ಬದುಕಿನಿಂದೊಂದು ಪಾಠ ಕತೆ (ಭಾಗ ೧) – ಪ್ರಭಾಕರ ತಾಮ್ರಗೌರಿ

ಅಸ್ತಿ ಅನ್ನೋದು ಮನುಷ್ಯನನ್ನು ಹೇಗೆ ಬೇಕಾದ್ರು ಆಡಿಸುತ್ತದೆ. ಆ ಸಂದರ್ಭದಲ್ಲಿ ತಾಳ್ಮೆ,ಜಾಣ್ಮೆ ಎರಡರ ಅವಶ್ಯಕತೆ ಇರುತ್ತದೆ. ಕತೆಗಾರ ತಾಮ್ರಗೌರಿಯವರು ಈ ಕತೆಯ ಮೂಲಕ ಆಸ್ತಿಯ ಬೆಲೆಯನ್ನಷ್ಟೇ ಅಲ್ಲ, ಸಂಬಂಧದ ಬೆಲೆಯನ್ನು ಅರ್ಥಪೂರ್ಣವಾಗಿ ಅರ್ಥೈಸಿದ್ದಾರೆ.ಮುಂದೆ ಓದಿ…

ಮುಂದಿನ ವಾರದಲ್ಲಿ ಭಾಗತ್ತೆಯ  ಮನೆಗೆ ಹೋಗಬೇಕೆಂದು ರಾಯರು ನಿರ್ಧರಿಸಿದ್ದರು . ಅಷ್ಟರಲ್ಲಿ ತೋಟದ  ಕೆಲಸವೂ ಒಂದಿಷ್ಟು  ಮುಗಿಯಬಹುದು. ಬಹಳ ದಿವಸಗಳಾಯಿತು ಭಾಗತ್ತೆಯನ್ನೂ, ಅವಳ ಮಕ್ಕಳನ್ನೂ ನೋಡಿ. ಈಗೊಂದು ವರುಷದ ಹಿಂದೆ ಬೆಂಗಳೂರಿನಲ್ಲಿ ಅಕಸ್ಮಾತ್ತಾಗಿ ಅವಳ ದೊಡ್ಡ ಮಗ ವಸಂತ ಸಿಕ್ಕಿದ್ದ. ನೋಡಿದರೂ ನೋಡದವನ ಹಾಗೆ ಮುಖ ತಿರುಗಿಸಿ ಹೋಗುತ್ತಿದ್ದವನನ್ನು ತಾನಾಗೇ ಕರೆದು ಮಾತನಾಡಿಸಿದ್ದಕ್ಕೆ ಸ್ವಲ್ಪ ಸಿಟ್ಟಿನಿಂದಲೇ, “ನಮ್ಮ ಆಸ್ತೀನೆಲ್ಲಾ ನುಂಗಿ ನೀರು ಕುಡಿದಾದ ಮೇಲೂ ನಿಮಗೆ ತೃಪ್ತಿ ಸಿಗಲಿಲ್ವಾ …?. ಇನ್ನೇನು ಬಾಕಿಯಿದೆ…? ” ಅಂತ ಹೇಳಿ ಹೊರಟು ಹೋಗಿದ್ದ.

ರಾಯರು ಏನೂ ಹೇಳದೆ ಸುಮ್ಮನೆ ಮುಗುಳ್ನಕ್ಕಿದ್ದರು. ವಯಸ್ಸಿಗೆ ಬಂದ ಹುಡುಗರು. ಯೌವನದ ಬಿಸಿ ರಕ್ತ ಮೈಯಲ್ಲಿ ಹರೀತಾ ಇದೆ. ವಯೋಧರ್ಮಕ್ಕನುಗುಣವಾಗಿ ಮಾತಾಡುತ್ತಾರೆ. ತಮ್ಮ ಅಂತರಂಗ ಅರಿತಾದ ಮೇಲೆ ಅವರಿಗೆಲ್ಲಾ ಆಶ್ಚರ್ಯವಾಗಬಹುದು ಅಂದುಕೊಳ್ಳುತ್ತಾರೆ  ರಾಯರು. ಈಗ ಎರಡು ತಿಂಗಳ ಹಿಂದೆ ಅನಂತಯ್ಯನವರು ಪತ್ರ ಬರೆದಿದ್ದರು. ಆ ಪತ್ರದಲ್ಲಿ ಭಾಗತ್ತೆಯ ಸಂಸಾರದ ಸಂಪೂರ್ಣ ಮಾಹಿತಿ ಇತ್ತು . ಅವಳು ಅನಂತಯ್ಯನವರಿಂದ ಆಗಾಗ ಸಹಾಯ ಬೇಡುತ್ತಿದ್ದಾಳೆಂದೂ, ಅವಳ ಮೂವರು ಮಕ್ಕಳೂ ಈಗ ತುಂಬಾ ಬುದ್ಧಿವಂತರಾಗಿದ್ದಾರೆಂದೂ ಬರೆದಿದ್ದರು. ಭಾಗತ್ತೆಯ ಮನೆಯ ವಿಚಾರವಾಗಿ ಅನಂತಯ್ಯನವರು ತಿಂಗಳಿಗೊಂದಾದರೂ ಪತ್ರ ಬರೆಯುತ್ತಿದ್ದರು.

ಫೋಟೋ ಕೃಪೆ : BBC

ಪ್ರತಿ ಪತ್ರ ಬಂದಾಗಲೂ ನನ್ನ ನಿರ್ಧಾರ ಸರಿಯಾಗಿತ್ತು. ನಾನು ಹಾಗೆ ನಡೆದುಕೊಂಡಿದ್ದೇ ಸರಿ ಅಂದು ಕೊಳ್ಳುತ್ತಾರೆ ರಾಯರು. ಆಗಾಗ ತಮ್ಮ ಕೋಣೆಯಲ್ಲಿ ಒಬ್ಬರೇ ಕುಳಿತು ಈ ಬಗ್ಗೆ ಚಿಂತಿಸುತ್ತಾರೆ. ಈಚೆಗೆ ಅವರ ಪತ್ನಿ ಸೀತಮ್ಮ ಕೂಡಾ …. , ” ಇನ್ನೆಷ್ಟು ದಿನಾಂತ ಹೀಗೆ ….? ಅವರ ಭಾಗವನ್ನು ಅವರಿಗೇ ಕೊಟ್ಟುಬಿಡಿ …” ಅಂತ ಒತ್ತಾಯಿಸುತ್ತಿದ್ದಾರೆ. ಹೌದು, ಈಗ ಆ ಕಾಲ ಬಂದಿದೆ ಅನಿಸುತ್ತಿದೆ ರಾಯರಿಗೆ.

ಭಾಗತ್ತೆ ರಾಯರಿಗೆ ದೂರದವಳೇನೂ ಅಲ್ಲ. ಸ್ವಂತ ಅತ್ತಿಗೆ. ಆದರೆ ಈಗ, ಆಕೆ ತನ್ನಿಂದ ದೂರವಾಗಿದ್ದಾಳೆ. ಆದರೇನು …?. ಒಂದಲ್ಲ ಒಂದು ದಿನ ಮತ್ತೆ ತಮ್ಮ ಹತ್ತಿರ ಬಂದೇ ಬರುತ್ತಾಳೆ ಅನ್ನುವ ಭರವಸೆಯಿದೆ. ತಮ್ಮಿಂದ ದೂರ ಹೊರಟು ಹೋದ ಆಕೆ ಒಂದೇ, ಎರಡೇ ಕಾಗದ ಬರೆದದ್ದು ?. ಅಬ್ಬಾ…! ಅದೆಂಥಾ ಮಾತುಗಳು …ಏನು ಕಥೆ …ಒಂದಿಷ್ಟು ಆಸ್ತಿ ಕೈಬಿಟ್ಟು ಹೋಗೇ ಬಿಡ್ತು ಎನ್ನುವ ಸಂಶಯದಿಂದಾಗಿ ಬಾಯಿಗೆ ಬಂದಂತೆ ಬರೆದಿದ್ದಳು. ಅಷ್ಟೇಕೆ? ತಮ್ಮನ್ನು ಕೋರ್ಟಿಗೂ ಎಳೆಯುವುದಾಗಿ ಬೆದರಿಸಿದ್ದಳು. ಆದರೆ, ಏನೂ ಆಗಿರಲಿಲ್ಲ. ಕ್ರಮೇಣ ಆಕೆಯ ಕೋಪ, ಸಿಟ್ಟು ಹಾಗೇ ಶಮನವಾಗಿತ್ತು. ಆಕೆಗೆ ತಮ್ಮ ವಿಚಾರ ತಿಳಿಯುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆಕೆಯ ಪ್ರತಿಯೊಂದು ವಿಚಾರವೂ ತಮಗೆ ತಿಳಿಯುತ್ತಿದೆ. ತಮ್ಮ ಅವಶ್ಯಕತೆ ಇದ್ದಾಗ ಮಾತ್ರ ಎದುರಿಗೆ ಹೋದರಾಯಿತು ಅಂದುಕೊಂಡು ಹಿಂದೆಯೇ ಉಳಿದಿದ್ದಾರೆ ರಾಯರು.

ರಾಯರು ಆಗರ್ಭ  ಶ್ರೀಮಂತರು. ತಮ್ಮ ಇಪ್ಪತ್ತು ಎಕರೆ ಪ್ರದೇಶದಲ್ಲಿ ತೆಂಗು, ಅಡಿಕೆ, ಏಲಕ್ಕಿ, ಮೆಣಸು …ಮುಂತಾದವುಗಳ ಸಮೃದ್ಧ ಬೆಳೆ. ಹತ್ತಾರು ಜನ ನೆಮ್ಮದಿಯಿಂದ ಕಾಲ ಕಳೆಯುವಷ್ಟು ಉತ್ಪಾದನೆಯಾಗುತ್ತಿತ್ತು. ವಂಶಪಾರಂಪರ್ಯವಾಗಿ ಬಂದ ಆಸ್ತಿಗೆ ರಾಯರೂ ಮತ್ತು ಅವರ ಅಣ್ಣನೂ ಹಕ್ಕುದಾರರು. ಅವಿಭಕ್ತ ಕುಟುಂಬವಾದ್ದರಿಂದ  ಆಸ್ತಿ ವಿಭಜನೆಯ ಪ್ರಶ್ನೆ ಉದ್ಭವಿಸಲೇ ಇಲ್ಲ. ರಾಯರ ಅಣ್ಣನಿಗೆ ಮೂವರು ಗಂಡು ಮಕ್ಕಳು. ರಾಯರಿಗೆ ಇಬ್ಬರು ಗಂಡು ಮಕ್ಕಳು. ಒಬ್ಬಳು ಮಗಳು. ಮಗಳಿಗೆ ಮದುವೆಯಾಗಿದೆ. ಗಂಡನ ಮನೆಯಲ್ಲಿ ಸುಖವಾಗಿ ಸಂಸಾರ ಮಾಡಿಕೊಂಡಿದ್ದಾಳೆ. ಅಳಿಯ ಇಂಜಿನೀಯರ್. ಹಿರಿಯ ಮಗ ಪದವೀಧರನಾಗಿ, ಈಗ ತಂದೆಗೆ ಸಹಾಯಕನಾಗಿ ತೋಟದ ಜವಾಬ್ಧಾರಿ ಹೊತ್ತಿದ್ದಾನೆ. ಎರಡನೇ ಮಗ ಇಂಜಿನೀಯರ್. ಮುಂಬೈನಲ್ಲಿ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ.

ಫೋಟೋ ಕೃಪೆ : pinterest

ರಾಯರು ಮಗಳ ಮದುವೆಗೆ ಆಹ್ವಾನಿಸಲು ಭಾಗತ್ತೆಯ ಮನೆಗೆ ಹೋದಾಗ, ಆಕೆ ರಾಯರನ್ನು ಒಳಗೆ ಕರೆಯಲೂ ಇಲ್ಲ. ಒಂದು ಲೋಟ ನೀರು ಕೂಡಾ ಕೊಡಲಿಲ್ಲ. ಬದಲಿಗೆ ಅತ್ತು ರಂಪ ಮಾಡಿದ್ದೂ ಅಲ್ಲದೇ ಇವರನ್ನು ಚೆನ್ನಾಗಿ ಬೈದಿದ್ದಳು. ” ನಮ್ಮ ಭಾಗದ ಆಸ್ತೀನೆಲ್ಲಾ ನುಂಗಿ ಹಾಕಿದ್ದೀಯಾ… ಖಂಡಿತಾ ನಿನಗೆ ಒಳ್ಳೇದಾಗಲ್ಲ. ನಿನ್ನ ವಂಶ ನಿರ್ವಂಶವಾಗುತ್ತೆ …” ಅಂತ ಹಿಡಿಶಾಪ ಹಾಕಿದ್ದಳು. ರಾಯರೂ, ಸೀತಮ್ಮನೂ ಒಂದು ಮಾತೂ ಆಡದೇ ಮದುವೆಗೆ ಆಹ್ವಾನಿಸಿದರು. ಆಗಲೂ ಆಕೆ ಚೆನ್ನಾಗಿ ದಬಾಯಿಸಿ, ” ನಮಗೂ, ನಿಮಗೂ ಯಾವುದೇ ಸಂಬಂಧವಿಲ್ಲ. ಇನ್ನು ಮುಂದೆ ಈ ಕಡೆ ಬರಬೇಡಿ. ಏನೋ ಪಾಪ, ಅನಂತಯ್ಯನವರು ಇವರ ಸ್ನೇಹಿತರಾಗಿ ನಮಗೊಂದಿಷ್ಟು ಸಹಾಯ ಮಾಡ್ತಿರೋದ್ರಿಂದ ನಾವೂ ಬದುಕಿದ್ದೀವಿ …” ಅಂತ ಕಣ್ಣೀರು ಹಾಕಿದ್ದಳು. ಆ ಕೂಡಲೇ ರಾಯರಿಗೆ ಏನೇನೋ ಮಾತಾಡಬೇಕು ಅನಿಸಿದ್ದರೂ ಸಂಯಮ ತಂದುಕೊಂಡು ಎಲ್ಲದಕ್ಕೂ ಒಂದು ಕಾಲವಿದೆ ಅಂದುಕೊಂಡು ಸುಮ್ಮನಾಗಿದ್ದರು.

ಫೋಟೋ ಕೃಪೆ : Times of india

ಮದುವೆಗೆ ಭಾಗತ್ತೆಯಾಗಲೀ, ಆಕೆಯ ಮಕ್ಕಳಾಗಲೀ ಯಾರೂ ಬರಲಿಲ್ಲ. ಮದುವೆಗೆ ಅವರ್ಯಾರೂ ಬರುವುದಿಲ್ಲವೆಂದು ಮೊದಲೇ ಊಹಿಸಿದ್ದ ರಾಯರು ಅದಕ್ಕಾಗಿ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಬಹಳ ದಿನಗಳ ನಂತರ ಆಕೆಯ ಮನೆಗೆ ಹೋಗಿ, ” ಇದೋ, ನಿಮ್ಮ ಪಾಲಿಗೆ ಬರಬೇಕಾದ ಆಸ್ತಿ… ಇಷ್ಟು ವರ್ಷಗಳಿಂದ ನಿಮ್ಮ ಭಾಗದ ಆಸ್ತಿಯಲ್ಲಿ ಉತ್ಪಾದನೆಯಾದದ್ದಕ್ಕೆ ಸರಿಸಮನಾದ ಮೊತ್ತ…” ಅಂತ ಹೇಳಿ ಎರಡನ್ನೂ ಆಕೆಯ ಎದುರಿಗಿಟ್ಟರೆ ಆಕೆಗೇನೆನಿಸಬಹುದು? ಖಂಡಿತಾ ಆಶ್ಚರ್ಯವಾಗುತ್ತೆ!. ತೀರಾ ಅನಿರೀಕ್ಷಿತ ಸಂಗತಿ ನಡೆದರೆ, ನಮ್ಮ ಕಣ್ಣು ಕಿವಿಗಳನ್ನೇ ನಾವು ನಂಬಲಾಗುವುದಿಲ್ಲ. ಹಾಗೇ,ಆಮೇಲೆ ಒಂದೊಂದಾಗಿ ವಿಚಾರ ತಿಳಿಸಿದರೆ ತಮ್ಮ ಅಂತರಂಗವೇನು ಅಂತ ಆಕೆಗೇ ಅರಿವಾದೀತು ಅನಿಸಿದಾಗ, ರಾಯರಿಗೆ ಹುಸಿನಗು ಮೂಡುತ್ತದೆ.

ಸುಮಾರು ಹತ್ತು ವರ್ಷಗಳ ಹಿಂದಿನ ಘಟನೆ  ಹಾಗೂ ಅಲ್ಲಿಂದೀಚೆಗೆ ನಡೆದ ವಿದ್ಯಮಾನಗಳೆಲ್ಲಾ ರಾಯರಿಗೆ ನೆನಪಿಗೆ ಬರುತ್ತದೆ. ಯಾರಿಗೂ ತಿಳಿಯದಷ್ಟು ಅಷ್ಟೇಕೆ ತಮ್ಮ ಪತ್ನಿ ಸೀತಮ್ಮನಿಗೂ ಗೂಢವಾಗಿತ್ತು ತಮ್ಮ ಅಂತರಂಗ. ತೋಟದ ಒಂದಿಷ್ಟು ಕೆಲಸಗಳನ್ನು ಮುಗಿಸಿಕೊಂಡು ರಾಯರೂ, ಅವರ ಅಣ್ಣನೂ ಮನೆಗೆ ಬಂದಾಗ ಕತ್ತಲಾವರಿಸಿತ್ತು. ಇಬ್ಬರಿಗೂ ಆಯಾಸವಾಗಿತ್ತು. ಪ್ರತಿ ನಿತ್ಯ ತೋಟದ ಕೆಲಸ ಮುಗಿಸಿ ಮನೆಗೆ ಬಂದ ತಕ್ಷಣ ಬಿಸಿ ಬಿಸಿ ಚಹಾ ಕುಡಿದು, ಒಂದಿಷ್ಟು ವಿಶ್ರಾಂತಿ ಪಡೆದು, ಆನಂತರ ಇತರ ಕೆಲಸಗಳ ಕಡೆಗೆ ಗಮನ ಹರಿಸೋದು ರೂಢಿ. ಆದರೆ ಆ ದಿನ ಇಬ್ಬರೂ ಮನೆಯೊಳಗೆ ಕಾಲಿಡುತ್ತಿದ್ದಂತೆ ರಾಯರ ಅಣ್ಣ ಅಲ್ಲೇ ಕುಸಿದು ಬೀಳುತ್ತಾ “ಅಮ್ಮಾ …ಅಪ್ಪಾ ….” ಅಂತ ನರಳಿದರು. ರಾಯರಿಗೆ ಇದೇನಿದು ಅಂತ ಗಾಬರಿ. “ಸೀತಾ, ಅತ್ತಿಗೆ ….ಬೇಗ ಬನ್ನಿ. ಸ್ವಲ್ಪ ನೀರು ತನ್ನಿ ….” ಅಂತ ಕೂಗಿ ಅಣ್ಣನಿಗೆ ಗಾಳಿ ಬೀಸಿ ಸ್ವಲ್ಪ ನೀರು ಕುಡಿಸಿದರು. ನಾಲ್ಕು ಗುಟುಕು ನೀರು ಕುಡಿದು, ರಾಯರ ಮುಖ ನೋಡುತ್ತಾ ” ಮಕ್ಕಳನ್ನೂ, ಭಾಗೀರಥಿಯನ್ನೂ ಎಂದೂ ಕೈಬಿಡಬೇಡ…” ಎಂದು ಹೇಳಿ ರಾಯರ ಅಣ್ಣ ಕಣ್ಣು ಮುಚ್ಚಿಬಿಟ್ಟರು. ತೀರಾ ಆಕಸ್ಮಿಕ ಸಂಗತಿಯೊಂದು ನಡೆದು ಹೋಯ್ತು. ಭಾಗೀರಥಿಯೂ  ಅವರ ಮಕ್ಕಳೂ ತಾವು ಅನಾಥರಾದಷ್ಟೇ ದುಃಖಿಸಿದರು.

” ಹೃದಯಾಘಾತವಾಗಿದೆ …” ಎಂದರು ಡಾಕ್ಟರು. ಅರ್ಧ ಗಂಟೆಯಷ್ಟೇ ಹಿಂದೆ ತಮ್ಮೊಂದಿಗೆ ಲೌಕಿಕ ವ್ಯವಹಾರಗಳನ್ನು ಮಾತಾಡುತ್ತಾ ಇದ್ದ ಅಣ್ಣನಿಗೆ ಹೃದಯಾಘಾತವಾದದ್ದಾದರೂ ಹೇಗೆ? ಅಂತ ರಾಯರಿಗೆ ಗೊತ್ತಾಗಲಿಲ್ಲ. ಅಂತ್ಯಕ್ರಿಯೆ ಮುಂದಿನ ಕೆಲಸ ಎಲ್ಲದಕ್ಕೂ ರಾಯರು ಜವಾಬ್ಧಾರಿ ಹೊತ್ತರು. ಅಣ್ಣನ ಮಕ್ಕಳು ದೊಡ್ಡವರಾಗಿದ್ದಾರೆ. ಅವರವರು ತಮ್ಮ ಜವಾಬ್ಧಾರಿ ತಿಳಿದುಕೊಳ್ಳುವವರೆಗೂ ತಾವು ಅವರಿಗೆ ತಿಳುವಳಿಕೆ ಹೇಳಬೇಕು ಅಂತ ಅಂದುಕೊಂಡಿದ್ದರು. ಅಣ್ಣನ ಮೊದಲ ಮಗ ವಸಂತ ಪದವೀಧರನಾಗಿದ್ದ. ಎರಡನೆಯವನು ಆನಂದ ಬಿ .ಕಾಂ. ಓದುತ್ತಿದ್ದ. ಮೂರನೆಯವನು  ಆದಿತ್ಯ ಹೈಸ್ಕೂಲಿನಲ್ಲಿ ಓದುತ್ತಿದ್ದ. ರಾಯರ ಮಗ ಪ್ರಶಾಂತನೂ ಆದಿತ್ಯನ ಸಹಪಾಠಿ. ಅವರಿಬ್ಬರ  ವಿದ್ಯಾಭ್ಯಾಸ ಮುಗೀಲಿ. ಆಮೇಲೆ ಯಾವುದಾದ್ರೂ ನಿರ್ಧಾರ ತಗೊಂಡರಾಯ್ತು … ಅಷ್ಟರವರೆಗೆ ವಸಂತ ತೋಟದ ಕಡೆ ಸ್ವಲ್ಪ ಗಮನ ವಹಿಸಲಿ ಅಂತಅಂದುಕೊಂಡರು ರಾಯರು.

ಫೋಟೋ ಕೃಪೆ : The new york times

ತಂದೆ ಸತ್ತ ಮೂರು ತಿಂಗಳುಗಳಾಗುವುದರೊಳಗೇ ವಸಂತ ಚಿಕ್ಕಪ್ಪನ ಎದುರಿಗೆ ಬಂದಿದ್ದ. “ಏನು ವಿಷಯ ವಸಂತ …?”  ” ನಾನು ನಿಮ್ಮ ಹತ್ತಿರ  ಪಾಲು ಕೇಳ್ತಾ ಇದ್ದೀನಿ … ನಾನು ಏನಾದರೂ ಬಿಸಿನೆಸ್ ಮಾಡೋಣಾಂತ ಇದ್ದೀನಿ… ನಮಗೆ ಬರುವ ಆಸ್ತಿಯಲ್ಲಿ ನಮ್ಮ ಪಾಲಿನದನ್ನು ನಮಗೆ ಕೊಟ್ಟುಬಿಡಿ …..” ಅವನ ಮಾತು ಕೇಳಿ ರಾಯರು ದಿಗ್ಭ್ರಾಂತರಾಗಿದ್ದರು. ಆದರೆ ತಮ್ಮ ವಿಶಾಲ ದೃಷ್ಟಿಯಿಂದ ಯೋಚಿಸಿದ್ದರು. ವಸಂತನಿಗಿನ್ನೂ ಸಣ್ಣ ವಯಸ್ಸು. ಬಿಸಿನೆಸ್ ಮಾಡುವಷ್ಟು ಜಾಣ್ಮೆ ಇದ್ದಂತಿಲ್ಲ. ಹೋಗಲಿ, ಏನು ಬಿಸಿನೆಸ್ ಮಾಡಬೇಕು ಎನ್ನುವ ಅಂದಾಜೂ ಇದ್ದ ಹಾಗಿಲ್ಲ. ಅಂದ ಮೇಲೆ ಈಗ ಅವನು ಪಾಲು ತೆಗೆದುಕೊಂಡು ಏನಾದರೂ ಬಿಸಿನೆಸ್ ಮಾಡ್ತೀನಿ ಅಂತ ಎಲ್ಲಾ ಹಣಾನೂ ಹಾಳು ಮಾಡಿದರೆ …? ಅವರಿಗೆ ಮುಂದಿನ ಜೀವನೋಪಾಯಕ್ಕೆ ದಾರಿ ಏನು …? ಮತ್ತೆ ತಮ್ಮ ಹತ್ತಿರವೇ ಓಡಿ ಬಂದರೆ ?!

ಫೋಟೋ ಕೃಪೆ : slideshare

ಚೆನ್ನಾಗಿ ಯೋಚಿಸಿದ ಮೇಲೆ ರಾಯರು ವಸಂತನಿಗೆ ಬುದ್ಧಿವಾದ ಹೇಳಿದರು . ಆದರೆ , ಆತ ಕೇಳಲಿಲ್ಲ . ತನ್ನ ಹಠವನ್ನೇ  ಮುಂದುವರಿಸಿದ . ” ಆಸ್ತೀನ ಭಾಗ ಮಾಡಿ ….ನಮ್ಮ ಪಾಲಿನದನ್ನು ನಮಗೆ ಕೊಟ್ಟುಬಿಡಿ . ನಾವು ಏನು ಬೇಕಾದರೂ ಮಾಡ್ಕೋತೀವಿ . ನಮ್ಮ ಹಣೆಯ ಬರಹ ……” ಅಂತ ನಿರ್ಧಾರಿತ ಧ್ವನಿಯಲ್ಲಿ ಹೇಳಿದಾಗ ರಾಯರು ಬೆರಗಾದರು . ಬೇರೆ ದಾರಿ ಕಾಣದೆ  ” ಆಯ್ತಪ್ಪ , ನಿನ್ನ ಇಷ್ಟದಂತೆಯೇ ಆಗಲಿ . ನಿಮ್ಮ ಅಮ್ಮನ ಹತ್ತಿರ ಮಾತಾಡಿ ನಿರ್ಧಾರ ಮಾಡೋಣ ….” ಅಂದರು ರಾಯರು . ಅತ್ತಿಗೆಯಾದರೂ ಮಗನ ಸಲಹೆಯನ್ನು ತಳ್ಳಿ ಹಾಕಬಹುದು ಅಂದುಕೊಂಡಿದ್ದರು ರಾಯರು . ಆದರೆ , ಅದು ಸುಳ್ಳಾಯಿತು .

ಕತ್ತು ಬಗ್ಗಿಸಿ ಕುಳಿತ ಭಾಗೀರಥಿ , ” ಅವರೇ ಹೋದ ಮೇಲೆ ಇನ್ನು ಈ ಊರಲ್ಲಿ ಇರೋಕ್ಕೆ ನಂಗೆ ಮನಸ್ಸಿಲ್ಲ…ಅಲ್ಲದೇ , ವಸಂತ ಏನೋ ವ್ಯಾಪಾರ ಮಾಡಬೇಕು ಅಂದ್ಕೊಂಡಿದಾನೆ ” ಎಂದು ಪಾಲು ಬೇಡುವ ನಿರ್ಧಾರವನ್ನು ಪ್ರಕಟಿಸಿದ್ದಳು .  ” ಅಲ್ಲ ಅತ್ತಿಗೆ , ಹುಡುಗರು ಇನ್ನೂ ಚಿಕ್ಕವರು . ತಿಳುವಳಿಕೆ ಇಲ್ಲ . ನಾಳೆ ವ್ಯವಹಾರ , ಅಂತ ಅಂದ್ಕೊಂಡು ಇರೋ ನಾಲ್ಕು ಕಾಸನ್ನೂ ಹಾಳು ಮಾಡಿದರೆ ಮುಂದಿನ ದಾರಿ ಏನು …..? ” ಅಂತ  ರಾಯರು ವಿವರಿಸುತ್ತಿದ್ದಾಗ , ” ಬೆಳೆಯೋ ಹುಡುಗರು  ಇವತ್ತಲ್ಲ ನಾಳೆ ಬುದ್ಧಿ ತಿಳ್ಕೋತಾರೆ.” ಅಂತ ಭಾಗೀರಥಿ  ಮಾತನ್ನು ತುಂಡುಮಾಡಿಬಿಟ್ಟಳು . ಅಂತೂ  ಅವರುಗಳು ಆಸ್ತೀಲಿ ಭಾಗ ಕೇಳ್ತಾ ಇರೋದು ದೃಢವಾಯ್ತು .


  • ಪ್ರಭಾಕರ ತಾಮ್ರಗೌರಿ ( ಕತೆಗಾರ -ಕವಿ )

 

0 0 votes
Article Rating

Leave a Reply

3 Comments
Inline Feedbacks
View all comments
Raghuram

ಚೆನ್ನಾಗಿ ಮೂಡಿಬಂದಿದೆ

ಪ್ರಭಾಕರ ತಾಮ್ರಗೌರಿ

ಥ್ಯಾಂಕ್ಯೂ ಸರ್.

Devarajachar

ಸತ್ಯಕ್ಕೆ ಹತ್ತಿರವಾದ ,ಸರಳವಾದ ಕಥೆ .

Home
Search
All Articles
Videos
About
3
0
Would love your thoughts, please comment.x
()
x
%d bloggers like this:
Aakruti Kannada

FREE
VIEW