ಸವೆದು ಹೋಗಿದೆ ಈಗ ನನ್ನ ದೇಹದ ಭೂಮಿ ತುಂಗೆಯ ರಭಸದಲೆಗಳ ಅಪ್ಪಳಿಕೆಗೆ… ಕವಿ ಮೇಗರವಳ್ಳಿ ರಮೇಶ್ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ….
ನನಗೂ ಇತ್ತು ಇಪ್ಪತ್ತರ ಹರೆಯ
ಕಳೆದು ಹೋಗಿ ಬಹಳ ವರ್ಷಗಳೇ ಆಯ್ತು.
ರಾತ್ರಿ ಮಲಗಿದಾಗ ಕೇಳಿಸುತ್ತಿತ್ತು
ತುಂಬು ಹರೆಯದ
ಶ್ರಾವಣದ ತುಂಗೆಯ ಭೋರ್ಗರೆತ.
ಉಕ್ಕಿ ಹರಿದು ನನ್ನ
ದಡಗಲನ್ನೆಲ್ಲ ಕೊಚ್ಚಿ ಹಾಕುತ್ತಿತ್ತು.
ಸವೆದು ಹೋಗಿದೆ ಈಗ
ನನ್ನ ದೇಹದ ಭೂಮಿ
ತುಂಗೆಯ ರಭಸದಲೆಗಳ ಅಪ್ಪಳಿಕೆಗೆ.
ದಡದುದ್ದಕ್ಕೂಕಟ್ಟಿಸಿದೆ ಸಿಮೆಂಟಿನ ಗೋಡೆಯನ್ನು
ನನ್ನೊಳಗೆ ನುಗ್ಗುವ
ಶ್ರಾವಣದ ತುಂಗೆಯ ಪ್ರವಾಹವನ್ನು ತಡೆಯಲು.
ಕಳೆದು ಹೋಯಿತು ಇಪ್ಪತ್ತರ ಹರೆಯ ಬಲು ಬೇಗ
ತುಂಗೆಯ ಪ್ರವಾಹ ಪ್ರತಿ ವರ್ಷವೂ ಉಕ್ಕುತ್ತದೆ, ಇಳಿಯುತ್ತದೆ
ದಡದುದ್ದಕ್ಕೂ ಹೊಸ ಮಣ್ನು ಮರಳುಗಳನ್ನು ತಂದು ಹಾಕುತ್ತದೆ.
ಚೈತ್ರದಲ್ಲಿ ಹಕ್ಕಿಗಳು ಕರೆಯುತ್ತವೆ ಸುಮಧುರ ಕಂಠದಲ್ಲಿ
ಚೈತ್ರ ಕಳೆಅ ಮೇಲೆ ನಿಲ್ಲಿಸಿಬಿಡುತ್ತವೆ.
ಬದುಕಿನ ನದಿಯಲ್ಲಿ ನೀರು ಬಂದು ಸೇರುತ್ತಲೆ ಇರುತ್ತದೆ
ಮಧ್ಯಾಹ್ನದ ಹೊತ್ತಿನಲ್ಲಿ ಭಾಸವಾಗುತ್ತದೆ ಅದೊಂದು ಕಡಲಂತೆ
ಇಳಿ ಸಂಜೆಯಲ್ಲಿ ತೊರೆಯಂತೆ
ಇರುಳು ಸಂಪೂರ್ಣ ಆವರಿಸಿದ ಮೇಲೆ ನದಿ ಬತ್ತಿ ಹೋಗಿ
ಭಾಸವಾಗುತ್ತದೆ ಮರು ಭೂಮಿಯಂತೆ.
- ಮೇಗರವಳ್ಳಿ ರಮೇಶ್ – ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ, ಕವಿಗಳು, ಲೇಖಕರು
