ಉದಯೋನ್ಮುಖ ಕವಿಯತ್ರಿ ರೂಪಾ ಮೋಹನ್ ಅವರ ರಚನೆಯ ಕವಿತೆ ಮೊದಲ ಬಾರಿಗೆ ಆಕೃತಿಕನ್ನಡದಲ್ಲಿ, ಹೊತ್ತು ಮುಳುಗುವ ಮುನ್ನ ಕವಿತೆ ತಪ್ಪದೆ ಮುಂದೆ ಓದಿ… .
ಸೋತವನ ಆಡಿಕೊಳ್ಳಬೇಡ
ನಿನ್ನ ನೀ ವಿಮರ್ಶಿಸಿಕೋ..
ಯಾಕಿನ್ನೂ ಪ್ರಯತ್ನಿಸಿಯೇ.. ಇಲ್ಲವೆಂದು
ಕಾಲ್ಕೀಳು ಅದಕಾಗಿ ಹೊತ್ತು ಮುಳುಗುವ ಮುನ್ನ….
ನೊಂದವನ ಸಮರ್ಥಿಸಬೇಡ
ನಿನ್ನ ನೀ ಪ್ರಶ್ನಿಸಿಕೋ..
ಯಾಕಿನ್ನೂ ನಗಿಸಲಾಗಿಲ್ಲವೆಂದು
ಬೆಳಕಾಗು ಅದಕಾಗಿ ಹೊತ್ತು ಮುಳುಗುವ ಮುನ್ನ….
ಪಾಪಿಗಳ ವಿರುದ್ಧ ಪ್ರತಿಭಟಿಸಬೇಡ
ನಿನ್ನ ನೀ ಶಪಿಸಿಕೋ..
ಯಾಕಿನ್ನೂ ಶಿಕ್ಷಿಸಲಾಗಿಲ್ಲವೆಂದು
ನಿರ್ದಯಿಯಾಗು ಅದಕಾಗಿ ಹೊತ್ತು ಮುಳುಗುವ ಮುನ್ನ..
ಧರ್ಮಗಳ ದಯೆ ಕಾಯಬೇಡ
ನಿನ್ನ ನೀ ರಕ್ಷಿಸಿಕೋ..
ಯಾಕಿನ್ನೂ ಕಾಯುವುದೆಂದು
ಆಯುಧವಾಗು ಅದಕಾಗಿ ಹೊತ್ತು ಮುಳುಗುವ ಮುನ್ನ..
ರಾಜಕಾರಣಿಗಳ ನಿಂದಿಸಬೇಡ
ನಿನ್ನ ನೀ ಚುನಾಯಿಸಿಕೋ..
ಯಾಕಿನ್ನೂ ಆಳುತಿಹರೆಂದು
ಧನಿಯಾಗು ಅದಕಾಗಿ ಹೊತ್ತು ಮುಳುಗುವ ಮುನ್ನ…
ಮಾಧ್ಯಮಗಳ ಖಂಡಿಸಬೇಡ
ನಿನ್ನ ನೀ ಬಿಂಬಿಸಿಕೋ
ಯಾಕಿನ್ನೂ ಅವಲಂಬಿಸಿರುವೆಂದು
ಪ್ರಕಾಶಕನಾಗು ಅದಕಾಗಿ ಹೊತ್ತು ಮುಳುಗುವ ಮುನ್ನ…
ಆಲೋಚನೆಗಳ ನಿಲ್ಲಿಸಬೇಡ
ನಿನ್ನ ನೀ ಅವಲೋಕಿಸಿಕೋ..
ಯಾಕಿನ್ನೂ ಕಲ್ಲಾಗಿರುವೆನೆಂದು
ಉಳಿಯಾಗು ಅದಕಾಗಿ ಹೊತ್ತು ಮುಳುಗುವ ಮುನ್ನ.
- ರೂಪಾ ಮೋಹನ್
