ಟ್ರಸ್ಟ್ ಎಂದರೆ ಹಗಲು ದರೋಡೆಕೋರರು, ಹಣದಾಯಿಗಳು ಎಂದೆಲ್ಲ ನೋಡುವ ಇಂದಿನ ಸಮಾಜದಲ್ಲಿ, ಒಂದು ಟ್ರಸ್ಟ್ ಒಬ್ಬ ಬಡ ಹುಡುಗನ ಬಾಳಿಗೆ ಹೇಗೆ ಬೆಳಕಾಗಿ ನಿಲ್ಲುತ್ತದೆ ಎಂದು ಕತೆಗಾರ ರಘುರಾಂ ಅವರು ತಮ್ಮ ಕತೆಯಲ್ಲಿ ಸೊಗಸಾಗಿ ವರ್ಣಿಸಿದ್ದಾರೆ.ಮುಂದೆ ಓದಿ…
ಸರಿ, ಅಲ್ಲಿಂದ ಮುಂದೆ ನಾನು ಹಿಂತಿರುಗಿಯೇ ನೋಡಲಿಲ್ಲ. ನಾವು ಪ್ರತಿ ದಿನ ಮಧ್ಯಾಹ್ನ ಶಾಲೆ ಮುಗಿದ ಮೇಲೆ ಮೂರು ಗಂಟೆಗೆ ಅದೇ ಶಾಲೆಯಲ್ಲಿ ಟ್ರಸ್ಟ್ ನವರು ನಡೆಸುತ್ತಿದ್ದ ತರಗತಿಗೆ ಹೋಗಬೇಕು. ಅಗ ಶಾಲೆಯಲ್ಲಿ ಅರ್ಥವಾಗದ ಪಾಠದ ಜೊತೆಗೆ ಪ್ರಬಂಧ ಬಿಡಿಸುವುದು, ಇಂಗ್ಲಿಷ್ ವ್ಯಾಕರಣ, ವಿಜ್ಞಾನದ ಪ್ರಯೋಗಗಳು, Alice in wonderland ನಿಂದ ಹಿಡಿದು ಕುವೆಂಪುರ ‘ಕಿಂದರ ಜೋಗಿ’ಯವರೆಗೂ ಹಲವು ವಿಷಯಗಳ ಬಗ್ಗೆ ಹೇಳಿಕೊಡುತ್ತಿದ್ದರು. ಶಾಲೆಗೆ ಬಂದವರಿಗೆ ಬನ್, ಬಿಸ್ಕತ್ತುಗಳು, ನಂದಿನಿ ಬಾದಾಮಿ ಹಾಲಿನ ಪ್ಯಾಕೇಟ್ ಕೂಡ ಸಿಗುತ್ತಿತ್ತು. ೧೦ ನೇಯ ತರಗತಿಯಲ್ಲಿ ನನಗೆ ೮೧% ಅಂಕ ತೆಗೆದುಕೊಂಡು ಪಾಸಾದಾಗ ಅಮ್ಮನಿಗೆ ಆದ ಸಂತೋಷ ಅಷ್ಟಿಷ್ಟಲ್ಲ .
ಫೋಟೋ ಕೃಪೆ : nosirnomadam
ಆ ಟ್ರಸ್ಟ್ ನವರು ಮುಂದೆ ಏನು ಮಾಡಲು ಇಷ್ಟವಿದೆ ಎಂದು ನಮ್ಮನೆಲ್ಲ ಮತ್ತೆ ಪ್ರಶ್ನಿಸಿದರು. ನನ್ನ ಆಸೆಯಂತೆ ಪಿಯುಸಿಯಲ್ಲಿ PCMC ತಗೆದುಕೊಂಡೆ, ಅದಕ್ಕೆ ಟ್ರಸ್ಟ್ ನವರು ಸಹಾಯ ಮಾಡಿದರು. ಸರ್ಕಾರದಿಂದ ಬರುವ ಸ್ಕಾಲರ್ ಶಿಪ್ ಕೊಡಿಸಲು ಸಹಾಯ ಮಾಡಿದರು. ಮತ್ತೆ ಓದು ಮುಂದುವರಿಯಿತು.
ಈಗ ವಠಾರದಲ್ಲಿ ನನಗೆ ಸ್ವಲ್ಪ ಬೆಲೆ ಬಂತು. ಪಕ್ಕದ ಮನೆ ಲಕ್ಷ್ಮಮ್ಮ ಅವರ ಮಕ್ಕಳಿಗೆ ಗೋಪಾಲನ ತರ ಓದಿ ಎಂದು ಹೇಳುವಾಗ ಅಮ್ಮನಿಗೆ ಬಹಳ ಹೆಮ್ಮೆ ಆಗುತ್ತಿತ್ತು. ಒಂದು ರೀತಿಯಲ್ಲಿ ವಠಾರದಲ್ಲಿ ಹೀರೋನೇ ಆಗಿ ಹೋಗಿದ್ದೆ. ನಾನು ನೀರಿಗಾಗಿ ಕ್ಯೂ ನಿಂತರೆ, ರಾಜನನ್ನು ಸ್ವಾಗತಿಸಿದಂತೆ ನನ್ನನ್ನು ಸ್ವಾಗತಿಸಿ ನನಗೆ ಮೊದಲು ನೀರು ಹಿಡಿಯಲು ಬಿಡುತ್ತಿದ್ದರು. ವಾರದ ಕೊನೆಯಲ್ಲಿ ಶೀನಣ್ಣ ಕುಡಿದು ಕೊಂಡು ಬಂದು, ಏನೇನೊ ಗಲಾಟೆ ಮಾಡುತ್ತಿದ್ದ. “ಮಗ ಓದಿಕೊಳ್ಳುತ್ತಿದೆ, ಗಲಾಟೆ ಬೇಡಣ್ಣ…” ಎಂದು ಅಮ್ಮ ಹೇಳಿದರೆ “ಓದಿ, ಕಡಿದು ಕಟ್ಟೆ ಹಾಕುತ್ತಾನಾ…?” ಎನ್ನುತ್ತಿದ್ದವನು ಈಗ ತೊದಲುತ್ತಾ ಅಮ್ಮ ಹೇಳುವ ಮುಂಚೆಯೇ “ಗೋಪಿ ಓದುತ್ತಾ ಇದೆ. ಗಲಾಟೆ ಮಾಡಬ್ಯಾಡದು…” ಎಂದು ತೊದಲುತ್ತಾ ಹೋಗುತ್ತಿದ್ದನು. ಇವುಗಳ ಮಧ್ಯೆ ನನ್ನ ಓದು ಸಾಗುತ್ತಿತ್ತು.
ಪಿಯುಸಿ ಪರೀಕ್ಷೆ ಮತ್ತು ಸಿ.ಇ.ಟಿ. ಪರೀಕ್ಷೆ ಚೆನ್ನಾಗಿಯೇ ಬರೆದಿದ್ದೆ. ಪರೀಕ್ಷೆಗೆ ಮುಂಚೆಯೇ ಕನಿಷ್ಠವೆಂದರೂ ಐದು ಸಾರಿಯಾದರೂ ಪೂರ್ವ ಪರೀಕ್ಷೆಗಳನ್ನು ಬರೆದಿದ್ದೆ. ಹಾಗಾಗಿ ಪರೀಕ್ಷೆಯಲ್ಲಿ ಏನು ಕಷ್ಟ ಆಗಲಿಲ್ಲ. ಕೊನೆಗೆ ಪಿ.ಯು.ಸಿ ಯಲ್ಲಿ ೯೨%ಅಂಕ, ಸಿ.ಇ.ಟಿ.ಯಲ್ಲಿ ೪೮೬ನೇಯ ಸ್ಥಾನ ಬಂದಾಗ, ಹೈಸ್ಕೂಲ್ ಮುಖ್ಯೋಪಾಧ್ಯಾಯರಿಂದ ಹಿಡಿದು ಟ್ರಸ್ಟ್ ನ ಮುಖ್ಯಸ್ಥರವರೆಗೆ ಎಲ್ಲರಿಗೂ ಅತ್ಯಂತ ಸಂತೋಷ ತಂದು ಕೊಟ್ಟಿತ್ತು. ಅಮ್ಮನಿಗೆ ಈ ರಾಂಕ್ ವಿಪಯ ಎಷ್ಟು ಗೊತ್ತಾಯಿತು ಎಂದು ನನಗೆ ಗೊತ್ತಿಲ್ಲ. ಆದರೆ ಮಗ ಇಂಜನೀಯರ್ ಕಾಲೇಜ್ ಸೇರಲು ಹೊರಟಿದ್ದಾನೆ ಎಂದು ತಿಳಿದಾಗ ಆನಂದದ ಬಾಷ್ಪವೇ ಸುರಿಸಿದ್ದಳು. ರಾಮಣ್ಣನ ತಾಯಿ ಕೂಡ ಈಗ ಗೋಪಿಯನ್ನು ಮಾತನಾಡಿಸಲು ಹಿಂಜರಿಯುತ್ತಿರಲಿಲ್ಲ. ಓದಲೇ ಬೇಕೆಂಬ ಹಠ. ಓದುವುದೇ ನನ್ನ ಪ್ರಪಂಚವಾಗಿ ಹೋಗಿತ್ತು.
ನಗರದ ಪ್ರತಿಷ್ಠಿತ ಇಂಜನೀಯರಿಂಗ್ ಕಾಲೇಜ್ ನಲ್ಲಿ ಕಂಪ್ಯೂಟರ್ ಸೈನ್ಸ್ ನ ವಿಧ್ಯಾರ್ಥಿಯಾದೆ. ಒಂದು ಕಡೆ ಖರ್ಚು ಹೆಚ್ಚಾಗುತ್ತಿದೆ. ಗಳಿಕೆಯಲ್ಲಿ ಯಾವುದೇ ಹೆಚ್ಚಳ ಇಲ್ಲ. ಹೂವು ಮಾರಾಟದಿಂದ ಹೆಚ್ಚಿಗೆ ಗಳಿಸಲು ಸಾಧ್ಯವೇ?. ಹಬ್ಬದ ಸಮಯದಲ್ಲಿ ಜಾಸ್ತಿ ಬೆಲೆಯಲ್ಲಿ ಮಾರಿ ಬಂದಿರುವ ಹೆಚ್ಚುವರಿ ಹಣ ಮುಂದಿನ ಹಬ್ಬದವರೆಗೆ ಬರುವ ಹಾಗೆ ನೋಡಿಕೊಳ್ಳಬೇಕು. ಸಣ್ಣದಾಗಿ ಹಣ ಕೂಡಿಡುವ ಹೊತ್ತಿಗೆ ಯಾವುದೋ ಒಂದು ಜ್ವರವೋ, ವಾಂತಿ- ಭೇದಿಯೋ ಎಲ್ಲವೂ ಗುಡಿಸಿ ಹಾಕಿ ಬಿಡುತ್ತಿತ್ತು. ಇದರ ಮಧ್ಯೆ ಮಳೆ ಬಂದ ದಿನಗಳು. ಆಗಾಗ ನಡೆಯುವ ಬಂದ್ ಗಳು ಬೇರೆ. ಆದರೆ ಅಮ್ಮ ಎಲ್ಲಿಂದಲೋ ದುಡ್ಡು ತಂದು ಹೊಂದಿಸುತ್ತಿದ್ದರು. ಒಂದು ದಿವಸ “ಎಲ್ಲಿಂದ ದುಡ್ಡು ತರುತ್ತೀಯಾ… ಹೇಳಲೇ ಬೇಕು…” ಎಂದು ಬಲವಂತ ಮಾಡಿದಾಗ ಮೂರನೇಯ ಕ್ರಾಸ್ ನಲ್ಲಿ ಇರುವ ಕೊನೆ ಮನೆ ಆಂಟಿ ಒಬ್ಬರ ಕೈಲಿ ಸಾಲ ತರುವ ವಿಪಯ ಹೇಳಿದಾಗ, “ಎಷ್ಟಮ್ಮಾ… ಬಡ್ಡಿ? ಹೇಗೆ ತೀರುಸುತ್ತೀಯಾ?” ಎಂದು ಕೇಳಿದೆ. “ಬಡ್ಡಿನೂ ಇಲ್ಲ, ಏನು ಇಲ್ಲ. ದೇವರ ಹಾಗೆ ಬಂದಾವ್ರೆ. ದ್ಯಾವ್ರು ಅವರನ್ನು ಚೆನ್ನಾಗಿ ಮಡಗಲಿ” ಎನ್ನುತ್ತಾ ದೇವಸ್ಥಾನದ ಹತ್ತಿರ ಹೂವು ತೆಗೆದುಕೊಂಡು ಹೊರಟಳು.”
ಫೋಟೋ ಕೃಪೆ : kamat
ನಾಲ್ಕು ವರ್ಷದ ಹಿಂದೆ ದೇವಸ್ಥಾನಕ್ಕೆ ಬಂದ ಮಹಿಳೆಯೊಬ್ಬರು ಅವ್ಮುನ ಕೈಲಿ ಹೂವು ತೆಗೆದುಕೊಳ್ಳುತ್ತಾ “ಏನ್ನಮ್ಮಾ ನಿನ್ನ ಹೆಸರು” ಎಂದು ವಿಚಾರಿಸಿ, ನಾಳೆಯಿಂದ ಅಲ್ಲೇ ಹತ್ತಿರದಲ್ಲಿ ಇರುವ ಮೂರನೇ ಅಡ್ಡರಸ್ತೆಯ ಕೊನೆಯ ಮನೆಗೆ ಬೆಳಿಗ್ಗೆ ದಿನಾ ಒಂದು ಮೊಳ ಹೂವು ಹಾಕು. ಆದರೆ ನೋಡು ಒಳ್ಳೆಯ ಹೂವು ಕೊಡಬೇಕು’ ಎಂದು ಹೇಳಿ ಹೊರಟು ಹೋದರಂತೆ. ಆವಾಗಿನಿಂದ ಪ್ರತಿ ದಿನ ತಪ್ಪದೇ ಹೂವು ಹಾಕಿ ಅಮ್ಮ ಅವರ ವಿಶ್ವಾಸಕ್ಕೆ ಪಾತ್ರ ಆಗಿದ್ದಾರೆ. ನಾನು ಸೈಕಲ್ ನಲ್ಲಿ ಹೂವು ಕೊಡಲು ಪ್ರಾರಂಭ ಮಾಡಿದ ಮೇಲೆ ಅವರ ಮನೆಗೆ ಹೂವು ಹಾಕಿದ್ದೇನೆ. ಹೂವನ್ನು ಅವರ ಮನೆ ಬಾಗಿಲಿಗೆ ಕಟ್ಟಿರುವ ಚೀಲಕ್ಕೆ ಹಾಕಿ ಬರುವುದು. ಅಪರೂಪಕ್ಕೆ ಆಂಟಿ ಅಥವ ಅವರ ಪುಟ್ಟ ಮಗಳು ಬಾಗಿಲ ಬಳಿ ಸಿಗುತ್ತಿದ್ದರು. “ಶಿವಮ್ಮನ ಮಗನ ನೀನು? ಸ್ಕೂಲ್ ಹೋಗುತ್ತೀಯಂತೆ. ಚೆನ್ನಾಗಿ ಓದು” ಎಂದು ನನಗೆ ಪ್ರೀತಿಯಿಂದ ನನಗೆ ಬುದ್ದಿ ಮಾತುಗಳನ್ನು ಹೇಳುತ್ತಿದ್ದರು. ಕೆಲವೊಮ್ಮೆ ‘ಮಧ್ಯಾಹ್ನ, ಅಮ್ಮನ್ನಮನೆಗೆ ಬರೋಕೆ ಹೇಳು’ ಅನ್ನುತ್ತಿದ್ದರು. ಅಮ್ಮನಿಗೆ ಅವರ ಹಳೇ ಸೀರೆಗಳು, ಏನಾದರೂ ಮಾಡಿರುವ ಸಿಹಿ ಕೊಡುತ್ತಿದ್ದರು. ಅವರ ಹಳೇ ಸೀರೆಗಳು, ಅಂಗಡಿಯಲ್ಲಿ ಇರುವ ಹೊಸ ಸೀರೆಗಳ ತರಹವೇ ಇರುತ್ತಿತ್ತು. ಒಂದು ಸಾರಿ ಅವರು ಕೊಟ್ಟ ಸೀರೆ ಅಮ್ಮ, ಪಕ್ಕದ ಮನೆ ಲಕ್ಷ್ಮಮ್ಮಗೂ ಒಂದು ಕೊಟ್ಟಿದ್ದರು. ಅವರ ಬಳಿ ೫೦೦ ರೂ ಸಾಲ ಪಡೆದು, ಅದರಲ್ಲಿ ೨೦೦ ರೂ ತೀರಿಸುವುದರ ಒಳಗೆ ಮತ್ತೆ ಐನೂರು ಸಾಲ ಪಡೆಯುವ ದಿನ ಬಂದಿರುತ್ತಿತ್ತು. ಹೀಗೆ ನಡೆದು ಅದು ಈಗ ೨೦೦೦ ರೂ ಸಾಲಕ್ಕೆ ಬಂದು ಮುಚ್ಚಿಟ್ಟಿದ್ದ ಸತ್ಯ ಒಂದು ದಿನ ಮಗನ ಮುಂದೆ ಎಲ್ಲ ಹೊರಗೆ ಬಿತ್ತು. ಪಾಸಾದಾಗ ಅಮ್ಮ ತನಗೆ ಬಹುಮಾನವಾಗಿ ತಂದು ಕೊಟ್ಟಿದ್ದ ವಾಚ್ ಇದೆ ಸಾಲದಿಂದ ಕೊಡಸಿದ್ದು ಎಂದು ತಿಳಿಯಿತು .
ಕಾಲೇಜ್ ನಲ್ಲಿ ಮೊದ ಮೊದಲಿಗೆ ಬಹಳವೇ ಕಷ್ಟವಾಯಿತು. ಇನ್ನೂ ಏನಾಗುತ್ತಿದೆ ಎಂದು ಅರ್ಥ ಆಗುವುದರೊಳಗೆ ಪ್ರಥಮ ಸೆಮಿಸ್ಟರ್ ಪರೀಕ್ಷೆ ಬಂದೇ ಬಿಟ್ಟಿತ್ತು. ಆದರೂ ಯಾವುದೇ ತೊಂದರೆ ಇಲ್ಲದೇ ೭೦% ಅಂಕ ತೆಗೆದುಕೊಂಡು ಪಾಸಾದರೂ ಕೂಡ ಪಿ.ಯು.ಸಿ.ವರೆಗೆ ೮೦% ಮೇಲಿದ್ದವನು, ಈಗ ೭೦ % ಇಳಿದಿರುವುದಕ್ಕೆ ನನಗೆ ನನ್ನ ಮೇಲೆ ಸ್ವಲ್ಪ ಅಸಮಾಧಾನ ಆಗಿತ್ತು. ಆದರೆ ಕ್ರಮೇಣ ಹೊಂದಿಕೊಂಡು ಸರಾಸರಿ ೭೫ % ಪಡೆಯಲು ಯಶಸ್ವಿಯಾದೆ.
ಟ್ರಸ್ಟ್ ನೊಂದಿಗೆ ಸಂಬಂಧ ಹಾಗೆ ಇತ್ತು. ನಾಲ್ಕು ಸೆಮಿಸ್ಟರ್ ಗಳ ನಂತರ ಹೊರಕಡೆ ಕೆಲಸ ಮಾಡಲು ಬೇಕಾಗುವ ಅರ್ಹತೆಗಳನ್ನ ಟ್ರಸ್ಟ್ ನವರೇ ಕಲಿಸಿದರು. ಓದಿನಲ್ಲಿ ಮುಳುಗಿರುವಾಗ ಸಮಯ ಸರಿದದ್ದೇ ಗೊತ್ತಾಗಲಿಲ್ಲ.
ಫೋಟೋ ಕೃಪೆ : BBC
ಒಂದು ದಿನ ಸಾಯಂಕಾಲ ಅಮ್ಮ ಬಂದು “ಏನ್ ಮಗ, ಕೊನೆ ವರುಷ ಅದೇನೋ ಕಾಲೇಜಿನಿಂದ ಕಾರ್ಖಾನೆ ತೋರಿಸಲು ಕರೆದುಕೊಂಡು ಹೋಗುತ್ತಾರಂತಲ್ಲ…ನಿಮ್ಮ ಕಾಲೇಜ್ ನಲ್ಲಿ ಕರೆದುಕೊಂಡು ಹೋಗೋಲ್ವ ?” ಎಂದಾಗ ನನಗೆ ಅಮ್ಮನಿಗೆ ಈ ವಿಷಯ ಯಾರು ಹೇಳಿದರು ಎಂದು ಆಶ್ಚರ್ಯ ಆಯಿತು. ಟೂರ್ ಹೊರಟರೆ ಮತ್ತೆ ದುಡ್ಡು ಬೇಕು. ಹಾಗಾಗಿ ಅಮ್ಮನಿಂದ ಈ ವಿಷಯ ಮುಚ್ಚಿ ಇಟ್ಟಿದ್ದೆ. ಪ್ರೊಫೆಸರ್ ಗೆ ಕೂಡ ಹೇಳಿ ಅವರಿಂದ ಟೂರ್ ಹೋಗುವುದರಿಂದ ವಿನಾಯಿತಿ ಪಡೆದಿದ್ದೆ. ಮೊನ್ನೆ ಅಮ್ಮಆಂಟೀ ಮನೆಗೆ ಹೋದಾಗ, ಮಗ ಎನು ಮಾಡುತ್ತಿದ್ದಾನೆ ಎಂದು ವಿಚಾರಿಸಿದವರು ಈ ವಿಷಯ ಹೇಳಿದರಂತೆ. ಅವರು ಕೊಟ್ಟ ದುಡ್ಡಿನಲ್ಲಿ ಇಂಡಸ್ಟ್ರಿಯಲ್ ಟೂರ್ ಆಯಿತು. ಅದು ನನ್ನ ಮುಂದೆ ದೊಡ್ಡ ಪ್ರಪಂಚವನ್ನೇ ತೆರೆದು ಇಟ್ಟಿತು. ಕಾಲೇಜ್ನಲ್ಲಿ ನಡೆಯುವ ಕ್ಯಾಂಪಸ್ ಇಂಟೆರ್ವ್ಯೂನಲ್ಲಿ ಆಯ್ಕೆ ಆದ ಸಂತೋಷಕ್ಕಿಂತ ನನ್ನ ಕಾಲಿನ ಮೇಲೆ ನಾನು ನಿಂತೇನಲ್ಲ ಅನ್ನುವ ಸಮಾಧಾನವೇ ಹೆಚ್ಚಾಗಿತ್ತು.
ಫೋಟೋ ಕೃಪೆ : new indian express
ಕೆಲಸಕ್ಕೆ ಸೇರುವ ಹಿಂದಿನ ದಿನ ಹೈಸ್ಕೂಲ್ ಮುಖ್ಯೋಪಾಧ್ಯಾಯರು ಆಗಿದ್ದ ರಾಜಾರಾವ್ ಮನೆಗೆ ಹೋಗಿದ್ದೆ. ಅವರು ಈಗ ವಿಶ್ರಾಂತಿ ಜೀವನಕ್ಕೆ ಬಂದು ಒಂದು ವರ್ಷ ಆಗಿತ್ತು. ವಿಷಯ ತಿಳಿದು ಬಹಳ ಸಂತೋಷ ಪಟ್ಟರು. ಅಲ್ಲಿಂದ ಟ್ರಸ್ಟ್ ಆಫೀಸ್ ಗೆ ಹೋಗಿ ವಿಷಯ ತಿಳಿಸಿದಾಗ ಅವರ ಮುಖದಲ್ಲಿ ನನಗಿಂತ ಜಾಸ್ತಿ ಸಂತೋಷ ಕಾಣಿಸಿತು. ಟ್ರಸ್ಟ್ ನ ಮುಖ್ಯಸ್ಥರ ಹೆಸರು ಭಾಸ್ಕರ ಅಂತೆ. ನಿಜವಾಗಿಯೂ ಕೆಲವರ ಜೀವನದಲ್ಲಿ ಬೆಳಕು ನೀಡುವ ಸೂರ್ಯನೇ ಆಗಿದ್ದಾರೆ ಇವರು ಅನಿಸಿತು. ಆ ದಿನ ಸಂಜೆ ಅಮ್ಮನ ಜೊತೆ ಆಂಟಿ ಮನೆಗೆ ಹೋದಾಗ ಅವರು ಸಂತೋಷ ಪಟ್ಟರು. “ನೋಡಪ್ಪಾ ಅಮ್ಮನನ್ನು ಸರಿಯಾಗಿ ನೋಡಿಕೋ, ಗೊತ್ತಾಯಿತಾ?” ಎಂದು ನನ್ನ ಬೆನ್ನು ತಟ್ಟಿ ಹೇಳಿದರು. “ಅಮ್ಮ, ಮುಂದಿನ ತಿಂಗಳು ಸಾಲ ತೀರಿಸುತ್ತೇನೆ” ಎಂದಾಗ, “ಓ ಸಾಲನ… ಸರಿ ಆ ಸಾಲವನ್ನು ಆ ನಿಮ್ಮ ಟ್ರಸ್ಟ್ ಇದೆಯಲ್ಲ ಅದಕ್ಕೆ ಕಟ್ಟಿಬಿಡು. ಬಂತು ಅಂದು ಕೊಳ್ಳುತ್ತೇನೆ” ಎಂದರು. ಅವರ ಮನೆಯ ಹಾಲಿನಲ್ಲಿ ಇರುವ ದೊಡ್ಡ ಸರಸ್ವತಿ ಫೋಟೋಗೆ ಮನದಲ್ಲೇ ನಮಸ್ಕರಿಸಿ ಬಂದೆವು.
ಈಗ ಆಗಲೇ ಎರಡು ತಿಂಗಳಾಯಿತಲ್ಲ ಕೆಲಸಕ್ಕೆ ಸೇರಿ. ವಠಾರದಿಂದ ಸಣ್ಣದಾದ ಒಂದು ರೂಮ್ ನ ಫ್ಲಾಟ್ ಗೆ ಬಂದಿದ್ದೇನೆ. ಅಮ್ಮನಿಗೆ ಏನೋ ಸಮಾಧಾನ. ಹೊಸ ಜೀವನಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಿತ್ತು. ಈಗ ನಮ್ಮ ಮನೆಗೂ ದೊಡ್ಡ ಸರಸ್ವತಿ ಫೋಟೋ ಬಂದಿದೆ.
ಈಗ ನೆಂಟರು, ಸ್ನೇಹಿತರು ಎಲ್ಲರೂ ಮಾತನಾಡಿಸುತ್ತಾರೆ. ಇದೆಲ್ಲ ಓದಿಗೆ ಸಲ್ಲುವ ಗೌರವ ಅಲ್ಲವೇ? ಈ ದಾರಿಯಲ್ಲಿ ಎಷ್ಟೇಲ್ಲಾ ಅಡೆತಡೆಗಳು ಇದ್ದೇವಲ್ಲ. ಎಲ್ಲ ಭಾವನೆಗಳನ್ನು ಹತ್ತಿಕ್ಕಿ ಸಂಕಲ್ಪದ ಗುರಿ ತಲುಪುದು ಅಷ್ಟು ಸುಲಭವೇನೂ ಆಗಿರಲಿಲ್ಲ. ಸಣ್ಣವನು ಇರುವಾಗ ಅಮ್ಮನ ಹೂವಿನ ಗಾಡಿಯ ಹತ್ತಿರದಲ್ಲೇ ಇದ್ದ ಪಾನಿ ಪೂರಿ ತಿನ್ನಲ್ಲು ಅಮ್ಮನಿಗೆ ಸಾಕಷ್ಟು ಕಾಟಕೊಟ್ಟಿದ್ದೇನೆ . ರಾಮಣ್ಣ ಒಂದು ಸಾರಿ ಜಾತ್ರೆಯಲ್ಲಿ ಐಸ್ ಕ್ರೀಮ್ ಕೊಡಿಸಿದ್ದ. ದುಡ್ಡಿನ ಬೆಲೆ ಗೊತ್ತಾಗುತ್ತಾ ಹೋದಂತೆ ಈ ತರಹದ ಆಸೆಗಳು ಕರಗುತ್ತಾ ಬಂದವು. ಕಾಲೇಜ್ನಲ್ಲಿ ಕನಿಕರ ತೋರಿಸುವವರಿಂದ ಮಾನಸಿಕವಾಗಿ ದೂರವೇ ಉಳಿದೆ. ಕಾಳಜಿ ತೋರಿದವರನ್ನು ಒಪ್ಪಿಕೊಂಡೆ. ನಿಜವಾದ ಮಮತೆ ತೋರಿಸಿದ ರಾಮಣ್ಣನ ಅಪ್ಪಿಕೊಂಡೆ. ಊರಿನ ಶ್ರೀಮಂತರ ಮಗಳು ದೀಪಾ ನನ್ನ ಹತ್ತಿರ ಬರಲು ಪ್ರಯತ್ನಿಸಿದಾಗ ಒಂದು ಕ್ಷಣ ಗಲಿಬಿಲಿ ಗೊಂಡಿದ್ದು, ತಕ್ಷಣವೇ ಸಾವರಿಸಿಕೊಂಡು ಓದಿನ ದಾರಿಗೆ ಮರಳಿದ್ದು ಎಲ್ಲ ಕನಸಿನಂತೆ ಈಗ ತೋರುತ್ತಿದೆ.
ಫೋಟೋ ಕೃಪೆ : The economic Times
ಹೌದು ನಾಳೆಯೇ ದೀಪಾವಳಿ ಹಬ್ಬ. ಒಂಬತ್ತು ವರ್ಷ ಗಳ ಹಿಂದೆ ನನ್ನ ಜೀವನದಲ್ಲಿ ಹೊಸ ಭರವಸೆಯ ಬೆಳಕು ಮೂಡಿದ ದಿನ ಅದೇ ದಿನ. ಯಾವುದೇ ಪ್ರತಿಫಲಾಪೇಕ್ಷ ಇಲ್ಲದೆ ಸಹಾಯ ಮಾಡುವ ಮನಸ್ಸುಗಳು ಇರುವವರಿಗೂ ಈ ನಾಡಿನಲ್ಲಿ ಬೆಳಕು ಶಾಶ್ವತವಾಗಿ ಇರುತ್ತದೆ, ಅಲ್ಲವೇ?….
ನಿದ್ದೆಯ ಮಂಪರನಲ್ಲಿಯೇ ರಾತ್ರಿ ಕಳೆಯಿತು. “ಯಾಕ್ ಮಗ ರಾತ್ರಿ ನಿದ್ದಿ ಬಂದಿಲ್ಲವೇ?” ಎಂದು ಕೆಂಪಾಗಿರುವ ಕಣ್ಣು ನೋಡಿ ಕೇಳಿದಳು ಅಮ್ಮ. ಅದಕ್ಕೆ ತಾನೇ ತಾಯಿಕರಳು ಎನ್ನುವುದು. ಬೇಗನೆ ತಯಾರಿ ಮಾಡಿಕೊಂಡು ಟ್ರಸ್ಟ್ ನ ಆಫೀಸ್ ನ ಬಳಿ ನಡೆದೆ. ಪ್ರಾರಂಭದಲ್ಲಿ ಐದು ವಿದ್ಯಾರ್ಥಿಗಳಿಗೆ ಕೈ ಹಿಡಿದಿದ್ದ ಟ್ರಸ್ಟ್ ಈಗ ೬೦೦ ವಿದ್ಯಾರ್ಥಿಗಳ ಕೈ ಹಿಡಿದಿದೆ. ಈಗ ಐದನೇ ತರಗತಿಯಿಂದ ಪದವಿಯವರೆಗೆ ಮಾರ್ಗದರ್ಶನ ಮಾಡುತ್ತಿದೆ. ನಾನು ಕಳೆದ ಎರಡು ತಿಂಗಳಿಂದ ಅಲ್ಲಿಯ ಸ್ವಯಂ ಸೇವಕ. ಈ ಸಾರಿಯೂ ದೀಪಾವಳಿಯಲ್ಲಿ ಕೆಲವೊಂದು ಮನೆಗಳಲ್ಲಿಯಾದರೂ ಜ್ಞಾನದ ಬೆಳಕಿನ ಮೂಲಕ ಹೊಸ ಭರವಸೆ ಮೂಡಿಸುವ ಕೆಲಸ ಮಾಡಲು ಹೊರಟಿದ್ದೇನೆ.ಇದರಲ್ಲಿ ಯಶಸ್ಸುಸಾಧಿಸುವ ನಂಬಿಕೆ ಇದೆ…
- ಎನ್.ವಿ.ರಘುರಾಂ (ನಿವೃತ್ತ ಅಧೀಕ್ಷಕ ಅಭಿಯಂತರ ವಿದ್ಯುತ್, ಬೆಂಗಳೂರು)