ಯುದ್ಧದ ಆಟಕೆ ಉರುಳುತ್ತಿವೆ ಮಹಲುಗಳು…ಗೆದ್ದವರು ಕೇಕೆ ಹಾಕಿ ಕುಣಿದರು…ಕವಿ ಮಹಾಮನೆ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಅವರೆಲ್ಲ ಸಂತೆಯಲಿ
ಕ್ಷಿಪಣಿ ಮಿಸೖಲ್ ರಡಾರ್
ಅವೂ ಇವುಗಳನ್ನು
ಹರಡಿಕೊಂಡು ಕುಳಿತಿದ್ದಾರೆ
ಅಮಾಯಕರು ಗಾಳಕ್ಕೆ ಸಿಲುಕಿ
ಒದ್ದಾಡುತ್ತಿದ್ದಾರೆ
ಮಾರಾಟವೂ ಭರ್ಜರಿಯಾಗಿದೆ
ಆದರೆ..
ತರಕಾರಿ ಮಾರುವ ಮುದುಕಿ
ಚಪ್ಪಲಿ ಹೊಲಿಯುವ ಮುದುಕ
ಬೋಂಡಾ ಹಾಕುವ ಹುಡುಗಿ
ಮಿಠಾಯಿ ಮಾರುವ ಸಾಬಿ
ಬೇಲೂನು ಮಾರುವ ಹುಡುಗ
ರೊಟ್ಟಿ ಅಂಗಡಿಯ ಹೆಣ್ಣು
ಉಡುಪಿ ಹೋಟೆಲಿನ ಐತಾಳ
ತಳ್ಳುಗಾಡಿಯ ಹಮಾಲಿ
ಮೀನು ಮಾರುವ ಮೇರಿಯಮ್ಮ
ಸುಂಕವನೂ ಕಟ್ಟಲಾರದೆ
ಕಂಗಾಲಾಗಿದ್ದಾರೆ
ಇವನ್ಯಾರೋ ಫಕೀರ
ಲೋಬಾನ ಹಾಕುತ್ತಾ
ಕವಾಲಿ ಹಾಡುತ್ತಾ
ಸಂತೆಯಲಿ ಅಡ್ಡಾಡುತ್ತಿದ್ದಾನೆ
***
ಭೂಮಿ ಅಗೆದರು
ಭುವಿಯ ಸೀಳಿದರು
ಶಿಲಾ ಪದರಗಳ ಸಿಡಿಸಿದರು
ಕಬ್ಬಿಣ ಕಲ್ಲಿದ್ದಲು
ಚಿನ್ನ ಬೆಳ್ಳಿ
ಸೀಸ ಪಾಸ
ತೈಲ ಅನಿಲಗಳ
ದೋಚಿದರು
ಇಳೆಯ
ಬಾಚಿ ತಬ್ಬಲು
ಯುದ್ದಕ್ಕಿಳಿದರು
ಜನರ ಕೊಚ್ಚಿ ಕೊಂದರು
ಖನಿಜಕ್ಕಾಗಿ ಅಗೆದ
ಕೊರಕಲುಗಳಲಿ
ಸತ್ತವರ ಎಸೆದರು
ಗೆದ್ದವರು
ಕೇಕೆ ಹಾಕಿ ಕುಣಿದರು
ರಣಹದ್ದುಗಳು
ಹೆಣ ಪರ್ವತವ
ತಿನ್ನಲಾರದೆ
ಸೋತವು..
ಸೋತವು..
ಸೋತವು..
***
ಯುದ್ಧದ ಆಟಕೆ
ಉರುಳುತ್ತಿವೆ ಮಹಲುಗಳು
ಬಿದ್ದ ಮನೆಯ
ಜಂತಿಗೆ
ಅಮ್ಮನ ಸೀರೆ ಕಟ್ಟಿ
ಉಯ್ಯಾಲೆ ಆಡುತ್ತಿವೆ
ಮಕ್ಕಳು
ರಕ್ತದ ಮಡುವಿನಲಿ
ಬಿದ್ದಿರುವ
ಅಮ್ಮನ ಕಣ್ಣುಗಳಲ್ಲಿ
ಎಂತದೋ ಹೊಳಪು
ರೊಯ್ಯನೆ
ತೂರಿ ಬಂದ ಬಾಂಬು
ಮಕ್ಕಳ ಆಟಕ್ಕೆ
ಬೆಂಕಿ ಹಾಕಿತು
ಅಮ್ಮನ ಕಣ್ಣು
ಮುಚ್ಚಿತು..
- ಮಹಾಮನೆ
