ಯೌವನದ ಹಂಗಾಮಾ ಹೇಗಿರುತ್ತೆ? ಓದಿ…

ಬಾಲ್ಯ, ಯೌವನ, ಜೀವನ, ವಾನಪ್ರಸ್ತ ಜೀವನದ ಎಲ್ಲ ಹಂತಗಳನ್ನು ಮನುಷ್ಯ ದಾಟಬೇಕು. ಅದರಲ್ಲಿ ಯೌವನದ ಹಂಗಾಮಾ ಹೇಗಿರುತ್ತೆ?ತುಂಟಾಟದ ಬದುಕಿನ ತುಂಟ ಲೇಖನ ಹೂಲಿಶೇಖರ್ ಅವರ ಲೇಖನಿಯಲ್ಲಿ ಮೂಡಿ ಬಂದಿದೆ. ಓದಿ ಆನಂದಿಸಿ.

ಸುಳ್ಳೇ ಸುಳ್ಳು ಎಲ್ಲಾ ನೀವು ಏನರ ಅನ್ರಿ. ಒಬ್ಬೊಬ್ಬ ಮನಿಶಾಗ ಒಂದೊಂದು ಕಾಲ ಅಂತ ಇರತೈತಿ. ಬಾಲ್ಯ, ಯೌವನ, ಜೀವನ, ವಾನಪ್ರಸ್ತ ಅಂತ. ಬಾಲ್ಯ ಅಂದ್ರ ಚಿಗುರೂ ವಯಸ್ಸು. ಮೈ ಗಟ್ಟಿ ಇರೂದಿಲ್ಲ. ಎಳೇ ಎಲಬು, ಎಳೇ ಕೈಕಾಲು, ಎಳೇ ಮಾರಿ-ಮಸಡಿ, ಎತ್ತಾಗ ನೋಡಿದ್ರೂ ಮನಿಶಾನ ಬಾಡೀ ಎಳೇದಿರತೈತಿ. ಏನ್‌ ಬೆಳೆದ್ರೂ ಹನ್ನೆರಡರೊಳಗನ. ಹಿಂಗಂತ ಹಿಂದಿನ ಹಿರಿಯಾರು ಗೆರೀ ಕೊರದು ಹೇಳ್ಯಾರ. ಹನ್ನೆರಡು ವಯಸ್ಸಿನ ತನಕ ಬಾಲ್ಯ, ಈ ವಯಸ್ಸಿನಾಗ ಬಾರಾ ಖೂನ ಮಾಫಿ ಅಂತಾರಲ್ಲ. ಹಂಗದು. ಏನ್‌ ಮಾಡಿದ್ರೂನೂ…ಅಡ್ಡೀಯಿಲ್ಲ. ಹುಡುಗ ಅದಾನು ಬಿಡು. ತಿಳೀಗೇಡಿ ಅಂತಾರು. ಹೌದಲ್ರೀ? .

ಇನ್ನ ಹನ್ನೆರಡರಿಂದ ಹದಿನೆಂಟರ ತನಕ ಯೌವನ ಕಾಲ. ಅಬಬ…ಕೇಳಬ್ಯಾಡ್ರಿ ಮನಿಶಾನ ಮನಸ್ಸು ಮಂಗ್ಯಾ ಆಗೂದ ಈ ವಯಸ್ಸಿನಾಗ. ಹುಡುಗಾದ್ರೂ ಇರಲಿ. ಹುಡಿಗಿಯಾದ್ರೂ ಇರಲಿ. ಹರೇಕ ಬಂದ್ರ ಮುಗೀತು. ಹಳೇ ಕತ್ತೇನೂ ಛಂದ ಕಾಣತೈತಿ ಅಂತಾರಲ. ಹಂಗದು. ನೆಲಾನ ಕಾಣೂದಿಲ್ಲ ಈ ವಯಸ್ಸಿನಾಗ. ಮೀಸಿ ಬಂದಾಂವಗ ದೇಶ ಕಾಣೂದಿಲ್ಲ. ಅದು ಬಂದಾಕೀಗೆ ನೆಲಾ ಕಾಣೂದಿಲ್ಲ ಅಂತ ಗಾದೆಮಾತು ಹುಟ್ಟಿದ್ದು ಯಾತಕ್ಕಂತೀರಿ? ಹರೇಕ ಬಂದ್ರ ಸಾಕು ಹುಡುಗಗ ಅಪ್ಪ ಕಾಣೂದಿಲ್ಲ. ಅವ್ವ ಕಾಣೂದಿಲ್ಲ. ಯಾಂವಂದೇನ್‌… ಯಾವಾಕೀದೇನ್‌ ಎಂತ ಢುರುಕೀ ಹೊಡಕೋತ ಹೋಗೂ ವಯಸ್ಸು. ಆನಿ ಹ್ವಾದದ್ದನಽ ದಾರಿ ಆಗ. ಸುಳ್ಳೇನ್ರಿ ಮತ್ತ? ಈ ವಯಸ್ಸಿನಾಗ ವಾಸನೀ ಎಣ್ಣೀ ಹಚ್ಚೂದೇನಾ…ಗಡ್ಡಾ-ಮೀಸೀ ತೀಡೂದೇನಾ…ರೇಶ್ಮೀ ಅಂಗೀ ಹಕ್ಕೊಂಡು ‘ಪ್ಯಾರೀ… ಪ್ಯಾರೀ …’ ಅಂತ ಹಾಡೂದೇನಾ…ಕೇಳಬ್ಯಾಡ್‌ ತಗೀರಿ. ಯಾರಿಗೂ ಇಲ್ಲದ ಹರೇವು ಇಂವಗಽ ಬಂದೈತೇನೋ ಅನ್ನೂ ಹಂಗ ಮಾರೀ ಮಾಡಿರತಾನು. ಊರಾಗ ತಾನೊಬ್ಬನ ಕಾಮಣ್ಣ ಅನ್ನೂ ಹಂಗ ಅಡ್ಡಡ್ಡ ಸೆಟದು ಹೋಗತಿರತಾನು. ಹೌದಂತೀರೋ ಅಲ್ಲಂತೀರೋ?

ಯೌವನ ಅನ್ನೂದು ಹೋಳೀ ಹುಣ್ಣವೀ ಬಣ್ಣ ಇದ್ದಾಂಗ. ವಯಸ್ಸು ಬಲಕೋತ ಹ್ವಾದಂಗ ಹುಡುಗ-ಹುಡುಗೀ ಲಗ್ನದ ಹಂಗಾಮಕ್ಕ ಬರತಾರು. ಅಂದ್ರ ಮನಿಶಾ ಅನ್ನೂ ಪ್ರಾಣಿ ಸಂಸಾರ ಸುರೂ ಮಾಡೂ ಕಾಲ ಅದು. ನಮ್ಮ-ನಿಮ್ಮಂಥಾ ತಿಳಿದಾವ್ರು ಅದಕ್ಕ ಜೀವನಾ ಅಂತ ಕರೀತೇವಿ ಹೌದಲ್ರೀ.

ಈ ವಯಸ್ಸಿನಾಗ ಲಗ್ನದ ನೆಪಾ ಮಾಡ್ಕೊಂಡು ಹೊಸಾ ಹೊಸಾ ಹುಡುಗೀ ನೋಡೂದೇನಾ…! ಪ್ರೇಮ ಪತ್ರ ಬರಿಯೂದೇನಾ….! ಛೇ ಛೇ. ಕೇಳಬ್ಯಾಡ್ರಿ. ಮಾಲೂ-ಶಾಪೂ ಸುತ್ತೂದೇನಾ… ಕದ್ದು ಉಂಡೀ ತಿನಿಸೂದೇನಾ…! ಛೇ! ತಿನಬಾರದ್ದೆಲ್ಲಾ ತಿಂತಾರ ನೋಡ್ರಿ ಇಬ್ರೂ. ಸತಿ – ಪಾರ್ವತಿ ಸಿನಿಮಾ ಅಂತೂ ಈಗ ಬರೂದಿಲ್ಲ ಬಿಡ್ರಿ. ಅದ಼ಽ ಡಬ್ಬಾ-ಡಿಸ್ಕೋ ಸಿನಿಮಾಗೂಳು. ಅಲ್ಲಾಡ್ಸೂ…ಅಲ್ಲಾಡ್ಸೂ…ಅಂತ ಇಬ್ರೂ ಸಿನಿಮಾ ಹಾಡು ಹಾಡಕೋತ ಪಾನೀಪುರೀ ತಿನ್ನೂದೇನಾ! ನಾ ನಿನ್ನ ಮರೆಯಲಾರೆ ಅನ್ನೂದೇನಾ…! ನೀನ ನನ್ನ ಜೀಂವಾ ಅಂತ ತೆಕ್ಕಿ ಬಡದು ಸುಮ್ನ ಅಳೂದೇನಾ…! ಛೇ ಛೇ..! ಯೌವನದ ಹಂಗಾಮಾ
ಕೇಳಬ್ಯಾಡ್ರಿ. ಈ ಹರೇವಾದ್ರೂ ಯಾಕ ಬರತೈತೋ ಅಂತ ಮುದುಕಾ-ಮುದುಕೇರು ಚಿಟಬುರುಸೂದೇನಾ… ಬ್ಯಾಡತಗೀರಿ ಹೇಳೀಕ ಒಲ್ಲೆ.

ಮದುವೀ ಆತು ಅನಕೋರಿ. ಹರೇದ ಕಾವಿನೊಳಗ ಏನ್‌ ಕನಸಾ… ಏನ್‌ ಅರ್ಭಟಾ…! ಕೇಳಬ್ಯಾಡ್‌ ತಗೀರಿ. ಲಗ್ನ ಆಗೂತನಕ ಜೀವ ಒಂದ್‌ ನಮೂನಿ ಸೆಟಗೊಂಡಿರತೈತಿ. ಅದಕೂ ಮದಲ ಬಣ್ಣದ ಕನಸುಗೂಳು ಹಗಲೀ ಹೊತ್ತಿನಾಗೂ ಹಾವಿನ ಹೆಜ್ಜೀ ಹಂಗ ಹರದಾಡತಿರತಾವು. ಲಗ್ನ ಆದದ್ದಽ ತಡಾ. ಸಂಜೀ ಹೊತ್ತೀಗೆ ಪಕಳಿ ಉದುರಿ ಬೀಳೂ ಹೂವಿನಂಗ ಅಕ್ಕಾರು ಈ ಹಂಗಾಮದ ಹುಡುಗೂರು. ಒಂದೊಂದ ಪಕಳಿಗೂಳು ಉದುರಿದಂಗ ಅವರ ಕನಸು, ಧಿಮಾಕು, ಉಕ್ಕೂ ಸೊಕ್ಕು, ಉಳ್ಳಕೋತ ಹೋಗತಾವು.

ಫೋಟೋ ಕೃಪೆ : theculturetrip

ಲಗ್ನ ಆಗೂದ಼ಽ ತಡಾ. ಹುಡುಗೂರಂತೂ ಬಲೀಗೆ ಬಿಟ್ಟ ದ್ಯಾಮವ್ವನ ಕ್ವಾಣ ಆಗತಾರು. .

ಹೇಣ್ತಿ ಬಂದ ದೀಡ್‌ ವರಸಕ್ಕನ ಮಕ್ಕಳ ಸುಗ್ಗಿ ಸುರೂ ಅಕೈತಿ ನೋಡ್ರಿ. ಸರಕಾರದವ್ರು ಸುಮ್ನ ಇದ್ದರ ಬಿಡತಿರಲಿಲ್ಲ. ಪತಪತ ಎಮ್ಮಿ ಸೆಗಣೀ ಹಾಕಿದಾಂಗ ಮಕ್ಕಳು ಭೂಮೀಮ್ಯಾಲ ಉದುರತಿದ್ವು.
ಸಂಸಾರ ಜೀವನ ಏನಂತೀರಿ? ಮಕ್ಕಳಾದರ ಅವಕ್ಕ ಆಸ್ತೀ ಮಾಡೂ ಚಿಂತಿ. ಆಸ್ತೀ ಮಾಡಿದರ ಅದು ಎಲ್ಲಿ ಕೇಡಾಗತೈತೋ ಅನ್ನೂ ಚಿಂತಿ. ಕೇಡಾದರ ಎಲ್ಲಿ ಸಾಯತೀನೋ ಅನ್ನೂ ಚಿಂತಿ. ಹಿಂಗ ‘ಸಂಸಾರ ಜೀವನ-ಮರಣ’ದ ಭಯದೊಳಗ ಒದ್ಯಾಡತಾನು ಮನಿಶಾ. ಆಮ್ಯಾಲ ಎಲ್ಲಾ ಬ್ಯಾಸರಾಗಿ ಸಾಕಪಾ ಈ ಸಂಸಾರ ಅಂತಾನು. ಆಗ ಸುರೂ ಆಗೂದು ‘ವಾನಪ್ರಸ್ಥಾಶ್ರಮ’ ನೋಡ್ರಿ. ಮದಲಿನ ಕಾಲದಾಗ ಮನೀ ಜವಾಬ್ದಾರೀನ ಮಕ್ಕಳಿಗೆ ಬಿಟ್ಟು ಗಂಡಾ ಹೆಂಡ್ತಿ ಗುಡ್ಡದ ವಾರೀ ಹತ್ತಿ ದಟ್ಟಾರಣ್ಯದ ಒಳಗ ಹೋಗತಿದ್ದರಂತ. ಇದ್ದರ ಹುಲೀ ಬಾಯಿ. ಸತ್ತರ ದೇವರ ಪಾದ ಅಂತಿದ್ರಂತ. ಆದರ ಇವತ್ತ ಹಂಗಿಲ್ಲ. ಮುದುಕಾ ಮುದುಕಿ ಒಲ್ಲೆಂದ್ರೂ ಮಗಾ ಸೊಸಿ ಬಿಡೂದಿಲ್ಲ. ವೃದ್ಧಾಶ್ರಮ ಇಲ್ಲಾ ಸರಕಾರೀ ದವಾಖಾನೀಗೆ ಹಾಕಿ ಮೋಕ್ಷಾ ಕೊಡಿಸ್ತಾರು. ನೀ ಬ್ಯಾಡಂದ್ರೂ ಬಿಡೂದಿಲ್ಲ. ದೇವರ ಪಾದ ಕೊಡಿಸೇ ಬಿಡತಾರು. ಮನಿಶಾ ದೇಹಾ ಬಿಟ್ಟ ಮ್ಯಾಲ ಆತ್ಮದ ರೂಪ ಆಗತಾನಂತ.

ಆತ್ಮ ಹೆಂಗಿರತೈತಿ ಅಂತ ನಿಮಗೇನರ ಗೊತ್ತಿದ್ದರ ಹೇಳ್ರಿ ನಮಗ. ಹತ್ತಽ ಹತ್ತು ಸಾಲು ಬರೆದು ಈ ಆಕೃತಿ ಕನ್ನಡ ಮ್ಯಾಗಝಿನ್‌ ಗೆ ಕಳಸ್ರಿ. ಅವನೌವ್ನ. ನಿಮ್ಮ ಆತ್ಮದ ಪಡಿಪಾಟಲಾ ನಾಕ.


  • ಹೂಲಿಶೇಖರ್  (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)

0 0 votes
Article Rating

Leave a Reply

4 Comments
Inline Feedbacks
View all comments
Suresh gs

ಸರ್ ಕಾಳಿ ಕಣಿವೆಯ ಕಥೆ ಮುಂದಿನ ಭಾಗ ಪ್ರಕಟಿಸಿ

Devarajachar

ಹುಲಿ ಶೇಖರ್ ರವರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ

Devarajachar

ಯವ್ವನದ ಹಂಗಾಮ ಮದುವೆಯಾಗುವ ತನಕ

Home
Search
All Articles
Videos
About
4
0
Would love your thoughts, please comment.x
()
x
%d bloggers like this:
Aakruti Kannada

FREE
VIEW