ ವೇದಿಕೆಯಾಗುತ್ತದೆ!

ಕನಸುಗಳಿಗೆ ಅಡ್ಡಿಯಾಗುವ ಭಯವನ್ನು ಬದಿಗಿರಿಸಿ. ತಮ್ಮೊಳಗಿನ ಧ್ವನಿಯನ್ನು ಹೊರಹಾಕಿ. ಹೃದಯದಿಂದ ಮಾಡಿದ ಸೃಜನಶೀಲತೆ “ಹೂವಿನ ಬಾಣದಂತೆ” ಹಬ್ಬುತ್ತದೆ ಎಂಬುದರಲ್ಲಿ ಸಂಶಯವಿಲ್ಲ.


  •  ರಘುರಾಮ್.ಎನ್.ವಿ – ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್), ಕ.ವಿ.ನಿ.ನಿ., ಬೆಂಗಳೂರು.

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW