ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ ಮಾನವನಿಂದ ಮಾನವನ ಶೋಷಣೆಯನ್ನು ಸಂಪೂರ್ಣವಾಗಿ ಕೊನೆಗಾಣಿಸಿ ಭೂಮಿಯ ಮೇಲೆ ಮನುಕುಲದ ಹೊಸ ಬದುಕಿನ ಬೀಜಗಳನ್ನು ಬಿತ್ತಿದ ರಷ್ಯಾದ ಮಹಾನ್ ನವೆಂಬರ್ ಕ್ರಾಂತಿ.೧೯೧೭ ರಲ್ಲಿ ಜರುಗಿದ ಆ ಮಹಾನ್ ಸಂಕ್ರಮಣಕ್ಕೆ ಈಗ ೧೦೩ ವರ್ಷಗಳು ತುಂಬಿದೆ…
ಜಗತ್ತಿನಾದ್ಯಂತ ಎಲ್ಲ ದುಡಿಯುವ ಜನ, ಮಧ್ಯಮವರ್ಗದವರು, ಮಹಿಳೆಯರು ಹಾಗೂ ವಿದ್ಯಾರ್ಥಿ- ಯುವ ಜನರು ಹೆಮ್ಮೆಯಿಂದ ಹಾಗೂ ಭರವಸೆಯ ಕಣ್ಣುಗಳಿಂದ ಇತಿಹಾಸವನ್ನು ಮೆಲಕು ಹಾಕುವ ಭರವಸೆಯ ತಿಂಗಳು ಈ ನವೆಂಬರ್. ಅದರಲ್ಲೂ ನವೆಂಬರ್ ೭ ರಿಂದ ೧೭ರ ಆ ಹತ್ತು ದಿನಗಳು, ಮೈ ಮನದಲ್ಲಿ ರೋಮಾಂಚನವನ್ನು ಉಂಟು ಮಾಡುವಂತಹವು. ಹೌದು, ಇಲ್ಲಿ ಹೇಳಹೊರಟಿರುವುದು ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ ಮಾನವನಿಂದ ಮಾನವನ ಶೋಷಣೆಯನ್ನು ಸಂಪೂರ್ಣವಾಗಿ ಕೊನೆಗಾಣಿಸಿ ಭೂಮಿಯ ಮೇಲೆ ಮನುಕುಲದ ಹೊಸ ಬದುಕಿನ ಬೀಜಗಳನ್ನು ಬಿತ್ತಿದ ರಷ್ಯಾದ ಮಹಾನ್ ನವೆಂಬರ್ ಕ್ರಾಂತಿಯ ಕುರಿತು!!! ೧೯೧೭ ರಲ್ಲಿ ಜರುಗಿದ ಆ ಮಹಾನ್ ಸಂಕ್ರಮಣಕ್ಕೆ ಈಗ ೧೦೩ ವರ್ಷಗಳು ತುಂಬಿದೆ…
ಫೋಟೋ ಕೃಪೆ : content.time (ಕಾರ್ಮಿಕ ವರ್ಗದ ಮಹಾನ್ ನಾಯಕ ಲೆನಿನ್ನ)
ದೂರದ ರಷ್ಯಾದಲ್ಲಿ ಘಟಿಸಿದ ಕ್ರಾಂತಿಯನ್ನು ನಾವೇಕೆ ನೆನೆಯಬೇಕು ಮತ್ತು ಜಗತ್ತಿನ ಜನರೇಕೆ ಅದನ್ನು ಮೆಲಕು ಹಾಕಬೇಕು? ಮನುಕುಲದ ಇತಿಹಾಸ ಹಾಗೂ ನಮ್ಮ ದೇಶದ ಮಹಾನ್ ಕ್ರಾಂತಿಕಾರಿ ಪರಂಪರೆಯ ಬೇರುಗಳನ್ನು ಕಳೆದುಕೊಂಡಿರುವ ನಮ್ಮ ಮನಸ್ಸಿನಲ್ಲಿ ಇವು ಸಹಜವಾಗಿ ಮೂಡುವ ಪ್ರಶ್ನೆಗಳು.
ಫೋಟೋ ಕೃಪೆ : People’s World
ಆದರೆ, ರಷ್ಯಾದ ಸಮಾಜವಾದಿ ಕ್ರಾಂತಿಯು ಆ ದೇಶದ ದುಡಿಯುವ ಜನರಿಗಷ್ಟೇ ಅಲ್ಲದೆ, ಜಗತ್ತಿನ ಎಲ್ಲ ಶೋಷಿತ ಜನರ ಕಗ್ಗತ್ತಲಿನ ಬದುಕಿನಲ್ಲಿ ಭರವಸೆಯ ಕಿರಣಗಳನ್ನು ಮೂಡಿಸಿತು. ಜಗತ್ತಿನ ಕಾರ್ಮಿಕ ವರ್ಗದ ಮಹಾನ್ ನಾಯಕ ಲೆನಿನ್ನರ ನೇತೃತ್ವದಲ್ಲಿ ಜರುಗಿದ ಕ್ರಾಂತಿಯು, ಮನುಕುಲವು ಹಿಂದೆಂದೂ ಕಂಡಿರದಂತಹ ಎತ್ತರಕ್ಕೆ ಅಲ್ಲಿನ ನಾಗರೀಕತೆಯನ್ನು ಕೊಂಡೊಯ್ಯಿತ್ತು. ಮೊಟ್ಟಮೊದಲನೆಯದಾಗಿ ಹಸಿವನ್ನು ನಿವಾರಿಸಲಾಯಿತು. ಎಲ್ಲರಿಗೂ ಉದ್ಯೋಗಗಳನ್ನು ಕಲ್ಪಿಸಿ ಬದುಕಿಗೆ ಭದ್ರತೆ ಯನ್ನು ದೊರಕಿಸಲಾಯಿತು. ಹುಟ್ಟುವ ಪ್ರತಿಯೊಂದು ಮಗುವಿನ ಜವಾಬ್ದಾರಿಯನ್ನು ಸರಕಾರವೇ ವಹಿಸಿಕೊಂಡು ಶಿಕ್ಷಣ- ಆರೋಗ್ಯ -ಉದ್ಯೋಗ ಎಲ್ಲದರ ಭದ್ರತೆಯನ್ನು ನೀಡಿ ಘನತೆಯುತ ಬದುಕಿಗೆ ಅವಕಾಶ ಕಲ್ಪಿಸಿತು. ಕ್ರಾಂತಿಗೂ ಮುಂಚೆ ಯೂರೋಪಿನಲ್ಲೇ ಅತ್ಯಂತ ರೋಗಿಷ್ಟ ರಾಷ್ಟ್ರವಾಗಿದ್ದ, ಕೃಷಿ ಪ್ರಧಾನ ರಷ್ಯಾದಲ್ಲಿ ವಿಜ್ಞಾನ-ತಂತ್ರಜ್ಞಾನಗಳು ಮುಕ್ತವಾಗಿ ಬೆಳೆದು ಬೃಹತ್ ಕೈಗಾರಿಕೆಗಳು ಹಾಗೂ ಅಂತರಿಕ್ಷಯಾನದವರೆಗೂ ದಾಪುಗಾಲಿಡಲಾಯಿತು. ಜನರ ಶ್ರಮವನ್ನು ಕನಿಷ್ಠಗೊಳಿಸುವ ಹಲವು ಉಪಕರಣಗಳನ್ನು ಅಲ್ಲಿನ ವಿಜ್ಞಾನಿಗಳು ಅಭಿವೃದ್ಧಿಪಡಿಸಿದರು ಹಾಗೆಯೇ ಹಲವಾರು ರೋಗಗಳಿಗೆ ಅಲ್ಲಿನ ವೈದ್ಯರು ಲಸಿಕೆ, ಚುಚ್ಚುಮದ್ದುಗಳನ್ನು ಕಂಡುಹಿಡಿದರು.
ಫೋಟೋ ಕೃಪೆ : People’s World
ಜಗತ್ತಿನ ಎಲ್ಲೆಡೆ ಆಳ್ವಿಕರ ಬಂಧನಕ್ಕೆ ಸಿಲುಕಿ ನರಳುತ್ತಿದ್ದ ಜನಸಮೂಹಕ್ಕೆ ರಷ್ಯಾದ ಮಹಾನ್ ನವೆಂಬರ್ ಕ್ರಾಂತಿಯು ಸ್ಪೂರ್ತಿಯ ಚಿಲುಮೆಯಾಯಿತು. ಭೂಮಿಯ ಯಾವುದೇ ಮೂಲೆಯಲ್ಲಿ ಬದಲಾವಣೆಯನ್ನು ಬಯಸುವ ಮನಸ್ಸುಗಳಿಗೆ ಲೆನಿನ್ ಆದರ್ಶವಾದರು. ಸಹಜವಾಗಿಯೇ ಸಮಾಜವಾದದ ಈ ಗಾಳಿಯು ಭಾರತದ ಮೇಲೆಯೂ ತನ್ನ ಪ್ರಭಾವವನ್ನು ಬೀರಿತು. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿದ್ದ ಇಲ್ಲಿನ ಹೋರಾಟಗಾರರು, ಅದರಲ್ಲೂ ಕ್ರಾಂತಿಕಾರಿಗಳು ಸಮಾಜವಾದದ ಬಗ್ಗೆ ಆಕರ್ಷಿತರಾದರು.
ಫೋಟೋ ಕೃಪೆ : britannica
ಸ್ವಾತಂತ್ರ್ಯ ಸಂಗ್ರಾಮದ ಧೀರ ಹುತಾತ್ಮ ಭಗತ್ ಸಿಂಗ್, ಸಮಾಜವಾದಿ ಕ್ರಾಂತಿಯೊಂದೇ ನಿಜವಾದ ಸ್ವಾತಂತ್ರ್ಯವನ್ನು ಕಲ್ಪಿಸಲು ಸಾಧ್ಯ ಎಂದು ಸಾರಿ ಹೇಳಿದರು. ಗಲ್ಲಿಗೇರುವ ಕೆಲವೇ ನಿಮಿಷಗಳ ಮುಂಚೆ, ತಮ್ಮ ಬದುಕಿನ ಕೊನೆಯ ಕ್ಷಣಗಳಲ್ಲಿ ಭಗತ್ ಸಿಂಗ್ ಓದುತ್ತಿದ್ದುದು ಮಹಾನ್ ಲೆನಿನ್ನರ ಕುರಿತು! ಸ್ವಾತಂತ್ರ್ಯ ಸಂಗ್ರಾಮದ ರಾಜಿರಹಿತ ಪಂಥದ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ರಂತೂ ಸಮಾಜವಾದದ ಸ್ಥಾಪನೆಯೇ ನಮ್ಮ ಸ್ವಾತಂತ್ರ್ಯ ಗಳಿಕೆಯ ಗುರಿ ಎಂದು ಹೇಳಿದರು. ಎರಡನೇ ಜಾಗತಿಕ ಮಹಾಯುದ್ಧದಲ್ಲಿ, ಕ್ರೂರಿ ಹಿಟ್ಲರನಿಂದ ಮಾನವ ಜನಾಂಗವನ್ನು ರಕ್ಷಿಸಿದ್ದು ಮಹಾನ್ ಸ್ಟಾಲಿನ್ನರ ನೇತೃತ್ವದಲ್ಲಿದ್ದ ರಷ್ಯಾದ ಕೆಂಪು ಸೈನ್ಯ. ಮಾನವ ಜನಾಂಗದ ಇತಿಹಾಸವನ್ನೇ ಬದಲಿಸಿ ರಕ್ತಪಿಪಾಸು ಹಿಟ್ಲರ್ ನ ಫ್ಯಾಸಿವಾದದ ಆಕ್ರಮಣವನ್ನು ಸೋಲಿಸಿ ಜಗತ್ತಿನಾದ್ಯಂತ ಸ್ವಾತಂತ್ರ್ಯಯುಗಕ್ಕೆ ನಾಂದಿ ಹಾಡಿದ ರಷ್ಯಾದ ತ್ಯಾಗ ಅಷ್ಟಿಷ್ಟಲ್ಲ.
ಈ ಯುದ್ಧದಲ್ಲಿ ಜಗತ್ತಿನಾದ್ಯಂತ ಸುಮಾರು ೫ ಕೋಟಿ ಜನರು ಸಾವನ್ನಪ್ಪಿದ್ದರೆ, ರಷ್ಯನ್ನರ ಸಂಖ್ಯೆ ೨ ಕೋಟಿಗೂ ಹೆಚ್ಚು! ಪ್ರತಿಯೊಂದು ಕುಟುಂಬದಲ್ಲಿ ಕನಿಷ್ಠ ಒಬ್ಬರನ್ನಾದರೂ ಯುದ್ಧಕ್ಕೆ ಬಲಿ ನೀಡಿರುವ ಸೋವಿಯತ್ ನಾಡಿನ ಜನರ ತ್ಯಾಗದ ಕುರಿತು ಜಗತ್ತಿನ ಶ್ರೇಷ್ಠ ಕವಿ ಪ್ಯಾಬ್ಲೋ ನರೋಡಾ ಹೇಳಿದ್ದು, “ಮಹಾನ್ ಸೋವಿಯತ್ ನೆಲವೇ, ನಿನ್ನ ಮಕ್ಕಳು ಹರಿಸಿದ ರಕ್ತವನ್ನು ಒಂದು ಕಡೆ ಕೂಡಿಡಲು ಸಾಧ್ಯವಾಗಿದ್ದರೆ ಭೂಮಿಯ ಮೇಲೆ ಇನ್ನೊಂದು ಸಾಗರವೇ ಸೃಷ್ಟಿಯಾಗುತ್ತಿತ್ತು….” ಇದೇ ಯುದ್ಧದ ಸಂದರ್ಭದಲ್ಲಿ, ಮರಣಶಯ್ಯೆಯಲ್ಲಿದ್ದರೂ ಕೂಡಾ ಮಹಾಕವಿ ರವೀಂದ್ರನಾಥ್ ಟಾಗೋರ್ ಪ್ರತಿದಿನವೂ ತಪ್ಪದೇ ವಿಚಾರಿಸುತ್ತಿದ್ದುದು, “ರಷ್ಯಾ ಹೇಗಿದೆ? ಸ್ಟಾಲಿನ್ ಹೇಗಿದ್ದಾರೆ?”.
ಫೋಟೋ ಕೃಪೆ : photo.webindia123.com
ನಮ್ಮ ದೇಶದವರಾದ ಮಹಾನ್ ಸಾಹಿತಿ ಶರತ್ ಚಂದ್ರ ಚಟ್ಟೋಪಾಧ್ಯಾಯ, ಕುವೆಂಪು, ಸುಬ್ರಹ್ಮಣ್ಯ ಭಾರತಿ ಮುಂತಾದ ಮಹಾನ್ ವ್ಯಕ್ತಿಗಳು ರಷ್ಯಾದ ಸಮಾಜವಾದದ ಬಗ್ಗೆ ಅಪಾರ ಭರವಸೆಯನ್ನು ಹೊಂದಿದ್ದರು. ಎರಡನೇ ಮಹಾಯುದ್ಧದ ನಂತರ ಯುರೋಪ್ ಹಾಗೂ ಜಗತ್ತಿನ ಹಲವು ರಾಷ್ಟ್ರಗಳ ಸ್ವಾತಂತ್ರ್ಯ ಚಳುವಳಿಗಳಿಗೆ ರಷ್ಯಾ ಸ್ಪೂರ್ತಿ ನೀಡಿತು. ಅಮೆರಿಕಾ ಹಾಗೂ ಜಪಾನ್ ನಂತಹ ಸಾಮ್ರಾಜ್ಯಶಾಹಿಗಳ ದಬ್ಬಾಳಿಕೆಯಿಂದ ಹಿಂದುಳಿದ ರಾಷ್ಟ್ರಗಳನ್ನು ರಕ್ಷಿಸಿ, ಹಲವು ರೀತಿಯಲ್ಲಿ ರಷ್ಯಾ ಸಹಾಯ ಮಾಡಿತು. ಅಮೆರಿಕ, ಇಂಗ್ಲೆಂಡ್ ಅನ್ನು ಒಳಗೊಂಡಂತೆ ಜಗತ್ತಿನಾದ್ಯಂತ ರಷ್ಯಾದ ಸಾಧನೆಗಳ ಕುರಿತು ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದಾಗ, ಅಲ್ಲಿನ ಶ್ರೇಷ್ಠ ಸಾಹಿತಿಗಳು ಹಾಗೂ ಪತ್ರಕರ್ತರು ರಷ್ಯಾಗೆ ಭೇಟಿ ನೀಡಿ ಭೂಲೋಕದ ಮೇಲಿನ ಸ್ವರ್ಗವೇ ಅಲ್ಲಿ ಸೃಷ್ಟಿಯಾಗುತ್ತಿರುವುದರ ಕುರಿತು ಹೊರಜಗತ್ತಿಗೆ ತೋರಿಸಿದರು. ಮಹಾನ್ ವಿಜ್ಞಾನಿ ಐನ್‍ಸ್ಟೈನ್ ಸೇರಿದಂತೆ ರೊಮರೋಲಾ, ಬರ್ಟ್ರಾಂಡ್ ರಸೆಲ್, ಎಚ್.ಜಿ.ವೇಲ್ಸ್ ರಂತಹ
೨೦ ನೇ ಶತಮಾನದ ಎಲ್ಲ ಗಣ್ಯವ್ಯಕ್ತಿಗಳು ಸಮಾಜವಾದಿ ರಷ್ಯಾವನ್ನು ಹಾಗೂ ಅದರ ಸಾಧನೆಗಳನ್ನು ಹಾಡಿಹೊಗಳಿದ್ದಾರೆ.
ಪ್ರಸ್ತುತ ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ರಾಕೆಟ್ ವೇಗದಲ್ಲಿ ಉದ್ಯೋಗಳು ನಾಶವಾಗುತ್ತಿರುವಾಗ, ದೇಶದ ಬಹುಪಾಲು ಜನಸಮೂಹವನ್ನು ಹಸಿವು ಕ್ಷಣಕ್ಷಣವೂ ಬಾಧಿಸುತಿರುವಾಗ, ಶಿಕ್ಷಣವು ಕೆಲವೇ ಕೆಲವು ಧನವಂತರ ಸ್ವತ್ತಾಗಿರುವಾಗ, ಉದ್ಯೋಗವಿಲ್ಲದೆ ಭವಿಷ್ಯದಲ್ಲಿ ಬರವಸೆ ಕಳೆದುಕೊಂಡಿರುವ ಯುವಜನರು ಹಾಗೂ ಬದುಕಿನ ಭಾರ ಹೊರಲಾಗದ ರೈತರು ಆತ್ಮಹತ್ಯೆಗೆ ಬಲಿಯಾಗುತ್ತಿರುವಾಗ, ಮಹಿಳೆಯರು ಮತ್ತು ಮಕ್ಕಳ ಮಾನ ಬೀದಿಯಲ್ಲಿ ಹರಾಜಾಗುತ್ತಿರುವಾಗ…. ಈ ಎಲ್ಲ ಸಮಸ್ಯೆಗಳಿಗೆ ನೂರು ವರ್ಷದ ಹಿಂದೆಯೇ ಉತ್ತರ ನೀಡಿದ ಮಹಾನ್ ನವಂಬರ್ ಕ್ರಾಂತಿಯನ್ನು ನಾವು ನೆನೆಯಬೇಕಲ್ಲವೇ!?
ಇಂದು ರಷ್ಯಾದಲ್ಲಿ ಸಮಾಜವಾದ ಪತನಗೊಂಡಿರುವುದನ್ನೇ ಗುರಿಯಾಗಿಸಿಕೊಂಡು ಮಾರ್ಕ್ಸ್ ವಾದವೇ ಪತನವಾಯಿತು ಎಂದು ಬೊಬ್ಬೆಯಿಡುವವರಿಗೆ, ‘ಗಣಿತದ ಲೆಕ್ಕವನ್ನು ಬಿಡಿಸಲು ಅಥವಾ ವಿಜ್ಞಾನದ ಯಾವುದೋ ಸಮಸ್ಯೆಯನ್ನು ಪರಿಹರಿಸಲು ಯಾರೋ ಒಬ್ಬರು ವಿಫಲರಾದಾಗ, ಇಡಿಯ ಗಣಿತ ಅಥವಾ ವಿಜ್ಞಾನವೇ ವಿಫಲವಾದಂತಲ್ಲ’ ಎಂಬ ಸಾಮಾನ್ಯ ತಿಳುವಳಿಕೆಯನ್ನು ನೆನಪಿಸುವ ಅಗತ್ಯವಿದೆ. ರಷ್ಯಾದ ಮಹಾನ್ ನವಂಬರ್ ಸಮಾಜವಾದಿ ಕ್ರಾಂತಿಯ ೧೦೩ ನೇ ವರ್ಷದ ಸಂದರ್ಭದಲ್ಲಿ, ಅಲ್ಲಿನ ಸಮಾಜವಾದದ ಸಾಧನೆಗಳು, ಕ್ರಾಂತಿಯ ಕುರಿತು ಹಾಗೂ ಸಮಾಜವಾದಿ ರಶಿಯಾದ ಕುರಿತು ಜಗತ್ತಿನ ಮಹಾನ್ ವ್ಯಕ್ತಿಗಳ ಅಭಿಪ್ರಾಯಗಳು, ಈ ಕುರಿತು ಕಥೆ-ಕವನ, ಮುಂತಾದವುಗಳನ್ನು ಹಂಚಿಕೊಳ್ಳುವ ಪ್ರಯತ್ನಕ್ಕೆ ಎಐಡಿಎಸ್ಓ ಮುಂದಾಗುತ್ತಿದೆ. ಸಮಾಜವಾದದ ಕುರಿತು ಸಾಗರದಷ್ಟಿರುವ ವಿಷಯಗಳಲ್ಲಿ ಬೊಗಸೆಯಷ್ಟಾದರೂ ಮೊಗೆದು ಜನರ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇವೆ. ಸಮಾಜದಲ್ಲಿನ ಅನ್ಯಾಯ,ಅಸತ್ಯ,ದಬ್ಬಾಳಿಕೆಯ ವಿರುದ್ಧದ ಹೋರಾಟಗಳಿಗೆ ನಮ್ಮ ಈ ಪ್ರಯತ್ನವು ಸಹಕಾರಿಯಾಗಲಿ ಎಂಬುದೇ ನಮ್ಮ ಆಶಯ.
- ಎಂ.ಶಾಂತ ( ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಬೆಂಗಳೂರು, ಜಿಲ್ಲಾ ಕಾರ್ಯದರ್ಶಿ )