ಸುಚಿತ್ರ ಸಿನಿಮಾ ಅಂಡ್ ಕಲ್ಚರಲ್ ಫೌಂಡೇಶನ್ ಸಾಹಿತ್ಯ ಸಂಜೆ ಇದೇ ಸೆಪ್ಟೆಂಬರ್ ೧೪, ೨೦೨೪ ರಂದು ಸಂಜೆ ೬ ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ವಿವರಗಳು ಕೆಳಗಿನಂತಿದೆ…
ಕೆ. ರಾಜಕುಮಾರ್ ಅವರು ಕನ್ನಡಕ್ಕಾಗಿ 40 ವರ್ಷದಿಂದ ತದೇಕಚಿತ್ತರಾಗಿ ಧೇನಿಸುತ್ತ ಅದರ ಉತ್ಕರ್ಷಕ್ಕಾಗಿ ತುಡಿಯುತ್ತಿರುವವರು. ರಾಜಕುಮಾರ್ ಎಂದರೆ ಕನ್ನಡದ ಒಂದು ಸಮಗ್ರ ಪ್ಯಾಕೇಜು! ಅವರು ಲೇಖಕ, ಚಿಂತಕ, ನುಡಿಜಾಣ, ಬೋಧಕ, ಪ್ರಶಿಕ್ಷಕ, ಅಪ್ರತಿಮ ಹೋರಾಟಗಾರ. ಹೋರಾಟವೆಂದರೆ ಸಂಘರ್ಷವೊಂದನ್ನೇ ಅಸ್ತ್ರವನ್ನಾಗಿಸಿಕೊಂಡು ಝಳಪಿಸಿದವರಲ್ಲ. ಅಗತ್ಯವಿದ್ದೆಡೆ ಅನುಸಂಧಾನದ ಮಾರ್ಗಗಳನ್ನೂ ಮುಕ್ತವಾಗಿ ತೆರೆದಿರಿಸಿದವರು. ಕನ್ನಡವನ್ನು ಬಲಿಷ್ಠವಾಗಿ ಕಟ್ಟಲು ಎಲ್ಲ ಬಗೆಯ ಕ್ರಮಗಳನ್ನೂ ಅನುಸರಿಸಿದ ಕಾರ್ಯಕ್ಷಮತೆ ಅವರದು.
ರಾಜಕುಮಾರ್ ಬಹುಭಾಷಾ ಕೋವಿದ. ಬಹುಶ್ರುತ ವಿದ್ವಾಂಸ. ಬಹುಮುಖ ಪ್ರತಿಭೆ. ಸಾಹಿತ್ಯ, ಸಂಗೀತದ ಭಿನ್ನ ಪ್ರಕಾರಗಳು, ಚಲನಚಿತ್ರ, ರಂಗಭೂಮಿ, ಪತ್ರಿಕೋದ್ಯಮ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಹೀಗೆ ಹಲವು ವಿಷಯಗಳಲ್ಲಿ ಏಕಕಾಲದಲ್ಲಿ ಸಮ ಸಮನಾದ ಆಸಕ್ತಿ. ಅವುಗಳ ಬಗೆಗೆ ಅಧಿಕೃತವಾಗಿ ಮಾತು-ಬರೆಹ ಎರಡನ್ನೂ ಸಾಧಿಸಿದವರು. ಹಾಗಾಗಿ ಕಂಡವರ ಕಣ್ಣಿಗೆ ಇವರೊಂದು ಅಚ್ಚರಿ, ಅದ್ಭುತ, ವಿಸ್ಮಯ.

ನಟಸಾರ್ವಭೌಮ ರಾಜಕುಮಾರ್ ಅವರೊಂದಿಗೆ ಎರಡು ದಿನಗಳ ಕಾಲವಿದ್ದು ಅವರಿಗೆ ಗೋಕಾಕ್ ವರದಿಯನ್ನು ಸರಳವಾಗಿ ಪರಿಚಯಿಸಿದ್ದು ಒಂದು ಅಗ್ಗಳಿಕೆ. ಅಂತೆಯೇ ಸ್ವತಃ ಗೋಕಾಕರಿಗೆ 1989ರಲ್ಲಿ ಗೋಕಾಕ್ ವರದಿಯನ್ನು ಎರಡು ದಿನಗಳ ಕಾಲ ಮತ್ತೆ ನೆನಪಿಗೆ ತಂದಿದ್ದು (ಪುನರ್ಮನನ) ಇದೇ ರಾಜಕುಮಾರ್.
ಇಂತಹ ಅದ್ಭುತ ಅನುಭವಗಳ ಊಟೆಯಂತಿರುವ, ಚಿರ ಉತ್ಸಾಹಿ, ಕನ್ನಡ ನುಡಿಜಾಣ ಕೆ. ರಾಜಕುಮಾರ್ ಅವರು ಇದೇ ಶನಿವಾರ ಸಂಜೆ “ಸುಚಿತ್ರ ಸಾಹಿತ್ಯ ಸಂಜೆ” ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಇರಲಿದ್ದಾರೆ.
ಬನ್ನಿ, ನುಡಿಹಬ್ಬವನ್ನಾಚರಿಸೋಣ.
- ಸೌಜನ್ಯ ದತ್ತರಾಜ
