ವಲಸಿಗರು ಸಮಾಜಕ್ಕೆ ಶಕ್ತಿಯಾಗಲಿ

ಭಾರತಕ್ಕೆ ಹೊರದೇಶಗಳಿಂದಲೂ ಸರಿ ಸುಮಾರು 48.78 ಲಕ್ಷ ವಲಸಿಗರು ಬಂದಿದ್ದು, ಈ ವಲಸಿಗರಿಂದ ಭಾರತಕ್ಕೆ ಅತಿ ಹೆಚ್ಚು ಹಣ ಹರಿದುಬರುತ್ತಿದೆ ಎಂದು ಅಂಕಿ ಅಂಶದಿಂದ ತಿಳಿದು ಬಂದಿದೆ. ಇಂದು ಅಂತರರಾಷ್ಟ್ರೀಯ ವಲಸಿಗರ ದಿನ. ಈ ದಿನದ ವಿಶೇಷತೆಯ ಕುರಿತು ಗೀತಾಂಜಲಿ ಎನ್ ಎಮ್ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಇಪ್ಪತ್ತೆರಡನೆ ಶತಮಾನಕ್ಕೆ ಶರವೇಗದಲ್ಲಿ ಓಡುತ್ತಿರುವ ತಾಂತ್ರಿಕಯುಗವಾದ ಇಂದು ಪ್ರಪಂಚವೇ ಸಂಕುಚಿತಗೊಂಡು ಜನ ಜೀವನ ದೇಶ ಭಾಷೆ ಗಡಿಗಳಾಚೆ ಸವಿಸ್ತಾರವಾಗಿ ಬೆಳೆಯುತ್ತಿದೆ ಹಿಂದೆ ಮಾನವ ಜೀವನ ಕಟ್ಟಿಕೊಳ್ಳಲು ಹುಟ್ಟಿದ ಅಕ್ಕ ಪಕ್ಕದ ಊರು ಜಿಲ್ಲೆ, ರಾಜ್ಯಗಳಿಗೆ ಮಾತ್ರ ವಲಸೆ ಹೋಗುತ್ತಿದ್ದ ಆದರೆ ಇಂದು ಮನುಜರಿಗೆ ಜೀವನ ನೆಡೆಸಲು ಹುಟ್ಟಿ ಬೆಳೆದ ಊರು ದೇಶವೇ ಆಗಬೇಕೆಂದು ಇಲ್ಲ, ದೇಶ ಭಾಷೆ ಬಿಟ್ಟು ಜಗತ್ತಿನ ಯಾವ ದೇಶಕ್ಕೆ ಬೇಕಾದರೂ ಹೋಗಿ ಬದುಕು ಕಟ್ಟಿಕೊಳ್ಳುವಷ್ಟು ತಾಂತ್ರಿಕತೆ ಬೆಳೆದು ನಿಂತಿದೆ ಹಾಗಾಗಿ ಪ್ರತಿಯೊಂದು ದೇಶದಕ್ಕೂ ಬೇರೆ ಬೇರೆ ದೇಶದ ಜನರು ತಮ್ಮ ಬದುಕು ಕಟ್ಟಿಕೊಳ್ಳಲು ವಲಸೆ ಹೋಗುತ್ತಿದ್ದಾರೆ,ಹೀಗೆ ವಲಸೆ ಹೋಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಆ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಕೆಲವೊಂದಿಷ್ಟು ಹಕ್ಕು ರಕ್ಷಣೆಗಳು ಇರುವುದರಿಂದ ಆ ಹಕ್ಕುಗಳ ರಕ್ಷಣೆಯ ಅಗತ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ವಲಸಿಗರ ದಿನವೆಂದು ಆಚರಿಸಲಾಗುತ್ತದೆ.

ಒಂದು ವರದಿಯ ಪ್ರಕಾರ ಪ್ರಸ್ತುತ 281 ದಶಲಕ್ಷ ಜನರು ಸ್ವಂತದ್ದಲ್ಲದ ದೇಶದಲ್ಲಿ ನೆಲೆಸಿದ್ದಾರೆ ಹೀಗಾಗಿ ಜಗತ್ತಿನ ಹಲವು ದೇಶಗಳು ವಲಸಿಗರ ಹಲವು ಸಮಸ್ಯೆಯನ್ನು ಎದುರಿಸುತ್ತಿವೆ. ವಲಸೆ ಮಾನವ ಇತಿಹಾಸದ ಅವಿಭಾಜ್ಯ ಭಾಗವಾಗಿದ್ದು, ಹಿಂದಿನಿಂದಲೂ ನಮ್ಮ ಹಿರಿಯರು ಕುಟುಂಬವನ್ನು ಕಟ್ಟಿಕೊಂಡು ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುತ್ತಿದ್ದರು. ಆದರೆ ಇದೀಗ ಜಾಗತೀಕರಣ ನಗರೀಕರಣ, ಕೈಗಾರೀಕರಣ, ಉದಾರೀಕರಣದ ಪ್ರಭಾವದಿಂದಾಗಿ ಹೊರ ದೇಶಗಳಿಗೆ ವಲಸೆ ಹೋಗುವವರ ಸಂಖ್ಯೆ ಏರಿಕೆಯಾಗುತ್ತಿದೆ

ಮುಖ್ಯವಾಗಿ ಜನರು ನೀರುದ್ಯೋಗ, ಶಿಕ್ಷಣ, ಸುರಕ್ಷತೆ, ಯುದ್ಧ, ಹವಾಮಾನ ವೈಪರೀತ್ಯ ಬಡತನ, ಸೇರಿ ಅನೇಕ ಕಾರಣಗಳಿಂದ ತಮ್ಮ ಮೂಲ ದೇಶಗಳನ್ನು ಬಿಟ್ಟು ಬೇರೆ ದೇಶಗಳಿಗೆ ತೆರಳುವುದು ಹೆಚ್ಚಾಗುತ್ತಾ ಹೋದಾಗ ಈ ವಲಸಿಗರ ಹಕ್ಕು ರಕ್ಷಣೆ ಮತ್ತು ಕ್ಷೇಮ ಅವಶ್ಯವಾಗಿ ಬೇಕಾಯಿತು ಈ ನಿಟ್ಟಿನಲ್ಲಿ ಆಚರಿಸಲ್ಪಟ್ಟಿದ್ದೆ “ಅಂತರರಾಷ್ಟ್ರೀಯ ವಲಸಿಗರ ದಿನ” ಈ ಅಂತಾರಾಷ್ಟ್ರೀಯ ವಲಸಿಗರ ದಿನದ ಇತಿಹಾಸ ನೋಡುವುದಾದರೆ 1990ರಲ್ಲಿ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರ ಹಕ್ಕುಗಳ ರಕ್ಷಣೆಗಾಗಿ ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಸಮಾವೇಶವನ್ನು ನಡೆಸಿ ಪ್ರಪಂಚದಾದಂತ್ಯ ಹೆಚ್ಚುತ್ತಿರುವ ವಲಸಿಗರನ್ನು ಗಮನದಲ್ಲಿ ಇಟ್ಟುಕೊಂಡು ಈ ದಿನವನ್ನು ಆಚರಿಸಲು ಮುಂದಾಯಿತು.ತದನಂತರದಲ್ಲಿ ಡಿಸೆಂಬರ್‌ 4, 2000 ರಂದು ವಿಶ್ವಸಂಸ್ಥೆಯ ಜನರಲ್‌ ಅಸೆಂಬ್ಲಿ ಡಿಸೆಂಬರ್‌ 18 ರಂದು ಅಂತಾರಾಷ್ಟ್ರೀಯ ವಲಸಿಗರ ದಿನ ಆಚರಿಸಲು ನಿರ್ಧಾರವನ್ನು ಕೈಗೊಂಡಿತ್ತು.ಈ ದಿನದ ಮುಖ್ಯ ಉದ್ದೇಶಗಳು ವಲಸಿಗರು ತಮ್ಮ ದೇಶಗಳ ಆರ್ಥಿಕತೆ ಮತ್ತು ಸಮಾಜಗಳಿಗೆ ನೀಡುವ ಕೊಡುಗೆಗಳನ್ನು ಗುರುತಿಸುವುದು, ಅವರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವುದು, ಮತ್ತು ಅವರ ಮಾನವ ಹಕ್ಕುಗಳು ಮತ್ತು ಘನತೆಯನ್ನು ರಕ್ಷಿಸುವ ನ್ಯಾಯಯುತ ಮತ್ತು ಅಂತರ್ಗತ ನೀತಿಗಳನ್ನು ಬೆಂಬಲಿಸುವುದು. ವಲಸಿಗರು ಎದುರಿಸುವ ಸಮಸ್ಯೆಗಳು ಮತ್ತು ಅನ್ಯಾಯಗಳ ಬಗ್ಗೆ ಜಾಗೃತಿ ಮೂಡಿಸುವುದು ಸಮಾನತೆ, ಮಾನವೀಯತೆ ಮತ್ತು ಸಹಿಷ್ಣುತೆಯನ್ನು ಉತ್ತೇಜಿಸುವುದು ಅಂತರರಾಷ್ಟ್ರೀಯ ಸಹಕಾರ ಮತ್ತು ಮಾನವ ಹಕ್ಕುಗಳ ಪಾಲನೆಗೆ ಪ್ರೋತ್ಸಾಹ ನೀಡುವುದು ಈ ದಿನದ ಉದ್ದೇಶ.

ವಲಸಿಗರು ತಮ್ಮ ಕುಟುಂಬದ ಭವಿಷ್ಯಕ್ಕಾಗಿ ಅನೇಕ ಕಷ್ಟಗಳನ್ನು ಸಹಿಸಿಕೊಂಡು ಹೊಸ ಪರಿಸರದಲ್ಲಿ ಬದುಕು ಕಟ್ಟಿಕೊಳ್ಳುತ್ತಾರೆ.ಅವರು ಹೊಸ ಭಾಷೆ, ಸಂಸ್ಕೃತಿ ಮತ್ತು ಜೀವನ ಶೈಲಿಗೆ ಹೊಂದಿಕೊಳ್ಳ ಬೇಕಾಗುತ್ತದೆ.ಅನೇಕ ಸಂದರ್ಭಗಳಲ್ಲಿ ವಲಸಿಗರು ಶೋಷಣೆ, ಭೇದಭಾವ ಮತ್ತು ಅನ್ಯಾಯಗಳನ್ನು ಎದುರಿಸುತ್ತಾರೆ. ಈ ವಲಸೆ ಜೀವನಕ್ಕೆ ಭಾರತವೇನು ಹೊರತಾಗಿಲ್ಲ ಹಾಗೆ ನೋಡುವುದಾದರೆ ಭಾರತದಿಂದ ವಲಸೆ ಹೋಗುವವರು ಜಗತ್ತಿನಲ್ಲಿಯೇ ಅತಿ ಹೆಚ್ಚು ಎಂದು ವರದಿ ಅನಂದಾಜಿಸಿದೆ ಅಲ್ಲದೆ ಇತ್ತೀಚಿನ ವರದಿಗಳ ಪ್ರಕಾರ ಭಾರತಕ್ಕೆ ಹೊರದೇಶಗಳಿಂದಲೂ ಸರಿ ಸುಮಾರು 48.78 ಲಕ್ಷ ವಲಸಿಗರು ಬಂದಿದ್ದು, ಈ ವಲಸಿಗರಿಂದ ಭಾರತಕ್ಕೆ ಅತಿ ಹೆಚ್ಚು ಹಣ ಹರಿದುಬರುತ್ತಿದೆ ಎಂದು ಅಂಕಿ ಅಂಶದಿಂದ ತಿಳಿದು ಬಂದಿದೆ.

ವಲಸಿಗರು ಆತಿಥ್ಯ ದೇಶಗಳ ಆರ್ಥಿಕತೆಗೆ ದೊಡ್ಡ ಶಕ್ತಿ. ಅವರು ಕಡಿಮೆ ಸಂಬಳದಲ್ಲಿ ಕೃಷಿ, ನಿರ್ಮಾಣಕಾರ್ಯ ಆರೋಗ್ಯ, ಕೈಗಾರಿಕೆ, ಸೇವಾ ವಲಯಗಳಲ್ಲಿ ದುಡಿಯುತ್ತಾ ಉತ್ಪಾದಕತೆಯನ್ನು ಹೆಚ್ಚಿಸುತ್ತಾರೆ. ಜೊತೆಗೆ ತಮ್ಮ ಸಂಸ್ಕೃತಿ, ಭಾಷೆ ಮತ್ತು ಪರಂಪರೆಯನ್ನು ಹಂಚಿಕೊಳ್ಳುವ ಮೂಲಕ ಬಹುಸಾಂಸ್ಕೃತಿಕ ಸಮಾಜವನ್ನು ಶ್ರೀಮಂತಗೊಳಿಸುತ್ತಾರೆ. ಕಠಿಣ ಕೆಲಸಗಳನ್ನು ಕಡಿಮೆ ವೇತನದಲ್ಲಿ ಮಾಡಿ ಆರ್ಥಿಕತೆಯನ್ನು ಮುನ್ನೆಡೆಸುತ್ತಾರೆ ಕಟ್ಟಡ ನಿರ್ಮಾಣ,ಕೃಷಿ. ಕೈಗಾರಿಕೆಗಳಲ್ಲಿ ಅಗತ್ಯ ಶ್ರಮ ಒದಗಿಸುತ್ತಾರೆ.ಸ್ಥಳೀಯ ವ್ಯಾಪಾರ ಮತ್ತು ಸೇವಾ ಕ್ಷೇತ್ರವನ್ನು ಬಲಪಡಿಸುತ್ತಾರೆ ಅಲ್ಲದೆ ವಲಸಿಗರು ತಮ್ಮ ಸ್ವದೇಶಗಳಿಗೆ ಕಳುಹಿಸುವ ಹಣ ಅನೇಕ ಕುಟುಂಬಗಳ ಜೀವನಾಧಾರ ವಾಗಿರುತ್ತದೆ.

ಆದರೆ ವಲಸಿಗರು ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಇವುಗಳಲ್ಲಿ ಜಾತಿ ಭೇದಭಾವ, ಕಡಿಮೆ ಕೂಲಿ, ಅಸುರಕ್ಷಿತ ಕೆಲಸದ ಪರಿಸ್ಥಿತಿ, ಕಾನೂನು ಸಹಾಯದ ಕೊರತೆ, ಭಾಷಾ ಅಡೆತಡೆಗಳು ಮತ್ತು ಆರೋಗ್ಯ ಸೇವೆಗಳ ಲಭ್ಯತೆ. ವಿಶೇಷವಾಗಿ ಮಹಿಳಾ ವಲಸಿಗರು ಮತ್ತು ಮಕ್ಕಳಿಗೆ ಶೋಷಣೆ ಹಾಗೂ ಅಪಾಯಗಳ ಸಾಧ್ಯತೆಗಳು ಹೆಚ್ಚಿರುತ್ತವೆ ಕೊರೋನಾ ಮಹಾಮಾರಿಯ ಸಮಯದಲ್ಲಿ ಭಾರತದಲ್ಲಿ ಲಕ್ಷಾಂತರ ವಲಸಿಗ ಕಾರ್ಮಿಕರು ತಮ್ಮ ಕೆಲಸವನ್ನು ಕಳೆದುಕೊಂಡರು. ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಹಲವರು ತಮ್ಮ ಊರಿಗೆ ಕಾಲ್ನಡಿಗೆಯಲ್ಲೇ ಹೋಗಬೇಕಾಯಿತು. ಕೆಲವರು ಮಕ್ಕಳೊಂದಿಗೆ ನೂರಾರು ಕಿಲೋಮೀಟರ್ ನಡೆದು ಮನೆ ತಲುಪಿದರು. ಈ ಘಟನೆ ವಲಸಿಗರು ಎದುರಿಸುವ ಸಂಕಷ್ಟಗಳನ್ನು ಜಗತ್ತಿಗೆ ಸ್ಪಷ್ಟವಾಗಿ ತೋರಿಸಿತು. ಅನೇಕ ಸ್ವಯಂಸೇವಕರು ಮತ್ತು ಸಂಘಟನೆಗಳು ಅವರಿಗೆ ಆಹಾರ, ನೀರು ಮತ್ತು ಆಶ್ರಯ ಒದಗಿಸಿ ಮಾನವೀಯತೆ ಹಾಗೂ ಸಹಕಾರಕ್ಕೆ ಉದಾಹರಣೆಯಾಗಿ ನಿಂತರು.

ಈ ಸಂದರ್ಭದಲ್ಲಿ ಇತ್ತೀಚೆಗೆ ಕೇಳಿಬರುತ್ತಿರವ ವಲಸಿಗರಿಂದ ಸ್ಥಳೆಯರಿಗೆ ಆಗುವ ತೊಂದರೆಗಳನ್ನು ಪ್ರಸ್ತಾಪಿಸುವು ದಾದರೆ ಗಡಿ ಮೂಲಕ ದಾಖಲೆಗಳಿಲ್ಲದೆ ಪ್ರವೇಶಿಸುವವರಿಂದ ಜನಸಂಖ್ಯೆ ಒತ್ತಡ ಉದ್ಯೋಗಗಳಲ್ಲಿ ಸ್ಪರ್ಧೆ ಹೆಚ್ಚಾಗುವುದು ಸ್ಥಳೀಯರಿಗೆ ಕೆಲಸದ ಅವಕಾಶ ಕಡಿಮೆಯಾದಂತೆ ಅನಿಸುವುದು ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಲ್ಲಿ ಜನಸಂಖ್ಯೆ ಹೆಚ್ಚಾಗಿ ಬಾಡಿಗೆ ಮನೆ ದರ ಏರಿಕೆ ನೀರು, ಸಂಚಾರ, ಸ್ವಚ್ಛತೆ ಸಮಸ್ಯೆಗಳು ಹೆಚ್ಚಾಗುತ್ತಿರುವುದು. ಸ್ಥಳೀಯ ಭಾಷೆಗಳ ಮೇಲೆ ಪರಿಣಾಮ ಹೀಗೆ ಕೆಲವೊಂದನ್ನು ಪ್ರಸ್ತಾಪಿಸಬಹುದು.

ವಲಸಿಗರ ದಿನದ ಉದ್ದೇಶ ವಲಸಿಗರ ಹಕ್ಕುಗಳು, ಗೌರವ ಮತ್ತು ಭದ್ರತೆ ಬಗ್ಗೆ ಜಾಗೃತಿ ಮೂಡಿಸುವುದು. ಎಲ್ಲ ವಲಸಿಗರಿಗೂ ಮಾನವ ಹಕ್ಕುಗಳು ಸಮಾನವಾಗಿ ದೊರಕಬೇಕು ಎಂಬ ಸಂದೇಶವನ್ನು ಈ ದಿನ ಸಾರುತ್ತದೆ. ಸರ್ಕಾರಗಳು ಸಂಸ್ಥೆಗಳು ಮತ್ತು ಸಮಾಜ ಒಟ್ಟಾಗಿ ಕೆಲಸ ಮಾಡಿ ಸುರಕ್ಷಿತ, ಕ್ರಮಬದ್ಧ ಮತ್ತು ಗೌರವಯುತ ವಲಸೆಯನ್ನುಉತ್ತೇಜಿಸಬಹುದು ಸರಿಯಾದ ಯೋಜನೆ, ಸಮಾನ ಅವಕಾಶಗಳ ಕೊರತೆ ಮತ್ತು ವ್ಯವಸ್ಥೆಯ ದುರ್ಬಲತೆಯಿಂದ ತೊಂದರೆಗಳು ಉಂಟಾಗುತ್ತವೆ. ಹಾಗಾಗಿ ಎಲ್ಲರೂ ಪರಸ್ಪರ ಗೌರವದಿಂದ ಬದುಕಿದರೆ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಏನೇ ಇರಲಿ ಬದುಕು ಕಟ್ಟಿಕ್ಕೊಳ್ಳಲು ಬಂದ ವಲಸಿಗರು ಬದುಕು ಕೊಟ್ಟ ನೆಲ ಜಲ ಭಾಷೆಯನ್ನು ಗೌರವಿಸಲಿ ಸಮಾಜಕ್ಕೆ ಸಕಾರಾತ್ಮಕ ಶಕ್ತಿಯಾಗಲಿ.


  • ಗೀತಾಂಜಲಿ ಎನ್ ಎಮ್ – ಕೊಡಗು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW