'ಕೋಟಿ ತೀರ್ಥ' ಹುಡುಗ ಜಯಂತ ಕಾಯ್ಕಿಣಿ

ನಾನು ಕಂಡಂತೆ ಮಹಾನುಭಾವರು- ೫

‘ಕೋಟಿ ತೀರ್ಥ’ದ ಹುಡುಗ ಜಯಂತ ಕಾಯ್ಕಿಣಿ ಈಗ ದಕ್ಷಿಣ ಏಶಿಯಾದ ಡಿ.ಎಸ್.ಆರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು ಕನ್ನಡದ ಕೋಡು ಅಲ್ಲವೇ?.

ನನಗಿನ್ನೂ ನೆನಪಿದೆ. ೧೯೭೫ ನೇ ಇಸ್ವಿ. ಕಾಳೀಯೋಜನಾ ಪ್ರದೇಶದ ಕಾಮಗಾರಿಗಳು ವೇಗದಿಂದ ಸಾಗುತ್ತಿದ್ದ ಸಮಯ. ಅಲ್ಲಿ ಕೆಲಸ ಮಾಡುತ್ತಿದ್ದ ನಾವು ಕೆಲವರು ಸೇರಿ ಅಂಬಿಕಾನಗರದಲ್ಲಿ [ಉ.ಕ.] ಕನ್ನಡ ಸಾಹಿತ್ಯ ಸಂಘ ಕಟ್ಟಿ ಒಂದು ವರ್ಷವಾಗಿತ್ತಷ್ಟೆ. ಸಂಘದಿಂದ ಗ್ರಂಥಾಲಯವನ್ನೂ ಸುರು ಮಾಡಿದ್ದೆವು. ನಾನು ಸಂಘದ ಸ್ಥಾಪಕ ಸದಸ್ಯ ಮತ್ತು ಸಂಘಟನಾ ಕಾರ್ಯದರ್ಶಿ ಯಾಗಿದ್ದೆ. ಜೊತೆಗೆ ಗ್ರಂಥಾಲಯವನ್ನೂ ನೋಡಿಕೊಳ್ಳುತ್ತಿದ್ದೆ. ಅದೆಲ್ಲ ನಮ್ಮ ಡ್ಯೂಟಿ ಮುಗಿದ ಮೇಲೆ ಮಾಡುತ್ತಿದ್ದ ಆಸಕ್ತಿಯ ಸಂಗತಿಗಳಾಗಿದ್ದವು. ನವೆಂಬರ ಬರುತ್ತಲೂ ನಾವು ಅದ್ದೂರಿಯಿಂದ ರಾಜ್ಯೋತ್ಸವ ಆಚರಿಸಬೇಕೆಂದು ಯೋಚಿಸಿದೆವು. ಆ ಸಮಯಕ್ಕೆ ಒಬ್ಬ ಪ್ರಸಿದ್ಧ ಸಾಹಿತಿಗಳನ್ನು ಕರೆದು ಅವರನ್ನು ಸನ್ಮಾನಿಸುವ ಬಗ್ಗೆಯೂ ಯೋಚಿಸಿದೆವು. ಆಗ ಪ್ರಸಿದ್ಧರು ಮತ್ತು ಹತ್ತಿರದವರು ಅಂದರೆ ಧಾರವಾಡದವರೇ ಆಗಿರುತ್ತಿದ್ದರು. ಹಿಂದಿನ ವರ್ಷ ವರಕವಿ ಡಾ.ದ.ರಾ.ಬೇಂದ್ರೆಯವರನ್ನು ಕರೆದಿದ್ದೆವು. ಈಗ ಯಾರನ್ನು ಕರೆಯಬೇಕೆಂದು ಚರ್ಚೆಯಾಯಿತು. ನಾನು ಹೇಳಿದೆ. ಈ ಸಲ ಈ ಜಿಲ್ಲೆಯ ಪ್ರಸಿದ್ಧ ಸಾಹಿತಿಗಳನ್ನು ಕರೆಯೋಣ. ವಿಮರ್ಶಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಡಾ. ಗೌರೀಶ ಕಾಯ್ಕಿಣಿಯವರನ್ನು ಕರೆಯೋಣ ಅಂದೆ. ಅವರು ಆಗ ಗೋಕರ್ಣದಲ್ಲಿರುತ್ತಿದ್ದರು. ಅದಾಗಲೇ ನಾನು ಗೌರೀಶರ ”ಕಟಾಕ್ಷ” ಎಂಬ ಪುಸ್ತಕ ಓದಿ ಅದರ ಗುಂಗಿನಲ್ಲಿಯೇ ಇದ್ದೆ. ಆಗ ಎಲ್ಲರೂ ನನ್ನ ಮಾತಿಗೆ ಬೆಲೆ ಕೊಡುತ್ತಿದ್ದರು. ಸರ್ವಾನುಮತದಿಂದ ಒಪ್ಪಿಗೆಯಾಯಿತು. ಅವರನ್ನು ಸಂಪರ್ಕಿಸುವ, ಒಪ್ಪಿಸುವ ಹೊಣೆ ನನ್ನದಾಯಿತು.

(ಜಯಂತ ಕಾಯ್ಕಿಣಿ ಅವರ ತಂದೆ ಗೌರೀಶ ಕಾಯ್ಕಿಣಿ)

ನಾನು ಗೌರೀಶ ಕಾಯ್ಕಿಣಿಯರ ಮಾನಸಪುತ್ರರೆಂದೇ ಹೇಳುತ್ತಿದ್ದ ಕವಿ ವಿಷ್ಣು ನಾಯ್ಕರ ಮೊರೆ ಹೋದೆ. ವಿಷ್ಣು ನಾಯ್ಕರು ಆಗ ದಾಂಡೇಲಿಯ ಜನತಾ ವಿದ್ಯಾಲಯದಲ್ಲಿ ಶಿಕ್ಷಕರಾಗಿದ್ದರು. ಅಂತೂ ಕಾಯ್ಕಿಣಿಯವರು ಅಂಬಿಕಾನಗರಕ್ಕೆ ಬರಲೊಪ್ಪಿದರು. ಅಷ್ಟೇ ಅಲ್ಲ. ತಮ್ಮ ಜೊತೆ ಗೌತಮಿ ಎಂಬ ರೂಪಕ ಪ್ರದರ್ಶಿಸುವ ತಂಡವೂ ಬರುತ್ತದೆ ಎಂದು ತಿಳಿಸಿದರು. ನಮಗೆ ಇಮ್ಮಡಿ ಖುಶಿ.

ಕಾರ್ಯಕ್ರಮದ ದಿನ ಗೌರೀಶ ಕಾಯ್ಕಿಣಿಯವರನ್ನು ನಮ್ಮ ಇಂಜನಿಯರರು ತುಂಬ ಆತ್ಮೀಯತೆಯಿಂದ ಸ್ವಾಗತಿಸಿದರು. ಅವರ ಜೊತೆಗೆ ಅವರ ಶ್ರೀಮತಿ ಶಾಂತಾ ಕಾಯ್ಕಿಣಿಯವರೂ ಇದ್ದರು. ಮತ್ತು ಬಿಳೀ ಪ್ಯಾಂಟು, ಬಿಳೀ ಅಂಗಿ ತೊಟ್ಟಿದ್ದ ಪಿಯುಸಿ ಹುಡುಗನೊಬ್ಬ ಅವರ ಜತೆ ಇದ್ದರು. ಮುಖದಲ್ಲಿ ಸುಳಿ ನಗು, ನಾಚಿಕೆ, ಮುಜುಗುರ. ಶ್ರೀಮತಿ ಶಾಂತಾ ಅವರು ” ಇಂವನು ನಮ್ಮ ಮಗಾ. ಜಯಂತ್‌” ಅಂದರು. ಎಂಥಾ ಚೆಂದದ ನಗು ಅವತ್ತು ಆ ಮುಖದಲ್ಲಿ. ಇವನದೂ ಒಂದು ಪುಸ್ತಕ ಬಂತು ಅಂದರು ಗೌರೀಶರು. ”ಅದು ‘ಕೋಟಿ ತೀರ್ಥ’ ಅಂತ. ಅದನ್ನು ನಾನು ಆ ಮೇಲೆ ನಿಮಗೆ ಕೊಡ್ತೇನೆ” ಎಂದು ವಿಷ್ಣು ನಾಯ್ಕ ಅಂದರು. ಜಯಂತ್‌ ಇನ್ನೂ ಆಗ ಸಣ್ಣ ಹುಡುಗ. [ನಮಗೆ ಕಂಡಂತೆ] ಆಗಲೇ ಪುಸ್ತಕ ತಂದಿದ್ದಾನೆ ಎಂಬ ಹೆಮ್ಮೆಯೂ ಆಯಿತು. [ಮುಂದೆ ಈ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಬಂತು] ಇವರೆಲ್ಲರ ಜೊತೆಗೆ ಗೌತಮಿ ರೂಪಕದ ತಂಡ ಕೂಡ ಬಂದಿತ್ತು. ಆ ತಂಡದ ಪ್ರಮುಖರು ಜಿ.ಪಿ.ನಾಯಕ ಅವರೂ ಬಂದಿದ್ದರು. ನೀಳ ಮೂಗಿನ, ವಿಶಾಲ ಕೂದಲಿನ ಅವರನ್ನು ನೋಡುತ್ತಿದ್ದಂತೆ ನನಗೆ ತೆಲುಗು ನಟ ಎನ್‌.ಟಿ. ಆರ್‌ ನೆನಪಾದರು. ಅಷ್ಟು ಸುಂದರ ನಿಲುವು. ಅವರು ಒಳ್ಳೆಯ ನೃತ್ಯಪಟು ಎಂದೂ ಗೊತ್ತಾಯಿತು. ಜಿ.ಪಿ.ನಾಯಕರು ಮುಂದೆ ಉ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿ ತುಂಬ ಒಳ್ಳೆಯ ಕೆಲಸ ಮಾಡಿದರು. ಅವರಿಗೆ ಆ ಜಯಂತ್‌ನನ್ನು ಕಂಡರೆ ತುಂಬ ಅಕ್ಕರೆ. ಜಯಂತ ಕೂಡ ಅವರ ತಂಡದೊಂದಿಗೇ ಇದ್ದು ಅಪ್ಪನ ಬಳಿ ಸುಳಿಯಲೇ ಇಲ್ಲ. ಅವರು ಉಳಿಯಲು ಐ.ಬಿ. ವ್ಯವಸ್ಥೆಯಾಯಿತು. ಕಾರ್ಯಕ್ರಮದ ಗಡಿಬಿಡಿಯಲ್ಲಿದ್ದ ನನಗೆ ಅವತ್ತು ಈ ಜಯಂತನನ್ನು ಹೆಚ್ಚು ಮಾತಾಡಿಸಲಾಗಲಿಲ್ಲ. ಜಯಂತ ಅವತ್ತು ಹೆಚ್ಚಾಗಿ ಜಿ.ಪಿ.ನಾಯಕರ ಜತೆಗಿದ್ದು ರೂಪಕ ಕಲಾವಿದರೊಂದಿಗೇ ಇದ್ದ. ಎದುರಿಗೆ ಕಂಡರೆ ಸಾಕು. ನಕ್ಕು ಮತ್ತೆ ಸರಕ್ಕನೆ ಅತ್ತ ಹೋಗಿ ಬಿಡುತ್ತಿದ್ದ. ನಮಗೆಲ್ಲ ಗೌರೀಶರ ಭಾಷಣದ ಬಗ್ಗೆಯೇ ಅಭಿಮಾನ. ಅವರು ದಿನಕರ ದೇಸಾಯಿಯವರ ಚುಟುಕುಗಳ ಬಗ್ಗೆ ಮಾತಾಡಿದರು. ಕರಾವಳಿಯ ಸೊಬಗಿನ ಬಗ್ಗೆ ಮಾತಾಡಿದರು. ಅವರು ಭಾಷಣ ಮಾಡುತ್ತಿದ್ದಾಗ ಜಯಂತ ಒಂದೆರಡು ಸಲ ಸೈಡ್‌ ವಿಂಗ್‌ನತ್ತ ಬಂದು ಅಪ್ಪನನ್ನು ನಿಂತು ನೋಡಿದ. ಮತ್ತೆ ಅದೇನು ಆಸಕ್ತಿಯೋ. ಗ್ರೀನ್‌ ರೂಮ ಕಡೆ ಓಡಿದ. ಜಿ.ಪಿ.ನಾಯಕರು ಸಿದ್ಧಪಡಿಸಿದ ರೂಪಕ ಮೋಹಕವಾಗಿತ್ತು. ಮೊದಲೇ ಅವರು ನೃತ್ಯ ಪರಿಣಿತರು. ತಮ್ಮ ಶಾಲೆಯ ಮಕ್ಕಳನ್ನು ಚನ್ನಾಗಿಯೇ ತಯಾರು ಮಾಡಿದ್ದರು. ಅಂಬಿಕಾನಗರದ ಪ್ರೇಕ್ಷಕರು ಖುರ್ಚಿಗಳು ಸಾಲದೆ ನಿಂತು ಗೌರೀಶರ ಭಾಷಣ ಮತ್ತು ಮಧುಮತಿ ನೃತ್ಯರೂಪಕ ನೋಡಿದರು. ಸಂಘಟಕರಾದ ನಮಗೂ ಖುಶಿಯಾಯಿತು.

(ಜಯಂತ ಕಾಯ್ಕಿಣಿ ಅವರ ತಾಯಿ ಶಾಂತ ಕಾಯ್ಕಿಣಿ)

ಕಾರ್ಯಕ್ರಮ ಮುಗಿದ ಮೇಲೆ ಕೆ.ಪಿ.ಸಿ. ಐ.ಬಿ.ಯಲ್ಲಿ ಎಲ್ಲರಿಗೂ ಊಟ. ಗೌರೀಶರು, ಮಡದಿ ಶಾಂತಾ ಕಾಯ್ಕಿಣಿಯವರು, ವಿಷ್ಣು ನಾಯ್ಕರು, ನಾನು ಮತ್ತು ನಮ್ಮ ಸಂಘದ ಪದಾಧಿಕಾರಿಗಳು ಒಟ್ಟಿಗೇ ಊಟಕ್ಕೆ ಕೂತರೆ ಈ ಜಯಂತ ನಮ್ಮೊಡನೆ ಊಟಕ್ಕೆ ಕೂಡ್ರಲೇ ಇಲ್ಲ. ಅದೇನು ಮುಜುಗುರವೋ ಏನೋ. ನಾನು ಕಲಾವಿದರ ಜತೆ ಕೂಡ್ತೇನೆ ಅಂದು ಅತ್ತ ಹೋಗಿಬಿಟ್ಟ. ‘ಜಯಂತ್‌ಗೆ ಕಲಾವಿದರಂದ್ರೆ ಅಷ್ಟೊಂದು ಪ್ರೀತಿ. ಅಲ್ಲೇ ಹೋಗ್ಲಿ ಬಿಡಿ’ ಎಂದು ಶಾಂತಾ ಕಾಯ್ಕಿಣಿಯವರು ಹೇಳಿದರು. ಆಗೆಲ್ಲ ಈ ಕೋಟಿ ತೀರ್ಥ ಪುಸ್ತಕ ಬರೆದ ಹುಡುಗ ತುಂಬ ಮುಗುಮ್ಮಾಗಿ ಕಂಡ. ಅವನೊಳಗೇ ಏನೋ ಇದೆ. ಅದು ಕಣ್ಣಿಗೆ ಕಾಣದ ಪ್ರತಿಭೆ ಎಂದು ಎಲ್ಲರಿಗೂ ಆಗಲೇ ಅನಿಸಿತ್ತು. ನನಗೆ ಅವತ್ತು ಹಿರಿಯರಾದ ಜಿ.ಪಿ.ನಾಯಕ ಮತ್ತು ಕಿರಿಯರಾದ ಜಯಂತ್‌ ಇಬ್ಬರು ಹೊಸ ಗೆಳೆಯರು ಸಿಕ್ಕಿದ್ದರು. ಇಲ್ಲಿಂದ ಪರಿಚಯವಾದ ಜಯಂತ್‌ ಆಗ ತುಷಾರದಲ್ಲಿ ನನ್ನ ಕತೆಗಳನ್ನು ಓದಿದ್ದನ್ನು ಹೇಳಿದ್ದರು. ಮುಂದೆ ನಾನು ಅಂಕೋಲಾದ ಕರ್ನಾಟಕ ಸಂಘದ ಕಾರ್ಯಕ್ರಮಗಳಿಗೆ ಹೋದಾಗಲೆಲ್ಲ ನಮ್ಮಿಬ್ಬರ ಭೇಟಿಯಾಗುತ್ತಿತ್ತು. ಆದರೆ ಅದೇ ಸಮಯದಲ್ಲಿ ಅವರು ಮುಂಬೈ ಕಡೆ ಹೋದರು. ಪ್ರಖ್ಯಾತ ಕಾದಂಬರಿಕಾರ ಗೋಕರ್ಣ ಬದಿಯ ಹನೇಹಳ್ಳಿಯ ಶ್ರೀ ಯಶವಂತ ಚಿತ್ತಾಲರೂ ಆಗ ಮುಂಬೈಯಲ್ಲೇ ಇದ್ದರು. ಮುಂದೆ ಅವರ ನನ್ನ ಸಂಪರ್ಕ ನಿಂತು ಹೋಯಿತು.

(ಹೂಲಿಶೇಖರ್ ಜೊತೆಗೆ ಗೆಳೆಯ ಜಯಂತ್ ಕಾಯ್ಕಿಣಿ)

ಮುಂದೆ ಕನ್ನಡದಲ್ಲಿ ತೆಲುಗಿನ ಶ್ರೀ ರಾಮೋಜಿರಾವ್‌ ಅವರು ಈಟೀವಿ ಕನ್ನಡ ಎಂಬ ಚಾನೆಲ್ಲು ಆರಂಭಿಸಿದಾಗ ಈ ಜಯಂತರೇ ಅದರ ಮುಖ್ಯಸ್ಥರಾದ್ದದ್ದು ಅವರ ಪ್ರತಿಭೆಗೆ ಹಿಡಿದ ಕನ್ನಡಿ. ಆದರೆ ಅಷ್ಟೇ ಬೇಗ ಅಲ್ಲಿಂದ ಹೊರಬಿದ್ದರು ಕೂಡ. ಜಯಂತ್‌ಗೆ ವ್ಯವಹಾರ ಗೊತ್ತಿರಲಿಲ್ಲ. ಎಲ್ಲವೂ ಪುಸ್ತಕ ಬರೆದಂತೆ ಅಲ್ಲ ಎಂಬುದು ಅವರ ಅರಿವಿಗೆ ಬಂತೇನೋ. ಒಂದು ಸಲ ನಾನು ಈ ಬಗ್ಗೆ ಅವರನ್ನು ಕೇಳಿದೆ. ನೀವೇಕೆ ಈಟಿವಿ ಬಿಟ್ಟಿರಿ ಅಂತ. ಎಂದಿನ ನಗೆಯಲ್ಲೇ ಜಯಂತ್‌ ಹೇಳಿದ್ದು ಒಂದೇ ಸಾಲಿನ ಉತ್ತರ. ”ಬಹುಶಃ ಅವರ ರಕ್ತಕ್ಕೂ, ನನ್ನ ರಕ್ತಕ್ಕೂ ಸರಿ ಹೊಂದಲಿಲ್ಲ”

ಇಂಥ ಜಯಂತ್ ಉದ್ಯೋಗಕ್ಕಾಗಿ ತಡಕಾಡಿದ್ದೂ ಇದೆ. ಮುಂದೆ ಅವರು ಕನ್ನಡದಲ್ಲಿ ಝೀಕನ್ನಡ ವಾಹಿನಿ ಆರಂಭವಾದಾಗಲೂ ಅದರ ಮುಖ್ಯಸ್ಥರಾದರು. ಆದರೆ ಅಲ್ಲಿಯೂ ಬಹಳ ದಿನ ಉಳಿಯಲಿಲ್ಲ. ಆ ಮೇಲೆ ವಿಜಯ ಸಂಕೇಶ್ವರರು ಆರಂಭಿಸಿದ ಮಾಸಿಕವೊಂದರ ಸಂಪಾದಕರೂ ಆದರು. ಅಲ್ಲಿಯೂ ವ್ಯವಹಾರಿಕೆ ನೆಲೆ ಸಿಗಲಿಲ್ಲ. ಮಾಧ್ಯಮದ ವ್ಯವಹಾರಗಳನ್ನು ಅರಗಿಸಿಕೊಳ್ಳುವುದು ಈ ಪ್ರತಿಭಾವಂತನಿಗೆ ಆಗಲಿಲ್ಲವೇನೋ. ಬರೆಯುವುದೊಂದೇ ತನ್ನ ಕಾಯಕ ಎಂದುಕೊಂಡರೇನೋ. ತಮ್ಮ ಪದ್ಯಗಳನ್ನು ಸಿನಿಮಾಗಳಿಗೆ ಒಗ್ಗಿಸಿ ನೋಡಿದರು. ಸಿನಿಮಾ ಹಾಡುಗಳಿಗೆ ಹೊಸ ಅರ್ಥ ಹುಡುಕಿದರು. ಇದರ ನಡುವೆ ನಾಟಕ ಬರೆದರು. ಕಥೆಗಳನ್ನು ಬರೆದರು. ಎಲ್ಲವೂ ಕನ್ನಡಕ್ಕೆ ಕೋಡು ಮೂಡಿಸಿದವೆ. ನಾನು ‘ಮೂಡಲ ಮನೆ’ ಧಾರಾವಾಹಿಗೆ ಸಂಭಾಷಣೆ ಬರೆಯುತ್ತಿದ್ದಾಗ ಒಮ್ಮೆ ಈಟೀವಿ ಕಚೇರಿಯಲ್ಲಿ ಭೇಟಿ ಆದಾಗ ಅವರು ಹೇಳಿದ ಮಾತು ನೆನಪಿದೆ. ‘ ಈ ವಾಹಿನಿಯವರು ಭಲೇ ಅಂದರೆ ಸಾಕು. ಊರ ಚಿಂತೆಯಿಲ್ಲ. ಮಾಧ್ಯಮದಲ್ಲಿ ಬದುಕಬಹುದು’ ಅಂದರು. ಬಹುಶಃ ಆ ಹೊತ್ತಿಗೆ ಅವರು ರೋಸಿ ಹೋಗಿದ್ದರೇನೋ. ಅವರು ಹೇಳಿದ್ದರಲ್ಲಿ ತಪ್ಪಿರಲಿಲ್ಲ. ಇವತ್ತಿನ ಸ್ಥಿತಿಯೇ ಹಾಗಿದೆ.

ಅಂದು ಗೋಕರ್ಣದ ಕೋಟಿ ತೀರ್ಥ ನೆನಪಿಸಿಕೊಂಡು ಪದ್ಯ ಬರೆದ ಜಯಂತ್‌ ಆ ಸಾಹಿತ್ಯಕ್ಕೂ ಬಹುಮಾನ ತಂದರು. ಈಗ ಸಿನಿಮಾ ಪದ್ಯ ಬರೆಯುವಾಗಲೂ ಸಿನಿಮಾಗಳಿಗೆ ಮಾನ ತಂದರು. ಇಂಥ ಕನ್ನಡದ ಮಾನವಾಗಿರುವ ಜಯಂತ್‌ಗೆ ಈಗ ದಕ್ಷಿಣ ಏಶಿಯಾದ ಡಿ.ಎಸ್.ಆರ್‌ ಪ್ರಶಸ್ತಿ. ಇದು ಕನ್ನಡದ ಕೋಡು. ನಮ್ಮ ಹೆಮ್ಮೆ ಅಲ್ಲವೆ.

ಲೇಖನ : ಹೂಲಿ ಶೇಖರ್‌ (ಖ್ಯಾತ ಚಿತ್ರ ಸಂಭಾಷಣಾಕಾರ- ನಾಟಕಕಾರ-)

aakritikannada@gmail.com

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW