“ಬದುಕಿದೆಯಾ ಬಡ ಜೀವವೇ”- ಡಾ.ಯುವರಾಜ ಹೆಗಡೆ



ವೈದ್ಯರಿಂದ ಒಳ್ಳೆಯದಾಗ ‘ವೈದ್ಯೋ ನಾರಾಯಣೋ ಹರಿ’ ಎನ್ನುತ್ತೇವೆ. ಅದೇ ತೊಂದರೆಯಾಯಿತು ಎಂದಾಕ್ಷಣ ಹಿಂದು ಮುಂದೂ ನೋಡದೆ ಸೀದಾ ವೈದ್ಯರ ಮೇಲೆ ಎತ್ತಿಹಾಕುತ್ತೇವೆ. ಆ ವೈದ್ಯ ಇಂತಹ ನಿಂದನೆಯನ್ನು ಒಳಗೊಳಗೇ ಅನುಭವಯಿಸುವ ನೋವನ್ನು ಡಾ.ಯುವರಾಜ ಹೆಗಡೆ ಅವರು ತಮ್ಮ ಅನುಭವದ ಕತೆಯೊಂದನ್ನು ಹೇಳಿದ್ದಾರೆ. ಮುಂದೆ ಓದಿ …

ಅದು ೨೦೦೭ರ ಜನವರಿ ಸಮಯ. ನಾನು ಇಲಾಖೆ ಸೇರಿ ೨ ತಿಂಗಳಾಗಿತ್ತು. ಬಹುಶಃ ರಾಷ್ಟ್ರವ್ಯಾಪಿ ಕಾಲುಬಾಯಿ ಲಸಿಕಾ ಕಾರ್ಯಕ್ರಮದ ಆರಂಭದ ದಿನಗಳು. ಆಗಿನ ಸಹಾಯಕ ನಿರ್ದೇಶಕರಾಗಿದ್ದ ಡಾ.ವಿ.ಕೆ ಮಂಜುನಾಥರವರು ಮಾಸಿಕ ಸಭೆಯಲ್ಲಿ ಪಶುಚಿಕಿತ್ಸಾಲಯ ದೇವಂಗಿಗೆ ನೀಡಲಾಗುವ ಲಸಿಕೆಯ ವಿವರಗಳನ್ನು ನೀಡುತ್ತಾ, ನೋಡಿ ನೀವು ಹೊಸ ಡಾಕ್ಟ್ರು, ಇನ್ನೂ ಯುವಕ, ಈ ವಯಸ್ಸಿನಲ್ಲಿ ಸರಿಯಾಗಿ ಕೆಲಸ ಮಾಡಿ ಅನುಭವ ಪಡಿಬೇಕ್ರಿ… ಈ ಭಾರಿಯ ಕಾಲು ಬಾಯಿ ಜ್ವರದ ಲಸಿಕಾ ಕಾರ್ಯಕ್ರಮದಲ್ಲಿ ಪ್ರತಿ ಮನೆಗೂ ಹೋಗಿ ಪ್ರಾಮಾಣಿಕವಾಗಿ ಲಸಿಕೆ ಮಾಡಿ ಮುಗಿಸಬೇಕು. ಮಧ್ಯೆದಲ್ಲಿ ನೋಡಲು ಬರುತ್ತೇನೆ ಎಂದು ಸ್ವಲ್ಪ ಗಡುಸಾಗಿಯೇ ಹೇಳಿದ್ದು, ಈಗಲೂ ನೆನಪಿನಲ್ಲಿದೆ.

ಕಾಲೇಜು ದಿನಗಳನ್ನು ಶ್ರದ್ದೆಯಿಂದ ಕಲಿತು ಸೇವಾವಕಾಶಕ್ಕಾಗಿ ತುದಿಗಾಲಿನಲ್ಲಿ ನಿಂತಿದ್ದವನಿಗೆ ನೀಡಿದ ಸವಾಲನ್ನು ಉತ್ಸುಕನಾಗಿಯೇ ಸ್ವೀಕರಿಸಿ, ಮರುದಿನದಿಂದಲೇ ದೇವಂಗಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಲಸಿಕೆ ಹಾಕಲಾರಂಭಿಸಿದೆ. ಆ ಊರಿಗೆ ಮೊದಲ ಪಶುವೈದ್ಯನಾಗಿ ನೇಮಕಗೊಂಡ ಹಿರಿಮೆ ನನ್ನದಾಗಿತ್ತು ಕೂಡ. ಯಾರೋ ಹುರುಪಿನ ತೆಳ್ಳಗಿನ ಹುಡುಗ, ಮಾತು ಕಡಿಮೆ, ಹೆಗಡೆ ಅಂದ್ರೆ ಶಿರಸಿಯವನೇನೋ ಎಂದು ಕೆಲವರೆಂದರೆ, ಇಲ್ಲಾ… ಈತ ಮೇಗರವಳ್ಳಿಯ ಕಡೆಯ ಹುಡುಗ ಎಂದು ಲಸಿಕೆ ಹಾಕಲು ಹೋದಾಗ ಮದುವೆಗೆ ಹುಡುಗನ ತಲಾಷ್ ನಲ್ಲಿ ಇದ್ದವರು ಬೇಡವೆಂದರೂ ಒತ್ತಾಯವಾಗಿ ಮನೆಯೊಳಗೆ ಆಹ್ವಾನಿಸಿ ಕಾಫಿ ನೀಡಿ ಮಾತಿಗೆಳೆಯುತ್ತಿದ್ದದ್ದು ಸಾಮಾನ್ಯವಾಗಿತ್ತು.

ಹೀಗೆ ಲಸಿಕಾ ಕಾರ್ಯಕ್ರಮ ಮುಂದುವರೆಸುತ್ತಾ ಕೆಲವು ವಿಶಿಷ್ಟವಾದ ಅನುಭವಗಳನ್ನು ಪಡೆಯಲಾರಂಬಿಸಿದ್ದೆ.

ನೋಡಲು ಚಿಕ್ಕ ಗಾತ್ರದ ಮಲೆನಾಡು ಗಿಡ್ಡಗಳು ಚುಚ್ಚುಮದ್ದು ನೀಡುವ ಸಮಯದಲ್ಲಿ ತೀವ್ರ ಪ್ರತಿರೋಧ ಒಡ್ಡುತ್ತಿದ್ದವಲ್ಲದೆ ಅವುಗಳನ್ನು ನಿಯಂತ್ರಿಸಲು ನಾವು ಹರಸಾಹಸ ಪಡುತ್ತಿದ್ದೆವು. ಹಗ್ಗವನ್ನು ಹತ್ತಿರ ತರುತ್ತಿದ್ದಂತೆ ಯಾವುದೇ ಸೂಕ್ಷವನ್ನೂ ನೀಡದೆ ಕ್ಷಣಾರ್ಧದಲ್ಲಿ ಅವುಗಳ ಹಿಂಗಾಲು ನಮ್ಮ ಮಂಡಿಯನ್ನು ಮುತ್ತಿಕ್ಕಿದ್ದರೆ, ಕೆಲವೊಮ್ಮೆ ಎದೆಯೆತ್ತರಕ್ಕೂ ಎತ್ತಿ ಭಾರಿಸಿದ್ದು ಪೆಟ್ಟುತಿಂದ ನಂತರವೇ ನಮಗೆ ತಿಳಿಯುತ್ತಿತ್ತು.

ಇನ್ನು ಮನೆಯ ಹೆಗ್ಗಡ ತಮ್ಮನವರದ್ದು ಕೆಲವು ಕಂಡೀನ್ ಗಳು. ಡಾಕ್ಟ್ರೇ… ಹಾಲು ಕೊಡುವ ಹಸುಗಳಿಗೆ ಲಸಿಕೆ ಹಾಕುವಂತಿಲ್ಲ. ಗಬ್ಬದ ಹಸುಗಳಿಗೆ ಬೇಡ. ಮುದ್ದಾದ ಕರುಗಳಿಗೆ ಬೇಡ. ಇನ್ನುಳಿದ ಎತ್ತಿನ ಗುಡ್ಡಗಳಿಗೆ, ಬರಡು ಜಾನುವಾರುಗಳಿಗೆ ಬೇಕಿದ್ದರೆ ಲಸಿಕೆ ಮಾಡಿ ಎಂದು ಹೇಳುವವರಿಗೇನು ಕಡಿಮೆ ಇರಲಿಲ್ಲ. ಅವರುಗಳಿಗೆ ಮುಂಜಾಗೃತಾ ಲಸಿಕೆ ನೀಡುವ ಉದ್ದೇಶ, ಅದರ ಅನುಕೂಲಗಳು, ತಪ್ಪು ತಿಳುವಳಿಕೆಗಳು ಎಲ್ಲವನ್ನೂ ತಿಳಿಸುತ್ತಾ ಅವರ ಮನವೊಲಿಸುವುದೇ ಮಲೆನಾಡಿನ ಗ್ರಾಮೀಣ ಭಾಗದ ಪಶುವೈದ್ಯರಿಗೆ ದೊಡ್ಡ ಸವಾಲು ಎಂದೆನಿಸಿದ್ದಂತೂ ಸತ್ಯ. ಇನ್ನು ಕೆಲವರು ಪಕ್ಕದ ಮನೆಯ ತೋಟ, ಗದ್ದೆಗಳಲ್ಲಿ ಕದ್ದು ಮೇಯುವ ಎತ್ತಿನ ಗುಡ್ಡಗಳತ್ತ ಕೈ ತೋರುತ್ತಾ ಮಲೆನಾಡಿನ ಭಾಷೆಯಲ್ಲಿ “ ಮಾ ತುಡೀನ ಜಾನುವಾರು” ಡಾಕ್ಟ್ರೇ, ಅದಕ್ಕೆ ಐದಾರು ಇಂಜೆಕ್ಷನ್ ಬೇಕಾದರೂ ಹಾಕಿ ಎಂದು ಹೇಳುವವರೂ ಇದ್ದರು.

ಹೀಗೆ ಲಸಿಕಾ ಕಾರ್ಯಕ್ರಮ ಮುಂದುವರೆಸುತ್ತಾ ಬಳಗಟ್ಟೆ ಗ್ರಾಮದ ಗುಡ್ಡೆಕೊಪ್ಪ ಎಂಬಲ್ಲಿಗೆ ತಲುಪಿದೆ. ಹತ್ತಾರು ಆಚಾರ್ ರ ಮನೆಗಳು ಅಲ್ಲಿದ್ದವು. ಬಡತನವಿದ್ದರೂ ಹೃದಯ ಶ್ರೀಮಂತಿಕೆಯುಳ್ಳ ಕುಟುಂಬಗಳು ಅವು. ಊರಿನ ನಾಗರಾಜ, ಜಯರಾಂ ಆಚಾರ್, ಕೃಷ್ಣಮೂರ್ತಿ ಆಚಾರ್ , ಜನಾರ್ಧನ ಆಚಾರ್ ಮುಂತಾದವರ ಮನೆಯ ಹಸುಗಳಿಗೆ ಕಾಲು ಬಾಯಿ ಜ್ವರದ ವಿರುದ್ದ ಲಸಿಕೆ ಹಾಕುತ್ತಾ ಕೊನೆಯದಾಗಿ ಗುಡ್ಡದ ಬುಡದಲ್ಲಿರುವ ಮಂಜುನಾಥ್ ಆಚಾರ್ ರ ಅವರ ಮನೆಗೆ ಬಂದೆ. ಇದ್ದುದರಲ್ಲಿಯೇ ಸ್ಥಿತಿವಂತರೆನ್ನಬಹುದಾದ ಅವರ ಮನೆಯಲ್ಲಿ ಸುಮಾರು ೨೦ ಮಲೆನಾಡು ಗಿಡ್ಡ ರಾಸುಗಳಿದ್ದವು. ಅವುಗಳನ್ನ ನೋಡಿ ಗುರಿ ತಲುಪಲು ಸಹಾಯಕಾರಿಯಾಯಿತಲ್ಲ ಎಂದು ಖುಷಿ ಪಟ್ಟೆ. ಲಸಿಕೆ ಹಾಕಲು ಅಣಿಯಾಗುತ್ತಿರುವಾಗ ಮಾಮೂಲಿನಂತೆ ಯಜಮಾನರು ಬಂದು ಡಾಕ್ಟ್ರೇ ಹಾಲು ಕೊಡುವ ಎರಡು ಹಸುಗಳನ್ನು ಬಿಟ್ಟು ಉಳಿದವಕ್ಕೆ ಮಾಡಿ ಎಂದು ರಾಗ ಎಳೆದಾಗ, ಅವರ ಮನವೊಲಿಸುವಲ್ಲಿ ನಾನು ಎಲ್ಲಾ ರೀತಿಯ ಪ್ರಯತ್ನಗಳನ್ನೂ ಮಾಡಿ ವಿಫಲಗೊಂಡು ಅನಿವಾರ್ಯವಾಗಿ ಸಮ್ಮತಿಸಿ ಎರಡು ಹಸುಗಳನ್ನು ಬಿಟ್ಟು ಉಳಿದ ೧೮ ಕ್ಕೆ ಲಸಿಕೆ ಹಾಕಿ ಅವತ್ತಿನ ಕಾರ್ಯಕ್ರಮ ಮುಕ್ತಾಯಗೊಳಿಸಿದೆ.



ಮರುದಿನ ಬೆಳಗ್ಗೆ ೭ ಗಂಟೆಗೆ ಎಂದಿನಂತೆ ಕಾರ್ಯಕ್ರಮದ ತಯಾರಿ ನಡೆಸುತ್ತಿರುವಾಗ ಫೋನೊಂದು ರಿಂಗಣಿಸಿತು. ಅತ್ತ ಬದಿಯಿಂದ ಗಡುಸು ಧ್ವನಿ” ಡಾಕ್ಟ್ರೇ ನಾನು ಗುಡ್ಡೇಕೊಪ್ಪದ ಗಿರೀಶ , ಮಂಜುನಾಥ ಆಚಾರರ ಮಗ . ಅದೇ ನಿನ್ನೆ ನಮ್ಮನೆಗೆ ಬಂದು ಇಂಜಕ್ಷನ್ ಹಾಕಿದ್ರಲ, ಅವರ ಮನೆಯಿಂದ. ನಮ್ಮನೆ ಹಸು ಸತ್ತೋಗಿದೆ ಬಂದು ಹೋಗಿ” . ನನಗೆ ಒಮ್ಮೆಲೇ ಮೈಮೇಲೆ ವಿದ್ಯುತ್ ಹರಿದಂತೆ ಆಘಾತವಾಯಿತು. ಕ್ಷಣಕಾಲ ಏನೂ ತೋಚದಂತಾಗಿ, ಅವರ ಮನವೊಲೊಸಿ ಲಸಿಕೆ ಹಾಕಿದ್ದೇ ತಪಾಯಿತಲ್ಲ ಎಂದು ಮನಸ್ಸಿನಲ್ಲಿಯೇ ಬೇಸರಿಸಿದೆ. ಲಸಿಕೆ ಹಾಕಿದ ಅಡ್ಡಪರಿಣಾಮಗಳೇನಿದ್ದರೂ ಒಂದೆರಡು ಗಂಟೆಗಳಲ್ಲಿ ತಿಳಿದುಬಿಡುತ್ತದೆ. ಇದು ಕಾಕತಾಳೀಯವಾಗಿ ಬೇರೆಯೇ ಸಮಸ್ಯೆಯಿಂದ ಹಸು ಮರಣ ಹೊಂದಿರುವ ಬಗ್ಗೆ ನನಗೆ ವಿಶ್ವಾಸವಿದ್ದರೂ ಮಾಲೀಕರಿಗೆ ಇದರ ಕುರಿತು ತಿಳಿಸಿ ಹೇಳುವುದಾದರೂ ಹೇಗೆ? ಉದ್ವೇಗದಲ್ಲಿರುವ ಅವರನ್ನುಸಮಾಧಾನಪಡಿಸುವುದಾದರೂ ಹೇಗೆ? ವೃತ್ತಿಯ ಪ್ರಾರಂಭದ ದಿನಗಳಲ್ಲಿ ಇಂತಹ ಪರಿಸ್ಥಿತಿಗಳನ್ನು ಎದುರಿಸುವ ಎದೆಗಾರಿಕೆ ಬೇಕಲ್ಲವೇ?. ಅಲ್ಲಿ ಹೋದಾಗ ನಡೆಯಬಹುದಾದ ಘಟನೆಗಳನ್ನು ನಕಾರಾತ್ಮಕವಾಗಿಯೇ ಯೋಚಿಸುತ್ತಾ ಬೆದರಿ ನನ್ನ ಪಶುವೈದ್ಯ ಮಿತ್ರರಿಗೆ ಫೋನಾಯಿಸಿದೆ.

ಸ್ನೇಹಿತರೋ ಆ ಸಮಯದಲ್ಲಿ “ಅಗಸ ಹೊಸದರಲ್ಲಿ ಬಟ್ಟೆ ಎತ್ತಿ ಎತ್ತಿ ಒಗೆದನಂತೆ ಎಂದಂಗಾಯ್ತು. ಯುವಿ… ಉತ್ಸಾಹ ಇರಬೇಕು ನಿಜ. ಅಗತ್ಯಕ್ಕೆ ತಕ್ಕಷ್ಟು ಮಾಡೋದು ಕಲಿ. ಈಗ ಆಗಿದ್ದಾಗಲಿ ಸ್ಥಳಕ್ಕೆ ಭೇಟಿ ಕೊಡು ಉಳಿದದ್ದು ಆಮೇಲೆ ನೋಡೋಣ” ಎಂದು ಬಂಡ ಧೈರ್ಯ ತುಂಬಿದರು. ಮರಣೋತ್ತರ ಪರೀಕ್ಷೆ ಮಾಡಿ ಇದ್ದದ್ದು ಇದ್ದಂಗೆ ಹೇಳಿಬಿಡುವ, ಉಳಿದಂತೆ ಪರಿಸ್ಥಿತಿ ಎದುರಿಸಿ ಅನುಭವ ಪಡೆದುಕೊಳ್ಳೋಣ ಎಂದು ಕೊಂಡು ಬೆಳಗ್ಗೆ ೯ ಗಂಟೆಗೆ ಅವರ ಮನೆ ಕಡೆಗೆ ಬೈಕ್ ಓಡಿಸಿದೆ.

(ಕರಿಬಸರಿ ಸೊಪ್ಪಿನ ಗಿಡ)

ಬೈಕು ಅವರ ಮನೆಯಂಗಣದಲ್ಲಿ ಇಳಿಸಿದವನೇ ಬಡ ಬಡಿಸುತ್ತಲೇ “ಲಸಿಕೆ ಹಾಕುವುದರಿಂದ ಒಂದು ದಿನದ ನಂತರ ಈ ರೀತಿ ಅಡ್ಡ ಪರಿಣಾಮ ಆಗಲ್ಲ. ಬೇರೇನೋ ಕಾರಣ ಇರಬೇಕು” ಎಂದು ನನ್ನನ್ನು ರಕ್ಷಿಸಿಕೊಳ್ಳುವ ದಾಟಿಯಲ್ಲಿ ಹೇಳುತ್ತಲೇ ಕೊಟ್ಟಿಗೆಗೆ ಹೋದೆ. ಆಶ್ಚರ್ಯವೆಂದರೆ ಅಲ್ಲಿ ಮರಣ ಹೊಂದಿದ್ದು, ಮಾಲೀಕರ ಅಪ್ಪಣೆಯಂತೆ ಲಸಿಕೆ ಹಾಕದೆ ಬಿಟ್ಟ ಜಾನುವಾರು. “ಇದಕ್ಕೆ ನಿನ್ನೆ ಲಸಿಕೆ ಹಾಕೋದು ಬೇಡ ಅಂದಿದ್ರಲ್ಲ” ಎಂದು ಒಂದೇ ಉಸಿರಿನಲ್ಲಿ ಕೇಳಿದೆ. “ಹೌದು, ಸಾರ್ …ನಾವೇ ಬೇಡ ಅಂದಿದ್ವಿ, ನೀವು ಇದಕ್ಕೆ ಲಸಿಕೆ ಹಾಕಿರಲಿಲ್ಲ. ಆದರೆ ಆರೋಗ್ಯದಿಂದಿದ್ದ ಹಸು ಇದ್ದಕ್ಕಿದ್ದಂತೆ ಮರಣ ಹೊಂದಲು ಕಾರಣ ತಿಳಿಯಲು ಬರಹೇಳಿದೆ ಅಷ್ಟೆ. ಒಂದು ವೇಳೆ ಇದಕ್ಕೆ ಲಸಿಕೆ ಹಾಕಿದ್ದರೆ ನಿಮಗೊಂದು ಕೆಟ್ಟ ಹೆಸರು, ಕಪ್ಪು ಚುಕ್ಕೆ ಉಳಿದು ಬಿಡುತ್ತಿತ್ತು ಡಾಕ್ಟ್ರೇ ” ಎಂದು ಅವರೇ ಹೇಳುತ್ತಿದ್ದಂತೆ…“ಬದುಕಿದೆಯಾ ಬಡ ಜೀವವೇ” ಎಂದು ಮುಂಜಾನೆಯಿಂದ ಎರಡು ತಾಸುಗಳ ಕಾಲ ನನ್ನ ಮನಸ್ಸಿನಲ್ಲಿ ಆವರಿಸಿದ್ದ ತೊಳಲಾಟಗಳೆಲ್ಲಾ ಮಾಯವಾಗಿ ಸಮಾಧಾನದ ನಿಟ್ಟುಸಿರು ಬಿಟ್ಟೆ.

ನಂತರದಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಹಸು ವಿಷಕಾರಿ ಸೊಪ್ಪನ್ನು ತಿಂದು ಮರಣ ಹೊಂದಿದ್ದು, ಧೃಡಪಟ್ಟಿತಲ್ಲದೆ, ಅವು ಮೇಯುವ ಜಾಗವನ್ನು ಪರಿಶೀಲಿಸಿದಾಗ ಅಲ್ಲಲ್ಲಿ ಜಾನುವಾರುಗಳಿಗೆ ಮಾರಕವಾದ ಕರಿಬಸರಿ ಸೊಪ್ಪು ಬಿದ್ದಿರುವುದು ನನ್ನ ಸಂಶಯಗಳಿಗೆ ಪುಷ್ಠಿ ನೀಡಿತು. ನಿಜ.. ನಾನು ಪಾರಾದೆ, ಆದರೆ ಇಂತಹ ಅದೆಷ್ಟು ಘಟನೆಗಳು ಕಾಕತಾಳೀಯವಾಗಿ ಪಶುವೈದ್ಯರುಗಳ ವೃತ್ತಿಯಲ್ಲಿ ಸಂಭವಿಸಿ ಪಶುಗಳಂತೆಯೇ ಮೂಕರೋಧನೆ ಅನುಭವಿಸಿರುವರೋ ಬಲ್ಲವರಾರು.

ಹೀಗೆ ನನ್ನ ವೃತ್ತಿ ಜೀವನದಲ್ಲಿ ಎದುರಾದ ಅನಿರೀಕ್ಷಿತ ಆಘಾತವೊಂದರಿಂದ ಪಾರಾದ ಘಟನೆ ಆಗಾಗ ನೆನಪಿಗೆ ಬರುತ್ತಿದ್ದು, ನಿಮ್ಮ ಮುಂದೆ ಹಂಚಿಕೊಳ್ಳುವ ಪ್ರಯತ್ನ ಮಾಡಿರುವೆ.

ಎಲ್ಲರಿಗೂ ನಮಸ್ಕಾರಗಳು, ಶುಭವಾಗಲಿ.


  • ಡಾ. ಯುವರಾಜ ಹೆಗಡೆ (ಪಶುವೈದ್ಯರು), ತೀರ್ಥಹಳ್ಳಿ

5 1 vote
Article Rating

Leave a Reply

1 Comment
Inline Feedbacks
View all comments
ರಘುರಾಂ

ತುಂಬ ಚೆನ್ನಾಗಿದೆ ಸರ್.

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

1
0
Would love your thoughts, please comment.x
()
x
Aakruti Kannada

FREE
VIEW