ಶಾಲಾದಿನಗಳ ಹಳೆಯ ನೆನಪಿನ ಜೊತೆಗೆ ಓದುಗರ ಮುಖದಲ್ಲಿ ನಗುತರಿಸುವ ಒಂದು ಪುಟ್ಟ ಕತೆ ಕೇಶವ ರೆಡ್ಡಿ ಹಂದ್ರಾಳ ಅವರ ಲೇಖನಿಯಲ್ಲಿ,ಮುಂದೆ ಓದಿ…
ಗೆಳೆಯರೆ 60 ಮತ್ತು 70ರ ದಶಕಗಳ ನಮ್ಮ ಬಯಲು ಸೀಮೆಯ ಹಳ್ಳಿಗಾಡಿನ ಬದುಕನ್ನು, ಆಗಿನ ಮುಗ್ಧ ಅನಕ್ಷರಸ್ಥ ಪಾತ್ರಗಳನ್ನು ನೆನಪಿಸಿಕೊಂಡರೆ ನನಗೆ ಈಗಲೂ ಮೈ ರೋಮಾಂಚನಗೊಳ್ಳುತ್ತದೆ. ನಾನು ಪ್ರೈಮರಿ ಸ್ಕೂಲ್ನಲ್ಲಿ ಓದುತ್ತಿದ್ದಾಗ ವಾರಕ್ಕೊಮ್ಮೆ ಸ್ನಾನ ಮಾಡುತ್ತಿದ್ದದ್ದು. ನಮ್ಮ ತಲೆಗಳಲ್ಲಿ ಹೇನು, ಸೀರುಗಳು ಪಿತುಗುಡುತ್ತಿದ್ದವು.ಮಕ್ಕಳ ಮತ್ತು ದೊಡ್ಡವರ ತಲೆಗಳನ್ನು ಸೀರಣಿಗೆಯಿಂದ ಸೀರುತ್ತಿದ್ದ ದೃಶ್ಯಗಳು ಎಲ್ಲರ ಮನೆಯ ಮುಂದೆಯೂ ಕಂಪಲ್ಸರಿಯಾಗಿ ಕಾಣುತ್ತಿದ್ದವು. ಇನ್ನು ಹೊತ್ತು ಮುಳುಗುವುದರೊಂದಿಗೆ ಉಣ್ಣುತ್ತಲೇ ನಿದ್ರಾದೇವಿಯ ವಶವಾಗಿಬಿಡುತ್ತಿದ್ದವು. ಎಂಥ ತಿಗಣೆ, ಸೊಳ್ಳೆ ಸೈನ್ಯ ಬಂದರೂ ನಮ್ಮ ನಿದ್ದೆಯನ್ನು ಕೆಡಿಸಲು ಸಾಧ್ಯವಾಗುತ್ತಿರಲಿಲ್ಲ.

ಫೋಟೋ ಕೃಪೆ: HOPE87
ಪ್ರೈಮರಿ ಸ್ಕೂಲಿನ ಶೇಕಡಾ ತೊಂಬತ್ತು ಭಾಗ ವಿಧ್ಯಾರ್ಥಿಗಳ ಮೂಗುಗಳಲ್ಲಿ ಗೊಣ್ಣೆ ಯಥೇಚ್ಛವಾಗಿ ಸುರಿಯುತ್ತಿತ್ತು. ಇನ್ನು ಕಬ್ಬು, ಕಡಲೆ ಕಾಯಿಯನ್ನು ಸದಾ ನಮಲುತ್ತಿದ್ದ ನನ್ನಂಥವರ ಮೂಗಲ್ಲಿ ಅದು ಮತ್ತಷ್ಟು ಜಾಸ್ತಿಯೇ ಇರುತ್ತಿತ್ತು. ಕೆಲವರು ಮೇಷ್ಟ್ರುಗೆ ಹೆದರಿ ಸೋರುತ್ತಿದ್ದ ಗೊಣ್ಣೆಯನ್ನು ನಾಲಿಗೆಯಿಂದ ಸೊರಕ್ಕೆಂದು ಎಳೆದು ಕೊಂಡು ಹೊಟ್ಟೆಗೆ ಸೇರಿಸಿಕೊಂಡು ಬಿಡುತ್ತಿದ್ದರು.ಸ್ಕೂಲಿನಲ್ಲಿ ಪ್ರಶ್ನೆಗೆ ಉತ್ತರಿಸದವರನ್ನು ಉತ್ತರಿಸಿದವರು ಮೂಗು ಹಿಡಿದು ಕೊಂಡು ಕನ್ನೆಗೆ ಹೊಡೆಯಬೇಕಿರುತ್ತಿತ್ತು.ಒಂದು ಸಾರಿ ನನ್ನ ಕ್ಲಾಸ್ ಮೇಟ್ ವೆಂಕಟೇಶನಿಗೆ ಬ್ರಾಮ್ಮರ ವಿಜಯಕುಮಾರಿ ಮೂಗು ಹಿಡಿದು ಹೊಡೆಯಲು ಹೋದಾಗ ಅವನು ಮೇಷ್ಟ್ಗೆ ಹೆದರಿ ಜೋರಾಗಿ ಉಸಿರು ಬಿಟ್ಟಿದ್ದ.ಕ್ಷಣದಲ್ಲಿ ಅರ್ಧ ಬೊಗಸೆಯಷ್ಟು ವೆಂಕಟೇಶನ ಮೂಗಿನ ಗೊಣ್ಣೆ ವಿಜಯ ಕುಮಾರಿಯ ಅಂಗೈಯಲ್ಲಿ ತುಂಬಿ ಹೋಗಿತ್ತು. ಆ ಹುಡುಗಿ ಚೇಳು ಕಚ್ಚಿದವಳಂತೆ ಕೈ ಒದರುತ್ತಾ ವಯಕ್ ಅಂತ ವಾಂತಿ ಮಾಡಿಕೊಂಡಿದ್ದಳು. ಅವತ್ತಿಂದ ನಮ್ಮ ಮುಸುಡಿಗಳನ್ನು ನೋಡಿದರೆ ಸಾಕು ವಯಕ್ ಅಂತ ಕಣ್ಣಿಗೆ ಕೈ ಅಡ್ಡ ಇಟ್ಟುಕೊಳ್ಳುತ್ತಿದ್ದಳು.
ಸಹೋದರಿ ವಿಜಯಕುಮಾರಿಯನ್ನು ನೋಡಿ ಎಷ್ಟೊಂದು ವರ್ಷಗಳಾದವು.ಸಹೋದರಿ ನೀನೇನಾದರೂ face book ನಲ್ಲಿ ಇದ್ದರೆ ನನ್ನ ಮುಸುಡಿಯನ್ನು ನೋಡು ಎಷ್ಟೊಂದು ಕ್ಲೀನಾಗಿದೆ ಅಂತ. ಇಪ್ಪತ್ತೈದು ವರ್ಷಗಳ ನಂತರ ಈ ಸಾರಿ ನಮ್ಮ ಜಯಮಂಗಲಿ ನದಿ ಹರಿದಿದೆ. ನೆನಪುಗಳು ಮತ್ತಷ್ಟು ಹಸಿರಾಗುತ್ತಿವೆ.
- ಕೇಶವ ರೆಡ್ಡಿ ಹಂದ್ರಾಳ (ಸುಮಾರು ಐನೂರು ಕಥೆಗಳು , ಮುನ್ನೂರು ಪ್ರಬಂಧಗಳು ಕನ್ನಡದಲ್ಲಿ ಪ್ರಕಟಗೊಂಡಿವೆ . ಕೆ ಎ ಎಸ್ ಅಧಿಕಾರಿಯಾಗಿ ನಿವೃತ್ತಿ) .
