‘ಮಂಗಟ್ಟೆ ಪಕ್ಷಿ’ ಕವನ – ತೇರು ವಾಗೀಶ್

ಹೆಣ್ಣು ಹಕ್ಕಿಯ ಮುಂದೆ ಹಲವು ಹಣ್ಣುಗಳ ನೀಡಿ ಮೃಷ್ಟಾನ್ನದ ಸವಿ ತಿನಿಸಿ… ಕವಿ ತೇರು ವಾಗೀಶ್ ಅವರ ಈ ಕವನವನ್ನು ತಪ್ಪದೆ ಮುಂದೆ ಓದಿ…

ಪಕ್ಷಿ ಪ್ರಪಂಚದ
ಅನನ್ಯ ಪ್ರೇಮ ಕಥೆ
ಮಂಗಟ್ಟೆಯ ದಾಂಪತ್ಯ ಕಥೆ
ಪ್ರೀತಿಯೇ ಸಮರ್ಪಣೆಯೆಂದು
ಎಂದು ಸಾರಿ ಸಾರಿ ಹೇಳುವ
ಜೋಡಿ ಹಕ್ಕಿಗಳ ಕಥೆ….

ಹೆಣ್ಣು ಹಕ್ಕಿಯ ಮುಂದೆ
ಹಲವು ಹಣ್ಣುಗಳ ನೀಡಿ
ಮೃಷ್ಟಾನ್ನದ ಸವಿ ತಿನಿಸಿ
ನನ್ನ ಜೀವ ನಿನಗಾಗಿ ಎಂದು
ಪ್ರೇಮವ ನಿವೇದಿಸುವ ಪರಿಗೆ
ಒಲಿಯದಿರುವುದೇ ಹೆಣ್ಣು ಹಕ್ಕಿ…

ಮಧುರ ಪ್ರೇಮ ದಾಂಪತ್ಯವಾಗಿ
ಅಚ್ಚ ಹಸುರಿನಲಿ ಮಧುಚಂದ್ರವಾಗಿ
ಜೋಡಿ ಹಕ್ಕಿಗಳ ಭಾವ ಬಂಧವಾಗಿ
ಅನನ್ಯ ಪ್ರೀತಿಯ ಸಾಕ್ಷಿಯಾಗಿ
ಮರದ ಪೊಟರೆಯ ಹುಡುಕುವವು
ಹೆಣ್ಣು ಮಂಗಟ್ಟೆಯ ತಾಯ್ತನಕ್ಕಾಗಿ…

ಪೊಟರೆಯ ಒಳಗೆ ಹೆಣ್ಣು ಮಂಗಟ್ಟೆ
ಪೊಟರೆಯ ಹೊರಗೆ ಗಂಡು ಮಂಗಟ್ಟೆ
ಹಸಿ ಮಣ್ಣು ತಂದು ಬಾಗಿಲು ಬಿಗಿಗೊಳಿಸಿ
ತನ್ನ ಮೈ ತುಪ್ಪಳವ ಬೀಳಿಸಿ ಅಣಿಗೊಳಿಸಿ
ಬೆಚ್ಚನೆಯ ಮೆತ್ತನೆಯ ಹಾಸಿಗೆ ನಿರ್ಮಿಸಿ
ತತ್ತಿಗಳ ಪೋಷಣೆಗಾಗಿ ಹೆಣ್ಣು ಮಂಗಟ್ಟೆ…

ಆ ಜೀವಪರ್ಯಂತ ಒಂದೇ ಸಂಗಾತಿಯ
ಮನಸಾರೆ ಮೆಚ್ಚಿ ಬದುಕುವ ಗಂಡು ಮಂಗಟ್ಟೆ..
ಕಾಡು ಮೇಡುಗಳ ತಿರುಗಿ ಸವಿ ರುಚಿಯ
ಹಣ್ಣುಗಳ ಕೀಟ ಮಿಡತೆಗಳ ಹುಡುಕಾಡಿ
ಕೊಕ್ಕಿನ ಕೈ ತುತ್ತು ನೀಡಿ ಕಾಪಾಡಿ..

ನಾ ನಿನಗೆ.. ನೀನನಗೆ.. ಜೇನಾಗುವ
ಹೂವಾಗುವ ಹಣ್ಣಾಗುವ ಸಾರುವ
ಕವಿವಾಣಿಯ ಸತ್ಯ ಸಾದೃಶ್ಯಗೊಳಿಸುವ
ಮಂಗಟ್ಟೆ ಪಕ್ಷಿಗಳ ಅನನ್ಯ ಪ್ರೇಮ ಕಥೆ…


  •  ತೇರು ವಾಗೀಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading