ಕೆಪಿಸಿಲ್ ನಿವೃತ್ತ ಅಧಿಕಾರಿಯೊಬ್ಬರು ಹೂಲಿಶೇಖರ್ ಅವರ ಕಾಳಿ ಕಣಿವೆಯ ಕುರಿತು ಏನೆಲ್ಲಾ ಹೇಳಿದ್ದಾರೆ ಮುಂದೆ ಓದಿ …
ಕಾಳಿ ಕಣಿವೆಯ ಕಥೆಗಳ ಒಂದೆರಡು ಸಂಚಿಕೆಗಳನ್ನು ಓದುವುದರಲ್ಲಿಯೇ ನನಗೆ ಗೊತ್ತಾಯಿತು. ನಾನೊಂದು ಲೇಖನವನ್ನು ಓದುತ್ತಿದ್ದೇನೆ ಎಂದು ಅನಿಸುವ ಬದಲು ಶ್ರೀ ಶೇಖರ್ ಹೂಲಿ ಅವರೇ ಮಾತನಾಡುತ್ತಿದ್ದಾರೆ ಅಂತ ಅನಿಸುತ್ತಾ ಹೋಯಿತು. ನಾವಿಬ್ಬರೂ ಒಂದು ಬಿಸಿ ಬಿಸಿ ಕಾಫಿಯನ್ನು ಕಪ್ಪಿನಲ್ಲಿ ಹೀರುತ್ತಾ, ಕೆಲವೊಮ್ಮೆ ಸೋಫಾದ ಮೇಲೆ ಕುಳಿತು ಮಾತನಾಡಿದರೆ, ಇನ್ನೊಮ್ಮೆ ಡೈನಿಂಗ್ ಟೇಬಲ್ ಬಳಿ ಕುಳಿತು, ಮಗದೊಮ್ಮೆ ಮಂಚದ ಮೇಲೆ ಬೋರಲಾಗಿ ಮಲಗಿ ಮಾತನಾಡಿದಂತೆ. ಒಮ್ಮೊಮ್ಮೆ “ನಾನು ಪ್ರಾತರ್ವಿಧಿಗಳನ್ನು ಮುಗಿಸಿಕೊಂಡು ಬರುತ್ತೇನೆ” ಎಂದಂತೆ. ವಾಪಸ್ ಬಂದರೆ ಕಾಳಿ ಕಣಿವೆಯ ಕಥೆಗಳ ಲೇಖನ ಎಲ್ಲಿ ಎನ್ನುವ ಬದಲು ಶ್ರೀ ಶೇಖರ್ ಹೂಲಿ ಅವರು ಎಲ್ಲಿ ಅಂತ ಅನಿಸುತ್ತಿತ್ತು.
ಇವರ ಬರವಣಿಗೆಯಲ್ಲಿ ಪರಭಾಷಾ ಕೃತಿಗಳ ಪ್ರಭಾವವಾಗಲೀ, ಬೌದ್ಧಿಕವಾಗುವ ಗೀಳಾಗಲೀ, ಪಾಂಡಿತ್ಯ ಪ್ರತಿಭೆಗಳ ಪ್ರದರ್ಶನಗಳಾಗಲೀ ಕಂಡುಬರುವುದಿಲ್ಲ. ಈ ನೆಲದ ಕನ್ನಡ ಭಾಷೆಯಲ್ಲಿ ವಾಕ್ಯ ಚಮತ್ಕಾರ, ಕ್ಲಿಷ್ಟ ಪದಗಳ ಪ್ರಯೋಗಗಳಿಲ್ಲದೆ, ತಗ್ಗಿಗೆ ಹರಿಯುವ ನೀರಿನಂತೆ ಹರಿವ ಸರಳ ನಿರೂಪಣೆ ಇರುತ್ತದೆ. ಈ ಸರಳ ಶೈಲಿಯಿಂದ ವಿಷಯ ನಿರೂಪಣೆಯ ಕುತೂಹಲಕಾರಿ ಓಟದಿಂದ ಕೃತಕವಲ್ಲದ ವಾಸ್ತವ, ವಸ್ತು ಸಂಗತಿಗಳನ್ನು ಮನದಲ್ಲಿ ಅಚ್ಚಳಿಯದೆ ಉಳಿಸುವುದೇ ಇವರ ಬರವಣಿಗೆಯ ಉದ್ದೇಶ.
ಹೂಲಿಶೇಖರ್ ಅವರ ಹಳೆಯ ಭಾವಚಿತ್ರ
ಓದುಗರ ಅಂತರಂಗದ ಆಳಕ್ಕೆ ಹೋಗಿ ಚಿಂತನೆಗೆ ತೊಡಗಿಸುವ ತತ್ವಗಳಿಂದ ಜೀವನವನ್ನು ವಿಶ್ಲೇಷಿಸುವ ಅಥವಾ ಅಧ್ಯಾತ್ಮ ಚಿಂತನೆಗಳನ್ನು ಒಳಗೊಂಡ ಬರಹ ಇವರವಲ್ಲ. ಲೇಖನಗಳ ಪರಿಸರಕ್ಕೆ ತಕ್ಕುದಾದ ಆಡುನುಡಿಗಳನ್ನು ಬಳಸಿ ಇವರು ಸಾಹಿತ್ಯದ ದೃಷ್ಟಿಯಿಂದ ಒಂದು ವಿಶಿಷ್ಟ ಯಶಸ್ಸನ್ನು ಗಳಿಸಿದ್ದಾರೆ. ಹಾಗೆಯೇ ಇವರ ಸಾಧನೆ, ಆಶ್ಚರ್ಯಕರ ಬರವಣಿಗೆ ಇವರಿಗೆ ನಿಸರ್ಗದತ್ತ ಕಾಣಿಕೆ. ಬೇಸರ ಹುಟ್ಟಿಸದಂತೆ ವಿಷಯ ನಿರೂಪಣೆ ಮಾಡಬಲ್ಲರು. ಓದುಗರ ಆತ್ಮೀಯತೆಯನ್ನು ಸೆಳೆಯಬಲ್ಲರು. ಬರವಣಿಗೆಯ ಸುಗಮತೆ, ವಿಷಯ ನಿರೂಪಣೆಯ ಚೆಲುವಾದ ಹಬ್ಬುಗೆ, ಲಲಿತ ಶೈಲಿ, ಉತ್ತಮ ವರ್ಣನೆ, ಚತುರ ಬರಹ ಇವರ ಬರಹವನ್ನು ಓದುಗರಿಗೆ ಆತ್ಮೀಯವನ್ನಾಗಿ ಮಾಡಲು ಸಹಕಾರಿಯಾಗಿದೆ. ಈ ಗುಣಗಳು ಅವರ ಲೇಖನಗಳ ಅನೇಕ ದೌರ್ಬಲ್ಯಗಳನ್ನು ಸಪ್ಪೆತನವನ್ನು ಮರೆಮಾಡಿಬಿಡುತ್ತದೆ.
ಕಾಳಿ ಕಣಿವೆಯ ಕಥೆಗಳ ಯಾವುದೇ ಸಂಚಿಕೆಯಾದರೂ ಬೆಡಗಿನ ಭಾಷೆ, ಕಠಿಣ ಬಂಧ, ಬಣ್ಣದ ಪದಗಳ ಪ್ರಯೋಗ ಅಥವಾ ಅಲಂಕಾರ, ಅತಿ ಭಾವುಕತೆ, ಈ ಯಾವುದೂ ಇಲ್ಲದ ಅತಿ ಸರಳ ನಿರೂಪಣೆಯೇ ಇವರ ಬರಹದ ವೈಶಿಷ್ಟ್ಯ. ಒಟ್ಟಿನಲ್ಲಿ ಇವರ ಬರಹವು ಬೆಟ್ಟ ಗುಡ್ಡಗಳನ್ನು ಏರದೇ, ಬಯಲಲ್ಲಿ ಹರಿಯುವ ನದಿಯಂತೆ ಹೆಚ್ಚು ಸಂಘರ್ಷ ಏರುಪೇರುಗಳಿಲ್ಲದೇ ಸಾಗುವುದರಿಂದ ಓದುಗರಿಗೆ ಆಪ್ತವಾಗುತ್ತದೆ.
“ನೆನಪುಗಳು” ಎನ್ನುವುದು ಮರವೊಂದು ಇದ್ದ ಹಾಗೆ. ಅದರ ಕಾಂಡದಿಂದ ಮೇಲೆದ್ದು ಅದು ಕೊಂಬೆ ರೆಂಬೆಗಳಾಗಿ ಕವಲೊಡೆದಹಾಗೆ. ಅಲ್ಲಿ ಹತ್ತಾರು ನೂರಾರು ಕವಲುಗಳು. ಒಂದರೊಡನೆ ಒಂದಕ್ಕೆ ಸಂಬಂಧ, ಯಾವುದನ್ನೂ ಬೇರೆ ಮಾಡಲಾಗದು. ಎಲ್ಲವೂ ಒಂದೇ ಮರದ ಕವಲುಗಳೇ, ಕೊಂಬೆ ರೆಂಬೆಗಳೇ! ಇಂತಹ ನೆನಪಿನ ಮರವೊಂದರ ಪ್ರತಿ ಕವಲುಗಳನ್ನು ಓದುಗರಿಗೆ ತೋರಿಸಿ ಕಾಳಿ ಕಣಿವೆಯ ಮಣ್ಣಿನಲ್ಲಿ ತನ್ನ ಮೂಲ ಬೇರು ಬಿಟ್ಟಿದ್ದ ವೃತ್ತಿ ಜೀವನದ ಪರಿಚಯ ಮಾಡಿಕೊಡುವುದೇ ಶ್ರೀ ಹೂಲಿ ಶೇಖರ್ ಇವರ ಉದ್ದೇಶ. ಹೀಗಾಗಿ ಸಣ್ಣದು ದೊಡ್ಡದು ಎಂಬ ಭೇದವಿಲ್ಲದೆ ವೃತ್ತಿ ಜೀವನದ ವೃತ್ತಾಂತವೆಲ್ಲವನ್ನೂ ಸಹೃದಯ ಓದುಗರ ಮುಂದೆ ಇಡಬೇಕು ಎನ್ನುವುದೇ ಲೇಖಕರ ಹಂಬಲ. ಆದರೆ ನಡೆದ ಘಟನೆಗಳೆಲ್ಲವೂ ಒಂದಕ್ಕೊಂದು ಕೊಂಡಿಯಂತಿದ್ದು ಕಾಳಿ ಕಣಿವೆಯ ಕಥೆಗಳಲ್ಲಿ ಬೆಸೆದುಕೊಂಡೇ ಮುಂದೆ ಸಾಗುವವು. ಇದೇ ಕಾಳಿ ಕಣಿವೆಯ ಕಥೆಗಳ ವೈಶಿಷ್ಟ್ಯ ಎಂದರೆ ತಪ್ಪಾಗಲಾರದು.
- ಶಿವಕುಮಾರ್ ಬಾಣಾವರ
