ಬಡ ಕಾರ್ಮಿಕ ನೋವನುಂಡು ಮತ್ತೆ ಎದ್ದುನಿಂತು ಹೇಗೆ ಕೆಲಸ ಮಾಡುತ್ತಾನೆ, ಅವನ ಕಷ್ಟದ ಮುಂದೆ ನಮ್ಮ ಕಷ್ಟಗಳೇನು ಅಲ್ಲ. ಪ್ರೊ. ರೂಪೇಶ್ ಅವರು ಬರೆದ ಈ ಲೇಖನ ಮನ ಮುಟ್ಟುತ್ತದೆ.
ಹತ್ತನೇ ತರಗತಿಯ ಪರೀಕ್ಷೆಗಳ ನಂತರ ರಜಾದಿನಗಳಲ್ಲಿ , ಕೂಲಿ ಕೆಲಸಕ್ಕೆ ಮಾರುಕಟ್ಟೆಯ ಬಳಿ ನಿಲ್ಲುತ್ತಿದ್ದೆ. ಅಲ್ಲಿ ಮೇಸ್ತ್ರಿಗಳು ಮುಂಜಾನೆ ಸುಮಾರು ಆರು- ಏಳು ಗಂಟೆಯೊಳಗೆ ಬಂದು, ನಮ್ಮಲ್ಲಿ ಅವರಿಗಿಷ್ಟ ಇರುವವರನ್ನು ಕರೆದುಕೊಂಡು ಹೋಗುತ್ತಿದ್ದರು. ಕೆಲವೊಮ್ಮೆ ಕೆಲಸ ಕಡಿಮೆ ಇದ್ದಾಗ, ಅಥವಾ ಜಾಸ್ತಿ ಜನರಲ್ಲಿ ನಮ್ಮನ್ನು ಯಾರೂ ಕರೆಯದೆ ಬಾಕಿಯಾದಾಗ ತಲೆಯ ಮೇಲೆ, ಯಾವುದೋ ದೊಡ್ಡ ಭಾರ ನಿಂತಂಗೆ, ಕಾಲುಗಳು ಭಾರವಾಗಿ ಮೆಲ್ಲನೆ ನಡೆಯುವುದಿದೆ.
ಒಂದ್ಸಲ ಐತಪ್ಪ ಎಂಬ ಮೇಸ್ತ್ರಿ ಜೊತೆ , ರಸ್ತೆ ಡಾಮರು ಕೆಲಸಕ್ಕೆ ಹೋಗಿದ್ದೆ. ತುಂಬಾ ಸೆಖೆ ಹಾಗೂ ಠಾರಿನ ದ್ರವದ ಬಿಸಿ ನಮಗೆ ತುಂಬಾ ದೇಹ ಸುಸ್ತು ಮಾಡುತ್ತಿತ್ತು. ಚಪ್ಪಲಿ ಕೆಲಸ ಮುಂದುವರಿದಂತೆ, ಠಾರು ಅಂಟಿಕೊಂಡು ದಪ್ಪ ದಪ್ಪವಾಗಿ ಎತ್ತಿ ನಡೆಯಲು ಪಾದಗಳಿಗೆ ತುಂಬಾ ಆಯಾಸ ಆಗುತ್ತಿತ್ತು.

ಫೋಟೋ ಕೃಪೆ : New Indian Express
ಇದಕ್ಕಿದ್ದಂತೆ “… ಯಾಹ್ ಅಲ್ಲಾಹ್…..ಅಯ್ಯೋ …” ಎಂಬ ಸದ್ದು . ಅದು ಬಶೀರ್ ಆಗಿದ್ದ. ಅವನ ಕಾಲಿಗೆ ಬಿಸಿ ಬಿಸಿ ಠಾರು ಅವನ ಮೊಣಕಾಲಿಂದ ಉದ್ದಕ್ಕೆ ಕೆಳಗಡೆ ಬಿದ್ದು ಅಂಟಿಕೊಂಡಿತ್ತು. ಅವನ ಕಿರುಚಾಟಕ್ಕೆ ನಾವೆಲ್ಲಾ ಧಾವಿಸಿದೆವು. ಪಕ್ಕದ ಮನೆಗೆ ಓಡಿ ಒಂದು ಬಿಂದಿಗೆ ನೀರು ತಂದೆ, ಅದನ್ನು ಅವನ ಕಾಲಿಗೆ ಮೇಸ್ತ್ರಿ ಒಯ್ದರು. ಅವನ ಕೆಂಗಣ್ಣು ಕಣ್ಣೀರು ಬತ್ತಿತ್ತು ಆಕಾಶ ನೋಡಿ ಏನೋ ತುಟಿ ಕಂಪಿಸುತ್ತಾ ಗೊಣಗುತ್ತಿದ್ದ.
ಸ್ವಲ್ಪ ಹೊತ್ತು ಅವನ ಬಳಿ ನಿಂತಿದ್ದ ನಮ್ಮಲ್ಲಿ “ಆಯ್ತು … ಹೋಗಿ… ಎಲ್ರೂ ಕೆಲಸ ಮುಂದುವರಿಸಿ…” ಎಂದು ಮೇಸ್ತ್ರಿ ಉದ್ಘೋಷಿಸಿದ.
ನಾವು ಕೆಲಸ ಮುಂದುವರಿಸುತ್ತಾ ಹದಿನೈದು ನಿಮಿಷ ಆಗಿರಬೇಕು. ಬಶೀರ್ ತನ್ನ ಕೆಲಸದಲ್ಲಿ ಮುಂದುವರಿಯ ತೊಡಗಿದ. ಅವನು ತನ್ನ ಕಾಲಿಗೆ ಅಂಟಿದ ಠಾರು ಚರ್ಮದ ಜೊತೆ ಎಳೆದು ತೆಗೆದು, ಚರ್ಮ ಸುಲಿದ ಆ ಭಾಗದಲ್ಲಿ ರಕ್ತ ಬರುವುದಕ್ಕೆ, ರೋಡಿನ ಪಕ್ಕದ ಕಮ್ಯೂನಿಸ್ಟ್ ಗಿಡದ ಎಲೆಯ ರಸ ಅದಕ್ಕೆ ಹಾಕಿದ್ದ. ಆ ಎಲೆಯ ರಸ ತುಂಬಾ ಉರಿ, ಅದನ್ನು ಸಹಿಸಿಕೊಂಡು ಅವನು ಕೆಲಸ ಮಾಡುವುದು ನೋಡಿದಾಗ , ಆ ಕಾಲು , ಚರ್ಮ ಸುಲಿದ (Skin out )ಕೋಳಿಯ ಮೇಲ್ಮೈ ತರಹ ಎದ್ದು ಕಾಣುತ್ತಿತ್ತು.

ಫೋಟೋ ಕೃಪೆ : scroll.in
“ಇಂದು ಸಂಜೆ ಉಮ್ಮ(ತಾಯಿ) ಗೆ ಔಷಧಿ ಖರೀದಿಸಬೇಕು. ಇವತ್ತು ಪೂರ್ಣ ಕೆಲಸ ಮಾಡದಿದ್ದರೆ, ನಾಳೆ ಕೆಲಸಕ್ಕೆ ಕರೆಯಲ್ಲ….” ಎಂದು ನನ್ನ ಪ್ರಶ್ನಾರ್ಥಕ ಮುಖಕ್ಕೆ ಉತ್ತರಿಸಿದ.
ಕೆಲಸ ಮುಗಿದು ನನ್ನ ರೂ೨೫/-ಕೂಲಿಯಿಂದ ಐದು ರೂಪಾಯಿ ಅವನಿಗೆ ನೀಡಲು ಚಾಚಿದೆ ” ಬೇಡ…ನನ್ನ ಪಾಡು ನನ್ನ ಹೊಟ್ಟೆಗೆ ಗೊತ್ತಿದೆ. ಈ ಹೊಟ್ಟೆಪಾಡೇ ನಮ್ಮ ವರ. ಅದು ಯಾರಿಗೂ ಕೊಡಬಾರದು. ಅದು ಇರೋ ತನಕ ನಾವು ಸರಿಯಾಗಿ ದುಡೀತೀವಿ” ಅಂದ ನಗು ನಗುತ್ತಾ…..
ಇನ್ನೊಮ್ಮೆ ಮನೆ ಕಟ್ಟಡದ ಕೆಲಸ ಮಾಡುವ ಸ್ಥಳದಲ್ಲಿ, ಒಬ್ರು ಬಿಜಾಪುರದಿಂದ ಕೆಲಸ ಹುಡುಕಿ ಬಂದ ಮಹಿಳೆ, ತಲೆಯ ಮೇಲಿನ ಸಾಮಾನು ಸರಂಜಾಮಿನ ಭಾರದ ಗೋಣಿಯೊಂದಿಗೆ ಒಂದನೇ ಮಹಡಿಯಿಂದ ಮೆಟ್ಟಿಲಲ್ಲಿ ಉರುಳಿ ನೆಲಮಹಡಿಗೆ ಬಂದು ಬಿದ್ದರು. ತಲೆ- ಕಾಲಿಂದ ರಕ್ತ ಸುರಿಯುತ್ತಿದ್ದರೂ , ದೂರದಲ್ಲಿ ಆಟವಾಡುತ್ತಿದ್ದ ಅವಳ ಮಗುವನ್ನು ನೋಡುತ್ತಾ,ಎದ್ದು ಕೆಲಸ ಮುಂದುವರಿಸುತ್ತಿದ್ದಾಗ , ಸಹಾಯಕ್ಕೆ ಧಾವಿಸಿ ಬಂದ ನಮ್ಮಲ್ಲಿ ಹೇಳಿದ್ದು..

ಫೋಟೋ ಕೃಪೆ : scroll.in
” ಏನೂ ಆಗಿಲ್ಲ ಸಾರಾ….ಕೆಲಸ ಮುಂದುವರಿಸ್ತಿನಿ, ಚಿಕ್ಕ ನೋವು ಐತೆ, ….. ಕೆಲಸ ಮಾಡ್ಕೋತೀನಿ…” ಅನ್ನುತ್ತಾ…. ಉಫ್ ಎಂದು ಎದ್ದು, ” ನಮ್ಮ ಹೊಟ್ಟೆ ಪಾಡು ಬಿಟ್ಟ್ ಕೊಡೋಕೆ ಆಗುತ್ತೆಯೋ?” ಎಂದು ಕೆಲಸದಲ್ಲಿ ತೊಡಗಿದಳು.
ಇದುವೇ “ಹೊಟ್ಟೆ ಪಾಡು” ಎಂಬ ಪದದ ತಿರುಳು ಹಾಗೂ ಶಕ್ತಿ ಎಂದು ನಾನು ಅಲ್ಲಿ ಭದ್ರವಾಗಿ ಅರಿತಿದ್ದು.
ಹೊಟ್ಟೆ ಪಾಡಿಗೆ ವಿದ್ಯೆಯಿಂದ ಸಿಗುವ ಕೆಲಸ ನೋಡುವಾ ಎಂದು ವಿಶ್ವವಿದ್ಯಾಲಯದಲ್ಲಿ ಸ್ನಾಕೋತ್ತರ ಮಾಡಿದವರು ನನ್ನ ಜೊತೆ ಬಹಳಾ ಇದ್ದರು. ಆದರೆ ಅದರಿಂದ ಸಿಕ್ಕ ಕೆಲಸವನ್ನು ನೀಯತ್ತಿನಿಂದ ಮಾಡುತ್ತಿದ್ದೇವೆ. ಆದ್ದರಿಂದ ಇಷ್ಟು ವರುಷ ಅದೇ ಕ್ಷೇತ್ರದಲ್ಲಿ ಇದ್ದೇವೆ.
ಈ ಬಶೀರ್ ಹೇಳಿದಂತೆ , ಹೊಟ್ಟೆ ಪಾಡು ಎಂಬ ವರ ಪಡೆದು ಕೆಲಸ ಮಾಡುವಾಗ ಎಲ್ಲೂ ನಿರಾಸಕ್ತಿ, ಅಸಹನೆ, ಬೇಜವಾಬ್ದಾರಿ, ಕಾಟಾಚಾರ ಅಂತಹಾ ಯಾವುದೇ ಲಕ್ಷಣ ಬೆಳೆದಿಲ್ಲ,ಕಂಡಿಲ್ಲ, ಬಂದಿಲ್ಲ. ಅಥವಾ ಅಂತಹುದು ಚಿಂತಿಸಲು ಈ ವರ ಅವಕಾಶ ಕೊಡುತ್ತಿರಲಿಲ್ಲ.
ಹಾಂ… ಒಂದು ವೇಳೆ ಸಮಯ ವ್ಯಯಕ್ಕೆ (ಟೈಂ ಪಾಸಿಗೆ) ಕೆಲಸ ಮಾಡುವಾಗ ಇಂತಹಾ ಗುಣ ಲಕ್ಷಣ ಬರಬಹುದು. ಆದರೆ ಹೊಟ್ಟೆ ಪಾಡಿಗೆ ಆ ಲಕ್ಷಣಬರುವುದಾದರೆ ಅದು ಹಸಿವಿಗಾಗಿ ಮಾಡುವ ಕೆಲಸವಾಗಿರುವುದಿಲ್ಲ. ಅದೊಂದು ದೇಹ- ಆತ್ಮಗಳೊಳಗಣ ದ್ರೋಹ ಎನ್ನಬಹುದು.
ಹೊಟ್ಟೆ ಪಾಡಿನೊಂದಿಗೆ ಎಂದೆಂದೂ ಜೊತೆಯಾಗಿ ನೀಯತ್ತು, ಶ್ರಮ, ಮಾನ , ಮರ್ಯಾದೆ, ನಾಳೆ ಇನ್ನೊಂದು ಕಡೆ ಕೆಲಸ ಸಿಗಬೇಕು ಎನ್ನುವ ಡವ… ಡವ… ಅಸಹಾಯಕ ಮಿಡಿತ, ನಾಳೆಯೂ ಆರೋಗ್ಯ ಸರಿ ಇರಲಿ ಎಂಬ ಪ್ರಾರ್ಥನೆ ಆ ಕೆಲಸದೊಂದಿಗೆ ಇಣುಕಿ ನೊಡುತ್ತಿರುತ್ತದೆ.
ನಿಮ್ಮವ ನಲ್ಲ
ರೂಪು
- ಪ್ರೊ. ರೂಪೇಶ್ (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಬೆಂಗಳೂರು)
