ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೫)

ಮನುಷ್ಯ ಜೀವನ್ಮುಖಿಯಾದಾಗ ಆತ ನಿಜವಾಗಿಯೂ ಸಂತುಷ್ಟನಾಗಿರುತ್ತಾನೆ‌. ಆದರೆ ‘ತುಪ್ಪೇರಿದ ದರ್ಪಣದಲ್ಲಿ ತನ್ನ ಪ್ರತಿಬಿಂಬ ಪ್ರಜ್ವಲಿಸದಂತೆ… ಕೆಲವರ ಮನಸ್ಸು ಎಂದಿಗೂ ಅಂತರ್ಮುಖಿಯಾಗಿ ತನ್ನ ಗುಣಾವಗುಣಗಳ ಅವಲೋಕನಕ್ಕೆ ತೊಡಗಿಕೊಳ್ಳುವುದೇ ಇಲ್ಲ. ನಿವೃತ್ತ ಶಿಕ್ಷಕಿ ಶಿವದೇವಿ ಅವನೀಶಚಂದ್ರ ಅವರ ‘ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣದಲ್ಲಿ ‘ಬಾಲಬಡುಕರೂ ವಂದಿಮಾಗಧರೂ” ತಪ್ಪದೆ ಮುಂದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ…

ಇಂದು ಎಂದಿನಂತೆಯೇ ಕಾಲ್ನಡಿಗೆಯ ಭರಾಟೆಯಲ್ಲಿದ್ದೆ. ದಾರಿಯಲ್ಲಿ ಮನಸೆಳೆದ ಕೆಲವು ಪುಟ್ಟ ಹೂಗಳ ಮೊಗವನ್ನು ಗಿಟ್ಟಿಸಲು ಬಾಗಿದ್ದೆ. ಅದೇ ಶ್ವಾನ ಪಡೆ. ಬೌ… ಬೌ… ಎನ್ನುತ್ತಾ ನನ್ನನ್ನು ಸಮೀಪಿಸಲು ಪ್ರಯತ್ನಿಸುತ್ತಿತ್ತು. ಹೂವಿನೊಡನೆ ಸಂವಾದನಿರತಳಾಗಿದ್ದ ನನ್ನ ಧ್ಯಾನ ಭಂಗ ಮಾಡಲು ಇವುಗಳಿಗೆ ಅನುಮತಿ ನೀಡಿದವರಾರು…? ಅವು ಆಕ್ರಮಣಕಾರಿಗಳೇನೂ ಆಗಿರಲಿಲ್ಲ. ಆದರೆ ಅವುಗಳನ್ನು ಅವಗಣಿಸುವಂತೆಯೂ ಇಲ್ಲ. ತಮಗೆ ಅನ್ನ ಹಾಕಿದ ಒಡೆಯನ ಋಣ ಸಂದಾಯ ಮಾಡಲು ಸಿಕ್ಕ ಸಂದರ್ಭವನ್ನು ಕೈಜಾರಗೊಡದಂತೆ ಬಳಸಿಕೊಳ್ಳುವ ಅವಸರ ಅಲ್ಲಿತ್ತು, ಅಷ್ಟೇ…! ಬೇಕಾದ ಭಾವಚಿತ್ರವನ್ನು ಕ್ಲಿಕ್ಕಿಸಿ ಮುಂದಡಿಯಿಟ್ಟೆ..ಆದರೆ ನನ್ನ ಮನಸ್ಸೇಕೋ ಅಲ್ಲೇ ಕೀಲಿಸಿ ಕೊಂಡಿತು.

*
ಪ್ರತಿದಿನವೂ ತಪ್ಪದೆ ನನ್ನನ್ನು ಈ ತಿರುಗಾಟದ ಹಾದಿಯಲ್ಲಿ ಮೂರ್ನಾಲ್ಕು ವರ್ಷಗಳಿಂದ ನೋಡಿ ಪರಿಚಯವಿರುವ ಈ ಶ್ವಾನದಳಕ್ಕೆ ಬೊಗಳಲು ಒಂದು ನೆಪ‌ಸಿಕ್ಕಿದರೆ ಸಾಕೆ….
ಆ ಮೂಲಕ ತಾವು ತಮ್ಮ ಕರ್ತವ್ಯದಲ್ಲಿ ಜಾಗೃತರಾಗಿದ್ದೇವೆಂಬುದನ್ನು ಸಾಬೀತುಪಡಿಸುವುದಕ್ಕೆ ಒಂದು ಪುರಾವೆಯನ್ನು ಕಂಡುಕೊಂಡವೆ…..?

ಹಾಗಂತ ನಾನು ಶ್ವಾನದ್ವೇಷಿಯೆಂದು ಯಾರೂ ತೀರ್ಮಾನಿಸುವ ಅಗತ್ಯವಿಲ್ಲ. ನಾಯಿಗಳಿಗಿರುವ ಘನತೆಯನ್ನೂ ನಿಷ್ಠೆಯನ್ನೂ ಒಟ್ಟಾಗಿಯೇ ಅನುಭವಿಸಿದವಳು ನಾನು..
ಹಾಗಾದ್ರೆ ಈ ಘಟನೆಯೇಕೆ ನನ್ನನ್ನು ಇಷ್ಟು ಕಾಡಿತು…..

*
ಮನುಷ್ಯನ ಜಾತಕದಲ್ಲಿ ಆಯಾ ನಕ್ಷತ್ರಗಳಿಗೆ ಹೊಂದಿಕೊಂಡಂತೆ ಪ್ರಾಣಿ ಸ್ವಭಾವಗಳೂ ಅಂತರ್ಗತವಾಗಿರುತ್ತವಂತೆ. ಬದುಕಿನ ಹಲವು ಘಟ್ಟಗಳನ್ನು ಹಾದು ಬಂದಿರುವ‌ ನನಗೆ ಮನುಷ್ಯನಾಗಿ ಹುಟ್ಟಿದವನು ಅವನ ಸಹಜ ಸ್ವಭಾವಕ್ಕೆ ಮಾನ್ಯತೆ ನೀಡದೆ ಹಲವೊಮ್ಮೆ ಪಶುಗಳಿಗಿಂತಲೂ ನಿಕೃಷ್ಟವಾಗಿ ನಡೆದುಕೊಳ್ಳುವುದು ಏಕೆ…

ಪ್ರಾಣಿಗಳಿಗಿಂತ ಭಿನ್ನವಾಗಿ ಆಹಾರ ಸೇವಿಸುವ..ಬೌದ್ಧಿಕ ವಿಕಸನದ ತುತ್ತ ತುದಿಯಲ್ಲಿರುವ ಮಾನವನಿಗೆ ಪಶುಗಳನ್ನೂ ಮೀರಿದ‌ ಪಶು ಸ್ವಭಾವ ಆವಾಹನೆ ಆಗಿಬಿಡುವುದಾದರೂ ಏಕೆ…
ಆತ್ಮಗ್ಲಾನಿಯಾಗದಂತೆ ನಡೆದುಕೊಳ್ಳುವ ವಿವೇಕ ಹಲವೊಮ್ಮೆ ಶೂನ್ಯವಾಗಿಬಿಡುವುದೇಕೆ…

*
ಮನುಷ್ಯ ಸಂಘಜೀವಿ. ತನ್ನನ್ನು ಕೊಲ್ಲುವ ದುಷ್ಟ ಪ್ರಾಣಿಗಳನ್ನೂ ತನ್ನ ಅಂಕೆಯಲ್ಲಿರಿಸಿಕೊಂಡು ತನ್ನಿಚ್ಛೆಯಂತೆ ದೊಂಬರಾಟ ಆಡಿಸುವ ಚಾಕಚಕ್ಯತೆ ಆತನಿಗಿದೆ. ಆದರೆ ಮಂಗನಂತೆ ಆಡುವ ಸನ್ನಿವೇಶಗಳು,’ ಏಕೆ ಇವನು ಮೂಲ ಪ್ರಾಣಿಯ ಹಂತದಲ್ಲೇ ಇದ್ದಾನೆ ? ವಿಕಸನವೆನ್ನುವುದು ಅವನ ಆಕಾರ ಹಾಗೂ ಮೆದುಳಿನ ಗಾತ್ರಕ್ಕೆ ಮಾತ್ರ ಸಂಬಂಧಿಸಿದ್ದಾ… ವ್ಯಕ್ತಿತ್ವಕ್ಕೆ ಸಂಸ್ಕಾರಕ್ಕೆ ಇದು ಇನ್ನೂ ಒಳಪಡದಿರುವುದೇಕೆ..ಹಾಗಾದರೆ ಶಿಕ್ಷಣ ಅವನಲ್ಲಿರುವ ಮೃಗತ್ವವನ್ನು ಸಂಸ್ಕಾರಕ್ಕೆ ಒಳಪಡಿಸಲು ವಿಫಲವಾಯಿತೇ . ‘ವಿವೇಚನೆಯುಳ್ಳ ಪ್ರಾಣಿ’ ಎಂದು ಉತ್ತುಂಗದಲ್ಲಿ ಪ್ರತಿಷ್ಠಾಪನೆಗೊಂಡಿರುವ ಇವನ ಸಂಸ್ಕಾರ ಆಷಾಢಭೂತಿತನವೇ. ಸ್ವಾರ್ಥದ ಪರಿಧಿಯಲ್ಲಿ ಅಂಧನಾಗಿ ಬಿಡುವ ಇವನು ಇತರರಿಗೆ ತನ್ನಿಂದ ಆಗುವ ಅನ್ಯಾಯಗಳನ್ನು ಕಂಡು ಹಿಂಸಾವಿನೋದವನ್ನು ಅನುಭವಿಸುವುದಾದರೂ ಏಕೆ….?’ ಪ್ರಶ್ನೆ ಪುಂಖಾನುಪುಂಖವಾಗಿ….ತನ್ನ ಮೆದುಳಿನಲ್ಲಿ ರೆಕ್ಕೆಬಿಚ್ಚಲು ತೊಡಗಿದಾಗ…..ಅದರ ಬಗ್ಗೆ ಗಂಭೀರವಾಗಿ ಆಲೋಚಿಸದೆ ಸುಮ್ಮನಿರಲಾಗಲಿಲ್ಲ….ಪ್ರಿಯಂವದೆಗೆ…..

