ಹಂಸಲೇಖ ಎಂದೆಂದೂ ‘ನಾದಬ್ರಹ್ಮ’

ಎಲ್ಲ ವಾದ್ಯಗಳನ್ನು ಬಳಸಿ ಸುಂದರ ಹಾಡನ್ನು ನೀಡಿದಷ್ಟೇ ಅಲ್ಲ, ಯಾವ ವಾದ್ಯಗಳಿಲ್ಲದೆ ಬರಿ ಬಾಯಿಯ ಶಬ್ದದಿಂದ ಸಂಗೀತವನ್ನು ಸೃಷ್ಟಿಸಿ ಅದನ್ನು ಜನಪ್ರಿಯ ಗೊಳಿಸಿದ್ದು ಮತ್ಯಾರು ಅಲ್ಲ ನಮ್ಮ ಹೆಮ್ಮೆಯ ಹಂಸಲೇಖ ಗುರುಗಳು.

ನಮ್ಮ ಬಲ ಕಿವಿಗಿಂತ ಎಡ ಕಿವಿ ಶಬ್ದ ಗ್ರಹಿಸುವುದರಲ್ಲಿ ಹೆಚ್ಚು ಚುರುಕು. ಇದು ನನ್ನ ಅನಿಸಿಕೆ. ಹಾಗೆ ಎಲ್ಲೋ ಓದಿದ ನೆನಪು. ನೀವೊಮ್ಮೆ ನಿಮ್ಮ ಮೊಬೈಲ್ ಹ್ಯಾಂಡ್ಸ್ ಫ್ರೀ ಯನ್ನು ಬಲ ಕಿವಿಯಿಂದ ತಗೆದು ಎಡ ಕಿವಿಯಿಂದ ಯಾವುದಾದರೂ ಸಂಗೀತ ಅಥವಾ ಶಬ್ದವನ್ನು ಆಲಿಸಿರಿ. ನಿಮಗೆ ಈ ಅನುಭವ ಆಗುವುದು. ಒಮ್ಮೊಮ್ಮೆ ಇಡೀ ರಾತ್ರಿ ನಮ್ಮ ಪ್ರೀತಿಯ ಹಂಸಲೇಖ ರವರು ಕಂಪೋಸ್ ಮಾಡಿದ ಹಾಡುಗಳನ್ನು ಆಲಿಸುವುದು ನನ್ನ ಮೆಚ್ಚಿನ ಹವ್ಯಾಸಗಳಲ್ಲೊಂದು.

ಅದ್ಬುತವಾದ ಈ ಎಲ್ಲಾ ಹಾಡುಗಳನ್ನು ನನ್ನ ಬಾಲ್ಯದಿಂದಲೂ ಆಲಿಸಿರುವೆ. ಈ ಅದ್ಭುತ ರಾಗ ಸಂಯೋಜನೆ ಸರ್ವಕಾಲಕ್ಕೂ ಸುಮಧುರವೇ. ಆ ಹಾಡುಗಳಲ್ಲಿ ಇರುತ್ತಿದ್ದ ವಯೊಲಿನ್, ಕೊಳಲು, ತಬಲಾ, ಕೀಬೋರ್ಡ್, ಡ್ರಮ್ಸ್, ಗಿಟಾರ್ ಸೇರಿದಂತೆ  ಇನ್ನು ಅನೇಕ ವಾದ್ಯಗಳನ್ನೂ ಕೇಳಬಹುದು. ಈ ರೀತಿಯ ವಾದ್ಯಗಳನ್ನು ಇಂದಿನ ಹಾಡುಗಳಲ್ಲಿ ಸಂಗೀತಗಾರರು ಉಪಯೋಗಿಸುವುದು ತೀರಾ ಕಡಿಮೆ. ಅದೇ ಹಂಸಲೇಖರವರ ಹಾಡುಗಳನ್ನು ಕೇಳಿದರೆ ನಿಮಗೆ ಈ ಎಲ್ಲಾ ವಾದ್ಯಗಳ ಪರಿಚಯ ಮತೊಮ್ಮೆ ಹಾಗುತ್ತದೆ. ಅಷ್ಟೇ ಏಕೆ “ಕೋಣ ಈದೈತೆ” ಚಿತ್ರದಲ್ಲಿ ವಾದ್ಯಗಳನ್ನೇ ಬಳಸದೆ ಬಾಯಿಯಿಂದ ವಾದ್ಯಗಳ ಶಬ್ದವನ್ನು ಮಾಡಿ ಹಾಡುಗಳನ್ನು ಸಂಯೋಜಿಸಿರುವುದು ಅವರ ಅನೇಕ ಯಶಸ್ವಿ ಪ್ರಯೋಗಳಲ್ಲೊಂದು.

ಫೋಟೋ ಕೃಪೆ : Bangalore Mirror

ಕಳೆದ ಶತಮಾನದ ಕೊನೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಅಮೂಲ್ಯ ರತ್ನ ಶ್ರೀಯುತ ಹಂಸಲೇಖರವರು ಈಗಲೂ ಶ್ರೇಷ್ಠ ಮ್ಯೂಸಿಕ್ ಮಾಸ್ಟರ್. ದಕ್ಷಿಣದಲ್ಲಿ ಇಳಯ ರಾಜ, ಎ.ಆರ್. ರೆಹಮಾನ್, ಎಂ.ಕೆ. ಅರ್ಜುನ್, ರಾಜಕೋಟಿ, ಕೀರವಾಣಿ ಜೊತೆಗೆ ನಮ್ಮ ಉಪೇಂದ್ರಕುಮಾರ್, ರಾಜನ್ -ನಾಗೇಂದ್ರ ಇವರೆಲ್ಲರಿಗಿಂತ ವಿಭಿನ್ನ ಶೈಲಿ ನಮ್ಮ ಪ್ರೀತಿಯ ಹಂಸಲೇಖರವರದ್ದು.

‘ನಾದ ಬ್ರಹ್ಮ’ ರವರು ಹುಟ್ಟಿದ್ದು ಜೂನ್ ೨೩,೧೯೫೧ ಮೂಲ ಹೆಸರು ಗಂಗರಾಜು. ಆಶ್ಚರ್ಯವೆಂದರೆ ಸಾಕಷ್ಟು ಸಮಯ ಅವಕಾಶಕ್ಕೆ ಕಾಯಿಸಿದ್ದಕ್ಕೆ ಏನೋ ಅವರು ಬರೆದ ಮೊಟ್ಟ ಮೊದಲನೇಯ ಗೀತೆ “ ನೀನಾ ಭಗವಂತ ಜಗದುಪಕರಿಸಿ ನನಗಪಕರಿಸೋ “ ಎಂದು ತ್ರಿವೇಣಿ ಚಿತ್ರಕ್ಕೆ ದೇವರನ್ನು ನಿಂದಿಸುತ್ತಾ ಅನಂತರ “ರಾಹು ಚಂದ್ರ” ಚಿತ್ರಕ್ಕೆ ಚಿತ್ರಕತೆ- ಸಾಹಿತ್ಯ ಬರೆದರೂ ಚಿತ್ರ ತೆರೆ ಕಾಣಲಿಲ್ಲ. “ಹೆಣ್ಣೇ ನಿನಗೇನೂ ಬಂಧನ” ಎಂಬ ಚಿತ್ರಕ್ಕೆ ಸಾಹಿತ್ಯ ಒದಗಿಸಿ ಎರಡು ವರ್ಷದ ನಂತರ ಭಗವಂತ ಅವರು ಬರೆದ ಮೊದಲನೇಯ ಹಾಡು ಕೇಳಿಯೋ ಏನೋ… ಶ್ರೀ ವೀರಸ್ವಾಮಿಯವರ ಮೂಲಕ ಕಣ್ಣು ಬಿಟ್ಟ. “ನಾನು, ನನ್ನ ಹೆಂಡತಿ” ಚಿತ್ರಕ್ಕೆ ತಮಿಳು ಸಂಗೀತ ನಿರ್ದೇಶಕ ಕಳುಹಿಸಿಕೊಟ್ಟ ಟ್ಯೂನ್ ಗಳಿಗೆ ಹಂಸಲೇಖರವರು ಅದ್ಭುತವಾಗಿ ಸಾಹಿತ್ಯ ಬರೆದರು.

ಮುಂದಿನ ದಿನಗಳಲ್ಲಿ ರವಿಚಂದ್ರನ್ ನಿರ್ದೇಶನದ ‘ಪ್ರೇಮಲೋಕ’ ಚಿತ್ರದ ಮೂಲಕ ಕನ್ನಡ ಯುವ ಜನತೆಯ ಮನಸ್ಸನ್ನು ಸೆರೆ ಹಿಡಿದರು. ಆ ಮೇಲೆ ಅವರು ದಿನದ ಇಪ್ಪತ್ನಾಲ್ಕು ಗಂಟೆಯಲ್ಲಿ ಎರಡು ಪಾಳಿಯಂತೆ ಕೆಲಸ ಮಾಡಲು ಆರಂಭಿಸಿದರು. ಹಂಸಲೇಖ ಅವರ ಹಾಡಿನ ಸಂಯೋಜನೆಗೆ ಬೇಡಿಕೆ ಎಷ್ಟಿತ್ತೆಂದರೆ ಸಿನಿಮಾಗಳು ಸಾಲು ಸಾಲಾಗಿ ಅವರ ಡೇಟ್ ಗಾಗಿ ಕಾಯಬೇಕಿತ್ತು. ವರ್ಷದಲ್ಲಿ ಬಿಡುಗಡೆಯಾಗುತ್ತಿದ್ದ ಚಿತ್ರಗಳಲ್ಲಿ ಶೇಕಡಾ ಮುಕ್ಕಾಲು ಚಿತ್ರಗಳು ಇವರದೇ ಆಗಿತ್ತು ಎಂದರೆ ಹುಡುಗಾಟದ ವಿಷಯವೇ ಅಲ್ಲ. ಪ್ರತಿ ಸಿನಿಮಾ ಹಾಡಿನಲ್ಲಿ ಅವರ ಕಠಿಣ ಶ್ರಮ, ಶ್ರದ್ದೆ ಎದ್ದು ಕಾಣುತ್ತಿತ್ತು. ಹಂಸಲೇಖ ರವರ ಆಕರ್ಷಕ ಸಿಗ್ನೇಚರ್ ಕೇವಲ ಅಭಿಮಾನಿಗಳಿಗಷ್ಟೇ ಅಲ್ಲ. ಎಲ್ಲಾ ನಿರ್ಮಾಪಕರಿಗೂ, ನಿರ್ದೇಶಕರಿಗೂ ಹಾಗೂ ನಟರಿಗೂ ಬೇಕಿತ್ತು. ಎಲ್ಲಾ ಸಿನಿಮಾ ಹಾಡಿನ ಕ್ಯಾಸೆಟ್ಟುಗಳಲ್ಲಿ ಹಂಸಲೇಖ ಅವರ ಸಿಗ್ನೇಚೆರ್ ಇದ್ದರೇ ಕೊಳ್ಳುವರ ಸಂಖ್ಯೆ ಹೆಚ್ಚುತ್ತಿತ್ತು. ಸುಮಾರು ೫೦೦ಕ್ಕೂ ಹೆಚ್ಚು ಚಲನಚಿತ್ರಗಳಿಗೆ ತಮಿಳು, ತೆಲುಗು, ಮಲೆಯಾಳಂ ಭಾಷಾ ಚಿತ್ರಗಳಿಗೂ ಸಂಗೀತವನ್ನು ನೀಡಿದ್ದಾರೆ.

ಡಾ. ರಾಜ್ ಅವರು ಹಾಡಿದ “ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…” ಹಾಡು ಎಷ್ಟು ಜನಪ್ರಿಯವಾಯಿತ್ತೆಂದರೆ ಪ್ರೇಕ್ಷಕರ ಮೆಚ್ಚುಗೆಯನ್ನು ಕಂಡು ಎಷ್ಟೋ ಥೀಯೇಟರ್ ಮಾಲೀಕರು ಆ ಹಾಡನ್ನು ಎರಡೆರಡು ಸಲ ಪ್ರದರ್ಶಿಸಿದ್ದ ಉದಾಹರಣೆಯೂ ಇದ್ದೆ. ಅಣ್ಣಾವ್ರು ಹಾಗೂ ಹಂಸಲೇಖ ಅವರ ನಡುವಿನ ಬಾಂದವ್ಯ ಸಂಗೀತದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತು.

ಫೋಟೋ ಕೃಪೆ : The News Minutes

ಒಮ್ಮೆ “ಮುತ್ತಿನ ಹಾರ” ಸಿನಿಮಾದ ಹಾಡಿನ ಧ್ವನಿ ಮುದ್ರಿಕೆ ಸಮಯದಲ್ಲಿ ಸಂಗೀತ ದಿಗ್ಗಜ ಶ್ರೀ ಬಾಲಮುರಳಿ ಕೃಷ್ಣರವರು “ದೇವರು ಹೊಸೆದ ಪ್ರೇಮದ ದಾರ” ಹಾಡನ್ನು ಹಾಡಲೆಂದು ಬಂದಿದ್ದರು. ಆ ಹಾಡನ್ನು ಓದುವಾಗ ಆ ಹಾಡಿನಲ್ಲಿ ಒಂದು ಸಣ್ಣ ತಿದ್ದು ಪಡಿ ಇತ್ತು. ಆಗ ಆ ಹಾಡನ್ನು ಬರೆದ ಕವಿಯನ್ನು ಕರೆಯಿರಿ ಎಂದು ಹಂಸಲೇಖ ಅವರಿಗೆ ಹೇಳಿದರಂತೆ. ಆಗ ನಾದಬ್ರಹ್ಮ ತುಟಿ ಪಿಟಕ್ ಅನ್ನದೆ ಕಿವಿಯಲ್ಲಿಟ್ಟುಕೊಂಡಿದ್ದ ಪೆನ್ನು ಹಿಡಿದು ಬಾಲಮುರಳಿ ಅವರ ಮುಂದೆ ಬಂದರಂತೆ. ‘ಗುರುಗಳೇ ಹೇಳಿ…’ ಎಂದು ತಿದ್ದಲು ಮುಂದಾದಾಗ, ಬಾಲಮುರಳೀಯವರು ಕೋಪದಿಂದ ‘ಇಲ್ಲ… ನನಗೆ ಇದನ್ನು ಬರೆದ ಕವಿಯೇ ಬೇಕು ಅವರನ್ನೇ ಕರೆಯಿಸಿ’ ಎಂದರಂತೆ. ಹಂಸಲೇಖರವರು ಅವರು ಮುಗ್ದ ನಗುವನ್ನು ಚಲ್ಲುತ್ತಾ ‘ನಾನೇ ಸ್ವಾಮಿ ಈ ಸಾಹಿತ್ಯ ಬರೆದವನು’ ಎಂದಾಗ ಬಾಲಾಮುರಳಿಯವರ ಆಶ್ಚರ್ಯಚಕಿತರಾದರು. ಮತ್ತು ಪ್ರೀತಿಯಿಂದ ಬಿಗಿದಪ್ಪಿ ಅವರನ್ನು ಆಶೀರ್ವದಿಸಿದರಂತೆ. ಅಂದಿನ ಈ ಹಾಡು ಎಂದೆಂದೂ ಅಮರವಾಗಿ ಎಲ್ಲರ ಬಾಯಲ್ಲಿ ಗುನುಗುನಿಸುತ್ತದೆ. ಅವರ “ಗಂಗವ್ವ ಗಂಗಾಮಾಯಿ” ಸಂಗೀತಕ್ಕೆ ರಾಷ್ಟ್ರಪ್ರಶಸ್ತಿ, ಹಾಲುಂಡ ತವರು, ಶ್ರೀ ಮಂಜುನಾಥ ಚಿತ್ರಗಳಿಗೆ ರಾಜ್ಯಪ್ರಶಸ್ತಿ, ಫಿಲಂಫೇರ್ ಹಾಗೂ ಇನ್ನು ಅನೇಕ ಪ್ರಶಸ್ತಿಗಳು ಹಂಸಲೇಖರವರ ಕೈ ಸೇರಿದೆ.

(ಲೇಖಕ ಕು ಶಿ ಚಂದ್ರಶೇಖರ್, ಅವರ ಮಕ್ಕಳು ಮತ್ತು ಹಂಸಲೇಖ)

ಎರಡು ದಶಕಗಳಿಂದ ಬರುತ್ತಿರುವ ಸಂಗೀತಗಳು ಸಂಗೀತವೆನ್ನಿಸುತ್ತಿಲ್ಲ. ಒಂದು ಕಿವಿಯಲ್ಲಿ ಕೇಳಿ, ಇನ್ನೊಂದು ಕಿವಿಯಲ್ಲಿ ಬಿಡುವಂತ ಸಂಗೀತಗಳು. ಇದರ ಮಧ್ಯೆ ಹಂಸಲೇಖ ಅವರು ಕಾಡುತ್ತಾರೆ. ಅವರ ಸಂಗೀತ ಮತ್ತೆ ಮತ್ತೆ ನೆನಪಿಗೆ ಬರುತ್ತದೆ.

ಶ್ರೀ ಹಂಸಲೇಖ ರವರು ತಮ್ಮ ಪತ್ನಿ ಶ್ರೀಮತಿ ಲತಾ ರವರ ಜೊತೆಗೆ ತಮ್ಮ ನಿವಾಸದಲ್ಲಿಯೇ ವಿದ್ಯಾರ್ಥಿಗಳಿಗೆ ಸಂಗೀತ ಪಾಠವನ್ನು ಮಾಡುತ್ತಿದ್ದಾರೆ. ಹಾಗೂ ಪ್ರಸ್ತುತ ಜಾನಪದ ಸಾಹಿತ್ಯದಲ್ಲಿ ಸಂಪೂರ್ಣ ತೊಡಿಗಿರುವುದು ನಿಜಕ್ಕೂ ಸಂತಸದ ವಿಷಯ.

ಚನ್ನಪಟ್ಟಣದ ಹತ್ತಿರ ತಮ್ಮ “ವಿಶ್ವರಂಗಭೂಮಿ” ಎಂಬ ಪರಿಕಲ್ಪನೆ ಹೊತ್ತು ಸಾವಿರಾರು ವಿದ್ಯಾರ್ಥಿಗಳಿಂದ ದೇಸಿ ಸೊಗಡನ್ನು ಎಲ್ಲೆಡೆ ಪಸರಿಸುವ ಕನಸ್ಸನ್ನು ಶ್ರೀ ಹಂಸಲೇಖ ಹೊಂದಿದ್ದಾರೆ. ಅವರ ಸಾಧನೆಗೆ ಬೆಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿ ಗೌರವಿಸಿದೆ. ಹಂಸಲೇಖ ಗುರುಗಳು ಈಗ ಡಾ. ಹಂಸಲೇಖ. ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಎಲ್ಲ ಗೌರವ ಪ್ರತಿಷ್ಠಿತ ಪ್ರಶಸ್ತಿಗಳು ಅವರ ಮುಡಿಗೇರಲಿ. ಅವರ ಕನಸ್ಸು ಆದಷ್ಟು ಬೇಗ ನನಸಾಗಲಿ, ಶ್ರೀ ಸರಸ್ವತಿ ಮಾತೆಯ ಆಶೀರ್ವಾದ ಮತ್ತು ಸಮಸ್ತ ಕನ್ನಡಿಗರ ಪ್ರೀತಿ, ವಿಶ್ವಾಸ ಇರಲೆಂದು ನಮ್ಮ ಆಕೃತಿ ಕನ್ನಡ ಬಳಗ ಹಾರೈಸುತ್ತದೆ.


  • ಕು ಶಿ ಚಂದ್ರಶೇಖರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW