ನನ್ನಿಷ್ಟದ ಕವಿ, ತಾಯ್ತನದ ಸೂಕ್ಷ್ಮ ಸಾಹಿತಿ ಎಚ್ ಎಸ್ ವೆಂಕಟೇಶ್ ಮೂರ್ತಿ ಅವರು ಸಾಹಿತ್ಯದ ತೂಗು ಮಂಚದಲ್ಲಿ ನಮ್ಮೆಲ್ಲರನ್ನೂ ತೂಗಿಸಿ, ಪ್ರೀತಿಯಲ್ಲಿ ತೋಯಿಸಿ, ಭಾವಯಾನದ ಮನೋಮಂದಿರದಲ್ಲಿ ದಿವ್ಯತೆಯ ದೀಪವನ್ನು ಹಚ್ಚಿ ಅದೆಂದೂ ನಂದದಂತೆ ನಂದಾದೀಪವಾಗಿಸಿದವರು. ಉದಯ್ ಕುಂದಾಪುರ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಎನ್ನೆದೆಯ ಬಯಲದು ಬರಿಯ ಬಂಜರು.
ಕವಿತೆಗಳು ಹರಿದು ಬಂದವು ಕಾವೇರಿಯ ತರಹದಿ,
ನಾನೀಗ ಫಲವತ್ತಾದ ಭೂಮಿ, ಅರಳಿ ನಿಂತಿವೆ ಅಲ್ಲೀಗ ಹೂ ಗಿಡ ಮರ ಬಳ್ಳಿ.
ನನ್ನಿಷ್ಟದ ಕವಿ, ತಾಯ್ತನದ ಸೂಕ್ಷ್ಮ ಸಾಹಿತಿ ಎಚ್ ಎಸ್ ವೆಂಕಟೇಶ್ ಮೂರ್ತಿ ಅವರು ಸಾಹಿತ್ಯದ ತೂಗು ಮಂಚದಲ್ಲಿ ನಮ್ಮೆಲ್ಲರನ್ನೂ ತೂಗಿಸಿ, ಪ್ರೀತಿಯಲ್ಲಿ ತೋಯಿಸಿ, ಭಾವಯಾನದ ಮನೋಮಂದಿರದಲ್ಲಿ ದಿವ್ಯತೆಯ ದೀಪವನ್ನು ಹಚ್ಚಿ ಅದೆಂದೂ ನಂದದಂತೆ ನಂದಾದೀಪವಾಗಿಸಿದವರು. ಈ ಪುಣ್ಯಾತ್ಮನ ಕವಿತೆಗಳಿಲ್ಲದೇ ಹೋಗುತ್ತಿದ್ದರೆ ನಮ್ಮೆಲ್ಲರ ಮನಸುಗಳು ಅದೆಷ್ಟು ಬರಡಾಗಿ ಹೋಗುತ್ತಿದ್ದವೋ..ಅವರ ಭಾವಗೀತೆಗಳನ್ನು ಕೇಳುತ್ತಿದ್ದರೆ ಹೃದಯಗಳು ತೇವಗೊಳ್ಳುತ್ತವೆ, ಮನಸು ಅತೀವ ಆನಂದದಿ ಪುಳಕಗೊಳ್ಳುತ್ತದೆ. ಕಾರಣ ಅವುಗಳೆಲ್ಲ ಸಕ್ಕರೆಯ ಪಾಕದಲ್ಲಿ ಜಾಮೂನನ್ನು ಅದ್ದಿ ತೆಗೆದಂತಿರುತ್ತಿದ್ದವು.
ಹುಟ್ಟಿ ಮೆಟ್ಟಿದ ಮಣ್ಣಿನ ಭಾವದಿಂದ ಗಟ್ಟಿಯಾಗಿ ಹೊರಹೊಮ್ಮಿದ ನೋವು, ನಿರಾಶೆ, ವಿರಸ, ಸರಸ, ನಲಿವು,ಸಂಭ್ರಮ ಎಲ್ಲವುಗಳ ಒಟ್ಟು ಮಿಶ್ರಣವೇ “ವೆಂಕಟೇಶ್ ಮೂರ್ತಿ” ಅವರ ಭಾವಗೀತೆಗಳ ಜಗತ್ತು.

ಕೆಲವು ಹಾಡುಗಳೇ ಹೀಗೆ ನಮ್ಮ ಮನಸ್ಸನ್ನು ಮಗುವಾಗಿಸುತ್ತೆ, ಅಳಿಸುತ್ತೆ, ನಗಿಸುತ್ತೆ. ವೆಂಕಟೇಶ್ ಮೂರ್ತಿ ಅವರು ಅಂತಹ ಅನೇಕ ಹಾಡುಗಳನ್ನು ನನಗಾಗಿಯೇ ಬರೆದರೇನೋ ಎನ್ನುವ ಭಾವ ನನ್ನೊಳಗೆ ಮೂಡುವುದಿದೆ. ವಾಸ್ತವಿಕತೆಯ ತಳಹದಿಯ ಮೇಲೆ ಭಾವನೆಗಳ ಮಹಲನ್ನು ಕಟ್ಟಿ ನಿಲ್ಲಿಸುವ ಅದ್ಬುತ ಭಾವ ಸಂತರಿವರು! ಬಹುಶಃ ನನ್ನ ಮನಸ್ಸನ್ನು ಇವರ ಹಾಡುಗಳು ಕಾಡಿದ್ದಷ್ಟು ಇನ್ನೊಬ್ಬರ ಹಾಡುಗಳು ಕಾಡಿದ್ದಿಲ್ಲ.
“ಹೆಗಲಿಗೊರಗಿ ಮಲಗು ಗೆಳೆಯ ಎಲ್ಲ ಭಯವ ತೊರೆದು…” ಎನ್ನುವ ಇವರ ರಚನೆ ಪ್ರೀತಿಯೊಳಗಿನ ಭದ್ರತೆ ಮತ್ತು ಶ್ರೇಷ್ಠತೆಯನ್ನು ತೋರಿಸುತ್ತದೆ. ಜೀವನವೇ ಸಾಕೆಂದು ಕುಣಿಕೆಗೆ ಕೊರಳನ್ನೊಡ್ಡಿದ್ದ ಜಿಗುಪ್ಸೆಯ ಜೀವಗಳಿಗೆ ಆ ಕ್ಷಣಕ್ಕೆ ನೆನಪಾಗುವುದು ಆಕೆಯ “ನಾನಿದ್ದಿನಿ ಕಣೋ ನಿನ್ಜೊತೆ…”ಎನ್ನುವ ಭರವಸೆಯ ಮಾತುಗಳು. ಸಾವಿಗೆ ಅತಿಥಿಯಾಗಬೇಕಾದವ ಹೋಗಿ ಅವಳ ಹೆಗಲ ಮೇಲೆ ತಲೆಯಿಟ್ಟಾಗ ಅವಳೀಗ ಅವನನ್ನು ಸಂತೈಸುವ ತಾಯಿ.ಇದನ್ನು ಕವಿ ಒಂದೇ ಸಾಲಿನಲ್ಲಿ ಅದೆಷ್ಟು ಅದ್ಬುತವಾಗಿ ವಿವರಿಸಿದ್ದಾರೆ ನೋಡಿ.
ಇನ್ನೊಂದು ಜೀವ ವೀಣೆ ಮಿಡಿಯುವ ಗೀತೆ “ಬಯಸಿದೆ ನಿನ್ನನು ಭಾವದ ಮೇಳಕ್ಕೆ…”ಇದು ನಮ್ಮೊಳಗೆ ನವೋಲ್ಲಾಸವನ್ನು ಮೂಡಿಸಬಲ್ಲುದು, ಮನದೊಳಗೆ ಆನಂದಾಬ್ದಿಯನ್ನು ತೇಲಿಸಬಲ್ಲುದು. ಮರೆಯದ ಮರೆತು ಹೋದ ಮನದ ಯಾವುದೋ ಮೂಲೆಯಲ್ಲಿ ಹುದುಗಿದ್ದ ಪ್ರೀತಿ ಮತ್ತೆ ನೆನಪಾಗಿ ಮಧುರವಾಗಿ ನಿಮ್ಮೊಳಗೆ ಮಾರ್ದನಿಸದೆ ಇರದು.
“ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ…”ಈ ಹಾಡು ಕತ್ತಲೆಯ ಬದುಕ ಬರಹಕ್ಕೆ ಬೆಳಕ ಬೆರಳಂತಿದೆ. ಬೇಸರದ ಬಿರುಬಿಸಿಲಿನ ನಡುವೆ ತಂಪಾದ ತಂಗಾಳಿ ಬೀಸಿದಂತೆ,
ನುಚ್ಚುನೂರಾದ ನಿರ್ಜೀವ ಭಾವದ ತುಂಡುಗಳು ಗೆಲುವಿನ ದಾರದಲ್ಲಿ ಜೀವ ಚೈತನ್ಯಗೊಂಡ ಪರಿಯಂತಿದೆ.

“ಊರ ಸೇರಬಹುದೇ ನೀನು ದಾರಿ ಮುಗಿಯದೆ,
ಹೊನ್ನು ದೊರೆಯಬಹುದೇ ಹೇಳು ಮಣ್ಣ ಬಗೆಯದೇ,
ನಿನ್ನ ದಾರಿ ನೀನೇ ನಡೆದು ಸೇರಬೇಕು ಗುರಿಯನು,
ತಡೆಯಬಹುದೇ ಕಡಲ ಕಡೆಗೆ ಓಡುವಂತ ತೊರೆಯನು..”
ಇಂತಹ ಪ್ರೇರಣಾದಾಯಕ ಕವಿತೆಗಳ ಜನಕ ಎಚ್ ಎಸ್ ವೆಂಕಟೇಶ್ ಮೂರ್ತಿ ಅವರು.
ಯಾರೆಂದರೇ ಯಾರೂ ಇಲ್ಲದ ಬದುಕು ಪ್ರಪಾತಕ್ಕೆ ಇಳಿದು ಹೋಗಿದ್ದ ದಿನಗಳಲ್ಲಿ ಪಶ್ಚಿಮಕ್ಕೆ ಮುಖ ಮಾಡಿ ನಿಂತವನನ್ನು ಪೂರ್ವಕ್ಕೆ ತಿರುಗಿಸಿ ಸೂರ್ಯ ಮೂಡುವುದು ಅಲ್ಲಿ ನೋಡು ಎನ್ನುತ್ತಾ ಬಾಳನ್ನು ಸೂರ್ಯೋದಯವಾಗಿಸಿದ್ದು ಇವರ ಭಾವಗೀತೆಗಳು. ನಮ್ಮ ಬಾಲ್ಯವನ್ನು ಸೌಭಾಗ್ಯವಾಗಿಸಿದ, ಯೌವನವನ್ನು ಮಧುರವಾಗಿಸಿದ, ಸೋಲುಗಳಿಗೆ ಗೆಲುವಿನ ಪಾಠ ಮಾಡಿದ ಮೇಷ್ಟ್ರೇ ನೀವು ಇನ್ನಷ್ಟು ಬರೆಯಬೇಕು, ಮತ್ತಷ್ಟು ಹಾಡಬೇಕು, ಜನರು ಸಾಲಾಗಿ ನಿಂತು ಕೇಳುವಷ್ಟು.
ಚೆನ್ನಗಿರಿಯ ನಾಗರತ್ನಮ್ಮ ಮತ್ತು ನಾರಾಯಣ ಭಟ್ಟರ ಮುದ್ದು ಕಂದನಾದ ನಿಮಗಿಂದು ಎಂಬತ್ತರ ಹುಟ್ಟು ಹಬ್ಬದ ತುಂಬು ಸಂಭ್ರಮ. ಕನ್ನಡಕ್ಕೆ ಒಂಬತ್ತನೆಯ “ಜ್ಞಾನಪೀಠ ಪ್ರಶಸ್ತಿ” ನಿಮ್ಮಿಂದಲೇ ಸಿಗಲಿದೆ ಮತ್ತು ಸಿಗಬೇಕು ಎನ್ನುವ ಸದಾಶಯದೊಂದಿಗೆ ಶುಭಾಶಯಗಳು ಭಾವದಕ್ಷರದೊಡೆಯನಿಗೆ..
- ಉದಯ್ ಕುಂದಾಪುರ
