ಲಕ್ಷಾಂತರ ಅಭಿಮಾನಿಗಳ ಕೇಂದ್ರಬಿಂದುವಾಗಿದ್ದ ಖ್ಯಾತ ಪಿಯಾನೋ ವಾದಕ ಮತ್ತು ಸಂಗೀತ ಸಂಯೋಜಕ ಪೆಡೆರ್ವೆಸ್ಕಿ ಅವರ ನೈಜ್ಯಕತೆಯನ್ನು ಓದುಗರ ಮುಂದಿಟ್ಟಿದ್ದಾರೆ ಲೇಖಕರಾದ ಆರ್. ಪಿ. ರಘೋತ್ತಮ ಅವರು, ಮುಂದೆ ಓದಿ…
ಇಗೇನ್ಸಿ ಪೆಡೆರ್ವೆಸ್ಕಿ ಪೋಲೆಂಡ್ ದೇಶದ ಖ್ಯಾತ ಪಿಯಾನೋ ವಾದಕ ಮತ್ತು #ಸಂಗೀತ ಸಂಯೋಜಕ. 1860ರಲ್ಲಿ ಜನಿಸಿದ ಪೆಡೆರ್ವೆಸ್ಕಿಗೆ ಬಾಲ್ಯದಿಂದಲೇ ಸಂಗೀತದೆಡೆಗೆ, ಪಿಯಾನೋದೆಡೆಗೆ ಅಪಾರವಾದ ಸೆಳೆತ. ಪೆಡೆರ್ವೆಸ್ಕಿಯ ಪಿಯಾನೋ ಕಛೇರಿ ಎಂದರೆ ಜನ ಹುಚ್ಚಿಗೆ ಬಿದ್ದು ಸೇರುತ್ತಿದ್ದರು. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಪೆಡೆರ್ವೆಸ್ಕಿ ಪೋಲೆಂಡ್ ದೇಶದ ಕೇಂದ್ರಬಿಂದು ಆಗಿದ್ದರು.

ಫೋಟೋ ಕೃಪೆ : culture
1892ನೇ ಇಸವಿಯಲ್ಲಿ ಅಮೆರಿಕಾದ ಸ್ಟ್ಯಾನ್ ಫೋರ್ಡ್ ಯೂನಿವರ್ಸಿಟಿಗೆ ಇಬ್ಬರು ಬಡವಿದ್ಯಾರ್ಥಿಗಳು ಸೇರಿಕೊಳ್ಳುತ್ತಾರೆ. ಹೇಗೋ ಹರಸಾಹಸಪಟ್ಟು ಯೂನಿವರ್ಸಿಟಿಗೆ ಸೇರಿಕೊಳ್ಳುತ್ತಾರಾಗಲಿ, ಕಾಲೇಜಿನ ಶುಲ್ಕ ಮತ್ತಿತರ ಶುಲ್ಕ ಭರಿಸಲು ಅವರಿಬ್ಬರ ಬಳಿ ಹಣವಿರುವುದಿಲ್ಲ. ಆರ್ಥಿಕವಾಗಿ ಮಾತ್ರ ಬಡತನವಿದ್ದ ಆ ಹುಡುಗರಲ್ಲಿ ಕ್ರಿಯಾಶೀಲತೆಗೆ ಯಾವುದೇ ಕೊರತೆಯಿರಲಿಲ್ಲ. ಇಬ್ಬರೂ ಕೂತು ಒಂದು ಸಮಯೋಚಿತ ಯೋಜನೆ ತಯಾರಿಸಿದರು.
ಪೋಲೆಂಡ್ ದೇಶದ ಪ್ರಖ್ಯಾತ ಪಿಯೋನೋ ವಾದಕ ಇಗೇನ್ಸಿ ಪೆಡೆರ್ವೆಸ್ಕಿಯವರನ್ನು ಸಂಪರ್ಕಿಸಿ, ಅವರಿಂದ ಒಂದು ಕಛೇರಿ ಮಾಡಿಸಿ, ಬಂದ ಲಾಭದಲ್ಲಿ ನಮ್ಮ ಓದಿನ ಖರ್ಚುಗಳನ್ನು ನಿಭಾಯಿಸೋಣ ಎಂಬುದೇ ಆ ಯೋಜನೆಯಾಗಿತ್ತು. ಅಂದುಕೊಂಡಂತೆ ಈ ಇಬ್ಬರು ಹುಡುಗರು ಪೆಡೆರ್ವೆಸ್ಕಿಯನ್ನು ಸಂಪರ್ಕಿಸುತ್ತಾರೆ.

ಫೋಟೋ ಕೃಪೆ : google
“ಸಾಮಾನ್ಯವಾಗಿ ನಾನು ಒಂದು ಪ್ರದರ್ಶನಕ್ಕೆ ನಾಲ್ಕು ಸಾವಿರ ಡಾಲರ್ ಪಡೆಯುತ್ತೇನೆ. ಆದರೆ ನೀವು ಇದನ್ನು ಲಾಭಕ್ಕಾಗಿ ಉಪಯೋಗಿಸದೆ, ನಿಮ್ಮ ಶಿಕ್ಷಣಕ್ಕಾಗಿ ಉಪಯೋಗಿಸುತ್ತೇವೆ ಎಂದು ಹೇಳುತ್ತಿದ್ದೀರಿ, ಅದರಿಂದ ನಿಮಗಾಗಿ ನಾನು ಈ ಪ್ರದರ್ಶನವನ್ನು ಅರ್ಧ ಬೆಲೆಗೆ ಅಂದರೆ ಕೇವಲ ಎರಡು ಸಾವಿರ ಡಾಲರ್ ಪಡೆದು ಮಾಡುತ್ತೇನೆ” ಎಂದರು ಪೆಡೆರ್ವೆಸ್ಕಿ. ನೀರು ಕೇಳಿದವರಿಗೆ ಹಾಲು ಕೊಟ್ಟರೆ ಸಂತೋಷವಾಗದೆ ಇರುತ್ತದೆಯೇ? ಪ್ರದರ್ಶನದ ದಿನಾಂಕ, ಸಮಯ, ಸ್ಥಳ ಎಲ್ಲವನ್ನೂ ನಿಗಧಿಪಡಿಸಿಕೊಂಡೇ ಬಂದರು ಆ ಇಬ್ಬರು ಹುಡುಗರು.
ತಮ್ಮೆಲ್ಲ ಸಂಪರ್ಕಗಳನ್ನು ಉಪಯೋಗಿಸಿ, ತಮ್ಮ ಪೂರ್ತಿ ಶ್ರಮ ಹಾಕಿ ಪೆಡೆರ್ವೆಸ್ಕಿಯ ಸಂಗೀತ ಕಛೇರಿಗೆ ಟಿಕೆಟ್ ಗಳನ್ನು ಮಾರಲು ಪ್ರಾರಂಭಿಸಿದರು. ಆದರೆ ಅದೇನು ದುರದೃಷ್ಟವೋ ಏನೋ ಪ್ರದರ್ಶನದ ದಿನ ಹತ್ತಿರ ಬಂದರೂ ನಿರೀಕ್ಷಿತ ಮಟ್ಟದಲ್ಲಿ ಟಿಕೆಟ್ ಗಳು ಮಾರಾಟವಾಗಲೇ ಇಲ್ಲ.
ನಿಗಧಿ ಪಡಿಸಿದಂತೆ ಪೆಡೆರ್ವೆಸ್ಕಿ ಬಂದರು, ಅದ್ಭುತವಾಗಿ ಕಾರ್ಯಕ್ರಮ ಮಾಡಿದರು. ಜನಗಳು ಹುಚ್ಚೆದ್ದು ಕಣಿಯುವ ಮಟ್ಟಿಗೆ ಕಾರ್ಯಕ್ರಮ ಯಶಸ್ವಿಯಾಯಿತು. ಆದರೆ ಆ ಹುಡುಗರ ಬಳಿ ಪೆಡೆರ್ವೆಸ್ಕಿಯವರಿಗೆ ಸಂಭಾವನೆ ಕೊಡಬೇಕಾದಷ್ಟು ಹಣವೇ ಇರಲಿಲ್ಲ. ಏನೆಲ್ಲ ಮಾಡಿದ್ದರೂ ಅವರು 1,600 ಡಾಲರ್ ಗಳಷ್ಟು ಮಾತ್ರವೇ ಸಂಗ್ರಹಿಸಲು ಸಾಧ್ಯವಾಗಿತ್ತು. ಕೈಲಿದ್ದ 1,600 ಡಾಲರ್ ಗಳನ್ನು ಪೆಡೆರ್ವೆಸ್ಕಿಯವರಿಗೆ ನೀಡಿ ಮಿಕ್ಕ ನಾಲ್ಕು ನೂರು ಡಾಲರ್ ಗಳಷ್ಟು ಪ್ರಾಮಿಸರಿ ನೋಟ್ ನೀಡಿ ಕೈಮುಗಿದರು.

ಫೋಟೋ ಕೃಪೆ : google
ಆದರೆ #ಪೆಡೆರ್ವೆಸ್ಕಿ ಎಷ್ಟೇ ಆದರೂ ಸಂಗೀತಗಾರರಲ್ಲವೇ? ಆ ಹುಡುಗರು ನೀಡಿದ್ದ ಪ್ರಾಮಿಸರಿ ನೋಟುಗಳನ್ನು ಅವರೆದುರೇ ಹರಿದು ಹಾಕಿ, ಅವರು ಕೊಟ್ಟ ಅಷ್ಟು ದುಡ್ಡನ್ನೂ ಅವರಿಗೇ ಹಿಂತಿರುಗಿಸಿದರು. ಅಷ್ಟೇ ಅಲ್ಲದೆ ತಮ್ಮಲ್ಲಿದ್ದ ಎರಡು ಸಾವಿರ ಡಾಲರ್ ಹಣವನ್ನು ಆ ಹುಡುಗರಿಗೆ ನೀಡಿ ನಿಮ್ಮ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಿ ಎಂದು ಹೇಳಿದರು.
ಈ ಘಟನೆ ನಡೆದ ಎಷ್ಟೋ ವರ್ಷಗಳ ನಂತರ ಪೆಡೆರ್ವೆಸ್ಕಿ ಪೋಲೆಂಡ್ ದೇಶದ ಪ್ರಧಾನಿಯಾಗುತ್ತಾರೆ. ಇತಿಹಾಸ ಕಂಡ ಮೊತ್ತಮೊದಲ ಸಂಗೀತಗಾರ ಪ್ರಧಾನಿ ಪೆಡೆರ್ವೆಸ್ಕಿ. ಇವರು ಪ್ರಧಾನಿಯಾಗುವ ಹೊತ್ತಿಗೆ ಮಹಾಯುದ್ಧ ಮುಗಿದು, ಪೋಲೆಂಡ್ ದೇಶದಲ್ಲಿ ಬಡತನ ರುದ್ರತಾಂಡವವಾಡುತ್ತಿರುತ್ತದೆ. ಇದನ್ನು ನೋಡಲಾಗದ ಪೆಡೆರ್ವೆಸ್ಕಿ ಸಂಯುಕ್ತ ರಾಷ್ಟ್ರ ಸಂಘಕ್ಕೆ ಸಹಾಯ ಕೇಳಿಕೊಂಡು ಪತ್ರ ಬರೆಯುತ್ತಾರೆ. ಆಶ್ಚರ್ಯವೆಂಬಂತೆ ಪತ್ರ ತಲುಪಿದ ಮಾರನೆಯ ದಿನವೇ ಅಲ್ಲಿಂದ “ನಿಮ್ಮ ಅಗತ್ಯತೆಗಳನ್ನು ಪಟ್ಟಿಮಾಡಿ ಕಳಿಸಿ” ಎಂದು ಫೋನ್ ಕಾಲ್ ಬರುತ್ತದೆ. ಇವರು ಪಟ್ಟಿ ಕಳಿಸಿದ ಕೆಲವೇ ದಿನಗಳಲ್ಲಿ ಇವರು ಕೇಳಿದ ಮೂರುಪಟ್ಟು ಅಗತ್ಯ ಸಾಮಗ್ರಿಗಳು, ವಸ್ತುಗಳು, ಹಣ ಎಲ್ಲವೂ ಬಂದುಬೀಳುತ್ತವೆ. ಇದನ್ನು ಕನಸಿನಲ್ಲೂ ನಿರೀಕ್ಷಿಸಿರದ ಪೆಡೆರ್ವೆಸ್ಕಿ ಪಡೆದ ಉಪಕಾರಕ್ಕಾಗಿ ಕೃತಜ್ಞತೆ ತಿಳಿಸಲು ತಾವೇ ಖುದ್ದಾಗಿ ಆ ಸಂಸ್ಥೆಯ ನಿರ್ದೇಶಕರ ಬಳಿಗೆ ಹೋಗುತ್ತಾರೆ.
ಅಲ್ಲಿ ಪೆಡೆರ್ವೆಸ್ಕಿಯವರನ್ನು ನೋಡಿದ್ದೇ ತಡ ಆ ನಿರ್ದೇಶಕರು ತಾವೇ ಪೆಡೆರ್ವೆಸ್ಕಿಯವರ ಬಳಿ ಬಂದು ತಮ್ಮ ಪರಿಚಯ ಹೇಳಿಕೊಂಡರು. ಅವರು ಬೇರಾರೂ ಆಗಿರದೆ ಹಿಂದೊಮ್ಮೆ ಪೆಡೆರ್ವೆಸ್ಕಿಯವರ ಪ್ರದರ್ಶನದ ಪೂರ್ತಿ ಸಂಭಾವನೆ ಕೊಡಲಾಗದೆ, ಅವರಿಂದಲೇ ತಮ್ಮ ವಿದ್ಯಾಭ್ಯಾಸಕ್ಕೆ ದುಡ್ಡು ಪಡೆದ #ಹೂವರ್ ಆಗಿದ್ದರು.
“ಅಂದು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನೀವು ನಮಗೆ ಸಹಾಯ ಮಾಡಿದಿರಿ. ನಾವು ಕೇಳದೆಯೇ ನಮ್ಮ ವಿದ್ಯಾಭ್ಯಾಸಕ್ಕೆ ನೀವು ನೆರವಾದಿರಿ. ಅದರ ಋಣವನ್ನು ಕೊಂಚವಾದರೂ ತೀರಿಸುವ ಸಲುವಾಗಿ ನಿಮ್ಮ ಫೋನ್ ಕರೆಗಾಗಿ ಕಾಯುತ್ತಿದ್ದೆ. ದಯವಿಟ್ಟು ಒಪ್ಪಿಸಿಕೊಳ್ಳಿ” ಎಂದರಂತೆ ಹೂವರ್.
ನಿಜವಾದ ಮಾನವೀಯತೆಯೆಂದರೆ ಇದೇ ಅಲ್ಲವೇ?
ನೀವೇನಂತೀರಿ?
- ಆರ್. ಪಿ. ರಘೋತ್ತಮ (ಲೇಖಕರು, ಕತೆಗಾರರು)
