ಕನ್ನಡಕೊಬ್ಬನೇ ಕರಾಟೆ ಕಿಂಗ್‌ ಶಂಕರ ನಾಗ್

ಕನ್ನಡ ಚಿತ್ರರಂಗದಲ್ಲಿ ಎಂದು ಮರೆಯಲಾಗದ ನಿರ್ದೇಶಕ, ನಟನೆಂದರೆ ಅದು ಶಂಕರ ನಾಗ್. ಇಂದು ಅವರ ೬೬ ನೇಯ ವರ್ಷದ ಹುಟ್ಟುಹಬ್ಬ. ಅವರ ಬಗ್ಗೆ ಇನ್ನಷ್ಟು ಸ್ವಾರಸ್ಯಕರ ವಿಚಾರಗಳನ್ನು ಲೇಖನ್ ನಾಗರಾಜ್ ಅವರು ಈ ಲೇಖನದ ಮೂಲಕ ಹಂಚಿಕೊಂಡಿದ್ದಾರೆ.

ಇಡೀ ಭಾರತ ಚಿತ್ರರಂಗವೇ ತನ್ನತ್ತ ನೋಡುವಂತೆ ಮಾಡಿದಂತಹ ಅದ್ಭುತ ನಿರ್ದೇಶಕ, ನೂರಾರು ಜನಪರ ಯೋಜನೆಗಳನ್ನು ರೂಪಿಸಿದಂತಹ ನಾಯಕ ನಟ, ಇಂದಿಗೂ ಯುವಕರ ಸ್ಪೂರ್ತಿ ಚಿಲುಮೆ, ಮರೆಯಾದರು ಮರೆಯಲಾಗದ ಮಹಾ ಚೇತನ, ಸ್ನೇಹಜೀವಿ ನಮ್ಮ ಶಂಕರ್‌ ನಾಗ್‌ ರವರನ್ನು ಕನ್ನಡಿಗರು ಹೇಗೆ ತಾನೆ ಮರೆಯೋಕೆ ಸಾಧ್ಯ ಹೇಳಿ…? ಶಂಕ್ರಣ್ಣ ನಮ್ಮೊಂದಿಗೆ ಇದ್ದಿದರೆ ಇಂದು ನವೆಂಬರ್‌ ೯ ಅವರಿಗೆ ೬೬ ನೇ ವರ್ಷದ ಜನ್ಮ ದಿನದ ಸಂಭ್ರಮವಾಗುತ್ತಿತ್ತು. ಆದರೆ ಅವರ ವೇಗದ ಜೀವನ ಅವರನ್ನು ನಮ್ಮಿಂದ ದೂರ ಮಾಡಿತು. ಅವರ ಚಿತ್ರಗಳನ್ನು ನೋಡುವ, ಅವರ ಸಾಧನೆ ಕೇಳುವ ಭಾಗ್ಯವಷ್ಟೆ ನಮ್ಮದಾಯಿತು. ಮೂಲತಃ ಶಂಕರನಾಗ್‌ ರವರು ಕಾರವಾರದ, ಹೊನ್ನಾವರದವರಾದರು ಆಡಿದ್ದು, ಬೆಳದಿದ್ದು ಎಲ್ಲಾ ಕಾಸರಗೋಡು ಹಾಗೂ ಶಿರಾಲಿಯ ಆನಂದ ಮಠದಲ್ಲಿ. ತಂದೆ ಸದಾನಂದ ನಾಗರಕಟ್ಟೆಯವರು ಆನಂದ ಆಶ್ರಮದ ಮುಖ್ಯ ಮೇಲ್ವಿಚಾರಕರಾಗಿದ್ದರು. ತಾಯಿ ಆನಂದಿ, ಅಕ್ಕ ಶ್ಯಾಮಲಾ ಹಾಗೂ ಅಣ್ಣ ಅನಂತ ನಾಗ್ ಎಲ್ಲರಿಗೂ ಗೊತ್ತೆ ಇದೆ. ಇಂದಿಗೂ ಚಿರ ಯುವಕರಂತೆ ಇರುವ ಕನ್ನಡದ ಪ್ರತಿಭಾನ್ವಿತ ನಟರು. ಶಂಕರ್‌ ನಾಗ ರವರ ಮೂಲ ಹೆಸರು ಅವಿನಾಶ ಎಂದು. ತಂದೆಯವರು ಮಠದ ಗುರುಗಳಾದಂತಹ ಶಂಕರ ಚಾರ್ಯರ ಮೇಲಿನ ಗೌರವ ಭಾವದಿಂದ ಮಗನಿಗೆ ಶಂಕರ ಎಂಬ ಇನ್ನೊಂದು ಹೆಸರನ್ನು ಇಟ್ಟರು. ಇಂದು ಅದೇ ಹೆಸರು ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಅಚ್ಚಳಿಯದೆ ಉಳಿಯಿತು.

ಶಂಕರ ನಾಗ್‌ ತಮ್ಮ ಬಾಲ್ಯ ಜೀವನವನ್ನು ಮಠದಲ್ಲಿ ಕಳೆದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮುಂಬೈಗೆ ಹೋಗುತ್ತಾರೆ. ಅಲ್ಲಿ ಬ್ಯಾಂಕನಲ್ಲಿ ಸಾಮಾನ್ಯ ಕ್ಲರ್ಕ್‌ ಆಗಿ ಕೆಲಸ ಮಾಡುತ್ತಾ, ಓದನ್ನು ಮುಂದುವರೆಸುತ್ತಾರೆ. ಹೀಗೆ ಇರುವಾಗಲೇ ಅವರನ್ನು ರಂಗಭೂಮಿ ಕೈ ಬೀಸಿ ಕರೆದಿದ್ದು. ಇವರು ಮರಾಠಿ, ಹಿಂದಿ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿರುವಾಗಲೆ ಒಮ್ಮೆ ಗಿರೀಶ್‌ ಕಾರ್ನಾಡರು ಇವರ ಕ್ರಿಯಾಶೀಲತೆ, ಚಟುವಟಿಕೆ,ಅಭಿನಯ ಶೈಲಿ ನೋಡಿ ತಮ್ಮ ಚಿತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಡುತ್ತಾರೆ. ಅಷ್ಟರಲ್ಲಾಗಲೆ ಅಣ್ಣ ಅನಂತ ನಾಗ್‌ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.

ಫೋಟೋ ಕೃಪೆ : Deccan Herald

ನಿರ್ದೇಶನದತ್ತ ತುಂಬಾ ಮನಸ್ಸಿದ್ದ ಶಂಕ್ರಣ್ಣರವರಿಗೆ ಮೊದಲು ಅಭಿನಯಿಸಲು ಮನಸ್ಸಿರಲಿಲ್ಲ. ಒಲ್ಲದ ಮನಸ್ಸಿನಿಂದಲೆ ಗಿರೀಶ್‌ ಕಾರ್ನಾಡರ ಮಾತಿಗೆ ಬೆಲೆ ಕೊಟ್ಟು ೧೯೭೮ ರಲ್ಲಿ ಬಂದ ʼಒಂದಾನೊಂದು ಕಾಲದಲ್ಲಿʼ ಚಿತ್ರದಲ್ಲಿ ʼಗಂಡುಗಲಿʼ ಎಂಬ ಪಾತ್ರವನ್ನು ಮಾಡುತ್ತಾರೆ. ಆ ಚಿತ್ರ ಅಂದಿನ ಕಾಲದಲ್ಲಿಯೆ ರಾಷ್ಟ್ರೀಯ, ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯ್ಕೆಯಾಗಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿತು. ಶಂಕರ ನಾಗ್‌ ರವರಿಗೆ ‘ಉತ್ತಮ ನಟ’ ಎಂಬ ಹೆಸರನ್ನು ತಂದು ಕೊಟ್ಟಿತು. ಕನ್ನಡದ ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆಗೂ ಹೆಸರಾಯಿತು. ಅಲ್ಲಿಂದ ಶಂಕರನಾಗ್‌ ರವರ ಜೀವನದ ದಾರಿಯೆ ಬದಲಾಯಿತು. ಕನ್ನಡಕೊಬ್ಬ ಉತ್ತಮ ನಟನ ಆಗಮನವಾಯಿತು. ಮೊದಲ ಚಿತ್ರದಲ್ಲಿಯೆ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದರು. ನಂತರದ ದಿನಗಳಲ್ಲಿ ಅವರ ಕಿಲಾಡಿ ಅಭಿನಯ, ತುಂಟಾಟದ ಸಂಭಾಷಣೆ, ಮುಗ್ಧ ನಗು, ವಿಭಿನ್ನ ಸಾಹಸಗಳನ್ನು ನೋಡಿದಂತಹ ಕನ್ನಡಿಗರಿಗೆ ಮನೆ ಮಗನಂತೆ ಇಷ್ಟವಾಗಿ ಬಿಟ್ಟರು. ಅವರ ವಿಶಿಷ್ಟ ಶೈಲಿಯ ಸಾಹಸ ಸನ್ನಿವೇಶ ನೋಡಿದ ಅಭಿಮಾನಿಗಳು ʼಕನ್ನಡಕೊಬ್ಬ ಕರಾಟೆ ಕಿಂಗ್‌ʼ ಎಂದೆ ಕರೆದರು.ಅಂದಿನ ಕಾಲದಲ್ಲಿ ಹೀರೊ ಎಂದರೆ ಸೂಟು,ಬೂಟು ಹಾಕಿರಬೇಕು,ಗಡ್ಡ ತೆಗೆದು ಸ್ಮಾರ್ಟ್‌ ಆಗಿರಬೇಕು ಎನ್ನುವುದು ಸಾಮಾನ್ಯವಾಗಿತ್ತು.ಆದರೆ,ಸರಳ ವ್ಯಕ್ತಿತ್ವದ ಶಂಕ್ರಣ್ಣ ಅದಕ್ಕೆ ವಿರೋಧವಾಗಿದ್ದರು.ಗಡ್ಡ ಬಿಟ್ಟು ಸರಳವಾಗಿಯೆ ಅಭಿನಯಿಸಿ ಯುವಕರಿಗೆ ಹೊಸ ಟ್ರೆಂಡ್‌ ಸೃಷ್ಠಿಸಿದ್ದರು. ಗಡ್ಡ ಬಿಟ್ಟವರೆಲ್ಲಾ ಕಳ್ಳರಲ್ಲಾ, ವಿಲನ್‌ ಗಳಲ್ಲಾ,ನಾಯಕರು ಆಗಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದರು.ಇಂದಿನ ಯುವಕರಿಗೂ ಅವರ ಸ್ಟೈಲ್‌ ಸ್ಫೂರ್ತಿಯಾಗಿದೆ.

ಫೋಟೋ ಕೃಪೆ : You Tube

ಅವರ ಚಿತ್ರಗಳು ಯಾವುದು ಆಡಂಬರದ ಚಿತ್ರಗಳಾಗಿರಲಿಲ್ಲ ಬಡ ವರ್ಗದ,ಮಧ್ಯಮ ವರ್ಗದ ಜನ ಜೀವನ,ನೋವು ನಲಿವುಗಳನ್ನು,ಸಮಾಜದಲ್ಲಿನ ನೈಜತೆಯನ್ನು ಜನತೆಗೆ ತೋರಿಸುವಂತಹ ಚಿತ್ರಗಳಾಗಿದ್ದವು.ಅವರ ಚಿತ್ರಗಳು ಬರಿ ಮನರಂಜನೆಗಷ್ಟೆ ಸೀಮಿತವಾಗಿರಲಿಲ್ಲ.ಆಟೋರಾಜ,ಲಾರಿ ಡ್ರೈವರ್‌,ಕುಲಪುತ್ರ,ನರಸಿಂಹ, ನ್ಯಾಯ ಎಲ್ಲಿದೆ,ಮುನಿಯನ ಮಾದರಿ, ಹೊಸಜೀವನ, ಬೆಂಕಿಚೆಂಡು, ಆಕ್ಸಿಡೇಂಟ್‌ ನಂತಹ ಹಲವು ಚಿತ್ರಗಳನ್ನು ನೋಡಿದಾಗ ನಮಗೆ ಗೊತ್ತಾಗುತ್ತದೆ.ಪೋಲೀಸ್‌ ಖದರನಲ್ಲೂ ಅಷ್ಟೆ. ಸಾಂಗ್ಲಿಯಾನ, ಸಿ.ಬಿ.ಐ ಶಂಕರ್‌, ದಿಗ್ವಿಜಯ ಸುಂದರಕಾಂಡದಂತಹ ಚಿತ್ರಗಳಲ್ಲಿ ಅದ್ಭುತವಾಗಿ ಮಿಂಚಿದ್ದರು.ಅಭಿಮಾನಿಗಳಿಗೆ ಹೊಸ ಟ್ರೇಂಡ್‌ ಸೃಷ್ಠಿಸಿದ್ದರು.ಸಾಂಗ್ಲಿಯಾನ ಚಿತ್ರದ ಅವರ ಸ್ಟೈಲನ್ನು ಇಂದಿಗೂ ಯುವಕರು ಮರೆತಿಲ್ಲಾ. ಚಿಕ್ಕ ಮಕ್ಕಳು ಕೂಡ ಶಾಲಾ ಡ್ರಾಮಾಗಳಲ್ಲಿ ಅವರ ಸ್ಟೈಲನ್ನು ಸೊಗಸಾಗಿ ಮಾಡುತ್ತಾರೆ. ಅವರ ಬಗ್ಗೆ ಓದಿದಾಗ,ಅವರೊಂದಿಗೆ ಕೆಲಸ ಮಾಡಿದಂತಹ ತಂತ್ರಜ್ಞರ ಮಾತುಗಳನ್ನು ಕೇಳಿದಾಗ ಶಂಕರ ನಾಗ್‌ ಪುಸ್ತಕ ಮತ್ತು ಸಮಯಕ್ಕೆ ಹೆಚ್ಚು ಬೆಲೆ ಕೊಡುತ್ತಿದ್ದರು.ತಮಗೆ ಸಿಕ್ಕ ಅಲ್ಪ ಸಮಯದಲ್ಲಿಯೆ ಏನಾದರು ಹೊಸ ಪ್ರಯೋಗಾತ್ಮಕ ಯೋಜನೆಗಳ ಬಗ್ಗೆ,ಯೋಚನೆಯಲ್ಲಿ ತೊಡಗಿರುತ್ತಿದ್ದರಂತೆ.ಡಾ.ರಾಜ್‌ ಕುಮಾರರವರೊಂದಿಗೆ ಅವರೆ ನಿರ್ದೇಶನ ಮಾಡಿದಂತಹ ಸಮುದ್ರದ ಆಳದಲ್ಲಿ ಚಿತ್ರೀಕರಿಸಿದಂತಹ ಮೊದಲ ಚಿತ್ರ ʼಒಂದು ಮುತ್ತಿನ ಕಥೆʼ ಒಂದು ಅದ್ಭುತ ಪ್ರಯೋಗಾತ್ಮಕ ಚಿತ್ರವಾಗಿತ್ತು.ಇಡೀ ಭಾರತ ಚಿತ್ರರಂಗವೆ ತನ್ನತ್ತ ನೋಡುವಂತೆ ಮಾಡಿತು.ಆದರೆ,ಚಿತ್ರ ಅಷ್ಟೊಂದು ಯಶಶ್ವಿಯಾಗಲಿಲ್ಲ.ಮದ್ಯಪಾನ ಮಾಡಿ ವಾಹನ ಚಾಲನೆ ಎಷ್ಟೊಂದು ಅಪಾಯ ಎನ್ನುವುದನ್ನು ೧೯೮೪ ರಲ್ಲಿಯೆ ʼಆಕ್ಸಿಡೇಂಟ್‌ʼ ಚಿತ್ರದ ಮೂಲಕ ತೋರಿಸಿದ್ದರು. ಇದು ಪ್ರಶಸ್ತಿಯನ್ನು ಪಡೆಯಿತು, ಯಶಶ್ವಿಯೂ ಆಯಿತು. ಸೋಲು, ಗೆಲುವಿನ ಬಗ್ಗೆ ಅವರು ಯೋಚಿಸುತ್ತಿರಲಿಲ್ಲವಂತೆ, ಮಾಡೋ ಕೆಲಸವನ್ನು ಯಾವತ್ತೂ ನಿಲ್ಲಿಸುತ್ತಿರಲಿಲ್ಲವಂತೆ.ಅದು ಅವರ ವೃತ್ತಿಧರ್ಮವಾಗಿತ್ತು.

ಫೋಟೋ ಕೃಪೆ : Swarajya  (ಮಾಲ್ಗುಡಿ ಡೇಸ್ ಧಾರಾವಾಹಿಯ ಒಂದು ದೃಶ್ಯ)

‘ಮಾಲ್ಗುಡಿ ಡೇಸ್’ ಎ೦ಬ ಧಾರವಾಹಿಯನ್ನು ಸಹ ನಿರ್ದೆಶನ ಮಾಡಿದ್ದರು. ಅದು ಕೂಡ ತು೦ಬಾ ಹೆಸರುವಾಸಿಯಾಗಿತ್ತು.ಇಂದು ಎಷ್ಟೋ ನಿರ್ದೇಶಕರು, ನಟರು ಚಿತ್ರರಂಗದಲ್ಲಿ ಬರಬಹುದು. ಆದರೆ ಶ೦ಕರ ನಾಗ್ ರವರಲ್ಲಿದ್ದ ಕ್ರೀಯಾ ಶೀಲತೆ, ಕ್ರಿಯಾತ್ಮಕ ಕಲ್ಪನೆಗಳು ಇಂದು ಇಲ್ಲಾ. ಕಥೆಯಲ್ಲು ಹಿಡಿತವಿಲ್ಲಾ. ಯಾಕೆಂದರೆ ಅಂದಿನವರಲ್ಲಿ ಓದುವ ಅಭ್ಯಾಸ ಅಗಾಧವಾಗಿತ್ತು. ಆದರೆ ಇಂದು ನಮ್ಮಲ್ಲಿ ಅದು ಅಲ್ಪವಾಗಿದೆ. ಇಷ್ಟೆ ಅಲ್ಲದೆ ಅವರ ನಿಜ ಜೀವನದ ವ್ಯಕ್ತಿತ್ವ ಕೂಡ ತುಂಬಾ ಸ್ವಾಭಾವಿಕ, ಸರಳವಾಗಿತ್ತಂತೆ ಅವರ ಕಾರ್ಯ ಕ್ಷಮತೆಗಳನ್ನು ತಿಳಿದಾಗ ನಮಗೆ ಗೊತ್ತಾಗುತ್ತದೆ. ಅವರು ಎಷ್ಟೊಂದು ಸರಳ, ಸ್ನೇಹಿ ಜೀವಿಯಾಗಿದ್ದರು ಎನ್ನುವುದು. ಅಂದಿನ ಎವರ್‌ ಗ್ರೀನ್‌ ನಟರಾದಂತಹ ಅಣ್ಣಾವ್ರು, ವಿಷ್ಣುದಾದ, ಅಂಬರೀಶ್, ಪ್ರಭಾಕರ್‌, ದೇವರಾಜ್‌ ಎಲ್ಲರೊಂದಿಗೂ ಸಹೋದರನಂತೆಯೆ ಬಾಂಧವ್ಯದಿಂದ ಇರುತ್ತಿದ್ದರಂತೆ.

ಅಂದಿನ ಕಾಲದಲ್ಲಿ ಎಲ್ಲಾ ನಟರುಗಳು ಹೆಚ್ಚಾಗಿ ಸಹೋದರತ್ವದ ಭಾವನೆಯಿಂದಲೆ ಇರುತ್ತಿದ್ದರು.ಇಂದಿನವರ ಥರ ಕಚ್ಚಾಟ,ಹುಚ್ಚಾಟ ಅಂದಿನವರಲ್ಲಿರಲಿಲ್ಲ. ಸಣ್ಣ ಸಣ್ಣ ವಿಷಯಕ್ಕೆ ಸಣ್ಣತನದಿಂದ ದೀರ್ಘ ಹಗೆ ಸಾಧಿಸುವ ಗುಣಗಳು ಅಂದಿನ ನಾಯಕನಟರಲ್ಲಿರಲಿಲ್ಲ. ಯಾಕೆಂದರೆ ಒಬ್ಬ ನಿಜವಾದ ನಾಯಕನ ಗುಣಗಳು ಏನೆಂಬುದನ್ನು ಅವರುಗಳು ಅರಿತಿದ್ದರು. ಅಭಿಮಾನಿಗಳಿಗೆ, ನಾಡು, ನುಡಿಗೆ ಬೆಲೆ ಕೊಡುವ ಭಾವನೆ ಅವರಲ್ಲಿತ್ತು. ಆದರೆ ಇಂದು ಅದು ಇಲ್ಲವಾಗಿದೆ.

ಫೋಟೋ ಕೃಪೆ : Deccan Herald

ನವೆಂಬರ್‌ ತಿಂಗಳೆಂದರೆ ಆಟೋಚಾಲಕರಿಗೆ, ಡ್ರೈವರ್‌ ಗಳಿಗೆ ಹಬ್ಬದ ವಾತವರಣವೆಂದೆ ಹೇಳಬಹುದು. ಒಂದೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮವಾದರೆ, ಇನ್ನೊಂದೆಡೆ ತಮ್ಮ ಆಟೋರಾಜನ ಜನ್ಮ ದಿನದ ಸಡಗರ ಕೂಡ ಹೌದು. ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಆಟೋಗಳ ಮೇಲೆ ಶಂಕ್ರಣ್ಣನ ಅಲಂಕೃತ ಫೋಟೊ ಹಾಗೂ ಕನ್ನಡದ ಭಾವುಟ ರಾರಾಜಿಸುವುದನ್ನು ನೋಡುವುದೇ ಒಂಥರಾ ಖುಷಿಯಾಗುತ್ತದೆ.

ತನ್ನನ್ನು ಹರಸಿ, ಪ್ರೀತಿಸಿ ಇಷ್ಟೊಂದು ಎತ್ತರಕ್ಕೆ ಬೆಳಿಸಿದ ಕನ್ನಡಿಗರಿಗೆ ಏನಾದರು ಒಳ್ಳೇದನ್ನು ಮಾಡಬೇಕು ಎನ್ನುವುದು ಶಂಕ್ರಣ್ಣರವರ ಮಹಾದಾಸೆಯಾಗಿತ್ತಂತೆ. ಅದಕ್ಕೆ ಬರಿ ಚಿತ್ರರಂಗದಲ್ಲಷ್ಟೆ ಅಲ್ಲ, ನಿಸ್ವಾರ್ಥವಾಗಿ ಸಾಮಾಜಿಕ ಕೆಲಸಗಳಲ್ಲು ತಮ್ಮ ಸಮಯವನ್ನು ತೊಡಗಿಸಿಕೊಂಡಿದ್ದರು. ಹೊಸ ಹೊಸ ಯೋಜನೆಗಳನ್ನು ರೂಪಿಸಿದ್ದರು. ಕಡಿಮೆ ಖರ್ಚಿನಲ್ಲಿ ಬಡವರಿಗೆ ಇಟ್ಟಿಗೆ ಮನೆ, ಪ್ರತಿ ತಾಲೂಕಿಗೊಂದು ಬಡವರಗಾಗಿ ಸುಸಜ್ಜಿತ (Multi speciality) ಆಸ್ಪತ್ರೆ, ಬೆಂಗಳೂರಿನಲ್ಲಿ ಮೆಟ್ರೋ ಯೋಜನೆ, ಶಾಲಾ ಮಕ್ಕಳಿಗಾಗಿ ಬೇಂಚ್‌ ವ್ಯವಸ್ಥೆ, ಚಾಮುಂಡಿ ಬೆಟ್ಟಕ್ಕೆ ರೋಪ್‌ ವೇ, ಇಂತಹ ಎಷ್ಟೊ ಯೋಜನೆಗಳ ಚಿತ್ರಣವನ್ನು ಅಂದಿನ ಮುಖ್ಯಮಂತ್ರಿಗಳಾದಂತಹ ರಾಮಕೃಷ್ಣ ಹೆಗಡೆಯವರಿಗೆ ಒಪ್ಪಿಸಿದರಂತೆ ಕೆಲವು ಕೆಲಸಗಳನ್ನು ಕೂಡ ಪ್ರಾರಂಭಿಸಿದ್ದರಂತೆ. ಚಿತ್ರರಂಗದಲ್ಲಿನ ಡಬ್ಬಿಂಗ್‌ ಸಮಸ್ಯೆ ಬಗೆ ಹರಿಸಲು ತಾವೆ ಸ್ವಂತ ಸಂಕೇತ್‌ ಎಂಬ ಆಡಿಯೋ ಮತ್ತು ಡಬ್ಬಿಂಗ್ ಸ್ಟೂಡಿಯೋವನ್ನು ಸಹ ತೆರೆದಿದ್ದರು.

ಫೋಟೋ ಕೃಪೆ : Twitter (ಶಂಕರ ನಾಗ್‌ ಮತ್ತು ಅರುಂಧತಿ ನಾಗ್)‌

೧೯೮೮ ರಲ್ಲಿ ಬಡವರಿಗಾಗಿ ಅವರ ಯೋಚನೆಯಲ್ಲಿ ನಿರ್ಮಿಸಿದಂತಹ ʼಲೋಕಾಸ್ಟಿಂಗ್‌ ಥರ್ಮೋಕೋಲ್‌ ಶೀಟ್‌ʼ ಮನೆಗಳನ್ನು ಇಂದಿಗೂ ಬೆಂಗಳೂರಿನ ಯಲಹಂಕದಲ್ಲಿ ನೋಡಬಹುದು. ಅದರಲ್ಲಿ ಈಗಲೂ ಜನ ವಾಸಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಖ್ಯಾತಿ ಗಳಿಸುತ್ತಿದ್ದ ಹಾಗೆ ತನ್ನನ್ನು ಬೆಳೆಸಿದ ಜನಕ್ಕಾಗಿ ಒಳಿತನ್ನು ಮಾಡಬೇಕು ಎನ್ನುವ ಗುಣ ಅಪರೂಪದಲ್ಲಿ ಅಪರೂಪ ಎಂದೆ ಹೇಳಬಹುದು. ಅಂತಹ ಅಪರೂಪದ ಗುಣದ ವ್ಯಕ್ತಿಯಾಗಿದ್ದರು ಶಂಕ್ರಣ್ಣ. ಸಂದರ್ಶನವೊಂದರಲ್ಲಿ ಅವರ ಆಪ್ತಮಿತ್ರ ರಮೇಶ್‌ ಭಟ್‌ ಹೇಳುತ್ತಿದ್ದರು. ಅವರು ಎಷ್ಟೊಂದು ಸರಳ ವ್ಯಕ್ತಿಯಾಗಿದ್ದರೆಂದರೆ, ನಾಯಕನಾಗಿ,ನಿರ್ದೆಶಕನಾಗಿ ಅಷ್ಟೊಂದು ಪ್ರಖ್ಯಾತಿ ಗಳಿಸಿದ್ದರು ಕೂಡ ತಮ್ಮ ಕಾರು ಕೆಟ್ಟು ಹೋದರೆ ಆಟೋ ದಲ್ಲಿ ಬರುತ್ತಿದ್ದರಂತೆ, ಯಾವತ್ತು ತಮ್ಮ ಸಹಾಯಕರ ಹತ್ತಿರ ಕಾಲಿಗೆ ಶೂ ಹಾಕಿಸಿಕೊಳ್ಳುತ್ತಿರಲಿಲ್ಲವಂತೆ, ತಮ್ಮ ಕೆಲಸವನ್ನು ಎಂದು ಬೇರೆಯವರ ಮೇಲೆ ಹೊಣೆ ಮಾಡುತ್ತಿರಲಿಲ್ಲವಂತೆ. ಯಾವುದೇ ನಿರ್ಮಾಪಕರ ಹತ್ರಾನು ಎಂದು ಮುನಿಸಿಕೊಂಡವರಲ್ಲ, ನಿರ್ದೇಶಕರಿಂದ ಹಿಡಿದು ಸೆಟ್‌ ಬಾಯ್‌ ಹುಡುಗರೊಂದಿಗೆ ತುಂಬಾ ಆತ್ಮೀಯತೆಯಿಂದ ಇರುತ್ತಿದ್ದರಂತೆ.

ಫೋಟೋ ಕೃಪೆ : Face Book  (ಶಂಕರ್ ನಾಗ್ ಆಕ್ಸಿಡೆಂಟ್ ಆದ ಕಾರ್)

ದುರಾದೃಷ್ಟವೆಂದರೆ ಒಮ್ಮೆ ʼಸುಂದರ ಕಾಂಡʼ ಚಿತ್ರದ ಕೊನೆಯ ಭಾಗದ ಚಿತ್ರೀಕರಣವನ್ನು ಮುಗಿಸಿ, ತಮ್ಮ ಗುರುಗಳಾದಂತಹ ಗಿರೀಶ್‌ ಕಾರ್ನಾಡರ ʼಜೋಕುಮಾರ ಸ್ವಾಮಿʼ ಚಿತ್ರದ ಮಹೂರ್ತಕ್ಕೆಂದು, ೩೦ ಸೆಪ್ಟಂಬರ್‌ ೧೯೯೦ ರಂದು ಧಾರವಾಡಕ್ಕೆ ತಮ್ಮ ಹೆಂಡತಿ, ಮಗಳು ಹಾಗೂ ಕಾರ್‌ ಡ್ರೈವರೊಂದಿಗೆ ಹೋಗುತ್ತಿರುವಾಗ ಬೆಳಿಗಿನ ಜಾವ ಸುಮಾರು ೩ ಗಂಟೆ ಅಷ್ಟು ಹೊತ್ತಿಗೆ ಇವರ ಕಾರು ನಿಂತಿದ್ದ ಲಾರಿಗೆ ಗುದ್ದಿದ ಪರಿಣಾಮ ಶಂಕರನಾಗ್‌ ಹಾಗೂ ಡ್ರೈವರ್‌ ಸ್ಥಳದಲ್ಲೆ ಬಾರದ ಲೋಕಕ್ಕೆ ಎಲ್ಲರನ್ನು ಬಿಟ್ಟು ಹೋಗುತ್ತಾರೆ.ಗಂಭೀರ ಸ್ಥಿತಿಯಲ್ಲಿದ್ದ ಹೆಂಡತಿ , ಮಗಳು ಉಳಿಯುತ್ತಾರೆ.ಮಾರನೆ ದಿನ ಈ ಸುದ್ದಿ ಎಲ್ಲಡೆ ಗೊತ್ತಾಗುತ್ತಿದಂತೆ ಕನ್ನಡಿಗರಿಗೆ ನಂಬಲು ಅಸಾಧ್ಯವಾಗುತ್ತದೆ.ಇಂದಿಗೂ ಅವರನ್ನು ಪರದೆ ಮೇಲೆ ನೋಡಿದ ನಮಗೆ ಅವರಿಲ್ಲ ಎಂದು ಹೇಳಲು ತುಂಬಾ ನೋವಾಗುತ್ತದೆ. ತಮ್ಮ ಜೀವನದ ಅಲ್ಪ ಸಮಯದಲ್ಲೆ ಅಂದರೆ 35 ವರ್ಷದಲ್ಲಿ ಅಪಾರ ಸಾಧನೆ ಮಾಡಿದವರು ಶಂಕ್ರಣ್ಣ. ಕೇವಲ ೧೨ ವರ್ಷಗಳಲ್ಲಿ ೯೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಾಗಿ ಅಭಿನಯ,ಜೊತೆಗೆ ನಿರ್ದೇಶನ, ಬರಹಗಾರರಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಅದರೊಂದಿಗೆ ನೂರೆಂಟು ಯೋಜನೆಗಳ ಚಿತ್ರಣ. ನಿತ್ಯ ೪ ರಿಂದ ೫ ಗಂಟೆಗಳ ಕಾಲ ಮಾತ್ರ ನಿದ್ರಿಸುತ್ತಿದ್ದರಂತೆ ಉಳಿದ ಸಮಯವನ್ನು ತಮ್ಮ ಕೆಲಸಕ್ಕಾಗಿಯೆ ಮೀಸಲಿಡುತ್ತಿದ್ದರಂತೆ.

ಫೋಟೋ ಕೃಪೆ : Deccan Herald

ಅವರು ಕನ್ನಡಿಗರಿಂದ ದೂರಾದ ನಂತರ ಅವರ ಕಲ್ಪನೆ, ಆಲೋಚನೆ, ಯೋಜನೆಗಳು ಕೂಡ ಅವರೊಂದಿಗೆ ಹೋದವು. ರಾಜಕೀಯ ನಾಯಕರು, ಸರ್ಕಾರ ಕೂಡ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಶಂಕರ ನಾಗ್‌ ರವರ ಮಹಾದಾಸೆಯ ಮೆಟ್ರೋ ಕನಸು ಇಂದು ನನಸಾದರು ಒಂದೆ ಒಂದು ಮೆಟ್ರೊ ಸ್ಟೇಶನ್‌ ಗೆ ಅವರ ಹೆಸರನ್ನು ಇಡಲು ಸರ್ಕಾರ ಯೋಚನೆ ಮಾಡುತ್ತಿದೆಯೇ?. ಅಭಿಮಾನಿಗಳ ಮಾತಿಗೆ ಬೆಲೆಯೆ ಇಲ್ಲಾವಾಗಿದೆ. ಹೊರಗಿನವರ ಯಾರದೋ ಹೆಸರನ್ನು ಇಡುವ ಸರ್ಕಾರ ನಮ್ಮ ಕನ್ನಡಿಗರ, ಸಾಧಕರ ಹೆಸರನ್ನು ಮರೆತಿದೆ.

ಫೋಟೋ ಕೃಪೆ : LLB

ಶಂಕರ ನಾಗ್‌ ರವರ ನೆನಪಿಗಾಗಿ ಬೆಂಗಳೂರಿನ ಜೆ.ಪಿ ನಗರದಲ್ಲಿ ʼರಂಗಶಂಕರʼ ಎಂಬ ನಾಟಕ ಮಂದಿರವನ್ನು ಮಡದಿ ಅರುಂಧತಿ ನಾಗ್‌ ರವರು ನಡೆಸಿಕೊಂಡು ಹೋಗುತ್ತಿದ್ದಾರೆ. ಇಲ್ಲಿ ದೇಶ ವಿದೇಶಗಳಿಂದಲು ಬಂದು ನಾಟಕಗಳನ್ನು ಮಾಡುತ್ತಾರೆ. ಎಲ್ಲಾ ಭಾಷೆಯ ಅದ್ಭುತ ನಾಟಕಗಳನ್ನು ಇಲ್ಲಿ ನೋಡಬಹುದು. ಇನ್ನು ಇವರ ಮಗಳು ಕಾವ್ಯನಾಗ್‌ ರಂಗಭೂಮಿಯಿಂದ ದೂರವೆ ಇದ್ದಾರೆ.ʼಕೋಕೊನೆಸ್‌ʼ ಎಂಬ ಸಂಸ್ಥೆಯ ಮೂಲಕ ಶುದ್ಧ ತೆಂಗಿನ ಎಣ್ಣೆಯನ್ನು ತಾವೇ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇಂದು ನವೆಂಬರ್‌ ೯ ನ್ನು ಶಂಕ್ರಣ್ಣನ ಸವಿನೆನಪಿಗಾಗಿ ಅಭಿಮಾನಿಗಳು ಆಟೋ ಚಾಲಕರ ದಿನವನ್ನಾಗಿ ಆಚರಿಸುತ್ತಾರೆ. ಅವರ ಹುಟ್ಟೂರಾದ ಹೊನ್ನಾವರ, ಶಿರಾಲಿಯಲ್ಲಿ ಶಂಕರ ನಾಗ್‌ ರವರ ಮನೆ ಹಾಗೂ ಆನಂದ ಮಠದ ಆಶ್ರಮವನ್ನು ನೋಡಬಹುದು. ಅವರ ಮನೆತನದ ʼವಂಶವೃಕ್ಷʼ ಪಟವನ್ನು ಸಹ ಆಶ್ರಮದಲ್ಲಿ ಇಂದಿಗೂ ನೋಡಬಹುದು. ಅವರ ಕುಟುಂಬದ ಸದಸ್ಯರುಗಳು ಅದನ್ನು ನೋಡಿಕೊಳ್ಳುತ್ತಿದ್ದಾರೆ.


  • ಲೇಖನ್ ನಾಗರಾಜ (ಹರಡಸೆ ಹೊನ್ನಾವರ)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW