“ಇರುಳ ಬಾಗಿಲಿಗೆ ಕಣ್ಣ ದೀಪ” ಕೃತಿ ಪರಿಚಯ

“ಕವಿತೆ ಇಷ್ಟವಾದರೆ ಎದೆಯ ಮೇಲೆ ಹರವಿಕೊಳ್ಳಿ, ಇಲ್ಲವಾದರೆ ತುಳಿಯದೇ ದಾಟಿ ಬಿಡಿ” ಡಾ. ಸದಾಶಿವ ದೊಡಮನಿ ಅವರ “ಇರುಳ ಬಾಗಿಲಿಗೆ ಕಣ್ಣ ದೀಪ” ಸಂಕಲನದಲ್ಲಿ ಮೂಡಿದ ಸಾಲುಗಳು ಇವು. ಕವನ ಸಂಕಲನದ ಕುರಿತು ಕವಿಯತ್ರಿ ಬಿ ವಸು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : “ಇರುಳ ಬಾಗಿಲಿಗೆ ಕಣ್ಣ ದೀಪ”
ಕವಿಗಳು : ಡಾ. ಸದಾಶಿವ ದೊಡಮನಿ
ಪ್ರಕಾಶಕರು : ವೀರಲೋಕ ಪ್ರಕಾಶನ
ಬೆಲೆ : ೧೪೦.೦೦

ಕವಿ, ಲೇಖಕ, ವಿಮರ್ಶಕ ಪ್ರಾಧ್ಯಾಪಕರು ಆದ ಡಾ. ಸದಾಶಿವ ದೊಡಮನಿಯವರು ನಮಗೆ ನಿಮಗೆಲ್ಲಾ ‘ರೊಟ್ಟಿ ಕವಿ’ಯೆಂದೇ ಪರಿಚಿತರಾದವರು. ಅವರ ಬಿಡಿಬಿಡಿಯಾದ ಕವಿತೆಗಳನ್ನು ಆಗ್ಗಾಗ್ಗೆ ಅವರ ಫೇಸ್ಬುಕ್ ವಾಲ್ನಲ್ಲಿ ಓದಿದಾಗೆಲ್ಲಾ ಒಂದು ಬೆರಗು ಮೂಡುತ್ತಿತ್ತು, ಒಂದು ಕೌತುಕ, ಒಂದು ಹುಡುಕಾಟವನ್ನು ನನ್ನೊಳಗೆ ಪ್ರೇರೆಪಿಸುತ್ತಿತ್ತು. ಕವಿತೆಯನ್ನೇ ಉಸಿರಾಡುವ ಕವಿಗಳ ಸಾಲಿನಲ್ಲಿ ಈ ಕವಿಯು ತುಸು ಗಂಭೀರವಾಗಿ ಕುಳಿತಂತೆ ಕಾಣಿಸುತ್ತದೆ . ಈ ಕಾರಣಕ್ಕೆ “ಇರುಳ ಬಾಗಿಲಿಗೆ ಕಣ್ಣ ದೀಪ” ಸಂಕಲನವನ್ನು ಓದಬೇಕೆಂಬ ಇಚ್ಛೆಯಾದುದು.

ಈ ಸಂಕಲನವನ್ನು ಸ್ಪರ್ಶಿಸಿದಾಗ ಮೊದಲಿಗೆ ಎಟುಕುವ ಮುಖಪುಟವು ಸಂಕಲನದ ಶೀರ್ಷಿಕೆಯು ಗಮನ ಸೆಳೆಯುತ್ತದೆ. ಸಂಕಲನದ ಓದಿಗೂ ಮುನ್ನ ಪರಿವಿಡಿಯನ್ನು ಕಣ್ಣಾಡಿಸಿದೆ. ಪದ್ಯದ ಕಾವ್ಯಾತ್ಮಕ ಶೀರ್ಷಿಕೆಗಳು ಮತ್ತಷ್ಟು ಸೆಳೆದಿಟ್ಟವು. ಒಂದು ಓದು ಓದುಗನ ಭಾವಕೋಶವನ್ನು ವಿಸ್ತಾರಗೊಳಿಸಬೇಕು. ಚಿಂತನಾ ಲಹರಿಯ ಮಾರ್ಗವನ್ನು ಹಿಗ್ಗಿಸಬೇಕು. ಅರಿವಿಗೆ ದಾರಿ ತೋಡಬೇಕು. ಒಂದು ಪದ್ಯವು ಹೀಗೆಯೇ ಒಂದು ಅನುಭವ ಮತ್ತು ತಾತ್ವಿಕತೆಯನ್ನು ಹುಟ್ಟು ಹಾಕಬೇಕಾಗುತ್ತದೆ. ಇಲ್ಲಿಯ ಕವಿತೆಗಳು ಈ ಕಾರಣಕ್ಕೆ ಇಷ್ಟವಾದವು. ಮತ್ತಷ್ಟು ಆಪ್ತವಾದವು. ಓದಿಸಿಕೊಂಡವು. ಓದಲೇಬೇಕೆಂದು ಪ್ರೇರೆಪಿಸಿದವು ಎನ್ನಬಹುದು.

ಇಲ್ಲಿನ ಕವಿತೆಗಳಲ್ಲಿ ಬಂಡಾಯವಿದೆ. ಅದು ಸಮುದಾಯ, ಸಂಸ್ಕೃತಿ, ಸಮಾಜ ಮತ್ತು ಮನುಷ್ಯ ಮನುಷ್ಯನ ನಡುವಿನ ಜಾತಿ-ಜನಾಂಗ, ಬಡತನ, ಹಸಿವು, ಶೋಷಣೆ, ಘರ್ಷಣೆ ಮತ್ತು ಭಾವತಾರತಮ್ಯದ ಮೇಲಿನ ಬಂಡಾಯ. ಇಂತಹ ಕೆಲವು ತಾರತಮ್ಯಗಳ ಧ್ವನಿಗೆ, ಶೋಷಣೆಯ ಮುಲುಗಿಗೆ ಹೆಗಲಾಗಿವೆ, ಎದೆಯಾಗಿವೆ, ಕಣ್ಣಾಗಿವೆ, ಮಾತಾಗಿವೆ, ಹಲವು ಪದ್ಯಗಳಿಲ್ಲಿ. ಬಡತನ, ಹಸಿವು, ನಿರಾಸೆ, ಕರುಣೆ, ವಂಚನೆ, ಪ್ರೀತಿ, ಬಾಂಧವ್ಯ, ದಾಂಪತ್ಯ, ಸರಸ , ಉನ್ಮತ್ತತೆ, ವೈರಾಗ್ಯ, ಕಾಡುವಿಕೆ, ಕಾಯುವಿಕೆ, ಹಾತೊರೆಯುವಿಕೆ, ಮಾಗುವಿಕೆ, ಇಲ್ಲವಾಗುವಿಕೆ ಇಂತಹ ಹಲವುಗಳು ಭಾವಗಳ ಗುಚ್ಛವೇ ಇದೆಯಿಲ್ಲಿ. ಕವಿ ಬಹುತ್ವಕ್ಕೆ ತೆರೆದುಕೊಳ್ಳಬೇಕೆಂಬುದಿದಕೆ. ಮಾನವೀಯತೆಯ ಸೊಲ್ಲಿಕ್ಕುತ್ತಾ ಈ ಸಂಕಲನ ಲೋಕಾಂತವಾಗಿದೆ.

ಬದುಕಿನ ಸುತ್ತಲೂ ಹೊಸೆದುಕೊಂಡ ವಿಷವರ್ತುಲ ಮತ್ತದರ ನಡುವೆಯೇ ವಾಸಿಸಲು ಹೆಣಗುವ ಮನುಷ್ಯರುಗಳು, ಹಸಿವು ಬಾಯಾರಿಕೆಗೆ ನಾಲಿಗೆ ಚಾಚಿ ಕುಂತ ಎದೆಗಳು, ಬೀಳದ ಮಳೆ, ಬೆಳೆಯದ ಪೈರು, ಕಾಯುವ ತವಕ, ಚಿಗುರು ಕಿತ್ತು ಹಾಕುವ ಸಮಾಜದ ಕ್ರೌರ್ಯ, ಎದೆ ಬಸಿದ, ಸೆರಗ ಹಾಸಿದ ಹೆಣ್ಣು ಹೃದಯದ ತುಂಬಾ ಹೊರುವ ಭಾರ, ಕಳೆದುಕೊಳ್ಳುವ ತನ್ನತನ, ಕೊನೆಯಿಲ್ಲದ ಅಳಲು, ಕೊಳ್ಳಲಾಗದ ತನ್ನ ಬದುಕು ಸಂತಸ ಇಂತಹ ಹಲವು ಸೂಕ್ಷ್ಮ ಸಂವೇದನೆಗಳಿಗೆ ಧ್ವನಿಯಾದ ಕವಿತೆಗಳ ಓದು ಎದೆಯ ಹಿಂಡುತ್ತದೆಯಾದರೂ ಇದು ವಾಸ್ತವದ ಸ್ಥಿತಿಯೇ ಹೌದೆಂದು ಓದುಗನೆದೆಯಲ್ಲಿ ಕ್ರಾಂತಿ ಹಬ್ಬುತ್ತದೆ. ಕಿಚ್ಚು ಮೊಳಗುತ್ತದೆ.

ದಾಂಪತ್ಯದಲ್ಲಿ ಸುಖವೂ ಉಂಟು, ನೋವುಗಳೂ ಉಂಟು. ಇಲ್ಲಿ ಗಂಡ-ಹೆಂಡತಿಯ ಪ್ರೀತಿ ಅಖಂಡವಾಗಿದೆ. ಪ್ರೇಮ ಕವಿತೆ ಮತ್ತು ಶೃಂಗಾರ ಕವಿತೆಗಳಲ್ಲದು ಬೆಳಗುತ್ತಿದೆ. ಇಲ್ಲಿನ ಕವಿತೆಗಳ ಭಾಷೆಯೇ ಸೊಬಗು. ಧ್ವನಿ ಮತ್ತು ಓಘ ಓದುಗನನು ಮತ್ತೆ ಮತ್ತೆ ಸ್ಪರ್ಶಿಸದೆ ಇರಲಾರವು. ತಂದೆ-ತಾಯಿ, ತಮ್ಮ ಹೀಗೆ ಬೆಸೆದುಕೊಂಡ ಸಂಬಂಧಗಳ ಗಾಢತೆಯನ್ನು ಕುರಿತು ಓದುವಾಗಲೆಲ್ಲಾ ಆರ್ದ್ರವಾಗುತ್ತದೆ ಮನ. ತನ್ನ ಕಾವ್ಯವ ಶಕ್ತಿಯೇ ಈ ಸಂಬಂಧಗಳ ಮೂಲಕ ಜ್ವಲಿಸುತ್ತಿದೆ ಎನ್ನುವುದನ್ನು ಈ ಕವಿಯು ಬೇರಾವುದರಲ್ಲೂ ಹೇಳಬೇಕಾಗಿಲ್ಲ.

ಕವಿತೆಗಳಲ್ಲಿ ಸದೃಢವಾದ ಭಾಷೆಯಿದೆ, ಹರಿವಿದೆ. ಕವಿತೆಗಳ ಧ್ವನಿ, ರಸ, ಔಚಿತ್ಯಗಳ ಕುರಿತು ವಿವರಿಸಬೇಕಾದುದಿಲ್ಲ, ಆ ರಸಸ್ವಾದವನ್ನು ಓದಿಯೇ ತುಂಬಿಕೊಳ್ಳಬೇಕು. ಇಲ್ಲಿ ಅನೇಕ ಉಪಮೇಯಗಳು, ಪ್ರತಿಮೆಗಳು ಹೊಸದಾಗಿ ರೂಪಿಸಲ್ಪಟ್ಟಿವೆ. ಕವಿಯು ಕವಿತೆಗಳ ಮೂಲಕ ಸ್ವತಃ ಸ್ವವಿಮರ್ಶಕರಾಗಿಯೂ ನಮ್ಮನ್ನೂ ಆತ್ಮವಿಮರ್ಶೆಗೆ ಕೂರಿಸುತ್ತಾರೆ. ಕ್ರಾಂತಿಗೆ ಬಡಿದೇಳಿಸುತ್ತಾರೆ. ವ್ಯವಹಾರ ಮತ್ತು ಅವ್ಯವಹಾರಗಳ ನಡುವೆ ನಿಲ್ಲಿಸಿ ಪ್ರಶ್ನೆ ಹಾಕುತ್ತಾರೆ. ನ್ಯಾಯ ಕೇಳುತ್ತಾರೆ. ಸಾಹಿತ್ಯ ಕ್ಷೇತ್ರದಲ್ಲಿಯ ಹುಳುಕುಗಳನ್ನೂ ಬಿಟ್ಟಿಲ್ಲ ಈ ಕವಿ. ಕೊರೆದು ಹುಳುಗಳ ಹೊರಗೆಸೆದಿದ್ದಾರೆ. ಒಳಿತಿಗೆ ಕೈಗೂಡಿಸುವುದು, ಕೆಡುಕನ್ನು ಪೊರೆಯದಿರುವುದು ಇನ್ನು ನಮ್ಮ ನಿಮ್ಮ ಪಾಡು.

ಇರುಳ ಬಾಗಿಲಿಗೆ ಕಣ್ಣ ದೀಪ ನಾನು ನೀವು ಮತ್ಯ್ತಾರೋ ಸೂರ್ಯನಿಗಾಗಿಯೇ ಕಾಯಬೇಕಾಗಿಲ್ಲ (ಯಾವುದೋ ಒಂದು ದಟ್ಟವಾದ ಬೆಳಕೇ ಬೇಕೆನ್ನದೆ), ಇರುವ ಈ ಕಿಂಡಿ ಬೆಳಕಲ್ಲಿಯೇ ಅಖಂಡವನ್ನೂ ಕಾಣಬಹುದು, ಬಾಳಬಹುದು. ಇಲ್ಲಿಯ ಅನೇಕ ಕತ್ತಲುಗಳಿಗೆ ಕಣ್ಣ ಬೆಳಕಿನಂತೆ ಸಣ್ಣ ಭರವಸೆ ಬದುಕನೀಯುವುದು ಎನ್ನುವ ತಾತ್ಪರ್ಯವನ್ನು ಈ ಸಂಕಲನ ಸಂಕೇತಿಸುತ್ತದೆ. ಕವಿತೆಗಳಿಲ್ಲಿ ಒಳಕೋಣೆಯಲ್ಲೂ ಹುಟ್ಟಿ ಹರವಿಕೊಂಡಿವೆ, ಮತ್ತು ಹೊರ ಜಗತ್ತಿಗೂ ತೆರೆದುಕೊಂಡಿವೆ.

”ತಪ್ಪಿತಸ್ಥಳು” ” ಆದಿಮರೋ”, “ಮಾಯದ ಗಾಯದ ಪದ”, ” ಹೇಸಿಗೆಯಲ್ಲಿ ಬರಿಗಾಲದ ನಡಿಗೆ”, “ಕರುಳಿಲ್ಲದ ಊರ ಕಣ್ಣಮುಂದೆ”, ” ಇರುಳ ಬಾಗಿಲಿಗೆ ಕಣ್ಣ ದೀಪ”, “ಕಾಗೆಗಳ ಸಂತತಿ ಸಾವಿರವಾಗಲಿ”, ” ಅಪ್ಪ, ತುತ್ತಿನ ಚೀಲ”, “ಉನ್ಮತ್ತ ರಾತ್ರಿಯ ಸ್ವಗತ”, ” ಇನ್ನೂ ನವ್ಯದ ಕಾಲ ಮುಗಿದಿಲ್ಲವೇ?”, ” ಕವಿತೆ ಇಷ್ಟವಾದರೆ”, “ಜಪ್ತಿಗೆ ಸಿಗದವನ ಆತ್ಮ ಸಂಗಾತ”, ” ಕನಸುಗಳ ಬೀಜ ಬಿತ್ತದಿರು, ಗೆಳೆಯ “, ” ಬರೀ ಮನುಷ್ಯರನ್ನು ಹುಡುಕುತ್ತಿದ್ದೇನೆ” ಇನ್ನೂ ಹಲವು ಕವಿತೆಗಳು ಓದಿದಷ್ಟೂ ಕಾಡುವವು, ಓದಿಸಿಕೊಂಡಷ್ಟೂ ಆವರಿಸಿಕೊಂಡವು.

“ಕವಿತೆ ಇಷ್ಟವಾದರೆ
ಎದೆಯ ಮೇಲೆ ಹರವಿಕೊಳ್ಳಿ
ಇಲ್ಲವಾದರೆ ತುಳಿಯದೇ
ದಾಟಿ ಬಿಡಿ”

ಇವು ಕವಿತೆಯೊಂದರ ಸಾಲುಗಳು. ಇದರ ಧ್ವನಿಯನ್ನೇ ಆಲಿಸುವುದಾರೆ ಇದೊಂದು ಆರ್ದ್ರ ಬಿನ್ನಹ. ನಿಮಗೆ ಇಷ್ಟವಾಗದಿದ್ದರೆ ದಯವಿಟ್ಟು ತುಳಿಯದೆ ದಾಟಿಕೊಂಡು ಹೋಗಿ ಕವಿತೆಯೆದೆಗೆ ನೋವಾದೀತು ಎನ್ನುವ ಕಳಕಳಿಯನ್ನು ಪ್ರತಿನಿಧಿಸುತ್ತದೆ. ಇದು ನನ್ನನ್ನು ಇನ್ನೂ ಕಾಡುತ್ತಿರುವ ಸಾಲು ಮತ್ತು ಪದ್ಯ. ಇಂತಹ ಅನೇಕ ಪದ್ಯಗಳ ಸಾಲುಗಳನ್ನು ನಾವು ದಾಟಬೇಕಾಗುತ್ತದೆ(ಓದಿನೊಂದಿಗೆ). ಸಶಕ್ತ ರೂಪಕಗಳನ್ನು, ಸದೃಢ ಭಾಷೆಯನ್ನು ಬಳಸಿಕೊಂಡ ಕವಿತೆಗಳು ಅಲ್ಲಲ್ಲಿ ನಿಲ್ಲಿಸಿ ಮತ್ತೆ ಓದಿಸಿಕೊಂಡಿವೆ. ಆ ನೆಲದ ಭಾಷೆಯ ಸೊಗಡೂ ಮತ್ತಷ್ಟು ರುಚಿಸುವಂತೆ ಮಾಡುತ್ತವೆ. ಇದು ಕವಿಯ ಗೆಲುವು, ಕಾವ್ಯದ ಗೆಲುವು.

ಇಂತಹ ಓದನ್ನು ದೊರಕಿಸಿಕೊಟ್ಟುದದಕ್ಕೆ ಕವಿ ಡಾ. ಸದಾಶಿವ ದೊಡಮನಿ ಅವರಿಗೆ, ಇದನ್ನು ಪ್ರಕಟಿಸಿದ ವೀರಲೋಕ ಪ್ರಕಾಶನಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಅರ್ಪಿಸುತ್ತೇನೆ.
ಇನ್ನಷ್ಟು ಓದಿಗಾಗಿ ಕಾಯುತ್ತೇನೆ… ಪ್ರೀತಿಯ ಧನ್ಯವಾದಗಳು.


  • ಬಿ ವಸು (ಭಾಗ್ಯ )  – ಕವಿಯತ್ರಿ, ಲೇಖಕಿ, ಕತೆಗಾರ್ತಿ, ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW