‘ಯಾವ ಕುಲದ ನೆಲೆಯನ್ನೂ ಕೇಳದೇ… ಜಾತಿಯೆಂಬ ಭೀತಿಯನ್ನೊಂದದೇ’… ಕವಿಯತ್ರಿ ವಿಜಯಲಕ್ಷ್ಮಿ ನಾಗೇಶ್ ಅವರ ಸುಂದರ ಕವನ ತಪ್ಪದೆ ಓದಿ….
ಅಗ್ನಿಯ ತಾಪವ ಸಹಿಸಿ
ತನ್ನನ್ನು ತಾನೇ ದಹಿಸಿ.!!
ತಿಮಿರವ ನೀಗಿ ದೀಪವಾಗಿ ಬೆಳಗಿ
ಬೆಳಕ ಪಸರಿಸಿ ಸಾರ್ಥಕತೆಯ
ಮೆರೆಯುತಿದೆ ಜ್ಯೋತಿಯೊಂದು.!!
ಬೆಳಕಿನ ಧಾರೆಯನ್ನೆರೆಯುತಿದೆ
ಅಂಧಕಾರದ ಪೊರೆಯ ಕಳಚಿ.!!
ಮಣ್ಣಿನ ಹಣತೆಯೊಳಗಿನ
ಎಣ್ಣೆಯ ಸಾಂಗತ್ಯದಲ್ಲಿ ಬೆರೆತ
ಬತ್ತಿಯೊಂದು ತಾ ನೊಂದು ಬೆಂದು.!!
ಯಾವ ಕುಲದ
ನೆಲೆಯನ್ನೂ ಕೇಳದೇ
ಜಾತಿಯೆಂಬ ಭೀತಿಯನ್ನೊಂದದೇ.!!
ಸಮಾನತೆಯ
ಸೊಗಸನ್ನು ಹರಡಿ
ಕಾಂತಿಯನು ಬೀರುತಾ
ಸಮನ್ವಯತೆಯನ್ನಿಲ್ಲಿ ಸಾರುತಿಹುದು..!!
ಅಸತೋಮಾ ಸದ್ಗಮಯ
ತಮಸೋಮಾ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂಗಮಯ
ಎಂದ ಮನುಜನ ಮನ ಆಗಿಹುದು
ಧರ್ಮಕದನಗಳ ಜಾತಿಭೇದಗಳ
ಅಧರ್ಮ ಅಸಮಾನತೆಗಳ ಸಿಂಧು..!!
- ವಿಜಯಲಕ್ಷ್ಮಿ ನಾಗೇಶ್