ಆಕಾಶದಲ್ಲಿ ಆಪತ್ತು – ವಿಂಗ್ ಕಮಾಂಡರ್ ಸುದರ್ಶನ



ಅದೊಂದು ತಡರಾತ್ರಿಯ ವಿಮಾನಯಾನ. ಮಧ್ಯರಾತ್ರಿ ಸುಮಾರು ಹನ್ನೆರಡು ಗಂಟೆಯಷ್ಟಾಗಿತ್ತು ನಾವು ಕಲ್ಕತ್ತಾ ಏರ್ಪೋರ್ಟಿನಿಂದ ನಿರ್ಗಮಿಸಿದಾಗ. ಸುಮಾರು ಎರಡೂವರೆ ಗಂಟೆಗಳ ಯಾನದ ನಂತರ ಬೆಂಗಳೂರು ತಲುಪುವ ನಿರೀಕ್ಷೆ ಇತ್ತು. ಮಧ್ಯಾಹ್ನ ಹನ್ನೆರಡರ ಸುಮಾರಿಗೆ ಪ್ರಾರಂಭವಾದ ಅವತ್ತಿನ ದಿನದ ಘಟನೆಗಳು ಈಗಲೂ ಬಹಳ ಸ್ಪಷ್ಟವಾಗಿ ನೆನಪಿದೆ.. ಏಕೆಂದರೆ ಅವತ್ತು ಜನವರಿ ಒಂದನೇ ತಾರೀಖು. ಹೊಸವರ್ಷದ ದಿನದಂದೇ ವಿಮಾನಯಾನಕ್ಕೆ ನಿಯಮಿಸಲಾಗಿದ್ದರಿಂದ ಹೊಸವರ್ಷದ ಪಾರ್ಟಿಯನ್ನು ಕಲ್ಕತ್ತಾದ ಹೋಟಲಿನಲ್ಲಿ ಮಾಡುವುದೆಂದು ಮನೆಯಲ್ಲಿ ನಿರ್ಧರಿಸಿದ್ದೆವು. ಹಾಗಾಗಿ ಹಿಂದಿನ ದಿನವೇ ಸುನಯನಾ ಮತ್ತು ಮಗಳು ಸುನಿಧಿ ಬೆಂಗಳೂರಿನಿಂದ ಹೊರಟು ಕಲ್ಕತ್ತಾದ ಹಯಾತ್ ರೀಜೆನ್ಸಿ ಹೋಟಲಿಗೆ ಬಂದು ತಲುಪಿದ್ದರು. ಹೋಟಲಿನಲ್ಲಿ ಹೊಸವರ್ಷದ ಸಮಾರಂಭ ಅದ್ಭುತವಾಗಿತ್ತು.

ಮರುದಿನ ಅವರಿಬ್ಬರನ್ನೂ ಕಲ್ಕತ್ತಾದಿಂದ ಬೆಂಗಳೂರಿನ ನೇರ #ವಿಮಾನದಲ್ಲಿ ಕಳುಹಿಸಿ ನನ್ನ ಆ ದಿನದ ವಿಮಾನಯಾನವನ್ನು ಪ್ರಾರಂಭಿಸಿದೆ. ಮೊದಲು ಕಲ್ಕತ್ತಾದಿಂದ ಗೌಹಾಟಿಗೆ ಹೋಗಿ ನಂತರ ಗೌಹಾಟಿಯಿಂದ ಮಣಿಪುರದ ಇಂಫಾಲಿಗೆ ಹೋಗಬೇಕಿತ್ತು. ನಂತರ ಅಲ್ಲಿಂದ ಮರಳಿ ಗೌಹಾಟಿಗೆ ಬಂದು, ಮುಂದೆ ಅಲ್ಲಿಂದ ಕಲ್ಕತ್ತಾಗೆ ಮರಳಿ ಬರಬೇಕು. ಕಲ್ಕತ್ತಾದಲ್ಲಿ ಮೂರು ಗಂಟೆಗಳ ವಿರಾಮದ ನಂತರ ಇನ್ನೊಂದು ವಿಮಾನದ ಬದಲಾವಣೆ ಮಾಡಿಕೊಂಡು ಬೆಂಗಳೂರಿಗೆ ಬರಬೇಕಿತ್ತು.

ಫೋಟೋ ಕೃಪೆ : google

ಭಾರತದ ಈಶಾನ್ಯ ವಲಯದ ವಿಮಾನಯಾನ ಸ್ವಲ್ಪ ಪ್ರಾಯಾಸಕರವೇ. ಅಂತರಾಷ್ಟ್ರೀಯ ಗಡಿಗೆ ಹತ್ತಿರವಾಗಿ ಮತ್ತು ಕೆಲವೊಮ್ಮೆ ಬಾಂಗ್ಲಾದೇಶದ ವಾಯುವಲಯದಲ್ಲಿ ಹಾರಾಟದ ಅವಶ್ಯಕತೆ ಇರುವುದರಿಂದ ಎರಡೂ ದೇಶದ ವಾಯುಯಾನ ನಿಯಂತ್ರಕರ ಜೊತೆ ನಿರಂತರವಾಗಿ ಸಂಭಾಷಣೆ ನಡೆಸುತ್ತಾ ಇರಲೇ ಬೇಕು. ಅಸ್ಸಾಂ ಮತ್ತು ಮಣಿಪುರದ ಬಹುತೇಕ ಎಲ್ಲೆಡೆ ಎತ್ತರದ ಗುಡ್ಡ ಬೆಟ್ಟಗಳು ಮತ್ತು ಅವುಗಳನ್ನು ಆವರಿಸಿ ನಿಂತಿರುವ ದಟ್ಟನೆಯ ಮೋಡಗಳು. ಇಲ್ಲಿನ ವಿಮಾನ ನಿಲ್ದಾಣಗಳಲ್ಲಿ ಬಹುತೇಕ ವರ್ಷವಿಡೀ ಮಳೆ ಬರುತ್ತಲೇ ಇರುತ್ತದೆ, ಹಾಗಾಗಿ ಇಲ್ಲಿ ಬಹಳ ಎಚ್ಚರಿಕೆಯಿಂದ ಮೈಯೆಲ್ಲಾ ಕಿವಿಯಾಗಿ, ಕಣ್ಣಾಗಿ ವಿಮಾನ ಹಾರಿಸಬೇಕು.

ಈಶಾನ್ಯ ಭಾರತದ ವಿಮಾನಯಾನವನ್ನು ಮುಗಿಸಿ ನಡುರಾತ್ರಿ ಕಲ್ಕತ್ತಾದಿಂದ ಬೆಂಗಳೂರಿಗೆ ಹೊರಟಾಗ ಆಗಲೇ ದಣಿವು ಮೈಮನಗಳನ್ನು ಆವರಿಸಿಕೊಂಡು ಎಷ್ಟು ಹೊತ್ತಿಗೆ ಮನೆ ತಲುಪುತ್ತೇವೋ ಎನಿಸಿತ್ತು. ಕಲ್ಕತ್ತಾದಿಂದ ವಿಶಾಖಪಟ್ಟಣದವರೆಗೆ ಪೂರ್ವಸಮುದ್ರ ತಟದಗುಂಟವೇ ನಮ್ಮ ವಾಯುಪಥ ಮತ್ತು ಈ ವಲಯದಲ್ಲಿ ಬಹುತೇಕ ಮೋಡ ಮುಚ್ಚಿದ ವಾತಾವರಣವಿರುತ್ತದೆ ಹಾಗಾಗಿ ಬಹಳ ಎಚ್ಚರಿಕೆಯಿಂದ ವಿಮಾನ ಮಾರ್ಗದರ್ಶನ ಮಾಡಬೇಕು. ವಾತಾವರಣದ ವೈಪರಿತ್ಯದಿಂದಾಗಿ ಅವಶ್ಯಕತೆ ಇದ್ದರೆ ಕೆಲವೊಮ್ಮೆ ಮಾರ್ಗ ಬದಲಾಯಿಸಲೂ ಬೇಕಾಗುತ್ತದೆ. ಸದ್ಯ ಅವತ್ತು ರಾತ್ರಿ ತಿಳಿಯಾದ ವಾತಾವರಣವಿತ್ತು.

ಅವತ್ತಿನ ನನ್ನ ಸಹ ವೈಮಾನಿಕ ಒಬ್ಬ ಉತ್ಸಾಹಿ ತರುಣ..ನನ್ನ ವಾಯುಸೇನೆಯ ಅನುಭವಗಳ ಬಗ್ಗೆ ಕೇಳಲು ಬಹು ಉತ್ಸುಕತೆ ತೋರಿದ್ದರಿಂದ ನಾನೂ ಅಷ್ಟೇ ಉತ್ಸಾಹದಿಂದ ನನ್ನ ಅನುಭವಗಳನ್ನು ಹೇಳತೊಡಗಿದೆ. ಪೈಲಟ್ಟುಗಳ ಮತ್ತು ಕ್ಯಾಬಿನ್ ಸಿಬ್ಬಂದಿಯೊಂದಿಗೆ ಪ್ರತಿ ಮೂವತ್ತು ನಿಮಿಷಕ್ಕೊಮ್ಮೆಯಾದರೂ ಇಂಟರ್ಕಾಮಿನಲ್ಲಿ ಅಥವಾ ಅವರೇ ಕಾಕ್ಪಿಟ್ಟಿಗೆ ಬಂದು ಮಾತನಾಡಿಸುವುದು ಕಡ್ಡಾಯ. ಹಾಗೆ ಬಂದಾಗಲೆಲ್ಲಾ ಕಾಫಿ, ಟೀ, ಲಘು ಉಪಹಾರ ಹೀಗೆ ಉಪಚಾರಗಳು ನಿರಂತರವಾಗಿ ನಡೆಯುತ್ತಿತ್ತು. ಸಿಂಗಾಪುರದ ಕಡೆಯಿಂದ ದುಬೈ ಕಡೆಗೆ ಹೋಗುತ್ತಿದ್ದ ವಿಮಾನಗಳ ಜೊತೆಗೆ ವಾಯುಯಾನ ನಿಯಂತ್ರಕರ ಆಗೊಮ್ಮೆ ಈಗೊಮ್ಮೆ ನಡೆಯುತ್ತಿರುವ ಸಂಭಾಷಣೆ ಹೊರತು ಪಡೆಸಿದರೆ ಎಲ್ಲೆಡೆ ನಿಶಬ್ದವೇ ಆವರಿಸಿತ್ತು ಎನ್ನಬಹುದು…

ಮುಖ್ಯ ಗಗನಸಖಿ ಇಂಟೆರ್ಕಾಮ್ ಮೂಲಕ ಕರೆ ಮಾಡಿ, ‘ ಕ್ಯಾಪ್ಟನ್ ಪ್ರಯಾಣಿಕಳೊಬ್ಬಳು ಪ್ರಜ್ಞೆ ತಪ್ಪಿಬಿಟ್ಟಿದ್ದಾಳೆ, ನಾಡಿಬಡಿತ ಸಿಗುತ್ತಿಲ್ಲ’ ಎನ್ನುವವರೆಗೂ…
ಸರಿ, ಇಲ್ಲಿಂದ ಪ್ರಾರಂಭವಾಯಿತು ಆಕಾಶದಲ್ಲಿ ಆಪತ್ತಿನ ಪರಿಸ್ಥಿತಿ.

ಫೋಟೋ ಕೃಪೆ : google

ಗಗನಸಖಿಯರಿಗೆ ಈ ತರಹದ ಅನಾರೋಗ್ಯ ಅಥವಾ ವೈದ್ಯಕೀಯ ಆಪತ್ತಿನ ಪರಿಸ್ಥಿತಿಯನ್ನು ನಿಭಾಯಿಸುವುದರ ಬಗ್ಗೆ ಮತ್ತು ಪ್ರಾಥಮಿಕ ಚಿಕಿತ್ಸೆ ಒದಗಿಸುವುದರ ಬಗ್ಗೆ ತರಬೇತಿ ಪಡೆದು ಪರಿಣಿತರಾಗಿರುತ್ತಾರೆ. ಪ್ರಯಾಣಿಕರಲ್ಲಿ ಯಾರಾದರೂ ಡಾಕ್ಟರ್ ಅಥವಾ ಅರ್ಹ ವೈದ್ಯಕೀಯ ಸಿಬ್ಬಂದಿ ಇದ್ದರೆ ಅವರ ನೆರವು ಪಡೆಯುತ್ತಾರೆ. ಅದೃಷ್ಟಕ್ಕೆ ಅವತ್ತು ಒಬ್ಬ ಡಾಕ್ಟರೂ ಸಹಾ ಪ್ರಯಾಣಿಸುತ್ತಿದ್ದು ಸಹಾಯಕ್ಕೆ ಒದಗಿ ಬಂದರು. ಈ ತುರ್ತು ಸಮಯದಲ್ಲಿ ಪೈಲಟ್ಟುಗಳು ಯಾರೂ ಹೊರಗೆ ಬರುವಂತಿಲ್ಲ ಯಾಕೆಂದರೆ ಕೆಲವು ಭಯೋತ್ಪಾದಕರು ಈ ತರಹದ ನಾಟಕವನ್ನಾಡಿ ಪೈಲಟ್ಟುಗಳು ಹೊರಗೆ ಬಂದಾಗ ವಿಮಾನ ಅಪಹರಣ ಮಾಡಿರುವ ನಿದರ್ಶನಗಳು ಇರುವುದರಿಂದ ಈ ನಿಯಮವನ್ನು ತರಲಾಗಿದೆ.

ಅದೇ ಸಮಯಕ್ಕೆ ನಾವು ವಿಶಾಖಪಟ್ಟಣದ ಮೇಲಿಂದ ಬಲಕ್ಕೆ ತಿರುಗಿ ಹೈದರಾಬಾದಿನ ದಿಕ್ಕಿನಲ್ಲಿ ಹೊರಟಿದ್ದೆವು. ಪರಿಸ್ಥಿತಿಯ ಗಂಭೀರತೆಗೆ ತಕ್ಕಂತೆ ಹೈದರಾಬಾದಿನಲ್ಲೇ ವಿಮಾನ ಇಳಿಸಬೇಕಾಗಬಹುದೇನೋ ಎಂದು ಮನಸ್ಸಿನಲ್ಲೇ ಲೆಕ್ಕ ಹಾಕಿ ನಮ್ಮ ಸಹ ವೈಮಾನಿಕರಿಗೆ ಕಂಪ್ಯೂಟರಿನಲ್ಲಿ ಹೈದರಾಬಾದಿನಲ್ಲಿ ವಿಮಾನ ಇಳಿಸುವ ಒಂದು ಪರ್ಯಾಯ ಫ್ಲೈಟ್ ಪ್ಲಾನ್ ಒಂದನ್ನು ಸಿದ್ಧಪಡಿಸಲು ಹೇಳಿದೆ. ಇಂಟರ್ಕಾಮಿನಲ್ಲಿ ಮತ್ತೊಮ್ಮೆ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಮಾತನಾಡಿ ಆ ಯುವತಿಯ ಬಗ್ಗೆ ವಿಚಾರಿಸಿದೆ. ಉತ್ತರ ನಿರಾಶಾದಾಯಕವಾಗಿತ್ತು. ಅಲ್ಲೇ ಇದ್ದ ಡಾಕ್ಟರೊಂದಿಗೆ ಮಾತನಾಡಿದೆ ಅವರೂ ಖಚಿತವಾಗಿ ಏನೂ ಹೇಳದ ಪರಿಸ್ಥಿತಿಯಲ್ಲಿದ್ದರು. ಸರಿ ಇನ್ನು ಆದಷ್ಟು ಬೇಗ ಹೈದರಾಬಾದಿನಲ್ಲಿ ಇಳಿಯುವುದೇ ಒಳ್ಳೆಯದು ಎಂದು ನಿರ್ಧರಿಸಿ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಇಳಿಯುವ ನಮ್ಮ ಫೈಟ್ ಪ್ಲಾನನ್ನು ಕಾರ್ಯಗತಗೊಳಿಸಿ ನಮ್ಮ ವೈಮಾನಿಕ ಚಟುವಟಿಕೆಗಳನ್ನು ಪ್ರಾರಂಭಿಸಿದವು.

ಮುಖ್ಯ ಕ್ಯಾಬಿನ್ ಸಿಬ್ಬಂದಿಗೆ ನಾವು ಇನ್ನು ಹದಿನೈದು ನಿಮಿಷದಲ್ಲಿ ಹೈದರಾಬಾದಿನಲ್ಲಿ ಇಳಿಯುತ್ತಿದ್ದೇವೆ ಕ್ಯಾಬಿನ್ನನ್ನು ಸಿದ್ಧಪಡಿಸಿ ಎಂದು ತಿಳಿಸಿದೆವು ಮತ್ತು ಧ್ವನಿವರ್ಧಕದ ಮೂಲಕ ಪ್ರಯಾಣಿಕರಿಗೂ ಈ ವಿಷಯವನ್ನು ತಿಳಿಸಲಾಯಿತು. ವಿಮಾನದ ವೈದ್ಯಕೀಯ ಆಪತ್ತಿನ ಪರಿಸ್ಥಿತಿ ಮತ್ತು ಹೈದರಾಬಾದಿನಲ್ಲಿ ಲ್ಯಾಂಡ್ ಮಾಡುವ ನಮ್ಮ ನಿರ್ಧಾರವನ್ನ ಚೆನ್ನೈನ ವಾಯುಯಾನ ನಿಯಂತ್ರಿಕರಿಗೆ ತಿಳಿಸಿದೆವು ಮತ್ತು 36000 ಅಡಿಯಿಂದ ವಿಮಾನವನ್ನು ಕೆಳಗೆ ಇಳಿಸಲು ಅನುಮತಿ ಕೋರಿದೆವು. ನಮ್ಮ ವಾಯುಪಥದಲ್ಲಿದ್ದ ಇತರೆ ವಿಮಾನಗಳನ್ನು ಚದುರಿಸಿ ಸೀದಾ ನಮಗೆ ಹತ್ತು ಸಾವಿರ ಅಡಿಗೆ ಇಳಿಯಲು ಅನುಮತಿ ಕೊಟ್ಟರು.



ಒಂದು ವಿಮಾನ ವೈದ್ಯಕೀಯ ಕಾರಣಗಳಿಂದಲೋ ಅಥವಾ #ತಾಂತ್ರಿಕ ಕಾರಣಗಳಿಂದಲೋ ನಮಗೆ ಲ್ಯಾಂಡಿಂಗ್ ಮಾಡಲು ಆದ್ಯತೆ ಕೊಡಿ ಎಂದು ಕೋರಿದ ಕೂಡಲೇ ಇತರೆ ವಿಮಾನದ ಪೈಲಟ್ಟುಗಳು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅನಾವಶ್ಯಕವಾಗಿ ಮಾತನಾಡದೆ ಆ ವಿಮಾನ ಲ್ಯಾಂಡ್ ಆಗುವವರೆಗೂ ಮೌನವಹಿಸುತ್ತಾರೆ. ನಾವು ಕೋರಿದಂತೆ ಅತಿವೇಗದ ಇಳುವಿಕೆಗೂ ಅನುಮತಿ ದೊರೆಯಿತು ಅಂತೆಯೇ ನಮ್ಮ ವಿಮಾನದ ವೇಗವನ್ನು ಸುಮಾರು 900 ಕಿಮೀ ವರೆಗೆ ಹೆಚ್ಚಿಸಿದೆವು. ಚೆನ್ನೈನ ನಿರ್ದೇಶನದಂತೆ ಮುಂದಿನ ಸಂಪರ್ಕ ಹೈದರಾಬಾದಿನ ವಾಯುಯಾನ ನಿಯಂತ್ರಕರೊಂದಿಗೆ.

ಫೋಟೋ ಕೃಪೆ : google

ಅವತ್ತು ರಾತ್ರಿ ಹೈದರಾಬಾದಿನ ವಿಮಾನ ನಿಲ್ದಾಣದಲ್ಲಿ “09” ರನ್ ವೇ ಯಿಂದ ವಿಮಾನಗಳ ಆಗಮನ ಮತ್ತು ನಿರ್ಗಮನಗಳು ಪೂರ್ವಾಭಿಮುಖವಾಗಿ ನಡೆಯುತ್ತಿದ್ದವು. ನಮಗೆ ಪಶ್ಚಿಮಾಭಿಮುಖದ ರನ್ ವೇ “27” ಕೊಟ್ಟರೆ ಐದಾರು ನಿಮಿಷಗಳ ಉಳಿತಾಯವಾಗುತ್ತದೆ ಎಂದು ನಮಗೆ ಲ್ಯಾಂಡ್ ಮಾಡಲು ಆ “27” ರನ್ ವೇ ಯನ್ನು ಕೊಡಿ ಎನ್ನುವ ನಮ್ಮ ಕೋರಿಕೆಗೂ ಅನುಮತಿ ಕೊಟ್ಟರು. ಇತರೆ ವಿಮಾನಗಳಿಗೆ ಅವರು ಇದ್ದಿದ್ದಲ್ಲೇ ಸುತ್ತು ಹಾಕಲು ಆದೇಶ ನೀಡಿದ್ದರು.

ನಾವು ಲ್ಯಾಂಡ್ ಮಾಡಿದ ಕೂಡಲೇ ಅತಿ ಹತ್ತಿರದ ಸ್ಥಳದಲ್ಲಿ ನಮಗೆ ನಿಲ್ಲಿಸುವ ಅವಕಾಶ ಕಲ್ಪಿಸಿಕೊಡಿ ಮತ್ತು ನಾವು ಮೊದಲೇ ಕೋರಿದಂತೆ ಅಂಬುಲನ್ಸ್ ಮತ್ತು ಡಾಕ್ಟರನ್ನು ಅಲ್ಲಿ ಸಿದ್ಧವಾಗಿ ನಿಂತಿರಬೇಕು ಎಂದು ಆದೇಶಿಸಿದೆವು.

ಇದೆಲ್ಲಾ ನಡೆಯುತ್ತಿರುವ ನಡುವೆ ನಮಗಿದ್ದ ಒಂದೇ ಯೋಚನೆ ಆ #ಯುವತಿ ಬದುಕಿರಬಹುದೇ….?


  • ವಿಂಗ್ ಕಮಾಂಡರ್ ಸುದರ್ಶನ (ಇಪ್ಪತ್ತೈದು ವರ್ಷಗಳ ವಾಯುಸೇನೆಯ ಸೇವೆಯಿಂದ ನಿವೃತ್ತಿ ಪಡೆದ ನಂತರ ಇಂಡಿಗೋ ಏರ್ಲೈನ್ ನಿನಲ್ಲಿ ಏರ್ ಬಸ್ ವಿಮಾನಗಳ ವೈಮಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಹಾಗು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿರುವ ಲೇಖಕರು, ‘ಹಸಿರು ಹಂಪೆ’ ಮತ್ತು ‘ಯೋಧ ನಮನ’ ಎನ್ನುವ ಎರಡು ಪುಸ್ತಕವನ್ನು ಬರೆದಿದ್ದಾರೆ).

0 0 votes
Article Rating

Leave a Reply

1 Comment
Inline Feedbacks
View all comments

[…] #ಹಿಮಾಲಯದ ಕಾರಕೋರಂ ಪರ್ವತ ಶ್ರೇಣಿಯಲ್ಲಿದೆ. […]

All Articles
Menu
About
Send Articles
Search
×
1
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW