‘ಜಾಲಂದರ’ ಕೃತಿ ಪರಿಚಯ

ಕಲಾ ಭಾಗ್ವತ್ ಅವರ ‘ಜಾಲಂದರ’ ಲೇಖನಗಳ ಸಂಕಲನವಾಗಿದೆ. ಈ ಕೃತಿಯ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ಜಾಲಂದರ  
ಲೇಖಕರು :  ಕಲಾ ಭಾಗ್ವತ್
ಪ್ರಕಾರ : ಆಯ್ದ ಲೇಖನಗಳು

ನನ್ನ ಬಹುಮುಖಿ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಕಲಾ ಭಾಗ್ವತ್, ಅವರ ಲೇಖನಗಳ ಸಂಕಲನ ಇದು. ಇಲ್ಲಿಯವರೆಗೆ ಬಂದ ಅವರ ಪುಸ್ತಕಗಳಲ್ಲಿ ಎರಡು ವ್ಯಕ್ತಿ ಕೇಂದ್ರಿತ (ಡಾ.ಬಿ.ಎಂ.ಹೆಗಡೆ, ಜಯಂತ್ ಕಾಯ್ಕಿಣಿ) ಆದರೆ ಅವರ ಮೂರನೇ ಪುಸ್ತಕ ಮುಂಬೈ ಕನ್ನಡ ಸಂಶೋಧನೆ ನಡೆದು ಬಂದ ದಾರಿಯನ್ನು ಕುರಿತ ಬರಹ. ಇದು ಅವರ ನಾಲ್ಕನೇ ಕೃತಿ.ಇದರಲ್ಲಿ ಇರುವ ಲೇಖನಗಳನ್ನು ಪ್ರಾಚೀನ, ಮಧ್ಯಕಾಲೀನ ಹಾಗೂ ಅರ್ವಾಚೀನ ಎಂಬ ಮೂರು ಶೀರ್ಷಿಕೆಗಳ ಅಡಿಯಲ್ಲಿ ಪರಿಶೀಲನೆ ನಡೆಸಬಹುದು.

 ಪ್ರಾಚೀನ ಸಾಹಿತ್ಯ ಕುರಿತ ಲೇಖನ: ಕನ್ನಡದ ಮೊದಲ ಕವಿ ಪಂಪ ಮತ್ತು ಅವನ ಕಾವ್ಯಗಳಾದ ಆದಿಪುರಾಣ ಹಾಗೂ ವಿಕ್ರಮಾರ್ಜುನ ವಿಜಯಗಳನ್ನು ಕುರಿತು ಬರೆದ ಲೇಖನ. ಇದರಲ್ಲಿ ಮೊದಲನೆಯದು, ಆದಿಪುರಾಣದಲ್ಲಿ ಬರುವ ಬಾಹುಬಲಿ ಧರ್ಮ ಯುದ್ಧದಲ್ಲಿ ತನ್ನ ಅಣ್ಣನಾದ ಭರತನನ್ನು ಗೆದ್ದರೂ, ರಾಜ್ಯವನ್ನು ಬಿಟ್ಟು ಕೊಟ್ಟ ತ್ಯಾಗದ ಮೌಲ್ಯವನ್ನು ಗುರುತಿಸಲಾಗಿದೆ.ಅದರಂತೆ ಪಂಪಭಾರತದಲ್ಲಿ ಸಮಕಾಲೀನ ಕರ್ನಾಟಕದ ರಾಜಕೀಯ ಮತ್ತು ವೀರ ಮೌಲ್ಯವನ್ನು ಗುರುತಿಸಲಾಗಿದೆ.

ಮಧ್ಯಕಾಲೀನ ವೀರಶೈವ ಕವಿಯಾದ ಹರಿಹರನನ್ನು ಕ್ರಾಂತಿ ಕವಿಯೆಂದು ಕರೆದು ,ಅವನ ಗಿರಿಜಾ ಕಲ್ಯಾಣದಲ್ಲಿ ಬರುವ ಕಾವ್ಯದ ವಿವಿಧ ಪಾತ್ರಗಳ- ಶಿವ ಪಾರ್ವತಿಯರ ಮೇಲೆ ಬೆಳಕು ಚೆಲ್ಲುತ್ತದೆ. ಭಕ್ತಿ ಸಾಹಿತ್ಯವಾಗಿ ದಾಸಸಾಹಿತ್ಯದ ಮಹತ್ವವನ್ನು ಸಾಧಾರವಾಗಿ ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಕೊನೆಯ ಉಲ್ಲೇಖ , ಇವರು ಲೇಖನದ ಬರೆದ ಮಾತುಗಳಿಗೆ, ವೈರುಧ್ಯವನ್ನು ಉಂಟು ಮಾಡುವುದನ್ನು ಗಮನಕ್ಕೆ ತಂದುಕೊಂಡಿಲ್ಲ.

ಅರ್ವಾಚೀನ ಸಾಹಿತ್ಯದ ಕುರಿತು ಬರೆದ ಲೇಖನಗಳನ್ನು, ಕರ್ನಾಟಕ ಮತ್ತು ಮುಂಬೈ ಕೇಂದ್ರಿತ ಎಂದು ಎರಡು ಭಾಗಗಳಲ್ಲಿ ನೋಡಬಹುದು. ಕರ್ನಾಟಕ ಕೇಂದ್ರಿತ: ಇದರಲ್ಲಿ ಕರ್ನಾಟಕದ ಲೇಖಕರ ಕೃತಿಗಳ ಸಮೀಕ್ಷೆಗಳನ್ನು ಒಳಗೊಂಡಿದೆ. ಅವುಗಳಲ್ಲಿ ನನ್ನ ಗಮನ ಸೆಳೆದ ಲೇಖನಗಳು: ಭೈರಪ್ಪನವರ ಮಂದ್ರ ಕಾದಂಬರಿಯಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಾಸುಹೊಕ್ಕಾಗಿರುವ ಬಗೆಯ, ಅನಾವರಣಮಾಡಿದ ಬಗೆ. ಅದಕ್ಕೆ ಸ್ವತಹ ಈ ಲೇಖಕಿ ಸಂಗೀತ ಕಲಾವಿದೆ ಆಗಿರುವುದು ಕಾರಣ. ಆದರೆ,ಭಾರತೀಯ ಸಾಹಿತ್ಯದಲ್ಲಿ ಈ ಬಗೆಯ ಇನ್ನೊಂದು ಕಾದಂಬರಿ ಇಲ್ಲ ಎನ್ನುವುದು ಅತಿಶಯೋಕ್ತಿಯೇ ಸರಿ.

ಸುಧಾಮೂರ್ತಿ ಅವರ ಕಾದಂಬರಿ ಕುರಿತು ಅದರಲ್ಲಿನ ಪಾತ್ರಗಳ ವಿವರಗಳನ್ನು ನಿರೂಪಿಸಲಾಗಿದೆ. ಕೃಷಿ ಲೇಖಕಿ, ಸಹನಾ ಕಾಂತಬೈಲು ಅವರ ‘ಆನೆ ಸಾಕಿದವಳು’ ಕೃತಿಯ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ. ಇದರೊಂದಿಗೆ ಕವಿ ಸ್ಮಿತಾ ಅಮೃತರಾಜ್ ಅವರ ಕವನ ಸಂಕಲನದಲ್ಲಿ ಪ್ರಕಟವಾದ ಸಂವೇದನಾಶೀಲತೆಯನ್ನು ಸಶಕ್ತವಾದ ಅವರ ಅವರ ಕವನಗಳ ಉಲ್ಲೇಖ ಮಾಡಿ,ಸಾಧಾರವಾಗಿ ಗುರುತಿಸಲಾಗಿದೆ.

ಡಾ.ಬಿ.ಎಂ.ಹೆಗ್ಡೆಯವರ ಸಾಧನೆಗಳ ಮೇಲೆ ಬೆಳಕು ಚೆಲ್ಲಿ ,ಅವರ ಸಾಮಾನ್ಯ ಜನರ ಆರೋಗ್ಯದ ಬಗ್ಗೆ ಕಾಳಜಿ, ಸಾಮಾನ್ಯ ವಸ್ತುಗಳಾದ ಬೆಳ್ಳುಳ್ಳಿ ಹಾಗೂ ತೆಂಗಿನ ಎಣ್ಣೆಯ ಮೂಲಕ, ಅವರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ, ಎಂಬ ಅವರ ಸಂಶೋಧನೆಯ ಮಹತ್ವದ ಕೊಡುಗೆಯನ್ನು ನಿರೂಪಿಸಿದ್ದಾರೆ.

ಕಳೆದ ಶತಮಾನದ ವಿಮರ್ಶೆಯ ಕುರಿತು ಸಂಶೋಧನೆಯಲ್ಲಿ ತೊಡಗಿಕೊಂಡ ಲೇಖಕಿ, ಸಹಜವಾಗಿಯೇ ಕರ್ನಾಟಕದ ಮೂವರು ವಿಮರ್ಶಕರ ಸಂದರ್ಶನ ಮಾಡಿ, ವಿಮರ್ಶೆಯ ಕುರಿತು ಅವರ ಅಭಿಪ್ರಾಯಗಳನ್ನು ಪಡೆದಿದ್ದಾರೆ. ಅವರುಗಳು: ಎಂ.ಜಿ.ಹೆಗಡೆ, ನನ್ನ ಗೆಳೆಯರಾದ ಜನಾರ್ದನ ಭಟ್ ಮತ್ತು ಎಂ.ಎಸ್.ಆಶಾದೇವಿ. ಅವು ಇಂದಿನ ಕನ್ನಡ ವಿಮರ್ಶಾ ಪರಂಪರೆಯ ಸ್ವರೂಪ ಮತ್ತು ಸವಾಲುಗಳ ಮೇಲೆ ಬೆಳಕು ಚೆಲ್ಲುತ್ತವೆ.

ಅಂತೆಯೇ ವಿಮರ್ಶಕರ ವಿಮರ್ಶಾ ಕೃತಿಯ ಕುರಿತು ಪರಿಚಯ ಕೂಡ ಮಾಡಿದ್ದಾರೆ. ಅದು ಜನಾರ್ದನ ಭಟ್ ಅವರ ಪ್ರಶಸ್ತಿ ವಿಜೇತ ಕೃತಿ ” ವಿನೂತನ ಕಥನ ಕಾರಣ” ನವಚಾರಿತ್ರಕ ವಿಮರ್ಶೆಯ ಆಧಾರದ ಮೇಲೆ ಅವರು ಕೆಲವು ಕನ್ನಡ ಕಾದಂಬರಿಗಳ ವಿಶ್ಲೇಷಣೆ ಮಾಡಿದ್ದಾರೆ ” ಎಂದಿರುವುದು ವಿಮರ್ಶಾ ಸಾಹಿತ್ಯಕ್ಕೆ ಅವರ ಕೊಡುಗೆಯನ್ನು ನಿರೂಪಿಸಿದಂತಾಗಿದೆ.

ಮುಂಬೈ ಕೇಂದ್ರಿತ ಬರಹಗಳು:
ಕಾವ್ಯ೧: ಮುಂಬೈನ ಹಿರಿಯ ಲೇಖಕರಾದ ಅವರ ವಿ.ಜಿ.ಭಟ್ ಅವರ ಕಾವ್ಯ ನಡೆದು ಬಂದ ದಾರಿಯ – ವಿಡಂಬನೆಯಿಂದ ಆರಂಭವಾಗಿ ಪ್ರಾರ್ಥನೆಯೆಡೆಗೆ ಚಲಿಸುವ -ಮೇಲೆ ಬೆಳಕು ಚೆಲ್ಲುತ್ತದೆ.

ಕಾವ್ಯ ೨: ಅಮಿತಾ ಭಾಗ್ವತ್ ಅವರ “ಕುಮುದಾಳ ಭಾನುವಾರ” ಕವನ ಸಂಕಲನದ ಕವಿತೆಗಳ ವೈಶಿಷ್ಟ್ಯವನ್ನು, ಶೀರ್ಷಿಕೆಯ ಕವಿತೆ ಮತ್ತು ‘ಬಾಹುಬಲಿ ‘ ಕುರಿತ ಕವಿತೆ ಎರಡೂ ಪರಸ್ಪರ ವಿರುದ್ಧ ನೆಲೆಗಳಿಂದ ಕೂಡಿದ್ದು, ಮನೆಯ ಕೌಟುಂಬಿಕ ಸಂಭ್ರಮದ ಜೊತೆಗೆ, ಮನೆಯ ಹೊಸ್ತಿಲಿನ ಮಿತಿಯನ್ನು ದಾಟಿದಾಗಲೇ, ಬಾಹುಬಲಿಯ ದರ್ಶನದ ಕಡೆಗೆ ಚಲಿಸುವ ಜಂಗಮಾವಸ್ಥೆಯ ಅನಾವರಣ ಮಾಡಲಾಗಿದೆ.

ಕಾದಂಬರಿ: ಹಿರಿಯ ಕಾದಂಬರಿಕಾರರಾದ ವ್ಯಾಸರಾಯರ ಬಲ್ಲಾಳರ ಸಾಹಿತ್ಯದ ಅನುಸಂಧಾನವನ್ನು ಸಂಕ್ಷಿಪ್ತವಾಗಿ ಸಮೀಕ್ಷೆಗೆ ಒಳಪಡಿಸಲಾಗಿದೆ.ಅದರಲ್ಲಿ ಅವರ ಕಾದಂಬರಿಗಳು ನಡೆದುಬಂದ ದಾರಿ ( ಅನುರಕ್ತೆ, ವಾತ್ಸಲ್ಯ ಪಥ, ಉತ್ತರಾಯಣ ,ಬಂಡಾಯ) ,ಅವುಗಳ ವೈಶಿಷ್ಟ್ಯದ ಮೇಲೆ ಬೆಳಕು ಚೆಲ್ಲುತ್ತದೆ.

ಅಮಿತಾ ಭಾಗ್ವತ್ ಅವರ ‘ನೀಲಿ ನಕ್ಷೆ’ ಕಾದಂಬರಿಯ ನಾಯಕಿ ಉತ್ತರ ಕನ್ನಡ ಗ್ರಾಮೀಣ ಮೂಲದಿಂದ ಹೊರಟ ಹೆಣ್ಣು ,ಮುಂಬೈಗೆ ಬಂದು ತನ್ನ ಅಸ್ಮಿತೆಯನ್ನು ಸ್ಥಾಪಿಸಿದ ಯಶೋಗಾಥೆ. ಇದು ಮುಂಬೈನ ಉಳಿದ ಕಾದಂಬರಿಕಾರರಿಗಿಂತ ಭಿನ್ನವಾಗಿದೆ ಎಂದು ಅದರ ವೈಶಿಷ್ಟ್ಯವನ್ನು ಗುರುತಿಸಿದ್ದಾರೆ.

ಪ್ರಬಂಧ: ಬಹುಮುಖಿ ಪ್ರತಿಭೆಯ ಜಯಂತ ಕಾಯ್ಕಿಣಿ ಅವರ ಪ್ರಬಂಧಗಳಲ್ಲಿನ ಅವರ ಸೂಕ್ಷ್ಮ ಸಂವೇದನೆಯನ್ನು ಸಾಧಾರವಾಗಿ ಅನಾವರಣ ಮಾಡಲಾಗಿದೆ.

  • ಮುಂಬೈ ಕನ್ನಡ ವಿಭಾಗದ ಸ್ಥಾಪನೆಯಿಂದ ತೊಡಗಿ, ಅದು ನಡೆದು ಬಂದ ದಾರಿಯ ಮೇಲೆ ಬೆಳಕು ಚೆಲ್ಲಿ ,ವಿವಿಧ ವಿಭಾಗ ಪ್ರಮುಖರ ಕಾಲದಲ್ಲಿ ಅವರ ಮಾರ್ಗದರ್ಶನದಲ್ಲಿ ವಿಭಾಗ ಬೆಳೆದು ಬಂದ ಬಗೆಯನ್ನು, ಅಧ್ಯಯನ, ಅಧ್ಯಾಪನ, ಸಂಶೋಧನೆ. ಪ್ರಕಟಣೆಗಳ ಮೂಲಕ ಇಂದು ಮು.ವಿ.ವಿ ದಲ್ಲಿ ಪ್ರಮುಖ ಸ್ಥಾನ ಪಡೆದಿದೆ ಎಂದು, ಅದರ ಕನ್ನಡ ಕೈಂಕರ್ಯದ ಸ್ವರೂಪವನ್ನು ಮಂಡಿಸಿದ್ದಾರೆ.
  • ಮುಂಬೈ ಕನ್ನಡ ಸಂಶೋಧನೆಗೆ ಅಮೂಲ್ಯ ಕೊಡುಗೆ ನೀಡಿದ ಪಾಶ್ಚಾತ್ಯರಿಂದ ಹಿಡಿದು ಕನ್ನಡ ವಿದ್ವಾಂಸರನ್ನು ಸೂಕ್ತವಾಗಿ ದಾಖಲಿಸಿದ್ದಾರೆ. ಫ್ಲೀಟ್ ರಿಂದ ಮೊದಲುಗೊಂಡು ಉಪಾಧ್ಯರವರೆಗೆ.
ಈ ಕೃತಿಯ ವೈಶಿಷ್ಟ್ಯಗಳು :
  • ಪಂಪಭಾರತ ಮತ್ತು ತೆಲುಗು ನನ್ನಯ್ಯ ಭಾರತಗಳ ನಡುವೆ ಇರುವ ಸಾಮ್ಯಗಳ ಮೇಲೆ ಬೆಳಕು ಚೆಲ್ಲಿರುವುದು.
  • ಮಧ್ಯಕಾಲೀನ ಕಾವ್ಯ ಮತ್ತು ಆಧುನಿಕ ಮುಂಬೈ ಲೇಖಕರ ವೇಶ್ಯಾವಾಟಿಕೆಗಳ ಕುರಿತ ಚಿತ್ರಣವನ್ನು ಬಿಡೆಯಿಲ್ಲದೆ ಪ್ರಸ್ತಾಪಿಸಿರುವುದು.
  • ಮುಂಬೈ ಕನ್ನಡ ಸಂಶೋಧನೆಗಳನ್ನು ವ್ಯವಸ್ಥಿತವಾಗಿ ವರ್ಗೀಕರಣ ಮಾಡಿ ಮಂಡಿಸಿರುವುದು.
ಮಿತಿಗಳು ಎಂದು ಕರೆಯಬಹುದಾದರೆ :

  •  ತಪ್ಪು ಮಾಹಿತಿಗಳನ್ನು ಒಳಗೊಂಡಿದೆ: ಶ್ರೀನಿವಾಸ ಹಾವನೂರರರು ಮುಂಬೈನಲ್ಲಿ ಇದ್ದುದು ೨೫ ವರ್ಷಗಳಲ್ಲ ನಾಲ್ಕು ದಶಕಗಳ ಕಾಲ. ಅವರು ಮೊದಲು ಕಲಿಸಲಾರಂಭಿಸಿದ ಶಾಲೆ ಎಸ್.ಕೆ ಇ.ಸ್ ಅಲ್ಲ ಎನ್.ಕೆ.ಇ.ಎಸ್( ರಾಷ್ಟ್ರೀಯ ಕನ್ನಡ ಶಾಲೆ)
  • ಪುನರುಕ್ತಿಗಳು. ಕಾ.ವೆಂ.ಸೂರಿ ಅವರ ಕುರಿತು ಮೂರು ಬರಹಗಳು
  • ಲಿಪಿ ಸ್ಖಾಲಿತ್ಯಗಳು
ಏಕಕಾಲಕ್ಕೆ ಪ್ರಾಚೀನದಿಂದ ಅರ್ವಾಚೀನ ಕನ್ನಡ ಸಾಹಿತ್ಯ, ಮುಂಬೈ ಕನ್ನಡ ಸಾಹಿತ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಬರೆದ ,ನನ್ನ ಪ್ರೀತಿಯ ಶಿಷ್ಯೆ ಕಲಾಗೆ ಅಭಿನಂದನೆ ಮತ್ತು ಶುಭಾಶಯಗಳು. ಇನ್ನೂ ಹೆಚ್ಚಿನ ಮಹತ್ವದ ಕೃತಿಗಳು ಅವರಿಂದ ಬರಲಿ ಈ ಸಂದರ್ಭದಲ್ಲಿ ಹಾರೈಸುತ್ತೇನೆ.

  • ರಘುನಾಥ್ ಕೃಷ್ಣಮಾಚಾರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW