ಅವಿಭಕ್ತ ಕುಟುಂಬದಲ್ಲಿ ಕೂಡಿ ಬಾಳಿದರೆ ಸ್ವರ್ಗ ಸುಖ

ಸಾಫ್ಟ್ ವೆರ್ ಪ್ರಪಂಚದಲ್ಲಿ ಅವಿಭಕ್ತ ಕುಟುಂಬ ಕಣ್ಮರೆಯಾಗಿ, ಇಂದು ಕುಟುಂಬವೆಂದರೆ ಲ್ಯಾಪ್ ಟಾಪ್, ಕಂಪ್ಯೂಟರ್, ಮೊಬೈಲ್ ಗಳಾಗಿವೆ. ಇವುಗಳ ಮಧ್ಯೆ ಎಷ್ಟೋ ಅವಿಭಕ್ತ ಕುಟುಂಬಗಳು ನಶಿಸಿ ಹೋಗುತ್ತಿವೆ. ಕೂಡು ಕುಟುಂಬದ ಬಗ್ಗೆ ಒಂದು ಮಧುರ ಲೇಖನ ಮಾಲಿಕೆಯನ್ನುಕು ಶಿ ಚಂದ್ರಶೇಖರ್ ಅವರು ಬರೆದಿದ್ದಾರೆ. ಓದಿ…

ನಮ್ಮ ಮನೆಯ ಕೆಳ ಪಾರ್ಶ್ವದಲ್ಲಿ ನನ್ನ ಸ್ನೇಹಿತನ ಕುಟುಂಬ ವಾಸವಾಗಿತ್ತು. ಆತನ ತಂದೆಗೆ ಇವನು ಸೇರಿ ಒಟ್ಟು ಏಳು ಮಕ್ಕಳು. ತಂದೆ ತೀರಿಕೊಂಡಿದ್ದರು. ಆರು ಗಂಡು ಮಕ್ಕಳು ಕೊನೆಯವಳು ಹೆಣ್ಣು. ಮೊದಲನೇಯ ಇಬ್ಬರಿಗೆ ಮದುವೆಯಾಗಿತ್ತು. ಮತ್ತು ಅವರಿಗೆ ಇಬ್ಬರು ಪುಟ್ಟ ಹೆಣ್ಣು ಮಕ್ಕಳು. ವಯಸ್ಸಾದ ಅಜ್ಜ-ಅಜ್ಜಿ, ಸ್ನೇಹಿತನ ತಾಯಿ, ಆರು ಗಂಡು ಮಕ್ಕಳು, ಒಬ್ಬ ಹೆಣ್ಣು ಮಗಳು, ಇಬ್ಬರು ಸೊಸೆಯಂದಿರು,ಇಬ್ಬರು ಪುಟಾಣಿಗಳು ಒಟ್ಟು ಹದಿನಾಲ್ಕು ಮಂದಿಯ ಅವಿಭಕ್ತ ಕುಟುಂಬ. ನನ್ನ ಸ್ನೇಹಿತ ಬೆಳಿಗ್ಗೆ ಆರಕ್ಕೆ ಹಲ್ಲುಜ್ಜಿ, ಮುಖ ತೊಳೆದು ಕಾಲೇಜಿಗೆ ಹೊರಟರೆ ಅವನ ಸ್ನಾನವೇನಿದ್ದರೂ ಮಧ್ಯಾಹ್ನ ಒಂದರ ನಂತರವೇ. ಮನೆಯ ಮೇಲಿನ ಹೊಗೆಗೂಡು ಆರರಿಂದ ಹತ್ತರವರೆಗೂ ಹೊಗೆ ಕಾರುತ್ತಲೇ ಇರುತಿತ್ತು.

ಫೋಟೋ ಕೃಪೆ : Piterest

ಭಾನುವಾರದ ರಜೆಯಲ್ಲಿ ಇನ್ನೂ ಇತರೆ ಕುಟುಂಬದ ನೆಂಟರ ಆಗಮನ ಒಟ್ಟಿನಲ್ಲಿ ಮನೆಯು ಸದಾ ಮಕ್ಕಳ ನಗು, ಗಲಾಟೆ, ಹಿರಿಯರ ಗದರುವಿಕೆ, ಹೆಣ್ಣು ಮಕ್ಕಳ ಪಾಕ ವೈವಿಧ್ಯತೆಯಿಂದ ತುಂಬಿರುತ್ತಿತ್ತು. ಅವರೆಲ್ಲಾ ಪ್ರವಾಸಕ್ಕೆ ಹೊರಟರೆ ನನ್ನನ್ನು ಕೂಡ ಕರೆದೊಯುತ್ತಿದ್ದರು. ಮನೆಯು ಅಷ್ಟು ಜನಕ್ಕೆ ಚಿಕ್ಕದಾಗಿದುದ್ದರಿಂದ ಮಳೆಗಾಲದ ಹೊರತು ಹೆಣ್ಣು ಮಕ್ಕಳು ಹಾಗೂ ಅಜ್ಜನ ಹೊರತು ಎಲ್ಲರೂ ಮಲಗುತ್ತಿದ್ದದ್ದು ಮನೆಯ ಮಾಳಿಗೆಯ ಮೇಲೆಯೇ. ಅವರ ಕುಟುಂಬದಲ್ಲಿ ಸುಖ- ದುಃಖಗಳು ಸಮಾನವಾಗಿದ್ದವು.

ಅಜ್ಜ ನಮ್ಮ ಮನೆಯಲ್ಲಿರುವಾಗಲೇ ತೀರಿಹೋದರೆ, ಎರಡನೇ ಅಣ್ಣನಿಗೆ ಆ ಅವಧಿಯಲ್ಲಿಯೇ ಗಂಡು ಮಗುವಾಯಿತು. ಹಾಗೂ ಸದಸ್ಯರ ಸಂಖ್ಯೆ ಹಾಗೆ ಉಳಿಯಿತು. ಮೂರು ವರ್ಷಗಳ ನಂತರ ಮನೆ ಭೋಗ್ಯದ ಅವಧಿ ಮುಗಿದಿದ್ದರಿಂದ ಸ್ನೇಹಿತನ ಆ ಅವಿಭಕ್ತ ಕುಟುಂಬ ಬೇರೆ ಮನೆ ಹುಡುಕಿಕೊಂಡಿತು. ಆ ನಂತರ ಕೊನೆಯ ಹೆಣ್ಣುಮಗಳ ಮದುವೆಯಾಗಿ ಕೇವಲ ಆರು ತಿಂಗಳ ಅವಧಿಯಲ್ಲಿ ಮನೆಯ ಸದಸ್ಯರೆಲ್ಲರೂ ಪಾಲಾದರು. ಅಜ್ಜಿ ಎರಡನೇ ಮೊಮ್ಮಗನ ಜೊತೆ, ತಾಯಿ ಕೊನೆಯ ಮಗನ ಜೊತೆ ಮೂರು ಸಹೋದರರು ಮದುವೆಯಾಗಿ ಎಲ್ಲರು ಬೇರೆಯಾದರು. ಕುಟುಂಬ ಪಾಲಾದರು ಸಹ ಈಗಲೂ ತಿಂಗಳಿಗೊಮ್ಮೆಯೋ, ಹಬ್ಬ ಹರಿದಿನಗಳಲ್ಲಿ ಒಂದಾಗುತ್ತಾ ಆ ಅವಿಭಕ್ತ ಕುಟುಂಬವು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ವರ್ಷಕ್ಕೊಮ್ಮೆ ಕ್ರಿಕೆಟ್ ಟೂರ್ನಿಯನ್ನು ಕೂಡ ಆಯೋಜಿಸುತ್ತಾರೆ.

ಫೋಟೋ ಕೃಪೆ : Outlook India

ರಕ್ತಸಂಬಂಧ, ಹೊಂದಾಣಿಕೆ ಅಥವಾ ಸಹವಾಸದಿಂದ ಒಟ್ಟಾಗಿರುವ ಮಾನವರ ಗುಂಪು “ಕುಟುಂಬ” ಎಂದು ಕರೆಯಲ್ಪಡುತ್ತದೆ. ಕುಟುಂಬ ಸಮಾಜದ ಬಹುಮುಖ್ಯ ಅಂಗವಾದ್ದರಿಂದ ಸದಸ್ಯರೆಲ್ಲರೂ ಪರಸ್ಪರ ಬೆರೆತು ಸಾಮಾಜಿಕವಾಗಿ ಸಮರ್ಥರಾಗುತ್ತಾರೆ. ಗ್ರಾಮೀಣ ಹಿನ್ನಲೆಯಲ್ಲಿ ಕೂಡು ಕುಟುಂಬಗಳು ಭಾರತಾದ್ಯಂತ ಎಲ್ಲೆಡೆಯಲ್ಲಿಯೂ ಒಂದೇ ಸೂರಿನಲ್ಲಿ ವಾಸಿಸುತ್ತಿದ್ದು, ಈಗ ಅತೀ ವಿರಳವಾಗಿದೆ. ಆದರೆ ಕುಣಿಗಲ್ ತಾಲ್ಲೂಕಿನ ಸುಂದರಕುಪ್ಪೆ ಎಂಬ ಊರಿನಲ್ಲಿ ಒಂದು ಕುಟುಂಬ ಇದೆ. ಆ ಅವಿಭಕ್ತ ಕುಟುಂಬದ ಸಂಖ್ಯೆ ಬರೋಬರಿ ನೂರಾ ಐವತ್ತು. ಈ ಕುಟುಂಬಕ್ಕೆ ನಾನೂರು ವರ್ಷದ ಹಿನ್ನಲೆಯಿದೆ. ಶ್ರೀ ಗುಂಡೇಗೌಡ ಎಂಬುವವರು ತನ್ನ ಏಳನೇ ತಲೆಮಾರಿನಲ್ಲಿ ಮಕ್ಕಳ್ಳಿಲ್ಲದೆ ವೀರಣ್ಣಗೌಡ ಎಂಬುವವರನ್ನು ದತ್ತು ತಗೆದುಕೊಂಡರು. ಆನಂತರ ವೀರಣ್ಣಗೌಡರಿಗೆ ಹುಟ್ಟಿದ ಮಕ್ಕಳಿಂದ ಪ್ರಾರಂಭವಾದ ಪೀಳಿಗೆ ಈಗ ನೂರೈವತ್ತು ಕುಟುಂಬದ ಸದಸ್ಯರನ್ನು ಹೊಂದಿದೆ. ಪ್ರಸ್ತುತ ಶ್ರೀ ರಾಜಶೇಖರ್ ಈ ಅಗಾಧ ಕುಟುಂಬದ ಮೇಲ್ವಿಚಾರಣೆಯ ಹೊಣೆಯನ್ನು ಹೊತ್ತಿದ್ದಾರೆ. ಈ ಕುಟುಂಬದಲ್ಲಿ ಹಲವಾರು ವೈದ್ಯರು, ಇಂಜಿನಿಯರ್ ಹಾಗೂ ಹಲವಾರು ಪದವೀಧರರಿದ್ದು, ಸದಸ್ಯರು ವಿವಿಧ ನಗರಗಳಲ್ಲಿ ಉದ್ಯೋಗ ನಿಮಿತ್ತ ವಾಸಿಸುತ್ತಿದ್ದಾರೆ. ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಒಂದಾಗುತ್ತಾರೆ. ಈ ಕುಟುಂಬದ ವಿಶೇಷತೆ ಎಂದರೆ ಇದುವರೆಗೂ ಆಸ್ತಿ ಪಾಲಾಗದಿರುವುದು ಹಾಗೂ ಯಾವುದೇ ವ್ಯಾಜ್ಯವಿರಲಿ ಪೊಲೀಸ್ ಠಾಣೆಯ ಮೆಟ್ಟಲೇರದಿರುವುದು.

ನಮ್ಮ ಕುಟುಂಬದಲ್ಲೇ ನಮ್ಮ ಚಿಕ್ಕಮ್ಮನ ಮಗಳನ್ನು ಮೈಸೂರು ಹತ್ತಿರ ಪಾಂಡುಪುರ ಎಂಬ ಊರಿಗೆ ವಿವಾಹ ಮಾಡಿಕೊಟ್ಟಿದ್ದು, ಆ ಕುಟುಂಬ ಸುಮಾರು ಇಪ್ಪತ್ತೈದು ಸದಸ್ಯರನ್ನು ಒಳಗೊಂಡ ಅವಿಭಕ್ತ ಕುಟುಂಬವಾಗಿದೆ. ಆ ಕುಟುಂಬದಲ್ಲಿ ಎಲ್ಲಾ ನಿರ್ಧಾರ ಹಿರಿಯ ಸದಸ್ಯರೇ ನಿರ್ಧರಿಸುತ್ತಾರೆ. ಅವರ ಮನೆಯಲ್ಲಿ ಮಿಕ್ಸಿ, ಗ್ರೈಂಡರ್ ಇದ್ದರೂ ಕೂಡಾ ಎಲ್ಲಾ ಹೆಂಗಸರು ಒಳಕಲ್ಲಿನಲ್ಲಿಯೇ ರುಬ್ಬುವುದು, ಮೋಟಾರ್ ಇದ್ದರು ಬಾವಿಯಲ್ಲಿನ ನೀರನ್ನು ರಾಟೆ ಮೂಲಕ ಸೇದಿಯೇ ಮೇಲಕ್ಕೆತ್ತುತ್ತಾರೆ. ಆ ಮನೆಗೆ ಯಾವಾಗ ಹೋದರು ತುಂಬಿದ ವಾತಾವರಣದಿಂದ ಹಬ್ಬದ ಕಳೆಕಟ್ಟಿರುತ್ತದೆ.

ಫೋಟೋ ಕೃಪೆ : standardcoldpressedoil

ಕೂಡು ಕುಟುಂಬದಲ್ಲಿ ವಾಸಿಸುವುದರಿಂದ ಅನೇಕ ಪ್ರಯೋಜನಗಳಿವೆ. ಮೊದಲನೆಯದಾಗಿ ಒಗ್ಗಟ್ಟು, ಪ್ರಬುದ್ಧ ಏಕಮುಖ ನಿರ್ಧಾರ, ಸಂಸ್ಕಾರ, ಮಕ್ಕಳ ಸ್ಪರ್ದಾತ್ಮಕ ಬೆಳವಣಿಗೆ, ಕಷ್ಟಗಳಲ್ಲಿ ಪರಸ್ಪರ ನೆರವು ಇನ್ನು ಅನೇಕ. ಅನುಕೂಲಗಳ ಪಟ್ಟಿಯನ್ನು ನೋಡಿದರೆ ಅನಾನುಕೂಲಗಳು ತುಂಬಾ ಚಿಕ್ಕವು.

ಮಕ್ಕಳನ್ನೇ ತೆಗೆದುಕೊಳ್ಳಿ ವಿಭಕ್ತ ಕುಟುಂಬದಲ್ಲಿ ಅದೂ ಈ ಸಾಫ್ಟ್ ವೆರ್ ಪ್ರಪಂಚದಲ್ಲಿ ಒಬ್ಬಂಟಿ ಕೀಳರಿಮೆಯಿಂದ ಬೆಳೆಯುವುದೇ ಹೆಚ್ಚು ಹಾಗೂ ಮಕ್ಕಳಲ್ಲಿ ಸ್ಪರ್ದಾತ್ಮಕ ಮನೋಬಾವ ತುಂಬಾ ಕಡಿಮೆ ಇರುತದ್ದೇ. ತಾತ, ಅಜ್ಜಿ, ದೊಡ್ಡಪ್ಪ – ಚಿಕ್ಕಪ್ಪ,ಅಣ್ಣ ತಮ್ಮಂದಿರ ಮದ್ಯೆ ಬೆಳೆಯುವ ಮಕ್ಕಳು ಸಮಾಜಕ್ಕೆ ಸಮರ್ಥರಾಗಿ ಬಹುದೊಡ್ಡ ಕೊಡುಗೆಯನ್ನು ನೀಡುತ್ತಾರೆ. ದೊಡ್ಡವರಲ್ಲಿ ಯಾರದರೊಬ್ಬರು ಆರ್ಥಿಕವಾಗಿ ಕುಸಿದರೆ ಮಿಕ್ಕೆಲ್ಲಾ ಸದಸ್ಯರು ಮೇಲೆತ್ತುತ್ತಾರೆ. ಈ ಮನೋಬಾವ ಈಗಲೂ ಸೇಟು ಹಾಗೂ ಮಾರ್ವಾಡಿ ಕುಟುಂಬದಲ್ಲಿ ಕಾಣಬಹುದು. ಕೇಂದ್ರ ಸರಕಾರದ ತೆರಿಗೆಯಲ್ಲಿ ಹಿಂದೂ ಅವಿಭಾಜ್ಯ ಕುಟುಂಬದಡಿಯಲ್ಲಿ (HUF) ತೆರಿಗೆ ವಿನಾಯಿತಿಯು ಈಗಲೂ ಇದೆ.

ಹಳ್ಳಿ- ನಗರಗಳಲ್ಲಿನ ಅವಿಭಕ್ತ ಕುಟುಂಬಗಳ ಮಧ್ಯೆ ಇರುವ ಗೋಡೆಯನ್ನು ಮನುಷ್ಯ ತನ್ನ ಅಹಂವಿಕೆಯನ್ನು ತೊರೆದು ಹೊಡೆದು ಹಾಕಿ ‘ವಸುದೈವ ಕುಟುಂಬಂ’ ಎಂದು ಪರಮಾತ್ಮನ ಕೃಪೆಯಲ್ಲಿ ಬಾಳಿದರೆ ಎಷ್ಟು ಚೆನ್ನ.


  • ಕು ಶಿ ಚಂದ್ರಶೇಖರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW