ಇಳಿಸಂಜೆ (ಭಾಗ-೪)

ಖಿನ್ನತೆ, ಡಿಪ್ರೆಶನ್‌, ಅಸಹಾಯತೆ ಈ ಶಬ್ದಗಳನ್ನೇ ನಾವು ಕೇಳರಿಯದ ದಿನಗಳವು. ಅದರಲ್ಲೂ ನಮ್ಮ ಹಳ್ಳಿಗಾಡಲ್ಲಿ ಇವೆಲ್ಲಾ ಗೊತ್ತಾಗುವುದುಂಟೆ. ಪತ್ರಕರ್ತರಾದ ಬಿ.ವಿ.ಅನುರಾಧ ಅವರ ಹೊಸ ಅಂಕಣ ‘ಇಳಿಸಂಜೆ’ ಅಂಕಣದಲ್ಲಿ ‘ಸಮಸ್ಯೆಯಿರಲಿ, ಖಿನ್ನತೆಯಿರಲಿ, ಸಾವು ಪರಿಹಾರವೇ ಅಲ್ಲ’ ತಪ್ಪದೆ ಮುಂದೆ ಓದಿ…

ಒಂಟಿತನ, ಖಿನ್ನತೆ, ಅಸಹಾಯಕತೆ, ಸಹಿಸಲಾಗದ ನೋವು, ಮರೆಯಲಾಗದ ಪ್ರೀತಿ, ಬಿಚ್ಚಿಡಲಾಗದ ನೆನಪುಗಳು, ಇತ್ತೀಚೆಗೆ ಸೇರಿಕೊಂಡಿರುವ ಮೆನೋಪಾಸ್‌  ಯಾವುದು ಏನೇ ಆದರೂ ಬದುಕು ತುಂಬಾ ಬೆಲೆಯುಳ್ಳದ್ದು. ಬಂಗಾರದಂತ ಬದುಕು ನಮಗೆ ದಕ್ಕಿದೆ. ಅದನ್ನು ನಮಗಾಗಿ, ನಾವೇ ಊರುಗೋಲಾಗಿರುವ ಮಕ್ಕಳಿಗಾಗಿ, ನಮ್ಮನ್ನೇ ಆಶ್ರಯಿಸಿರುವ ಹಿರಿಯರಿಗಾಗಿ ಬದುಕಬೇಕು. ಬದುಕಿ ಬದುಕನ್ನೇ ಗೆಲ್ಲಬೇಕು. ಈಸಬೇಕು ಇದ್ದು ಜೈಸಬೇಕು. ಇವು ಮನಸ್ಸನ್ನೂ ಮೀರಿದವಾ, ಹಾಗೆಂದು ನನಗೆ ನಾನೇ ಕೇಳಿಕೊಂಡ ಪ್ರಶ್ನೆ.

ಅಂದರೆ, ನನ್ನ ಬಾಲ್ಯದಲ್ಲಿ ನನ್ನಜ್ಜನ ಮನೆ ಬಿಟ್ಟು ನಾವು ಅಪ್ಪನ ಮನೆಗೆ ಬಂದಾಗ, ನನಗೂ ಹೀಗೇ ನನ್ನ ಅಜ್ಜನ ಮರೆಯಲಾಗದೆ, ಹೇಳಿಕೊಳ್ಳಲಾಗದಂತಹ ಸಂಕಟ, ನೋವು ಅನುಭವಿಸಿದ್ದೆ. ಅವರೆಲ್ಲಾದರೂ ಕಂಡರೆ ನನ್ನ ಅಳುವನ್ನು ನಿಯಂತ್ರಿಸಿಕೊಳ್ಳಲಾಗದಷ್ಟು ದುಃಖ ನನಗೆ ಒತ್ತರಿಸಿ ಬರ್ತಿತ್ತು. ಅಜ್ಜನಿಗೇ ಸಮಾಧಾನ ಮಾಡಲಾಗದಷ್ಟು ಅತ್ತುಬಿಡುತ್ತಿದ್ದೆ. ನಾನು ಅಮ್ಮಅಪ್ಪ, ಅಜ್ಜಿಯರಿಗಿಂತ ಅಜ್ಜನ್ನ ತುಂಬಾ ಅಚ್ಚಿಕೊಂಡಿದ್ದೆ. ಅವರಿಲ್ಲದೆ ನನಗೆ ನಿದ್ದೆ ಹತ್ತಲಾರದಷ್ಟು. ಬರೀ ಕತ್ತಲೆಯಂತೆ. ಅಂತ ಅಜ್ಜನ ಮಡಿಲಿಂದ ನಾನು ದೂರಾಗುವುದೆಂದರೇನು? ನನಗೆ ಸಂಕಟವಾಗದೆ ಮತ್ತೇನಾದೀತು? ನನ್ನ ನೋವನ್ನು ವ್ಯಕ್ತಪಡಿಸಲು ಸಹ ನನಗಾಗ ಗೊತ್ತಿರಲಿಲ್ಲ. ಬಹುಶಃ ನನಗಿದ್ದ ಸಮಾಧಾನದ ಮಾರ್ಗ ಅಳುವುದೊಂದೆ. ಪ್ರತಿಯಾಗಿ ಅಜ್ಜನ ಕಣ್ತುಂಬಿದರೂ ತೋರಿಸಿಕೊಳ್ತಿರಲಿಲ್ಲ. ಅವರು ಅಜ್ಜನಲ್ಲವೇ ಅದಕ್ಕೆ. ನಾನೀಗೆ ಅತ್ತುಅತ್ತು ನನ್ನ ಮನವನ್ನು ಹಗುರಗೊಳಿಸಿಕೊಳ್ತಿದ್ದೆ. ಕೆಲವು ದಿನಗಳು ನಾನೂ ಮೌನಕ್ಕೆ ಶರಣಾದೆ, ಸಿಡುಕುತ್ತಿದ್ದೆ ಎಂದು ಅಮ್ಮ ಹೇಳ್ತಿದ್ದರು. ಆಗೆಲ್ಲಾ ಈ ಖಿನ್ನತೆ, ಡಿಪ್ರೆಶನ್‌, ಅಸಹಾಯತೆ ಈ ಶಬ್ದಗಳನ್ನೇ ನಾವು ಕೇಳರಿಯದ ದಿನಗಳವು. ಅದರಲ್ಲೂ ನಮ್ಮ ಹಳ್ಳಿಗಾಡಲ್ಲಿ ಇವೆಲ್ಲಾ ಗೊತ್ತಾಗುವುದುಂಟೆ.

ಬಹುಶಃ ಆ ಮೌನ ಖಿನ್ನತೆಯನ್ನು ಗಾಢವಾಗಿಸುವ ಮುನ್ನ, ನನ್ನ ಅದೃಷ್ಟ ಚೆನ್ನಾಗಿತ್ತು ಅನಿಸುತ್ತೆ. ಅದೇ ವೇಳೆಗೆ ನಾನು ಎಸ್ಸೆಸ್ಸೆಲ್ಸಿ ಪಾಸಾಗಿದ್ದೆ. ಅಜ್ಜನ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಈ ಗ್ರಾಮದಲ್ಲೇ ನನ್ನ ಮೊಮ್ಮಗಳು ಎಸ್ಸೆಸ್ಸೆಲ್ಸಿ ಪಾಸು ಮಾಡಿದ ಮೊದಲಿಗಳು ಅಂತ ಅದೆಷ್ಟು ಸಂಭ್ರಮ ಪಟ್ಟಿದ್ದರೆಂದು ಅತ್ತೆ ಹೇಳಿದ್ದು. ನಾನು ಕಾಣಲಿಲ್ಲ. ನಾನು ಪಾಸಾಗಲು ಅಜ್ಜನೇ ಕಾರಣ. ನನ್ನಲ್ಲಿ ಓದುವ ಚಟ ಹತ್ತಿಸಿದವರೂ ನನ್ನಜ್ಜನೇ. ಕಿರಿಯ ಪ್ರಾಥಮಿಕ ಶಾಲೆ ಮಾತ್ರ ಇದ್ದ ಆ ಊರಲ್ಲಿ ಮುಂದಿನ ವ್ಯಾಸಂಗಕ್ಕೆ ನಾಲ್ಕೈದು ಮೈಲಿ ಬೆಟ್ಟಗುಡ್ಡ ಹತ್ತಿ ಇಳಿದು ದೂರದ ಹೋಬಳಿ ಕೇಂದ್ರಕ್ಕೆ ಹೋಗಬೇಕಿತ್ತು. ಅದಕ್ಕೇನೆ ಬಹುತೇಕ ನಮ್ಮಳ್ಳಿ ಹೆಣ್ಣು ಮಕ್ಕಳು ನಾಲ್ಕನೇ ತರಗತಿ ವ್ಯಾಸಂಗಕ್ಕೆ ವಿದಾಯ ಹಾಡ್ತಿದ್ದರು. ಆದರೆ, ನನ್ನಜ್ಜ ನನ್ನ ದೊಡ್ಡಪ್ಪ ಮನೆಯಲ್ಲಿರಿಸಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿಸಿದರು. ಆನಂತರ ನಾನು ಬೆಟ್ಟಗುಡ್ಡ ಹತ್ತಿ ಇಳಿದು ಓಡಾಡುವಂತಳಾದೆ. ಪ್ರೌಢಶಾಲೆಗೆ ಅಜ್ಜನ ಮನೆಯಿಂದಲೇ ಹೋಬಳಿ ಕೇಂದ್ರಕ್ಕೆ ಓಡಾಡಿದೆ. ಎಸ್ಸೆಸ್ಸೆಲ್ಸಿ ಪಾಸು ಮಾಡಿದೆ. ಮುಂದಿನ ವಿದ್ಯಾಭ್ಯಾಸಕ್ಕೆ ತಾಲೂಕು ಇಲ್ಲವೇ ಜಿಲ್ಲಾ ಕೇಂದ್ರವನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ. ಆಗ ನಮ್ಮ ಕುಟುಂಬದಲ್ಲಿ ಸಂಭವಿಸಿದ ಕೆಲವು ಕಲಹಗಳು ಅಜ್ಜನಿಂದ ಬೇರಾಗಿ ನನ್ನಪ್ಪಮ್ಮ ಸ್ವಂತ ಊರು ಸೇರಿದರು. ನಾನು ಕಾಲೇಜು ಸೇರಿ ಜಿಲ್ಲಾ ಕೇಂದ್ರದ ಹಾಸ್ಟೆಲ್‌ನಲ್ಲಿದ್ದು ಓದಿಕೊಂಡೆ.

ಆಗ ಓದಿನಂಗಳಕ್ಕೆ ಬಿದ್ದು ಖಿನ್ನತೆ ನನ್ನಿಂದ ದೂರಾಯಿತೋ ಏನೋ ಅರಿಯದು. ಅಂತೂ ನಾನು ಅಜ್ಜನ ನೆನಪುಗಳಿಂದ ಹೊರಬರಲು ನನಗೆ ಓದು ಸಹಕರಿಸಿತೆಂದೇ ನನ್ನ ಭಾವನೆ. ವಿಪರೀಪ ಕಾದಂಬರಿ ಓದ್ತಿದ್ದೆ. ಆ ಗೀಳು ನಾಲ್ಕೈದನೇ ತರಗತಿಗೆ ಅಂಟಿಕೊಂಡಿತ್ತು. ಜಿಲ್ಲಾ ಕೇಂದ್ರದಲ್ಲಿ ಕೈಗೆಟುಕುವ ಪುಸ್ತಕಗಳು, ಹೊಸ ಜಾಗ. ಹೊಸ ಸ್ನೇಹಬಳಗ. ಹಾಸ್ಟೆಲ್‌ನಲ್ಲಿ ನನಗಿಂತ ಹಿರಿಯ ವಿದ್ಯಾರ್ಥಿಗಳು ಮಾಡ್ತಿದ್ದ ಪದವಿ ಶಿಕ್ಷಣ, ನಾನೂ ಅವರಂತೆ ಓದಬೇಕೆಂಬ ಛಲ ನನ್ನಲ್ಲಿ ಹುಟ್ಟು ಹಾಕಿತು. ನಾನ್ಯಾವಾಗ ಅವರಂತೆ ಬಿ.ಎ. ಎಂದು ಪುಸ್ತಕದಲ್ಲಿ ಬರೆದುಕೊಳ್ಳುವುದು ಅನ್ನುವ ಮಟ್ಟಕ್ಕೆ ನನ್ನ ಪದವಿ ದಾಹ ಹತ್ತಿತ್ತು. ನಾನೂ ಚೆನ್ನಾಗಿ ಓದಿ, ಒಂದು ಕೆಲಸಕ್ಕೆ ಸೇರಿ ನನ್ನಜ್ಜನ್ನ ನನ್ನೊಂದಿಗೆ ಕರೆತರಬೇಕೆಂಬ ಹಠ ನನ್ನನ್ನು ಬದಲಿಸಿತು ಅನಿಸುತ್ತೆ.

ಇಷ್ಟೆಲ್ಲಾ ಏಕೆ ಬರೆದೆನೆಂದರೆ, ನಾನೇದರೂ ಅಂದು ಎಸ್ಸೆಸ್ಸೆಲ್ಸಿ ಪಾಸಾಗದಿದ್ದಿದ್ದರೆ ನಾನು ಕೂಡ ಅಜ್ಜನ ನೆನಪಲ್ಲೇ ಖಿನ್ನತೆಗೆ ಒಳಗಾಗಿ ಏನೋ ಆಗಿಬಿಡುತ್ತಿದ್ದೆನೇನೋ ಅಂತನಿಸುತ್ತೆ ನನಗೀಗ. ಈಗಲೂ ನನ್ನ ಅಜ್ಜನೊಂದಿಗೆ ನಾ ಕಳೆದ ದಿನಗಳು ನೆನದರೆ ಕಣ್ಣಾಳಿಗಳು ತೇವಗೊಳ್ಳುತ್ತೆ. ಆನಂತರ ಅಜ್ಜ ಅಮ್ಮನ ಮನೆಗೆ ಬಂದದ್ದು ಬೇರೆ ವಿಷಯ. ನಾನು ಮೈಸೂರಲ್ಲಿ ಎಂಎ ಮಾಡುವಾಗ ಅಜ್ಜನಿಗೊಂದು ಶಾಲು ತಂದಿದ್ದೆ. ನಾನೊಂದು ಪುಟ್ಟ ಕೆಲಸಕ್ಕೆ ಸೇರಿದ ಕೂಡಲೇ ಅಜ್ಜನಿಗೆ ಹೊಸ ಕನ್ನಡಕ, ಬಾಟಾ ಚಪ್ಪಳಿ, ಶಾಲು ಹೀಗೆ ಸಣ್ಣಪುಟ್ಟ ಉಡುಗೊರೆಗಳು ಕೊಟ್ಟಾಗ ಅಜ್ಜ ಅವನ್ನು ಹಾಕೊಂಡು ಆಗಿನ ಕಾಲಕ್ಕೆ ಅಜ್ಜನ ಮನೆಯಲ್ಲಿದ್ದ ಉದ್ದವಾದ ಕನ್ನಡಿಯಲ್ಲಿ ಅಜ್ಜನೇ ಶ್ರೀಗಂಧದ ಕಡ್ಡಿಯಲ್ಲಿ ಮಾಡಿಕೊಂಡಿದ್ದ ಊರುಗೋಲು ಹಿಡಿದು, ಬಿಳಿ ಜುಬ್ಬಾ-ದೋತಿ ಮೇಲೆ ಶಾಲು ಹೊದ್ದು, ಬಾಟಾ ಚಪ್ಪಲಿ ಮೆಟ್ಟಿ, ಕನ್ನಡಕ ಮತ್ತೆ ಮತ್ತೆ ಏರಿಸಿಕೊಂಡು ಖುಷಿ ಪಟ್ಟು ಹೇಳಿಕೊಳ್ತಿದ್ದ ನನ್ನಜ್ಜನ್ನ ಕಂಡು, ನನ್ನತ್ತೆ, ಇದಕ್ಕೇನು ಕೊರತೆ ಇಲ್ಲ, ಆ ಮೊಮ್ಮಗಳಿಗೂ ನಾಚಿಕೆ ಇಲ್ಲ ಅಂತ ಗೊಣಗಿದಾಗ ಅಜ್ಜ ಊರುಗೋಲನ್ನೇ ಅತ್ತೆಯೆಡೆಗೆ ಬೀಸಿ ಹಲ್ಲುಕಡಿದದ್ದನ್ನು ಅತ್ತೆ ಬಂದು ಹೇಳಿಕೊಂಡಿದ್ದರು. ಅಮ್ಮ ನಸುನಕ್ಕಿದ್ದು, ಅಜ್ಜಿ ಬೆರಗಾಗಿದ್ದು, ಅಪ್ಪ ಸಂತೋಷ ಪಟ್ಟಿದ್ದು ಎಲ್ಲವೂ ಈಗ ನೆನಪಷ್ಟೇ. ಆದರೇನು ನಾನು ಖಿನ್ನತೆಯಿಂದ ಹೊರ ಬಂದು ಈಗ ಬರಹದಲ್ಲಿ ನನ್ನಜ್ಜ ಕಾಣಿಸಿಕೊಂಡಿದ್ದು ನನಗೊಂದು
ನವಿರಾದ ಸವಿನೆನಪು.

ನಾನು ಹೇಳ ಹೊರಟದ್ದು, ನಮ್ಮ ಬಲಹೀನತೆಗಳನ್ನು ನಾವು ಮೆಟ್ಟಿ ನಿಲ್ಲಲಾಗದಷ್ಟು ಕುಗ್ಗಿಸಿಬಿಡುತ್ತವಾ, ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು ಎಂಬುದು ನನ್ನ ಬಲವಾದ ನಂಬಿಕೆ. ನನ್ನಜ್ಜನ ಕಾಲದಲ್ಲಿ ಈಗಿನಷ್ಟು ಆಧುನಿಕತೆ ಬೆಳೆದಿರಲಿಲ್ಲ. ಹಾಗೆ ನೋಡಿದರೆ, ಅಜ್ಜ ಸೇರಿದಂತೆ ನನ್ನಿಡೀ ಕುಟುಂಬ ಅನುಭವಿಸಲಾಗದಷ್ಟು ಅವಮಾನ, ನೋವು, ಅಸಹಾಯತೆಯನ್ನು ಎದುರಿಸಿತು. ಆದರೂ ಎಂದೂ ಅಜ್ಜನಾಗಲಿ, ಅಪ್ಪನಾಗಲಿ, ಅಮ್ಮನಾಗಲಿ, ಕೊನೆಗೆ ಯಾರಲ್ಲೂ ನನ್ನ ನೋವನ್ನ ಹೇಳಿಕೊಳ್ಳಲಾಗದ ವಯಸ್ಸಿನ ನಾನಾಗಲಿ ಹೇಗೋ ಬಚಾವಾದವೇ ಹೊರತು, ನಮ್ಮ ಯಾರ ಮನದಲ್ಲೂ ಅನಾಹುತ ಮಾಡಿಕೊಳ್ಳುವ ಆಲೋಚನಗಳು ಸುಳಿಯಲಿಲ್ಲ. ಅಜ್ಜನ ಮನೆಯಿಂದ ಹೊರಬಿದ್ದ ಅಪ್ಪಅಮ್ಮನಿಗೆ ಮತ್ತೆ ಸ್ವಲ್ಪ ದಿನಗಳಲ್ಲಿ ಅದಕ್ಕಿಂತ ಮತ್ತೊಂದು ದೊಡ್ಡ ಹೊಡೆತ ಬಿತ್ತು. ಅಪ್ಪ ಎದೆಗುಂದಲಿಲ್ಲ. ಅಮ್ಮ ಜೊತೆಗಿದ್ದರು. ನಾವು ಆಸರೆಯಾದೆವು. ಬದುಕನ್ನು ಗಟ್ಟಿ ಮಾಡಿಕೊಂಡೆವು. ಸಾವನ್ನು ಹತ್ತಿರ ಬಿಟ್ಟುಕೊಳ್ಳಲಿಲ್ಲ.
ಆಗಿನಂತಿಲ್ಲ ಈಗ ಕಾಲ ಬದಲಾಗಿದೆ. ಮಾನಸಿಕ, ದೈಹಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ವೈದ್ಯಕೀಯ ಕ್ಷೇತ್ರ ಬೆಳೆದಿದೆ. ಮಾನವ ಸಂಪರ್ಕಗಳು ಚಾಚಿಕೊಂಡಿದೆ. ಸ್ನೇಹಪರ ಒಡನಾಟಗಳು ಒಗ್ಗೂಡಿವೆ. ಸಮುದಾಯದಲ್ಲಿ ಪಲ ದಾರಿಗಳಿವೆ. ಮಾರ್ಗದರ್ಶನಗಳಿವೆ. ಮಕ್ಕಳೋ, ಯುವಕರೋ ಬಿಡಿ, ಅವರಿಗೆ ದುಡುಕೆಂದೋ, ಅವರ ಬುದ್ದಿಮಟ್ಟ ಪಕ್ವಗೊಂಡಿಲ್ಲವೆಂತಲೋ ಅಂದುಕೊಳ್ಳಬಹುದು. ಆದರೆ, ವಿಚಾರವಂತರು, ಸಾಹಿತಿಗಳು, ವಿದ್ಯಾವಂತರು, ಉನ್ನತಾಧಿಕಾರಿಗಳು, ಉದ್ಯಮಿಗಳು, ಸೆಲೆಬ್ರೆಟಿಗಳು ಇಂತಹವರೂ ಏಕೆ ಈ ಖಿನ್ನತೆಯಿಂದ ಹೊರಬರಲಾಗದೆ ಅನಾಹುತ ಮಾಡಿಕೊಳ್ಳುತ್ತಿದ್ದಾರೆಂಬುದೇ ಬಿಡಿಸಲಾಗದ ಒಗಟು. ಆದರೆ ಎಲ್ಲವೂ ಮುಗಿದ ಮೇಲೆ ಅಂತೆಕಂತೆಗಳಿಂದ ಯಾವ ಪ್ರಯೋಜನವೂ ಇಲ್ಲ. ಭೂಮಿಯ ಮೇಲೆ ಇದ್ದಾಗಲೇ ಪರಿಹಾರ ಹುಡುಕಲು ಪ್ರತಿಯೊಬ್ಬರೂ ಸಹಕರಿಸಬೇಕು. ಮನಸ್ಸಿನಲ್ಲಾಗುವ ಬದಲಾವಣೆಗಳನ್ನು ತುಮುಲಗಳನ್ನು, ದುಗುಡವನ್ನು, ನೋವನ್ನು, ದುಃಖವನ್ನು, ಸಂಕಷ್ಟಗಳನ್ನು ಆತ್ಮೀಯರೊಂದಿಗೆ ಹಂಚಿಕೊಂಡು ಬಗೆಹರಿಸಿಕೊಳ್ಳುವುದೇ ಸೂಕ್ತಮಾರ್ಗ. ಇದು ನನ್ನ ಅನಿಸಿಕೆ ಮತ್ತು ಅಭಿಮತ.

ಹಿಂದಿನ ಸಂಚಿಕೆಗಳು :


  • ಬಿ.ವಿ.ಅನುರಾಧ – ಪತ್ರಕರ್ತರು, ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW