ಮಲ್ಲಿಗೆಯ ಮಾಲೆಯ ಸೊಬಗು : ಸುಜಾತಾ ರವೀಶ್

ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿಯವರ (ಕೆಎಸ್ ಎನ್) ಮೊಟ್ಟ ಮೊದಲ ಕವನ “ಕಬ್ಬಿಗನ ಕೂಗು” ಪ್ರೊಫೆಸರ್ ಎ ಆರ್ ಕೃಷ್ಣಶಾಸ್ತ್ರಿಗಳ ಪ್ರಬುದ್ಧ ಕರ್ಣಾಟಕದಲ್ಲಿ ಅಚ್ಚಾಯಿತು. ಇಪ್ಪತ್ತಾರು ಜನವರಿ ೧೯೧೫ ರಲ್ಲಿ ಜನಿಸಿದ ಇವರು “ಮಲ್ಲಿಗೆ ಕವಿ” ಎಂದೇ ಪ್ರಖ್ಯಾತರು. ಇಂದು ಕೆಎಸ್ ಎನ್ ಜನ್ಮದಿನದಂದು ಕವಿಯತ್ರಿ, ಲೇಖಕಿ ಸುಜಾತಾ ರವೀಶ್ ಅವರು ಕೆಎಸ್ ಎನ್ ಅವರ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಋತುಗತಿಯಲ್ಲ ಶೈಲಮತಿಯಲ್ಲ ಶಬ್ದರತಿಯಲ್ಲ ನನ್ನ ಕವಿತೆ
ಪದಪದಕವಿಲ್ಲ ತಲೆಭಾರವಿಲ್ಲ ನಿನ್ನುಸಿರು ನನ್ನ ಕವಿತೆ
ಅಹಂಕಾರವಿಲ್ಲ ಅಲಂಕಾರವಿಲ್ಲ ನಿಜಾಕಾರ ನನ್ನ ಕವಿತೆ
ನನ್ನಾಸೆಗಣ್ಣ ಬಂದರಿಗೆ ಬಂದ ಶರನ್ನೌಕೆ ಈ ಕವಿತೆ

(ಮಲ್ಲಿಗೆಯ ಮಾಲೆ ಪುಟ ೨೮೦)

ತಮ್ಮ ಕವಿತೆಗಳ ಪರಿಚಯವನ್ನು ತಾವೇ ಕಂಡುಕೊಂಡು ಕನ್ನಡಿಗರಿಗರುಹಿದ ನವೋದಯದ ಪ್ರಮುಖ ಕವಿ ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿಯವರು. ಇಪ್ಪತ್ತಾರು ಜನವರಿ ೧೯೧೫ ರಲ್ಲಿ ಜನಿಸಿದ ಇವರು “ಮಲ್ಲಿಗೆ ಕವಿ” ಎಂದೇ ಪ್ರಖ್ಯಾತರು . ಮಲ್ಲಿಗೆಯಂತಹ ಸೌರಭ ಮಾರ್ದವತೆ ಹೊಂದಿದ ಗೇಯಗುಣದ ಕವಿತೆಗಳು ಇವರವು. ಹದಿನಾರು ಕವನ ಸಂಕಲನಗಳಲ್ಲದೆ ಗದ್ಯದಲ್ಲೂ ಇವರ ಸಾಹಿತ್ಯ ಕೃಷಿ ನಡೆದಿತ್ತು. ಮಾರಿಯಕಲ್ಲು, ದಮಯಂತಿ, ಉಪವನ ಇವರ ಗದ್ಯ ಕೃತಿಗಳಾದರೆ ಮೋಹನಮಾಲೆ (ಗಾಂಧೀಜಿ) ನನ್ನ ಕನಸಿನ ಭಾರತ (ಗಾಂಧೀಜಿ) ಮೀಡಿಯಾ (ಯೂರಿಪಿಡೀಸ್ ನಾಟಕ) ಪುಷ್ಕಿನ್ ಕವಿತೆಗಳು ರಾಬರ್ಟ್ ಬರ್ನ್ಸ್ ಪ್ರೇಮಗೀತೆಗಳು ಇವರ ಅನುವಾದ ಕೃತಿಗಳಾಗಿವೆ . ಗೃಹ ಮಂಡಳಿಯಲ್ಲಿ ಗುಮಾಸ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು “ಕಷ್ಟ ಕಾರ್ಪಣ್ಯಗಳ ಅನುಭವ ನನಗೆ ಸಾಕಷ್ಟಿವೆ. ಈ ಎಲ್ಲ ನೋವು ಕವಿತೆಯ ಪರಿಮಳವಾಗಿ ದಾಟಿ ಹೋಗುತ್ತಾ ನನ್ನ ಮನಸ್ಸಿಗೆ ನೆಮ್ಮದಿ ತಂದಿದೆ” ಎಂದು ಹೇಳಿದ್ದಾರೆ.

ಜಿ ಎಸ್ ಶಿವರುದ್ರಪ್ಪ ಅವರು ಇವರ ಜೀವನವನ್ನು ಚಂದನಕ್ಕೆ ಹೋಲಿಸಿದ್ದಾರೆ .ಬಹು ಸಾರ್ಥಕ ಉಪಮೆ ಇದು.

ನನಗೆ ಯಾವುದೇ ಕವಿಗಳದಾಗಲಿ ಸಮಗ್ರ ಸಂಗ್ರಹಗಳನ್ನು ಕೊಳ್ಳುವುದರಲ್ಲಿ ಹೆಚ್ಚಿನ ಆಸಕ್ತಿ. ಒಂದೆಡೆ ಎಲ್ಲಾ ಪುಸ್ತಕಗಳು ಸಿಗುವುದು ಒಂದಾದರೆ ಸಂಕಲನದಿಂದ ಸಂಕಲನಕ್ಕೆ ಅವರಲ್ಲಿ ತೋರಿಬರುವ ಬದಲಾವಣೆ, ದಿಕ್ಕು, ಮೂಡುವ ಹೊಸ ಆಯಾಮಗಳು ದೃಷ್ಟಿಕೋನಗಳು ನಿಜಕ್ಕೂ ಅಧ್ಯಯನ ಮಾಡಲು ಒಂದು ಒಳ್ಳೆಯ ವಿಷಯ . ಈ ನಿಟ್ಟಿನಲ್ಲಿ ಕೆಎಸ್ ನ ಅವರ ಮಲ್ಲಿಗೆಯ ಮಾಲೆ ನಿಜಕ್ಕೂ ಸಂಗ್ರಹ ಯೋಗ್ಯ ಕೃತಿ .ಇದರಲ್ಲಿ ಕವಿಗಳ ಅಷ್ಟೂ ಕವನ ಸಂಕಲನಗಳ ಸಂಗ್ರಹವಿದ್ದು ನಿಜ ಅರ್ಥದಲ್ಲಿ ಮಲ್ಲಿಗೆಯ ಮಾಲೆಯೇ ಸರಿ . ಇಡೀ ಪುಸ್ತಕ ಪರಿಚಯ 1ಲೇಖನದಲ್ಲಿ ಖಂಡಿತ ಸಾಧ್ಯವಿಲ್ಲ ಹಾಗಾಗಿ 1ಪಕ್ಷಿ ನೋಟದಂತೆ ಅವುಗಳ ಬಗ್ಗೆ ಹೇಳುತ್ತಾ ಹೋಗಬಹುದು ಅಷ್ಟೇ……

ಫೋಟೋ ಕೃಪೆ : google

ಕೆಎಸ್ ನ ಅವರಿಗೆ ಬರ್ನ್ಸ್ ಕವಿಯ ಬಗೆಗಿದ್ದ ಪ್ರೀತಿಯ ಬಗ್ಗೆ ಮೊದಲೇ ಹೇಳಿದ್ದೇನೆ. ಅಲ್ಲದೆ ಜಾನಪದ ಗೀತೆಗಳೂ ಅವರಿಗೆ ಬಹಳ ಇಷ್ಟ. ಹೀಗಾಗಿ ಅವರ ರಚನೆಗಳಲ್ಲಿ ಪ್ರೀತಿಯ ಮಾರ್ದವತೆ ಹಾಗೂ ಗೇಯತೆಯ ಲಾಲಿತ್ಯ ಹಾಸುಹೊಕ್ಕಾಗಿರುವುದು ಖಂಡಿತ ಅತಿಶಯವೇನಲ್ಲ. ಅವರೇ ಹೇಳಿದ ಹಾಗೆ ದೊಡ್ಡ ಗಡಿಯಾರದ ಎದುರಿನ ಹೂವಿನ ಅಂಗಡಿಯಲ್ಲಿ ರೇಷ್ಮೆಯ ನೂಲಿಗಿಂತ ತೆಳುವಾದ ಬಾಳೆಯ ನಾರಿನಲ್ಲಿ ದೂರದೂರಕ್ಕೆ ಗುಲಾಬಿ ಸಂಪಿಗೆ ಮರುಗ ಪಚ್ಚೆತೆನೆ ಇಟ್ಟು ಮಲ್ಲಿಗೆ ದಂಡೆ ಹೆಣೆಯುತ್ತಿದ್ದನ್ನು ನೋಡುವಾಗಲೆಲ್ಲಾ ಅದೇ ಅವರಿಗೆ ಒಂದು ಭಾವಗೀತೆಯಂತೆ ತೋರುತ್ತಿತ್ತಂತೆ . ಕಾವ್ಯ ಪಂಕ್ತಿಯ ಕಲ್ಪನೆ ಛಂದಸ್ಸಿನ ಪರಿಚಯ ಅವರಿಗೆ ಮೊದಲು ಬಂದಿದ್ದು ಅಲ್ಲಿಯೇ ಎಂದು ಹೇಳಿಕೊಳ್ಳುತ್ತಾರೆ.

ಪುಸ್ತಕ ಪರಿಚಯಿಸಲು ಸ್ಥೂಲವಾಗಿ ಇಲ್ಲಿನ ಕವನ ಸಂಕಲನಗಳನ್ನು 3ಭಾಗಗಳನ್ನಾಗಿ ವಿಂಗಡಿಸಿಕೊಂಡಿದ್ದೇನೆ .

೧. ಮೊದಲ ೭ ಕವನ ಸಂಕಲನಗಳು
೨. ನಡುವಿನ ೩ ಸಂಕಲನಗಳು

೩. ಕಡೆಯ 6 ಸಂಕಲನಗಳು

ಫೋಟೋ ಕೃಪೆ : wikipedia

೧. ಮೊದಲ ೭ ಕವನ ಸಂಕಲನಗಳು

  • ಮೈಸೂರು ಮಲ್ಲಿಗೆ (೧೯೪೨)
  • ಐರಾವತ(೧೯೪೫)
  • ದೀಪದ ಮಲ್ಲಿ (೧೯೪೭)
  • ಉಂಗುರ(೧೯೪೯)
  • ಇರುವಂತಿಗೆ (೧೯೫೪)
  • ಶಿಲಾಲತೆ(೧೯೫೮)
  • ಮನೆಯಿಂದ ಮನೆಗೆ (೧೯೬೦)

ಪ್ರೌಢಶಾಲೆಯಲ್ಲಿದ್ದಾಗ ಬರ್ನ್ಸ್ ಕವಿಯ ಕವನಸಂಗ್ರಹವನ್ನು ಓದಿ ಅದೇ ಧಾಟಿಯಲ್ಲಿ ಇಂಗ್ಲೀಷಿನಲ್ಲಿ ಕವನ ಬರೆದರು. ನಂತರ ಬಿ ಎಂ ಶ್ರೀಯವರ ಇಂಗ್ಲಿಷ್ ಗೀತಗಳ ಪ್ರಭಾವದಿಂದ ಕನ್ನಡದಲ್ಲಿ ಬರೆಯಲು ಆರಂಭಿಸಿದರು. ಇವರ ಮೊಟ್ಟ ಮೊದಲ ಕವನ “ಕಬ್ಬಿಗನ ಕೂಗು” ಪ್ರೊಫೆಸರ್ ಎ ಆರ್ ಕೃಷ್ಣಶಾಸ್ತ್ರಿಗಳು ಪ್ರಬುದ್ಧ ಕರ್ಣಾಟಕದಲ್ಲಿ ಅಚ್ಚಾಯಿತು. ನಂತರ ೧೯೩೨ ರಿಂದ ೧೯೪೧ ರ ವರೆಗಿನ ಬಹುತೇಕ ಪ್ರಬುದ್ಧ ಕರ್ಣಾಟಕದ ಎಲ್ಲ ಸಂಚಿಕೆಗಳಲ್ಲೂ ಇವರ ಕವನಗಳು ಪ್ರಕಟವಾದವು. ಈ ರೀತಿ ಪ್ರಬುದ್ಧ ಕರ್ಣಾಟಕದಲ್ಲಿ ಬಂದ ಕವನಗಳನ್ನೆಲ್ಲಾ ಸೇರಿಸಿ ಒಂದು ಸಂಕಲನವನ್ನಾಗಿ ಮಾಡಲು ತೀನಂಶ್ರೀ ಹಾಗೂ ಕೃಷ್ಣಶಾಸ್ತ್ರಿಗಳು ನಿರ್ಧರಿಸಿ ಮಹಾರಾಜಾ ಕಾಲೇಜಿನ ಕರ್ಣಾಟಕ ಸಂಘ ಪ್ರಕಟಿಸಲು ಒಪ್ಪಿತು. ಹೀಗೆ ೧೯೪೨ರ ಜನವರಿಯ 1 ಸಂಜೆ ಮೈಸೂರು ಮಲ್ಲಿಗೆ ಕವನ ಸಂಕಲನ ಪ್ರಕಟವಾಯಿತು .ಹಾಗಾಗಿ ಮೈಸೂರ ಮಲ್ಲಿಗೆಯ ಕಂಪಿಗೀಗ ಎಂಭತ್ತರ ಮಾಗಿದ ಹರೆಯ. ಇಂದಿಗೂ ಅದೇ ತಾಜಾತನ ಅದೇ ಲವಲವಿಕೆ ಅದೇ ನವಿರು ಭಾವನೆಗಳ ಪುಳಕ ತರುವ ಈ ಮಧುರ ದಾಂಪತ್ಯ ಗೀತೆಗಳನ್ನೇ ಆಧರಿಸಿ ಚಲನಚಿತ್ರ ತಯಾರಾಗಿದ್ದು ಸಾಹಿತ್ಯ ಚರಿತ್ರೆಯಲ್ಲಿಯೇ ಬರೆದ ಇತಿಹಾಸ . ಈ ಕವನ ಸಂಕಲನಕ್ಕೆ ಡಿವಿಜಿಯವರಿಗೆ ಮುನ್ನುಡಿ ಬರೆಯಲು ಕೇಳಿಕೊಂಡಾಗ ಮುನ್ನುಡಿಯ ಬದಲು 1ಪತ್ರವನ್ನು ಬರೆದು ಕೊಟ್ಟು ಅದರಲ್ಲಿ ಈ ಸಂಕಲನದ ಬಗ್ಗೆ ಹೀಗೆ ಹೇಳಿದ್ದಾರೆ “ಎಲ್ಲಾ ಮಲ್ಲಿಗೆಗಳಿಗಿಂತ ನನಗೆ ತಿಳಿದಿರುವ ಹಾಗೆ ಜಾಜಿಯಲ್ಲಿ ಮೈಯ ಸುಕುಮಾರತೆ ಹೆಚ್ಚು ಪರಿಮಳದ ನವುರು ಹೆಚ್ಚು. ನಿಮ್ಮ ಪದ್ಯಗಳನ್ನು ಓದುವಾಗ ನನಗೆ ಅಂಥ ಜಾಜಿಯ ಹೂವು ನೆನಪಿಗೆ ಬರುತ್ತದೆ. ಅದೇ ಹಗುರವಾದ ವಿಲಾಸ ಅದೇ ಕಟುವಲ್ಲದ ಸೌರಭ. ಸಾವಕಾಶವಾಗಿ ಗಮನ ಕೊಡುವವರಿಗೆ ಅದೇ ರೀತಿ ಮನಸ್ಸಿನಲ್ಲಿ ತುಂಬಿ ನಿಲ್ಲುವ ಸದ್ದಿಲ್ಲದ ಸಂತೋಷ”.

ಫೋಟೋ ಕೃಪೆ : google

ಬರಿಯ ಕವನಗಳಲ್ಲಿರುವ ಸಂಕೀರ್ಣತೆಯನ್ನು ಕೆಲವೊಮ್ಮೆ ಓದುಗರಿಗೆ ಅರ್ಥೈಸಿಕೊಳ್ಳಲು ಸಾಧ್ಯವಾಗದಿದ್ದರೂ ಸಂಗೀತದ ಸಹಾಯದಿಂದ ಆ ಭಾವಸಮುದ್ರದ ಆಳಕ್ಕೆ ಇಳಿಯಲು ಕ್ವಚಿತ್ತಾದರೂ ಸಹಕಾರವಾಗುತ್ತದೆ . ಹಾಗಾಗಿ ಗೇಯತೆ ಇರುವ ಇವರ ಕವನಗಳು ಮನೆಮನಗಳನ್ನು ಮುಟ್ಟಲು ಸಾಧ್ಯವಾಯಿತು . ಹಲವಾರು ಭಾವಗೀತೆಗಳು ಈ ಸಂಗ್ರಹ ಗಳಿಂದಲೇ ಆಯ್ಕೆಯಾಗಿರುವುದು ಉದಾಹರಣೆಗೆ:

ಮೈಸೂರು ಮಲ್ಲಿಗೆ

  • ನನ್ನವಳು ನನ್ನೆದೆಯ ಹೊನ್ನಾಡನಾಳುವಳು ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ ಮದುವೆಯಾಗಿ ತಿಂಗಳಿಲ್ಲ
  • ನಿನ್ನ ಪ್ರೇಮದ ಪರಿಯ
  • ಒಮ್ಮೆ ನಕ್ಕು ನನ್ನ ನಗಿಸು
  • ರಾಯರು ಬಂದರು ಮಾವನ ಮನೆಗೆ ಹೊಸಿಲ ಬಳಿ ಬಂದೊಡನೆ ಬಾಗಿಲನ್ನು ತೆರೆದಾಕೆ
  • ಹೂವು ಬೇಕೇ
  • ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿ ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ
  • ಒಂದಿರುಳು ಕನಸಿನಲಿ
  • ಬಳೆಗಾರ ಚೆನ್ನಯ್ಯ
  • ಅತ್ತಿತ್ತ ನೋಡದಿರು
  • ಕೇತಕಿಯ ಬನಗಳಲಿ ಸಂಚರಿಸದಿರು
  • ಐರಾವತ
  • ಇವಳು ಯಾರು ಬಲ್ಲೆಯೇನ
  • ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ
  • ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
  • ಬಿದ್ದ ಹೂವಲ್ಲ ಕದ್ದ ಹೂವಲ್ಲ
  • ದೀಪದ ಮಲ್ಲಿ
  • ನೀ ಬರುವ ದಾರಿಯಲಿ
  • ಅಂತಿಂಥ ಹೆಣ್ಣು ನೀನಲ್ಲ
  • ಹಗಲಿನಬ್ಬರ ತಣ್ಣಗಾಯಿತು
  • ಉಂಗುರ
  • ತುಂಬು ತಿಂಗಳಿನ ಮಲ್ಲಿಗೆ ಹಂಬಿನ
  • ಮೊದಲದಿನ ಮೌನ

ಇರುವಂತಿಗೆ
ಅಕ್ಕಿಯಾರಿಸುವಾಗ
ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು
ಶ್ರೀಕೃಷ್ಣನಂತೊಂದು ಮುಗಿಲು
ನಕ್ಕಂತೆ ಇರುವ ಸಿರಿಮೊಗವ
ಬಳ್ಳಿಯ ಬೆರಳಲ್ಲಿ ಹೂವೊಂದಿತ್ತು
ಸಿರಿಗೆರೆಯ ನೀರಲ್ಲಿ ನಿಂತ ತಾವರೆಯಲ್ಲಿ

ಹೆಸರು ಹಾಕಿದರೆ ಸಾಕು ಕವಿತೆಗಳ ಬಗ್ಗೆ ಬರೆಯುವುದೇ ಬೇಡ ಎಲ್ಲವೂ ಜನಜನಿತ ಎಲ್ಲವೂ ಪ್ರಖ್ಯಾತ ಎಲ್ಲವೂ ಸರ್ವವಿದಿತ.

ಇನ್ನೂ ಶಿಲಾಲತೆಯಲ್ಲಿ ಕೆಲವು ಕವನಗಳಲ್ಲಿ ಹಾಸ್ಯ ವಿಡಂಬನೆ ಲೋಕಾನುಭವದ ವಿಸ್ತಾರತೆಯ ಹೊಳಹುಗಳನ್ನು ಕವಿತೆಯ ಲಯ ಧ್ವನಿಗಳು ಬದಲಾಗುತ್ತಾ ಹೋಗುವುದನ್ನು ಕಾಣಬಹುದು . ಹಾಗೆಯೇ ಮನೆಯಿಂದ ಮನೆಗೆ ಸಂಕಲನದ ಸಾಲುಗಳು ಸಹ ಕೆ ಎಸ್ ನ ಅವರ ಸಿಗ್ನೇಚರ್ ಶೈಲಿಯಿಂದ ವಸ್ತು ಹಾಗೂ ಪ್ರಯೋಗಗಳಲ್ಲಿ ಸ್ವಲ್ಪ ಹೊರತಾಗಿ ಇರುವುದು ವಿಶೇಷ. ಇದೇ ಸಂಕಲನದ ಏರಿಕೆ ಇಳಿಕೆ ಎಂಬ ಕವನದಲ್ಲಿ ಇವರು ಹೇಳುವ ಈ ಸಾಲುಗಳು ಎಷ್ಟು ಔಚಿತ್ಯಪೂರ್ಣ ನೋಡಿ

ಹಳಬರನು ಕೇಳದಿರಿ ನೀವೆಂದಿನವರೆಂದು
ಹೊಸಬರನು ಹೊಗಳದಿರಿ ನೀವಿಂದಿನವರೆಂದು
ಒಬ್ಬರ ವಿಳಾಸದಲಿ ಇನ್ನೊಬ್ಬರಿರಬಹುದು ಒಟ್ಟಾರೆ ಮಾತು ಅನ್ಯಾಯ!

ಫೋಟೋ ಕೃಪೆ : google  (ಧರ್ಮಪತ್ನಿಯೊಂದಿಗೆ ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿಯವರು)

ನಡುವಿನ ೩ ಕವನ ಸಂಕಲನಗಳು

೧೯೬೦ ರಿಂದ ೧೯೭೯ರವರೆಗೆ ಸುಮಾರು ಹದಿನಾರು ವರ್ಷ ಯಾವುದೇ ಹೊಸ ಸಂಗ್ರಹಗಳು ಹೊರಬಂದಿಲ್ಲ. ಕವಿಗಳೇ ಸ್ವತಃ ಹೇಳಿಕೊಂಡಂತೆ ಆ ಸಮಯದಲ್ಲಿ ಹೆಚ್ಚು ಬರೆದಿರಲಿಲ್ಲ; ಅದು ಚಿಂತನೆಯ ಕಾಲ. ಕವನದಿಂದ ಕವನಕ್ಕೆ ಸಂಗ್ರಹದಿಂದ ಸಂಗ್ರಹಕ್ಕೆ ಕವಿತೆ ಹೇಗೆ ಸಾಗುತ್ತಿದೆ ಭಾಷೆಯ ಬಳಕೆ ಕಾವ್ಯಾಲಂಕಾರಗಳ ಬಗ್ಗೆ ಸಮೀಕ್ಷೆ ಪರ್ಯಾಲೋಚನೆ ಮಾಡಿದರಂತೆ . ಅದರಂತೆ ತೆರೆದ ಬಾಗಿಲು ಸಂಗ್ರಹದ ನಂತರ ಸರಳತೆ ಹೃದ್ಯತೆ ಸುಲಭವಲ್ಲವೆಂದು ಅವರಿಗೆ ಮತ್ತಷ್ಟು ಸ್ಪಷ್ಟವಾಯಿತಂತೆ . ಈ ಸಮಯದ 3 ಸಂಕಲನಗಳೆಂದರೆ

  • ತೆರೆದ ಬಾಗಿಲು
  • ನವಪಲ್ಲವ ಮತ್ತು
  • ದುಂಡು ಮಲ್ಲಿಗೆ .

ತೆರೆದ ಬಾಗಿಲುನಲ್ಲಿನ ತಾಯಿಮಗಳ ಸಂಭಾಷಣೆಯ ರೈಲ್ವೆ ನಿಲ್ದಾಣದಲ್ಲಿ ನಿಜಕ್ಕೂ 1ರೀತಿಯ ಶಬ್ಧಶಿಲ್ಪವೇ.

ಸಂಭಾಷಣೆಯ ರೂಪದಲ್ಲಿ 2 ಜೀವಗಳು ಅವುಗಳ ಅಂತಕರಣವನ್ನು ತೆರೆದಿಡುವ ರೀತಿ ನಿಜವಾಗಿ ಸೂಕ್ಷ್ಮ ಮನಸ್ಸಿನವರಿಗೆ ತುಂಬಾ ತಟ್ಟುತ್ತದೆ . 5 ಮತ್ತು 8ನೆಯ ಪದ್ಯಗಳಲ್ಲಿ ಮಾತ್ರ ವರ್ಣನೆ . ಮಿಕ್ಕಿದೆಲ್ಲಾ ಸಂಭಾಷಣೆಯೇ ಭಾಷೆಯ ವಿಶಿಷ್ಟ ಪ್ರಯೋಗದ ನಿದರ್ಶನವಾಗುತ್ತದೆ ಈ ಕವನ. ನಂತರದ ನವಪಲ್ಲವ ಹಾಗೂ ದುಂಡು ಮಲ್ಲಿಗೆಯಲ್ಲಿ ಮತ್ತೆ ಹಳೆಯ ಶೈಲಿಗೆ ಬಂದಿದ್ದಾರೆ ಇವುಗಳಲ್ಲಿ ಗೇಯಗುಣ ಪ್ರಧಾನವಾಗಿದೆ ಕವಿತೆಗಳು ಹೆಚ್ಚಿವೆ.

ಫೋಟೋ ಕೃಪೆ : wikipedia

ಕೆಎಸ್ನ ಅವರು ತೀನಂಶ್ರೀ ಬಿಎಂಶ್ರೀ ಹಾಗೂ ವೀ ಸೀತಾರಾಮಯ್ಯ ಅವರು ನೀಡಿದ ತಯಾರಿಯಲ್ಲಿ ನುರಿತವರು . ವಿ ಸೀಯವರು ಕೆ ಎಸ್ ನ ಅವರ ಬಗ್ಗೆ ಹೀಗೆ ಹೇಳುತ್ತಾರೆ “ನಾನು ಕಂಡ ಕವಿಗಳಲ್ಲಿ ಪ್ರೌಢ ವ್ಯಾಸಂಗಿಗಳಲ್ಲಿ ನನಗಿಂತ ಕಡಿಮೆ ವಯಸ್ಸಿನ ಇತರರಲ್ಲಿ ವಿಚಾರ ವಿವೇಚನೆ ವಿಮರ್ಶೆ ಇವಕ್ಕೆ ಸೂಕ್ಷ್ಮಾತಿಸೂಕ್ಷ್ಮವಾಗಿ ಇವರ ಮನಸ್ಸು ಮಿಡಿಯುವಂತೆ ಇತರರನ್ನು ನಾನು ಕಂಡಿಲ್ಲ .”

ಕಡೆಯ 6 ಸಂಕಲನಗಳು

ಈ ವೇಳೆಗಾಗಲೇ ತೀವ್ರತರ ಡಯಾಬಿಟಿಸ್ ನಿಂದ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದ ಕವಿಗಳಿಗೆ ಕಣ್ಣಾಗಿ ಲೇಖನಿಯಾಗಿ ನಿಂತವರು ಎಂ ವಿ ವೆಂಕಟೇಶಮೂರ್ತಿಯವರು . ಹೀಗೆ ಹೇಳಿ ಬರೆಸಿದ ಕವನಗಳ ಸಂಕಲನ 6 ಮುಟ್ಟಿದೆಯೆಂದರೆ ನಿಜಕ್ಕೂ ಸೋಜಿಗವೇ. ಬರೆಸಿದವರು ಬರೆದವರು ಇಬ್ಬರೂ ಪ್ರಾತಃಸ್ಮರಣೀಯರು. ಈಗಿನ ಕಾಲದ ಸ್ವಾರ್ಥಪರ ಸಮಾಜದಲ್ಲಿ ಬೇರೊಬ್ಬರಿಗಾಗಿ ಮಿಡಿಯುವ ಸ್ಪಂದಿಸುವ ಹೃದಯಗಳು ವಿರಳವಾಗಿರುವ ಸಮಯದಲ್ಲಿ ಎಂ.ವಿ. ವೆಂಕಟೇಶಮೂರ್ತಿ ಅವರ ಕಾರ್ಯವನ್ನು ಎಷ್ಟು ಶ್ಲಾಘಿಸಿದರೂ ಕಡಿಮೆಯೇ . ಈ ಕುರಿತಾಗಿ ಕವಿ ಹೇಳುವ ಮಾತುಗಳು ನೋಡಿ

ಕಣ್ಣು ಹೋಗಿದ್ದರೂ ಕವಿತೆ ನಿಲ್ಲಲೇ ಇಲ್ಲ
ಒಳಗಣ್ಣ ಮುಂದೆ ನಾನು ನನ್ನ ಕವಿತೆಯ ಕಂಡೆ
ಕವಿತೆ ಸಾವಿರ ಕಣ್ಣ ತೆರೆದು ಕಂಡಿತು ನನ್ನ

ಈ ಸಮಯದಲ್ಲಿ ಬರ್ನ್ಸ್ ಕವಿಯ ಪ್ರೇಮಗೀತೆಗಳನ್ನು ಕೆಲವು ಚೀನಿ ಕವನಗಳನ್ನು ಅನುವಾದಿಸಿದರು. ಮಿಕ್ಕವು ಸ್ವತಂತ್ರ ಅವರ ಕವನಗಳು . ಲೇಖಕ ಎಂ ವಿ ವೆಂಕಟೇಶ ಮೂರ್ತಿಯವರು ಸಂಜೆಹಾಡು ನ ಅರಿಕೆ ಯಲ್ಲಿ ಹೇಳಿರುವಂತೆ “ಸಾಹಿತ್ಯಕೃತಿ ಯಾವುದೇ ಪ್ರಕಾರಕ್ಕೆ ಅದು ಸೇರಿದ್ದಾಗಲಿ ಹೇಳಿ ಬರೆಸುವಂತದಲ್ಲ. ಅದರಲ್ಲಿಯೂ ಕವಿತೆಯಂತೂ ಹೇಳಿ ಬರೆಸುವ ಸಾಮಗ್ರಿ ಅಲ್ಲವೇ ಅಲ್ಲ. ಹೇಳಿ ಬರೆಸಿದಾಗ ಹಲವೇಳೆ ಮೂಲದ ಜಾಡು ತಪ್ಪುವ ಭಾವನೆಗಳು ಚದುರಿಹೋಗುವ ಬಂಧ ಜಾಳಾಗುವ ಸಾಧ್ಯತೆಗಳು ಹೆಚ್ಚು . ಇಂಥ ಮಿತಿಗಳ ನಡುವೆಯೂ ಕೆಎಸ್ ನ ಅವರ ಕಾವ್ಯ ಪ್ರತಿಭೆಯ ಚಿಂತನೆ ಇಲ್ಲಿಯ ಕವಿತೆಗಳನ್ನು ರೂಪಿಸಿದೆ ಸೃಜಿಸಿದೆ “.ಕೆ ಎಸ್ ನ ಅವರೇ ಬೇರೊಂದು ಸಂದರ್ಭದಲ್ಲಿ ಹೀಗೆ ನುಡಿದಿದ್ದಾರೆ

ಹೊರಗಣ್ಣ ಮುಚ್ಚಿದರೆ ಒಳಗಣ್ಣು ತೆರೆಯುವುದು ಕಾಣುವುದು ಎಲ್ಲೆಲ್ಲೂ ವಿಶ್ವರೂಪ
ಅದನ್ನು ಇಲ್ಲಿಗೂ ಅನ್ವಯಿಸಬಹುದು . ತುಂಬ ಅಡಕವಾಗಿ ಗಂಭೀರ ಚಿಂತನೆಯನ್ನು ತೋರಿಸುವ ಇವರ ಕೆಲ ಸಾಲುಗಳು

ನನ್ನ ಹಾಡಿನ ಮೊದಲ ಚರಣ ತೊಟ್ಟಿಲು ಗೆಳೆಯ ಕೊನೆಯಂತೂ ಊರಾಚೆಗಿರುವ ಮಸಣ

ಬದುಕು ನೋವಿನ ಮಾಲೆ
ನಲಿವು ಉಡುಗೊರೆ ಅದಕೆ
ಕಣ್ಣು ಕಪ್ಪೆಯ ಚಿಪ್ಪಿನಗಲದ ದೋಣಿ
ಅದಕೆ ಕಂಡ ನೋಟ ಸಮುದ್ರದಂಥ ಪ್ರಾಣಿ

ನಮ್ಮ ಇಬ್ಬರ ನಡುವೆ ಎಲ್ಲವೂ ನಿಶ್ಯಬ್ದ
ಈ ಮೌನ ಒಂದು ಸಾವಿರ ನಾಲಿಗೆ

ಸರಳ ಭಾಷೆಯಲ್ಲಿ ಗಹನ ವಿಚಾರಗಳನ್ನು ಹೇಳುವ, ಅಂತರಾಳದ ಒಲವು ಚೆಲುವು ನಲಿವುಗಳ ಬಗ್ಗೆ ಸುಂದರವಾಗಿ ವರ್ಣಿಸುವ ಮನಕ್ಕೆ ಹೆಚ್ಚು ಆಪ್ತವೆನಿಸುವ ಕವಿತೆಗಳು ಇವರವು. ಹಾಗೆಯೇ ನೈಜತೆಗೆ ಹಿಡಿವ ಕನ್ನಡಿಗಳಾಗಿ ತಿವಿಯುವ ಮೊನೆಯ ವ್ಯಂಗ್ಯೋಕ್ತಿಗಳಾಗಿಯೂ ವಾಸ್ತವವನ್ನು ಬರೆಯುವ ಪ್ರಯತ್ನವೂ ಇದೆ . ಅದಕ್ಕೆ ಸಾಕ್ಷಿ ಈ ಸಾಲುಗಳು

ಈ ಸಲವೂ ಕೂಡ ಕೋಗಿಲೆಗಿಲ್ಲ ಬಹುಮಾನ
ಸಂಗೀತ ಪಂಡಿತರ ಬಹುಮತದ ತೀರ್ಮಾನ
ಕೆಲವರಿಗೆ ಸಂತೋಷ ಕೆಲವರಿಗೆ ಅನುಮಾನ
ಇನ್ನು ಕೆಲವರಿಗಂತೂ ಅಡ್ಡಗೋಡೆಯ ದೀಪ
ಹಲವರಿಗೆ ಬಂದಿತ್ತು ಬೆಂಕಿ ಕಾರುವ ಕೋಪ

ಇಂದಿನ ಪ್ರಸ್ತುತ ಬದುಕಿನಲ್ಲಿರುವ ವಿದ್ಯಮಾನಗಳಿಗೆ ನಿಜಕ್ಕೂ ಇದು ಕನ್ನಡಿ ತೋರಿಸುವಂತಿದೆ ಅಲ್ಲವೇ? ಜಿ ಎಸ್ ಶಿವರುದ್ರಪ್ಪ ಅವರು ಎದೆ ತುಂಬ ನಕ್ಷತ್ರ ಕವಿತೆಗೆ ಮುನ್ನುಡಿ ಕವಿತೆ ಬರೆಯುತ್ತಾ ಹೀಗೆ ಹೇಳುತ್ತಾರೆ.

ಎದೆ ತುಂಬ ನಕ್ಷತ್ರಗಳ ಬಚ್ಚಿಟ್ಟುಕೊಂಡ
ಚೈತನ್ಯಕ್ಕೆ ಕತ್ತಲೆಯ ಭಯವಿಲ್ಲ
ಕಾರ್ತೀಕದ ಆಕಾಶದಂಥ ಉಜ್ವಲ ಕವಿಗೆ
ಮುನ್ನುಡಿಯ ಹಣತೆಗಳ ಯಾವ ಹಂಗೂ ಇಲ್ಲ

ಚನ್ನವೀರ ಕಣವಿಯವರ ನುಡಿಯಲ್ಲಿ ಕೇಳಿ

ಜನ್ಮಜನ್ಮಾಂತರದ ಪಾಡು ಒಂದೇ ಹೂವಿನಲಿ ಪರಿಮಳಿಸಿ ಸಾವಿರದ ಮನಸ್ಸಿನ ಅಂಗಳದಲ್ಲಿ

ತಿಂಗಳ ಬೆಳಕು ಹರಡಿ ಚೆಲುವು ಒಲವಿಗೆ ಬಾಗಿ
ಒಲುಮೆಯೇ ದೈವ ಬದುಕಿನ ದೀರ್ಘ ಪಯಣದಲಿ

ಎಚ್ಎಸ್ ವೆಂಕಟೇಶಮೂರ್ತಿ ಅವರ ಮಾತುಗಳಲ್ಲಿ “ಮರವಲ್ಲದ ಕೈಮರ ನೆರಳು ನೀಡುತ್ತದೆ ಮರವು ನಿರ್ವಹಿಸದ ಇನ್ನೊಂದು ನಿಯೋಗವು ಅದಕ್ಕಿದೆ ನೆರಳು ನೀಡುವುದರ ಜತೆಗೆ ಮುಂದಿನೂರಿನ ದಾರಿಯನ್ನು ಅದು ತೋರಿಸುತ್ತದೆ.” ಕೆಎಸ್ ನ ಅವರ ಸಾಹಿತ್ಯ ಸೇವೆಗೆ ಸಲ್ಲುವ ಸುಂದರ ವರ್ಣನೆ ಇದು. ಇಂತಹ ಸುಂದರ ಕಾವ್ಯದ ಮಾಲೆಯನ್ನು ದಳದಳಗಳಾಗಿ ಹೂವಿನ ಪಕಳೆಗಳಂತೆ ಆಸ್ವಾದಿಸುವುದು ಒಂದು ಲೇಖನದಲ್ಲಿ ಖಂಡಿತ ಸಾಧ್ಯವಿಲ್ಲ. ಇಲ್ಲಿ ಮಾಲೆಯ ಸೊಬಗನ್ನು ಅಷ್ಟೆ ಬಣ್ಣಿಸಿರುವೆ . ಪುಟಪುಟವನ್ನೂ ತಿರುಗಿಸಿದ ಮೇಲೆ ದಳದಳದ ಚೆಲುವಿನ ಪರಿಚಯ. ಕವಿತೆ ಬಗ್ಗೆ ಕವಿಯ ಮಾತುಗಳನ್ನೇ ಉದ್ಧರಿಸುತ್ತ ಲೇಖನ ಮುಗಿಸುವೆ .

“ಕವಿತೆ ಎಂದರೇನು? ನನಗೆ ತಿಳಿಯದು. ಕಣ್ಣು ಕಪ್ಪೆಯ ಚಿಪ್ಪಿನಗಲದ ದೋಣಿ ;ನೋಟ ಸಮುದ್ರದಂಥ ಪ್ರಾಣಿ. ಬರೆಯುತ್ತ ಬರೆಯುತ್ತ ಉತ್ತರ ಹುಡುಕಬೇಕಾಗಿದೆ. ನನ್ನ ಕವಿತೆ ಎಂದರೆ ಇಷ್ಟೇ: ಕೆಲವು ಕವನಗಳು, ಕೆಲವು ಗೀತೆಗಳು, ಕೆಲವು ಪ್ರಯತ್ನಗಳು, ಕೆಲವು ಫಲಗಳು, ಕೆಲವು ದೂರದ ಬೆಳಕು ಕೆಲವು ಹತ್ತಿರದ ದನಿ.


  • ಸುಜಾತಾ ರವೀಶ್ – ಮೈಸೂರು

Leave a Reply

Home
Search
Menu
Recent
About
×