ಇರುಳೆಂದರೆ ಭಯವೋ ಅಥವಾ ಭಯದ ನೆರಳಿನ ವಾಸ್ತವವೋ ಎಲ್ಲವೂ ದಿಗ್ಭ್ರಮೆ…ಕವಿಯತ್ರಿ ದೀಪಿಕಾ ಬಾಬು ಅವರ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಓಯ್ ಸಾವೇ,
ನಿನ್ ಆಜುಬಾಜು ಕೂತು ಕುಶಲೋಪರಿ ವಿಚಾರಿಸಿ
ಅದೇಟ್ ದಿನ್ವಾತೋ
ಜವರಾಯನ ಕೈಯೊಳಗಿನ್ ಕುಣಿಕೆ
ಬದುಕ ಬೆನ್ನೇರಿ ಸವಾರಿ ನೆಡ್ಸಿದ್ದು
ದಿಟ್ವಾಗ್ಲು ಮರ್ತಿದ್ಲೆನೋ ಕೂಸು
ಅಂದ್ಕಂಡ್ ದಿನವೇ ನೂರ್ಕಿತ ಗೆಪ್ತಿಗಾದದ್ದು ಅವ!
ಇರುಳೆಂದರೆ ಭಯವೋ ಅಥವಾ
ಭಯದ ನೆರಳಿನ ವಾಸ್ತವವೋ ಎಲ್ಲವೂ ದಿಗ್ಭ್ರಮೆ
ಹೂಂ ಹಾಗೆಲ್ಲ ನಶೆ ಇರುಳ ಚಿತ್ರಗುಪ್ತನಿಗೆ
ಬದುಕಿನ ಲೆಕ್ಕಾಚಾರದಲ್ಲಿ ಪಡೆದುಳಿಸಿಕಳೆದುಕೊಂಡುದರ ಬಗ್ಗೆ
ದೀರ್ಘಕಾಲದ ಚರ್ಚೆಯಲ್ಲಿ ಕಾಲವ ಪರಿಗಣಿಸುತ್ತಲೇ ಇರಲಿಲ್ಲ ನಗುತ್ತಾನೆ ಈಗೀಗ ಗುಪ್ತವಾಗಿಯೇ
ಓಯ್ ನಿಶಾಚಾರಿಣಿ ಎಂದೆ…..!!
ಕಂಡುಂಡಿರಳ ಬೆದಕಾಡುವುದು ತಪ್ಪಿದ ಲೆಕ್ಕಗಳ ಪಕ್ವಗೊಳಿಸಲು….
ಅಲ್ಲಿ ತಾಯೊಬ್ಬಳು ನವಮಾಸದಿ ಹೆತ್ತೊತ್ತ
ನವಜಾತ ಶಿಶುವಿನ ಪಾಪಪುಣ್ಯದ ಲೆಕ್ಕ
ಚುಕ್ತ ಮಾಡಿದ
ಮಹಾನ್ ದೇವರೆನಿಸಿದವನಿಗೆ ಹೆತ್ತವಳ ಕರುಳಿನಾಳದ ಕೂಗಾದರೂ ಕೇಳಲ್ಪಡದೆ
ಶ್ರವ್ಯದೋಷದಲ್ಲಿ ಅಂಧನಾದದ್ದು ಸಹ
ಅವನೆಡೆಗೆ ದ್ವೇಷವನ್ನೇ ಕಾರುತ್ತದೆ
ಇಲ್ಲಿ ಇದ್ದವರಿಗಿಂತ
ಹೋದವರೇ ಹೆಚ್ಚು ಕಾಡುವುದು
ಮತ್ತೂ ಬದುಕುಳಿದವರ ಸ್ಥಿತಿ
ಅಯೋಮಯವು…….
ಅಳಿದವರ ನೆನಪಲ್ಲಿ ಉಳಿವುದೆಂದರೆ
ಅದೊಂದು ಹರಸಾಹಸವೇ….
ಅವರಚ್ಚಿಟ್ಟ ಕೈಸೊಡರಿನಲು ಅವರದೆ ಅಚ್ಚು,
ಮತ್ತಿನ್ನು ಅದರಡಿಯಲ್ಲಿದ್ದವರು
ಮಂದಬೆಳಕಿನ ಅಸ್ಮಿತೆಯಲ್ಲಿಯೇ
ಬದುಕಿನಿರುಳ ದೂಡುವ ಕ್ರಿಯೆಯಲಿ
ಚಿತ್ರಗುಪ್ತನ ಲೆಕ್ಕದ ದಾಖಲಾಳೆ
ಲೇಖನಿಶಾಯಿಯಲಿ ಕೊಂಚ ರದ್ದಿಯಾಗಲಿ
ಎಂಬ ಪುಟ್ಟ ಪ್ರಾರ್ಥನೆ……
ಉಂಡುಳಿದ ಹಸಿವಿಗೆ…..
ಕೇರುವ ಮರಕ್ಕಂಟಿದ ಧಾನ್ಯ
ಹೊಟ್ಟೆಯೊಳಗಿನ ನಟರಾಜನ ನರ್ತನಕ್ಕೆ
ಉರಿವಲೆಯಲಿ ಕನಸುರಿಸಿ ಥಕಥಕ….
ಎಂದು ಕುದಿಯೆಸರಿನಾಳದಿ ಮೂಡಿದ
ಆವಿಗುಳ್ಳೆಯಾಕಾರದಿ ಬದುಕ ಪಾತ್ರೆಯಿಂದ
ಬೇರ್ಪಟ್ಟ ತಾಣಕ್ಕೀಗ ಭೂವೊಡಲು ಸೆರಗಾಸಿ
ಕಂಪನೆಯ ತಂಪನೀಯುವ ಸುಖ ಗಳಿಗೆ
ಹೇಯ್ ಸಾವೇ…. ನೀ ಸ್ವಾಗತಿಸಿಕೋ
ಭೂತಾಯೊಡಲಪ್ಪುಗೆಯಲಿ ನಾ ನಲಿಯಬೇಕು
ಎಂದರೆ ಮಾರುದ್ದ ಓಡುವವ, ಚಿಗುರೆಲೆಯು ಹಚ್ಚಹಸುರಾದ ಕಾಲದಲಿ
ಮುಪ್ಪಿನೆಲೆ ಚಿಂತೆಯೋ ಎಂದು ರೇಗುವನು,
ಬದ್ಕಿನ್ ಬಡಿವಾರದ್ ಬಟ್ಟೆ ಹೊಲಿಯುವ ಅಂದ್ರೆ,
ಮೊಂಡವಾಗಿ ತುಕ್ಕಿಡಿದ ಸೂಜಿ,
ವೈನಾದ ವೈಯ್ಯಾರಕ್ಕೆ ನಶೆ
ಇರುಳೊಂದರ ನೆಮ್ಮದಿಯ ಕಸಿಯದಿರಲಿ
ಬದ್ಕ ಹೊಂಬಣ್ಣ ನಶಿಸೊ ಕಾಲ್ಕೆ
ಎಲ್ಲಾವೂ ದಿಗ್ಭ್ರಮೆ
- ದೀಪಿಕಾ ಬಾಬು – ಮಾರಘಟ್ಟ