*
ಯಾವುದೋ ಒಂದು ಗುಂಪು ಅದಕ್ಕೊಂದು ಹೆಸರು. ಆ ಗುಂಪಿಗೊಬ್ಬ‌ ನಾಯಕ….ಅವನಿಗೆ ತನಗಿಂತಲೂ ಕಡಿಮೆ ಅರ್ಹತೆಯಿದ್ದರೂ ಪರವಾಗಿಲ್ಲ…ಅದು ನಗಣ್ಯ….ಆದರೆ ಅವನು ನಾಯಕನ ಸ್ಥಾನದಲ್ಲಿರುವುದರಿಂದಲೇ….ಅವನನ್ನು ಆರಾಧಿಸುವ ಹಿಂಬಾಲಿಸುವ ಪಡೆ.ಭಗವಂತನನ್ನೂ, ತನ್ನ ಆತ್ಮಸಾಕ್ಷಿಯನ್ನೂ ಅವಲೋಕಿಸಲು ಇಲ್ಲದ ವ್ಯವಧಾನ…..ಈ ನಾಯಕನ ಕರೆಗೆ ಧಾವಿಸಿಬಿಡಲು ಏಕೆ ಹಾಗೆ ಹಪಹಪಿಸುತ್ತದೆ. ಇಂತಹ ಬಾಲಬಡುಕತನ….ಇದು ವ್ಯವಸ್ಥೆಯ ವ್ಯಂಗ್ಯ ತಾನೆ….? ಗುಲಾಮೀತನದ ಪರಮಾವಧಿ..ಅಲ್ಲವೇ.!
ಹಿಂದೆ ‘ಗುಲಾಮ’ರೆನ್ನುವವರು ಸ್ವಾತಂತ್ರ್ಯಹೀನರಾಗಿದ್ದರು.ಭುಜಬಲ ಹಾಗೂ ಧನಬಲವುಳ್ಳವರ ಅಧೀನತೆಯನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಅವರಿಗಿತ್ತು.ಏಕೆಂದರೆ ಮಾರುಕಟ್ಟೆಯಲ್ಲಿ ಪ್ರಾಣಿಗಳಂತೆ ಹರಾಜು ಹಾಕುವಾಗ ಖರೀದಿಸಿ ಅವರನ್ನು ಜೀವಮಾನವಿಡೀ ಜೀತದಾಳುಗಳಾಗಿ ದುಡಿಸಿಕೊಳ್ಳುವ ಹೀನಪದ್ಧತಿ ಆಚರಣೆಯಲ್ಲಿತ್ತು.
ನೀಗ್ರೋ ಗುಲಾಮಗಿರಿಯ ಈ ಪದ್ಧತಿಗೆ ಅಂತ್ಯ ಹೇಳಿದವನು ಅಮೆರಿಕಾದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್…!

ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿಯೂ ಆಚರಣೆಯಲ್ಲಿದ್ದ‌ ಇಂತಹ ದಾಸ್ಯ ಪದ್ಧತಿಯನ್ನು ಅತ್ಯಂತ ಹೀನಾಯ ಆಚರಣೆಯೆಂದು ಪರಿಗಣಿಸಿ,ನಮ್ಮ ದೇಶದ ಸಮಾಜಸುಧಾರಕರು, ಆಧ್ಯಾತ್ಮಿಕ ನಾಯಕರು,ವಿವೇಕಾನಂದ ,ಗಾಂಧಿ,ಅಂಬೇಡ್ಕರ್ ರಂತಹ ಚಿಂತಕರು‌ ಭಾವಿಸಿ ಈ ಕ್ರೂರ ಪದ್ಧತಿಗೆ ಇತಿಶ್ರೀ ಹಾಡಲು ಅವಿರತವಾಗಿ ಹೋರಾಡಿದರು.ರಾಜಕೀಯ ಗುಲಾಮಗಿರಿಯೂ ಬ್ರಿಟಿಷ್ ಭಾರತದಲ್ಲಿ ಅತ್ಯಂತ ಕೆಟ್ಟ ಅನುಭವವನ್ನು ನೀಡಿತ್ತು.

ತಮ್ಮ ಅಮೂಲ್ಯ ಬದುಕನ್ನೇ ಪಣವಾಗಿಟ್ಟು ಪಾರತಂತ್ರ್ಯದ ಬೇಡಿಗಳನ್ನು ಕಳಚಿ,ನಮ್ಮ ಸ್ವತಂತ್ರ ಸ್ವಾಭಿಮಾನದ ಬದುಕಿಗಾಗಿ,ಆತ್ಮಪ್ರತಿಷ್ಠೆಗಾಗಿ ಹೋರಾಡಿ ಮಡಿದ ಲೆಕ್ಕವಿಲ್ಲದಷ್ಟು ಮಹನೀಯರು ಇಂದು ಪ್ರಾತಃಸ್ಮರಣೀಯರಾಗಿದ್ದಾರೆ.

ಅವರು ಅಳಿದರೂ ಅವರ ಮೌಲ್ಯಗಳ ಬೆಳಕು ನಮ್ಮ ಪಥವನ್ನು ದಿಗ್ದರ್ಶಿಸುತ್ತಿವೆ.ಆದರೆ ನಾವು ಮಾತ್ರ ಈ ಮಾನಸಿಕ ಗುಲಾಮಗಿರಿಯಿಂದ ಹೊರಬರದೆ ಅವಲಂಬನೆಗೇ ಬದ್ಧರಾಗಿರುವುದು ಅತ್ಯಂತ ಹೇಯವಾಗಿದೆ.

*
ವಿಶ್ವದಲ್ಲೇ ಅತಿದೊಡ್ಡ ಸಂವಿಧಾನ ವೆಂದು ಪರಿಗಣಿಸಲಾಗಿದೆ ಭಾರತದ ಸಂವಿಧಾನವನ್ನು. ಅದರಲ್ಲಿ ಅಡಕವಾಗಿರುವ ಆಶೋತ್ತರಗಳೂ ಹಿರಿದು. ಪ್ರತಿ ಪ್ರಜೆಯ ಸರ್ವತೋಮುಖ ಬೆಳವಣಿಗೆಗೆ ಅವಕಾಶವಿರುವ ನಮ್ಮ ಈ ಸಂವಿಧಾನ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನವಾದ ಹಕ್ಕುಗಳನ್ನು ಕೊಡಮಾಡಿರುವುದು ಸರ್ವವಿದಿತ. ಆದರೆ ಕೆಲವರಿಗೆ ತಮ್ಮ ಈ ಹಕ್ಕಿನ ಅರಿವೇ ಇಲ್ಲದಿರುವುದೊಂದು ದುರಂತ. ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಪ್ರತಿ ಪ್ರಜೆಯೂ ಪ್ರಭುವೇ…!ಪ್ರಜೆಗಳು, ಪ್ರಜೆಗಳಿಗಾಗಿ, ಪ್ರಜೆಗಳಿಂದಲೇ ಆರಿಸಲ್ಪಡುವ ಜನನಾಯಕರನ್ನು ಒಳಗೊಳ್ಳುವ ಬಹುಮತದ ಸರ್ಕಾರವೇ ಆಡಳಿತ ನಡೆಸುತ್ತದೆ.

ಆದರೆ ವ್ಯವಸ್ಥೆಯ ಒಂದು ವ್ಯಂಗ್ಯವೆಂದರೆ….ತನಗೆ ಸಂವಿಧಾನದಲ್ಲಿ ಕೊಡಮಾಡಿರುವ ಈ ಮತದಾನದ ಹಕ್ಕು ಇಡೀ ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರ ಪಾತ್ರವಹಿಸುತ್ತದೆ ಎಂಬ ಸಂಪೂರ್ಣ ಅರಿವು ಇಲ್ಲಿನ ನಾಗರಿಕರಿಗೆ ಇಲ್ಲದೆ ಇರುವುದು. ಚುನಾವಣೆಯಲ್ಲಿ ಒಮ್ಮೆ ತನ್ನ ಹಕ್ಕಿನ ಮತವನ್ನು ಚಲಾಯಿಸಿದರಾಯಿತು. ಆಮೇಲೆ ಅದು ಸರಿದಾರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆಯೋ ಎಂಬ ಚಿಂತೆ ನಾಗರಿಕರಿಗೆ ಇಲ್ಲದೆ ಇರುವುದು ಸರಕಾರ‌‌ ಭ್ರಷ್ಟವಾಗಲು ರಹದಾರಿ ಯಾಗುತ್ತದೆ.

ಎಲ್ಲಿ ಪ್ರಜ್ಞಾವಂತ ನಾಗರಿಕರಿರುತ್ತಾರೋ ಅಲ್ಲಿನ ವಿರೋಧಪಕ್ಷವೂ ಜನ ಹಿತವನ್ನು ಪರಿಗಣಿಸುವುದಾಗಿ ರುತ್ತದೋ…ಅಂತಹ ವ್ಯವಸ್ಥೆ ಆರೋಗ್ಯಕರ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುತ್ತದೆ.

ಎಲ್ಲಿ ಪ್ರಜೆಗಳು ತತ್ಕಾಲದ ಆಮಿಷಕ್ಕೆ ಒಳಗಾಗಿ ತಮ್ಮ ಮತವನ್ನು ಮಾಡಿಕೊಳ್ಳುತ್ತಾರೋ ಅವರೇ ಭ್ರಷ್ಟಾಚಾರದ ಪಾರ್ಥೇನಿಯಂ ಬೀಜಗಳನ್ನು ಬಿತ್ತಿರುತ್ತಾರೆ. ಮೌಲ್ಯಗಳು ಮಾರಾಟವಾದ ಮೇಲೆ‌ ಅದರ ಮೇಲೆ ಮತದಾರನಿಗೆ ಇರುವ ಹಕ್ಕಾದರೂ ಏನು..? ವ್ಯಕ್ತಿತ್ವವನ್ನು ಮಾರಿಕೊಂಡು ಮತ್ತೆ ಇನ್ನೊಂದು ಅವಧಿಯ ನಿರಂಕುಶ ಆಡಳಿತಕ್ಕೆ ತಾನೇ ಪರವಾನಗಿ ಕೊಟ್ಟಂತಾಗುತ್ತದೆ.

ಮತದಾರರನ್ನು ಕೊಂಡುಕೊಳ್ಳಲು ಸುರಿಯುವ ಬೃಹತ್ ಮೊತ್ತದ ಹಣವನ್ನು ಯಾರೂ‌ ಪ್ರಾಮಾಣಿಕವಾಗಿ ದುಡಿದಿರುವುದಿಲ್ಲ. ಪ್ರಾಮಾಣಿಕ ದುಡಿಮೆಯನ್ನು ಯಾರೂ ಪೋಲಾಗಲು ಬಿಡುವುದಿಲ್ಲ. ಆದರೆ ಉದ್ದೇಶ ಭ್ರಷ್ಟವಾಗಿದ್ದಾಗ….ಭ್ರಷ್ಟ ಸಂಪಾದನೆಯ ಹಣ….ಭ್ರಷ್ಟರ ಪಾಲಾಗುತ್ತದೆ. ಏಕೆಂದರೆ ಗೆಲುವಿಗೆ ವ್ಯಯಿಸಿದ ಹಣವನ್ನು ಕ್ರೋಢೀಕರಿಸಲು‌ ಮತ್ತೆ ಭ್ರಷ್ಟಾಚಾರದ ಕೂಪಕ್ಕೆ ಬೀಳುವಾಗ ಅವರನ್ನು ಪ್ರಶ್ನಿಸುವ ಅಧಿಕಾರವನ್ನು ಮತದಾರ ಕಳೆದುಕೊಂಡಿರುತ್ತಾನೆ.

ಫೋಟೋ ಕೃಪೆ : google

ಮತ್ತೆ ಶುರುವಾಗುತ್ತದೆ ವಂಚನೆಯ ಮಾಯಾಜಾಲ. ಅಭಿವೃದ್ಧಿಗೆ ಮೀಸಲಾದ ಹಣ ಈ ಖದೀಮರ ಬೊಕ್ಕಸ ಸೇರುತ್ತದೆ. ನೈತಿಕ ಸಾಮರ್ಥ್ಯವನ್ನು ಕಳೆದುಕೊಂಡ ಮತದಾರ ಇದನ್ನು ಪ್ರಶ್ನಿಸಲಾರದೆ ವ್ಯವಸ್ಥೆಯ ನೇಣಿಗೆ ಕೊರಳೊಡ್ಡುತ್ತಾನೆ.ಇದರಿಂದ ದೇಶದ ಪ್ರಗತಿ ರಾಹುಗ್ರಸ್ತವಾಗುತ್ತದೆ.

ಎಲ್ಲಿಂದೆಲ್ಲಿಗೆ ಸಾಗುತ್ತಿದೆ ತನ್ನ ವಿಚಾರ ಲಹರಿ….ತಾನೇಕೆ ಇಷ್ಟೊಂದು ಅಸ್ವಸ್ಥಳಾಗಿದ್ದೇನೆ. ಪ್ರಿಯಂವದೆಯ ಮನದಲ್ಲಿ ನೂರು ತಾಕಲಾಟಗಳು. ಒಂದು ಸಾಧಾರಣ ಜನನ ಪ್ರಮಾಣಪತ್ರ ತರಲು ಹೋದ ತನ್ನನ್ನು ಆ ಸರಕಾರೀ ಕಛೇರಿಯಲ್ಲಿ ಎಷ್ಟೊಂದು ಸತಾಯಿಸಲಾಯಿತು…? ಕೊನೆಗೆ ‘,ಕಾಸ್ಬಿಚ್ರೀ..ಕೆಲ್ಸಾ ಆಗುತ್ತೆ ‘, ಅನ್ನೋ ಉಡಾಫೆಯ ಮಾತು ಆ ಜವಾನನಿಂದ….ಕಾರಣವಿಲ್ಲದೆಯೇ ಜನನ ಪ್ರಮಾಣಪತ್ರಕ್ಕಾಗಿ ನೂರೆಂಟು‌ ಕಾರಣಗಳನ್ನು ಹುಟ್ಟುಹಾಕುವ ಇವರ ಮನುಷ್ಯತ್ವ ಕಳೆದು ಹೋದದ್ದಾದರೂ ಎಲ್ಲಿ.
*
ಹೌದು ಆಲೋಚಿಸಿದಂತೆಲ್ಲ ಗೋಜಲಾಗುವ ಈ ಮನಸ್ಥಿತಿಗೆ ಕಾರಣವಾದರೂ ಯಾರು? ನಾವೇ ತಾನೇ…ನಾನೂ ಸಮಾಜದ ಒಂದು ಅಂಗ ಅಲ್ಲವೇ..ಹಾಗಾದ್ರೆ ಇದರಲ್ಲಿ ನನ್ನ ಪಾತ್ರವೂ ಇದೆಯೆಂಬುದು ಖಚಿತ.ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳುವುದಕ್ಕಿಂತ ಅದನ್ನು ಕಂಡು ಸುಮ್ಮನಿರುವುದೂ ಒಂದು ಅಪರಾಧ. ಹಾಗಾದ್ರೆ ತಾನೊಬ್ಬಳೇ ಮಾಡುವ ಪ್ರತಿಭಟನೆಗೆ ನಿಜವಾದ ನ್ಯಾಯ ಸಂದೀತೇ..ಹಾಗಂತ ಎಲ್ಲರೂ ಮೌನದ ಮೊರೆ ಹೊಕ್ಕರೆ ಉಷ್ಟ್ರಪಕ್ಷಿಯ ಗತಿ ನಮಗೂ ಬಂದೀತು.ಬೇಟೆಗಾರನಿಗೆ ಸುಲಭವಾಗಿ ತುತ್ತಾಗುವ ವಿವೇಕ ಹೀನತೆ..ಇದು ಸ್ವಾಭಿಮಾನವಿರುವ ಯಾವ ಪ್ರಜ್ಞಾವಂತ ನಾಗರಿಕನಿಗೂ ಶೋಭೆ ತರುವಂಥದಲ್ಲ.

ಹಾಗಾದ್ರೆ…ಹಾಗಾದ್ರೆ….ಸಂಘಟಕ ಪ್ರಯತ್ನದ ದಾರಿ ಇದ್ದೇ ಇದೆಯಲ್ಲ….ಸಂಘಟನೆಗೂ ಒಂದು ಆದರ್ಶ ತತ್ವಕ್ಕೆ ಬದ್ಧವಾದ ಮನಸ್ಥಿತಿ ಇರಲೇ ಬೇಕಲ್ಲ…. ತಾನು ಬಾಲ್ಯದಲ್ಲಿ ಕಂಠಪಾಠ ಮಾಡಿದ ಕಗ್ಗದ ಸಾಲುಗಳ ನೆನಪಾಯಿತು ಪ್ರಿಯಂವದೆಗೆ..

ಜಗದ ಕಲ್ಯಾಣದೊಳಗಾತ್ಮ ಕಲ್ಯಾಣವನು
ಜಗದ ಬೀದಿಗಳೊಳು ನಿಜಾತ್ಮ
ಯಾತ್ರೆಯನು//
ಜಗದ ಜೀವಿತದಿ ನಿಜ ಜೀವಿತದ ಪೂರ್ತಿಯನು/
ಬಗೆಯಲರಿತವನೆ ಸುಖಿ ಮಂಕುತಿಮ್ಮ//

ಲೋಕಕ್ಕೆ ಯಾವುದು ಮಂಗಳಕರವೊ ಅದು ತನಗೂ ಮಂಗಳಕರವೆಂದು ಭಾವಿಸುವವನು, ತನಗೆ ತನ್ನ ಆತ್ಮಬೇರೆಯಲ್ಲ, ಲೋಕಾತ್ಮ ಬೇರೆಯಲ್ಲ ಎಂದು ತಿಳಿದು ಲೋಕದ ಆನಂದದಲಿ ತಾನೂ ಆನಂದಿಸುವವನು ಅದರಲ್ಲಿಯೇ ತೃಪ್ತಿಯ ನೆಲೆಯನ್ನು ಕಂಡುಕೊಳ್ಳುತ್ತಾನೆ.

ಅವನೇ ಪರಮಸುಖಿ. ಅದನ್ನು ಬಿಟ್ಟು,’ತನ್ನ ಬದುಕೂ ಮರಣಮುಖಿಯೇ…ಎಷ್ಟು ಗಳಿಸಿದರೂ ಅದು ಮರಣಾನಂತರ ತನ್ನೊಂದಿಗೆ ಬಾರದು, ಎಂದಾದರೂ ಬಿಟ್ಟು ಹೋಗಲೇಬೇಕು. ತಿಂದು ಜೀರ್ಣಿಸಿಕೊಳ್ಳುವಷ್ಟು ಸ್ವಸ್ಥ ಗಳಿಕೆ ಮಾತ್ರ ನಮಗಿರಲಿ..ರೋಗರುಜಿನ ಗಳಿಗೆ ಆಹ್ವಾನ ನೀಡುವ ಭೋಗದ ವ್ಯಾಧಿ ದೂರವಿರಲಿ..’ಪರರ ಹಣ ಪಾಷಾಣ’ ಎಂಬ ನಿರ್ಲಿಪ್ತಿಯನ್ನು ಬೆಳೆಸಿಕೊಂಡಾಗ ಅದು ನಮ್ಮನ್ನು ಹಗುರಗೊಳಿಸುತ್ತದೆ.ಪರರ ಕಣ್ಣೀರಿನ ಪಾಲು ದ್ರೋಹಿಗಳ,ಸಮಾಜ ಕಂಟಕರಾದವರ ಸಾಲಿನಲ್ಲಿ ನಮ್ಮನ್ನು ನಿಲ್ಲಿಸುತ್ತದೆ.ಈ ಅನಿಶ್ಚಿತವಾದ ಬದುಕಿನಲ್ಲೂ ನಿತ್ಯ ಆತ್ಮಜ್ಯೋತಿಯನ್ನು ಬೀರುವ ಶಾಶ್ವತ ಮೌಲ್ಯಗಳಿವೆ.

ಫೋಟೋ ಕೃಪೆ : google

ಅವು, ಪ್ರೀತಿ,ಪ್ರೇಮ, ದಯೆ, ಅನುಕಂಪ ವಾತ್ಸಲ್ಯ, ನ್ಯಾಯನೀತಿ ಧರ್ಮಗಳು..! ಇವು ನಮ್ಮನ್ನು ಸಂತೈಸಿ ಸರಳ ಜೀವನ ಮಾರ್ಗದೆಡೆಗೆ ಕೊಂಡೊಯ್ಯುತ್ತವೆ. ಬದುಕು, ಬದುಕಲು ಬಿಡು’ ಎಂಬ ತತ್ವ ನಮ್ಮಬದುಕಲ್ಲಿ ಆತ್ಮಶಾಂತಿಯನ್ನು ಎರೆಯುತ್ತವೆ. ಅದನ್ನೆಲ್ಲ ಅವಗಣಿಸಿ, ಪಾಪದ ಕೊಡ ತುಂಬಿದ ಅಂಗುಲಿಮಾಲನ ಕ್ರೌರ್ಯ ಬುದ್ಧ ಭಗವಾನನ ಪ್ರಶಾಂತತೆಯಲ್ಲಿ
ಕರಗಿ ಹೊಸ ಲೋಕವೊಂದನ್ನು ತೆರೆಯುತ್ತದೆ.

ಮನುಷ್ಯ ಜೀವನ್ಮುಖಿಯಾದಾಗ ಆತ ನಿಜವಾಗಿಯೂ ಸಂತುಷ್ಟನಾಗಿರುತ್ತಾನೆ‌. ಆದರೆ ‘ತುಪ್ಪೇರಿದ ದರ್ಪಣದಲ್ಲಿ ತನ್ನ ಪ್ರತಿಬಿಂಬ ಪ್ರಜ್ವಲಿಸದಂತೆ… ಕೆಲವರ ಮನಸ್ಸು ಎಂದಿಗೂ ಅಂತರ್ಮುಖಿಯಾಗಿ ತನ್ನ ಗುಣಾವಗುಣಗಳ ಅವಲೋಕನಕ್ಕೆ ತೊಡಗಿಕೊಳ್ಳುವುದೇ ಇಲ್ಲ.

ಬಕೆಟ್ ಹಿಡಿಯುವ, ಗುಲಾಮಗಿರಿಯ ಹೀನ ಸಂಸ್ಕೃತಿ, ಅಮೂಲ್ಯವಾದ ಮಾನವನ ಜೀವಿತವನ್ನು ಅಪಮೌಲ್ಯಗೊಳಿಸುತ್ತದೆ. ಜೀವನವನ್ನು ಹೇಯವಾಗಿಸುತ್ತದೆ. ನಮ್ಮ ಸನಾತನತೆಯ ತತ್ವಾದರ್ಶಗಳ ಬೆಳಕು ಎಷ್ಟು ಉಜ್ವಲವಾಗಿದೆ ಎಂದರೆ ಆ ಪ್ರಕಾಶವೇ ನಮ್ಮ ಈ ನಶ್ವರ ಬದುಕಿನ ಗುರಿಯನ್ನು ಉನ್ನತೀಕರಿಸುತ್ತದೆ.ವೇದ ಪುರಾಣಗಳು, ಉಪನಿಷತ್ತುಗಳು ಮನಸ್ಸಿನ ಸಂಸ್ಕಾರಕ್ಕಾಗಿಯೇ ಇವೆ. ಶರಣರು, ದಾಸರು, ಸಂತರು ಮುಂತಾದವರ ತತ್ವ ಸಿದ್ದಾಂತಗಳು ಪ್ರಾಯೋಗಿಕ ಬದುಕಿನ ನೆಲೆಗಟ್ಟಿನಲ್ಲಿಯೇ ರೂಪುಗೊಂಡವು ಗಳು….ಇವುಗಳ ಅನುಸರಣೆ ನಮ್ಮನ್ನು ಪಾಶವೀತನದಿಂದ ಮೇಲಕ್ಕೆತ್ತಿ ನಿಜವಾದ ಘನತೆಯನ್ನು ತಂದುಕೊಡುತ್ತವೆ‌ ಅಲ್ಲವಾ…’ ಅಂದುಕೊಂಡಾಗ, ಪ್ರಿಯಂವದೆಯ ಮನದಲ್ಲಿ ಹೆಪ್ಪುಗಟ್ಟಿದ್ದ ನಿರಾಶೆಯ ಮೋಡ ಕರಗಿ ದಿಗಂತದಂಚಿನಲ್ಲಿ ಹೊಸ ಕನಸೊಂದು ಉಜ್ವಲವಾಗಿ ಮೂಡತೊಡಗಿತು.

‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ‌ ನೆನಪುಗಳು’ ಅಂಕಣ ಹಿಂದಿನ ಸಂಚಿಕೆಗಳು :


  •   ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕೊಡಗು

Leave a Reply

Home
Search
Menu
Recent
About
×