ಹನುಮನಿಗೂ ಆತ್ಮಹತ್ಯೆಯ ಆಲೋಚನೆ

ನೀ ಹೆಣ್ಣೇ ಆಗಿರು, ಗಂಡೇ ಆಗಿರು ಒಂದಿಲ್ಲ ಒಂದು ಸಲವಾದರೂ ಈ ಖಿನ್ನತೆ (Depression), ಆತ್ಮ ಹತ್ಯೆಯ ಆಲೋಚನೆ (Sucidal Tendency) ಕಾಡದೆ ಇರದು. ವಾಲ್ಮೀಕಿ ಮಹರ್ಷಿಯೇ ಬರೆದ ರಾಮಾಯಣದಂತೆ, ಒಂದು ಸಂದರ್ಭದಲ್ಲಿ ಹನುಮನು ಖಿನ್ನತೆಗೆ ಜಾರಿ, ಆತ್ಮಹತ್ಯೆಗೆ ಯೋಚಿಸಿರುತ್ತಾನೆ. ಮುಂದೇನಾಯಿತು ಡಾ. ರಾಜಶೇಖರ ನಾಗೂರ ಅವರ ಜೀವನಕ್ಕೆ ಸ್ಫೂರ್ತಿ ನೀಡುವ ಲೇಖನವನ್ನು ತಪ್ಪದೆ ಮುಂದೆ ಓದಿ…

(ಆಪ್ತರೊಬ್ಬರು ಕಾಲ್ ಮಾಡಿ ಯಾಕೋ ಖಿನ್ನತೆ ಎನಿಸುತ್ತಿದೆ, ಬದುಕಬೇಕು ಎಂದೆನಿಸುತ್ತಿಲ್ಲ ಎಂದರು. ಅವರಿಗಿಷ್ಟು ಧೈರ್ಯ ಹೇಳಿ ಈ ಲೇಖನ ಬರೆಯುತ್ತಿದ್ದೇನೆ.)

ಬದುಕಿನ ಕೆಲ ಸಮಯ ಸಂದರ್ಭಗಳು ಎಂತಹ ಮನುಷ್ಯನನ್ನು ಕೂಡಾ ಕೆಲವೊಮ್ಮೆ ಖಿನ್ನತೆಗೆ ತಳ್ಳುತ್ತವೆ. ಮಾನಸಿಕವಾಗಿ ದುರ್ಬಲಗೊಳಿಸುತ್ತವೆ. ಒಂದು ಹೆಜ್ಜೆ ಮುಂದೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನಿಸುವಂತೆ ಮಾಡುತ್ತವೆ. ನೀನು ಎಷ್ಟೇ ದೊಡ್ಡ ಶ್ರೀಮಂತನಿರು, ಎಂತಹುದೇ ಅಧಿಕಾರದಲ್ಲಿರು, ಎಂತಹುದೇ ಪ್ರಖ್ಯಾತಿ ಪಡೆದಿರು, ನೀ ಹೆಣ್ಣೇ ಆಗಿರು, ಗಂಡೇ ಆಗಿರು ಒಂದಿಲ್ಲ ಒಂದು ಸಲವಾದರೂ ಈ ಖಿನ್ನತೆ (Depression), ಆತ್ಮ ಹತ್ಯೆಯ ಆಲೋಚನೆ (Sucidal Tendency)ಕಾಡದೆ ಇರದು. ಇಂತಹ ಸಂದರ್ಭಗಳಲ್ಲಿ ಮನುಷ್ಯ ಆ ಕ್ಷಣದ ಖಿನ್ನತೆಯ ಮೀರಿ ಆಲೋಚಿಸದೇ, ದಿನಾಲೂ ಸಾಯುವುದಕ್ಕಿಂತ ಒಂದೇ ಕ್ಷಣಕ್ಕೆ ಆತ್ಮಹತ್ಯೆ ಮಾಡಿಕೊಂಡು ಶಾಶ್ವತ ಪರಿಹಾರ ಕಂಡುಕೊಳ್ಳೋಣವೆಂದು ಸಾವಿಗೆ ಶರಣಾಗಿ ಬಿಡುತ್ತಾನೆ. ಆಯಾ ಸಂದರ್ಭದ ಸಮಸ್ಯೆಗಳ ಮುಂದೆ, ತನ್ನದೇ ಮಕ್ಕಳು, ತನ್ನದೇ ತಂದೆ-ತಾಯಿಗಳು, ತನ್ನದೇ ಆಪ್ತರು ಆ ಕ್ಷಣದಲ್ಲಿ ಅದೃಶ್ಯವಾಗಿಬಿಡುತ್ತಾರೆ. ಭರವಸೆ ಇಲ್ಲದ ಬದುಕಿನ ಬರಡು ಕ್ಷಣಗಳೆಂದರೆ ಆತ್ಮಹತ್ಯೆಗೆ ಶರಣಾಗುವ ಮುಂಚೆಯ ಕ್ಷಣಗಳು. ಆ ಭಯಾನಕ ಭರವಸೆಯೇ ಕಾಣದ ಖಿನ್ನತೆಯಿಂದ ಹೊರಬರಲು ಆ ಕ್ಷಣಕ್ಕೆ ಆ ವ್ಯಕ್ತಿ ವಿಭಿನ್ನವಾಗಿ ಯೋಚಿಸುವುದೇ ಇಲ್ಲಾ.

 

ಒಂದು ವೇಳೆ ಈ ಸಂದರ್ಭದ ಸುಳಿಯಲ್ಲಿರುವ ವ್ಯಕ್ತಿ, ಸ್ವಲ್ಪವೇ ಸ್ವಲ್ಪ ವಿಭಿನ್ನವಾಗಿ ಯೋಚಿಸುವುದಾದರೆ ಪರಿಹಾರ ಪಕ್ಕದಲ್ಲೇ ಇರುತ್ತದೆ. ಅದನ್ನು ಕಂಡುಕೊಳ್ಳುವ ತಾಳ್ಮೆ, ತಾಕತ್ತು ಆ ವ್ಯಕ್ತಿಯಲ್ಲಿದ್ದರೆ ಮಾತ್ರ ಆ ವ್ಯಕ್ತಿ ಹೊರಬರುತ್ತೇವೆ. ಇಲ್ಲವಾದಲ್ಲಿ ಎಂತಹ ಶಕ್ತಿಶಾಲಿ ಮನುಷ್ಯನಾದರೂ ಸಾವಲ್ಲಿ ಅಂತ್ಯವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗೊಬ್ಬ ಶಕ್ತಿಶಾಲಿ ಆತ್ಮಹತ್ಯೆಗೆ ಯೋಚಿಸಿದ ವಿಚಾರ ಇಲ್ಲಿದೆ ನೋಡಿ.

ರಾಮಾಯಣದ ಹನುಮನೆಂದರೆ ಶಕ್ತಿಶಾಲಿ ಪಾತ್ರವಾಗಿ ನಾವು ನೋಡುತ್ತೇವೆ. ಯಾವುದಕ್ಕೂ ಹೆದರದ ಶೂರ, ಪರಾಕ್ರಮಿ ಎಂದು ತಿಳಿದಿದ್ದೇವೆ. ಇಂತಹ ಪಾತ್ರವನ್ನೇ ನಾವು ಭಯ ನಿವಾರಕ ಎಂದು ಇಂದಿಗೂ ಪೂಜಿಸುತ್ತೇವೆ. ಆದರೆ ವಾಲ್ಮೀಕಿ ಮಹರ್ಷಿಯೇ ಬರೆದ ರಾಮಾಯಣದಂತೆ, ಒಂದು ಸಂದರ್ಭದಲ್ಲಿ ಹನುಮನು ಖಿನ್ನತೆಗೆ ಜಾರಿ, ಆತ್ಮಹತ್ಯೆಗೆ ಯೋಚಿಸಿರುತ್ತಾನೆ. ಏನ್ ಸ್ವಾಮಿ ಇದು ಹೀಗೇ ಹೇಳ್ತಿದಿಯ ಅನಬೇಡಿ. ಇದು ನಾನು ಹೇಳಿದ್ದಲ್ಲ. ವಾಲ್ಮೀಕಿ ಮಹರ್ಷಿ ಬರೆದದ್ದು. ಹಾಗಾದ್ರೆ ಇಲ್ಲಿ ಪೂರ್ತಿಯಾಗಿ ಕೇಳಿ…

ಫೋಟೋ ಕೃಪೆ : google

ಶ್ರೀರಾಮ, ಲಕ್ಷ್ಮಣ, ಸುಗ್ರೀವ, ಜಾಂಬವಂತ ಇಡೀ ವಾನರ ಸೈನ್ಯ ಎಲ್ಲರೂ ಸೀತೆಯ ಸುಳಿವನ್ನು ಪತ್ತೆ ಹಚ್ಚಲು ಹನುಮನನ್ನು ನಂಬಿ, ನಿಯೋಜಿಸಿ, ಹುರಿದುಂಬಿಸಿ ಸಾಗರೋಲ್ಲಂಘನ ಮಾಡಿಸಿ ಲಂಕೆಗೆ ಕಳಿಸುತ್ತಾರೆ. ಘನ ಸಾಗರವ ನೆಗೆದು ಅಪರಿಚಿತ ರಾಕ್ಷಸರ ಸ್ಥಳ ಲಂಕೆಗೆ ಹನುಮ ತಲುಪುತ್ತಾನೆ. ಲಂಕೆಯ ಗುಡ್ಡ-ಬೆಟ್ಟ, ಕಾಡು-ಮೇಡು, ಮೂಲೆ-ಮೂಲೆಗಳನ್ನು ಶೋಧಿಸಿದರೂ ಸೀತೆಯ ಸುಳಿವು ಸಿಗದು.

ಹಗಲು-ರಾತ್ರಿ, ದಿನ-ವಾರಗಳು, ತಿಂಗಳುಗಳು ರಾವಣನ ರಕ್ಕಸ ಅರಮನೆಯ ಪ್ರತಿ ಸೆರೆಮನೆ, ಪ್ರತಿ ಕೋಣೆ ಕೋಣೆಗಳನ್ನು, ಮೂಲೆ ಮೂಲೆಗಳನ್ನು ಹುಡುಕಿ ಹುಡುಕಿ ಸುಸ್ತಾಗಿ ಎಲ್ಲಿಯೂ ಸೀತೆಯ ಸುಳಿವನ್ನು ಕಾಣದೆ ದುಃಖಕ್ಕೆ ಈಡಾಗಿ ಹತ್ತಿರವಿರುವ ಒಂದು ವನದಲ್ಲಿ ವಿಶ್ರಾಂತಿ ಪಡೆಯಲು ಬಂದು ಕುಳಿತುಕೊಂಡು ಖಿನ್ನತೆಗೆ ಜಾರುತ್ತಾನೆ.

ಶ್ರೀರಾಮ, ಲಕ್ಷ್ಮಣ, ಸುಗ್ರೀವ, ಇಡೀ ವಾನರ ಸೇನೆ ಹಾಗೂ ಅಯೋಧ್ಯೆ ಎಲ್ಲರೂ ಭರವಸೆಯಿಂದ ಮುಂದೆ ನೋಡುತ್ತಿರುವುದು ನನ್ನನ್ನೇ. ಸೀತೆಯ ಸುಳಿವನ್ನು ತಂದಾನು. ಸೀತೆ ಇರುವ ಸಿಹಿ ಸುದ್ದಿಯನ್ನು ಹೊತ್ತು ಬಂದಾನು ಎಂದು ಸಾಗರದ ಆಚೆ ನೋಡುತ್ತಾ ಕೇವಲ ನನಗಾಗಿ ಕಾಯುತ್ತಿದ್ದಾರೆ. ನನಗೆ ಇಲ್ಲಿ ಸೀತೆಯ ಸುಳಿವೇ ಇಲ್ಲ.

ಇಲ್ಲಿ ಎಲ್ಲಿಯೂ ಸೀತೆ ಕಾಣುತ್ತಿಲ್ಲವೆಂದಾದರೆ ಈ ರಾಕ್ಷಸರು ಸೇರಿ ಅವಳನ್ನು ತಿಂದು ಹಾಕಿದರೆ ಅಥವಾ ಈ ರಾಕ್ಷಸನನ್ನು ನೋಡಿ ಹೆದರಿ ಸೀತಾಮಾತೆ ಪ್ರಾಣ ತ್ಯಾಗ ಮಾಡಿದಳೆ! ಅಥವಾ ರಾಮನ ಭಯದಿಂದ ರಾವಣನು ಸೀತೆಯನ್ನು ಹೊತ್ತು ತರುವಾಗ ಸಾಗರದಲ್ಲಿಯೇ ಬೀಳಿಸಿ ಬಂದನೇ! ಏನಾದರೂ ಒಂದು ಸುಳಿವು ಸಿಗಬೇಕಲ್ಲ. ಏನು ಸಿಗುತ್ತಿಲ್ಲ. ಸೀತೆ ಬದುಕಿದ್ದರೆ ನನ್ನ ಕಣ್ಣಿಗೆ ಕಾಣಲೇಬೇಕಲ್ಲ ಏಕೆಂದರೆ ನಾನು ಹುಡುಕದ ಯಾವ ಸ್ಥಳವೂ ಉಳಿದಿಲ್ಲ. ಹೆಜ್ಜೆ ಹೆಜ್ಜೆಗೂ ನಾನು ಶೋಧಿಸಿ ಬಂದಿದ್ದೇನೆ. ಸೀತೆಯ ಸುಳಿವೇ ಇರದೆ ಮರಳಿ ರಾಮನ ಬಳಿ ಹೇಗೆ ಹೋಗಲಿ?

ಸೀತೆ ಇಲ್ಲದ ರಾಮನು ದೇಹ ತ್ಯಾಗ ಮಾಡುವನು. ರಾಮನು ಇಲ್ಲವಾದರೆ ಲಕ್ಷ್ಮಣನೂ ಇಲ್ಲವಾಗುವನು. ರಾಮ ಲಕ್ಷ್ಮಣರು ಇಲ್ಲವಾದರೆ ಭರತನು ಪ್ರಾಣ ತ್ಯಾಗ ಮಾಡುವನು. ಭರತನು ಇಲ್ಲವಾದರೆ ಶತ್ರುಘ್ನ ಜೀವ ತ್ಯಜಿಸುವನು. ರಾಮ-ಲಕ್ಷ್ಮಣ, ಭರತ-ಶತ್ರುಘ್ನ ಇವರೆಲ್ಲರೂ ಇಲ್ಲವೆಂದಾದರೆ ತಾಯಿ ಕೌಸಲ್ಯ ಮತ್ತು ಸುಮಿತ್ರ ತಮ್ಮ ಪ್ರಾಣವನ್ನು ಬಿಡುವರು. ಈ ಸ್ಥಿತಿಯನ್ನು ಕಂಡು ಅಯೋಧ್ಯೆಯ ಜನ ಬದುಕುವರೇ!

ಹೀಗಾದರೆ ನನ್ನಿಂದ ಅನಾಹುತವೇ ಆಗುವುದು. ಈ ಅನರ್ಥಕ್ಕೆ ಕಾರಣ ಬರಿಗೈಲಿ ಹೋದ ನಾನಾಗುವೆ. ನನ್ನ ದೈವ ಶ್ರೀ ರಾಮನಿಗೆ ನಾನು ಹೇಗೆ ಮುಖ ತೋರಿಸಲಿ! ನಾನು ಇದ್ದೂ ನಿಸ್ಪ್ರಯೋಜಕನಲ್ಲವೇ? ಇಂತಹ ಅನರ್ಥ ನನ್ನಿಂದ ಆಗುವ ಮೊದಲು ನಾನೇ ಇಲ್ಲವಾದರೆ ಒಳ್ಳೆಯದು.

ಸೀತೆಯ ಸುಳಿವಿಲ್ಲದೆ ಮರಳಿ ಹೋಗಿ ಇಷ್ಟೆಲ್ಲ ಅನರ್ಥಕ್ಕೆ ಕಾರಣವಾಗುವ ಬದಲು ನಾನೇ ಆತ್ಮಹತ್ಯೆ ಮಾಡಿಕೊಂಡರೆ ಒಳಿತು ಎಂದು ನಿರ್ಧರಿಸಿ ಆತ್ಮಹತ್ಯೆಗೆ ಹನುಮ ಸಿದ್ದನಾಗುತ್ತಾನೆ. ಹಾಗಾದರೆ ದೇಹ ತ್ಯಾಗವನ್ನು ಮಾಡಲು ನನ್ನ ಮುಂದೆ ಮೂರು ಆಯ್ಕೆಗಳಿವೆ. ಒಂದು ಹತ್ತಿರದ ಸಾಗರದಲ್ಲಿ ಹೋಗಿ ಮುಳುಗಿ ದೇಹ ತ್ಯಾಗ ಮಾಡುವುದು ಮತ್ತೊಂದು ಆಹಾರವನ್ನು ತ್ಯಜಿಸಿ ಉಪವಾಸ ದೇಹ ತ್ಯಾಗ ಮಾಡುವುದು, ಮಗದೊಂದು ಉರಿ ಕಿಚ್ಚನ್ನು ಹೊತ್ತಿಸಿ ಅದರೊಳಗೆ ನೆಗೆದು ಪ್ರಾಣ ಬಿಡುವುದು. ಈ ಮೂರು ಆತ್ಮಹತ್ಯೆಯ ದಾರಿಗಳಲ್ಲಿ ನಾನು ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಚಿಂತಿಸುತ್ತಿರುತ್ತಾನೆ.

ಫೋಟೋ ಕೃಪೆ : google

ತನ್ನ ಅಂತಿಮ ದೇಹ ತ್ಯಾಗದ ಮಾರ್ಗವೊಂದನ್ನು ಮನದಲ್ಲಿ ನಿಶ್ಚಯಿಸಿಕೊಂಡು ಕೊನೆಯ ಬಾರಿ ಅಯೋಧ್ಯೆಯ ಕಡೆ ಮುಖ ಮಾಡಿ ಶ್ರೀರಾಮನನ್ನು ಒಮ್ಮೆ ನೆನೆಯುತ್ತಾನೆ. ಒಳ್ಳೆಯ ಧನಾತ್ಮಕ ದಿಕ್ಕಿನ ಕಡೆ ಮುಖ ಮಾಡಿದ ಕ್ಷಣವೇ ಅಯೋಧ್ಯೆಯ ಕಡೆಯಿಂದ ತೂರಿ ಬರುವ ತಂಗಾಳಿ ಹನುಮನ ಮುಖಕ್ಕೆ ಸೋಕಿದ ತಕ್ಷಣವೇ ಆತ್ಮಹತ್ಯೆಯ ನಕಾರಾತ್ಮಕ ಚಿಂತನೆಯ ಬದಲಾಗಿ ಧನಾತ್ಮಕ ಚಿಂತನೆ ಅವನ ಮನಸ್ಸಲ್ಲಿ ಮೂಡ ತೊಡಗುತ್ತದೆ.

ಕೈ ಇಲ್ಲದೆ ಬೀಗ ಯಾರಾದರೂ ತಯಾರಿಸುತ್ತಾರೆಯೇ? ಪರಿಹಾರವಿಲ್ಲದೆ ಸಮಸ್ಯೆ ಉದ್ಭವವಾಗುತ್ತದೆಯೇ? ಇಷ್ಟೆಲ್ಲಾ ಕರ್ಮಗಳನ್ನು ದಾಟಿ ನಾನು ಈ ಜಾಗಕ್ಕೆ ತಲುಪಿದ್ದೇನೆ ಎಂದಾದರೆ ಏನಾದರೂ ಒಂದು ಕಾರಣ ಇರಲೇಬೇಕು. ಇಷ್ಟು ಬೇಗ ನಾನು ಸೋತು ಹೋದೆನೇ. ಹೀಗೆ ಸೋತರೆ ಅವರೆಲ್ಲರ ನಂಬಿಕೆಗೆ ನಾನು ದ್ರೋಹ ಬಗೆದಂತೆ ಅಲ್ಲವೇ! ಅಲ್ಲಿಯವರೆಗೂ ಇದ್ದ ಹನುಮನ ಆತ್ಮಹತ್ಯೆಯ ಋಣಾತ್ಮಕ ಚಿಂತನೆಗಳು, ಧನಾತ್ಮಕ ಚಿಂತನೆಗಳಿಂದ ಪಲ್ಲಟಗೊಳ್ಳಲು ಪ್ರಾರಂಭವಾದವು.

ಅಲ್ಲಿಯವರೆಗೂ ಸಾಯುವ ಬಗ್ಗೆ ಚಿಂತಿಸುತ್ತಿದ್ದ, ಖಿನ್ನತೆಗೆ ಜಾರಿದ ಹನುಮನ ತಲೆಯಲ್ಲಿ ಆ ಕ್ಷಣಕ್ಕೆ ಆಲೋಚನೆಯೊಂದು ಹೊಳೆಯಿತು. ಲಂಕೆಯ ಪ್ರತಿ ಮೂಲೆ ಮೂಲೆಯನ್ನು ಹುಡುಕಿದ ನಾನು, ಈ ಕ್ಷಣ ನಾನೇ ಕುಳಿತಿರುವ ಸ್ಥಳವನ್ನೇ ಶೋಧಿಸಿಲ್ಲ ಎಂಬುದಾಗಿತ್ತು. ತಕ್ಷಣಕ್ಕೆ ಎದ್ದವನೇ ತಾನು ಕುಳಿತಿರುವ ಸಣ್ಣ ಪ್ರದೇಶವನ್ನು ಶೋಧಿಸಲು ಪ್ರಾರಂಭಿಸಿದಾಗ ಅಚ್ಚರಿಯೊಂದು ಕಾದಿತ್ತು. ಅಲ್ಲಿ ಇಲ್ಲಿ ಮರದಿಂದ ಮರಕ್ಕೆ ನೆಗೆದು ಶೋಧಿಸುವಾಗ ಮರವೊಂದರ ಕೆಳಗೆ ಒಂಟಿ ಹೆಣ್ಣೊಂದು ಚಿಂತಾಕ್ರಾಂತಳಾಗಿ ಕುಳಿತಿರುವುದು ಕಾಣಿಸಿತು. ಅವಳೇ ಸೀತೆ ಎಂದು ದೃಢೀಕರಿಸಿಕೊಂಡ ನಂತರ ಸೀತೆ ಇರುವ ಸ್ಥಳ ‘ಅಶೋಕ ವಾಟಿಕಾ’ ಎಂಬುದು ತಿಳಿಯಿತು.

ತಾನು ಕುಳಿತು ತನ್ನ ಆತ್ಮಹತ್ಯೆಯ ಬಗ್ಗೆಯೇ ಯೋಚಿಸುತ್ತಿದ್ದ ಆ ಸ್ಥಳದಲ್ಲೇ ಪರಿಹಾರವಿತ್ತು. ಅದನ್ನು ಅರಿಯದೇ ಇದ್ದಿದ್ದರೆ ಹನುಮ ದೇಹ ತ್ಯಾಗ ಮಾಡುತ್ತಿದ್ದನೇನೋ.

ಹೀಗಾಗಿ ಆತ್ಮಹತ್ಯೆಯ ಆಲೋಚನೆಯಲ್ಲಿರುವ ಅನೇಕ ವ್ಯಕ್ತಿಗಳು ತಾವು ಪರಿಹಾರಕ್ಕೆ ಹತ್ತಿರವೇ ಇದ್ದರೂ ಅದನ್ನು ಅರಿಯದ ಮೂಡರಾಗಿರುತ್ತಾರೆ. ಹೀಗಾಗಿ ಆತ್ಮಹತ್ಯೆ, ಖಿನ್ನತೆ ಜೀವನದ ಸಮಸ್ಯೆಗಳಿಗೆ ಪರಿಹಾರವಲ್ಲ. ಅದರಿಂದ, ಅದರಾಚೆ ಆಲೋಚಿಸುವ ಔದಾರ್ಯತೆಯನ್ನು ನಾವು ಹೊಂದಬೇಕು. ಆಗ ಮಾತ್ರ ಜೀವನದ ಸಮಸ್ಯೆಗಳನ್ನು ನಾವು ಗೆಲ್ಲಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮಧ್ಯದಲ್ಲಿಯೇ ಸಮಸ್ಯೆಗೆ ಸೋತು ಶರಣಾಗಿಬಿಡುತ್ತೇವೆ.

ಹನುಮನಂತವರಿಗೆ ಅಂತಹ ಖಿನ್ನತೆ ಕಾಡಿದೆ ಎಂದಾದರೆ, ಅಂತವನಿಗೆ ಆತ್ಮಹತ್ಯೆಯ ಆಲೋಚನೆ ಬಂದಿರಬಹುದಾದರೆ ನಾವು ನೀವು ಸಾಮಾನ್ಯ ಮನುಷ್ಯರು. ನಮಗೇ ಇಂತಹ ಆಲೋಚನೆಗಳು ಬರದೇ ಇರುತ್ತವೆಯೇ! ಬಂದೇ ಬರುತ್ತವೆ ಹಾಗಂತ ಸಾಯುವುದೇ ಪರಿಹಾರವಲ್ಲ ಏಕೆಂದರೆ ಪರಿಹಾರವಿಲ್ಲದ ಸಮಸ್ಯೆಯೇ ಇಲ್ಲಾ.

ಮೋಡಗಳಾವರಿಸಿ ಕತ್ತಲಾಗಿಸಿದ ಕಡು ರಾತ್ರಿಯಲ್ಲೂ ಒಂದೇ ಒಂದು ಮಿಂಚು ಇಡೀ ಕತ್ತಲೆಯನ್ನು ಒಂದೇ ಕ್ಷಣದಲ್ಲಿ ಪಲ್ಲಟಗೊಳಿಸುವಂತೆ, ನೂರು ನಕಾರಾತ್ಮಕ ಆಲೋಚನೆಗಳು ನಮ್ಮನ್ನು ಆವರಿಸಿದ್ದರೂ ಅವುಗಳನ್ನು ಒಂದೇ ಒಂದು ಧನಾತ್ಮಕ ಆಲೋಚನೆಯಿಂದ ಪಲ್ಲಟಗೊಳಿಸಬಹುದು. ಆ ಪರಿಹಾರವನ್ನು ಕಂಡುಕೊಳ್ಳುವ ತಾಕತ್ತು ನಮ್ಮಲ್ಲಿರಬೇಕು. ಆ ಪರಿಹಾರ ಇದೇ ಎಂಬ ಭರವಸೆ ಹೊತ್ತು ನಡೆಯಬೇಕು. ಆಗ ಮಾತ್ರ ಬದುಕಿನ ಗಮ್ಯವನ್ನು ಗೆಲುವಿಂದ ತಲುಪುತ್ತೆವೆ. ಸೋಲನ್ನು ಸೋಲಿಸುತ್ತೇವೆ.

ನೆನಪಿರಲಿ ಭರವಸೆಯೇ ಬದುಕು.

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :


  • ಡಾ. ರಾಜಶೇಖರ ನಾಗೂರ  

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading